ಧಕ್ ಧಕ್, ತಮ್ಮನ್ನೇ ಕಂಡುಕೊಳ್ಳುವ ಸಾಹಸ!
ನೈಜ ಘಟನೆಗಳಿಂದ ಪ್ರೇರಿತವಾದ ಈ ಸಿನಿಮಾ. ಇದರ ಹೆಚ್ಚುಗಾರಿಕೆಯೆಂದರೆ ಅಬ್ಬರವಿಲ್ಲದ, ಸೂಕ್ಷ್ಮ ಭಾವನೆಗಳನ್ನು ತೆರೆದಿಡುವ ಸಣ್ಣ ಸಣ್ಣ ದೃಶ್ಯಗಳು. ಮೇಲ್ನೋಟಕ್ಕೆ ಬೈಕ್ ರೈಡ್ ಕಥೆಯಂತೆ ಕಂಡರೂ, ಹೆಣ್ಣಿನ ಆಸೆ, ಬಂಧನ ಮತ್ತು ಬಿಡುಗಡೆಯನ್ನು ಅತ್ಯಂತ ನೈಜವಾಗಿ ಕಟ್ಟಿಕೊಡುವ ಹಾಗೂ ಕೆಲವು ಮನಸಿಗೆ ನಾಟುವ ಸನ್ನಿವೇಶಗಳು ಇಲ್ಲಿವೆ.
ಸಿನಿಮಾ: ಧಕ್ ಧಕ್ (Dhak Dhak)
ಬಿಡುಗಡೆ: 13 ಅಕ್ಟೋಬರ್ 2023
ನಿರ್ದೇಶನ: ತರುಣ್ ದುದೇಜಾ
ನಿರ್ಮಾಣ: ತಾಪ್ಸಿ ಪನ್ನು, ಪ್ರಾಂಜಲ್ ಖಂಡಾಡಿಯಾ, ಆಯುಷ್ ಮಹೇಶ್ವರಿ (ಔಟ್‌ಸೈಡರ್ಸ್ ಫಿಲ್ಮ್ಸ್ ಮತ್ತು ವಯಾಕಾಮ್ 18)
ಪ್ರಮುಖ ಪಾತ್ರಗಳು: ರತ್ನಾ ಪಾಠಕ್ ಶಾ, ದಿಯಾ ಮಿರ್ಜಾ, ಫಾತಿಮಾ ಸನಾ ಶೇಖ್, ಸಂಜನಾ ಸಾಂಘಿ
ಅವಧಿ: 2 ಗಂಟೆ 18 ನಿಮಿಷ
ಓಟಿಟಿ (OTT): ನೆಟ್‌ಫ್ಲಿಕ್ಸ್ (Netflix)
--
ಹೆಲ್ಮೇಟ್, ಜಾಕೇಟ್, ಶೂಗಳ ಜತೆಗೆ ಬ್ಯಾಕ್‌ಪ್ಯಾಕ್ ಹೆಗಲಿಗೇರಿಸಿಕೊಂಡು, ಸುಮಾರು 200ಕಿಲೋ ತೂಕದ ಬೈಕಿಗೆ ಕಿಕ್ ಹೊಡೆದು, ಪರಿಚಯವಿರುವ ಊರಿನ ಗಡಿ ದಾಟುತ್ತಿದ್ದಂತೆ ನಮಗೆ ಎದುರಾಗುವ ನಿರಾಳತೆ ಹಾಗೂ ಹೊಸತನದ ಫೀಲ್ ಕೇವಲ ಬೈಕ್ ನಲ್ಲಿ ಲಾಂಗ್‌ಡ್ರೈವ್ ಹೋಗುವ ಸಾಹಸಿಗಳಿಗೆ, ಪ್ರಕೃತಿಯನ್ನು ಆಸ್ವಾದಿಸುವ ಪ್ರವಾಸಿಗಳಿಗೆ ಖಂಡಿತ ಗೊತ್ತಿರುತ್ತೆ!
