ದೇವರ ದರ್ಶನಕ್ಕೆ ಸರಕಾರದ ಸಹಕಾರ
2013ರಲ್ಲಿ ಮಧ್ಯಪ್ರದೇಶ ಸರಕಾರ, ಮುಖ್ಯಮಂತ್ರಿ ತೀರ್ಥ ದರ್ಶನ ಯೋಜನೆ ಮೂಲಕ ಸಹಾಯ ಶುರುಮಾಡಿದ್ದೇ ಮೊದಲು. ಆ ನಂತರ ಕೇಂದ್ರ ಸರಕಾರ ಪ್ರಸಾದ್ ಯೋಜನೆಯನ್ನು ಜಾರಿ ಮಾಡಿತು. ಈಗ ಧಾರ್ಮಿಕ ಪ್ರವಾಸ ಎಂಬುದು ಕ್ರೇಜ್ ಆಗಿಬಿಟ್ಟಿದೆ. ಯುವಕ ಯುವತಿಯರಲ್ಲ ಸಾಂಕ್ರಾಮಿಕವಾಗಿದೆ. ಉಳ್ಳವರು ಸಬ್ಸಿಡಿ, ಉಚಿತ ಇತ್ಯಾದಿಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಅಶಕ್ತರಿಗೆ ಸಹಾಯ ಬೇಕೇಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ಸರಕಾರ ನಿಜಕ್ಕೂ ಪ್ರಶಂಸಾರ್ಹ ಸಹಕಾರ ಕೊಟ್ಟಿದೆ. ಮುಜರಾಯಿ ಇಲಾಖೆಯಿಂದ ಈಗಾಗಲೇ ಚಾರ್ ಧಾಮ್, ಮಾನಸಸರೋವರ,ವಾರಾಣಸಿ ಇನ್ನಿತರ ಜಾಗಗಳಿಗೆ ಸಬ್ಸಿಡಿ, ಪ್ಯಾಕೇಜ್ ಟ್ರಿಪ್ ಎಲ್ಲವೂ ನೀಡಲಾಗುತ್ತಿದೆ.
ಪ್ರವಾಸವೆಂಬುದು ಜೀವನದ ಭಾಗವೇ ಆಗಿ ಹೋಗಿದೆ ನಿಜ. ಆದರೂ ಅದು ಇಂದಿಗೂ ಲಕ್ಸುರಿ ಎಂದೇ ಪರಿಗಣಿಸಲಾಗುತ್ತಿರುವುದೂ ಸತ್ಯವೇ. ಆರ್ಥಿಕ ಮುಗ್ಗಟ್ಟಿನ ಏಕೈಕ ಕಾರಣಕ್ಕೆ ಅದೆಷ್ಟೇ ಆಸೆಗಳಿದ್ದರೂ ಪ್ರವಾಸ ಮಾಡದ ಕೋಟ್ಯಂತರ ಜನರು ಈ ದೇಶದಲ್ಲಿದ್ದಾರೆ. ಪಾಶ್ಚಿಮಾತ್ಯ ದೇಶಗಳಲ್ಲಿ ಪ್ರವಾಸ ಎಂಬುದು ಅಲೆಮಾರಿತನದ ಇನ್ನೊಂದು ರೂಪವಷ್ಟೆ. ಆದರೆ ನಮ್ಮಲ್ಲಿ ಹಾಗಲ್ಲ. ಇಲ್ಲಿ ಪ್ರವಾಸ ಅಂದರೆ ಪೂರ್ವತಯಾರಿ, ಯೋಜನೆ ಎಲ್ಲವೂ ಮುಖ್ಯವಾಗುತ್ತವೆ. ಹಣವಿಲ್ಲವೆಂದರೆ ದೇವಸ್ಥಾನಗಳ ದರ್ಶನವೂ ಅಸಾಧ್ಯ. ಹಣ ಹೊಂದಿಸಿಕೊಳ್ಳಲಾಗದೇ ತಮ್ಮಿಷ್ಟದ ದೇವರ ಜಾಗಕ್ಕೆ ಹೋಗದೇ ಉಳಿದಿರುವ ಎಷ್ಟೋ ಮಂದಿ ಇದ್ದಾರೆ. ಜೀವಮಾನದಲ್ಲೊಮ್ಮೆ ಕಾಶಿಗೆ ಹೋಗಬೇಕು, ತಿರುಪತಿಗೆ ಹೋಗಬೇಕು, ಧರ್ಮಸ್ಥಳಕ್ಕೆ ಹೋಗಬೇಕು ಎಂದು ಹಂಬಲಿಸಿ ಕೊನೆಗೂ ಈಡೇರಿಸಿಕೊಳ್ಳದೇ ಮುಗಿದು ಹೋದವರೂ ಇಲ್ಲಿದ್ದಾರೆ. ಇದೇ ಕಾರಣಕ್ಕೆ ಸರಕಾರದ ಸಬ್ಸಿಡಿಗೆ ಮಹತ್ವ ಬರುತ್ತದೆ.
