ಹಳಿಗಳ ಮೇಲೆ ಹರಡಿದ ಬದುಕು

ಹಣೆಬರಹ ಬದಲಿಸಿದ ರೈಲು ಹಳಿ

ವಿಯೆಟ್ನಾಮ್‌ನ ಹನೋಯಿ ಹಳೇ ಪೇಟೆಯ ಆ ಕಿರಿದಾದ ಗಲ್ಲಿಯೊಳಗೆ ಕಾಲಿಟ್ಟರೆ, ಅಲ್ಲಿ ಬದುಕು ಹಳಿಗಳ ಮೇಲೆ ಹರಡಿಕೊಂಡಿರುವ ಒಂದು ಸಾಮಾನ್ಯ, ಆದರೆ ವಿಚಿತ್ರ ದೃಶ್ಯ ಕಾಣಿಸುತ್ತದೆ. ಆ ನಗರದಲ್ಲಿ ಅದೊಂದು ಸಾಮಾನ್ಯ ರೈಲ್ವೇ ಹಳಿ. ಅದರ ಇಕ್ಕೆಲಗಳಲ್ಲೂ ಮನೆಗಳು, ಅಂಗಡಿಗಳು, ಕೆಫೆ, ಬಾರ್‌ಗಳು. ರೈಲು ಹಳಿಗಳ ಮೇಲೆ ಸದಾ ಗಿಜಿಗುಟ್ಟುವ ಚಟುವಟಿಕೆ. ರೈಲು ಬರುತ್ತಿದ್ದಂತೆ, ಹಳಿ ತೆರವಾಗುತ್ತದೆ. ರೈಲು ಹಾದು ಬಳಿಕ ಜನಜೀವನ ಮೊದಲಿನಂತೆ. ಇದು 'ಟ್ರೇನ್ ಸ್ಟ್ರೀಟ್' ಎಂದೇ ಪ್ರಸಿದ್ಧ. ಇದನ್ನು ನೋಡಲು ಜಗತ್ತಿನ ಎಲ್ಲೆಲ್ಲಿಂದಲೋ ಪ್ರವಾಸಿಗರು ಆಗಮಿಸುತ್ತಾರೆ. ಸೋಜಿಗವೆಂದರೆ, ಇದು ಪ್ರವಾಸಿಗರ ಅತ್ಯಂತ ಆಕರ್ಷಕ ತಾಣವಾಗಿದೆ. ಒಂದು ಮಾಮೂಲಿ ಟ್ರೇನ್‌ ಟ್ರ್ಯಾಕ್‌ನ್ನು ಸಹ ಒಂದು ಒಂದು ಅದ್ಭುತ ಪ್ರವಾಸಿ ತಾಣವಾಗಿ ಹೇಗೆ ಅಭಿವೃದ್ಧಿಪಡಿಸಬಹುದು ಎಂಬುದನ್ನು ವಿಯೆಟ್ನಾಮ್ ತೋರಿಸಿಕೊಟ್ಟಿದೆ.

‘ಟ್ರೇನ್‌ ಸ್ಟ್ರೀಟ್’ ಕೇವಲ ಒಂದು ಪ್ರವಾಸಿ ತಾಣವಲ್ಲ; ಅದು ದೈನಂದಿನ ಬದುಕಿನ ಜಪ್ಪಯ್ಯ ಅಂದರೂ ಜಗ್ಗದ ಜಿಗುಟುತನ ಮತ್ತು ಕಲೆಯ ನಡುವೆ ನಡೆದಿರುವ ಒಂದು ಅದ್ಭುತ ಒಪ್ಪಂದ. ನಮ್ಮಲ್ಲಿ ರೈಲ್ವೇ ಹಳಿ ಎಂದರೆ ಅದೊಂದು ಧೂಳು, ಕಪ್ಪು ಹೊಗೆ, ವಾಸನೆ ಸೂಸುವ, ಯಾರೂ ಹತ್ತಿರ ಸುಳಿಯದ ಅಪಾಯಕಾರಿ ವಲಯ. ಆದರೆ ವಿಯೆಟ್ನಾಮ್‌ನ ಜನ ಒಂದು ಮಾಮೂಲಿ ಲೋಹದ ಹಳಿಯನ್ನೇ ಇಡೀ ಜಗತ್ತು ಬಂದು ಕಣ್ಣರಳಿಸಿ ನೋಡುವ ಪ್ರೇಮಕಾವ್ಯವನ್ನಾಗಿ ಬದಲಾಯಿಸಿಬಿಟ್ಟಿದೆ.

ಇದನ್ನೂ ಓದಿ: ನಿಜಾರ್ಥದಲ್ಲಿ 'ಸೂರ್ಯ ಎಂದಿಗೂ ಮುಳುಗದ ಸಾಮ್ರಾಜ್ಯ' ಅಂದ್ರೆ ಫ್ರಾನ್ಸ್!

ಅದೊಂದು ವಿಚಿತ್ರ ಜಗತ್ತು. ಎರಡು ಕಡೆ ಎತ್ತರದ ಹಳೆಯ ಕಟ್ಟಡಗಳು, ಅವುಗಳ ಮಧ್ಯೆ ಕೇವಲ ಹತ್ತಿಪ್ಪತ್ತು ಅಡಿಗಳಷ್ಟು ಜಾಗ. ಅದರ ಮಧ್ಯದಲ್ಲೇ ಹಾದುಹೋಗುವ ರೈಲ್ವೇ ಹಳಿ. ಟ್ರೇನ್‌ ಬರುವ ಮುನ್ನ ಆ ಹಳಿಗಳ ಮೇಲೆ ಬದುಕು ನಿರಾಳವಾಗಿ ಹರಿಯುತ್ತಿರುತ್ತದೆ. ಮಕ್ಕಳು ಆಟವಾಡುತ್ತಿರುತ್ತಾರೆ, ಹೆಂಗಸರು ತರಕಾರಿ ಹೆಚ್ಚುತ್ತಿರುತ್ತಾರೆ, ಮುದುಕರು ಕುಳಿತು ನಿರಾಳವಾಗಿ ಚಹಾ ಹೀರುತ್ತಿರುತ್ತಾರೆ. ಹಳಿಯ ಇಕ್ಕೆಲಗಳಲ್ಲಿ ಪುಟ್ಟ ಪುಟ್ಟ ಕೆಫೆಗಳು, ರಂಗುರಂಗಿನ ಹೂಕುಂಡಗಳು, ಗೋಡೆಗಳ ಮೇಲೆ ಸುಂದರವಾದ ಚಿತ್ರಗಳು. ಎಲ್ಲವೂ ಒಂದು ಸುಂದರ ನಾಟಕದ ರಂಗಸಜ್ಜಿಕೆಯಂತೆ ಭಾಸವಾಗುತ್ತದೆ.