ಈ ಪೀಠಿಕೆ ಯಾಕಂದ್ರೆ ನಾನು ಇತ್ತೀಚೆಗೆ ನೋಡಿದ 'ಧಕ್ ಧಕ್' ಸಿನಿಮಾ. ಇದು ನನ್ನೊಳಗಿನ ಆಲಸ್ಯವನ್ನು ಮೈಕೊಡವಿ ಏಳುವಂತೆ ಮಾಡಿ ಮತ್ತೆ ಪ್ರವಾಸದ ಸುಮಧುರ ಹುಚ್ಚನ್ನು ಹೆ ಚ್ಚಿಸುವಂತೆ ಮಾಡಿದೆ. 2023ರಲ್ಲಿ ತೆರೆಕಂಡಿದ್ದರೂ ಈ ʼಧಕ್ ಧಕ್ʼ ಸಿನಿಮಾ ನಾನು ನೋಡಿದ್ದು ಒಟಿಟಿಯಲ್ಲಿ!
ಇದನ್ನೂ ಓದಿ: ಪ್ರೀತಿಗೆ ಈಗ ಹೊಸ ವಿಳಾಸ
ನೈಜ ಘಟನೆಗಳಿಂದ ಪ್ರೇರಿತವಾದ ‘ಧಕ್ ಧಕ್’ ಸಿನಿಮಾ, ನಾಲ್ವರು ಮಹಿಳೆಯರ ದೆಹಲಿಯಿಂದ ಲಡಾಖ್‌ನ ಖರ್ದುಂಗ್ ಲಾ ಪಾಸ್‌ವರೆಗಿನ ಬೈಕ್ ಪ್ರಯಾಣದ ಮೂಲಕ ಹೆಣ್ಣಿನ ಆಸೆ, ಬಂಧನ ಮತ್ತು ಬಿಡುಗಡೆಯನ್ನು ಸೂಕ್ಷ್ಮವಾಗಿ ತೆರೆದಿಡುತ್ತದೆ. 65 ವರ್ಷದ ಮಾಹಿ (ರತ್ನಾ ಪಾಠಕ್ ಶಾ), ಅಜ್ಜಿ ಎಂಬ ಗುರುತನ್ನು ಮೀರಿ ರಾಯಲ್ ಎನ್‌ಫೀಲ್ಡ್ ಏರಿ ತನ್ನ ಕನಸನ್ನು ನನಸಾಗಿಸಿಕೊಳ್ಳುತ್ತಾರೆ. ಸಂಪ್ರದಾಯವಾದಿ ಕುಟುಂಬದ ಗೃಹಿಣಿ ಉಜ್ಮಾ (ದಿಯಾ ಮಿರ್ಜಾ), ತನ್ನೊಳಗಿನ ಪ್ರತಿಭೆ ಮತ್ತು ಸ್ವಾತಂತ್ರ್ಯವನ್ನು ಮರುಕಳಿಸಿಕೊಳ್ಳುತ್ತಾಳೆ. ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಶಶಿ (ಫಾತಿಮಾ ಸನಾ ಶೇಖ್), ಟ್ರೋಲಿಂಗ್ ಮತ್ತು ಅಸುರಕ್ಷತೆಯ ನಡುವೆ ತನ್ನ ನೈಜ ಅಸ್ತಿತ್ವವನ್ನು ಕಂಡುಕೊಳ್ಳುತ್ತಾಳೆ. ಹೆತ್ತವರು ನಿಶ್ಚಯಿಸಿದ ಮದುವೆಗೆ ಮುನ್ನ ತನ್ನ ಆಸೆಗಳನ್ನು ಅರಿಯಲು ಬಯಸುವ ಮಂಜರಿ (ಸಂಜನಾ ಸಾಂಘಿ), ಸ್ವತಂತ್ರ ನಿರ್ಧಾರಗಳ ಮಹತ್ವವನ್ನು ಅನುಭವಿಸುತ್ತಾಳೆ. ಅಬ್ಬರವಿಲ್ಲದ ನಿರೂಪಣೆ ಮತ್ತು ಮನಮುಟ್ಟುವ ಸನ್ನಿವೇಶಗಳ ಮೂಲಕ ಸಿನಿಮಾ, ಸಮಾಜದ ಕಟ್ಟುಪಾಡುಗಳನ್ನು ಮೀರಿ ಆತ್ಮವಿಶ್ವಾಸದಿಂದ ಬದುಕುವ ಪ್ರೇರಣಾದಾಯಕ ಸಂದೇಶ ನೀಡುತ್ತದೆ.
