‘ಓಣಂ ಟೂರಿಸಂ ವೀಕ್ ಸೆಲೆಬ್ರೇಷನ್’: ಆಗಸ್ಟ್ 24ರಿಂದ 30ರವರೆಗೆ
ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಪಿ.ಸಿ. ವಿಷ್ಣುನಾದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉತ್ಸವದ ಸಿದ್ಧತೆಗಳನ್ನು ಪರಿಶೀಲಿಸಲಾಯಿತು. ಈ ಬಾರಿಯ ಓಣಂ ಆಚರಣೆಯನ್ನು ‘Onam Tourism Week Celebrations’ ಎಂಬ ವಿಶೇಷ ಬ್ರ್ಯಾಂಡ್‌ನಡಿ ನಡೆಸಲಾಗುತ್ತಿದ್ದು, ಹಿಂದಿನ ವರ್ಷಗಳಿಗಿಂತ ಹೆಚ್ಚಿನ ಕಾರ್ಯಕ್ರಮಗಳು ಹಾಗೂ ಹೆಚ್ಚಿನ ವೇದಿಕೆಗಳನ್ನು ಒಳಗೊಂಡಿರಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಕೇರಳ ಸರಕಾರದ ಪ್ರವಾಸೋದ್ಯಮ ಇಲಾಖೆ ಈ ವರ್ಷದ ‘ಓಣಂ ಟೂರಿಸಂ ವೀಕ್ ಸೆಲೆಬ್ರೇಷನ್ಸ್’ ಅನ್ನು ಆಗಸ್ಟ್ 24ರಿಂದ 30ರವರೆಗೆ ಭವ್ಯವಾಗಿ ಆಯೋಜಿಸಲು ಸಿದ್ಧತೆ ಪ್ರಾರಂಭಿಸಿದೆ. ತಿರುವನಂತಪುರಂನಲ್ಲಿ ರಾಜ್ಯಮಟ್ಟದ ಉದ್ಘಾಟನೆಯೊಂದಿಗೆ ಉತ್ಸವ ಆರಂಭವಾಗಲಿದ್ದು, ವಾರಪೂರ್ತಿ ಕೇರಳದ ಸಾಂಪ್ರದಾಯಿಕ ಕಲೆ, ಸಂಸ್ಕೃತಿ ಹಾಗೂ ಜನಪದ ಪರಂಪರೆಯನ್ನು ದೇಶ-ವಿದೇಶದ ಪ್ರವಾಸಿಗರಿಗೆ ಪರಿಚಯಿಸಲಾಗುತ್ತದೆ.
ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಪಿ.ಸಿ. ವಿಷ್ಣುನಾದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉತ್ಸವದ ಸಿದ್ಧತೆಗಳನ್ನು ಪರಿಶೀಲಿಸಲಾಯಿತು. ಈ ಬಾರಿಯ ಓಣಂ ಆಚರಣೆಯನ್ನು ‘Onam Tourism Week Celebrations’ ಎಂಬ ವಿಶೇಷ ಬ್ರ್ಯಾಂಡ್‌ನಡಿ ನಡೆಸಲಾಗುತ್ತಿದ್ದು, ಹಿಂದಿನ ವರ್ಷಗಳಿಗಿಂತ ಹೆಚ್ಚಿನ ಕಾರ್ಯಕ್ರಮಗಳು ಹಾಗೂ ಹೆಚ್ಚಿನ ವೇದಿಕೆಗಳನ್ನು ಒಳಗೊಂಡಿರಲಿದೆ ಎಂದು ಸಚಿವರು ತಿಳಿಸಿದ್ದಾರೆ.

ತಿರುವನಂತಪುರದ ವಿವಿಧ ಸ್ಥಳಗಳಲ್ಲಿ ಶಾಸ್ತ್ರೀಯ, ಜನಪದ, ಬುಡಕಟ್ಟು ಹಾಗೂ ಸಮಕಾಲೀನ ಕಲಾ ಪ್ರದರ್ಶನಗಳು, ಸಂಗೀತ, ನೃತ್ಯ, ಪುಷ್ಪಾಲಂಕಾರ (ಪೂಕಳಂ), ಸಾಂಪ್ರದಾಯಿಕ ಆಹಾರ ಪ್ರದರ್ಶನ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ದೇಶೀಯ ಮತ್ತು ವಿದೇಶಿ ಪ್ರವಾಸಿಗರಿಗೆ ಕೇರಳದ ಓಣಂ ಸಂಸ್ಕೃತಿಯನ್ನು ಸಮೀಪದಿಂದ ಅನುಭವಿಸುವ ಅವಕಾಶ ಕಲ್ಪಿಸುವುದು ಉತ್ಸವದ ಪ್ರಮುಖ ಉದ್ದೇಶವಾಗಿದೆ.
ವಿದೇಶಿ ಪ್ರವಾಸಿಗರು ಕೇರಳದ ಓಣಂ ಸಂಪ್ರದಾಯ, ಕಲಾ ರೂಪಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ಆಸಕ್ತಿ ತೋರುತ್ತಿರುವ ಹಿನ್ನೆಲೆಯಲ್ಲಿ, ಈ ಬಾರಿಯ ಉತ್ಸವವನ್ನು ಇನ್ನಷ್ಟು ಆಕರ್ಷಕವಾಗಿ ರೂಪಿಸಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ. ಕಾರ್ಯಕ್ರಮಗಳಿಗೆ ಅಗತ್ಯವಿದ್ದರೆ ಹೆಚ್ಚುವರಿ ವೇದಿಕೆಗಳನ್ನೂ ಸೇರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಓಣಂ ಟೂರಿಸಂ ವೀಕ್‌ನಲ್ಲಿ ಭಾಗವಹಿಸಲು ಶಾಸ್ತ್ರೀಯ, ಜನಪದ, ಬುಡಕಟ್ಟು ಹಾಗೂ ಸಮಕಾಲೀನ ಕಲಾವಿದರು ಮತ್ತು ಸಾಂಸ್ಕೃತಿಕ ಸಂಘಟನೆಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಕಲಾವಿದರಿಗೆ ರಾಜ್ಯದ ಪ್ರಮುಖ ವೇದಿಕೆಗಳಲ್ಲಿ ಪ್ರದರ್ಶನ ನೀಡುವ ಅವಕಾಶ ದೊರೆಯಲಿದೆ.

ಆಗಸ್ಟ್ 30ರಂದು ಭವ್ಯ ಸಾಂಸ್ಕೃತಿಕ ಮೆರವಣಿಗೆಯೊಂದಿಗೆ ಓಣಂ ಟೂರಿಸಂ ವೀಕ್ ಸಮಾರೋಪಗೊಳ್ಳಲಿದ್ದು, ಕೇರಳದ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡುವಲ್ಲಿ ಪ್ರಮುಖ ಉತ್ಸವವಾಗಿ ರೂಪುಗೊಳ್ಳಲಿದೆ.