Monday, June 8, 2026
Monday, June 8, 2026

ಅಮೆರಿಕ: ಕನಸುಗಳ ಪಾರಿಯಲ್ಲೊಂದು ಮನದ ಯಾನ!

ಈ ಪ್ರಯಾಣ ನನ್ನ ಕಣ್ಣುಗಳಿಗೆ ಹೊಸ ಜಗತ್ತು ತೋರಿಸಿತು. ನನ್ನ ಮನಸಿಗೆ ಹೊಸ ಪಾಠ ಕಲಿಸಿತು. ಎಲ್ಲ ಪ್ರಯಾಣಗಳ ಮೂಲ ಉದ್ದೇಶ ಒಂದೇ, ನಮ್ಮ ಮನೆಯ ಬೆಚ್ಚಗಿನ ಅರಿವು ನಮಗೇ ಆಗುವಂತೆ ಮಾಡುವುದು. ʼಎಷ್ಟು ದೂರ ಹೋದರೂ, ನಮ್ಮ ಮನೆ… ನಮ್ಮ ಮಣ್ಣು… ನಮ್ಮ ಭಾಷೆ… ನಮ್ಮ ಆತ್ಮದ ಭಾಗವೇ ಆಗಿರುತ್ತದೆ.

- ಕುಶಾಂಗಿ ಪಟೇಲ್‌

ವಿಮಾನ ಮೋಡಗಳ ನಡುವೆ ಸಾಗುತ್ತಿತ್ತು. ಕಿಟಕಿಯಾಚೆ ಬೆಳ್ಳಿ ಮೋಡಗಳು ಒಂದಕ್ಕೊಂದು ಬೆಸೆದುಕೊಂಡು, ಕನಸುಗಳ ಹಾಸಿಗೆಯಂತೆ ಹರಡಿಕೊಂಡಿದ್ದವು. ಆಕಾಶದ ಆ ಅಂಗಳದಲ್ಲಿ ನಾನು ಕುಳಿತಿದ್ದೆ. ಆದರೆ, ಮನಸು ಭೂಮಿಯಲ್ಲಿರಲಿಲ್ಲ. ಅದು ಮುಂದೆ ಎದುರಾಗಲಿರುವ ಒಂದು ಅಪರಿಚಿತ ಪ್ರಪಂಚದ ಚಿತ್ರಗಳನ್ನು ಬಿಡಿಸುತ್ತಿತ್ತು.

ಅಕ್ಕನ ಮನೆಗೆ ಹೋಗುತ್ತಿರುವ ಸಂತೋಷ ನನ್ನೊಳಗೆ ತುಂಬಿಕೊಂಡಿದ್ದರೂ ಅಮೆರಿಕದ ನೆಲಕ್ಕೆ ಕಾಲಿಟ್ಟ ಕ್ಷಣ ಏನೋ ವಿಚಿತ್ರ ಮೌನ ನನ್ನೊಳಗೆ ಇಳಿದಿತ್ತು. ವಿಮಾನ ನಿಲ್ದಾಣದ ಜನಸಂದಣಿ, ಅನ್ಯ ಭಾಷೆಯ ಧ್ವನಿಗಳು, ಎಲ್ಲವೂ ಹೊಸದಾಗಿತ್ತು. ಆದರೆ ಮನಸು ಮಾತ್ರ ಪರಿಚಿತರನ್ನು ಹುಡುಕುತ್ತಿತ್ತು. ಹದಿನೆಂಟು ಗಂಟೆಗಳ ಪ್ರಯಾಣ ದೇಹವನ್ನು ಮಾತ್ರ ಅಲ್ಲ, ಮನಸನ್ನೂ ದಣಿಸಿತ್ತು. ದಿನ-ರಾತ್ರಿ ಗೊಂದಲಗೊಂಡಿದ್ದವು. ಬೆಳಗ್ಗೆ ಯಾವಾಗ, ರಾತ್ರಿ ಯಾವಾಗ ಎಂಬುದೇ ಅರ್ಥವಾಗದ ಸ್ಥಿತಿ. ಜೆಟ್ ಲ್ಯಾಗ್ ಎಂಬ ಆ ಅಜ್ಞಾತ ಅತಿಥಿ ನನ್ನ ದಿನಚರಿಯನ್ನು ಸಂಪೂರ್ಣವಾಗಿ ಬದಲಿಸಿಬಿಟ್ಟಿತ್ತು.