‘ಧಕ್ ಧಕ್’ ನಾಲ್ವರು ಮಹಿಳೆಯರ ದೆಹಲಿಯಿಂದ ಲಡಾಖ್‌ವರೆಗಿನ ಪ್ರಯಾಣದ ಕಥೆಯಷ್ಟೇ ಅಲ್ಲ, ನಮ್ಮೊಳಗೆ ನಾವು ಮಾಡಿಕೊಳ್ಳಬೇಕಾದ ಪಯಣದ ಪ್ರತಿಬಿಂಬವೂ ಹೌದು. ಸಿನಿಮಾದಲ್ಲಿ ಪ್ರವಾಸವನ್ನು ಅಬ್ಬರದ ಸಂಗೀತ, ಸುಂದರ ದೃಶ್ಯಗಳ ಮೂಲಕ ತೋರಿಸುವ ಬದಲು, ಧೂಳು, ಬೆವರು, ಆಯಾಸ ಮತ್ತು ನೆಮ್ಮದಿಯೊಂದಿಗೆ ನೈಜವಾಗಿ ಕಟ್ಟಿಕೊಡಲಾಗಿದೆ. 65 ವರ್ಷದ ಮಾಹಿ, ಸಲ್ವಾರ್ ಮೇಲೆ ರೈಡಿಂಗ್ ಜಾಕೆಟ್ ತೊಟ್ಟು ರಾಯಲ್ ಎನ್‌ಫೀಲ್ಡ್ ಏರುವುದು, ವರ್ಷಗಳಿಂದ ಅಡಗಿಸಿಟ್ಟ ಆಸೆ ಈಡೇರಿದ ಕ್ಷಣದ ಸಂಭ್ರಮವನ್ನು ತೋರಿಸುತ್ತದೆ. ಹಾಗೆಯೇ, ಮನೆಯ ಕಣ್ಗಾವಲಿನಲ್ಲಿ ಬೆಳೆದ ಮಂಜರಿ ಪೆಟ್ರೋಲ್ ಬಂಕ್‌ನಲ್ಲಿ ತಾನೇ ಪೆಟ್ರೋಲ್ ಹಾಕಿಸಿಕೊಳ್ಳುವ ಸಣ್ಣ ಸನ್ನಿವೇಶವೂ ಸ್ವಾತಂತ್ರ್ಯದ ಮಹತ್ವವನ್ನು ಸಾರುತ್ತದೆ. ಇಂಥ ಸರಳ ಅನುಭವಗಳೇ ಸಿನಿಮಾವನ್ನು ಆಪ್ತವಾಗಿಸುತ್ತವೆ.
ದೆಹಲಿಯ ಟ್ರಾಫಿಕ್‌ನಿಂದ ಹಿಮಾಚಲದ ಗುಡ್ಡಗಾಡು ರಸ್ತೆಗಳಿಗೆ ಪ್ರವೇಶಿಸುತ್ತಿದ್ದಂತೆ ಕಾಂಕ್ರೀಟ್ ಕಟ್ಟಡಗಳ ಬದಲಿಗೆ ಹಿಮಾಲಯದ ಭವ್ಯತೆ ಗೋಚರಿಸುತ್ತದೆ. ಪರ್ವತಗಳ ನಡುವೆ ಬೈಕ್ ಓಡಿಸುವಾಗ ಅಹಂಕಾರ, ರಾಜಕೀಯ, ಬ್ಯಾಂಕ್ ಬ್ಯಾಲೆನ್ಸ್, ಲೈಕ್ಸ್-ಕಮೆಂಟ್‌ಗಳೆಲ್ಲವೂ ಪ್ರಕೃತಿಯ ಮುಂದೆ ಕ್ಷುಲ್ಲಕವೆನಿಸುತ್ತವೆ. ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಶಶಿಗೆ ಬೆಟ್ಟಗಳ ಮೌನ, ಮುಖವಾಡವಿಲ್ಲದ ಬದುಕಿನ ಸೌಂದರ್ಯವನ್ನು ಕಲಿಸುತ್ತದೆ.

