Wednesday, April 22, 2026
Wednesday, April 22, 2026

ಜಾನ್ ಕ್ರಕೌರ್ ಬರೆದ ಅಪರೂಪದ ಟ್ರಾವೆಲ್ ಕೃತಿ : 'ಇನ್ ಟು ದ ವೈಲ್ಡ್'

ನಾನು ಕ್ರಕೌರ್ ಬರೆದ 'ಇನ್ ಟು ಥಿನ್ ಏರ್' ಕೃತಿಯನ್ನೂ ಓದಿದ್ದೆ. ಕ್ರಕೌರ್ ಬದುಕಿನ ಅತ್ಯಂತ ರೋಚಕ ಮತ್ತು ಭಯಾನಕ ಘಟನೆಯೆಂದರೆ, 1996ರ ಮೌಂಟ್ ಎವರೆಸ್ಟ್ ದುರಂತ. ಆತ ಎವರೆಸ್ಟ್ ಏರುತ್ತಿದ್ದಾಗ ಸಂಭವಿಸಿದ ಭೀಕರ ಹಿಮಪಾತದಲ್ಲಿ ಅವನ ತಂಡದ ಎಂಟು ಸದಸ್ಯರು ಸಾವನ್ನಪ್ಪಿದರು. ಕ್ರಕೌರ್ ಅದೃಷ್ಟವಶಾತ್ ಬದುಕುಳಿದ. ಈ ನೈಜ ಘಟನೆಯನ್ನು ಆಧರಿಸಿ ಆತ ಬರೆದ 'ಇನ್ ಟು ಥಿನ್ ಏರ್' ಪುಸ್ತಕವು ಜಗತ್ತಿನಾದ್ಯಂತ ಸಂಚಲನ ಮೂಡಿಸಿತು. ಪರ್ವತಾರೋಹಣದ ಗೀಳು ಮನುಷ್ಯನನ್ನು ಹೇಗೆ ಸಾವಿನ ದವಡೆಗೆ ತಳ್ಳುತ್ತದೆ ಎಂಬುದನ್ನು ಆತ ಅತ್ಯಂತ ಪ್ರಾಮಾಣಿಕವಾಗಿ, ರೋಚಕವಾಗಿ ಈ ಕೃತಿಯಲ್ಲಿ ವಿವರಿಸಿದ್ದಾನೆ.

ಅಲಾಸ್ಕಾದ ಕಾಡಿನಲ್ಲಿ ಅರಳಿದ 'ಸಂತೋಷದ ರಹಸ್ಯ'ದ ಸಾಕ್ಷಾತ್ಕಾರ

ಇತ್ತೀಚೆಗೆ ನಾನು ಜಾನ್ ಕ್ರಕೌರ್ ಬರೆದ 'ಇನ್ ಟು ದ ವೈಲ್ಡ್' (Into the Wild) ಎಂಬ ಕೃತಿಯನ್ನು ಓದಿದೆ. ಕ್ರಕೌರ್ ಸಾಹಸ, ನೈಜತೆ ಮತ್ತು ಮನುಷ್ಯನ ಅಂತರಾತ್ಮದ ಸಂಘರ್ಷಗಳನ್ನು ಅಕ್ಷರ ರೂಪಕ್ಕಿಳಿಸುವ ಒಬ್ಬ ಅಪರೂಪದ ಬರಹಗಾರ. ‘ಇನ್ ಟು ದ ವೈಲ್ಡ್’ ನಂಥ ಮೇರು ಕೃತಿಯನ್ನು ಜಗತ್ತಿಗೆ ನೀಡಿದ ಈ ಲೇಖಕ, ಸಾಹಸ ಮತ್ತು ಸತ್ಯದ ಅನ್ವೇಷಕ. ಎಂಟು ವರ್ಷದವನಿದ್ದಾಗಲೇ ತಂದೆಯೊಂದಿಗೆ ಪರ್ವತಾರೋಹಣ ಆರಂಭಿಸಿದವ. ಅವನ ಬದುಕಿನಲ್ಲಿ ಸಾಹಸ ಎನ್ನುವುದು ರಕ್ತಗತವಾಗಿ ಬಂದಿತ್ತು. ಪದವಿ ಮುಗಿಸಿದ ನಂತರ ಆತ ಬಡಗಿ ಮತ್ತು ಮೀನುಗಾರನಾಗಿ ಕೆಲಸ ಮಾಡುತ್ತಲೇ ತನ್ನ ಪರ್ವತಾರೋಹಣದ ಹವ್ಯಾಸವನ್ನು ಮುಂದುವರಿಸಿದ. ಈ ಹಂತದಲ್ಲಿ ಆತ ಕಂಡ ಪ್ರಕೃತಿಯ ಕಠಿಣ ಮುಖಗಳೇ ಮುಂದೆ ಅವನ ಬರಹಗಳಿಗೆ ವಸ್ತುವಾದವು.

ಕ್ರಕೌರ್ ಬರಹದ ಶೈಲಿ ವಿಶಿಷ್ಟವಾದುದು. ಆತ ಕೇವಲ ಕಲ್ಪನಾ ಲೋಕದಲ್ಲಿ ವಿಹರಿಸುವವನಲ್ಲ. ಒಬ್ಬ ಪರಿಣಿತ ತನಿಖಾ ಪತ್ರಕರ್ತನಂತೆ ಪ್ರತಿ ಘಟನೆಯ ಆಳಕ್ಕೆ ಇಳಿದು, ಒಂದು ಸಣ್ಣ ವಿಷಯದ ಬೆನ್ನುಹತ್ತಿ ಅದರ ಹಿಂದಿನ ಸಾಮಾಜಿಕ, ಮಾನಸಿಕ ಮತ್ತು ಭೌಗೋಳಿಕ ಕಾರಣಗಳನ್ನು ಹುಡುಕುತ್ತಾನೆ. ಅವನ ಭಾಷೆ ನೇರ, ಆದರೆ ಅದರಲ್ಲಿ ಒಂದು ತೀವ್ರವಾದ ಆರ್ದ್ರತೆಯನ್ನು ಗುರುತಿಸಬಹುದು. ಕ್ರಿಸ್ಟೋಫರ್ ಮೆಕ್-ಕ್ಯಾಂಡ್ಲೆಸ್ ಸಾವಿನ ಬಗ್ಗೆ ಮೊದಲು ಒಂದು ಲೇಖನ ಬರೆದ ಕ್ರಕೌರ್, ಆ ಯುವಕನ ಜೀವನದಿಂದ ಎಷ್ಟು ಪ್ರಭಾವಿತನಾದನೆಂದರೆ, ಮುಂದೆ ಅದನ್ನು ಪೂರ್ಣ ಪ್ರಮಾಣದ ಪುಸ್ತಕವಾಗಿ (Into the Wild) ಹೊರತಂದ. ಈ ಪುಸ್ತಕಕ್ಕಾಗಿ ಅವನು ಕ್ರಿಸ್ಟೋಫರ್ ಸಾಗಿದ ಹಾದಿಯಲ್ಲೇ ಪ್ರಯಾಣ ಮಾಡಿದ, ಅವನ ಕುಟುಂಬವನ್ನು ಭೇಟಿಯಾದ. ಈ ಪುಸ್ತಕದ ಯಶಸ್ಸಿಗೆ ಕಾರಣವೆಂದರೆ ಕ್ರಕೌರ್, ಕ್ರಿಸ್ಟೋಫರ್‌ನನ್ನು ಒಬ್ಬ ಹುಚ್ಚ ಎಂದು ನೋಡದೇ, ಅವನೊಳಗಿದ್ದ ಸತ್ಯಾನ್ವೇಷಕನನ್ನು ಜಗತ್ತಿಗೆ ಪರಿಚಯಿಸಿದ್ದು.

