Monday, April 20, 2026
Monday, April 20, 2026

ಸಹ್ಯಾದ್ರಿಯ ಕಾನನದಲ್ಲಿ ಅರಳಿದ 'ತತ್ತ್ವಮಸಿ'ಯ ಮಹಾದರ್ಶನ

ಶಬರಿಮಲೆಯೆಂಬುದು ಕೇವಲ ಧಾರ್ಮಿಕ ಕ್ಷೇತ್ರವಲ್ಲ, ಅದು ಭಕ್ತರ ಪಾಲಿನ ಭಾವನಾತ್ಮಕ ಬೆಸುಗೆ. ತುಳಸಿ ಮಾಲೆ ಧರಿಸಿ, ಕಠಿಣ ವ್ರತಗಳನ್ನು ಪಾಲಿಸಿ, ಹೆಗಲ ಮೇಲೆ ಇರುಮುಡಿ ಹೊತ್ತು 'ಸ್ವಾಮಿಯೇ ಶರಣಂ ಅಯ್ಯಪ್ಪ' ಎಂದು ಪಠಿಸುತ್ತಾ ಕಾಡಿನ ಹಾದಿಯಲ್ಲಿ ಸಾಗುವಾಗ ಪ್ರತಿಯೊಬ್ಬ ಭಕ್ತನೂ ತನ್ನನ್ನು ತಾನು ಮರೆತು ಭಗವಂತನಲ್ಲಿ ಲೀನವಾಗುತ್ತಾನೆ. ಆ ದಟ್ಟವಾದ ಕಾಡು, ಪಂಪಾ ನದಿಯ ಪವಿತ್ರ ಸ್ನಾನ ಮತ್ತು ಕಡಿದಾದ ನೀಲಿಮಲೆಯ ಹಾದಿ ಹತ್ತಿ ಸನ್ನಿಧಿಯ ಹದಿನೆಂಟು ಮೆಟ್ಟಿಲುಗಳ ಮುಂದೆ ನಿಂತಾಗ ಸಿಗುವ ಆನಂದಕ್ಕೆ ಬೆಲೆ ಕಟ್ಟಲಾಗದು.