ಪ್ರವಾಸಕ್ಕೆ ಹೊರಡುವಾಗ ಅಪರಿಚಿತರನ್ನು ನಂಬಬೇಡಿ ಎಂಬ ಎಚ್ಚರಿಕೆ ಸಾಮಾನ್ಯ. ಆದರೆ ರಸ್ತೆಯಲ್ಲಿ ಬೈಕ್ ರಿಪೇರಿ ಮಾಡುವ ಮೆಕ್ಯಾನಿಕ್, ಲಿಫ್ಟ್ ನೀಡುವ ಲಾರಿ ಚಾಲಕ, ಭಾಷೆ ತಿಳಿಯದಿದ್ದರೂ ನೆರವಾಗುವ ವಿದೇಶಿಗರು ಪೂರ್ವಗ್ರಹಗಳನ್ನು ದೂರ ಮಾಡುತ್ತಾರೆ. ಉಜ್ಮಾ ತನ್ನ ಮೆಕ್ಯಾನಿಕ್ ಕೌಶಲದಿಂದ ಬೈಕ್ ರಿಪೇರಿ ಮಾಡಿದಾಗ, ಕಳೆದುಹೋದ ಅಸ್ತಿತ್ವ ಮರಳಿ ಸಿಕ್ಕ ಸಂತೋಷ ಅನುಭವಿಸುತ್ತಾಳೆ.
ಮನಾಲಿಯಿಂದ ಲೇಹ್‌ವರೆಗಿನ ಹಾದಿ ಕಲ್ಲುಮಣ್ಣು, ಕೊರೆಯುವ ಚಳಿ ಮತ್ತು ಆಮ್ಲಜನಕದ ಕೊರತೆಯಿಂದ ದೇಹ-ಮನಸಿನ ತಾಳ್ಮೆಯನ್ನು ಪರೀಕ್ಷಿಸುತ್ತದೆ. ಪ್ರತಿ ಕಠಿಣ ತಿರುವನ್ನು ದಾಟಿದಾಗ ಸಿಗುವ ಆತ್ಮವಿಶ್ವಾಸವೇ ಮುಂದಿನ ಹಾದಿಗೆ ಪ್ರೇರಣೆಯಾಗುತ್ತದೆ.
ಏಳು ದಿನಗಳ ಪ್ರಯಾಣದಲ್ಲಿ ಖರ್ದುಂಗ್ ಲಾ ಪಾಸ್ ತಲುಪುವ ಸವಾರರು, ಅಲ್ಲಿ ವಿಜಯದ ಸಂಭ್ರಮಕ್ಕಿಂತ ಮೌನದ ನಿರಾಳವನ್ನು ಅನುಭವಿಸುತ್ತಾರೆ. ಮೈಕೊರೆಯುವ ಚಳಿಯಲ್ಲಿ ಹೆಲ್ಮೆಟ್ ತೆಗೆದು ನಿಂತಾಗ, ಇಷ್ಟು ದಿನ ಹೊತ್ತಿದ್ದ ಭಯ, ಕೀಳರಿಮೆ ಮತ್ತು ಸಮಾಜದ ನಿರೀಕ್ಷೆಗಳನ್ನು ಮರೆತು ಮನಸು ಹಗುರವಾಗುತ್ತದೆ. ಖರ್ದುಂಗ್ ಲಾ ಅವರಿಗೆ ಕೇವಲ ಭೌಗೋಳಿಕ ತಾಣವಲ್ಲ, ತಮ್ಮೊಳಗಿನ ಮಿತಿಗಳನ್ನು ದಾಟಿದ ಸಾರ್ಥಕತೆಯ ಸಂಕೇತ. ಪ್ರವಾಸ ಮುಗಿಸಿ ಮರಳಿದಾಗ ಊರು, ಮನೆ, ಜನರು ಬದಲಾಗದಿದ್ದರೂ, ಅವರ ದೃಷ್ಟಿಕೋನ ಬದಲಾಗಿರುತ್ತದೆ. ‘ಧಕ್ ಧಕ್’ ಚಿತ್ರ ಸಾರುವ ಸಂದೇಶವೂ ಇದೇ. ಜೀವನದ ಓಟದಲ್ಲಿ ನಮಗಾಗಿ ಬದುಕುವುದನ್ನು ಮರೆಯಬಾರದು. ಹೊಸ ಹಾದಿಯಲ್ಲಿ ಸಾಗಲು, ಪೂರ್ವಗ್ರಹಗಳನ್ನು ಬದಿಗಿಟ್ಟು ಅನುಭವಗಳನ್ನು ಸ್ವೀಕರಿಸಲು ದೊಡ್ಡ ಸಾಧನೆಗಳ ಅಗತ್ಯವಿಲ್ಲ, ಒಂದು ಸಣ್ಣ ಹೆಜ್ಜೆಯ ಧೈರ್ಯ ಸಾಕು. ರಸ್ತೆ ಎಲ್ಲರನ್ನೂ ಸಮಾನವಾಗಿ ಸ್ವಾಗತಿಸುತ್ತದೆ.