ಇದನ್ನೂ ಓದಿ: ಹೈಡಿ ಎಂಬ ಹೆಸರಿಲ್ಲದೆ ಜರ್ಮನಿ ಅಸ್ತಿತ್ವವೇ ಅಪೂರ್ಣ!

ನಾನು ಕ್ರಕೌರ್ ಬರೆದ 'ಇನ್ ಟು ಥಿನ್ ಏರ್' ಕೃತಿಯನ್ನೂ ಓದಿದ್ದೆ. ಕ್ರಕೌರ್ ಬದುಕಿನ ಅತ್ಯಂತ ರೋಚಕ ಮತ್ತು ಭಯಾನಕ ಘಟನೆಯೆಂದರೆ, 1996ರ ಮೌಂಟ್ ಎವರೆಸ್ಟ್ ದುರಂತ. ಆತ ಎವರೆಸ್ಟ್ ಏರುತ್ತಿದ್ದಾಗ ಸಂಭವಿಸಿದ ಭೀಕರ ಹಿಮಪಾತದಲ್ಲಿ ಅವನ ತಂಡದ ಎಂಟು ಸದಸ್ಯರು ಸಾವನ್ನಪ್ಪಿದರು. ಕ್ರಕೌರ್ ಅದೃಷ್ಟವಶಾತ್ ಬದುಕುಳಿದ. ಈ ನೈಜ ಘಟನೆಯನ್ನು ಆಧರಿಸಿ ಆತ ಬರೆದ 'ಇನ್ ಟು ಥಿನ್ ಏರ್' ಪುಸ್ತಕವು ಜಗತ್ತಿನಾದ್ಯಂತ ಸಂಚಲನ ಮೂಡಿಸಿತು. ಪರ್ವತಾರೋಹಣದ ಗೀಳು ಮನುಷ್ಯನನ್ನು ಹೇಗೆ ಸಾವಿನ ದವಡೆಗೆ ತಳ್ಳುತ್ತದೆ ಎಂಬುದನ್ನು ಆತ ಅತ್ಯಂತ ಪ್ರಾಮಾಣಿಕವಾಗಿ, ರೋಚಕವಾಗಿ ಈ ಕೃತಿಯಲ್ಲಿ ವಿವರಿಸಿದ್ದಾನೆ.

'ಹಣವಿದ್ದರೆ ಯಾರು ಬೇಕಾದರೂ ಎವರೆಸ್ಟ್ ಏರಬಹುದು ಎನ್ನುವ ಅಹಂಕಾರವೇ ಈ ಸಾವಿಗೆ ಕಾರಣ' ಎಂದು ನೇರವಾಗಿ ಬರೆದ. ಇದು ಸಾಹಸ ಪ್ರಿಯರ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿತ್ತು. ಕ್ರಕೌರ್ ಕೇವಲ ಪ್ರಕೃತಿಯ ಬಗ್ಗೆ ಮಾತ್ರ ಬರೆಯಲಿಲ್ಲ. ಅಮೆರಿಕದ ಮಿಲಿಟರಿ ವ್ಯವಸ್ಥೆ (Where Men Win Glory) ಮತ್ತು ಧಾರ್ಮಿಕ ಮೂಲಭೂತವಾದದ (Under the Banner of Heaven) ಬಗ್ಗೆಯೂ ಬರೆದಿದ್ದಾನೆ. ಪ್ರಭಾವಿ ವ್ಯಕ್ತಿಗಳ ಅಥವಾ ಸಂಸ್ಥೆಗಳ ವಿರುದ್ಧ ಬರೆಯಲು ಆತ ಎಂದೂ ಹಿಂಜರಿಯಲಿಲ್ಲ. ಸತ್ಯವನ್ನು ಹೇಳುವುದಕ್ಕಾಗಿ ಆತ ಎದುರಿಸಿದ ಟೀಕೆಗಳು ಅಷ್ಟಿಷ್ಟಲ್ಲ.

ಜಾನ್ ಕ್ರಕೌರ್ ಪುಸ್ತಕಗಳು ಇಂದು ಜಗತ್ತಿನಾದ್ಯಂತ ಲಕ್ಷಾಂತರ ಜನರಿಗೆ ಪ್ರವಾಸ ಮತ್ತು ಸಾಹಸದ ಬಗ್ಗೆ ಹೊಸ ದೃಷ್ಟಿಕೋನ ನೀಡಿವೆ. ಅವನು ಸಾಹಿತ್ಯದ ಮೂಲಕ ನಮಗೆ ಹೇಳುವುದು ಒಂದೇ - ‘ಜೀವನ ಎಂಬುದು ಕೇವಲ ಬದುಕುವುದಲ್ಲ, ಅದು ಅನುಭವಿಸುವುದು’. ಸುರಕ್ಷಿತ ವಲಯದಿಂದ ಹೊರಬಂದು ಜಗತ್ತನ್ನು ನೋಡುವ ಅವನ ಕರೆ ಅನೇಕ ಯುವಕರನ್ನು ಅಲೆಮಾರಿಗಳನ್ನಾಗಿ ಮಾಡಿದ್ದು ಸುಳ್ಳಲ್ಲ.

