Tuesday, April 21, 2026
Tuesday, April 21, 2026

ತಂಬೂರಿ ಮೀಟಿದವ ಭವಾಬ್ಧಿ ದಾಟಿದವ

ಪ್ರಪಂಚದ ಅತ್ಯುತ್ತಮ ಪ್ರವಾಸಿಗ ಹಾಗೂ ಪ್ರವಾಸದ ಕಥೆಗಳನ್ನು ಹೇಳುವವರು ಯಾರು ಎಂದರೆ ಅದಕ್ಕೆ ಉತ್ತರ ನಾರದ ಮುನಿ. ನಾರದರು ಹೋಗದ ಜಾಗವಿಲ್ಲ, ಗೊತ್ತಿಲ್ಲದ ಕಥೆಯಿಲ್ಲ! ಅವರಿಂದ ಕಲಿಯಬಹುದಾದ ವಿಷಯಗಳೇನು?

ಭಾಗವತ ಪುರಾಣ ಶುರುವಾಗುವುದೇ ನಾರದರ ಪ್ರಯಾಣದಿಂದ. ನಾರದರು ಸರ್ವೋತ್ತಮ ಲೋಕವೆಂದು ಎಣಿಸಿ ಪೃಥ್ವಿಗೆ ಬರುತ್ತಾರೆ. ಇಲ್ಲಿ ಪುಷ್ಕರ, ಪ್ರಯಾಗ, ಕಾಶೀ, ಗೋದಾವರಿ, ಕುರುಕ್ಷೇತ್ರ, ಹರಿದ್ವಾರ ಹೀಗೆ ಹಲವು ಕ್ಷೇತ್ರಗಳಿಗೆ ಮನಬಂದಂತೆ ಅಲೆಯುತ್ತಿದ್ದರೂ ಅವರಿಗೆ ಶಾಂತಿ ಸಿಗುತ್ತಿರಲಿಲ್ಲ. ಕಲಿಯುಗದ ಘೋರ ಕ್ಷಣಗಳು ಅವರಿಗೆ ಕಾಡುತ್ತಿತ್ತು. ಅಧರ್ಮ, ಸುಳ್ಳು, ಮೋಸ, ವಂಚನೆ ಎಲ್ಲವನ್ನೂ ಹೊತ್ತ ಕಲಿಯುಗದಲ್ಲಿ ದುಷ್ಟರ ಸಂಖ್ಯೆಯೇ ಹೆಚ್ಚು ಎಂಬ ವಿಷಯ ಕಾಡುತ್ತಿತ್ತು. ಎಲ್ಲ ಘೋರ ಕ್ಷಣಗಳನ್ನು ನೋಡಿ ಯಮುನಾ ತೀರಕ್ಕೆ ಹೋದ ನಾರದರಿಗೆ ಓರ್ವ ಸ್ತ್ರೀ ದುಃಖಿತಳಾಗಿ ಕುಳಿತಿದ್ದು ಕಾಣಿಸಿತು. ಆ ಯುವತಿಯೇ ಭಕ್ತಿ! ಅವಳಿಗೆ ಜ್ಞಾನ ಮತ್ತು ವೈರಾಗ್ಯ ಎಂಬ ಇಬ್ಬರು ಮಕ್ಕಳು. ದ್ರವಿಡ ದೇಶದಲ್ಲಿ ಹುಟ್ಟಿ ಕರ್ನಾಟಕದಲ್ಲಿ ಬೆಳೆದು ಮಹಾರಾಷ್ಟ್ರದಲ್ಲಿ ಸಮ್ಮಿತಳಾದ ಯುವತಿಗೆ ಗುಜರಾತದಲ್ಲಿ ವೃದ್ಧಾಪ್ಯ ಆವರಿಸಿತು. ಬಳಿಕ ವೃಂದಾವನಕ್ಕೆ ಹೋದಾಗ ತಾರುಣ್ಯ ಮರಳಿತು. ಆದರೆ, ಮಕ್ಕಳಿಗೆ ಮಾತ್ರ ವೃದ್ಧಾಪ್ಯವಿತ್ತು. ಚಿಂತೆಯಲ್ಲಿದ್ದ ಭಕ್ತಿಗೆ ನಾರದರು ಕೃಷ್ಣನ ಲೀಲೆಯ ಬಗ್ಗೆ ಉಪದೇಶ ಮಾಡಿ, ಮೂರು ಯುಗಗಳಲ್ಲೂ ಜ್ಞಾನ ಮತ್ತು ವೈರಾಗ್ಯ ಮುಕ್ತಿಯ ಸಾಧನೆಗಳಾಗಿದ್ದವು ಆದರೆ ಕಲಿಯುಗದಲ್ಲಿ ಭಕ್ತಿಯೇ ಮೋಕ್ಷದ ದಾರಿ ಎಂದರು.