ಇದನ್ನೂ ಓದಿ: ಫಿಲಿಪ್ಪೈನ್ಸ್‌ನ ಶೂ ಮ್ಯೂಸಿಯಂ : ಕಲೆಯಾಗಿ ಅರಳಿದ ಪಾದರಕ್ಷೆಗಳು

ಅಕ್ಕ ಕೊಟ್ಟ ಕೀಲಿ

ಆ ಮೊದಲ ಕೆಲವು ದಿನಗಳು ಕಿಟಕಿಯಾಚೆ ನೋಡುತ್ತಲೇ ಕಳೆಯುವಂತಾಯಿತು. ʼಇಲ್ಲಿಗೇಕೆ ಬಂದೆ?ʼ ಎಂಬ ಪ್ರಶ್ನೆ ಮನಸಿನಲ್ಲಿ ಮೃದುವಾಗಿ ಕೇಳಿಸಿತು.

ಆದರೆ ಅಕ್ಕನ ಒಂದು ಮಾತು ʼಇಲ್ಲಿ ಕೂತರೆ ಅಮೆರಿಕ ನೋಡಿದ ಹಾಗೆ ಆಗುತ್ತದೆಯಾ?ʼ ಕೀಲಿಯಂತೆ ಕೆಲಸಮಾಡಿತು. ಮನಸಿನ ಬಾಗಿಲು ತೆರೆದುಕೊಂಡಿತು. ಆ ಕ್ಷಣದಿಂದಲೇ ನಾವು ಆಚೆ ಹೊರಡಲು ರೆಡಿ. ಸಾಕಷ್ಟು ಯೋಜನೆಗಳನ್ನು ನನ್ನ ಅಕ್ಕ ನಾನು ಅವಳ ತಲುಪುವ ಮೊದಲೆ ಸಿದ್ದವಾಗಿದ್ದವು. ಹೊಸ ಪ್ರಪಂಚವನ್ನು ನೋಡುವುದಕ್ಕೆ ಮಾತ್ರವಲ್ಲ, ಅದನ್ನು ಅನುಭವಿಸುವುದಕ್ಕೆ ನಾನು ಸಿದ್ದಳಾಗಿಬಿಟ್ಟೆ.

Untitled design - 2026-06-08T130630.813

ಸೆಳೆದ ನಿಶ್ಶಬ್ದ

ಮೊದಲ ಬಾರಿ ಅಮೆರಿಕದ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದಾಗ, ನನ್ನ ಕಣ್ಣುಗಳು ಹೊರಗೆ ಅಂಟಿಕೊಂಡಂತೆ ಇದ್ದವು. ಆ ರಸ್ತೆಗಳನ್ನು ನೋಡಿದರೆ ಮನಸಿಗೆ ಮೊದಲು ಅಚ್ಚರಿ ಆಗುತ್ತದೆ. ನಯವಾದ ರಸ್ತೆಗಳು ಮೈಲುಗಟ್ಟಲೆ ಹರಿದು ಹೋಗುತ್ತಿವೆ. ಒಂದೇ ಒಂದು ಗುಂಡಿಯಿಲ್ಲ, ಒಂದು ಕಸದ ತುಂಡೂ ಇಲ್ಲ ಎಲ್ಲಿಯೂ ಗುಂಡಿ ಇಲ್ಲ, ಅಸ್ತವ್ಯಸ್ತವಾಗಿಲ್ಲ. ಇಕ್ಕೆಲಗಳಲ್ಲಿ ಹಸಿರು ಹೊಲಗಳು, ಸರಿಯಾಗಿ ಕತ್ತರಿಸಿದ ಹುಲ್ಲಿನ ಹಾಸು. ಆದರೆ ಆ ದೃಶ್ಯಕ್ಕಿಂತಲೂ ನನ್ನ ಮನಸನ್ನು ಹೆಚ್ಚು ಸೆಳೆದದ್ದು, ಅಲ್ಲಿನ ನಿಶ್ಶಬ್ದ.

