ನಾನು ಲಂಡನ್‌ಗೆ ಹೋದಾಗಲೆಲ್ಲ ಆಕ್ಸ್‌ಫರ್ಡ್‌ಗೆ ಹೋಗದೇ ಬರುವುದಿಲ್ಲ. ಆಕ್ಸ್‌ಫರ್ಡ್ ಅಂದರೆ ಜಗತ್ತಿನ ಮೇಧಾವಿಗಳನ್ನೆಲ್ಲ ತಯಾರು ಮಾಡುವ ಕಾರ್ಖಾನೆ ಎಂಬ ಭಾವನೆಯಿದೆ. ಆಕ್ಸ್‌ಫರ್ಡಡ್ನಲ್ಲಿ ಏನೇ ಕಲಿಯಲಿ, ಅಲ್ಲಿ ಕಲಿತವರ ಖದರೇ ಬೇರೆ. ಅವರು ಸರ್ವತ್ರ ಪೂಜ್ಯರು. ಅವರನ್ನು ದೇವಲೋಕದಿಂದ ಇಳಿದು ಬಂದವರಂತೆ ಗೌರವಿಸುತ್ತಾರೆ. ಆಕ್ಸ್‌ಫರ್ಡ್‌ಗೆ ಹೋಗುವುದು ಎಂದರೆ ಒಂದು ರೀತಿಯಲ್ಲಿ 'ವಿನಯ' ಎನ್ನುವ ಪದವನ್ನು ಡಿಕ್ಷನರಿಯಿಂದ ಕಿತ್ತು ಹಾಕಿದಂತೆ. ಯಾಕೆಂದರೆ ಅಲ್ಲಿನ ಗಾಳಿಯೇ 'ನನಗಿಂತ ಬುದ್ಧಿವಂತ ಬೇರೊಬ್ಬನಿಲ್ಲ' ಎಂದು ಹೇಳಿಕೊಡುತ್ತದೆ. ಆಕ್ಸ್‌ಫರ್ಡ್ ನಗರವನ್ನು ‘ಕನಸು ಕಾಣುವ ಗೋಪುರಗಳ ನಗರ’ ಎನ್ನುತ್ತಾರೆ. ಯಾಕೆಂದರೆ ಅಲ್ಲಿನ ಜನರಿಗೆ ಜಗತ್ತಿನಲ್ಲಿ ನಾವೇ ಅತ್ಯುತ್ತಮ ಎಂಬ ಕನಸು ಬಿಟ್ಟರೆ ಬೇರೇನೂ ಬೀಳುವುದಿಲ್ಲ.

ಇದನ್ನೂ ಓದಿ: ಹೋಗದ ಊರಿನ ಸುದೀರ್ಘ ಹೆಸರು: ಅಕ್ಷರಗಳ ನಡುವೆ ಭಾವಗಳ ಉಸಿರು

‘ವಿದ್ಯಾಕಾಶಿ’ ಎಂದು ಕರೆಯಿಸಿಕೊಂಡಿರುವ ಆಕ್ಸ್‌ಫರ್ಡ್ ನಗರದಲ್ಲಿ ಪ್ರಮುಖವಾಗಿ ಎರಡು ವಿಶ್ವವಿದ್ಯಾಲಯಗಳಿವೆ. ಮೊದಲನೆಯದು, ಯುನಿವರ್ಸಿಟಿ ಆಫ್ ಆಕ್ಸ್‌ಫರ್ಡ್ ಮತ್ತು ಎರಡನೆಯದು, ಆಕ್ಸ್‌ಫರ್ಡ್ ಬ್ರೂಕ್ಸ್ ಯುನಿವರ್ಸಿಟಿ. ಯುನಿವರ್ಸಿಟಿ ಆಫ್ ಆಕ್ಸ್‌ಫರ್ಡ್ ಜಗತ್ತಿನ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದು. ಇದು ‘ಫೆಡರಲ್’ ಮಾದರಿಯನ್ನು ಹೊಂದಿದ್ದು, ಒಟ್ಟು 39 ಸ್ವಾಯತ್ತ ಕಾಲೇಜುಗಳಿವೆ. ಇವುಗಳು ಆಡಳಿತಾತ್ಮಕವಾಗಿ ಸ್ವತಂತ್ರವಾಗಿದ್ದರೂ ವಿಶ್ವವಿದ್ಯಾಲಯದ ಭಾಗವೇ. ಜತೆಗೆ ಆರು ಖಾಸಗಿ ಹಾಲ್‌ಗಳಿವೆ. ಇವುಗಳನ್ನು ಸಾಮಾನ್ಯವಾಗಿ ವಿವಿಧ ಕ್ರೈಸ್ತ ಪಂಗಡಗಳು ಸ್ಥಾಪಿಸಿವೆ. ಒಟ್ಟಾರೆಯಾಗಿ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಅಡಿಯಲ್ಲಿ 45 ಶೈಕ್ಷಣಿಕ ಸಂಸ್ಥೆಗಳಿವೆ. ಆಕ್ಸ್‌ಫರ್ಡ್ ಬ್ರೂಕ್ಸ್ ಯುನಿವರ್ಸಿಟಿ ನಗರದ ಎರಡನೇ ಪ್ರಮುಖ ವಿಶ್ವವಿದ್ಯಾಲಯ. ಇದು ಸಾಂಪ್ರದಾಯಿಕ ಕಾಲೇಜು ವ್ಯವಸ್ಥೆಯನ್ನು ಹೊಂದಿಲ್ಲದಿದ್ದರೂ, ತನ್ನ ಶೈಕ್ಷಣಿಕ ಕಾರ್ಯಕಲಾಪಗಳನ್ನು 4 ಪ್ರಮುಖ ಫ್ಯಾಕಲ್ಟಿಗಳು ಮತ್ತು ಅವುಗಳ ಅಡಿಯಲ್ಲಿ ಬರುವ ಹಲವು ಸ್ಕೂಲ್‌ಗಳ ಮೂಲಕ ನಡೆಸುತ್ತದೆ. ಇದಲ್ಲದೇ, ನಗರದಲ್ಲಿ ಹಲವು ಸ್ವತಂತ್ರ ಸಂಶೋಧನಾ ಸಂಸ್ಥೆಗಳು ಮತ್ತು ಸಣ್ಣ ಖಾಸಗಿ ಶೈಕ್ಷಣಿಕ ಕಾಲೇಜುಗಳು ಸಹ ಕಾರ್ಯನಿರ್ವಹಿಸುತ್ತಿವೆ.

Untitled design - 2026-04-28T153405.165

ಆಕ್ಸ್‌ಫರ್ಡ್‌ನ ಆ ಹಳೆಯ ಗಲ್ಲಿಗಳಲ್ಲಿ ನಡೆಯುವುದೆಂದರೆ, ಬರಿ ಕಾಲದ ಜತೆ ಹೆಜ್ಜೆ ಹಾಕುವುದಲ್ಲ, ಬದಲಿಗೆ ಶತಮಾನಗಳ ಅಹಂಕಾರದ ಮೇಲೆ ಸವಾರಿ ಮಾಡಿದಂತೆ. ಲಂಡನ್‌ನಿಂದ ಈ ನಗರಕ್ಕೆ ಕಾಲಿಟ್ಟಾಗಲೆಲ್ಲ, ಅಲ್ಲಿನ ಗಾಳಿಯಲ್ಲಿ ಯಾವುದೋ ವಿಚಿತ್ರವಾದ ಬಣ್ಣ ಹರಡಿದಂತಿರುತ್ತದೆ. ಅದು ಬರಿ ವಿದ್ವತ್ತಿನ ಬಣ್ಣವಲ್ಲ, ‘ನಾನು ಅಸಾಮಾನ್ಯ’ ಎನ್ನುವ ಅತಿಶಯೋಕ್ತಿಯ ಘಮವದು. ಇಲ್ಲಿನ ಪ್ರತಿ ಗೋಡೆಯೂ ತಲೆಮಾರುಗಳ ಮೇಧಾವಿಗಳನ್ನು ಸೃಷ್ಟಿಸಿದ ಗರ್ವದಲ್ಲಿ ಸೆಟೆದು ನಿಂತಿದೆ. ನೀವು ಎಷ್ಟೇ ಸಾಮಾನ್ಯರಾಗಿ ಇಲ್ಲಿಗೆ ಬಂದರೂ, ಇಲ್ಲಿನ ವಾತಾವರಣ ನಿಮ್ಮ ಬೆನ್ನುಮೂಳೆಯಲ್ಲಿ ಒಂದು ಭ್ರಾಮಕ ಗತ್ತನ್ನು ಸೇರಿಸಿಬಿಡುತ್ತದೆ.