Untitled design (81)

ದಿನಕ್ಕೆ ಕೆಲವು ಬಾರಿ ಅಲ್ಲಿ ಒಂದು ಪವಾಡ ನಡೆಯುತ್ತವೆ. ದೂರದಲ್ಲಿ ಎಲ್ಲೋ ಟ್ರೇನ್‌ ಬರುವ ಸೈರನ್ ಧ್ವನಿ ಕೇಳಿಸುತ್ತದೆ. ಅಷ್ಟೇ, ಅಲ್ಲಿಯವರೆಗೆ ಇದ್ದ ನಿರಾಳತೆ ಕ್ಷಣಾರ್ಧದಲ್ಲಿ ಅದ್ಭುತ ಶಿಸ್ತಿಗೆ ದಾರಿ ಮಾಡಿಕೊಡುತ್ತದೆ. ಕೆಫೆಯ ಮಾಲೀಕರು ತಕ್ಷಣ ಕಾರ್ಯಪ್ರವೃತ್ತರಾಗುತ್ತಾರೆ. ಹಳಿಯ ಮೇಲಿದ್ದ ಕುರ್ಚಿಗಳು, ಮೇಜುಗಳು, ಕೆಫೆಯ ಬೋರ್ಡುಗಳು ಎಲ್ಲವೂ ಸೆಕೆಂಡುಗಳ ಒಳಗೆ ಒಳಗಡೆ ಸೇರಿಕೊಳ್ಳುತ್ತವೆ. ಪ್ರವಾಸಿಗರೆಲ್ಲ ಗೋಡೆಗೆ ಬೆನ್ನು ಹಚ್ಚಿ, ಉಸಿರು ಬಿಗಿಹಿಡಿದು ನಿಲ್ಲುತ್ತಾರೆ.

'ಇದು ಬದುಕಿನ ಅತ್ಯಂತ ರೋಮಾಂಚಕ ಕ್ಷಣ. ಸಾವು ಮತ್ತು ಬದುಕಿನ ನಡುವೆ ಕೇವಲ ಕೆಲವು ಇಂಚುಗಳಷ್ಟು ಮಾತ್ರ ಅಂತರವಿರುವಂತೆ ಭಾಸವಾಗುವ ಸುಂದರ ಕಾವ್ಯವಿದು.'

ಮರುಕ್ಷಣವೇ ಭಾರಿ ಗಾತ್ರದ ಹಳೇ ಮಾದರಿಯ ಟ್ರೇನ್‌ ಒಂದು ಚಲಿಸುವ ಬೃಹತ್ ಪರ್ವತದಂತೆ ಆ ಕಿರಿದಾದ ಗಲ್ಲಿಯೊಳಗೆ ನುಗ್ಗಿ ಬರುತ್ತದೆ. ನಿಮ್ಮ ಮೂಗಿನ ತುದಿಯಿಂದ ಕೇವಲ ಕೆಲವು ಇಂಚುಗಳ ಅಂತರದಲ್ಲಿ ಆ ಲೋಹದ ದೈತ್ಯ ಸಾಗಿಹೋಗುವಾಗ ಗಾಳಿಯ ವೇಗಕ್ಕೆ ಮೈಯೆಲ್ಲ ಜುಂ ಎನ್ನುತ್ತದೆ. ಕಿಟಕಿಯಿಂದ ಮುಖ ಹಾಕಿದ ಪ್ಯಾಸೆಂಜರ್‌ಗಳು ಹೊರಗಿರುವ ಪ್ರವಾಸಿಗರಿಗೆ ಕೈ ಬೀಸುತ್ತಾರೆ, ಹೊರಗಿರುವವರು ಅವರಿಗೆ ‘ಚಿಯರ್ಸ್’ ಎನ್ನುತ್ತಾರೆ. ಅದು ಕೇವಲ ಒಂದು ಪಯಣವಲ್ಲ, ಅದೊಂದು ಮುಖಾಮುಖಿ. ಟ್ರೇನ್‌ ಹೋದ ಮರುಕ್ಷಣವೇ, ಯಾರಿಗೂ ಏನೂ ಆಗಿಲ್ಲ ಎನ್ನುವಂತೆ ಮತ್ತೆ ಕುರ್ಚಿಗಳು ಹಳಿಯ ಪಕ್ಕಕ್ಕೆ ಬರುತ್ತವೆ, ಕಾಫಿ ಕಪ್‌ಗಳಿಂದ ಆವಿ ಏರತೊಡಗುತ್ತದೆ. ಬದುಕು ಮತ್ತೆ ಎಂದಿನಂತೆ ಹರಿಯತೊಡಗುತ್ತದೆ.

ವಿಯೆಟ್ನಾಮ್ ಮಾಡಿರುವ ದೊಡ್ಡ ಸಾಹಸವೆಂದರೆ, ಅವರು ಈ ತಾಂತ್ರಿಕ ಸವಾಲನ್ನು ಬಡತನದ ಅಥವಾ ಕಿರಿಕಿರಿಯ ಸಂಕೇತವಾಗಿ ನೋಡದೇ, ಅದನ್ನು ತಮ್ಮ ಸಂಸ್ಕೃತಿಯ ಭಾಗವಾಗಿಸಿಕೊಂಡಿದ್ದು. ನಮ್ಮ ದೇಶದಲ್ಲೂ ಇಂಥ ಹಳಿಗಳ ಪಕ್ಕದ ಬದುಕುಗಳಿವೆ, ಆದರೆ ಅವುಗಳನ್ನು ನಾವು ‘ಸ್ಲಂ’ ಅಥವಾ ಯಾರಿಗೂ ಬೇಡದ ಪ್ರದೇಶಗಳೆಂದು ಮೂಲೆಗುಂಪು ಮಾಡಿದ್ದೇವೆ ಅಥವಾ ಅತ್ತ ಸ್ವಲ್ಪವೂ ಗಮನವನ್ನೇ ನೀಡಿಲ್ಲ. ಆದರೆ ಹನೋಯಿಯ ಜನ ಆ ಹಳಿಯನ್ನೇ ತಮ್ಮ ಹಣೆಬರಹವನ್ನಾಗಿ ಮಾಡಿಕೊಂಡಿದ್ದಾರೆ. ಅಲ್ಲಿನ ಕಿರಿದಾದ ಮನೆಗಳ ಮುಂಭಾಗವನ್ನೇ ಕಲಾತ್ಮಕ ಕೆಫೆಗಳನ್ನಾಗಿ ಪರಿವರ್ತಿಸಿದ್ದಾರೆ. ಸಾಂಪ್ರದಾಯಿಕ ವಿಯೆಟ್ನಾಮೀಸ್ ‘ಎಗ್ ಕಾಫಿ’ (Egg Coffee) ಹೀರಬಂದ ಪ್ರವಾಸಿಗರಿಗೆ ಹಳಿಯ ಪಕ್ಕದಲ್ಲಿ ಕುಳಿತುಕೊಳ್ಳುವುದೇ ಒಂದು ಅಪೂರ್ವ ಅನುಭವ. ಅವರು ಹಳಿಗಳನ್ನು ಹಸನುಗೊಳಿಸಿದ್ದಾರೆ, ಸುತ್ತಲಿನ ಗೋಡೆಗಳಿಗೆ ತಿಳಿ ಬಣ್ಣ ಬಳಿದು, ರಾತ್ರಿಯಾಗುತ್ತಲೇ ರಂಗುರಂಗಿನ ಲಾಂಟರ್ನ್‌ಗಳನ್ನು (ಕಾಗದದ ದೀಪಗಳು) ತೂಗುಹಾಕಿ ಇಡೀ ಗಲ್ಲಿಯನ್ನು ಮಾಯಾಲೋಕದಂತೆ ಕಂಗೊಳಿಸುವಂತೆ ಮಾಡಿದ್ದಾರೆ.

