ಪ್ರವಾಸಿಗರ ರೂಟ್ ಮ್ಯಾಪ್ ಬದಲಿಸಿದ ಯುದ್ಧ
ಇಂದು ಜಾಗತಿಕ ಭೂಪಟದಲ್ಲಿ ಕಾಣಿಸಿಕೊಳ್ಳುತ್ತಿರುವ ಯುದ್ಧದ ಕಾರ್ಮೋಡಗಳು ಮತ್ತು ಪ್ರಮುಖ ರಾಷ್ಟ್ರಗಳ ನಡುವಿನ ಸಂಘರ್ಷಗಳು ಪ್ರವಾಸಿಗರ ಕನಸಿಗೆ ತಣ್ಣೀರು ಎರಚುತ್ತಿರುವುದು ನಿಜ. ಬೇಸಗೆ ರಜೆಯನ್ನು ಪ್ರವಾಸಗಳ ಮೂಲಕ ಅನುಭವಿಸಲು ಕನಸು ಕಂಡಿದ್ದ ಲಕ್ಷಾಂತರ ಮಂದಿಗೆ ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆ ಮತ್ತು ಗಲ್ಫ್ ರಾಷ್ಟ್ರಗಳ ವಾಯುಮಂಡಲದ ಮೇಲಿನ ನಿರ್ಬಂಧಗಳು ಶಾಕ್ ಕೊಟ್ಟಿವೆ. ಆದರೆ ಚಕ್ರ ಕಟ್ಟಿಕೊಂಡ ಕಾಲುಗಳು ಹಾಗೆಲ್ಲ ನಿಲ್ಲುವುದಿಲ್ಲ.
ಜಗತ್ತಿನಲ್ಲಿ ಅತ್ಯಂತ ಶಾಂತಿಯುತ ಉದ್ಯಮ ಅಂತ ಯಾವುದಾದರೂ ಇದ್ದರೆ ಅದು ಪ್ರವಾಸೋದ್ಯಮ. ಶಾಂತಿ ಸುರಕ್ಷತೆ ನೆಮ್ಮದಿ ಇರುವ ಕಡೆ ಮನುಷ್ಯ ಪ್ರವಾಸ ಹೋಗಲು ಬಯಸುತ್ತಾನೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಪ್ರವಾಸಿ ಸ್ಥಳಗಳು ಎಂದು ಗುರುತಿಸಿಕೊಳ್ಳಲು ಬಯಸುವ ದೇಶಗಳು ತಮ್ಮ ದೇಶದಲ್ಲಿ ಶಾಂತಿ ನೆಮ್ಮದಿ ಸುರಕ್ಷತೆಯನ್ನು ಬಯಸುತ್ತವೆ. ಯುದ್ಧ ಮತ್ತು ಪ್ರವಾಸ ಎಂದೆಂದಿಗೂ ವಿರುದ್ಧ ಪದಗಳು. ಯುದ್ಧನಿರತ ದೇಶಗಳಲ್ಲಿ ಮೊದಲು ಸಾಯುವುದು ಪ್ರವಾಸ-ಪ್ರವಾಸೋದ್ಯಮ. ಈಗ ಆಗಿರುವುದೂ ಅದೇ. ಮಧ್ಯಪ್ರಾಚ್ಯದ ಪ್ರವಾಸೋದ್ಯಮ ಸಂಪೂರ್ಣವಾಗಿ ನೆಲಕಚ್ಚಿದೆ. ಇರಾನ್, ಇರಾಕ್, ಲೆಬನಾನ್, ದುಬೈ, ಇಸ್ರೇಲ್ ಹೀಗೆ ಮಧ್ಯಪ್ರಾಚ್ಯದ ಯಾವ ದೇಶಕ್ಕೂ ಪ್ರವಾಸಿಗ ಹೋಗಲಾಗುತ್ತಿಲ್ಲ. ಕರೆದರೂ ಹೋಗಲು