ಆಕ್ಸ್‌ಫರ್ಡ್ ಎನ್ನುವುದು ಬರಿ ವಿಶ್ವವಿದ್ಯಾಲಯವಲ್ಲ, ಅದೊಂದು ಬುದ್ಧಿವಂತಿಕೆಯನ್ನು ಅಚ್ಚು ಹಾಕುವ ಬೃಹತ್ ವರ್ಕ್ ಶಾಪ್. ಅಲ್ಲಿಂದ ಪದವಿ ಪಡೆದು ಹೊರಬರುವವರ ನಡಿಗೆಯಲ್ಲೇ ಒಂದು ರೀತಿಯ ಧಿಮಾಕು. ಅವರು ದೇವಲೋಕದಿಂದ ಪಾರ್ಸೆಲ್ ಆಗಿ ಬಂದವರಂತೆ ಭೂಮಿಯ ಮೇಲೆ ಅಡಿಯಿಡುತ್ತಾರೆ. ಅವರ ಕಣ್ಣುಗಳಲ್ಲಿ ‘ನಮಗೆ ಗೊತ್ತಿರುವುದು ನಿಮಗೆ ತಿಳಿಯದು’ ಎನ್ನುವ ಒಂದು ನಿಗೂಢ ಜಂಭ! ಆಕ್ಸ್‌ಫರ್ಡ್‌ನ ಲೈಬ್ರರಿಯಲ್ಲಿ ಅದೆಷ್ಟು ಪುಸ್ತಕಗಳಿವೆ ಎಂದರೆ, ಅಲ್ಲಿಗೆ ಹೋದ ವಿದ್ಯಾರ್ಥಿ ಪುಸ್ತಕ ಓದುವುದಕ್ಕಿಂತ ಹೆಚ್ಚಾಗಿ, ಸರಿಯಾದ ಪುಸ್ತಕ ಹುಡುಕುತ್ತಲೇ ಮುದುಕನಾಗುತ್ತಾನೆ ಎಂಬ ಮಾತಿದೆ. At Oxford, you either become brilliant… or very good at pretending to be ಎಂದು ಹೇಳುವುದನ್ನು ಕೇಳಿರಬಹುದು. ಆಕ್ಸ್‌ಫರ್ಡ್ ಅನ್ನು ಜನರು ‘ಜ್ಞಾನಕ್ಕೆ ಪ್ರತೀಕ’ ಎಂದು ನೋಡುತ್ತಾರೆ.

ಆಕ್ಸ್‌ಫರ್ಡ್ ನಗರವು ಕೇವಲ ವಿದ್ಯಾಭ್ಯಾಸಕ್ಕೆ ಮಾತ್ರವಲ್ಲ, ಅಲ್ಲಿನ ರೋಚಕ ‘ಪಬ್ ಸಂಸ್ಕೃತಿ’ಗೂ (Pub Culture) ಅಷ್ಟೇ ಪ್ರಸಿದ್ಧವಾಗಿದೆ. ಆಕ್ಸ್‌ಫರ್ಡ್‌ ನಗರದಲ್ಲಿ ಸುಮಾರು 115ಕ್ಕೂ ಹೆಚ್ಚು ಪ್ರಸಿದ್ಧ ಪಬ್‌ಗಳಿವೆ ಅಂದ್ರೆ ಆಶ್ಚರ್ಯವಾಗಬಹುದು. ಅಂದರೆ ‘ವಿಶ್ವವಿದ್ಯಾಲಯಕ್ಕೆ ಮಾತ್ರವಲ್ಲ, ಮದ್ಯಾಲಯ’ಕ್ಕೂ ಇದು ಹೆಸರುವಾಸಿ. ಆ ನಗರದ ಜನಸಂಖ್ಯೆ ಸುಮಾರು ಒಂದೂವರೆ ಲಕ್ಷ. ಈ ಗಾತ್ರಕ್ಕೆ ಹೋಲಿಸಿದರೆ ‘ಗಡಂಗು’ಗಳ ಸಂಖ್ಯೆಯೇ ಹೆಚ್ಚು. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿರುವ ಪ್ರತಿ ಕಾಲೇಜೂ ತನ್ನದೇ ಆದ ಪ್ರತ್ಯೇಕ ‘ಬಾರ್’ ಹೊಂದಿದೆ ಎಂದರೆ ಅಚ್ಚರಿಯಾಗಬಹುದು. ಸುಮಾರು ನಲವತ್ತಕ್ಕೂ ಹೆಚ್ಚು ಕಾಲೇಜು ಬಾರ್‌ಗಳನ್ನು ಸೇರಿಸಿದರೆ, ಮದ್ಯಪಾನ ಮಾಡುವ ತಾಣಗಳ ಸಂಖ್ಯೆ ಇನ್ನೂ ಹೆಚ್ಚು. ಬಹುತೇಕ ಎಲ್ಲ ಕಾಲೇಜುಗಳಿಗೆ ತಾಕಿಕೊಂಡೇ ಬಾರ್ ಮತ್ತು ಪಬ್‌ಗಳಿವೆ. ಇದಕ್ಕಾಗಿ ಆಕ್ಸ್‌ಫರ್ಡ್ ಬಗ್ಗೆ ಒಂದು ಮಾತಿದೆ - ‘ಆಕ್ಸ್‌ಫರ್ಡ್ ಎಂದರೆ ಜ್ಞಾನದ ಸಮುದ್ರ. ಆದರೆ ಆ ಸಮುದ್ರದ ನೀರು ಪಬ್‌ಗಳಲ್ಲಿ ಬಿಯರ್ ರೂಪದಲ್ಲಿ ಸಿಗುತ್ತದೆ ಅಷ್ಟೇ!’

ಆಕ್ಸ್‌ಫರ್ಡ್ ಬಗ್ಗೆ ಇರುವ ಇನ್ನೊಂದು ‘ವಕ್ರತುಂಡೋಕ್ತಿ’ ಅಂದ್ರೆ ‘ಆಕ್ಸ್‌ಫರ್ಡ್‌ನ ಪಬ್‌ಗಳಲ್ಲಿ ಅದೆಷ್ಟು ಜ್ಞಾನ ಹರಿಯುತ್ತದೆ ಎಂದರೆ, ಅಲ್ಲಿನ ಬಿಯರ್ ಗ್ಲಾಸ್‌ಗಳಿಗೂ ಯಾವುದಾದರೂ ವಿಷಯದಲ್ಲಿ ‘ಆನರ್ಸ್ ಡಿಗ್ರಿ’ ನೀಡಬಹುದು. ಈ ವಿದ್ಯಾನಗರಿ ಅದ್ಯಾವ ಪ್ರಮಾಣದಲ್ಲಿ ಮದ್ಯನಗರಿಯಾಗಿಯೂ ಪ್ರಸಿದ್ಧವಾಗಿದೆಯೆಂದರೆ, ‘ಆಕ್ಸ್‌ಫರ್ಡ್‌ನಲ್ಲಿ ಯಾವುದಾದರೂ ಕಠಿಣ ಪ್ರಶ್ನೆಗೆ ಲೈಬ್ರರಿಯಲ್ಲಿ ಉತ್ತರ ಸಿಗದಿದ್ದರೆ ಬೇಸರ ಮಾಡಿಕೊಳ್ಳಬೇಡಿ. ಸೀದಾ ಪಬ್‌ಗೆ ಹೋಗಿ, ಅಲ್ಲಿ ಮೂರನೇ ಪೆಗ್ ಹಾಕಿದ ಮೇಲೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಐನ್‌ಸ್ಟೈನ್‌ನಂತೆ ಮಾತನಾಡಲು ಶುರುಮಾಡುತ್ತಾನೆ’ ಎಂದು ತಮಾಷೆ ಮಾಡುವ ತನಕ. ಆಕ್ಸ್‌ಫರ್ಡ್ ಪಬ್‌ನಲ್ಲಿ ಒಂದು ಹಳೆಯ ಆಕ್ಸ್‌ಫರ್ಡ್ ಡಿಕ್ಷನರಿಗಿಂತ ಚೀಪ್ ಆಗಿರುವುದು ಯಾವುದೆಂದರೆ ಒಂದು ಗ್ಲಾಸ್ ಬಿಯರ್. ಅಲ್ಲಿನ ಪಬ್‌ಗಳಲ್ಲಿ ಕುಡಿದು ಗಲಾಟೆ ಮಾಡುವಂತಿಲ್ಲ. ಹಾಗೇನಾದರೂ ಜೋರಾಗಿ ಕಿರುಚಿದರೆ, ಪಕ್ಕದ ಟೇಬಲ್‌ನಲ್ಲಿರುವ ಪ್ರೊಫೆಸರ್ ಎದ್ದು ಬಂದು ನಿಮ್ಮ ‘ವ್ಯಾಕರಣ’ ಸರಿಪಡಿಸಲು ಶುರುಮಾಡುತ್ತಾನೆ ಎಂಬ ಮಾತೂ ಜನಜನಿತ. ಹಾಗೆಯೇ, ‘ಲಂಡನ್‌ನಲ್ಲಿ ಜನರು ಕುಡಿದು ಕುಣಿಯುತ್ತಾರೆ, ಆದರೆ ಆಕ್ಸ್‌ಫರ್ಡ್ ಪಬ್‌ನಲ್ಲಿ ಜನರು ಕುಡಿದು ‘ಕ್ವಾಂಟಮ್ ಫಿಸಿಕ್ಸ್’ ಬಗ್ಗೆ ಪ್ರಬಂಧ ಮಂಡಿಸುತ್ತಾರೆ. ಇಲ್ಲಿ ಕಿಕ್ಕೇರುವುದು ಮದ್ಯದಿಂದಲ್ಲ, ಪಾಂಡಿತ್ಯದಿಂದ ಎಂಬ ಮಾತೂ ಇದೆ.