Untitled design (77)

ನಿಜ ಹೇಳಬೇಕೆಂದರೆ, ಟ್ರೇನ್‌ ಸ್ಟ್ರೀಟ್ ಕೇವಲ ಇಟ್ಟಿಗೆ, ಸಿಮೆಂಟ್ ಮತ್ತು ಕಬ್ಬಿಣದ ಹಳಿಗಳ ಕಥೆಯಲ್ಲ. ಅದು ಮನುಷ್ಯನ ಕಲ್ಪನಾಶಕ್ತಿ ಬದುಕನ್ನು ಹೇಗೆ ಮರುಸೃಷ್ಟಿಸಬಲ್ಲದು ಎಂಬುದಕ್ಕೆ ಅತ್ಯುತ್ತಮ ಉದಾಹರಣೆ. ನಗರದ ಹಳೆಯ ಮತ್ತು ಸವಕಲು ಭಾಗಗಳನ್ನು ನಾವು ಸಾಮಾನ್ಯವಾಗಿ 'ನವೀಕರಣ'ದ ಹೆಸರಿನಲ್ಲಿ ಕೆಡವಿ ಹಾಕುತ್ತೇವೆ, ಅಲ್ಲಿ ದೊಡ್ಡ ದೊಡ್ಡ ಮಾಲ್‌ಗಳನ್ನು ಕಟ್ಟುತ್ತೇವೆ. ಆದರೆ ಹನೋಯಿ ತನ್ನತನವನ್ನು ಉಳಿಸಿಕೊಂಡೇ ಆಧುನಿಕ ಜಗತ್ತನ್ನು ಆಕರ್ಷಿಸಿದೆ. ಅಲ್ಲಿನ ಪ್ರತಿ ಇಂಚು ಜಾಗದಲ್ಲೂ ಹಳೆಯ ಕಾಲದ ಕಥೆಗಳಿವೆ. ಗೋಡೆಗಳ ಮೇಲೆ ಬರೆದ ರಂಗುರಂಗಿನ ಕಲಾಕೃತಿಗಳು, ಕಿಟಕಿಗಳ ಸಂದಿಯಿಂದ ಇಣುಕುವ ಹಸಿರು ಗಿಡಗಳು, ಪುಟ್ಟ ಕನ್ನಡಿಗಳು ಎಲ್ಲವೂ ಪ್ರವಾಸಿಗನ ಕಣ್ಣಿಗೆ ಹಬ್ಬ. ಅಲ್ಲಿಗೆ ಬರುವ ಜನ ಕೇವಲ ಟ್ರೇನ್‌ ನೋಡಲು ಬರುವುದಿಲ್ಲ. ಬದಲಿಗೆ ಆ ರೈಲಿನ ವೇಗ ಮತ್ತು ಅಲ್ಲಿನ ಬದುಕಿನ ನಿಧಾನಗತಿಯ ನಡುವಿನ ಆ ಅಪೂರ್ವ ತಾಳಬದ್ಧತೆಯನ್ನು ಅನುಭವಿಸಲು ಬರುತ್ತಾರೆ.

ಸೋಮವಾರದಿಂದ ಶುಕ್ರವಾರದ ತನಕ ಸಾಮಾನ್ಯವಾಗಿ ದಿನಕ್ಕೆ ಎರಡರಿಂದ ಮೂರು ರೈಲುಗಳು ಮಾತ್ರ ಈ ಕಿರಿದಾದ ಗಲ್ಲಿಯ ಮೂಲಕ ಹಾದುಹೋಗುತ್ತವೆ. ಇವು ಹೆಚ್ಚಾಗಿ ಸಂಜೆ ಅಥವಾ ರಾತ್ರಿಯ ಅವಧಿಯಲ್ಲಿರುತ್ತವೆ. ಉದಾಹರಣೆಗೆ, ಸಂಜೆ ಏಳು, ರಾತ್ರಿ ಏಳು ಮುಕ್ಕಾಲು, ಎಂಟೂವರೆ ಮತ್ತು ಒಂಬತ್ತೂವರೆ ತನಕ ಓಡುತ್ತವೆ. ವಾರಾಂತ್ಯದಲ್ಲಿ (ಶನಿವಾರ ಮತ್ತು ಭಾನುವಾರ) ಬೆಳಗಿನ ಜಾವದಿಂದಲೇ ರೈಲುಗಳ ಸಂಚಾರ ಆರಂಭವಾಗುತ್ತದೆ. ದಿನಕ್ಕೆ ಸುಮಾರು ಐದರಿಂದ ಏಳು ಬಾರಿ ರೈಲುಗಳು ಇಲ್ಲಿ ಹಾದುಹೋಗುತ್ತವೆ. ರೈಲ್ವೇಯ ಅಧಿಕೃತ ಸಮಯಗಳು ಆಗಾಗ ಬದಲಾಗುತ್ತಿರುತ್ತವೆ. ಸ್ಥಳೀಯ ಹವಾಮಾನ ಅಥವಾ ತಾಂತ್ರಿಕ ಕಾರಣಗಳಿಂದ ರೈಲುಗಳು ತಡವಾಗಿ ಬರುವ ಸಾಧ್ಯತೆಯೂ ಇರುತ್ತದೆ. ಆದ್ದರಿಂದ ನೀವು ಹೋಗುವ ದಿನದ ನಿಖರ ಸಮಯವನ್ನು ಅಲ್ಲಿನ ಸ್ಥಳೀಯ ಕೆಫೆ ಮಾಲೀಕರಲ್ಲಿ ಅಥವಾ ಹೊಟೇಲ್‌ನಲ್ಲಿ ಮತ್ತೊಮ್ಮೆ ಖಚಿತಪಡಿಸಿಕೊಳ್ಳುವುದು ಒಳ್ಳೆಯದು.

ಈ ರೋಮಾಂಚಕ ಅನುಭವವನ್ನು ನಿಮ್ಮದಾಗಿಸಿಕೊಳ್ಳಬೇಕಾದರೆ, ರೈಲು ಬರುವ ನಿಖರ ಸಮಯಕ್ಕಿಂತ ಕನಿಷ್ಠ ಅರ್ಧ ಗಂಟೆ ಅಥವಾ ಮುಕ್ಕಾಲು ಗಂಟೆ ಮುಂಚಿತವಾಗಿ ಅಲ್ಲಿಗೆ ತಲುಪುವುದು ಅತ್ಯಗತ್ಯ. ಈ ಮುಂಜಾಗ್ರತೆ ಮತ್ತು ಸಮಯ ಪ್ರಜ್ಞೆ ನಿಮ್ಮ ಇಡೀ ಭೇಟಿಯ ಮೌಲ್ಯವನ್ನು ಹೆಚ್ಚಿಸುತ್ತದೆ. ಮುಂಚಿತವಾಗಿ ಹೋಗುವುದರಿಂದ ಆಗುವ ಪ್ರಮುಖ ಪ್ರಯೋಜನವೆಂದರೆ ಸ್ಥಳ ಕಾಯ್ದಿರಿಸಿಕೊಳ್ಳುವುದು. ರೈಲು ಬರುವ ಕೆಲವೇ ನಿಮಿಷಗಳ ಮುನ್ನ ಹೋದರೆ ಇಡೀ ಗಲ್ಲಿ ಪ್ರವಾಸಿಗರಿಂದ ತುಂಬಿಹೋಗಿರುತ್ತದೆ ಮತ್ತು ಅಲ್ಲಿನ ಕೆಫೆಗಳಲ್ಲಿ ನಿಮಗೆ ಕುಳಿತುಕೊಳ್ಳಲು ಉತ್ತಮ ಸೀಟು ಸಿಗುವುದಿಲ್ಲ. ಅದೇ ನೀವು ಮುಕ್ಕಾಲು ಗಂಟೆ ಮುಂಚಿತವಾಗಿ ಹೋದರೆ, ಹಳಿಯ ಪಕ್ಕದಲ್ಲೇ ಇರುವ ಸುರಕ್ಷಿತವಾದ, ರೈಲು ಹಾದುಹೋಗುವುದನ್ನು ಅತ್ಯಂತ ಹತ್ತಿರದಿಂದ ಕಣ್ಣುಂಬಿಕೊಳ್ಳಬಹುದಾದ ಅತ್ಯುತ್ತಮ ಜಾಗವನ್ನು ನೀವೇ ಆರಿಸಿಕೊಂಡು ನಿರಾಳವಾಗಿ ಕುಳಿತುಕೊಳ್ಳಬಹುದು.