ಇದನ್ನೂ ಓದಿ: ಸಹ್ಯಾದ್ರಿಯ ಕಾನನದಲ್ಲಿ ಅರಳಿದ 'ತತ್ತ್ವಮಸಿ'ಯ ಮಹಾದರ್ಶನ

ನಾರದರ ಮಾತುಗಳನ್ನು ಕೇಳಿದ ಭಕ್ತಿಗೆ ಸಮಾಧಾನ ಸಿಕ್ಕಂತಾಯಿತು.

ನಾರದರು ಅಲ್ಲಿಂದ ಹೊರಟರು. ಹಲವಾರು ಪುಣ್ಯ ಕ್ಷೇತ್ರಗಳಲ್ಲಿ ಯಾವ ಸತ್ಕರ್ಮವನ್ನು ಮಾಡಿದರೆ ಭಕ್ತಿಯ ಪ್ರಸಾರವಾದೀತು ಎಂದು ಹುಡುಕಲು ಶುರು ಮಾಡಿದರು. ಆಗ ಸಿಕ್ಕ ಸನಕಾದಿ ಮುನಿಗಳು ಹೇಳಿದಂತೆ ಶ್ರೀಮದ್ಭಾಗವತವನ್ನು ಕಥೆಯ ಮೂಲಕ ಜ್ಞಾನ ಯಜ್ಞವನ್ನು ಮಾಡಲು ತಿಳಿಸಿದರು.

ಪಾಠ 1: ಎಲ್ಲೇ ಹೋದರೂ ಅಲ್ಲೊಂದು ಕಥೆಯಿರುತ್ತದೆ. ಅದಕ್ಕೆ ಕಿವಿಯಾಗಬೇಕು. ಮನಸ್ಸಿನಲ್ಲಿ ಅಶಾಂತಿಯಿದ್ದರೂ ಇನ್ನೊಬ್ಬರ ನೋವು, ದುಃಖವನ್ನು ಕೇಳಿ ಸ್ಪಂದಿಸಿದಾಗ ನಮಗೂ ಹೊಸ ಉತ್ತರ ಸಿಗಬಹುದು. ನೆಮ್ಮದಿ ಸಿಗಬಹುದು.

ಕನ್ನಡದ ಸುಪ್ರಸಿದ್ಧ ದಾಸರ ಪದವಾದ ʼತಂಬೂರಿ ಮೀಟಿದವ ಭವಾಬ್ಧಿ ದಾಟಿದವʼ ಎಂಬ ಸಾಲು ನಾರದರ ಸಂಚಾರವನ್ನು ಸುಂದರವಾಗಿ ಸೆರೆಹಿಡಿಯುತ್ತದೆ. ನಾರದರ ಪ್ರಯಾಣವು ಕೇವಲ ಭೌಗೋಳಿಕತೆಗೆ ಸೀಮಿತವಾಗಿಲ್ಲ. ಅವರು ಭೂಮಿ, ಸ್ವರ್ಗ ಮತ್ತು ಅದಕ್ಕೂ ಮೀರಿದ ಲೋಕಗಳಲ್ಲಿ ಸಲೀಸಾಗಿ ಸಂಚರಿಸುತ್ತಾರೆ. ಎಲ್ಲಿ ಬದಲಾವಣೆಯ ಅಗತ್ಯವಿದೆಯೋ ಅಲ್ಲಿ ಪ್ರತ್ಯಕ್ಷವಾಗುತ್ತಾರೆ. ವಿಶೇಷ ಎಂದರೆ ನಾರದರು ಯಾವುದೇ ಲಗೇಜ್‌ ಅನ್ನು ಹೊರುವುದಿಲ್ಲ, ಅಥವಾ ಯಾವುದೇ ನಿರ್ದಿಷ್ಟ ಯೋಜನೆ ರೂಪಿಸಿಕೊಂಡು ಹೋಗುವುದಿಲ್ಲ. ಅವರ ಏಕೈಕ ಸಂಗಾತಿಗಳೆಂದರೆ ಅವರ ತಂಬೂರಿ ಮತ್ತು ನಿರಂತರವಾದ ʼನಾರಾಯಣʼ ನಾಮಸ್ಮರಣೆ. ಅವರ ಪ್ರಯಾಣವು ಎಲ್ಲೋ ಒಂದು ಕಡೆ ತಲುಪುವುದಷ್ಟೇ ಅಲ್ಲ, ಅಲ್ಲಿನ ಸಮಸ್ಯೆಯನ್ನು ಕೇಳಿಸಿಕೊಳ್ಳುವುದು ಮತ್ತು ಅದಕ್ಕೊಂದು ಪರಿಹಾರ ಸೂಚಿಸುವುದು. ಆ ಜಾಗದಲ್ಲಿ ಬೆರೆತಾಗ ಮಾತ್ರವೇ ಪ್ರಯಾಣಕ್ಕೊಂದು ಅರ್ಥ ಬರುತ್ತದೆ.