ಆಕ್ಸ್‌ಫರ್ಡ್‌ನ ಪಬ್‌ಗಳಿಗೆ ಶತಮಾನಗಳ ಇತಿಹಾಸವಿದೆ. ಅದಕ್ಕಾಗಿಯೇ, ‘ಇಲ್ಲಿ ಐನೂರು ವರ್ಷ ಹಳೆಯ ಕುರ್ಚಿಗಳಿವೆ. ನೀವು ಇಲ್ಲಿ ಕುಳಿತುಕೊಳ್ಳುವ ಮುನ್ನ ಯೋಚಿಸಿ—ಯಾಕೆಂದರೆ ಆ ಕುರ್ಚಿಯ ಮೇಲಿರುವ ಧೂಳಿಗೂ ನಿಮ್ಮ ಡಿಗ್ರಿಗಿಂತ ಹೆಚ್ಚಿನ ಬೆಲೆ ಇರಬಹುದು’ ಎಂದು ಹಾಸ್ಯ ಮಾಡುವುದುಂಟು. ಇತರ ನಗರಗಳ ಪಬ್‌ಗಳಲ್ಲಿ ಜನರು ‘ಯಾರು ಶಕ್ತಿವಂತ?’ ಎಂದು ಜನ ಜಗಳವಾಡುತ್ತಾರೆ. ಆದರೆ ಆಕ್ಸ್‌ಫರ್ಡ್‌ನಲ್ಲಿ ‘ಯಾವ ಸಾಹಿತ್ಯ ಶ್ರೇಷ್ಠ?’ ಎಂದು ಜಗಳವಾಡಿ ಗ್ಲಾಸ್ ಒಡೆಯುತ್ತಾರೆ. ಆಕ್ಸ್‌ಫರ್ಡ್ ಪಬ್‌ನ ವೇಟರ್‌ಗಳು ಕೂಡ ಎಷ್ಟು ಬುದ್ಧಿವಂತರೆಂದರೆ, ನೀವು ಆರ್ಡರ್ ಮಾಡಿದ ಬಿಯರ್ ಸ್ಪೆಲ್ಲಿಂಗ್ ಮಿಸ್ಟೇಕ್ ಮಾಡಿದರೆ ಅವರು ನಿಮಗೆ ಅದನ್ನು ಸರ್ವ್ ಮಾಡದಿರಬಹುದು. ಆಕ್ಸ್‌ಫರ್ಡ್ ಪಬ್‌ಗಳಲ್ಲಿ ‘ಹ್ಯಾಪಿ ಅವರ್’ ಎನ್ನುವುದೇ ಇಲ್ಲ. ಯಾಕೆಂದರೆ ಅಲ್ಲಿನ ಜನರಿಗೆ ತಾವು ಯಾವಾಗಲೂ ಸದಾ ಜ್ಞಾನದ ಅಮಲಿನಲ್ಲಿ ‘ಹ್ಯಾಪಿ’ ಆಗಿಯೇ ಇದ್ದೇವೆ ಎಂಬ ನಂಬಿಕೆ! ಆಕ್ಸ್‌ಫರ್ಡ್ ಎಂದರೆ ಜ್ಞಾನ ಮಂದಿರ ಹೌದು. ಆದರೆ ಆ ಮಂದಿರದ ಪ್ರವೇಶ ದ್ವಾರ, ಪಕ್ಕದ ಪಬ್‌ನ ಗಲ್ಲಿಯಲ್ಲೇ ಅಡಗಿದೆ ಎನ್ನುವುದು ಅಲ್ಲಿನ ವಿದ್ಯಾರ್ಥಿಗಳಿಗೆ ಗೊತ್ತಿರುವ ಗುಟ್ಟು.

Untitled design - 2026-04-28T153353.674

ಆಕ್ಸ್‌ಫರ್ಡ್‌ನ ಗ್ರಂಥಾಲಯಗಳಲ್ಲಿ ಸಂಗ್ರಹವಾದ ಜ್ಞಾನಗಂಗೆ, ಹರಿದು ಬರುವುದು ಅಲ್ಲಿನ ಹಳೆಯ ಪಬ್‌ಗಳ ಮೂಲಕ. ಆಕ್ಸ್‌ಫರ್ಡ್‌ನ ಹಳೆಯ ನಿಯಮವೊಂದರ ಪ್ರಕಾರ, ವಿದ್ಯಾರ್ಥಿಗಳು ಪಬ್‌ಗೆ ಹೋಗುವಾಗ ಕೂಡ ತಮ್ಮ ಶೈಕ್ಷಣಿಕ ‘ಗೌನ್’ ಧರಿಸಬೇಕಿತ್ತು. ಅಂದರೆ, ಕುಡಿದು ಚರಂಡಿಯಲ್ಲಿ ಬಿದ್ದಿದ್ದರೂ ನೀವು ಒಬ್ಬ ‘ವಿದ್ವಾಂಸ’ನಂತೆ ಕಾಣಬೇಕು ಎಂಬುದು ಅದರ ತಾತ್ಪರ್ಯ. ಆಕ್ಸ್‌ಫರ್ಡ್‌ನ ಪಬ್‌ಗಳಲ್ಲಿ ಬಿಯರ್ ಗ್ಲಾಸ್ ಖಾಲಿಯಾಗುತ್ತಿದ್ದಂತೆ ಜನರ ಬುದ್ಧಿವಂತಿಕೆ ಹೆಚ್ಚಾಗುತ್ತದೆ. ಮೊದಲ ಪೆಗ್‌ಗೆ ಸಾಮಾನ್ಯ ಮನುಷ್ಯ, ಎರಡನೇ ಪೆಗ್‌ಗೆ ಪ್ರೊಫೆಸರ್, ಮೂರನೇ ಪೆಗ್‌ಗೆ ಇಡೀ ವಿಶ್ವವಿದ್ಯಾಲಯದ ವೈಸ್ ಚಾನ್ಸಲರ್ ತಾನೇ ಎಂದುಕೊಳ್ಳುತ್ತಾನೆ ಎಂದು ತಮಾಷೆ ಮಾಡುವುದುಂಟು. ಆಕ್ಸ್‌ಫರ್ಡ್ ಪಬ್ ಎಂದರೆ ಅದು ‘ಲೈಬ್ರರಿ ವಿತ್ ಲಿಕ್ಕರ್’. ಅಲ್ಲಿ ಪುಸ್ತಕಗಳ ಬದಲು ಬಾಟಲಿಗಳನ್ನು ಓದಲಾಗುತ್ತದೆ!