ಇನ್ನೊಂದು ಮುಖ್ಯ ಕಾರಣ ಫೊಟೋ ಶೂಟ್. ರೈಲು ಬರುವ ಮುನ್ನ ಹಳಿಗಳು ಸಂಪೂರ್ಣವಾಗಿ ಖಾಲಿ ಇರುತ್ತವೆ. ಆಗ ಗಲ್ಲಿಯ ನಿಜವಾದ ಸೌಂದರ್ಯ, ಹಳಿಯ ಇಕ್ಕೆಲಗಳಲ್ಲಿರುವ ರಂಗುರಂಗಿನ ಕೆಫೆಗಳು, ಸಾಂಪ್ರದಾಯಿಕ ಕಾಗದದ ದೀಪಗಳು ಮತ್ತು ಹಳಿಯ ಹಿನ್ನೆಲೆಯಲ್ಲಿ ಸುಂದರವಾದ ಇನ್‌ಸ್ಟಾಗ್ರಾಮ್ ಫೊಟೋಗಳನ್ನು ತೆಗೆದುಕೊಳ್ಳಲು ನಿಮಗೆ ಸಾಕಷ್ಟು ಸಮಯ ಮತ್ತು ಏಕಾಂತ ಸಿಗುತ್ತದೆ. ರೈಲು ಬಂದ ನಂತರದ ಕ್ಷಣಗಳು ಕೇವಲ ರೋಮಾಂಚನ ಮತ್ತು ಸುರಕ್ಷತೆಗೆ ಮೀಸಲಾಗಿರುತ್ತವೆ. ಲೋಹದ ದೈತ್ಯ ನಿಮ್ಮ ಮೂಗಿನ ತುದಿಯಲ್ಲಿ ಹಾದುಹೋಗುವಾಗ ಫೊಟೋ ತೆಗೆಯಲು ಕೇವಲ ಕೆಲವು ಸೆಕೆಂಡುಗಳು ಮಾತ್ರ ಸಿಗುವುದರಿಂದ, ಅದಕ್ಕಿಂತ ಮುಂಚಿನ ಸಮಯವೇ ಕಲ್ಪನಾಶಕ್ತಿಯ ಫೊಟೋಗಳಿಗೆ ಪ್ರಶಸ್ತವಾಗಿರುತ್ತದೆ. ಹೀಗಾಗಿ, ಧಾವಂತವಿಲ್ಲದೇ ಹನೋಯಿಯ ಈ ಮಾಯಾಲೋಕವನ್ನು ಆಸ್ವಾದಿಸಲು ಸ್ವಲ್ಪ ಮುಂಚಿತವಾಗಿಯೇ ಹೋಗಿ, ಒಂದು ಕಪ್ 'ಎಗ್ ಕಾಫಿ' ಆರ್ಡರ್ ಮಾಡಿ ಆ ಕ್ಷಣವನ್ನು ಎಂಜಾಯ್ ಮಾಡುವುದು ಜಾಣತನ.

ಈ ‘ಟ್ರೇನ್‌ ಸ್ಟ್ರೀಟ್’ ನೋಡಲು ಯಾವುದೇ ಅಧಿಕೃತ ಪ್ರವೇಶ ಶುಲ್ಕ (Entry Fee) ಇಲ್ಲ ಹಾಗೂ ಮುಂಗಡವಾಗಿ ಟಿಕೆಟ್ ಬುಕ್ ಮಾಡುವ ರಿಸರ್ವೇಶನ್ ಕಿರಿಕಿರಿಯೂ ಇಲ್ಲ ಎನ್ನುವುದು ನಿಜ. ಆದರೆ, ಮುಕ್ತವಾಗಿ ಹೋಗಿ ಹಳಿಯ ಮೇಲೆ ನಿಲ್ಲುತ್ತೇವೆ ಎಂದರೆ ಈಗ ಅದು ಸಾಧ್ಯವಿಲ್ಲ. ಇತ್ತೀಚಿನ ವರ್ಷಗಳಲ್ಲಿ ಸುರಕ್ಷತೆಯ ಕಾರಣಗಳಿಗಾಗಿ ವಿಯೆಟ್ನಾಮ್ ಸರಕಾರವು ಪ್ರವಾಸಿಗರು ಸುಮ್ಮನೆ ಹಳಿಯ ಮೇಲೆ ಅಡ್ಡಾಡುವುದನ್ನು, ಸೆಲ್ಫೀ ತೆಗೆದುಕೊಳ್ಳುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಿದೆ. ಈ ಹಿನ್ನೆಲೆಯಲ್ಲಿ ಅಲ್ಲಿ ಕೆಲವು ಪ್ರಾಯೋಗಿಕ ಮತ್ತು ಸ್ವಾರಸ್ಯಕರ ನಿಯಮಗಳು ಜಾರಿಗೆ ಬಂದಿವೆ. ಈ ಗಲ್ಲಿಯ ಪ್ರವೇಶ ದ್ವಾರಗಳಲ್ಲಿ ಸ್ಥಳೀಯ ಕಾವಲುಗಾರರು ಅಥವಾ ಪೊಲೀಸರು ಕಾಯುತ್ತಿರುತ್ತಾರೆ. ನೀವು ಸುಮ್ಮನೆ ಒಳಗೆ ಹೋಗಲು ಅವರು ಬಿಡುವುದಿಲ್ಲ. ಆದರೆ, ಅಲ್ಲಿಗೆ ಭೇಟಿ ನೀಡಲು ಇರುವ ಏಕೈಕ ಮತ್ತು ಅತ್ಯಂತ ಸರಳ ಉಪಾಯವೆಂದರೆ ‘ಕೆಫೆ ಗ್ರಾಹಕರಾಗುವುದು’. ಹಳಿಯ ಇಕ್ಕೆಲಗಳಲ್ಲಿರುವ ಸ್ಥಳೀಯ ಕೆಫೆ ಮಾಲೀಕರು ಪ್ರವೇಶ ದ್ವಾರದ ಬಳಿಯೇ ಇರುತ್ತಾರೆ. ನೀವು ಅವರ ಕೆಫೆಗೆ ಬಂದು ಕಾಫಿ ಅಥವಾ ಡ್ರಿಂಕ್ಸ್ ಕುಡಿಯುವುದಾಗಿ ಒಪ್ಪಿಕೊಂಡರೆ, ಅವರೇ ಕಾವಲುಗಾರರ ಸಮ್ಮುಖದಲ್ಲಿ ನಿಮ್ಮನ್ನು ಜವಾಬ್ದಾರಿಯಿಂದ ಸುರಕ್ಷಿತವಾಗಿ ಒಳಗೆ ಕರೆದುಕೊಂಡು ಹೋಗುತ್ತಾರೆ. 'ಇದು ಸರಕಾರದ ಕಟ್ಟುನಿಟ್ಟಿನ ನಿಯಮಕ್ಕೂ ಗೌರವ ಕೊಡುವ, ಅದೇ ಸಮಯದಲ್ಲಿ ಸ್ಥಳೀಯರ ಬದುಕಿಗೂ ಆಸರೆಯಾಗುವ ಒಂದು ಅಪೂರ್ವ ಹೊಂದಾಣಿಕೆ.'