ಇದನ್ನೂ ಓದಿ: ನಂಬರ್ ಒನ್ ಪಟ್ಟ ಸುಮ್ಮನೇ ಒಲಿಯುವುದಿಲ್ಲ
ಆರ್ಥಿಕ ಅಶಕ್ತರಿಗೆ, ಹಿರಿಯ ನಾಗರಿಕರಿಗೆ ಸರಕಾರದ ಸಹಾಯ ದೊರಕಿಬಿಟ್ಟರೆ, ಅದೆಷ್ಟೋ ಮಂದಿ ತಮ್ಮಿಷ್ಟದ ಧಾರ್ಮಿಕ ಯಾತ್ರೆಗಳನ್ನು ಮಾಡಿಬಿಡುತ್ತಾರೆ. ಈ ನಿಟ್ಟಿನಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಮಹತ್ವದ ಬದಲಾವಣೆಗಳು ಆಗಿವೆ. ಒಂದು ಕಾಲದಲ್ಲಿ ಹಜ್ ಯಾತ್ರೆಗೆ ಮಾತ್ರವೇ ಸರಕಾರ ಸಬ್ಸಿಡಿ ಕೊಡುತ್ತಿತ್ತು. ಅಲ್ಪಸಂಖ್ಯಾತರಿಗೆ ಮೆಕ್ಕಾಗೆ ಹೋಗಿಬರಲು ಸಿಗುತ್ತಿದ್ದ ಧನಸಹಾಯ ಬರಬರುತ್ತಾ ಬೊಕ್ಕಸಕ್ಕೆ ದೊಡ್ಡ ಹೊರೆಯಾಗತೊಡಗಿದಾಗ, ಹಂತಹಂತವಾಗಿ ಕಡಿಮೆ ಮಾಡುತ್ತಾ ಅದನ್ನು 2018ರಲ್ಲಿ ನಿಲ್ಲಿಸಲಾಯಿತು. (ಬೇಸರದ ಸಂಗತಿ ಏನಲ್ಲ. ಆ ಹಣ ಮುಸಲ್ಮಾನರ ಕಲ್ಯಾಣಕ್ಕೇ ಬಳಕೆ ಆಗುತ್ತಿದೆ ಬಿಡಿ.) ಆದರೆ ಸ್ವಾತಂತ್ರ್ಯ ಬಂದಾಗಿನಿಂದ ಭಾರತದಲ್ಲಿ ಹಿಂದೂ ಧಾರ್ಮಿಕ ಸ್ಥಳಗಳಿಗೆ ಹೋಗಲು ಸಬ್ಸಿಡಿ ಕೊಡುತ್ತಿರಲಿಲ್ಲ. ಉಚಿತ ಬಸ್, ರೈಲು ಇತ್ಯಾದಿ ಯಾವುದೂ ಇರುತ್ತಿರಲಿಲ್ಲ.

2013ರಲ್ಲಿ ಮಧ್ಯಪ್ರದೇಶ ಸರಕಾರ, ಮುಖ್ಯಮಂತ್ರಿ ತೀರ್ಥ ದರ್ಶನ ಯೋಜನೆ ಮೂಲಕ ಸಹಾಯ ಶುರುಮಾಡಿದ್ದೇ ಮೊದಲು. ಆ ನಂತರ ಕೇಂದ್ರ ಸರಕಾರ ಪ್ರಸಾದ್ ಯೋಜನೆಯನ್ನು ಜಾರಿ ಮಾಡಿತು. ಈಗ ಧಾರ್ಮಿಕ ಪ್ರವಾಸ ಎಂಬುದು ಕ್ರೇಜ್ ಆಗಿಬಿಟ್ಟಿದೆ. ಯುವಕ ಯುವತಿಯರಲ್ಲ ಸಾಂಕ್ರಾಮಿಕವಾಗಿದೆ. ಉಳ್ಳವರು ಸಬ್ಸಿಡಿ, ಉಚಿತ ಇತ್ಯಾದಿಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಅಶಕ್ತರಿಗೆ ಸಹಾಯ ಬೇಕೇಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ಸರಕಾರ ನಿಜಕ್ಕೂ ಪ್ರಶಂಸಾರ್ಹ ಸಹಕಾರ ಕೊಟ್ಟಿದೆ. ಮುಜರಾಯಿ ಇಲಾಖೆಯಿಂದ ಈಗಾಗಲೇ ಚಾರ್ ಧಾಮ್, ಮಾನಸಸರೋವರ,ವಾರಾಣಸಿ ಇನ್ನಿತರ ಜಾಗಗಳಿಗೆ ಸಬ್ಸಿಡಿ, ಪ್ಯಾಕೇಜ್ ಟ್ರಿಪ್ ಎಲ್ಲವೂ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜಮ್ಮುವಿನ ವೈಷ್ಣೋದೇವಿ ಮಂದಿರಕ್ಕೆ ಹೋಗಲು ಪ್ರತಿವ್ಯಕ್ತಿಗೆ ವರ್ಷದಲ್ಲಿ ಒಂದು ಬಾರಿಗೆ ಐದು ಸಾವಿರ ಕೊಡುವ ಪ್ರಸ್ತಾವನೆ ಸಲ್ಲಿಕೆಯಾಗಿದೆ.