ಆಕ್ಸ್‌ಫರ್ಡ್‌ನಲ್ಲಿ ಚರ್ಚ್‌ಗಳಿಗಿಂತ ಪಬ್‌ಗಳೇ ಹೆಚ್ಚು ಪವಿತ್ರ ಎನ್ನಲಾಗುತ್ತದೆ. ಯಾಕೆಂದರೆ ಚರ್ಚ್‌ನಲ್ಲಿ ದೇವರಿಗೆ ಹತ್ತಿರವಾಗುತ್ತೀರೋ ಇಲ್ಲವೋ ಗೊತ್ತಿಲ್ಲ, ಆದರೆ ಪಬ್‌ನಲ್ಲಿ ಎರಡು ಪೆಗ್ ನಂತರ ನೀವೇ ದೇವರು ಎಂಬ ಅನುಭವವಾಗುತ್ತದೆ. ಆಕ್ಸ್‌ಫರ್ಡ್ ಪಬ್‌ನ ಬಿಯರ್ ರುಚಿ ಹೇಗಿರುತ್ತದೆ ಎಂದರೆ, ಅದನ್ನು ಕುಡಿದ ತಕ್ಷಣ ನಿಮ್ಮ ಡಿಕ್ಷನರಿಯಲ್ಲಿ ಇಲ್ಲದ ಪದಗಳೂ ಕೂಡ ಇಂಗ್ಲಿಷ್‌ನಲ್ಲಿ ಹೊರಬರಲು ಶುರುಮಾಡುತ್ತವೆ. ಅಲ್ಲಿನ ಪಬ್‌ಗಳಲ್ಲಿ ಕುಳಿತು ನೀವು ಇಂಗ್ಲಿಷ್ ಮಾತನಾಡದಿದ್ದರೆ, ಅಲ್ಲಿನ ಗೋಡೆ ಮೇಲಿರುವ ಹಳೆಯ ಫೊಟೋಗಳೂ ನಿಮ್ಮನ್ನು ಹೀಯಾಳಿಸುತ್ತವೆ. ಅಲ್ಲಿನ ಗಾಳಿಯಲ್ಲಿ ಅದೆಷ್ಟು ಇಂಗ್ಲಿಷ್ ವ್ಯಾಕರಣ ಇದೆ ಎಂದರೆ, ಕುಡಿದು ವಾಂತಿ ಮಾಡಿದರೂ ಅದರಲ್ಲಿ ‘ಸ್ಪೆಲ್ಲಿಂಗ್ ಮಿಸ್ಟೇಕ್’ ಇರುವುದಿಲ್ಲ! ಆಕ್ಸ್‌ಫರ್ಡ್ ಪಬ್‌ನಿಂದ ರಾತ್ರಿ ಹೊರಬರುವಾಗ ದಾರಿ ತಪ್ಪಿದರೆ ಗಾಬರಿಯಾಗಬಾರದಂತೆ. ಅಲ್ಲಿನ ದಾರಿಗಳಿಗೂ ಗೊತ್ತು, ಒಬ್ಬ ಆಕ್ಸ್‌ಫರ್ಡ್ ಪದವೀಧರ ಯಾವತ್ತೂ ಮನೆಗೆ ಹೋಗುವ ಬದಲು ಇನ್ನೊಂದು ಪಬ್‌ಗೇ ಹೋಗುತ್ತಾನೆಂದು.

ಹನ್ನೊಂದನೆಯ ಶತಮಾನದಿಂದಲೂ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಬೆಳವಣಿಗೆಯ ಜತೆಜತೆಗೇ ಇಲ್ಲಿನ ಪಬ್‌ ಸಂಸ್ಕೃತಿಯೂ ಬೆಳೆದುಬಂದಿದೆ. ಈ ಪಬ್‌ಗಳು ಕೇವಲ ಅಮಲು ಏರಿಸುವ ತಾಣಗಳಾಗಿ ಉಳಿಯದೇ, ಚಿಂತನೆಗಳ ಕಡಲನ್ನು ಕಡೆಯುವ ಜ್ಞಾನಸಾಗರಗಳಾಗಿವೆ ಅಂದ್ರೆ ನಂಬಬೇಕು. ಮಧ್ಯಕಾಲೀನ ಯುಗದಲ್ಲಿ ಪಬ್‌ಗಳು ಇಷ್ಟು ಜನಪ್ರಿಯವಾಗಲು ಒಂದು ವಿಚಿತ್ರ ಮತ್ತು ವೈಜ್ಞಾನಿಕ ಕಾರಣವಿತ್ತು. ಆಗಿನ ಕಾಲದಲ್ಲಿ ಇಂದಿನಂತೆ ಶುದ್ಧೀಕರಿಸಿದ ಕುಡಿಯುವ ನೀರಿನ ವ್ಯವಸ್ಥೆ ಇರಲಿಲ್ಲ. ನದಿ ಅಥವಾ ಬಾವಿಯ ನೀರನ್ನು ಕುಡಿದು ಕಾಲರಾ ಅಥವಾ ಟೈಫಾಯ್ಡ್‌ನಂಥ ಕಾಯಿಲೆಗಳಿಗೆ ತುತ್ತಾಗುವ ಭಯವಿತ್ತು. ಆದರೆ ಬಿಯರ್ ತಯಾರಿಸುವಾಗ ನೀರನ್ನು ಕುದಿಸುತ್ತಿದ್ದ ಕಾರಣ, ಅದು ಕುಡಿಯಲು ನೀರಿಗಿಂತ ಹೆಚ್ಚು ಸುರಕ್ಷಿತವೆಂದು ಪರಿಗಣಿತವಾಗಿತ್ತು. ಹೀಗಾಗಿ, ಬೆಳಗಿನ ಉಪಾಹಾರದಿಂದ ಹಿಡಿದು ರಾತ್ರಿಯ ಭೋಜನದವರೆಗೆ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಬಿಯರ್ ಅನ್ನೇ ಅವಲಂಬಿಸಿದ್ದರು. ಗ್ರಂಥಾಲಯದ ಧೂಳು ಮತ್ತು ಹಸ್ತಪ್ರತಿಗಳ ನಡುವೆ ದಣಿದ ಮಿದುಳಿಗೆ ಪಬ್‌ನ ಒಂದು ಗ್ಲಾಸ್ ಬಿಯರ್ ಹೊಸ ಚೈತನ್ಯ ನೀಡುತ್ತಿತ್ತು.

ಆಕ್ಸ್‌ಫರ್ಡ್‌ನ ಪಬ್‌ಗಳನ್ನು ನಿಜಕ್ಕೂ ‘ಅನೌಪಚಾರಿಕ ಕ್ಲಾಸ್ ರೂಮುಗಳು’ ಎನ್ನಬಹುದು. ಕಾಲೇಜಿನ ಕಟ್ಟುನಿಟ್ಟಿನ ಶಿಸ್ತು, ಗಂಭೀರ ಮುಖದ ಪ್ರೊಫೆಸರ್‌ಗಳು ಮತ್ತು ಪಾಠಗಳಿಂದ ಹೊರಬಂದ ವಿದ್ಯಾರ್ಥಿಗಳಿಗೆ ಪಬ್‌ಗಳು ಮುಕ್ತ ವೇದಿಕೆಯಾಗಿದ್ದವು. ಇಲ್ಲಿ ಸಿದ್ಧಾಂತಗಳಿಗೆ ಅಡೆತಡೆಯಿರಲಿಲ್ಲ, ಪ್ರಶ್ನೆಗಳಿಗೆ ಸಂಕೋಲೆಯಿರಲಿಲ್ಲ. ಒಂದು ಕೈಯಲ್ಲಿ ಮದ್ಯದ ಗ್ಲಾಸ್ ಹಿಡಿದು, ಇನ್ನೊಂದು ಕೈಯಲ್ಲಿ ಹೊಸ ಆಲೋಚನೆಗಳಿಗೆ ಕಾವು ಕೊಡುವ ದೃಶ್ಯ ಇಲ್ಲಿ ಸಾಮಾನ್ಯ. ಅನೇಕ ವೈಜ್ಞಾನಿಕ ಆವಿಷ್ಕಾರಗಳ ಆರಂಭಿಕ ಚರ್ಚೆಗಳು ನಡೆದಿದ್ದು ಇಂಥ ಪಬ್‌ಗಳ ಮರದ ಮೇಜುಗಳ ಮೇಲೆ ಎಂಬುದು ಇತಿಹಾಸ.