ಹಾಗಾದರೆ ಇದಕ್ಕೆ ತಗಲುವ ಖರ್ಚು ಎಷ್ಟು? ನೀವು ಕೆಫೆಯಲ್ಲಿ ಕುಳಿತುಕೊಳ್ಳಲು ಯಾವುದೇ ಪ್ರತ್ಯೇಕ ಚಾರ್ಜ್ ಕೊಡಬೇಕಾಗಿಲ್ಲ. ನೀವು ಆರ್ಡರ್ ಮಾಡುವ ಒಂದು ಕಪ್ ಕಾಫಿ ಅಥವಾ ಪಾನೀಯದ ಬೆಲೆಯೇ ನಿಮ್ಮ ಪ್ರವೇಶದ ಹಕ್ಕು. ಅಲ್ಲಿನ ಸಾಂಪ್ರದಾಯಿಕ 'ಎಗ್ ಕಾಫಿ' ಅಥವಾ ಒಂದು ಲೋಕಲ್ ಬಿಯರ್ ಬೆಲೆ ಭಾರತೀಯ ರುಪಾಯಿಗಳಲ್ಲಿ ಅಬ್ಬಬ್ಬ ಎಂದರೆ ನೂರರಿಂದ ಇನ್ನೂರು ಮಾತ್ರ! ಕೇವಲ ಇಷ್ಟು ಸಣ್ಣ ಮೊತ್ತವನ್ನು ಖರ್ಚು ಮಾಡಿ, ಹಳಿಯ ಪಕ್ಕದಲ್ಲೇ ಕುಳಿತು, ಜಗತ್ತಿನ ಅತ್ಯಂತ ರೋಮಾಂಚಕ ದೃಶ್ಯವನ್ನು ಕಣ್ಣುತುಂಬಿಕೊಳ್ಳುವ ಅವಕಾಶ ಸಿಗುತ್ತದೆ ಎಂದರೆ ಅದು ನಿಜಕ್ಕೂ ಲಾಭದಾಯಕ ಒಪ್ಪಂದವೇ ಸರಿ. ಈ ನಿಯಮದಿಂದಾಗಿ ಪ್ರವಾಸಿಗರಿಗೆ ಕುಳಿತುಕೊಳ್ಳಲು ಒಂದು ಸುರಕ್ಷಿತ ಜಾಗ ಸಿಗುತ್ತದೆ, ಇತ್ತ ಹಳಿಗಳ ಪಕ್ಕದಲ್ಲೇ ಬದುಕು ಕಟ್ಟಿಕೊಂಡಿರುವ ಸ್ಥಳೀಯ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ನೇರವಾದ ಆದಾಯವೂ ಸಿಗುತ್ತದೆ. ಕಾಂಕ್ರೀಟ್ ಕೋಟೆಗಳನ್ನು ಕಟ್ಟದೇ ಪ್ರವಾಸೋದ್ಯಮವನ್ನು ಸ್ಥಳೀಯರ ಉದ್ಯೋಗದ ಜತೆ ಹೇಗೆ ತಳಕುಹಾಕಬಹುದು ಎಂಬುದಕ್ಕೆ ಈ ಪ್ರಾಯೋಗಿಕ ನಿಯಮವೇ ಒಂದು ಅತ್ಯುತ್ತಮ ಉದಾಹರಣೆ.

Untitled design (80)

ಈ ‘ಟ್ರೇನ್‌ ಸ್ಟ್ರೀಟ್’ ಕೇವಲ ಒಂದು ಪ್ರವಾಸಿ ತಾಣವಲ್ಲ, ಅದೊಂದು ಸಜೀವ, ಧಗಧಗಿಸುವ ರೈಲ್ವೇ ಟ್ರ್ಯಾಕ್. ಸಾವು ಮತ್ತು ಬದುಕಿನ ನಡುವೆ ಕೇವಲ ಕೆಲವು ಇಂಚುಗಳಷ್ಟೇ ಅಂತರವಿರುವ ಈ ಜಾಗದಲ್ಲಿ ಒಂದು ಸಣ್ಣ ನಿರ್ಲಕ್ಷ್ಯವೂ ಭಾರಿ ಅಪಾಯಕ್ಕೆ ಕಾರಣವಾಗಬಹುದು. ಅಲ್ಲಿನ ರೋಮಾಂಚನವನ್ನು ಆಸ್ವಾದಿಸುವ ಉತ್ಸಾಹದಲ್ಲಿ ಸುರಕ್ಷತೆಯನ್ನು ಮರೆಯಬಾರದು. ಅದಕ್ಕಾಗಿಯೇ ಅಲ್ಲಿನ ಸ್ಥಳೀಯರು ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿದ್ದಾರೆ. ರೈಲು ಹಳಿಯ ಇಕ್ಕೆಲಗಳಲ್ಲಿ, ಅಂದರೆ ಕೆಫೆಗಳ ಮುಂಭಾಗದಲ್ಲಿ ಹಳದಿ ಅಥವಾ ಬಿಳಿ ಬಣ್ಣದ ಸುರಕ್ಷತಾ ರೇಖೆಯನ್ನು (Safety Line) ಎಳೆಯಲಾಗಿರುತ್ತದೆ. ಈ ಗೆರೆ ಕೇವಲ ಬಣ್ಣದ ಲೇಪನವಲ್ಲ, ಅದು ನಿಮ್ಮ ಜೀವದ ರಕ್ಷಣಾ ಕವಚ. ರೈಲು ಬರುವ ಸಮಯ ಹತ್ತಿರವಾಗುತ್ತಿದ್ದಂತೆ ಪ್ರತಿಯೊಬ್ಬರೂ ಆ ರೇಖೆಯ ಹಿಂಭಾಗದಲ್ಲೇ ನಿಲ್ಲಬೇಕು. ರೈಲಿನ ಎಂಜಿನ್ ಮತ್ತು ಬೋಗಿಗಳು ಹಳಿಗಿಂತಲೂ ಇಕ್ಕೆಲಗಳಲ್ಲಿ ಸ್ವಲ್ಪ ಹೊರಗೆ ಚಾಚಿಕೊಂಡಿರುತ್ತವೆ. ಹೀಗಾಗಿ, ರೈಲು ಬರುವಾಗ ಯಾವುದೇ ಕಾರಣಕ್ಕೂ ಆ ಗೆರೆಯನ್ನು ದಾಟಿ ಒಂದು ಇಂಚು ಕೂಡ ಮುಂದೆ ಹೋಗಬಾರದು.