Untitled design - 2026-04-22T123237.671

ಮನುಷ್ಯನ ಅಸ್ತಿತ್ವದ ಹುಡುಕಾಟದ ಒಂದು ತೀವ್ರ ಪ್ರಯತ್ನದಂತೆ ಕಾಣುವ ಕ್ರಕೌರ್ ಬರೆದ 'ಇನ್ ಟು ದ ವೈಲ್ಡ್' ಆರಂಭದಲ್ಲಿಯೇ ತೀವ್ರ ಕುತೂಹಲ ಕೆರಳಿಸುತ್ತಾ, ಅಸಹಜ ಹಂಬಲದ ಹುಡುಕಾಟದ ಪ್ರಯತ್ನದಂತೆ ಸಾಗುತ್ತದೆ. ಕ್ರಿಸ್ಟೋಫರ್ ಮೆಕ್-ಕ್ಯಾಂಡ್ಲೆಸ್‌ನ ಜೀವನ ಕಥೆಯು ಕೇವಲ ಒಬ್ಬ ಯುವಕನ ಹಠದ ಕಥೆಯಲ್ಲ; ಅದು ಆಧುನಿಕ ನಾಗರೀಕತೆಯ ಸಂಕೋಲೆಗಳಿಂದ ಮುಕ್ತಿ ಹೊಂದಲು ಬಯಸಿದ ಒಬ್ಬ ಅತೃಪ್ತ ಆತ್ಮದ ತೀವ್ರ ಹೋರಾಟ. 1990ರಲ್ಲಿ ಎಮೋರಿ ವಿಶ್ವವಿದ್ಯಾಲಯದಿಂದ ಪದವಿ ಪಡೆದ ನಂತರ, ಅವನ ಮುಂದೆ ಒಂದು ಸುಖಮಯ ಮತ್ತು ಸುರಕ್ಷಿತ ಜೀವನದ ಎಲ್ಲ ಅವಕಾಶಗಳಿದ್ದವು. ಆದರೆ, ಕ್ರಿಸ್ಟೋಫರ್ ಆರಿಸಿಕೊಂಡ ಹಾದಿಯೇ ಬೇರೆಯಾಗಿತ್ತು. ಕ್ರಿಸ್ಟೋಫರ್ ಬೆಳೆದದ್ದು ಶ್ರೀಮಂತ ಕುಟುಂಬದಲ್ಲಿ. ತಂದೆ ನಾಸಾದಲ್ಲಿ ಕೆಲಸ ಮಾಡುತ್ತಿದ್ದ ಪ್ರತಿಷ್ಠಿತ ವ್ಯಕ್ತಿ. ಆದರೆ, ಕ್ರಿಸ್ಟೋಫರ್ ಸಮಾಜದ ‘ಯಶಸ್ಸಿನ ವ್ಯಾಖ್ಯಾನ’ವನ್ನು ಒಪ್ಪುತ್ತಿರಲಿಲ್ಲ. ಅವನ ದೃಷ್ಟಿಯಲ್ಲಿ ದೊಡ್ಡ ಕಾರು, ದೊಡ್ಡ ಮನೆ ಅಥವಾ ಐಷಾರಾಮಿ ಜೀವನವು ಮನುಷ್ಯನ ಅಂತರಾತ್ಮವನ್ನು ಕುಬ್ಜಗೊಳಿಸುವ ಕೃತಕ ವಸ್ತುಗಳಾಗಿದ್ದವು. ತನ್ನ ಪದವಿ ಮುಗಿದ ಕೂಡಲೇ, ತಂದೆ ಕೊಡಿಸಲು ಬಂದ ಹೊಸ ಕಾರನ್ನು ನಿರಾಕರಿಸಿದ್ದು ಅವನ ಆಂತರಿಕ ಬಂಡಾಯದ ಮೊದಲ ಸಂಕೇತವಾಗಿತ್ತು.

ಕ್ರಿಸ್ಟೋಫರ್ ಇತಿಹಾಸ ಮತ್ತು ಮಾನವಶಾಸ್ತ್ರದ ವಿದ್ಯಾರ್ಥಿಯಾಗಿದ್ದರಿಂದ, ಮಾನವ ಸಮಾಜವು ಹೇಗೆ ಕ್ರಮೇಣ ಸ್ವಾರ್ಥ ಮತ್ತು ಸುಳ್ಳಿನ ಮೇಲೆ ನಿರ್ಮಾಣವಾಗಿದೆ ಎಂಬುದನ್ನು ಆಳವಾಗಿ ಗಮನಿಸಿದ್ದ. ತನ್ನ ತಂದೆ-ತಾಯಿಯ ನಡುವಿನ ಸಂಕೀರ್ಣ ಸಂಬಂಧ ಮತ್ತು ಅವರು ಸಮಾಜದ ಮುಂದೆ ತೋರುತ್ತಿದ್ದ ‘ಪರಿಪೂರ್ಣ ಕುಟುಂಬ’ದ ಮುಖವಾಡ ಅವನಿಗೆ ಅಸಹ್ಯ ಹುಟ್ಟಿಸಿತ್ತು. ಸಮಾಜವು ಹೇರುವ ನಿರೀಕ್ಷೆಗಳು ಮನುಷ್ಯನ ನೈಜ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತವೆ ಎಂಬುದು ಅವನ ಬಲವಾದ ನಂಬಿಕೆಯಾಗಿತ್ತು.

ಲಿಯೋ ಟಾಲ್‌ಸ್ಟಾಯ್ ಮತ್ತು ಹೆನ್ರಿ ಡೇವಿಡ್ ಥೋರೋ ಬರಹಗಳಿಂದ ಪ್ರಭಾವಿತನಾಗಿದ್ದ ಕ್ರಿಸ್ಟೋಫರ್, ‘ಸತ್ಯ’ವನ್ನು ಹುಡುಕಲು ನಿರ್ಧರಿಸಿದ. ತನ್ನ ಪರಿಚಯ ಪತ್ರಗಳನ್ನು ಹರಿದುಹಾಕಿ, ಕ್ರಿಸ್ಟೋಫರ್ ಮೆಕ್-ಕ್ಯಾಂಡ್ಲೆಸ್ ಎಂಬ ಹೆಸರನ್ನು ಬದಿಗಿಟ್ಟು, ‘ಅಲೆಕ್ಸಾಂಡರ್ ಸೂಪರ್-ಟ್ರ್ಯಾಂಪ್’ ಎಂಬ ಹೊಸ ಹೆಸರನ್ನು ತನಗೇ ಇಟ್ಟುಕೊಂಡ. ಇದು ಕೇವಲ ಹೆಸರಿನ ಬದಲಾವಣೆಯಾಗಿರಲಿಲ್ಲ; ಅದು ಅವನ ಹಳೆಯ ಜೀವನದ ಅಂತ್ಯ ಮತ್ತು ಹೊಸ ಅಲೆಮಾರಿ ಬದುಕಿನ ಆರಂಭವಾಗಿತ್ತು. ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನೆಲ್ಲ ದಾನ ಮಾಡಿದ. ತನ್ನದೆನ್ನುವ ವಸ್ತುಗಳನ್ನೆಲ್ಲ ಬಿಸಾಡಿಬಿಟ್ಟ. ಖಾಲಿ ಕಿಸೆಯಲ್ಲಿ, ಖಾಲಿ ಬ್ಯಾಗ್ ಹಿಡಿದು ಅಲಾಸ್ಕಾದ ಕಾಡುಗಳತ್ತ ಪ್ರಯಾಣ ಬೆಳೆಸಿದ. ಅವನಿಗೆ ಬೇಕಾಗಿದ್ದು ಮನುಷ್ಯ ನಿರ್ಮಿತ ಸಮಾಜವಲ್ಲ, ಬದಲಿಗೆ ಕಠಿಣವಾದರೂ ಪ್ರಾಮಾಣಿಕವಾಗಿರುವ ಪ್ರಕೃತಿಯ ಒಡನಾಟ.