ಒಮ್ಮೆ ನಾರದರು ಕಾಡಿನಲ್ಲಿ ಹೋಗುವಾಗ ರತ್ನಾಕರ ಎಂಬ ಬೇಟೆಗಾರ ಬೇಟೆಯಾಡುವುದನ್ನು ಕಂಡು ಅವನ ಜತೆ ಮಾತಿಗಿಳಿದರು. ʼನೀನು ಮಾಡಿದ ತಪ್ಪಿಗೆ ನಿನ್ನ ಕುಟುಂಬದವರು ಶಿಕ್ಷೆ ಹಂಚಿಕೊಳ್ಳುತ್ತಾರಾ?ʼ ಎಂಬ ಪ್ರಶ್ನೆ ಮುಂದಿಟ್ಟಾಗ ಅವನಿಗೆ ಬಳಿಕ ತಾನು ಮಾಡಿದ ತಪ್ಪುಗಳ ಅರಿವಾಗುತ್ತದೆ. ಅದೇ ರತ್ನಾಕರ ಮುಂದೆ ವಾಲ್ಮೀಕಿಯಾಗಿ ರಾಮಾಯಣ ಬರೆಯುತ್ತಾರೆ.

ಪಾಠ ೨: ಪ್ರವಾಸಕ್ಕೆ ಹೋದಾಗ ಸಾವಿರಾರು ಜನ ಏನೋ ತಪ್ಪು ಮಾಡುವುದನ್ನು ನೋಡಬಹುದು. ಒಂದು ಕ್ಷಣ ಅದು ತಪ್ಪು ಎಂದು ಹೇಳಿದರೆ ಆ ಜಾಗಕ್ಕೂ ಬದಲಾವಣೆ ಆಗಬಹುದು. ಆ ವ್ಯಕ್ತಿಗೂ ಆಗಬಹುದು. ಏನಿಲ್ಲ ಎಂದರೂ ನಮ್ಮೊಳಗೆಯೇ ಬದಲಾವಣೆ ಆಗಬಹುದು. ನಾರದರು ಹೋಗುವಾಗ ಹೇಗೆ ತಂಬೂರಿ ಮತ್ತು ಹರಿನಾಮ ಎರಡನ್ನೇ ತೆಗೆದುಕೊಂಡು ಹೋಗುತ್ತಿದ್ದರೋ ಹಾಗೆಯೇ ಕಡಿಮೆ ಲಗೇಜ್‌ ಹೊತ್ತುಕೊಂಡು ಹೋಗುವುದು ಉತ್ತಮ. ಇದೇ ಮಿನಿಮಲಿಸಂ. ಲೆಸ್‌ ಇಸ್‌ ಮೋರ್‌!

Untitled design - 2026-04-21T164822.779

ನಾರದರ ಸಂಚಾರದ ಮತ್ತೊಂದು ಗಾಢವಾದ ಅಂಶವೆಂದರೆ ಪ್ರತಿ ಸ್ಥಳವನ್ನೂ ಕಲಿಕೆಯ ಮೂಲವಾಗಿ ಪರಿಗಣಿಸುವ ಅವರ ಸಾಮರ್ಥ್ಯ. ಅವರು ರಾಜನ ಅರಮನೆಯಲ್ಲಿರಲಿ, ಋಷಿಯ ಆಶ್ರಮದಲ್ಲಿರಲಿ ಅಥವಾ ಸಾಮಾನ್ಯ ಜನರ ನಡುವೆಯೇ ಇರಲಿ, ಅವರು ಎಲ್ಲವನ್ನೂ ಗಮನಿಸುತ್ತಾರೆ, ತೊಡಗಿಸಿಕೊಳ್ಳುತ್ತಾರೆ ಮತ್ತು ಅದರಿಂದ ಅರ್ಥವನ್ನು ಹೊರತೆಗೆಯುತ್ತಾರೆ. ಅವರು ಸ್ಥಳಗಳನ್ನು ಪ್ರಮುಖ ಅಥವಾ ಕ್ಷುಲ್ಲಕ ಎಂದು ವಿಂಗಡಿಸುವುದಿಲ್ಲ. ಪ್ರತಿಯೊಂದು ಪರಿಸರವೂ ಅವರಿಗೆ ಒಂದು ತರಗತಿಯಿದ್ದಂತೆ. ವಿಷ್ಣುವಿನಿಂದ ಪಾಠ ಕಲಿಯುತ್ತಿದ್ದರು, ಇನ್ನೊಬ್ಬರಿಗೆ ಬೋಧನೆ ಮಾಡುತ್ತಿದ್ದರು.