ನಮ್ಮಲ್ಲಿ ರಸ್ತೆ ಎಂದರೆ ಹಾರ್ನ್‌ಗಳ ಗದ್ದಲ, ಜನರ ಗೋಜು, ಓಡಾಟ. ಆದರೆ ಅಲ್ಲಿ? ನಿಶ್ಶಬ್ದವೇ ಮಾತನಾಡುತ್ತಿತ್ತು. ವಾಹನಗಳು ತಮ್ಮ ತಮ್ಮ ಮಾರ್ಗದಲ್ಲಿ ಸರಿಯಾಗಿ ಸಾಗುತ್ತಿವೆ. ಸಿಗ್ನಲ್ ಎದುರು ಎಲ್ಲರೂ ಶಾಂತವಾಗಿ ನಿಂತಿದ್ದಾರೆ. ಯಾರಿಗೂ ತುರ್ತು ಇಲ್ಲದಂತೆ, ಆದರೆ ಎಲ್ಲರೂ ತಮ್ಮ ಗಮ್ಯಸ್ಥಾನಕ್ಕೆ ಸರಿಯಾದ ಸಮಯದಲ್ಲಿ ತಲುಪುವಂತೆ.

ಒಮ್ಮೆ ನಮ್ಮ ಗಾಡಿಗೆ ಸಣ್ಣ ಅಪಘಾತವಾಯಿತು. ನನ್ನ ಮನಸು ತಕ್ಷಣ ನಮ್ಮ ದೇಶದ ದೃಶ್ಯವನ್ನು ಊಹಿಸಿತು. ಜನರು ಸೇರುವುದು, ಚರ್ಚೆ, ಗೊಂದಲ. ಆದರೆ ಅಲ್ಲಿ ಎಲ್ಲವೂ ವಿಭಿನ್ನ. ಕೆಲವೇ ನಿಮಿಷಗಳಲ್ಲಿ ಪೊಲೀಸ್ ಬಂದು ಯಾವುದೇ ಗದ್ದಲವಿಲ್ಲದೆ, ಯಾವುದೇ ಜಗಳವಿಲ್ಲದೆ ಪರಿಸ್ಥಿತಿಯನ್ನು ನಿಯಂತ್ರಿಸಿದರು.