ಸಿದ್ಧನಿಲ್ಲ. ಪೂರ್ವದಿಂದ ಪಶ್ಚಿಮಕ್ಕೆ -ದಕ್ಷಿಣದಿಂದ ಉತ್ತರಕ್ಕೆ ಅಥವಾ ಉಲ್ಟಾ ಯಾವುದೇ ಪ್ರವಾಸ ಮಾಡುವುದಾದರೂ ಹಲವು ಪ್ರವಾಸಗಳಿಗೆ ಜಂಕ್ಷನ್ ಆಗಿ ಇರುವುದು ಮಧ್ಯಪ್ರಾಚ್ಯ ದೇಶಗಳೇ. ಈ ಯುದ್ಧ ಕೊಲ್ಲುತ್ತಿರುವುದು ಕೇವಲ ಮಧ್ಯಪ್ರಾಚ್ಯದ ಪ್ರವಾಸೋದ್ಯಮವನ್ನು ಮಾತ್ರವಲ್ಲ, ಜಾಗತಿಕ ಪ್ರವಾಸೋದ್ಯಮಕ್ಕೇ ಕೊಳ್ಳಿ ಇಡುತ್ತಿದೆ. ಎಲ್ಲಿದ್ದೇವೆಯೋ ಅಲ್ಲಿಯೇ ಬೌಂಡರಿ ಹಾಕಿಕೊಂಡು ಸುತ್ತಾಡು ಅನ್ನುತ್ತಿದೆ ಯುದ್ಧ. ಹಾಗಂತ ಪ್ರವಾಸಿಯನ್ನು ಕಟ್ಟಿ ಹಾಕಿ ಕೂರಿಸೋದು ಸಾಧ್ಯವಾ? ಖಂಡಿತ ಇಲ್ಲ. ಅದರಲ್ಲೂ ಭಾರತೀಯರಂತೂ ಕೋವಿಡ್ ಅವಧಿಯ ನಂತರದಲ್ಲಿ ಪ್ರವಾಸಕ್ಕೆ ಅಡಿಕ್ಟ್ ಆಗಿ ಹೋಗಿದ್ದಾರೆ. ಪ್ರವಾಸವೆಂಬುದು ಮೂಲಭೂತ ಅಗತ್ಯವೆಂಬಂತಾಗಿ ಹೋಗಿದೆ. ಇದೇ ಕಾರಣಕ್ಕೆ ದೇಶದ ಆರ್ಥಿಕತೆಯೂ ಪ್ರವಾಸೋದ್ಯಮವನ್ನು ಅವಲಂಬಿಸಿದ್ದಾಗಿದೆ.
ಇದನ್ನೂ ಓದಿ: ಒಳ್ಳೆಯದನ್ನು ಅನುಕರಿಸುವುದು ತಪ್ಪಲ್ಲ
ಇಂದು ಜಾಗತಿಕ ಭೂಪಟದಲ್ಲಿ ಕಾಣಿಸಿಕೊಳ್ಳುತ್ತಿರುವ ಯುದ್ಧದ ಕಾರ್ಮೋಡಗಳು ಮತ್ತು ಪ್ರಮುಖ ರಾಷ್ಟ್ರಗಳ ನಡುವಿನ ಸಂಘರ್ಷಗಳು ಪ್ರವಾಸಿಗರ ಕನಸಿಗೆ ತಣ್ಣೀರು ಎರಚುತ್ತಿರುವುದು ನಿಜ. ಬೇಸಗೆ ರಜೆಯನ್ನು ಪ್ರವಾಸಗಳ ಮೂಲಕ ಅನುಭವಿಸಲು ಕನಸು ಕಂಡಿದ್ದ ಲಕ್ಷಾಂತರ ಮಂದಿಗೆ ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆ ಮತ್ತು ಗಲ್ಫ್ ರಾಷ್ಟ್ರಗಳ ವಾಯುಮಂಡಲದ ಮೇಲಿನ ನಿರ್ಬಂಧಗಳು ಶಾಕ್ ಕೊಟ್ಟಿವೆ. ಆದರೆ ಚಕ್ರ ಕಟ್ಟಿಕೊಂಡ ಕಾಲುಗಳು ಹಾಗೆಲ್ಲ ನಿಲ್ಲುವುದಿಲ್ಲ.