  • ಮಣಿಕಂಠ ಗೊದಮನಿ, ಹಾವೇರಿ

ದಕ್ಷಿಣ ಭಾರತದ ಕೇರಳ ರಾಜ್ಯದ ಪಥನಂತಿಟ್ಟ ಜಿಲ್ಲೆಯ ಪಶ್ಚಿಮ ಘಟ್ಟಗಳ ದಟ್ಟ ಅರಣ್ಯದ ನಡುವೆ ನೆಲೆಸಿರುವ 'ಶಬರಿಮಲೆ' ಒಂದು ಪುಣ್ಯಕ್ಷೇತ್ರ ಮಾತ್ರವಲ್ಲದೇ ಕೋಟಿಗಟ್ಟಲೆ ಭಕ್ತರ ಪಾಲಿನ ಶ್ರದ್ಧಾ ಕೇಂದ್ರ. ಸಹ್ಯಾದ್ರಿಯ ಹಸಿರು ಹೊದಿಕೆಯ ಮಡಿಲಲ್ಲಿ, ಪಂಪಾ ನದಿಯ ಕವಲುಗಳ ನಡುವೆ, ಅರಿವಿನ ಶಿಖರವಾಗಿ ನಿಂತಿರುವ ಮಂದಿರವಿದು. ಶಬರಿಮಲೆಯ ಇತಿಹಾಸವು ಪುರಾಣ, ಜನಪದ ಮತ್ತು ಇತಿಹಾಸದ ಸುಂದರ ಮಿಳಿತವಾಗಿದೆ. ಅಯ್ಯಪ್ಪ ಸ್ವಾಮಿಯನ್ನು 'ಧರ್ಮಶಾಸ್ತ' ಎಂದು ಕರೆಯಲಾಗುತ್ತದೆ. ಅಯ್ಯಪ್ಪನ ಆರಾಧನೆಯಲ್ಲಿ ಬೌದ್ಧ ಧರ್ಮದ ಪ್ರಭಾವವನ್ನು ಅನೇಕ ವಿದ್ವಾಂಸರು ಗುರುತಿಸುತ್ತಾರೆ. ಬೌದ್ಧ ಧರ್ಮವು ದಕ್ಷಿಣ ಭಾರತದಲ್ಲಿ ಪ್ರಬಲವಾಗಿದ್ದ ಕಾಲದಲ್ಲಿ, ಶಬರಿಮಲೆಯು ಬೌದ್ಧ ವಿಹಾರವಾಗಿತ್ತು ಎಂಬುದು ಕೆಲವು ಇತಿಹಾಸಕಾರರ ಅಭಿಮತ. ಅಯ್ಯಪ್ಪನು ಬೋಧಿಸಿದ ಶಾಂತಿ, ಸಮಾನತೆಯ ತತ್ವಗಳು ಮತ್ತು "ಸ್ವಾಮಿಯೇ ಶರಣಂ ಅಯ್ಯಪ್ಪ" ಎಂಬ ಘೋಷಣೆಯು ಬೌದ್ಧರ "ಬುದ್ಧಂ ಶರಣಂ ಗಚ್ಛಾಮಿ" ಎಂಬ ಶರಣಾಗತಿ ಭಾವವನ್ನು ಹೋಲುತ್ತದೆ. ಮತ್ತೊಂದೆಡೆ, ಅಯ್ಯಪ್ಪನು ಪಂದಳದ ರಾಜವಂಶದ ದತ್ತುಪುತ್ರನಾಗಿ ಬೆಳೆದು, ನಾಡಿನ ರಕ್ಷಣೆಗಾಗಿ ಮಣಿಕಂಠನಾಗಿ ಅವತರಿಸಿದ ಐತಿಹಾಸಿಕ ಪುರುಷನೆಂಬ ನಂಬಿಕೆಯೂ ಇದೆ. ಹನ್ನೆರಡನೇ ಶತಮಾನದಲ್ಲಿ ಮಣಿಕಂಠನು ಇಲ್ಲಿನ ಅತಿಕ್ರಮಣಕಾರರನ್ನು ಸಂಹರಿಸಿ ಧರ್ಮವನ್ನು ಮರುಸ್ಥಾಪಿಸಿದನೆಂದು ಚರಿತ್ರೆ ಹೇಳುತ್ತದೆ. ಈ ಹಿನ್ನೆಲೆಯಲ್ಲಿ ಅಯ್ಯಪ್ಪ ಜನಸಮುದಾಯವನ್ನು ಒಗ್ಗೂಡಿಸಿದ ಕ್ರಾಂತಿಕಾರಿ ನಾಯಕನೂ ಹೌದು.