ಆಕ್ಸ್‌ಫರ್ಡ್‌ನ ಬೀದಿಗಳಲ್ಲಿ ಸಾಹಿತ್ಯದ ಸುಗಂಧ ಎಲ್ಲಿದೆ ಎಂದು ಹುಡುಕುತ್ತಾ ಹೋದರೆ, ನಮ್ಮನ್ನು ಸೇಂಟ್ ಗೈಲ್ಸ್ ರಸ್ತೆಯಲ್ಲಿರುವ ‘ದಿ ಈಗಲ್ ಅಂಡ್ ಚೈಲ್ಡ್’ ಪಬ್‌ನ ಮುಂದೆ ತಂದು ನಿಲ್ಲಿಸುತ್ತವೆ. ಇದು ಕೇವಲ ಒಂದು ಮದ್ಯದಂಗಡಿಯಲ್ಲ, ಬದಲಿಗೆ ಜಗತ್ತಿನ ಶ್ರೇಷ್ಠ ಫ್ಯಾಂಟಸಿ ಸಾಹಿತ್ಯದ ಜನ್ಮಸ್ಥಳ. ಆಕ್ಸ್‌ಫರ್ಡ್‌ನ ಸಾಂಸ್ಕೃತಿಕ ಇತಿಹಾಸದಲ್ಲಿ ಈ ಪಬ್‌ಗೆ ಇರುವ ಸ್ಥಾನ ಅನ್ಯಾದೃಶವಾದುದು. ಈ ಪಬ್‌ನ ಲೋಗೋದಲ್ಲಿ ಗರುಡವೊಂದು ಮಗುವನ್ನು ಹೊತ್ತೊಯ್ಯುತ್ತಿರುವ ಚಿತ್ರವಿದೆ. ಆದರೆ, ಆಕ್ಸ್‌ಫರ್ಡ್‌ನ ಜನ ಮತ್ತು ಇಲ್ಲಿನ ವಿದ್ವಾಂಸರು ಇದನ್ನು ಪ್ರೀತಿಯಿಂದ ‘ಬರ್ಡ್ ಅಂಡ್ ಬೇಬಿ’ ಎಂದೇ ಕರೆಯುತ್ತಾರೆ. ಈ ಹೆಸರೇ ಅಲ್ಲಿನ ವಾತಾವರಣದಲ್ಲಿರುವ ಒಂದು ಬಗೆಯ ಆತ್ಮೀಯತೆ ಮತ್ತು ಆಪ್ತತೆಯನ್ನು ಸೂಚಿಸುತ್ತದೆ. 1930 ಮತ್ತು 40ರ ದಶಕದಲ್ಲಿ ಸಿ.ಎಸ್. ಲೂಯಿಸ್ ಮತ್ತು ಅವರ ಗೆಳೆಯ ಜೆ.ಆರ್.ಆರ್. ಟೋಲ್ಕಿನ್ ಇಲ್ಲಿ ಕುಳಿತು ಬರಿ ಹರಟೆ ಹೊಡೆಯುತ್ತಿರಲಿಲ್ಲ. ಬದಲಿಗೆ ತಾವು ಬರೆಯುತ್ತಿದ್ದ ಹಸ್ತಪ್ರತಿಗಳನ್ನು ಪರಸ್ಪರ ಓದಿ ಹೇಳುತ್ತಿದ್ದರು. ಟೋಲ್ಕಿನ್ ಅವರ ‘ದ ಲಾರ್ಡ್ ಆಫ್ ದ ರಿಂಗ್ಸ್’ ಮತ್ತು ಲೂಯಿಸ್ ಅವರ ‘ದ ಕ್ರಾನಿಕಲ್ಸ್ ಆಫ್ ನಾರ್ನಿಯಾ’ ಸರಣಿಯ ಅದ್ಭುತ ಪಾತ್ರಗಳು ಮೊದಲು ಜೀವ ಪಡೆದಿದ್ದೇ ಈ ಪಬ್‌ನ ಗೋಡೆಗಳ ಮಧ್ಯೆ. ಇಲ್ಲಿ ನಡೆದ ಗಂಭೀರ ವಿಮರ್ಶೆ ಮತ್ತು ಚರ್ಚೆಗಳೇ ಆ ಕೃತಿಗಳನ್ನು ವಿಶ್ವಮಾನ್ಯವನ್ನಾಗಿಸಿದವು.

ಇಂದು ನೀವು ಈ ಪಬ್‌ನೊಳಗೆ ಹೆಜ್ಜೆ ಇಟ್ಟರೆ, ಕಾಲಯಂತ್ರದಲ್ಲಿ ಕುಳಿತು ಹಿಂದೆ ಹೋದ ಅನುಭವವಾಗುತ್ತದೆ. ಆಧುನಿಕತೆಯ ಅಬ್ಬರವಿಲ್ಲದ, ಹಳೆಯ ಮರದ ಪೀಠೋಪಕರಣಗಳು ಮತ್ತು ಮಂದವಾದ ಬೆಳಕು ನಿಮ್ಮನ್ನು ಸ್ವಾಗತಿಸುತ್ತದೆ. ಪಬ್‌ನ ಅದೇ ಮೂಲೆಯಲ್ಲಿ ಇಂದಿಗೂ ಲೂಯಿಸ್ ಮತ್ತು ಟೋಲ್ಕಿನ್ ಭಾವಚಿತ್ರಗಳು, ಹಳೆಯ ಪತ್ರಗಳು ಮತ್ತು ಹಸ್ತಪ್ರತಿಗಳನ್ನು ಕಾಣಬಹುದು. ಪಬ್‌ನ ಒಂದು ಗೋಡೆಯ ಮೇಲೆ ಇವರ ಸಹಿ ಕೂಡ ಇದೆ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿದ್ವತ್ ಮತ್ತು ಪಬ್ ಸಂಸ್ಕೃತಿ ಹೇಗೆ ಒಂದಕ್ಕೊಂದು ಪೂರಕವಾಗಿವೆ ಎಂಬುದಕ್ಕೆ ‘ಈಗಲ್ ಅಂಡ್ ಚೈಲ್ಡ್’ ಅತ್ಯುತ್ತಮ ಉದಾಹರಣೆ. ಲೇಖಕರಿಗೆ, ಓದುಗರಿಗೆ ಮತ್ತು ಇತಿಹಾಸ ಪ್ರೇಮಿಗಳಿಗೆ ಇದೊಂದು ಪವಿತ್ರ ಯಾತ್ರಾಸ್ಥಳವಿದ್ದಂತೆ.