ಹಿರಣ್ಯಕಶಿಪು ಹೆಂಡತಿ ಗರ್ಭಿಣಿ ಆಗಿದ್ದಾಗ ನಾರದರ ಆಶ್ರಮದಲ್ಲಿದ್ದಳಂತೆ. ಆಗ ನಾರದರು ವಿಷ್ಣುವಿನ ಮಹಿಮೆಗಳನ್ನು ಹೇಳುತ್ತಿದ್ದರರು. ಗರ್ಭದಲ್ಲೇ ವಿಷ್ಣುವಿನ ಮೇಲೆ ಭಕ್ತಿ ಹೊಂದಿದ್ದ ಪ್ರಹ್ಲಾದ ಬಳಿಕ ವಿಷ್ಣುವಿನ ಪರಮ ಭಕ್ತನಾದ.

ಧ್ರುವ ಎಂಬ ಯುವರಾಜ ತನ್ನ ಮಲತಾಯಿಯಿಂದ ಅವಮಾನಕ್ಕೆ ಒಳಗಾಗಿದ್ದ. ತಂದೆಯಿಂದಲೂ ದೂರವಾಗಿದ್ದ. ದೇವರನ್ನು ಹುಡುಕಿಕೊಂಡು ಅವನು ಕಾಡಿಗೆ ಹೋದಾಗ ನಾರದರು ಸಿಗುತ್ತಾರೆ. ಅವನಿಗೆ ಸಮಾಧಾನ ಮಾಡಿ ಭಕ್ತಿಯ ಮಾರ್ಗವನ್ನು ತೋರಿಸುತ್ತಾರೆ. ಬಳಿಕ ಅದೇ ಧ್ರುವ ನಕ್ರತ್ರನಾಗಿ ಹೊಳೆಯುತ್ತಾನೆ.

ಪ್ರಾಚೀನಬರ್ಹಿ ಎಂಬ ರಾಜನಿದ್ದ. ತನ್ನ ಬಳಿ ಇರುವ ಸಂಪತ್ತಿನ ಗರ್ವವಿತ್ತು. ಎಲ್ಲವೂ ಬೇಕಾದ ಸುಖ ಶಾಂತಿ ನೀಡುತ್ತದೆ ಎಂಬ ಯೋಚನೆಯಿತ್ತು. ಆ ರಾಜನ ಬಳಿ ಹೋಗಿ ನಾರದರು ಪುರಾಂಜನ ಎಂಬ ರಾಜನ ಕಥೆ ಹೇಳುತ್ತಾರೆ. ಪುರಂಜನ ರಾಜ ಹೇಗೆ ಅಜ್ಞಾನದ ಬೆನ್ನತ್ತಿ ಮೃತ್ಯು ಹೊಂದುತ್ತಾನೆ ಎಂಬ ಕಥೆಯ ಮೂಲಕ ಜ್ಞಾನೋದಯ ಮಾಡಿಸುತ್ತಾರೆ.

ಪಾಠ ೩: ಯಾವುದೋ ಒಂದು ಜಾಗ ಅಥವಾ ವ್ಯಕ್ತಿ ಕಲಿಸಿದ ಪಾಠವನ್ನು ಅರ್ಥ ಮಾಡಿಕೊಂಡು ಅನಿವಾರ್ಯ ಇದ್ದವರಿಗೆ, ಅನಿವಾರ್ಯ ಇದ್ದ ಸಂದರ್ಭದಲ್ಲಿ ಹೇಳಿದರೆ ಅದು ಅವರಿಗೆ ಸಹಾಯ ಆಗಬಹುದು. ಯಾರೋ ಕಷ್ಟದಲ್ಲಿರುವುದು ಕಂಡಾಗ ಅವರಿಗೆ ಸಣ್ಣ ಸಹಾಯ ಮಾಡುವುದು ಮನುಷ್ಯನನ್ನು ಇನ್ನಷ್ಟು ವಿನಮ್ರವಾಗಿಸುತ್ತದೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