ಅಮೆರಿಕದಲ್ಲಿ ನನ್ನನ್ನು ಮೊದಲಿಗೆ ಆಶ್ಚರ್ಯಕ್ಕೀಡಾಗಿಸಿದ ಮತ್ತೊಂದು ಅನುಭವ ಎಂದರೆ ಕಾರು ಚಾಲನೆ. ಭಾರತದಲ್ಲಿ ಎಡಭಾಗದಲ್ಲಿ ಓಡಿಸುವ ಅಭ್ಯಾಸ ಇದ್ದ ನನಗೆ, ಅಲ್ಲಿ ಬಲಭಾಗದಲ್ಲಿ ವಾಹನ ಚಲಿಸುವುದೇ ಒಂದು ಹೊಸ ಸವಾಲಾಗಿ ತೋರಿತು. ನನ್ನ ಬಳಿ ಅಮೆರಿಕದ ಡಿಎಲ್‌ ಇಲ್ಲದ ಕಾರಣ ಹೈವೇಗಳಲ್ಲಿ ಕಾರು ಓಡಿಸುವ ಆಸೆ ಈಡೇರಲ್ಲಿಲ್ಲ. ಆದರೆ, ಅಲ್ಲೇ ನಮ್ಮ ಕಮ್ಯೂನಿಟಿ ರಸ್ತೆಯಲ್ಲಿ ಕಾರ್‌ ಚಲಾಯಿಸಿ ಸ್ವಲ್ಪ ಮಟ್ಟಿಗೆ ಆಸೆ ಈಡೇರಿಸಿಕೊಂಡೆ. ಆ ಮಜವೇ ಬೇರೆ. ನಮ್ಮಲ್ಲಿ ಹೇಗೆ ಪ್ರತಿ ಏರಿಯಾದಲ್ಲೂ ಕೆಲವು ಗ್ರೋಸರಿ ಸ್ಟೋರ್, ಒಂದು ಕಾಫಿ ಶಾಪ್, ಒಂದು ಫಾರ್ಮಸಿ ಇವೆಯೋ ಅದೇ ರೀತಿ ಅಮೆರಿಕದಲ್ಲೂ ಪ್ರತಿ ಸಮುದಾಯದಲ್ಲೂ ಕೆಲವು ಸಾಮಾನ್ಯ ಅಂಗಡಿಗಳು ಕಾಣುತ್ತವೆ. ವಿಭಿನ್ನ ಜನಾಂಗಗಳು, ವಿಭಿನ್ನ ಸಂಸ್ಕೃತಿಗಳು ಇದ್ದರೂ ಅವರ ಬದುಕಿನ ಮೂಲ ಅಗತ್ಯಗಳು ಒಂದೇ ರೀತಿಯಲ್ಲಿ ಕಾಣಿಸುತ್ತವೆ.

ಭವ್ಯ ಮನೆಗಳು

ಅಲ್ಲಿನ ಸಣ್ಣ ಹಳ್ಳಿ ಮನೆಗಳೂ ಸ್ವಚ್ಛವಾಗಿ, ಸುಂದರವಾಗಿ ಕಾಣುತ್ತವೆ. ಮ್ಯಾನ್ಷನ್‌ಗಳಂತೂ ಸ್ವರ್ಗವೇ ಎಂಬಂತೆ ಭಾಸವಾಗುತ್ತವೆ. ವಿಶಾಲ ಅಂಗಳ, ನಾಜೂಕಾಗಿ ಕತ್ತರಿಸಿದ ಹುಲ್ಲು, ಬಣ್ಣ ಬಣ್ಣದ ಹೂದೋಟಗಳು ಪ್ರತಿ ಮನೆಯೂ ಒಂದು ಸಣ್ಣ ಚಿತ್ರದಂತೆ ಕಾಣುತ್ತದೆ. ಶಾಪಿಂಗ್ ಮಾಲ್‌ಗಳು ಕೂಡ ವಿಶಾಲ, ಸ್ವಚ್ಛ. ನೂರಾರು ಅಂಗಡಿಗಳು, ಫುಡ್ ಕೋರ್ಟ್‌ಗಳಲ್ಲಿ ಜಗತ್ತಿನ ಎಲ್ಲ ದೇಶಗಳ ಅಡುಗೆ ಲಭ್ಯವಿರುತ್ತವೆ. ಅಲ್ಲಿ ನಡೆದಾಡುತ್ತಿದ್ದರೆ ಇಡೀ ಪ್ರಪಂಚವೇ ಒಂದೇ ಚಾವಣಿ ಕೆಳಗೆ ಇದ್ದಂತೆ ಅನಿಸುತ್ತದೆ.