ಇದನ್ನೂ ಓದಿ: ನಿಷ್ಕಳಂಕ ಮಹಾದೇವನಿಗೆ ನಿತ್ಯವೂ ಸಮುದ್ರ ಸ್ನಾನ

ಪ್ರವಾಸಿಗರಲ್ಲ ಸ್ವಾಮಿಗಳು

ಶಬರಿಮಲೆ ಯಾತ್ರೆಯು ಇತರ ತೀರ್ಥಕ್ಷೇತ್ರಗಳಿಗಿಂತ ಭಿನ್ನವಾದುದು. ಇಲ್ಲಿಗೆ ಬರುವ ಭಕ್ತರು ಕೇವಲ ಪ್ರವಾಸಿಗರಲ್ಲ, ಅವರು 41 ದಿನಗಳ ಕಾಲ ಕಠಿಣವಾದ 'ಮಂಡಲ ವೃತ'ವನ್ನು ಆಚರಿಸುವ 'ಸ್ವಾಮಿಗಳು'. ಈ ವೃತವು ಮನುಷ್ಯನನ್ನು ತಿದ್ದಿ ತೀಡುವ ಒಂದು ಸುದೀರ್ಘ ಸಂಸ್ಕಾರ ಪ್ರಕ್ರಿಯೆ. ಕಪ್ಪು ಅಥವಾ ನೀಲಿ ವಸ್ತ್ರ ಧರಿಸುವುದು ಲೌಕಿಕ ವ್ಯಾಮೋಹದ ತ್ಯಾಗವನ್ನು ಸಂಕೇತಿಸಿದರೆ, ಪಾದರಕ್ಷೆ ತ್ಯಜಿಸುವುದು ಭೂಮಿಯೊಂದಿಗಿನ ನೇರ ಸಂಪರ್ಕವನ್ನು ಸಾಬೀತುಪಡಿಸುತ್ತದೆ. ಬ್ರಹ್ಮಚರ್ಯ ಪಾಲನೆ ಮತ್ತು ಸಾತ್ವಿಕ ಆಹಾರ ಸೇವನೆ ಮನಸ್ಸನ್ನು ಹತೋಟಿಗೆ ತರುವ ಮಾರ್ಗಗಳು. ಕೆಲವರು ತಮ್ಮ ಅನುಕೂಲಕ್ಕೆ ತಕ್ಕಂತೆ ಕೆಲವು ದಿನಗಳವರೆಗೆ ಮಾತ್ರ ಮಾಲೆ ಧರಿಸಿ ಸ್ವಾಮಿಯ ದರ್ಶನ ಮಾಡುವುದೂ ಉಂಟು. ಪ್ರತಿಯೊಬ್ಬ ಭಕ್ತನೂ 'ಸ್ವಾಮಿ'ಯಾಗಿಯೇ ಗುರುತಿಸಿಕೊಳ್ಳುತ್ತಾನೆ. ಈ 'ಸ್ವಾಮಿ' ಎಂಬ ಸಂಬೋಧನೆಯಲ್ಲಿ ವ್ಯಕ್ತಿಗತ ಅಸ್ಮಿತೆಗಳು ಕರಗಿ 'ಸಮಷ್ಟಿ'ಯ ಪ್ರಜ್ಞೆ ಜಾಗೃತವಾಗುತ್ತದೆ. ಇದು ಸಾಮಾಜಿಕ ಸಮಾನತೆಯ ಅತ್ಯುನ್ನತ ರೂಪವಾಗಿ ನಿಲ್ಲುತ್ತದೆ.

Untitled design - 2026-04-18T164121.963

ಬದುಕಿನ ಎರಡು ಮುಖಗಳು:

ಮಾಲಾಧಾರಿ ಹೊರುವ 'ಇರುಮುಡಿ' (ಎರಡು ಚೀಲಗಳ ಕಟ್ಟು) ಜೀವನದ ಎರಡು ಮುಖಗಳನ್ನು ಸಂಕೇತಿಸುವಂತೆ ತೋರುತ್ತದೆ. ಮುಂಭಾಗದ ಕಟ್ಟು (ಮುನ್ ಮುಡಿ) ದೇವರಿಗೆ ಅರ್ಪಿಸುವ ತುಪ್ಪದ ತೆಂಗಿನಕಾಯಿ ಮತ್ತು ಪೂಜಾ ಸಾಮಗ್ರಿಗಳನ್ನು ಒಳಗೊಂಡಿದ್ದು, ಇದು ಭಕ್ತಿಯ ಸಂಕೇತವಾಗಿದೆ. ಹಿಂಭಾಗದ ಕಟ್ಟು (ಪಿನ್ ಮುಡಿ) ವೈಯಕ್ತಿಕ ಅವಶ್ಯಕತೆಯ ವಸ್ತುಗಳು ಮತ್ತು ಕಳೆದ ಕಾಲದ ಕರ್ಮಗಳ ಹೊರೆಯನ್ನು ಸೂಚಿಸುತ್ತದೆ. ಪಂಪಾ ನದಿಯಲ್ಲಿ ಸ್ನಾನ ಮಾಡಿ ಅಹಂಕಾರದ ಕೊಳೆಯನ್ನು ತೊಳೆದು, ಇರುಮುಡಿ ಹೊತ್ತು ಮೆಟ್ಟಲೇರುವ ಭಕ್ತನಿಗೆ ಹದಿನೆಂಟು ಮೆಟ್ಟಿಲುಗಳು ಜೀವ ವಿಕಾಸದ ಹಂತಗಳಂತೆ ಭಾಸವಾಗುತ್ತವೆ.