ಹೀಗಾಗಿ ಭಾರತೀಯರು ಆಗ್ನೇಯ ಏಷ್ಯಾದತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ಯುದ್ಧವು ಭಾರತೀಯರಿಗೆ ಅಗ್ನೇಯ ಏಷ್ಯಾ ಇನ್ನಷ್ಟು ಆತ್ಮೀಯವಾಗಿಸುತ್ತಿದೆ. ಪಶ್ಚಿಮ ದೇಶಗಳ ಕಡೆಗೆ ಮುಖ ಮಾಡುತ್ತಿದ್ದ ಪ್ರವಾಸಿಗರು ಈಗ ತಮ್ಮ ರೂಟ್ ಮ್ಯಾಪ್‌ಗಳನ್ನು ಬದಲಿಸಿಕೊಳ್ಳುತ್ತಿದ್ದಾರೆ. ಯುದ್ಧ ಪೀಡಿತ ಪ್ರದೇಶಗಳ ಮೇಲಿನ ಹಾರಾಟಕ್ಕೆ ನಿರ್ಬಂಧವಿರುವುದರಿಂದ ವಿಮಾನಯಾನ ಸಂಸ್ಥೆಗಳು ತಮ್ಮ ಪಥವನ್ನು ಬದಲಿಸಿವೆ. ರಷ್ಯಾದ ಮೂಲಕ ಅಥವಾ ದೀರ್ಘವಾದ ಮಾರ್ಗಗಳ ಮೂಲಕ ಹಾರಾಟ ನಡೆಸಬೇಕಾಗಿರುವುದರಿಂದ ವಿಮಾನ ಪ್ರಯಾಣದ ಅವಧಿ ಹೆಚ್ಚಾಗುವುದರ ಜೊತೆಗೆ ಇಂಧನ ವೆಚ್ಚವೂ ಏರಿಕೆಯಾಗಿದೆ. ಇದರ ನೇರ ಪರಿಣಾಮ ಪ್ರವಾಸಿಗರ ಜೇಬಿನ ಮೇಲೆ ಬೀಳುತ್ತಿದೆ. ಯುರೋಪ್ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ತೆರಳುವ ವಿಮಾನ ದರಗಳಲ್ಲಿ ಶೇಕಡಾ 20 ರಿಂದ 40 ರಷ್ಟು ಏರಿಕೆಯಾಗಿರುವುದು ಸಾಮಾನ್ಯ ಜನರಿಗೆ ಗಗನಕುಸುಮವಾಗಿದೆ.
ಆದರೆ, ಇಲ್ಲಿ ಗಮನಿಸಬೇಕಾದ ಒಂದು ಕುತೂಹಲಕಾರಿ ಅಂಶವೆಂದರೆ ಭಾರತೀಯ ಪ್ರವಾಸಿಗರ ಛಲ. ಅಂತಾರಾಷ್ಟ್ರೀಯ ಸಂಘರ್ಷಗಳಿಂದಾಗಿ ಪಶ್ಚಿಮದ ಹಾದಿ ದುಬಾರಿಯಾದಾಗ, ಪ್ರವಾಸಿಗರು ಸುಮ್ಮನೆ ಮನೆಯಲ್ಲಿ ಕುಳಿತುಕೊಳ್ಳುವ ಬದಲಾಗಿ, ಅವರು ತಮ್ಮ ದಿಕ್ಕನ್ನು ಪೂರ್ವದ ಕಡೆಗೆ ತಿರುಗಿಸುತ್ತಿದ್ದಾರೆ. ವಿಯೆಟ್ನಾಂ, ಶ್ರೀಲಂಕಾ, ಸಿಂಗಾಪುರ ಮತ್ತು ಮಲೇಷಿಯಾ, ಇಂಡೋನೇಷ್ಯಾದ ಥರದ ಆಗ್ನೇಯ ಏಷ್ಯಾದ ದೇಶಗಳು ಇಂದು ಭಾರತೀಯರಿಗೆ ನೆಚ್ಚಿನ ತಾಣಗಳಾಗುತ್ತಿವೆ. ಸುರಕ್ಷತೆ ಮತ್ತು ಕೈಗೆಟುಕುವ ದರ ಇವೆರಡೂ ಈ ದೇಶಗಳತ್ತ ಪ್ರವಾಸಿಗರನ್ನು ಸೆಳೆಯುತ್ತಿವೆ. ಇದು ಕೇವಲ ಪ್ರವಾಸದ ಬದಲಾವಣೆಯಲ್ಲ, ಬದಲಾಗಿ ಜಾಗತಿಕ ರಾಜಕೀಯ ಪರಿಸ್ಥಿತಿಗೆ ಅನುಗುಣವಾಗಿ ಪ್ರವಾಸೋದ್ಯಮವು ತನ್ನನ್ನು ತಾನು ರೂಪಿಸಿಕೊಳ್ಳುತ್ತಿರುವ ರೀತಿಯಾಗಿದೆ.