ಆಕ್ಸ್‌ಫರ್ಡ್‌ನ ಗಲ್ಲಿಗಳಲ್ಲಿ ಅಡಗಿರುವ ಅದ್ಭುತಗಳಲ್ಲಿ ‘ದಿ ಬೇರ್ ಇನ್’ (The Bear Inn) ಅತ್ಯಂತ ವಿಶಿಷ್ಟವಾದುದು. 1242ರಲ್ಲಿ ಸ್ಥಾಪನೆಯಾದ ಈ ಪಬ್, ನಗರದ ಅತ್ಯಂತ ಹಳೆಯ ಪಬ್‌ಗಳಲ್ಲಿ ಒಂದು ಮಾತ್ರವಲ್ಲ, ಇಡೀ ಇಂಗ್ಲೆಂಡ್‌ನಲ್ಲೇ ಅತ್ಯಂತ ಪುರಾತನ ಇತಿಹಾಸವನ್ನು ಹೊಂದಿದೆ. ಎಂಟು ಶತಮಾನಗಳಿಗೂ ಹೆಚ್ಚು ಕಾಲದಿಂದ ಇದು ಪ್ರವಾಸಿಗರಿಗೆ ಮತ್ತು ಆಕ್ಸ್‌ಫರ್ಡ್‌ನ ವಿದ್ವಾಂಸರಿಗೆ ಆತಿಥ್ಯ ನೀಡುತ್ತಾ ಬಂದಿದೆ. ಈ ಪಬ್‌ನ ಮೊದಲ ಆಕರ್ಷಣೆಯೇ ಅದರ ಗಾತ್ರ. ಇದು ಎಷ್ಟು ಚಿಕ್ಕದಾಗಿದೆಯೆಂದರೆ, ಹೊರಗಿನಿಂದ ನೋಡಿದರೆ ಒಂದು ಪುಟಾಣಿ ಮನೆಯಂತೆ ಕಾಣುತ್ತದೆ. ಎತ್ತರದ ವ್ಯಕ್ತಿಗಳು ಒಳಗೆ ಪ್ರವೇಶಿಸುವಾಗ ತಲೆ ತಗ್ಗಿಸಿಯೇ ಹೋಗಬೇಕು. ಈ ಇಕ್ಕಟ್ಟಾದ ಜಾಗವೇ ಅಲ್ಲಿಗೆ ಒಂದು ರೀತಿಯ ಆಪ್ತತೆಯನ್ನು ಮತ್ತು ಮಧ್ಯಕಾಲೀನ ಯುಗದ ಕಳೆ ನೀಡಿದೆ. ಆದರೆ ‘ದಿ ಬೇರ್ ಇನ್’ ಜಗತ್ಪ್ರಸಿದ್ಧವಾಗಿರುವುದು ಅಲ್ಲಿನ ವಿಲಕ್ಷಣವಾದ ‘ಟೈ ಸಂಗ್ರಹ’ದಿಂದಾಗಿ. ನೀವು ಪಬ್‌ನೊಳಗೆ ಕಾಲಿಟ್ಟ ಕೂಡಲೇ ಗೋಡೆಗಳು ಮತ್ತು ಚಾವಣಿಯ ಮೇಲೆ ಗಾಜಿನ ಚೌಕಟ್ಟುಗಳಲ್ಲಿ ಸಾವಿರಾರು ಕತ್ತರಿಸಿದ ಟೈಗಳನ್ನು ನೋಡಿ ದಂಗಾಗುತ್ತೀರಿ. ಇದರ ಹಿಂದೆ ಒಂದು ಸ್ವಾರಸ್ಯಕರ ಕಥೆಯಿದೆ. 1950ರ ದಶಕದಲ್ಲಿ ಇಲ್ಲಿನ ಮಾಲೀಕರು ಒಂದು ವಿಚಿತ್ರ ಆಫರ್ ನೀಡುತ್ತಿದ್ದರು: ನಿಮ್ಮ ಕುತ್ತಿಗೆಯಲ್ಲಿದ್ದ ಟೈ ಅನ್ನು ಅವರಿಗೆ ಕತ್ತರಿಸಿಕೊಟ್ಟರೆ, ಅದಕ್ಕೆ ಪ್ರತಿಯಾಗಿ ಅವರು ನಿಮಗೆ ಅರ್ಧ ಪಿಂಟ್ ಬಿಯರ್ ಅನ್ನು ಉಚಿತವಾಗಿ ನೀಡುತ್ತಿದ್ದರು!

ಆಕ್ಸ್‌ಫರ್ಡ್‌ನ ರಹಸ್ಯಗಳ ಪಟ್ಟಿಯಲ್ಲಿ ‘ಟರ್ಫ್ ಟ್ಯಾವರ್ನ್’ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಇದನ್ನು ಹುಡುಕುವುದು ಪ್ರವಾಸಿಗರಿಗೆ ಒಂದು ರೋಚಕ ಸಾಹಸ. ಹದಿಮೂರನೆಯ ಶತಮಾನದ ಹಳೆಯ ನಗರದ ಗೋಡೆಗಳ ನಡುವೆ, ಅತ್ಯಂತ ಕಿರಿದಾದ ಮತ್ತು ಕತ್ತಲೆಯಾದ ಗಲ್ಲಿಯ ಕೊನೆಯಲ್ಲಿ ಅಡಗಿರುವ ಈ ಪಬ್, ಹೊರಜಗತ್ತಿನ ಕಣ್ಣಿಗೆ ಸುಲಭವಾಗಿ ಬೀಳದ ಒಂದು ‘ಹೈಡ್-ಔಟ್’ ತಾಣ. ಈ ಪಬ್‌ನ ಖ್ಯಾತಿಗೆ ಮುಖ್ಯ ಕಾರಣ ಅಲ್ಲಿಗೆ ಭೇಟಿ ನೀಡುವ ಗಣ್ಯರ ಪಟ್ಟಿ. ಇದು ಕೇವಲ ಸಾಮಾನ್ಯರ ನೆಚ್ಚಿನ ತಾಣವಲ್ಲ; ಹಾಲಿವುಡ್ ದಿಗ್ಗಜರಾದ ರಿಚರ್ಡ್ ಬರ್ಟನ್, ಎಲಿಜಬೆತ್ ಟೇಲರ್ ಮತ್ತು ವಿಶ್ವಪ್ರಸಿದ್ಧ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಇಲ್ಲಿನ ನಿಯಮಿತ ಗ್ರಾಹಕರಾಗಿದ್ದರು. ಇಂದಿಗೂ ಇಲ್ಲಿನ ಗೋಡೆಗಳು ಈ ಮಹಾನ್ ವ್ಯಕ್ತಿಗಳ ಉಪಸ್ಥಿತಿಯ ಕಥೆಗಳನ್ನು ಪಿಸುಗುಟ್ಟುತ್ತವೆ. ಆದರೆ ‘ಟರ್ಫ್ ಟ್ಯಾವರ್ನ್’ ಜಗತ್ತಿನಾದ್ಯಂತ ಸುದ್ದಿಯಾಗಿದ್ದು ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರಿಗೆ ಸಂಬಂಧಿಸಿದ ಒಂದು ವಿವಾದಾತ್ಮಕ ಘಟನೆಯಿಂದ. 1960ರ ದಶಕದಲ್ಲಿ ಕ್ಲಿಂಟನ್ ಆಕ್ಸ್‌ಫರ್ಡ್‌ನಲ್ಲಿ ರೋಡ್ಸ್ ಸ್ಕಾಲರ್ ಆಗಿ ಓದುತ್ತಿದ್ದಾಗ ಇದೇ ಪಬ್‌ಗೆ ಬರುತ್ತಿದ್ದರು. ಮುಂದೆ ಅವರು ಅಧ್ಯಕ್ಷೀಯ ಚುನಾವಣೆಯ ಸಮಯದಲ್ಲಿ, ತಾನು ಆಕ್ಸ್‌ಫರ್ಡ್‌ನಲ್ಲಿದ್ದಾಗ ಗಾಂಜಾ ಸೇದಿದ್ದೆ ಎಂದು ಒಪ್ಪಿಕೊಂಡರಾದರೂ, ತಕ್ಷಣವೇ ‘ಆದರೆ ನಾನು ಅದನ್ನು ಶ್ವಾಸಕೋಶದ ಒಳಗೆ ಎಳೆದುಕೊಳ್ಳಲಿಲ್ಲ’ ಎಂದು ನೀಡಿದ ಸಮರ್ಥನೆ ಇಂದಿಗೂ ರಾಜಕೀಯ ಇತಿಹಾಸದ ಒಂದು ಪ್ರಸಿದ್ಧ ಹಾಸ್ಯದ ಸಾಲಾಗಿ ಉಳಿದುಹೋಗಿದೆ.