ಅಲ್ಲಿನ ಪಾದಯಾತ್ರೆ ಮತ್ತು ಪ್ರಕೃತಿಯ ಒಡನಾಟ ಪಂಪಾ ನದಿಯಿಂದ ಸನ್ನಿಧಿವರೆಗಿನ ಕಡಿದಾದ ಹಾದಿ ಮತ್ತು 'ನೀಲಿಮಲೆ'ಯನ್ನು ಏರುವಾಗ ಭಕ್ತನ ತಾಳ್ಮೆ ಮತ್ತು ಶಾರೀರಿಕ ಕ್ಷಮತೆಯನ್ನು ಪರೀಕ್ಷಿಸುತ್ತದೆ. ದಟ್ಟ ಅರಣ್ಯದ ನಡುವೆ ಸಾಗುವಾಗ ಕೇಳಿಬರುವ ಅಯ್ಯಪ್ಪ ನಾಮಸ್ಮರಣೆ ಪ್ರಕೃತಿಯೊಂದಿಗೆ ಮನುಷ್ಯನ ಸಮಾಗಮವನ್ನು ಸಾರುತ್ತದೆ. ಇಲ್ಲಿನ ಪ್ರತಿಯೊಂದು ಗಿಡ, ಮರ ಮತ್ತು ಕಲ್ಲುಗಳಲ್ಲಿ ದೈವತ್ವವನ್ನು ಕಾಣುವ ಸಂಪ್ರದಾಯವು ಪರಿಸರ ಪ್ರೇಮದ ಸಂಕೇತವಾಗಿದೆ.

ಸೌಹಾರ್ದತೆಯ ಸಂಕೇತ:

ಶಬರಿಮಲೆಯ ವೈಶಿಷ್ಟ್ಯವೆಂದರೆ ಅಲ್ಲಿನ ಕೋಮು ಸೌಹಾರ್ದತೆ. ವಾವರ್ ಸ್ವಾಮಿಯ ದರ್ಶನವು ಕೋಮು ಸೌಹಾರ್ದದ ಅನನ್ಯ ಸಾಕ್ಷಿಯಾಗಿ ನಿಲ್ಲುತ್ತದೆ. ಅಯ್ಯಪ್ಪನ ಪರಮ ಭಕ್ತ ಮತ್ತು ಮಿತ್ರನಾಗಿದ್ದ ಮುಸ್ಲಿಂ ಯೋಧ 'ವಾವರ್'ನ ಮಸೀದಿಗೆ ಭೇಟಿ ನೀಡದೆ ಶಬರಿಮಲೆ ಯಾತ್ರೆ ಪೂರ್ಣಗೊಳ್ಳುವುದಿಲ್ಲ ಎಂಬ ನಂಬಿಕೆಯಿದೆ. ಇದು ಭಾರತೀಯ ಸಂಸ್ಕೃತಿಯಲ್ಲಿನ ಸಾಮರಸ್ಯಕ್ಕೆ ಒಂದು ಅದ್ಭುತ ಉದಾಹರಣೆ. ಒಬ್ಬ ಹಿಂದೂ ಭಕ್ತ ಮುಸ್ಲಿಂ ಸಂತನ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವುದು ಜಗತ್ತಿನ ಬೇರೆಲ್ಲೂ ಕಾಣಸಿಗದ ದೃಶ್ಯ. ಭಕ್ತಿ ಎಂಬುದು ಧರ್ಮಗಳ ಚೌಕಟ್ಟನ್ನು ಮೀರಿದ ಶಕ್ತಿ ಎಂಬುದಕ್ಕೆ ಇದು ಸಾಕ್ಷಿ.

Untitled design - 2026-04-18T164136.707

ಆಧ್ಯಾತ್ಮಿಕ ವಿಕಾಸದ ಮೆಟ್ಟಿಲುಗಳು

ದೇವಾಲಯದ 18 ಪವಿತ್ರ ಮೆಟ್ಟಿಲುಗಳನ್ನು ಪದಿನೆಟ್ಟಾಂ ಪಡಿ ಎಂದು ಕರೆಯಲಾಗುತ್ತದೆ. ಇವು ಮನುಷ್ಯನು ದಾಟಬೇಕಾದ 18 ಹಂತಗಳನ್ನು ಪ್ರತಿನಿಧಿಸುತ್ತವೆ. ಇದರಲ್ಲಿ ಐದು ಇಂದ್ರಿಯಗಳು, ಅರಿಷಡ್ವರ್ಗಗಳು, ಮೂರು ಗುಣಗಳು ಮತ್ತು ವಿದ್ಯೆ-ಅವಿದ್ಯೆಗಳು ಸೇರಿವೆ. ಈ ಎಲ್ಲ ಅಡೆತಡೆಗಳನ್ನು ದಾಟಿದವನು ಮಾತ್ರ ಅಯ್ಯಪ್ಪನ ದರ್ಶನಕ್ಕೆ ಅರ್ಹನಾಗುತ್ತಾನೆ ಎಂಬುದು ಇದರ ಸಾಂಕೇತಿಕ ಅರ್ಥ.