ಕಾಶಿಗೆ ಕಳೆದ ವರ್ಷದಲ್ಲಿ ಸುಮಾರು ಎಂಟು ಸಾವಿರ ಯಾತ್ರಿಗಳು ಸಬ್ಸಿಡಿ ಪಡೆದು ಯಾತ್ರೆ ಮಾಡಿದ್ದರು. ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಚಾರ್ ಧಾಮ್ ಯಾತ್ರೆ ಮಾಡಿದ್ದರು. ಹಿಂದೂವಿರೋಧಿ ಸರಕಾರ ಎಂಬ ಅಪವಾದಕ್ಕೆ ಒಳಗಾಗಿರುವ ಕರ್ನಾಟಕ ಸರಕಾರದ ಶಕ್ತಿ ಯೋಜನೆಯೊಂದರಿಂದಲೇ ಕರ್ನಾಟಕದ ಲಕ್ಷಾಂತರ ಮಹಿಳೆಯರು ರಾಜ್ಯದ ಎಲ್ಲ ಧಾರ್ಮಿಕ ಕೇಂದ್ರಗಳಿಗೆ ಉಚಿತವಾಗಿ ಭೇಟಿ ಕೊಡುವಂತಾಗಿದ್ದು? ಸರಕಾರದ ಯಾತ್ರೆ ಯೋಜನೆಗಳಿಗೆ ವಯೋಮಾನದ ಮಿತಿ, ಆರ್ಥಿಕ ಸ್ಥಿತಿಗತಿ ಯಾವುದೂ ಮಾನದಂಡವಲ್ಲ. ಈ ಯೋಜನೆಯಲ್ಲಿ ಯಾರು ಬೇಕಾದರೂ ಫಲ ಪಡೆಯಬಹುದು. ಆದರೆ ಜನ ಸಾಮಾನ್ಯರು ಸರಕಾರವನ್ನು ದೂರುತ್ತಾ ಬಯ್ಯುತ್ತಾ ಇದ್ದಾರೆಯೇ ಹೊರತು ಸರಕಾರದ ಅನುದಾನ ಮತ್ತು ಸಬ್ಸಿಡಿಗಳನ್ನು ಬಳಸಿ ಯಾತ್ರೆ ಮಾಡುತ್ತಿಲ್ಲ.

ಈಗಿನ ಕರ್ನಾಟಕ ಸರಕಾರ ಧಾರ್ಮಿಕ ಯಾತ್ರೆಗಳಿಗೆ ಬೆಂಬಲ ಕೊಟ್ಟಷ್ಟು ಇನ್ಯಾವ ಸರಕಾರವೂ ಕೊಟ್ಟಿರಲಿಕ್ಕಿಲ್ಲ. ಇದರ ಸದುಪಯೋಗ ಪಡೆದುಕೊಳ್ಳುವುದು ಪ್ರವಾಸಿಗರಿಗೆ ಬಿಟ್ಟಿದ್ದು. ಇದರ ಹಿಂದಿನ ಅಜೆಂಡಾ ಏನು, ಇದು ವೋಟ್ ಬ್ಯಾಂಕ್ ರಾಜಕಾರಣವಾ? ಇತರ ಧರ್ಮಕ್ಕೇನು ಕೊಟ್ಟಿದ್ದಾರೆ ಇಂಥದಕ್ಕೆಲ್ಲ ತಲೆಖರ್ಚು ಮಾಡುವ ಬದಲು ಸರಕಾರ ಬಡವಬಲ್ಲಿದ, ಆ ಜಾತಿ ಈ ಜಾತಿ ಅಂತೇನೂ ನೋಡದೆ ಧಾರ್ಮಿಕ ಪ್ರವಾಸಗಳಿಗೆ ನೀಡುತ್ತಿರುವ ಸವಲತ್ತುಗಳನ್ನು ಬಳಸಿಕೊಂಡು ಪ್ರವಾಸ ಮಾಡುವುದು ಅಪ್ಪಟ ಪ್ರವಾಸಿಗನ ಲಕ್ಷಣ. ಸರಕಾರ ಕೊಡುವ ಸಬ್ಸಿಡಿಯಲ್ಲಿ ರಾಜಭೋಗದ ಪ್ರವಾಸ ಮಾಡಲು ಸಾಧ್ಯವಾಗದು. ನಿಜ. ಆದರೆ ಅದರಿಂದ ಸಹಾಯವಾಗುವುದಂತೂ ಹೌದಲ್ಲವೇ?