• ಪ್ರಮೋದ ಮೋಹನ ಹೆಗಡೆ

ಪುರಾಣ ಪ್ರಯಾಣ

ಕಥೆ 1:

ಅರ್ಜುನನ ಮೊಮ್ಮಗ ಮತ್ತು ಅಭಿಮನ್ಯುವಿನ ಮಗನಾದ ರಾಜ ಪರೀಕ್ಷಿತನು ಒಬ್ಬ ಧರ್ಮನಿಷ್ಠ ಮತ್ತು ಉದಾತ್ತ ಆಡಳಿತಗಾರ. ಅವನ ಜನನಕ್ಕೂ ಮೊದಲೇ, ತಾಯಿಯ ಗರ್ಭದಲ್ಲಿದ್ದಾಗ ಕೃಷ್ಣನು ಅವನನ್ನು ಪ್ರಾಣಾಂತಿಕ ಅಸ್ತ್ರದಿಂದ ರಕ್ಷಿಸಿದ್ದ. ಈ ದೈವಿಕ ಕೃಪೆಯಿಂದಾಗಿ, ಪರೀಕ್ಷಿತನು ಧರ್ಮನಿಷ್ಠನಾಗಿ ಮತ್ತು ಋಷಿಮುನಿಗಳ ಬಗ್ಗೆ ಗೌರವವುಳ್ಳ ನ್ಯಾಯವಂತ ಅರಸನಾಗಿ ಬೆಳೆದ. ಆದಾಗ್ಯೂ, ಕಲಿಯುಗವು ತನ್ನ ಪ್ರಭಾವವನ್ನು ಬೀರಲಾರಂಭಿಸಿದಾಗ, ಅಂಥ ಸದ್ಗುಣಶೀಲ ರಾಜನೂ ಮನುಷ್ಯ ಸಹಜ ದೌರ್ಬಲ್ಯದಿಂದ ಸಂಪೂರ್ಣವಾಗಿ ಮುಕ್ತನಾಗಲು ಸಾಧ್ಯವಾಗಲಿಲ್ಲ.

ಒಂದು ದಿನ ಕಾಡಿನಲ್ಲಿ ಬೇಟೆಯಾಡುತ್ತಿದ್ದಾಗ, ಪರೀಕ್ಷಿತನು ಜಿಂಕೆಯನ್ನು ಬೆನ್ನಟ್ಟುತ್ತಾ ಬಹಳ ದೂರ ಹೋದ. ಸುಸ್ತಾದ. ಅವನಿಗೆ ವಿಪರೀತ ಹಸಿವು ಮತ್ತು ಬಾಯಾರಿಕೆಯಾಯಿತು. ಆ ಸ್ಥಿತಿಯಲ್ಲಿ ಅವನು ಶಮೀಕ ಮಹರ್ಷಿಗಳ ಆಶ್ರಮಕ್ಕೆ ಬಂದ. ಆಶ್ರಮದ ಪರಿಸರವು ಶಾಂತಿಯಿಂದ ಕೂಡಿತ್ತು. ಆಧ್ಯಾತ್ಮಿಕ ಕಂಪನಗಳಿತ್ತು. ಅಲ್ಲಿ ಮಹರ್ಷಿಗಳು ಬಾಹ್ಯ ಪ್ರಪಂಚದ ಅರಿವಿಲ್ಲದೆ ಗಾಢವಾದ ಧ್ಯಾನದಲ್ಲಿದ್ದರು.

ಇದನ್ನೂ ಓದಿ: ತಂಬೂರಿ ಮೀಟಿದವ ಭವಾಬ್ಧಿ ದಾಟಿದವ

ರಾಜನು ಮಹರ್ಷಿಗಳ ಬಳಿ ಬಂದು ನೀರು ಮತ್ತು ಸ್ವಲ್ಪ ಸಹಾಯವನ್ನು ಕೇಳಿದ. ಆದರೆ, ಆಳವಾದ ಧ್ಯಾನದಲ್ಲಿದ್ದ ಶಮೀಕ ಮಹರ್ಷಿಗಳು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆ ಮೌನವನ್ನು ರಾಜ ತಪ್ಪಾಗಿ ಅರ್ಥೈಸಿಕೊಂಡನು. ಹಸಿವು ಮತ್ತು ಬಾಯಾರಿಕೆಯಿಂದ ಬಳಲಿದ್ದ ಪರೀಕ್ಷಿತನಿಗೆ ತಾನು ಅವಮಾನಿತನಾದಂತೆ ಭಾಸವಾಯಿತು. ಆ ಕ್ಷಣದ ಕೋಪದಿಂದ ಅವನು

ಸಮೀಪದಲ್ಲೇ ಸತ್ತ ಹಾವೊಂದನ್ನು ಕಂಡು ಅದನ್ನು ಎತ್ತಿ ಮಹರ್ಷಿಗಳ ಕುತ್ತಿಗೆಗೆ ಹಾರದಂತೆ ಹಾಕಿದನು. ನಂತರ ಪರೀಕ್ಷಿತನು ಆಶ್ರಮದಿಂದ ಹೊರಟು ಹೋದನು, ಆದರೆ ಸ್ವಲ್ಪ ಸಮಯದಲ್ಲೇ ಅವನ ಕೋಪ ಇಳಿದು ತನ್ನ ಕೃತ್ಯದ ಬಗ್ಗೆ ಪಶ್ಚಾತ್ತಾಪಪಡಲು ಆರಂಭಿಸಿದನು.