ಪ್ರವಾಸೋದ್ಯಮದ ಮೇಲೆ ಯುದ್ಧ ಎಂಬುದು ಕೇವಲ ಆರ್ಥಿಕ ಪರಿಣಾಮ ಬೀರುವುದಿಲ್ಲ, ಅದು ಮಾನಸಿಕವಾಗಿಯೂ ಪರಿಣಾಮ ಬೀರುತ್ತದೆ.. ವಿಮಾನಗಳ ರದ್ದತಿ, ಹೋಟೆಲ್ ಬುಕಿಂಗ್ ಕ್ಯಾನ್ಸಲ್ ಆಗುವುದು ಮತ್ತು ಭದ್ರತೆಯ ಆತಂಕಗಳು ಪ್ರವಾಸದ ಉತ್ಸಾಹವನ್ನು ಕುಂದಿಸುತ್ತವೆ. ದುಬೈ ಥರದ ಪ್ರಮುಖ ಪ್ರವಾಸಿ ತಾಣಗಳಲ್ಲಿ ವಿಮಾನಗಳ ರದ್ದತಿ ಮತ್ತು ಹೆಚ್ಚಿದ ದರಗಳು ಭಾರತೀಯ ಮಧ್ಯಮ ವರ್ಗದ ಪ್ರವಾಸಿಗರ ಲೆಕ್ಕಾಚಾರವನ್ನು ತಲೆಕೆಳಗಾಗಿಸಿವೆ. ಈ ಹಂತದಲ್ಲಿ ಪ್ರವಾಸೋದ್ಯಮ ಸಂಸ್ಥೆಗಳು ಮತ್ತು ಟ್ರಾವೆಲ್ ಏಜೆಂಟ್‌ಗಳು ಹೆಚ್ಚು ಟ್ರಾವೆಲರ್ ಫ್ರೆಂಡ್ಲೀ ಆಗುವ ಅಗತ್ಯವಿದೆ. ಅವರು ಕೇವಲ ಪ್ಯಾಕೇಜ್‌ಗಳನ್ನು ಮಾರಾಟ ಮಾಡದೆ, ಪ್ರವಾಸಿಗರಿಗೆ ಬದಲಾದ ಪರಿಸ್ಥಿತಿಯ ಬಗ್ಗೆ ನಿಖರ ಮಾಹಿತಿ ಮತ್ತು ಪರ್ಯಾಯ ಮಾರ್ಗಗಳ ಬಗ್ಗೆ ತಿಳಿಸಿಕೊಡಬೇಕಿದೆ.
ಪ್ರವಾಸೋದ್ಯಮವು ಶಾಂತಿಯ ಸಂಕೇತ. ಜಗತ್ತು ಯುದ್ಧದ ಹಾದಿಯಲ್ಲಿ ಸಾಗಿದಾಗ ಅದರ ಮೊದಲ ಬಲಿ ಪ್ರವಾಸೋದ್ಯಮವೇ ಆಗಿರುತ್ತದೆ. ನಾವು ಜವಾಬ್ದಾರಿಯುತ ಪ್ರವಾಸಿಗರಾಗಿ, ಪರಿಸ್ಥಿತಿಯ ಗಂಭೀರತೆಯನ್ನು ಅರಿತು, ಸುರಕ್ಷತೆಗೆ ಮೊದಲ ಆದ್ಯತೆ ನೀಡಿ ನಮ್ಮ ಪ್ರವಾಸಗಳನ್ನು ಯೋಜಿಸಬೇಕಿದೆ. ಯುದ್ಧದ ಭೀತಿ ದೂರವಾಗಿ, ಇಡೀ ಜಗತ್ತು ಮತ್ತೆ ಮುಕ್ತವಾಗಿ ಪ್ರವಾಸ ಮಾಡುವ ದಿನಗಳಿಗಾಗಿ ನಾವು ಕಾಯಬೇಕಿದೆ.