ದೂರದಲ್ಲಿ ರೈಲು ಬರುವ ಸೈರನ್ ಧ್ವನಿ ಕೇಳಿಸುತ್ತಿದ್ದಂತೆ ಆ ಕಿರಿದಾದ ಗಲ್ಲಿಯಲ್ಲಿ ಒಂದು ನಿಶ್ಶಬ್ದದ ಜಾಗೃತಿ ಉಂಟಾಗುತ್ತದೆ. ಅಲ್ಲಿಯವರೆಗೆ ನಿರಾಳವಾಗಿದ್ದ ಕೆಫೆಯ ಮಾಲೀಕರು ತಕ್ಷಣ ಕಾರ್ಯಪ್ರವೃತ್ತರಾಗುತ್ತಾರೆ. ಹಳಿಯ ಮೇಲಿದ್ದ ಕುರ್ಚಿಗಳು, ಮೇಜುಗಳು, ಸಣ್ಣ ಪುಟ್ಟ ಬೋರ್ಡುಗಳನ್ನು ಸೆಕೆಂಡುಗಳ ಒಳಗೆ ಒಳಗಡೆ ಎಳೆದುಕೊಳ್ಳುತ್ತಾರೆ. ಆ ಕ್ಷಣದಲ್ಲಿ ಅವರು ನಿಮ್ಮನ್ನು ಗೋಡೆಗೆ ಅಂಟಿ ನಿಲ್ಲುವಂತೆ ಅಥವಾ ಕೆಫೆಯ ಒಳಗಿನ ಮೆಟ್ಟಿಲುಗಳ ಮೇಲೆ ಹತ್ತುವಂತೆ ಸೂಚಿಸುತ್ತಾರೆ. ಅವರು ಹನೋಯಿಯ ಆ ಹಳಿಗಳ ಮೇಲಣ ಬದುಕನ್ನು ದಿನನಿತ್ಯ ನೋಡಿದವರು. ಆದ್ದರಿಂದ, ಆ ರೋಮಾಂಚನದ ಕ್ಷಣದಲ್ಲಿ ಹಟ ಮಾಡದೇ, ಅವರು ಹೇಳಿದ ಪ್ರತಿಯೊಂದು ಸೂಚನೆಯನ್ನೂ ಶಿಸ್ತಿನಿಂದ ಪಾಲಿಸಬೇಕು.

ಇವತ್ತಿನ ಡಿಜಿಟಲ್ ಜಗತ್ತಿನಲ್ಲಿ ಪ್ರತಿಯೊಂದು ಕ್ಷಣವನ್ನೂ ಫೋನ್ ಕ್ಯಾಮೆರಾದಲ್ಲಿ ಸೆರೆಹಿಡಿಯುವ ಹಪಾಹಪಿ ಎಲ್ಲರಲ್ಲೂ ಇರುತ್ತದೆ. ಆದರೆ ಟ್ರೇನ್‌ ಸ್ಟ್ರೀಟ್‌ನಲ್ಲಿ ಈ ‘ಸೆಲ್ಫಿ ಹುಚ್ಚು’ ಪ್ರಾಣಕ್ಕೆ ಕುತ್ತು ತರಬಹುದು. ರೈಲು ತೀರಾ ಹತ್ತಿರ ಬಂದಾಗ ಉತ್ತಮ ಆಂಗಲ್ ಸಿಗುತ್ತದೆ ಎಂಬ ಭ್ರಮೆಯಿಂದ ಫೋನ್ ಅಥವಾ ಕ್ಯಾಮೆರಾವನ್ನು ಹಳಿಯ ಕಡೆಗೆ ಚಾಚಬಾರದು. ರೈಲು ಅತಿ ವೇಗವಾಗಿ ಧಾವಿಸಿ ಬರುವಾಗ ಉಂಟಾಗುವ ಗಾಳಿಯ ತೀವ್ರ ಒತ್ತಡಕ್ಕೆ ಕ್ಯಾಮೆರಾ ಅಥವಾ ಫೋನ್ ಕೈಯಿಂದ ಹಾರಿ ಹೋಗಬಹುದು ಅಥವಾ ರೈಲಿನ ಯಾವುದಾದರೂ ಭಾಗಕ್ಕೆ ನಿಮ್ಮ ಕೈ ಸಿಲುಕುವ ಭಾರಿ ಅಪಾಯವಿರುತ್ತದೆ. ಕಣ್ಣಿನ ನೋಟಕ್ಕಿಂತ ದೊಡ್ಡ ಕ್ಯಾಮೆರಾ ಮತ್ತೊಂದಿಲ್ಲ ಎಂಬುದನ್ನು ಮರೆಯುವಂತಿಲ್ಲ.

ಒಂದು ವೇಳೆ ನೀವು ಕುಟುಂಬದೊಂದಿಗೆ, ಅದರಲ್ಲೂ ಸಣ್ಣ ಮಕ್ಕಳೊಂದಿಗೆ 'ಟ್ರೇನ್‌ ಸ್ಟ್ರೀಟ್'ಗೆ ಭೇಟಿ ನೀಡುತ್ತಿದ್ದರೆ ನಿಮ್ಮ ಜವಾಬ್ದಾರಿ ಹತ್ತರಷ್ಟಾಗುತ್ತದೆ. ರೈಲು ಬರುವ ಮುನ್ನ ಮಕ್ಕಳ ಕೈಯನ್ನು ಗಟ್ಟಿಯಾಗಿ ಹಿಡಿದುಕೊಳ್ಳಬೇಕು. ಭಾರಿ ಗಾತ್ರದ ಲೋಹದ ದೈತ್ಯ ಅಷ್ಟು ಹತ್ತಿರದಿಂದ, ಭೀಕರ ಶಬ್ದದೊಂದಿಗೆ ಗಾಳಿಯನ್ನು ಸೀಳಿಕೊಂಡು ಹಾದುಹೋಗುವಾಗ ಮಕ್ಕಳು ಹೌಹಾರಬಹುದು ಅಥವಾ ಭಯದಿಂದ ಓಡಲು ಯತ್ನಿಸಬಹುದು. ಆ ಕ್ಷಣದಲ್ಲಿ ಮಕ್ಕಳು ದಿಕ್ಕೆಡದಂತೆ ಅವರನ್ನು ನಿಮ್ಮ ಜತೆಯಲ್ಲೇ ಸುರಕ್ಷಿತವಾಗಿ ಇರಿಸಿಕೊಳ್ಳುವುದು ಪೋಷಕರ ಕರ್ತವ್ಯ.

ನೆನಪಿಡಬೇಕಾದ ಒಂದು ಮುಖ್ಯ ಸಂಗತಿಯೆಂದರೆ - ಅದು ಕೇವಲ ನಮಗೊಂದು ಪ್ರವಾಸಿ ತಾಣ, ಆದರೆ ಅಲ್ಲಿನ ಜನರಿಗೆ ಅದು ಹಗಲು-ರಾತ್ರಿಯ ವಾಸಸ್ಥಳ. ಹಳಿಯ ಇಕ್ಕೆಲಗಳಲ್ಲಿರುವ ಮನೆಗಳು ಅವರ ಖಾಸಗಿ ಜಗತ್ತು. ಪ್ರವಾಸಿಗರನ್ನು ಆಕರ್ಷಿಸಲು ಅವರು ತಮ್ಮ ಮನೆಗಳ ಮುಂಭಾಗವನ್ನು ರಂಗುರಂಗಿನ ಹೂಕುಂಡಗಳು, ಸಾಂಪ್ರದಾಯಿಕ ಕಲಾಕೃತಿಗಳಿಂದ ಅಲಂಕರಿಸಿರುತ್ತಾರೆ. ಫೊಟೋ ತೆಗೆದುಕೊಳ್ಳುವ ಗಡಿಬಿಡಿಯಲ್ಲಿ ಅವರ ಹೂಕುಂಡಗಳನ್ನು ಉರುಳಿಸುವುದು, ಗೋಡೆಗಳ ಮೇಲಿನ ಕಲೆಗೆ ಹಾನಿ ಮಾಡುವುದು ಅಥವಾ ಅವರ ಅನುಮತಿ ಇಲ್ಲದೇ ಅವರ ಮನೆಗಳ ಒಳಗೆ ಕ್ಯಾಮೆರಾ ಇಣುಕಿಸುವುದು ತಪ್ಪು. ಅವರ ಖಾಸಗೀತನ ಮತ್ತು ಸಂಸ್ಕೃತಿಗೆ ಧಕ್ಕೆ ತರದಂತೆ ನಾಗರಿಕ ಪ್ರಜ್ಞೆಯಿಂದ ವರ್ತಿಸಬೇಕು. ಬದುಕಿನ ಅತ್ಯಂತ ಅಪೂರ್ವ ಅನುಭವಗಳು ಸಿಗುವುದು ನಾವು ಶಿಸ್ತು ಮತ್ತು ಸುರಕ್ಷತೆಯನ್ನು ಗೌರವಿಸಿದಾಗ ಮಾತ್ರ. ವಿಯೆಟ್ನಾಮ್‌ನ ಟ್ರೇನ್‌ ಸ್ಟ್ರೀಟ್ ಕೇವಲ ರೋಮಾಂಚನವನ್ನಷ್ಟೇ ಅಲ್ಲ, ಸಾಹಸದ ನಡುವೆಯೂ ಬದುಕನ್ನು ಹೇಗೆ ನಿಯಮಬದ್ಧವಾಗಿ ಮುನ್ನಡೆಸಬಹುದು ಎಂಬ ಶಿಸ್ತಿನ ಪಾಠವನ್ನೂ ನಮಗೆ ಕಲಿಸಿಕೊಡುತ್ತದೆ.