ನಂತರ, ಮಹರ್ಷಿಗಳ ಎಳೆಯ ಮಗ ಶೃಂಗಿಯು ಆಶ್ರಮಕ್ಕೆ ಮರಳಿದ. ತನ್ನ ತಂದೆಯ ಕುತ್ತಿಗೆಯಲ್ಲಿ ಸತ್ತ ಹಾವು ನೇತಾಡುತ್ತಿರುವುದನ್ನು ಕಂಡು ಅವನು ಆಘಾತಕ್ಕೊಳಗಾದ. ಇದಕ್ಕೆ ರಾಜ ಪರೀಕ್ಷಿತನೇ ಕಾರಣ ಎಂದು ತಿಳಿದಾಗ, ಶೃಂಗಿಯು "ಇಂದಿನಿಂದ ಏಳು ದಿನಗಳಲ್ಲಿ ಸರ್ಪರಾಜ ತಕ್ಷಕನ ಕಡಿತದಿಂದ ರಾಜನು ಸಾವನ್ನಪ್ಪಲಿ" ಎಂದು ಭೀಕರ ಶಾಪವನ್ನು ನೀಡಿದನು. ಬಳಿಕ ಪರೀಕ್ಷಿತನಿಗೆ ತನ್ನ ತಪ್ಪಿನ ಅರಿವೂ ಆಯಿತು, ಇದರಿಂದ ಅಧ್ಯಾತ್ಮದ ದಾರಿಯೆಡೆಗೆ ಸಾಗಲು ಸಹಕಾರಿಯೂ ಆಯಿತು. ಆದರೆ, ಎಲ್ಲೋ ಹೋದಾಗ ಒಂದು ಕ್ಷಣದ ತಾಳ್ಮೆ ಕಾಪಾಡದೆಯೇ ಕೋಪಗೊಂಡು ಮಾಡಬಾರದ್ದನ್ನು ಮಾಡಿದರೆ ಆಗಬಾರದ್ದು ಆಗುತ್ತದೆ. ಎಲ್ಲೇ ಹೋದರೂ ಅಲ್ಲಿನ ರೀತಿ ನೀತಿಗೆ ಸಹಕರಿಸುವುದು ಧರ್ಮ.

Untitled design - 2026-04-28T123626.311

ಕಥೆ 2:

ಶ್ರವಣ ಕುಮಾರನು ತನ್ನ ವೃದ್ಧ ಮತ್ತು ಅಂಧ ಪೋಷಕರ ಸೇವೆಗೆ ಪ್ರೀತಿ ಮತ್ತು ಕಾಳಜಿಯಿಂದ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದ. ಪೋಷಕರ ಆಸೆಯಂತೆ ಪುಣ್ಯಕ್ಷೇತ್ರಗಳಿಗೆ ತೀರ್ಥಯಾತ್ರೆಗೆ ಅವನು, ತನ್ನ ಹೆಗಲ ಮೇಲೆ ಕಾವಡಿಯನ್ನು ಹೊತ್ತು, ಅದರ ಎರಡು ಬುಟ್ಟಿಗಳಲ್ಲಿ ತಂದೆ-ತಾಯಿಯನ್ನು ಕುಳ್ಳಿರಿಸಿಕೊಂಡು ಪವಿತ್ರ ಯಾತ್ರೆಗೆ ಕರೆದೊಯ್ದನು.

ಒಂದು ದಿನ, ಅವರ ಪ್ರಯಾಣದ ಸಮಯದಲ್ಲಿ ಪೋಷಕರಿಗೆ ಬಾಯಾರಿಕೆಯಾಗಿ ನೀರು ಕೇಳಿದರು. ಶ್ರವಣನು ಅವರನ್ನು ಮರದ ಕೆಳಗೆ ಮೆಲ್ಲನೆ ವಿಶ್ರಮಿಸಲು ಹೇಳಿ, ಹತ್ತಿರದ ನದಿಯಿಂದ ನೀರು ತರಲು ಹೋದ. ಅದೇ ಸಮಯದಲ್ಲಿ, ಅಯೋಧ್ಯೆಯ ರಾಜ ದಶರಥನು ಕಾಡಿನಲ್ಲಿ ಬೇಟೆಯಾಡಲು ಬಂದಿದ್ದ. 'ಶಬ್ದವೇಧಿ' ವಿದ್ಯೆಯಲ್ಲಿ ಪ್ರವೀಣನಾಗಿದ್ದ.