ದಕ್ಷಿಣ ಅಮೆರಿಕದಾದ್ಯಂತ ಸಂಚರಿಸಿದ. ಲಿಂಕ್ ಮೌಂಟೆನ್‌ನಿಂದ ಮೆಕ್ಸಿಕೋದವರೆಗೆ ಅವನ ಪಯಣ ಸಾಗಿತು. ಹಾದಿಯಲ್ಲಿ ಸಿಕ್ಕ ಸಣ್ಣಪುಟ್ಟ ಕೆಲಸಗಳನ್ನು ಕೇವಲ ಬದುಕಲು ಬೇಕಾದ ಕನಿಷ್ಠ ಆಹಾರಕ್ಕಾಗಿ ಮಾಡಿದ. ಅರಿಜೋನಾದಲ್ಲಿ ಮೆಕ್‌ಡೊನಾಲ್ಡ್ಸ್‌ನಂಥ ಸಂಸ್ಥೆಯಲ್ಲಿ ಕೆಲಸ ಮಾಡುವಾಗಲೂ, ಅವನು ಅಲ್ಲಿನ ಶಿಸ್ತು ಮತ್ತು ಹಣದ ವ್ಯವಸ್ಥೆಗೆ ಹೊಂದಿಕೊಳ್ಳಲು ಒದ್ದಾಡಿದ. ಅವನ ಗುರಿ ಹಣ ಗಳಿಸುವುದಾಗಿರಲಿಲ್ಲ. ಹಣವಿಲ್ಲದೇ, ಕ್ರೆಡಿಟ್ ಕಾರ್ಡ್‌ಗಳಿಲ್ಲದೇ, ಸಮಾಜದ ಗುರುತಿನ ಚೀಟಿಗಳಿಲ್ಲದೇ ಒಬ್ಬ ಮನುಷ್ಯ ನಿಜವಾಗಿಯೂ ಬದುಕಬಲ್ಲನೇ? ಎಂಬ ಪರೀಕ್ಷೆಗೆ ತನ್ನನ್ನೇ ಒಡ್ಡಿಕೊಂಡಿದ್ದ. ಲಿಂಕ್ ಮೌಂಟೆನ್‌ನಿಂದ ಮೆಕ್ಸಿಕೋದ ಕೊಲ್ಲಿಯವರೆಗೆ ಅವನು ಹೋದ ಕಡೆಯಲ್ಲೆಲ್ಲ ಕಾಡುಗಳು, ನದಿಗಳು ಮತ್ತು ಪರ್ವತಗಳೇ ಅವನ ಸಂಗಾತಿಗಳಾಗಿದ್ದವು. ತನ್ನ ಕಾರನ್ನು ಪ್ರವಾಹದಲ್ಲಿ ಬಿಟ್ಟು, ನಂತರ ಅದನ್ನು ದಹಿಸಿ, ಕೈಯಲ್ಲಿದ್ದ ಸ್ವಲ್ಪ ಹಣವನ್ನೂ ಸುಟ್ಟು ಹಾಕಿ ಅವನು ಕಾಲ್ನಡಿಗೆಯಲ್ಲಿ ಸಾಗಿದ. ಇದು ಸಮಾಜದೊಂದಿಗಿನ ಅವನ ಎಲ್ಲ ಸಂಬಂಧಗಳ ವಿಚ್ಛೇದನವಾಗಿತ್ತು. ಅವನಿಗೆ ಪರ್ವತಗಳ ಮೌನವು ನಗರದ ಗದ್ದಲಕ್ಕಿಂತ ಹೆಚ್ಚು ಅರ್ಥಗರ್ಭಿತವಾಗಿ ಕಂಡಿತು.

ಕ್ರಿಸ್ಟೋಫರ್ ಯಾನೆ ಅಲೆಕ್ಸಾಂಡರ್ ಸೂಪರ್-ಟ್ರ್ಯಾಂಪ್ ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲಿಯೂ ಧೃತಿಗೆಡಲಿಲ್ಲ. ಅವನಿಗೆ ಹಸಿವು, ಚಳಿ ಮತ್ತು ಏಕಾಂಗಿತನವು ತೊಂದರೆ ನೀಡಲಿಲ್ಲ, ಬದಲಿಗೆ ಅವು ಅವನನ್ನು ಆಧ್ಯಾತ್ಮಿಕವಾಗಿ ಗಟ್ಟಿಗೊಳಿಸಿದವು. ‘ಯಾವುದೇ ಸೌಕರ್ಯಗಳಿಲ್ಲದೆ ಬದುಕುವುದು ಶಕ್ಯವೇ?’ ಎಂಬ ಅವನ ಪ್ರಶ್ನೆಗೆ ಅವನು ತನ್ನ ಪ್ರಯಾಣದ ಪ್ರತಿ ಹಂತದಲ್ಲೂ ಹೌದು ಎಂಬ ಉತ್ತರವನ್ನು ಕಂಡುಕೊಳ್ಳುತ್ತಾ ಸಾಗಿದ. ಕೊನೆಗೆ, ಈ ಪಯಣವೇ ಅವನನ್ನು ಅಲಾಸ್ಕಾದ ಆ ಭೀಕರ ಕಾಡಿಗೆ ಕರೆದೊಯ್ಯಿತು. ಅಲ್ಲಿ ಅವನು ಆಧುನಿಕ ಮಾನವನಿಗೆ ಅಸಾಧ್ಯವೆನಿಸುವ ‘ಪರಿಪೂರ್ಣ ಏಕಾಂತ’ವನ್ನು ಅನುಭವಿಸಿದ. ಅವನ ಬದುಕು ಸಮಾಜದ ಮೌಲ್ಯಗಳನ್ನು ಪ್ರಶ್ನಿಸುವ ಒಂದು ದೊಡ್ಡ ಪ್ರಯೋಗವಾಗಿತ್ತು.

ಕ್ರಿಸ್ಟೋಫರ್ ಮೆಕ್-ಕ್ಯಾಂಡ್ಲೆಸ್‌ನ ಜೀವನದ ಅಂತಿಮ ಮತ್ತು ಅತ್ಯಂತ ಸಾಹಸಮಯ ಘಟ್ಟವೆಂದರೆ ಅದು ಅಲಾಸ್ಕಾದ ಕಾಡುಗಳಲ್ಲಿ ಕಳೆದ ದಿನಗಳು. 1992ರ ಏಪ್ರಿಲ್‌ನಲ್ಲಿ ಅವನು ತನ್ನ ಕನಸಿನ ‘ವೈಲ್ಡ್’ (ಕಾಡು) ಪ್ರಪಂಚವನ್ನು ಪ್ರವೇಶಿಸಿದಾಗ, ಅದು ಕೇವಲ ಒಂದು ಪ್ರವಾಸವಾಗಿರಲಿಲ್ಲ; ಅದು ನಾಗರಿಕತೆಯ ಮೇಲಿನ ಸಂಪೂರ್ಣ ಜಯ ಮತ್ತು ಪ್ರಕೃತಿಯೊಂದಿಗಿನ ಆತ್ಮೀಯ ಮಿಲನವಾಗಿತ್ತು. ಕ್ರಿಸ್ಟೋಫರ್ ಅಲಾಸ್ಕಾದ ‘ಸ್ಟ್ಯಾಂಪೀಡ್ ಟ್ರಯಲ್’ ಅನ್ನು ಪ್ರವೇಶಿಸಿದಾಗ ಅವನ ಸಿದ್ಧತೆಗಳು ಅತ್ಯಲ್ಪವಾಗಿದ್ದವು. ಆಧುನಿಕ ನಕ್ಷೆಗಳು, ದಿಕ್ಸೂಚಿ ಅಥವಾ ಹೆಚ್ಚಿನ ಆಹಾರದ ಬದಲು, ಅವನು ಕೇವಲ ಎರಡು ಕೆಜಿ ಅಕ್ಕಿ, ಒಂದು ಸಣ್ಣ .22 ಕ್ಯಾಲಿಬರ್ ರೈಫಲ್ ಮತ್ತು ಸ್ಥಳೀಯ ಖಾದ್ಯ ಸಸ್ಯಗಳ ಬಗ್ಗೆ ಮಾಹಿತಿ ನೀಡುವ ಪುಸ್ತಕವನ್ನು ಮಾತ್ರ ನಂಬಿದ್ದ. ಇದು ಅಹಂಕಾರವಾಗಿರಲಿಲ್ಲ, ಬದಲಿಗೆ ಪ್ರಕೃತಿಯನ್ನು ಅದರ ಮೂಲ ರೂಪದಲ್ಲಿ ಎದುರಿಸುವ ಅವನ ಧೈರ್ಯವಾಗಿತ್ತು.