ಒರಲ್ಯಾಂಡೊದ ಡಿಸ್ನಿಲ್ಯಾಂಡ್

ಡಿಸ್ನಿಲ್ಯಾಂಡ್‌ಗೆ ಹೋಗುವ ದಿನ, ನನ್ನೊಳಗೆ ಒಂದು ವಿಚಿತ್ರ ಉತ್ಸಾಹ. ಆ ದಿನ ನಾನು ಮತ್ತೆ ಮಗು ಆಗಲು ಸಿದ್ಧಳಾಗಿದ್ದೆ. ಅಲ್ಲಿಗೆ ಕಾಲಿಟ್ಟ ಕ್ಷಣ, ನಾನು ಮತ್ತೊಂದು ಜಗತ್ತಿಗೆ ಪ್ರವೇಶಿಸಿದ್ದೆ. ಸಿಂಡ್ರೆಲ್ಲಾ ಕೋಟೆ ದೂರದಲ್ಲಿ ಮಿನುಗುತ್ತಿತ್ತು. ಮಿಕ್ಕಿ ಮೌಸ್ ನಗುತ್ತ ಕೈ ಬೀಸುತ್ತಿದ್ದ. ಎಲ್ಲೆಡೆ ಸಂಗೀತ, ಬಣ್ಣ-ಬಣ್ಣದ ವಾತಾವರಣ, ಸಂತೋಷವೇ ಮೂಡಿತ್ತು. ಆದರೆ ಈ ಕನಸಿನ ಲೋಕದ ಮಧ್ಯೆ ಒಂದು ನಿಜವೂ ಇತ್ತು. ಅದುವೆ ಸಹನೆ. ಒಂದು ರೈಡ್‌ಗೆ ಗಂಟೆಗಳ ಕಾಲ ಕಾಯಬೇಕಾಗುತ್ತದೆ. ಆದರೆ ಯಾರೂ ಅಸಹನೆ ತೋರಿಸುವುದಿಲ್ಲ. ಪ್ರತಿಯೊಬ್ಬರೂ ತಮ್ಮ ಸರದಿಗಾಗಿ ಶಾಂತವಾಗಿ ಕಾಯುತ್ತಿದ್ದರು. ಸ್ಪೇಸ್ ಮೌಂಟೇನ್ ರೈಡ್‌ನಲ್ಲಿ ಕತ್ತಲೆಯೊಳಗೆ ವೇಗವಾಗಿ ದೌಡಾಯಿಸುವಾಗ, ನಾನು ನಗುತ್ತಾ ಕಿರುಚುತ್ತಿದ್ದೆ. ಭಯ ಮತ್ತು ಆನಂದ ಒಂದೇ ಸಮಯದಲ್ಲಿ ನನ್ನೊಳಗೆ ಬೆರೆತುಹೋಯಿತು. ರಾತ್ರಿ ಪಟಾಕಿಗಳ ಬೆಳಕು ಆಕಾಶವನ್ನು ಬಣ್ಣಗಳಿಂದ ತುಂಬಿದಾಗ, ಆ ಮಕ್ಕಳ ಕನಸಿನ ಜಗತ್ತಿನಲ್ಲಿ ನಾನು ಮಗುವಾಗಿ ನಗುತ್ತಿದ್ದೆ.

ಕಥೆಗಳೊಳಗೆ ಹೆಜ್ಜೆಗಳು

ಯೂನಿವರ್ಸಲ್ ಸ್ಟುಡಿಯೋಸ್‌ನಲ್ಲಿ ನಡೆಯುತ್ತಿದ್ದಾಗ, ನಾನು ಒಂದು ಸಿನಿಮಾ ನೋಡುತ್ತಿರಲಿಲ್ಲ ನಾನೇ ಆ ಸಿನಿಮಾದ ಭಾಗವಾಗಿದ್ದೆ. ಅಬ್ಬಾ! ಹ್ಯಾರಿ ಪಾಟರ್ ಲೋಕಕ್ಕೆ ಕಾಲಿಟ್ಟಾಗ, ಹಾಗ್ವಾರ್ಟ್ಸ್ ಕೋಟೆ ನನ್ನ ಮುಂದೆ ಜೀವಂತವಾಗಿ ನಿಂತಂತಾಯಿತು. ಕೈಯಲ್ಲಿ ಬಟರ್‌ಬೀರ್ ಹಿಡಿದು ನಿಂತಾಗ, ನಾನು ನಿಜವಾಗಿಯೇ ಆ ಲೋಕದ ವಿದ್ಯಾರ್ಥಿನಿಯಂತೆ ಅನಿಸಿತು. ಜ್ಯೂರಾಸಿಕ್ ವರ್ಲ್ಡ್ ರೈಡ್‌ನಲ್ಲಿ ನೀರು ಚಿಮ್ಮಿ ನನ್ನ ಮೇಲೆ ಬೀಳುವಾಗ ಮೈನವಿರೇಳಿತು. ಮಿನಿಯನ್‌ಗಳ ಜತೆಗಿನ ಆ ಖುಷಿಯ ಕ್ಷಣಗಳು, ಜೀವನವನ್ನು ಎಷ್ಟು ಸರಳವಾಗಿ ನೋಡಬಹುದು ಎಂಬುದನ್ನು ನೆನಪಿಸಿದವು. ಸೀ ವರ್ಲ್ಡ್‌ನಲ್ಲಿ ಡಾಲ್ಫಿನ್‌ಗಳ ಪ್ರದರ್ಶನ ಮನಸಿಗೆ ತಲುಪುವ ಒಂದು ಮುದವಾದ ಕವನದಂತಿತ್ತು.