ಪ್ರವಾಸಿ ತಾಣ ಎಂದರೆ ಕೋಟ್ಯಂತರ ರುಪಾಯಿ ವೆಚ್ಚದ ಕಾಂಕ್ರೀಟ್ ಮಹಲುಗಳು, ಥೀಮ್ ಪಾರ್ಕ್‌ಗಳು ಅಥವಾ ಐಷಾರಾಮಿ ರೆಸಾರ್ಟ್‌ಗಳು ಎಂಬ ನಂಬಿಕೆಯಿದೆ. ಆದರೆ ವಿಯೆಟ್ನಾಮ್ ಇದನ್ನು ಸಂಪೂರ್ಣ ಸುಳ್ಳು ಮಾಡಿದೆ. ಟ್ರೇನ್‌ ಸ್ಟ್ರೀಟ್‌ನಲ್ಲಿ ಯಾವುದೇ ಅದ್ದೂರಿ ಹೂಡಿಕೆ ಇಲ್ಲ. ಅಲ್ಲಿರುವುದು ದಿನನಿತ್ಯ ಸಾಗುವ ಹಳೇ ಮಾದರಿಯ ಟ್ರೇನ್‌, ಹಳೆಯ ಕಾಲದ ಕಟ್ಟಡಗಳು ಮತ್ತು ಕಿರಿದಾದ ಹಳಿ. ಅವರು ಮಾಡಿದ್ದು ಇಷ್ಟೇ - ಆ ಗಲ್ಲಿಯನ್ನು ಸ್ವಚ್ಛವಾಗಿಟ್ಟುಕೊಂಡರು. ಕಸದ ರಾಶಿ ಬೀಳುತ್ತಿದ್ದ ಜಾಗಕ್ಕೆ ಬಣ್ಣದ ಲೇಪನ ಕೊಟ್ಟರು. ಗೋಡೆಗಳ ಮೇಲೆ ಸ್ಥಳೀಯ ಸಂಸ್ಕೃತಿಯನ್ನು ಬಿಂಬಿಸುವ ಸುಂದರ ಚಿತ್ರಗಳನ್ನು ಬಿಡಿಸಿದರು. ಕಿಟಕಿಗಳ ಪಕ್ಕದಲ್ಲಿ ಪುಟ್ಟ ಹೂಕುಂಡಗಳನ್ನು ತೂಗುಹಾಕಿದರು. ಅಂದರೆ, ಕೃತಕವಾಗಿ ಹೊಸತನ್ನು ಸೃಷ್ಟಿಸುವ ಬದಲು, ತಮ್ಮಲ್ಲಿದ್ದ ಹಳೆಯ ಮತ್ತು ಸಹಜ ಪರಿಸರಕ್ಕೆ 'ಕಲಾತ್ಮಕ ಸ್ಪರ್ಶ' ನೀಡಿದರು. ಬದುಕಿನ ಸಹಜತೆಯೇ ಅತ್ಯಂತ ದೊಡ್ಡ ಸೌಂದರ್ಯ ಎಂಬುದನ್ನು ತೋರಿಸಿಕೊಟ್ಟರು.

ಸರಕಾರಗಳು ಕೋಟಿ ಕೋಟಿ ಹಣ ಸುರಿದು ದೊಡ್ಡ ದೊಡ್ಡ ಪ್ರವಾಸೋದ್ಯಮ ಯೋಜನೆಗಳನ್ನು ತಂದಾಗ, ಅದರ ಲಾಭ ಸಾಮಾನ್ಯವಾಗಿ ದೊಡ್ಡ ಕಾರ್ಪೊರೆಟ್ ಸಂಸ್ಥೆಗಳು ಅಥವಾ ಹೊssಟೇಲ್ ಮಾಲೀಕರ ಪಾಲಾಗುತ್ತದೆ. ಆದರೆ ಟ್ರೇನ್‌ ಸ್ಟ್ರೀಟ್‌ನಂಥ ಸಣ್ಣ ಪ್ರಯತ್ನಗಳು ತಳಮಟ್ಟದ ಬದುಕನ್ನು ಬದಲಾಯಿಸುತ್ತವೆ. ಅಲ್ಲಿನ ಕೆಫೆಗಳು, ಬಾರ್‌ಗಳು ಮತ್ತು ಸಣ್ಣ ಸಣ್ಣ ಅಂಗಡಿಗಳನ್ನು ನಡೆಸುತ್ತಿರುವುದು ಬೇರೆ ಯಾರೋ ಅಲ್ಲ, ಅದೇ ಹಳಿಯ ಇಕ್ಕೆಲಗಳಲ್ಲಿ ವಾಸಿಸುವ ಬಡ ಹಾಗೂ ಮಧ್ಯಮ ವರ್ಗದ ಸ್ಥಳೀಯ ಜನ. ತಮ್ಮ ಮನೆಯ ಮುಂಭಾಗದ ಪುಟ್ಟ ಜಗಲಿಯನ್ನೇ ಅವರು ಕೆಫೆಯನ್ನಾಗಿ ಬದಲಾಯಿಸಿಕೊಂಡಿದ್ದಾರೆ. ಒಬ್ಬ ತಾಯಿ ಅಲ್ಲಿ ಸಾಂಪ್ರದಾಯಿಕ 'ಎಗ್ ಕಾಫಿ' ತಯಾರಿಸಿ ಮಾರುತ್ತಾಳೆ, ಮತ್ತೊಬ್ಬ ಯುವಕ ಪ್ರವಾಸಿಗರಿಗೆ ಸಣ್ಣ ಸಾಂಪ್ರದಾಯಿಕ ವಸ್ತುಗಳನ್ನು ಮಾರುತ್ತಾನೆ. ಇಲ್ಲಿ ಪ್ರವಾಸಿಗರು ಕೊಡುವ ಪ್ರತಿಯೊಂದು ರುಪಾಯಿಯೂ ನೇರವಾಗಿ ಆ ಬಡ ಕುಟುಂಬದ ಕೈ ಸೇರುತ್ತದೆ. ಯುವಕರು ಉದ್ಯೋಗ ಹುಡುಕಿಕೊಂಡು ಬೇರೆ ನಗರಗಳಿಗೆ ವಲಸೆ ಹೋಗುವ ಅಗತ್ಯವಿಲ್ಲದೇ, ತಮ್ಮ ಮನೆಯ ಮುಂದೆಯೇ ಸ್ವಾಭಿಮಾನದ ಬದುಕು ಕಂಡುಕೊಂಡಿದ್ದಾರೆ. ದೊಡ್ಡ ಕೈಗಾರಿಕೆಗಳಿಗಿಂತ ಇಂಥ ಸೂಕ್ಷ್ಮ ಪ್ರವಾಸೋದ್ಯಮವೇ ದೇಶದ ಆರ್ಥಿಕತೆಗೆ ಅಪ್ಪಟ ಆಸರೆಯಾಗಬಲ್ಲದು.