ಸನ್ನಿಧಿಯ ಹದಿನೆಂಟು ಮೆಟ್ಟಿಲುಗಳನ್ನು ದಾಟಿ ಹೋದ ಭಕ್ತರಿಗೆ ದೇವಸ್ಥಾನದ ಮುಂಭಾಗದಲ್ಲಿ ಕೆತ್ತಲಾಗಿರುವ "ತತ್ತ್ವಮಸಿ" ಎಂಬ ವಾಕ್ಯವು ಕಾಣುತ್ತದೆ. 'ಅದು ನೀನೇ ಆಗಿರುವೆ' ಎಂಬುದು ಇದರರ್ಥ. ಅಂದರೆ, ನೀನು ಹುಡುಕುತ್ತಿರುವ ದೇವರು ನಿನ್ನ ಹೊರಗಿಲ್ಲ, ನಿನ್ನ ಒಳಗೇ ಇದ್ದಾನೆ ಎಂದು. "ಹರಿವರಾಸನಂ" ಹಾಡು ಕೇಳುವಾಗ ಭಕ್ತನ ಮನಸ್ಸಿನಲ್ಲಿ ಶಾಂತಿ ಭಾವ ನಮಗೇ ಅರಿವಿಲ್ಲದಂತೆ ಸೃಷ್ಟಿಯಾಗುತ್ತದೆ.

Untitled design - 2026-04-18T164153.973

ಮಕರಜ್ಯೋತಿ:

ಮಕರ ಸಂಕ್ರಾಂತಿಯಂದು ಪೊನ್ನಂಬಲಮೇಡಿನಲ್ಲಿ ಕಾಣಿಸಿಕೊಳ್ಳುವ ಮಕರಜ್ಯೋತಿಯು ಲಕ್ಷಾಂತರ ಭಕ್ತರ ಶ್ರದ್ಧೆಯ ಪರಾಕಾಷ್ಠೆ. ಆಧುನಿಕ ಸಂಶೋಧನೆಗಳ ಪ್ರಕಾರ ಇದು ಮನುಷ್ಯ ನಿರ್ಮಿತ ಆಚರಣೆಯಾದರೂ, ಅದರ ಹಿಂದೆ ಇರುವ ಭಕ್ತಿ ಮತ್ತು ಜನಸಮೂಹದ ನಂಬಿಕೆ ಅಗಾಧವಾದುದು. ಅಸಂಖ್ಯಾತ ಜನರು ಒಂದೇ ಸಮಯದಲ್ಲಿ ಶಾಂತಿಯುತವಾಗಿ ಪ್ರಾರ್ಥಿಸುವುದು ಮಾನವೀಯ ಸಂಬಂಧಗಳ ಬಲವರ್ಧನೆಗೆ ಸಹಕಾರಿ.

ಶಬರಿಮಲೆ ಎಂಬುದು ಮನುಷ್ಯನಿಗೆ ತನನ್ನು ತಾನು ರೂಪಿಸಿಕೊಳ್ಳಲು ಸಹಕರಿಸುವ ಸಂಸ್ಕಾರ ಕೇಂದ್ರ. ಅಲ್ಲಿನ ಕಠಿಣ ಹಾದಿ, ಪವಿತ್ರ ಪಂಪಾ ನದಿ ಮತ್ತು ದೈವಿಕ ದರ್ಶನ ಭಕ್ತನಿಗೆ ಹೊಸ ಜನ್ಮದ ಅನುಭೂತಿ ನೀಡಬಲ್ಲದು. ಪ್ರೀತಿ, ಸಮಾನತೆ ಮತ್ತು ಭಕ್ತಿಯ ಈ ತ್ರಿವೇಣಿ ಸಂಗಮವು ಭಾರತದ ಸನಾತನ ಸಂಸ್ಕೃತಿಯ ಹೆಮ್ಮೆಯ ಸಂಕೇತವಾಗಿ ಅಜರಾಮರವಾಗಿದೆ. ಇದು ಮನುಕುಲಕ್ಕೆ ಸರಳತೆ ಮತ್ತು ಸಮರಸದ ಪಾಠವನ್ನು ಬೋಧಿಸುವ ಆಧ್ಯಾತ್ಮಿಕ ವಿಶ್ವವಿದ್ಯಾಲಯ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