ಕಾಡಿನ ಮಧ್ಯದಲ್ಲಿ ಅವನಿಗೆ ಸಿಕ್ಕ ‘ಫೇರ್‌ಬ್ಯಾಂಕ್ಸ್ ಸಿಟಿ ಟ್ರಾನ್ಸಿಟ್ ಸಿಸ್ಟಮ್’ನ ಪರಿತ್ಯಕ್ತ ಬಸ್ಸೊಂದು ಅವನಿಗೆ ಆಶ್ರಯತಾಣವಾಯಿತು. ಅದನ್ನು ಅವನು ಪ್ರೀತಿಯಿಂದ ‘ಮ್ಯಾಜಿಕ್ ಬಸ್’ ಎಂದು ಕರೆದ. ಆ ಬಸ್ಸು ಅವನಿಗೆ ಬಾಹ್ಯ ಪ್ರಪಂಚದ ಕೃತಕತೆಯಿಂದ ಮುಕ್ತಿ ನೀಡಿದ ಏಕಾಂತದ ಕೇಂದ್ರವಾಗಿತ್ತು. ಅಲ್ಲಿ ಅವನು ಪ್ರತಿದಿನ ಬೇಟೆಯಾಡುತ್ತಾ, ಸಸ್ಯಗಳನ್ನು ಆರಿಸುತ್ತಾ ಮತ್ತು ತನ್ನ ಆಲೋಚನೆಗಳನ್ನು ದಿನಚರಿಯಲ್ಲಿ ದಾಖಲಿಸುತ್ತಾ ಸಮಯ ಕಳೆದ. ಸುಮಾರು 113 ದಿನಗಳ ಕಾಲ ಅವನು ಅಲ್ಲಿ ಜೀವನ ನಡೆಸಿದ. ಆ ದಿನಗಳಲ್ಲಿ ಅವನು ಅನುಭವಿಸಿದ ಕಷ್ಟಗಳು ಸಾಮಾನ್ಯವಾದುದಲ್ಲ. ಅತಿಯಾದ ಶೀತ, ಬೇಟೆಯ ಕೊರತೆ ಮತ್ತು ಎಲುಬು ಕೊರೆಯುವ ಚಳಿಯ ನಡುವೆಯೂ ಅವನು ‘ಪರಿಪೂರ್ಣ ಸಂತೋಷ’ವನ್ನು ಅನುಭವಿಸಿದ. ಅವನ ದಿನಚರಿಗಳಲ್ಲಿ ಪ್ರಕೃತಿಯ ಪ್ರತಿಯೊಂದು ಬದಲಾವಣೆಯನ್ನೂ ಅದ್ಭುತವಾಗಿ ಬಣ್ಣಿಸಿದ. ಮನುಷ್ಯನಿಗೆ ಬದುಕಲು ಬೇಕಾದದ್ದು ಸೌಕರ್ಯಗಳಲ್ಲ, ಬದಲಿಗೆ ಆಂತರಿಕ ಶಿಸ್ತು ಮತ್ತು ನಿಸರ್ಗದ ಮೇಲೆ ಪ್ರೀತಿ ಎಂಬುದನ್ನು ಆತ ಕಂಡುಕೊಂಡ.

ಆಗಸ್ಟ್ ತಿಂಗಳ ವೇಳೆಗೆ ಪರಿಸ್ಥಿತಿ ಬಿಗಡಾಯಿಸಿತು. ನದಿಯಲ್ಲಿ ನೀರಿನ ಮಟ್ಟ ಏರಿದ್ದರಿಂದ ಅವನಿಗೆ ವಾಪಸ್ ಬರಲು ಸಾಧ್ಯವಾಗಲಿಲ್ಲ. ಆಹಾರದ ತೀವ್ರ ಅಭಾವ ಕಾಣಿಸಿಕೊಂಡಿತು. ಕಾಡಿನಲ್ಲಿನ ಗಡ್ಡೆ-ಗೆಣಸು, ಸಸ್ಯಗಳನ್ನೇ ತಿಂದು ಬದುಕುತ್ತಿದ್ದ ಆತ ಆಕಸ್ಮಿಕವಾಗಿ ವಿಷಕಾರಿ ಸಸ್ಯದ ಬೀಜಗಳನ್ನು ಸೇವಿಸಿಬಿಟ್ಟ. ಕಾಡಿನಲ್ಲಿ ಸಿಗುವುದೆಲ್ಲ ಮನುಷ್ಯನಿಗೆ ದೈವದತ್ತವಾದುದು ಮತ್ತು ಉತ್ತಮವಾದುದು ಎಂಬುದು ಅವನ ಯೋಚನೆಯಾಗಿತ್ತು. ಪ್ರಕೃತಿ ಕೇವಲ ಸುಂದರವಲ್ಲ, ಅದು ಕ್ರೂರವೂ ಹೌದು ಎಂದು ಗೊತ್ತಾಗುವ ಹೊತ್ತಿಗೆ ಸಮಯ ಕಳೆದುಹೋಗಿತ್ತು. ಆ ವಿಷಕಾರಿ ಸಸ್ಯದ ಬೀಜಗಳನ್ನು ತಿಂದಿದ್ದರಿಂದ ಅವನ ದೇಹ ಕ್ಷೀಣಿಸತೊಡಗಿತು. ಸಾವು ಹತ್ತಿರವಿದೆ ಎಂದು ಅವನಿಗೆ ಅನಿಸಲಾರಂಭಿಸಿತು.