ಆಕ್ಸ್‌ಫರ್ಡ್‌ನ ಬ್ರಾಡ್ ಸ್ಟ್ರೀಟ್‌ನಲ್ಲಿ ನಡೆಯುವಾಗ, ‘ದಿ ವೈಟ್ ಹಾರ್ಸ್’ ಪಬ್ ಬರಿ ಮದ್ಯದಂಗಡಿಯಲ್ಲ, ಬದಲಿಗೆ ಆಕ್ಸ್‌ಫರ್ಡ್‌ನ ಸಾಂಸ್ಕೃತಿಕ ಮತ್ತು ಕಾಲ್ಪನಿಕ ಜಗತ್ತಿನ ಒಂದು ಅವಿಭಾಜ್ಯ ಅಂಗ. ನೀವು ಬ್ರಿಟಿಷ್ ಕ್ರೈಮ್ ಮತ್ತು ಸಸ್ಪೆನ್ಸ್ ಕಾದಂಬರಿಗಳ ಅಭಿಮಾನಿಯಾಗಿದ್ದರೆ, ‘ದಿ ವೈಟ್ ಹಾರ್ಸ್’ ನಿಮಗೆ ಅತ್ಯಂತ ಪರಿಚಿತ ತಾಣ. ಬ್ರಿಟನ್‌ನ ಸಾರ್ವಕಾಲಿಕ ಶ್ರೇಷ್ಠ ಡಿಟೆಕ್ಟಿವ್ ಸರಣಿಗಳಾದ ‘ಇನ್‌ಸ್ಪೆಕ್ಟರ್‌ ಮೋರ್ಸ್’ ಅದರ ನಂತರ ಬಂದ 'ಲೂಯಿಸ್' ಮತ್ತು 'ಎಂಡೀವರ್' ಸರಣಿಗಳ ಅನೇಕ ಪ್ರಮುಖ ದೃಶ್ಯಗಳನ್ನು ಇದೇ ಪಬ್‌ನಲ್ಲಿ ಚಿತ್ರೀಕರಿಸಲಾಗಿದೆ. ಕಾದಂಬರಿಯ ನಾಯಕ ಇನ್‌ಸ್ಪೆಕ್ಟರ್‌ ಮೋರ್ಸ್, ತನ್ನ ಸಂಕೀರ್ಣ ಕ್ರೈಮ್ ಕೇಸ್‌ಗಳನ್ನು ಬಿಡಿಸುವ ನಡುವೆ ಒಂದು ಗ್ಲಾಸ್ ಬಿಯರ್ ಹಿಡಿದು ಗಂಭೀರ ಆಲೋಚನೆಯಲ್ಲಿ ಮುಳುಗಿರುತ್ತಿದ್ದ ಜಾಗವಿದು. ಈ ಕಾರಣಕ್ಕಾಗಿಯೇ ಜಗತ್ತಿನಾದ್ಯಂತ ಇರುವ ಕ್ರೈಮ್ ಕಥೆಗಳ ಪ್ರೇಮಿಗಳು ಇಲ್ಲಿಗೆ ಭೇಟಿ ನೀಡುವುದು ಒಂದು ಸಂಪ್ರದಾಯವಾಗಿ ಬೆಳೆದುಬಂದಿದೆ. ಈ ಪಬ್‌ನ ಮತ್ತೊಂದು ವಿಶೇಷವೆಂದರೆ, ಇದು ಆಕ್ಸ್‌ಫರ್ಡ್‌ನ ಜ್ಞಾನದ ದೇಗುಲದಂತಿರುವ ಬ್ಲ್ಯಾಕ್‌ವೆಲ್ಸ್ ಪುಸ್ತಕ ಮಳಿಗೆಯ ಪಕ್ಕದಲ್ಲೇ ಇರುವುದರಿಂದ, ಇಲ್ಲಿ ಯಾವಾಗಲೂ ಲೇಖಕರು, ಪ್ರಕಾಶಕರು ಮತ್ತು ವಿದ್ಯಾರ್ಥಿಗಳ ದಂಡೇ ಇರುತ್ತದೆ. ಪುಸ್ತಕಗಳ ಲೋಕದಿಂದ ಹೊರಬಂದವರು ನೇರವಾಗಿ ಇಲ್ಲಿಗೆ ಬಂದು ಸಾಹಿತ್ಯ ಮತ್ತು ಕಲೆಯ ಬಗ್ಗೆ ಚರ್ಚೆ ನಡೆಸುತ್ತಾರೆ. ಹದಿನಾರನೆಯ ಶತಮಾನದ ಈ ಪುಟ್ಟ ಪಬ್‌ನ ಒಳಾಂಗಣವು ಇಂದಿಗೂ ಆ ಹಳೆಯ ಕಾಲದ ಸೌಂದರ್ಯವನ್ನು ಉಳಿಸಿಕೊಂಡಿದೆ. ಗೋಡೆಗಳ ಮೇಲೆ ಚಿತ್ರೀಕರಣದ ನೆನಪುಗಳು ಮತ್ತು ಐತಿಹಾಸಿಕ ಭಾವಚಿತ್ರಗಳು ರಾರಾಜಿಸುತ್ತಿವೆ.

Untitled design - 2026-04-28T153344.544

ಇಲ್ಲಿನ ಪಬ್‌ಗಳು ಕೇವಲ ಕುಡಿಯುವ ತಾಣಗಳಲ್ಲ, ಅವು ಈ ನಗರದ ಸಾಮಾಜಿಕ ಜೀವನಾಡಿಗಳು. ಈ ಸಂಸ್ಕೃತಿಯಲ್ಲಿ ಅತಿ ಮುಖ್ಯವಾದುದು 'ಪಬ್ ಕ್ರಾಲ್' (Pub Crawl) ಎನ್ನುವ ಸಂಪ್ರದಾಯ. ಜನರು ಗುಂಪಾಗಿ ಸೇರಿ, ಒಂದೇ ಸಂಜೆ ಅಥವಾ ರಾತ್ರಿಯಲ್ಲಿ ಒಂದಾದ ಮೇಲೊಂದರಂತೆ ಸಾಲು ಸಾಲು ಪಬ್‌ಗಳಿಗೆ ಭೇಟಿ ನೀಡುತ್ತಾರೆ. ಇದು ಕೇವಲ ಮದ್ಯಪಾನಕ್ಕಲ್ಲ, ಬದಲಾಗಿ ಪ್ರತಿ ಪಬ್‌ನ ವಿಭಿನ್ನ ಇತಿಹಾಸ ಮತ್ತು ವಾತಾವರಣವನ್ನು ಸವಿಯಲು ಮಾಡುವ ಒಂದು ಸಾಂಸ್ಕೃತಿಕ ಯಾತ್ರೆ. ಆಕ್ಸ್‌ಫರ್ಡ್ ಪಬ್‌ಗಳ ವೈಶಿಷ್ಟ್ಯ ಅಂದ್ರೆ ಬಹುತೇಕ ಪಬ್‌ಗಳು ಶತಮಾನಗಳಷ್ಟು ಹಳೆಯವು. ಒಳಗಿನ ಮರದ ಕೆತ್ತನೆಗಳು, ಕಲ್ಲಿನ ಒರಟು ನೆಲ ಮತ್ತು ಇಕ್ಕಟ್ಟಾದ, ತಿರುವು ಮುರುವು ಮೆಟ್ಟಿಲುಗಳು ನಿಮ್ಮನ್ನು ನೇರವಾಗಿ ಮಧ್ಯಕಾಲೀನ ಇಂಗ್ಲೆಂಡ್‌ಗೆ ಕರೆದೊಯ್ಯುತ್ತವೆ. ಹಳೆಯ ಕಾಲದ ಬೆಂಕಿಯ ಗೂಡುಗಳು (Fireplaces) ಮತ್ತು ತಗ್ಗಾದ ಚಾವಣಿಗಳು ಆಧುನಿಕ ಜಗತ್ತಿನ ಗದ್ದಲವನ್ನು ಮರೆಸಿ, ಇತಿಹಾಸದ ಮಡಿಲಲ್ಲಿ ಕುಳಿತ ಅನುಭವ ನೀಡುತ್ತವೆ. ಇಲ್ಲಿನ ಪಬ್‌ಗಳಲ್ಲಿ ಯಾಂತ್ರಿಕವಾಗಿ ತಯಾರಿಸಿದ ಬಿಯರ್ ನೀಡುವುದಿಲ್ಲ. ‌ಸಾಂಪ್ರದಾಯಿಕ ಪದಾರ್ಥಗಳನ್ನು ಬಳಸಿ, ಯಾವುದೇ ಕೃತಕ ಅನಿಲವಿಲ್ಲದೆ ನೈಸರ್ಗಿಕವಾಗಿ ಫರ್ಮೆಂಟ್ ಮಾಡಿದ ಸ್ಥಳೀಯ ಬಿಯರ್. ಇಲ್ಲಿನ ಪಬ್‌ಗಳ ದೊಡ್ಡ ವಿಶೇಷವೆಂದರೆ ಅಲ್ಲಿನ ಚರ್ಚೆಗಳು. ಪಕ್ಕದ ಟೇಬಲ್‌ನಲ್ಲಿ ಕುಳಿತವರು ಅಪರಿಚಿತರಾಗಿದ್ದರೂ, ಯಾವುದೋ ಒಂದು ಪುಸ್ತಕದ ಬಗ್ಗೆಯೋ ಅಥವಾ ಜಾಗತಿಕ ರಾಜಕೀಯದ ಬಗ್ಗೆಯೋ ಮಾತು ಆರಂಭಿಸಿ ಗಂಟೆಗಟ್ಟಲೆ ಸಂವಾದ ನಡೆಸುವುದನ್ನು ಇಲ್ಲಿ ಕಾಣಬಹುದು. ಇಲ್ಲಿ ಪದವಿ ಅಥವಾ ಸ್ಥಾನಮಾನಕ್ಕಿಂತ ‘ವಿಚಾರ’ಕ್ಕೆ ಬೆಲೆ ಹೆಚ್ಚು. ಆಕ್ಸ್‌ಫರ್ಡ್ ಪಬ್‌ಗಳು ಇತಿಹಾಸ, ಸಂಪ್ರದಾಯ ಮತ್ತು ಬೌದ್ಧಿಕ ಮುಕ್ತತೆಯ ಅಪರೂಪದ ಮಿಶ್ರಣ. ಪ್ರವಾಸಿಗರಿಗೆ ಇದು ಕೇವಲ ಪ್ರೇಕ್ಷಣೀಯ ಸ್ಥಳವಲ್ಲ, ಆಕ್ಸ್‌ಫರ್ಡ್‌ನ ಜೀವಂತ ಆತ್ಮವನ್ನು ಸ್ಪರ್ಶಿಸುವ ಒಂದು ಸುಂದರ ಅವಕಾಶ.