ಮಣ್ಣಿನ ವಾಸನೆ

ಜಾರ್ಜಿಯಾದಲ್ಲಿ ನಾನು ಅನುಭವಿಸಿದ ಇನ್ನೊಂದು ವಿಶೇಷ ಕ್ಷಣ ಅಂದರೆ ಅದು ಸ್ಟ್ರಾಬೆರಿ ಮತ್ತು ಬ್ಲೂಬೆರಿ ಪಿಕ್ಕಿಂಗ್. ಹೊಲದ ಮಧ್ಯೆ ನಡೆದು, ಕೈಯಲ್ಲಿ ಹಣ್ಣು ಕಿತ್ತುಕೊಳ್ಳುವ ಅನುಭವ, ನನ್ನನ್ನು ನನ್ನ ಬಾಲ್ಯಕ್ಕೆ ಕರೆದೊಯ್ಯಿತು. ಕೆಂಪು ಸ್ಟ್ರಾಬೆರಿಗಳು ಸೂರ್ಯನ ಬೆಳಕಿನಲ್ಲಿ ಮಿನುಗುತ್ತಿದ್ದವು. ಬ್ಲೂಬೆರಿಗಳು ನೀಲಿ ಆಕಾಶದ ತುಂಡುಗಳಂತೆ ಕಾಣುತ್ತಿದ್ದವು. ಒಂದು ಹಣ್ಣು ಕಿತ್ತು ತಿನ್ನುವಾಗ, ಅದರ ತಾಜಾತನ ನಾಲಗೆಯಲ್ಲಿ ಕರಗುತ್ತಿತ್ತು.