Untitled design - 2026-04-22T123433.682

ಆದರೂ ಆತ ಭಯಪಡಲಿಲ್ಲ. ಸಾವಿನ ದವಡೆಯಲ್ಲಿದ್ದಾಗ ಅವನಿಗೆ ಒಂದು ದೊಡ್ಡ ಸತ್ಯದ ಅರಿವಾಯಿತು. ಮನುಷ್ಯ ಎಷ್ಟೇ ಸ್ವತಂತ್ರವಾಗಿರಲು ಬಯಸಿದರೂ, ಕೊನೆಯಲ್ಲಿ ಅವನಿಗೆ ಇನ್ನೊಬ್ಬ ಮನುಷ್ಯನ ಸಾಮೀಪ್ಯ ಬೇಕೇ ಬೇಕು. ತನ್ನ ದಿನಚರಿಯಲ್ಲಿ ಅವನು ‘Happiness is only real when shared’ ಎಂದು ಬರೆದ. ಅಂದರೆ, ಹಂಚಿಕೊಂಡಾಗ ಮಾತ್ರ ಸಂತೋಷಕ್ಕೆ ಪೂರ್ಣ ಅರ್ಥ ಸಿಗುತ್ತದೆ ಎಂಬುದು ಅವನಿಗೆ ಸಾವಿನ ಸಮಯದಲ್ಲಿ ಅರಿವಾಯಿತು. ಬಸ್ಸಿನ ಹೊರಗೆ ಬಂದು ಸೂರ್ಯನ ಬೆಳಕಿನಲ್ಲಿ ನಿಂತು, ‘ನಾನು ಸುಂದರವಾದ ಜೀವನವನ್ನು ನಡೆಸಿದ್ದೇನೆ, ದೇವರಿಗೆ ಧನ್ಯವಾದಗಳು’ ಎಂಬ ಚೀಟಿ ಬರೆದು ಶಾಂತವಾಗಿ ಕಣ್ಣು ಮುಚ್ಚಿದ. ಆಗಸ್ಟ್ 1992ರಲ್ಲಿ ಆ ಬಸ್‌ನೊಳಗೆ ಚೀಲವೊಂದರಲ್ಲಿ ಮಲಗಿದ್ದ ಸ್ಥಿತಿಯಲ್ಲಿ ಅವನ ಶವ ಪತ್ತೆಯಾಯಿತು.

ಅನೇಕರು ಕ್ರಿಸ್ಟೋಫರ್‌ನನ್ನು ‘ಅಜಾಗರೂಕ ಯುವಕ’, ‘ತಿಕ್ಕಲು’ ಅಥವಾ ‘ಹುಚ್ಚ’ ಎಂದು ಟೀಕಿಸುತ್ತಾರೆ. ಅಲಾಸ್ಕಾದಂಥ ಕಠಿಣ ಹವಾಮಾನಕ್ಕೆ ಹೋಗುವಾಗ ಸರಿಯಾದ ನಕ್ಷೆ, ದಿಕ್ಸೂಚಿ ಅಥವಾ ತುರ್ತು ಸಂವಹನ ಸಾಧನಗಳನ್ನು ಒಯ್ಯದಿರುವುದು ಅವನ ದೊಡ್ಡ ತಪ್ಪು ಎಂಬುದು ವಿಮರ್ಶಕರ ವಾದ. ಪ್ರಕೃತಿಯು ಸುಂದರವಾದಷ್ಟೇ ಕ್ರೂರವಾದುದು ಎಂಬ ಸತ್ಯವನ್ನು ಅವನು ನಿರ್ಲಕ್ಷಿಸಿದ ಎಂಬುದು ಇವರ ಅಭಿಪ್ರಾಯ. ಆದರೆ, ಇನ್ನೊಂದು ವರ್ಗದ ಜನರಿಗೆ ಅವನು ಒಬ್ಬ ‘ಧೀರ’ ಮತ್ತು ‘ಕ್ರಾಂತಿಕಾರಿ’. ಬಹುತೇಕ ಮನುಷ್ಯರು ಸಮಾಜದ ಕಪಟತನ, ಇಷ್ಟವಿಲ್ಲದ ನೌಕರಿ ಮತ್ತು ಸಾಲದ ಸುಳಿಯಲ್ಲಿ ಸಿಲುಕಿ ಬದುಕುತ್ತಿದ್ದಾರೆ. ಇವೆಲ್ಲವನ್ನೂ ಎದೆಯುಬ್ಬಿಸಿ ತ್ಯಜಿಸಿ, ತನ್ನ ತತ್ತ್ವಗಳಿಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ಅವನ ಧೈರ್ಯ ಅಪ್ರತಿಮವಾದುದು. ಅವನು ಸತ್ತಿರಬಹುದು, ಆದರೆ ಅವನು ಕಂಡುಕೊಂಡ ಆ 113 ದಿನಗಳ ಸತ್ಯ ಮತ್ತು ಸ್ವಾತಂತ್ರ್ಯ ಅನೇಕರು ತಮ್ಮ ಇಡೀ ಜೀವನದಲ್ಲಿ ಅನುಭವಿಸಲು ಸಾಧ್ಯವಾಗದಂಥದ್ದು.

ಜೀವನವೆಂದರೆ ಕೇವಲ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸಿಕೊಳ್ಳುವುದಲ್ಲ. ಬೆಟ್ಟಗಳನ್ನು ಹತ್ತುವುದು, ಪ್ರಕೃತಿಯನ್ನು ಆಸ್ವಾದಿಸುವುದು, ನಿಸರ್ಗದೊಂದಿಗೆ ಒಂದಾಗುವುದು, ನದಿಗಳ ಗದ್ದಲವನ್ನು ಕೇಳುವುದು ಮತ್ತು ಅಪರಿಚಿತರೊಂದಿಗೆ ಸಂವಹನ ಮಾಡುವುದು—ಈ ಅನುಭವಗಳೇ ಮನುಷ್ಯನನ್ನು ಶ್ರೀಮಂತಗೊಳಿಸುತ್ತವೆ ಎಂಬುದು ಅವನ ಸಂದೇಶವಾಗಿತ್ತು. ಸಮಾಜವು ಹಾಕಿಕೊಟ್ಟಿರುವ ಯಶಸ್ಸಿನ ಮಾದರಿಯನ್ನು ಆತ ಪ್ರಶ್ನಿಸಿದ. ನಾವು ಇತರರನ್ನು ಮೆಚ್ಚಿಸಲು ಬದುಕುತ್ತಿದ್ದೇವೆಯೇ ಅಥವಾ ನಮಗಾಗಿ ಬದುಕುತ್ತಿದ್ದೇವೆಯೇ ಎಂಬ ಪ್ರಶ್ನೆಯನ್ನು ಪದೇ ಪದೆ ಕೇಳಿದ.