ಆಕ್ಸ್‌ಫರ್ಡ್ ಎಂದರೆ ಬರೀ ಕಾಲೇಜಲ್ಲ,ಪದವಿಗಳಲ್ಲ. ಅದೊಂದು ಜೀವನದ ಅನುಭವ. ಅಲ್ಲಿನ ವಿಶ್ವವಿದ್ಯಾಲಯದ ಗ್ರಂಥಾಲಯಗಳು ಜ್ಞಾನವನ್ನು ನೀಡಿದರೆ, ಅಲ್ಲಿನ ಹಳೆಯ ಪಬ್‌ಗಳು ಆ ಜ್ಞಾನವನ್ನು ಹಂಚಿಕೊಳ್ಳುವ ವೇದಿಕೆಯನ್ನು ಒದಗಿಸುತ್ತವೆ. ಆಕ್ಸ್‌ಫರ್ಡ್‌ನ ಪಬ್‌ಗಳು ಐತಿಹಾಸಿಕ ನಗರದ ಜೀವಂತ ವಸ್ತುಸಂಗ್ರಹಾಲಯಗಳು. ಇತಿಹಾಸ, ಸಾಹಿತ್ಯ ಮತ್ತು ಸ್ನೇಹದ ಈ ಮಿಶ್ರಣವೇ ಆಕ್ಸ್‌ಫರ್ಡ್ ಅನ್ನು ಜಗತ್ತಿನ ವಿಶಿಷ್ಟ ನಗರವನ್ನಾಗಿಸಿದೆ.

ಕಾಲೇಜು ನಡೆಸುವ ಪಬ್ !

1566ರಲ್ಲಿ ಸ್ಥಾಪನೆಯಾದ ‘ದಿ ಲ್ಯಾಂಬ್ ಅಂಡ್ ಫ್ಲಾಗ್’ (Lamb & Flag) ಪಬ್, ಆಕ್ಸ್‌ಫರ್ಡ್‌ನ ಶೈಕ್ಷಣಿಕ ಮೌಲ್ಯಗಳು ಮತ್ತು ಸಾಮಾಜಿಕ ಜೀವನ ಹೇಗೆ ಮಿಳಿತವಾಗಿವೆ ಎಂಬುದಕ್ಕೆ ಒಂದು ಅತ್ಯುತ್ತಮ ಉದಾಹರಣೆ.

ಈ ಪಬ್‌ನ ಶ್ಲಾಘನೀಯ ವಿಷಯವೆಂದರೆ ಇದರ ಮಾಲೀಕತ್ವ. ಇದು ಸೇಂಟ್ ಜಾನ್ಸ್ ಕಾಲೇಜಿನ ಆಸ್ತಿಯಾಗಿದೆ. ಬರಿ ವ್ಯಾಪಾರ ಮಾಡುವುದು ಇದರ ಉದ್ದೇಶವಲ್ಲ. ಈ ಪಬ್‌ನಿಂದ ಬರುವ ಲಾಭದ ಹಣವನ್ನು ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ (ಸ್ಕಾಲರ್‌ಶಿಪ್) ನೀಡಲು ಬಳಸಲಾಗುತ್ತದೆ. ಅಂದರೆ, ಅಲ್ಲಿ ಕುಳಿತು ಯಾರೋ ಒಬ್ಬರು ಕುಡಿಯುವ ಒಂದು ಮಗ್ ಬಿಯರ್ ಅಥವಾ ಕಾಫಿ, ಇನ್ನೊಬ್ಬ ವಿದ್ಯಾರ್ಥಿಯ ಶಿಕ್ಷಣಕ್ಕೆ ನೆರವಾಗುತ್ತದೆ. ಶೈಕ್ಷಣಿಕ ನಗರಿಯೊಂದರಲ್ಲಿ ಮದ್ಯದಂಗಡಿಯೂ ಜ್ಞಾನದ ಹಾದಿಗೆ ಬೆಳಕಾಗುವುದು ಆಕ್ಸ್‌ಫರ್ಡ್‌ನಲ್ಲಿ ಮಾತ್ರ ಸಾಧ್ಯವೇನೋ.

ಇದನ್ನೂ ಓದಿ: ಜಾನ್ ಕ್ರಕೌರ್ ಬರೆದ ಅಪರೂಪದ ಟ್ರಾವೆಲ್ ಕೃತಿ : 'ಇನ್ ಟು ದ ವೈಲ್ಡ್'

‘ದಿ ಲ್ಯಾಂಬ್ ಅಂಡ್ ಫ್ಲಾಗ್’ ಪಬ್‌ನ ವಾತಾವರಣವು ಆಕ್ಸ್‌ಫರ್ಡ್‌ನ ಬೌದ್ಧಿಕ ಶಿಸ್ತಿಗೆ ಕನ್ನಡಿ ಹಿಡಿಯುತ್ತದೆ. ಇಲ್ಲಿನ ಆಡಳಿತ ಮಂಡಳಿ ಒಂದು ಕಟ್ಟುನಿಟ್ಟಿನ ನಿಯಮವನ್ನು ಅನುಸರಿಸಿಕೊಂಡು ಬಂದಿದೆ. ಇಲ್ಲಿ ಯಾವುದೇ ಟಿವಿ ಅಥವಾ ಅಬ್ಬರದ ಸಂಗೀತಕ್ಕೆ ಅವಕಾಶವಿಲ್ಲ. ಆಧುನಿಕ ಜಗತ್ತಿನ ಗ್ಯಾಜೆಟ್‌ಗಳ ಶಬ್ದವಿಲ್ಲದೇ, ಜನರು ಪರಸ್ಪರ ಮುಖ ನೋಡಿ ಮಾತನಾಡುವಂತಾಗಬೇಕು, ಗಂಭೀರ ಸಂವಾದಗಳಲ್ಲಿ ತೊಡಗಿಸಿಕೊಳ್ಳಬೇಕು ಎಂಬುದು ಇದರ ಹಿಂದಿನ ಆಶಯ.

ಇಲ್ಲಿನ ಮರದ ಹೊದಿಕೆಯ ಗೋಡೆಗಳು ಮತ್ತು ಬೆಚ್ಚಗಿನ ವಾತಾವರಣದಲ್ಲಿ ಕುಳಿತು ವಿದ್ವಾಂಸರು ದಶಕಗಳಿಂದ ರಾಜಕೀಯ ಚರ್ಚೆಗಳನ್ನು ನಡೆಸುತ್ತಾ ಬಂದಿದ್ದಾರೆ. ತಂತ್ರಜ್ಞಾನದ ಅಬ್ಬರವಿಲ್ಲದ ಈ ಪಬ್‌ನಲ್ಲಿ ಮೌನ ಮತ್ತು ಮಾತು ಎರಡೂ ಸಲ್ಲುತ್ತವೆ. ಹಳೆಯ ಕಾಲದ ಇಂಗ್ಲಿಷ್ ಪಬ್ ಸಂಸ್ಕೃತಿಯನ್ನು ಹಾಗೆಯೇ ಉಳಿಸಿಕೊಂಡಿರುವ ಇದು, ಬೌದ್ಧಿಕ ಚರ್ಚೆಗಳಿಗೆ ಹೇಳಿ ಮಾಡಿಸಿದ ತಾಣ. ಇಲ್ಲಿಗೆ ಭೇಟಿ ನೀಡುವವರು, ಕೇವಲ ಒಬ್ಬ ಗ್ರಾಹಕನಾಗಿರದೇ, ಆಕ್ಸ್‌ಫರ್ಡ್‌ನ ಶೈಕ್ಷಣಿಕ ಪರಂಪರೆಯ ಒಂದು ಭಾಗವಾಗಿ ಹೊರಬರುತ್ತೀರಿ.