ಶ್ರವಣನು ತನ್ನ ಪಾತ್ರೆಯನ್ನು ನದಿಯ ನೀರಿನಲ್ಲಿ ಮುಳುಗಿಸಿದಾಗ, ನೀರು ತುಂಬುವ ಶಬ್ದವು ಪ್ರಾಣಿಯೊಂದು ನೀರು ಕುಡಿಯುತ್ತಿರುವಂತೆ ಕೇಳಿಸಿತು. ಅದನ್ನು ಮೃಗವೆಂದು ತಪ್ಪಾಗಿ ಭಾವಿಸಿದ ದಶರಥನು ಶಬ್ದದ ದಿಕ್ಕಿಗೆ ಬಾಣ ಬಿಟ್ಟ. ದುರದೃಷ್ಟವಶಾತ್, ಆ ಬಾಣವು ಪ್ರಾಣಿಗೆ ತಗಲುವ ಬದಲು ಶ್ರವಣ ಕುಮಾರನಿಗೆ ತಗುಲಿತು. ನೋವಿನ ಕಿರುಚಾಟ ಕೇಳಿದ ತಕ್ಷಣ ಏನೋ ಅನಾಹುತವಾಗಿದೆ ಎಂದು ಅರಿತ ದಶರಥನು ಆ ಸ್ಥಳಕ್ಕೆ ಧಾವಿಸಿದ.

ಶ್ರವಣನು ಬಹಳ ಕಷ್ಟದಿಂದ ಮಾತನಾಡುತ್ತಾ ತಾನು ಯಾರೆಂದು ತಿಳಿಸಿ ನೀರಿಗಾಗಿ ಕಾಯುತ್ತಿರುವ ತನ್ನ ಅಂಧ ಪೋಷಕರಿಗೆ ನೀರು ತಲುಪಿಸುವಂತೆ ವಿನಂತಿಸಿದನು. ಅಷ್ಟರಲ್ಲೇ ಶ್ರವಣ ಕುಮಾರನು ಕೊನೆಯುಸಿರೆಳೆದ.

ತಪ್ಪಿತಸ್ಥ ಭಾವನೆಯಿಂದ ನಡುಗುತ್ತಿದ್ದ ದಶರಥನು ನೀರನ್ನು ತೆಗೆದುಕೊಂಡು ಬಾಲಕನ ಪೋಷಕರ ಬಳಿಗೆ ಹೋದನು. ಹೆಜ್ಜೆಯ ಸದ್ದನ್ನು ಕೇಳಿದ ಪೋಷಕರು ತಮ್ಮ ಮಗನೇ ಮರಳಿ ಬಂದಿದ್ದಾನೆಂದು ಭಾವಿಸಿದರು. ಆದರೆ ಬಂದವನು ಮಗನಲ್ಲ ಎಂದು ತಿಳಿದಾಗ ರಾಜನನ್ನು ಪ್ರಶ್ನಿಸಿದರು. ಭಾರವಾದ ಹೃದಯದಿಂದ ದಶರಥನು ಸತ್ಯವನ್ನು ಒಪ್ಪಿಕೊಂಡನು. ತಮ್ಮ ಏಕೈಕ ಆಸರೆಯಾಗಿದ್ದ ಮಗನು ಕೊಲ್ಲಲ್ಪಟ್ಟಿದ್ದಾನೆ ಎಂದು ಕೇಳಿ ಆ ಅಂಧ ಪೋಷಕರು ಕುಸಿದುಹೋದರು.

ದುಃಖವನ್ನು ತಡೆಯಲಾರದೆ ಅವರು ರಾಜ ದಶರಥನಿಗೆ ಶಾಪವನ್ನಿತ್ತರು; "ನಾವು ಇಂದು ಮಗನನ್ನು ಕಳೆದುಕೊಂಡು ಹೇಗೆ ಅಸಹನೀಯ ವೇದನೆಯನ್ನು ಅನುಭವಿಸುತ್ತಿದ್ದೇವೆಯೋ, ನೀನೂ ಸಹ ಒಂದು ದಿನ ನಿನ್ನ ಪ್ರೀತಿಯ ಮಗನ ಅಗಲಿಕೆಯಿಂದ ಇದೇ ರೀತಿ ಪ್ರಾಣ ಬಿಡು"

ತನಗೆ ಸಾಮರ್ಥ್ಯವಿದೆ, ತಾನು ಏನು ಬೇಕಾದರೂ ಮಾಡಬಲ್ಲೆ ಎಂಬ ಅಹಂಕಾರದಲ್ಲಿ ಹೋದ ಜಾಗದಲ್ಲೆಲ್ಲ ಮನಬಂದಂತೆ ನಡೆದುಕೊಂಡರೆ ಯಾರಿಗೋ ತೊಂದರೆ ಆಗಬಹುದು. ಯಾರೋ ಏನೋ ಕಳೆದುಕೊಳ್ಳಬಹುದು. ಕೊನೆಗೆ ದೊಡ್ಡ ಶಾಪವನ್ನು ಪಡೆದು, ತಪ್ಪಿಗೆ ದೊಡ್ಡ ಬೆಲೆಯನ್ನು ತೆರಬೇಕಾಗಬಹುದು. ಯಾವಾಗಲೂ ಅಷ್ಟೇ, ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗುತ್ತದೆ. ನೆನಪಿರಲಿ!