ಅವನ ಸಾವು ನಮಗೆ ಒಂದು ಕಠಿಣ ಪಾಠವನ್ನೂ ಕಲಿಸುತ್ತದೆ. ಪ್ರಕೃತಿಯನ್ನು ಪ್ರೀತಿಸುವುದು ಬೇರೆ, ಅದನ್ನು ಅತಿಯಾದ ಆತ್ಮವಿಶ್ವಾಸದಿಂದ ಎದುರಿಸುವುದು ಬೇರೆ. ಸಿದ್ಧತೆ ಇಲ್ಲದ ಸಾಹಸವು ದುರಂತಕ್ಕೆ ಕಾರಣವಾಗಬಹುದು ಎಂಬ ಎಚ್ಚರಿಕೆ ಅವನ ಕಥೆಯಲ್ಲಿದೆ. ಏಕಾಂತವನ್ನು ಹುಡುಕಿಕೊಂಡು ಹೋದ ಅವನಿಗೆ, ಕೊನೆಯ ಹಂತದಲ್ಲಿ ಮನುಷ್ಯ ಸಂಬಂಧಗಳ ಮತ್ತು ಪ್ರೀತಿಯ ಮಹತ್ವದ ಅರಿವಾಗಿತ್ತು. ಹಣ ಮತ್ತು ಅಂತಸ್ತಿಗಿಂತ ಹೆಚ್ಚಾಗಿ, ನೈಜ ಸಂಬಂಧಗಳು ಮತ್ತು ನಿಸರ್ಗದೊಂದಿಗಿನ ಪ್ರಾಮಾಣಿಕ ಬಾಂಧವ್ಯವೇ ಜೀವನದ ಅಂತಿಮ ಸತ್ಯ ಎಂಬುದು ಕ್ರಿಸ್ಟೋಫರ್ ಮೆಕ್-ಕ್ಯಾಂಡ್ಲೆಸ್ ಜಗತ್ತಿಗೆ ಬಿಟ್ಟು ಹೋದ ದೊಡ್ಡ ಪಾಠ. ಅವನ ಬದುಕು ಒಂದು ‘ದುರಂತ’ವಾಗಿ ಕಂಡರೂ, ಅದು ಲಕ್ಷಾಂತರ ಜನರಿಗೆ ತಮ್ಮ ಜೀವನದ ದಿಕ್ಕನ್ನು ಬದಲಿಸಿಕೊಳ್ಳಲು ದಾರಿದೀಪವಾಗಿದೆ.

ಯಾವಾಗ ಅವನು ಒಂಟಿತನವೇ ಪರಮ ಸುಖವೆಂದು ಹೊರಟಿದ್ದನೋ, ಅಲ್ಲಿಯೇ ಅವನಿಗೆ ಮನುಷ್ಯ ಸಂಬಂಧಗಳ ಬೆಲೆ ಅರ್ಥವಾಯಿತು. ಅವನ ಈ ವೈಚಾರಿಕ ಬದಲಾವಣೆ ಮತ್ತು ಅವನು ಸಮಾಜದ ಮೇಲೆ ಬೀರಿದ ಪ್ರಭಾವ ಅಸಾಧಾರಣವಾದುದು. ತನ್ನ ಕುಟುಂಬದ ಕಟ್ಟುಪಾಡುಗಳಿಂದ ಮುಕ್ತನಾಗಲು ಹೋದ ಯುವಕ, ಕೊನೆಗೆ ಇಡೀ ಜಗತ್ತಿಗೆ ಮನುಷ್ಯ ಸಂಬಂಧಗಳ ಬೆಲೆಯನ್ನು ಸಾರಿ ಹೇಳಿ ಹೋದ. ಅಲಾಸ್ಕಾದಲ್ಲಿ ಅವನು ವಾಸವಿದ್ದ ‘ಬಸ್ 142’ ಇಂದು ಕೇವಲ ಒಂದು ವಾಹನವಾಗಿ ಉಳಿದಿಲ್ಲ, ಅದು ಜಗತ್ತಿನಾದ್ಯಂತ ಇರುವ ಬಂಡಾಯಗಾರರಿಗೆ ಮತ್ತು ಸತ್ಯಾನ್ವೇಷಕರಿಗೆ ಒಂದು ಯಾತ್ರಾಸ್ಥಳವಾಗಿದೆ.

ಅನೇಕ ಪ್ರವಾಸಿಗರು ಕ್ರಿಸ್ಟೋಫರ್‌ನ ಹಾದಿಯನ್ನು ಅನುಸರಿಸಲು ಹೋಗಿ ಅಪಾಯಕ್ಕೆ ಸಿಲುಕಿದ್ದರಿಂದ ಮತ್ತು ಕೆಲವರು ಪ್ರಾಣ ಕಳೆದುಕೊಂಡಿದ್ದರಿಂದ, ಅಲಾಸ್ಕಾ ಸರಕಾರವು 2020ರಲ್ಲಿ ಆ ಬಸ್ಸನ್ನು ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಸ್ಥಳಾಂತರಿಸಿತು. ಪ್ರಸ್ತುತ ಇದನ್ನು ಅಲಾಸ್ಕಾದ ವಿಶ್ವವಿದ್ಯಾಲಯದ ಮ್ಯೂಸಿಯಂನಲ್ಲಿ ಸಂರಕ್ಷಿಸಿಡಲಾಗಿದೆ. ಒಂದು ಹಳೆಯ ಬಸ್ ಇಷ್ಟೊಂದು ಚರ್ಚೆಗೆ ಮತ್ತು ಭಾವನೆಗಳಿಗೆ ಕಾರಣವಾಯಿತು ಎಂದರೆ, ಅದಕ್ಕೆ ಕ್ರಿಸ್ಟೋಫರ್ ಅಲ್ಲಿ ಕಳೆದ ದಿನಗಳೇ ಕಾರಣ. ಇಂದಿಗೂ ಅನೇಕ ಪ್ರವಾಸಿಗರು ಆ ಬಸ್‌ನ್ನು ನೋಡಲು ಹೋಗುತ್ತಾರೆ. ಇದು ಅವನ ಪ್ರಭಾವ ಎಷ್ಟಿದೆ ಎಂಬುದಕ್ಕೆ ಸಾಕ್ಷಿ.

ಕ್ರಿಸ್ಟೋಫರ್‌ನ ಕಥೆಯು ಕೇವಲ ‘ಇನ್‌ಟು ದ ವೈಲ್ಡ್’ ಪುಸ್ತಕ ಅಥವಾ ಸಿನಿಮಾಕ್ಕೆ ಸೀಮಿತವಾಗಿಲ್ಲ. ಅದು ಪ್ರತಿ ತಲೆಮಾರಿನ ಯುವಕರಲ್ಲಿ ಒಂದು ಪ್ರಶ್ನೆಯನ್ನು ಜಾಗೃತಗೊಳಿಸುತ್ತದೆ - ‘ನೀವು ಬದುಕುತ್ತಿರುವ ಜೀವನ ನಿಮ್ಮದೇ ಅಥವಾ ಸಮಾಜವು ನಿಮ್ಮ ಮೇಲೆ ಹೇರಿದ ಮೌಲ್ಯಗಳೇ?’ ಅವನು ಭೌತಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಅವನ ಆಲೋಚನೆಗಳು ಮತ್ತು ಅನ್ವೇಷಣೆಯ ಹಂಬಲವು ಇಂದಿಗೂ ಪ್ರತಿಯೊಬ್ಬ ಪ್ರವಾಸಿಗನ ಕನಸಿನಲ್ಲಿ ಜೀವಂತವಾಗಿದೆ. ಸಮಾಜವನ್ನು ದ್ವೇಷಿಸಿ ಹೊರಟವನು, ಕೊನೆಗೆ ಮನುಕುಲಕ್ಕೆ ಅತಿದೊಡ್ಡ ‘ಮಾನವೀಯ ಪಾಠ’ವನ್ನೇ ಕಲಿಸಿ ಹೋದದ್ದು ಅವನ ಜೀವನದ ಅತಿದೊಡ್ಡ ವಿರೋಧಾಭಾಸ ಮತ್ತು ಯಶಸ್ಸು.