Untitled design - 2026-06-08T130637.565

ಫೋರ್ಟ್‌ ವಾಲ್ಟನ್‌ ಸಮುದ್ರ

ಸಮುದ್ರ ತೀರದಲ್ಲಿ ಮೊದಲ ಬಾರಿ ಕಾಲಿಟ್ಟಾಗ, ಬಿಳಿ ಮರಳು ನನ್ನ ಕಾಲುಗಳನ್ನು ಮೃದುವಾಗಿ ತಬ್ಬಿಕೊಂಡಿತು. ನಿಧಾನವಾಗಿ ನಡೆಯುತ್ತಾ, ಆ ಮರಳಿನ ಸ್ಪರ್ಶವನ್ನು ನಾನು ಅನುಭವಿಸುತ್ತಿದ್ದೆ. ಮರಳಿನಲ್ಲಿ ಕುಳಿತುಕೊಂಡು, ಕೈಯಲ್ಲಿ ಹಿಡಿದುಕೊಂಡು, ಅದರಲ್ಲಿ ಮುಳುಗುವಂತೆ ಇದ್ದೆ. ರಾತ್ರಿ ಆದಾಗ, ಆ ಸ್ಥಳ ಸಂಪೂರ್ಣ ಬದಲಾಗುತ್ತದೆ. ಅಲೆಗಳ ಶಬ್ದ ಮಾತ್ರ ಕೇಳಿಸುತ್ತದೆ. ಅಲ್ಲಿ ನಡೆಯುವಾಗ, ನನ್ನೊಳಗಿನ ಗದ್ದಲವೂ ನಿಧಾನವಾಗಿ ಶಾಂತವಾಗುತ್ತಿತ್ತು. ಇನ್ನು ಅಮೆರಿಕದ ಮಾಲ್‌ಗಳಲ್ಲಿ ಕಾಲಿಟ್ಟಾಗ, ಹೊರಗಿನ ಪ್ರಪಂಚವೇ ಮರೆತುಹೋಗುತ್ತದೆ. ಮಳೆ ಬಿದ್ದರೂ, ಒಳಗೆ ಒಂದು ಸಮತೋಲನದ ವಾತಾವರಣ. ಬೆಳಕು, ತಾಪಮಾನ ಎಲ್ಲವೂ ನಿಯಂತ್ರಿತ ಹಾಗೂ ಸುಸಜ್ಜಿತ. ಹೊರಗೆ ಬೇಸಿಗೆ ಕಿಡಿಕಾರುತ್ತಿದ್ದರೂ, ಒಳಗೆ ತಂಪಾದ ಗಾಳಿ. ಹಾಗೆಯೇ ಅಮಿಕೋಲಾ ಜಲಪಾತದ ಗರ್ಜನೆ ನನ್ನ ಹೃದಯಕ್ಕೆ ತಟ್ಟಿತು. ಸುತ್ತಲೂ ಹಸಿರು, ಗಾಳಿ, ನೀರು ಎಲ್ಲವೂ ಕಂಡು ನನ್ನ ಮನಸು ಕರ್ನಾಟಕದ ಜೋಗ ಜಲಪಾತದತ್ತ ಹಾರಿತು.

ಭಾರತೀಯ ದೇವಾಲಯಗಳು

ಅಮೆರಿಕದ ನೆಲದ ಮೇಲೆ ನಿಂತ ಭಾರತೀಯ ದೇವಾಲಯಗಳನ್ನು ನೋಡಿದಾಗ ಮನಸು ಒಂದು ಕ್ಷಣ ಕಂಪಿಸಿತು. ಅಷ್ಟು ದೂರದ ಆ ಪಾಶ್ಚಿಮಾತ್ಯ ನಾಡಿನಲ್ಲಿ, ಶಿಖರ ಎತ್ತಿ ನಿಂತ ದ್ರಾವಿಡ ಶೈಲಿಯ ದೇವಾಲಯಗಳು, ನಮ್ಮ ಸಂಸ್ಕೃತಿ, ನಮ್ಮ ಭಾಷೆ, ನಮ್ಮ ಬೇರಿನ ಪ್ರತೀಕ. ಗರ್ಭಗುಡಿಯ ಒಳಗೆ ನಿಂತು ಕಣ್ಣು ಮುಚ್ಚಿದ ಕ್ಷಣ ಘಂಟಾನಾದ, ಮಂತ್ರ ಘೋಷ, ಕರ್ಪೂರದ ಸುಗಂಧ, ಕ್ಷಣ ಕಾಲ ನಾನು ಅಮೆರಿಕದಲ್ಲಿ ಇಲ್ಲ ಅನಿಸಿತು. ಅಕ್ಕ ಮತ್ತು ಅಲ್ಲಿನ ಕನ್ನಡ ಸಮುದಾಯದ ಜನರ ಜತೆ ಕನ್ನಡದಲ್ಲಿ ಮಾತಾಡಿ, ಶ್ರದ್ಧೆಯಿಂದ ಪೂಜೆ ಸಲ್ಲಿಸಿದ ಆ ಕ್ಷಣ ಮನಸಿಗೆ ಒಂದು ಗೆಲುವಿನ ಭಾವ ತಂದಿತ್ತು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...