ಇದನ್ನೂ ಓದಿ: 'ದಿ ಟ್ರಾವೆಲ್ಸ್ ಆಫ್ ಮಾರ್ಕೊ ಪೋಲೋ' : ಪ್ರತಿ ಪ್ರವಾಸಿಯೂ ಓದಲೇಬೇಕಾದ ಕೃತಿ

ಅಲಾಸ್ಕಾದ ಆ ನಿಗೂಢ ಕಾಡಿನೊಳಗೆ, ಕಾಲದ ಹಂಗಿಲ್ಲದೇ ನಿಂತಿರುವ ಆ ಹಳೆಯ ಬಸ್ಸು, ಲೋಕದ ಸದ್ದಿನಿಂದ ತಪ್ಪಿಸಿಕೊಂಡು ಬಂದ ಕನಸುಗಾರನೊಬ್ಬನ ಅಂತಿಮ ನಿಲ್ದಾಣ. ಜಾನ್ ಕ್ರಕೌರ್ ಬರೆದ ಈ ಕೃತಿಯ ಪುಟಗಳನ್ನು ತಿರುವಿದಷ್ಟೂ, ನಮಗೆ ಕ್ರಿಸ್ಟೋಫರ್ ಒಬ್ಬ ಯುವಕನಾಗಿ ಕಾಣದೇ, ನಮ್ಮೊಳಗೇ ಅಡಗಿರುವ ‘ಬಿಡುಗಡೆ’ಯ ಹಂಬಲದಂತೆ ಭಾಸವಾಗುತ್ತಾನೆ. ಮನುಷ್ಯ ಸಂಬಂಧಗಳ ಸುಳಿ, ಪದವಿಗಳ ಭಾರ ಮತ್ತು ಬ್ಯಾಂಕ್ ಬ್ಯಾಲೆನ್ಸ್‌ಗಳ ಲೆಕ್ಕಾಚಾರದಿಂದ ಬೇಸತ್ತ ಕ್ರಿಸ್ಟೋಫರ್, ತನ್ನೆಲ್ಲ ಗುರುತುಗಳನ್ನು ಹರಿದುಹಾಕಿ ‘ಅಲೆಕ್ಸಾಂಡರ್’ ಆಗಿ ರೂಪಾಂತರಗೊಳ್ಳುವುದು ಒಂಥರಾ ಮಳೆಯಲ್ಲಿ ನೆನೆಯುತ್ತಾ ಹಳೆಯ ಬಟ್ಟೆ ಕಳಚಿದ ಹಾಗೆ. ಅವನಿಗೆ ಬೇಕಾಗಿದ್ದು ಗಮ್ಯವಲ್ಲ, ಬದಲಿಗೆ ತನ್ನನ್ನು ತಾನು ಕಳೆದುಕೊಳ್ಳುವ ಒಂದು ಅನಿರ್ದಿಷ್ಟ ಪಯಣ. ಏಕಾಂತವೆಂಬುದು ಒಂದು ಹಂತದವರೆಗೆ ಧ್ಯಾನ, ಆಮೇಲೆ ಅದು ಉತ್ತರವಿಲ್ಲದ ಒಂದು ದೊಡ್ಡ ಪ್ರಶ್ನೆಯೇ.

ಕ್ರಕೌರ್ ಈ ಕಥೆಯನ್ನು ಹೇಳುವಾಗ ಎಲ್ಲೂ ತೀರ್ಪು ನೀಡುವುದಿಲ್ಲ. ಬದಲಿಗೆ, ಆಧುನಿಕ ನಾಗರೀಕತೆಯ ನಡುವೆ ಉಸಿರುಗಟ್ಟುತ್ತಿರುವ ನಮಗೆ, ಕ್ರಿಸ್ಟೋಫರ್‌ನ ಆ ಹುಚ್ಚು ಸಾಹಸ ಕಿಟಕಿಯಿಂದ ತೂರಿಬರುವ ಗಾಳಿಯಂತೆ ಭಾಸವಾಗುತ್ತದೆ. ಆ ‘ಮ್ಯಾಜಿಕ್ ಬಸ್’ ಇಂದಿಗೂ ಅನೇಕರ ಪಾಲಿಗೆ ಒಂದು ತೀರ್ಥಕ್ಷೇತ್ರವೇ ಸರಿ, ಯಾಕೆಂದರೆ ಅಲ್ಲಿ ಒಬ್ಬ ಯುವಕ ತನ್ನ ಅಸ್ತಿತ್ವದ ಸತ್ಯವನ್ನು ಕಂಡುಕೊಂಡಿದ್ದ. ಕೊನೆಗೆ ನಾವು ಉಳಿಸಿಕೊಳ್ಳುವುದು ಇಷ್ಟೇ - ಬದುಕು ಎನ್ನುವುದು ಕೇವಲ ಗಮ್ಯ ತಲುಪುವ ರೇಸ್ ಅಲ್ಲ. ಅದು ಪ್ರೀತಿಯನ್ನು ಹಂಚುತ್ತಾ, ಸಂಬಂಧಗಳ ಹಸಿರನ್ನೇ ಹಾಸಿಗೆ ಮಾಡಿಕೊಂಡು, ನಿಸರ್ಗದ ನಿಯಮಗಳಿಗೆ ತಲೆಬಾಗಿ ಸಾಗುವ ಒಂದು ನಿರಂತರ ಯಾತ್ರೆ. ಕ್ರಿಸ್ಟೋಫರ್‌ನ ಆ ತ್ಯಾಗ ಮತ್ತು ಸಾವು ನಮಗೆ ಸಂಬಂಧಗಳ ಆರ್ದ್ರತೆಯನ್ನು ನೆನಪಿಸುತ್ತಲೇ ಇರುತ್ತದೆ. ಸ್ವಾತಂತ್ರ್ಯ ಎನ್ನುವುದು ಒಬ್ಬಂಟಿಯಾಗಿರುವುದಲ್ಲ, ಪ್ರೀತಿಪಾತ್ರರ ಜತೆಗಿದ್ದು ಅವರೊಂದಿಗೆ ಸುಂದರ ಕ್ಷಣಗಳನ್ನು ಹಂಚಿಕೊಳ್ಳುವುದು ಎಂದು ಕ್ರಿಸ್ಟೋಫರ್‌ ಕಂಡುಕೊಂಡ ಸತ್ಯವನ್ನು ಕ್ರಕೌರ್ ಓದುಗನ ಮನಸ್ಸಿನಲ್ಲಿ ಪ್ರತಿಮೆಯಂತೆ ಕಡೆದು ನಿಲ್ಲಿಸಿಬಿಡುತ್ತಾನೆ.

ಪ್ರವಾಸ ಸಾಹಿತ್ಯದಲ್ಲಿ ಈ ಕೃತಿ, ಮನುಷ್ಯ ಬದುಕಿನ ಅರ್ಥ ಹುಡುಕಾಟದ ನಿರಂತರ ಪಯಣದ ಕಥೆಯಾಗಿ ನಿಲ್ಲುತ್ತದೆ.

Vishweshwar Bhat

Vishweshwar Bhat

Editor in Chief

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?