Untitled design (78)

ಸಾವಿರಾರು ಪ್ರವಾಸಿಗರು ಹಳಿಯ ಮೇಲೆಯೇ ಕುಳಿತು ಕಾಫಿ ಕುಡಿಯುವಾಗ, ಅಲ್ಲಿ ಭಾರಿ ಗಾತ್ರದ ರೈಲು ಹಾದುಹೋಗುತ್ತದೆ ಎಂದರೆ ಅದು ಸಣ್ಣ ಸಾಹಸವಲ್ಲ. ಇಲ್ಲಿ ಯಾವುದೇ ದೊಡ್ಡ ಪೊಲೀಸ್ ಪಡೆಯಾಗಲಿ ಅಥವಾ ಸೈನ್ಯವಾಗಲಿ ಕಾವಲು ಕಾಯುವುದಿಲ್ಲ. ಬದಲಿಗೆ, ಅಲ್ಲಿನ ಶಿಸ್ತು ಮತ್ತು ಸುರಕ್ಷತೆಯನ್ನು ಸ್ಥಳೀಯರೇ ಹೆಗಲಿಗೆ ಎತ್ತಿಕೊಂಡಿದ್ದಾರೆ. ಈ ಸಾಮೂಹಿಕ ಜವಾಬ್ದಾರಿ ಮತ್ತು ಸುರಕ್ಷತೆಯ ಕಟ್ಟುನಿಟ್ಟಿನ ನಿಯಮವೇ ಈ ತಾಣದ ಯಶಸ್ಸಿನ ರಹಸ್ಯ. ರೋಮಾಂಚನ ಮತ್ತು ಸುರಕ್ಷತೆ ಎರಡೂ ಒಟ್ಟೊಟ್ಟಿಗೆ ಸಾಗಬಹುದು ಎಂಬುದನ್ನು ಅಲ್ಲಿನ ಜನ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಈ ಟ್ರೇನ್‌ ಸ್ಟ್ರೀಟ್ ನಮಗೆ ಕಲಿಸುವುದು ಬದುಕಿನ ದೃಷ್ಟಿಕೋನವನ್ನು. ಜಗತ್ತಿನಲ್ಲಿ ಯಾವುದೂ ನಿರುಪಯುಕ್ತವಲ್ಲ. ನಮಗೆ ಕೇವಲ ಕಬ್ಬಿಣದ ಹಳಿಯಾಗಿ, ಅಪಾಯದ ಸಂಕೇತವಾಗಿ ಕಾಣಿಸುವುದು ಮತ್ತೊಬ್ಬರಿಗೆ ಕಾವ್ಯವಾಗಿ, ಕೋಟ್ಯಂತರ ರುಪಾಯಿ ತಂದುಕೊಡುವ ಪ್ರವಾಸಿ ಆಕರ್ಷಣೆಯಾಗಿ ಬದಲಾಗಬಲ್ಲದು. ಕಬ್ಬಿಣದ ಹಳಿಗಳು ಮತ್ತು ಕಿರಿದಾದ ಗಲ್ಲಿಯನ್ನು ಒಂದು ಕೊರತೆಯಾಗಿ ನೋಡದೇ, ಅದನ್ನೇ ಒಂದು ಅಪೂರ್ವ ಅವಕಾಶವನ್ನಾಗಿ ಬದಲಾಯಿಸಿಕೊಂಡ ಅಲ್ಲಿನ ಜನರ ಜಾಣ್ಮೆ ಜಗತ್ತಿಗೆ ಮಾದರಿ. ನಮ್ಮ ದೇಶದಲ್ಲೂ ಇಂಥ ಸಾವಿರಾರು ಸಾಧ್ಯತೆಗಳಿದ್ದು, ಅವುಗಳಿಗೆ ಕಲ್ಪನಾಶಕ್ತಿ ಮತ್ತು ಶಿಸ್ತಿನ ಸ್ಪರ್ಶ ನೀಡಬೇಕಿದೆ.

ಬಾಕ್ಸ್ ಐಟಮ್

ವಿಯೆಟ್ನಾಮ್‌ನ ಈ ಪ್ರಸಿದ್ಧ ಟ್ರೇನ್‌ ಸ್ಟ್ರೀಟ್‌ನಲ್ಲಿ ಪ್ರಾಣಾಪಾಯ ಮತ್ತು ಭೀಕರ ಅಪಘಾತಗಳು ಸಂಭವಿಸಿದ ಉದಾಹರಣೆಗಳಿವೆ. ಇತ್ತೀಚಿನ ವರ್ಷಗಳಲ್ಲಿ ಪ್ರವಾಸಿಗರು ಕೇವಲ ಒಂದು 'ಪರ್‌ಫೆಕ್ಟ್ ಸೆಲ್ಫೀ' ಅಥವಾ ರೀಲ್ಸ್ ಮಾಡುವ ಹುಚ್ಚಿನಲ್ಲಿ ರೈಲು ತೀರಾ ಹತ್ತಿರ ಬರುವವರೆಗೂ ಹಳಿಯ ಮೇಲಿಂದ ಕದಲುತ್ತಿರಲಿಲ್ಲ. ಇಂಥ ಸಂದರ್ಭಗಳಲ್ಲಿ ರೈಲು ಡಿಕ್ಕಿ ಹೊಡೆದು ತೀವ್ರವಾಗಿ ಗಾಯಗೊಂಡ ಹಾಗೂ ಪ್ರಾಣ ಕಳೆದುಕೊಂಡ ಘಟನೆಗಳು ವರದಿಯಾಗಿವೆ.

ಒಮ್ಮೆ ಪ್ರವಾಸಿಗರ ಗುಂಪೊಂದು ಫೊಟೋ ತೆಗೆದುಕೊಳ್ಳುವ ಗಡಿಬಿಡಿಯಲ್ಲಿ ಹಳಿಗೆ ತೀರಾ ಹತ್ತಿರ ನಿಂತಿತ್ತು. ಇಂಜಿನ್ ಡ್ರೈವರ್ ಎಷ್ಟೇ ಹಾರ್ನ್ ಮಾಡಿದರೂ ಜನ ಪಕ್ಕಕ್ಕೆ ಸರಿಯದಿದ್ದಾಗ, ಭಾರಿ ಅಪಘಾತವನ್ನು ತಪ್ಪಿಸಲು ಡ್ರೈವರ್ ತುರ್ತು ಬ್ರೇಕ್ ಹಾಕಿ ರೈಲನ್ನು ಅರ್ಧದಲ್ಲೇ ನಿಲ್ಲಿಸಬೇಕಾಯಿತು. ಇದು ಇಡೀ ರೈಲ್ವೇ ಸಂಚಾರದ ಸುರಕ್ಷತೆಗೇ ದೊಡ್ಡ ಸವಾಲಾಗಿತ್ತು.

ಇದೇ ಕಾರಣಕ್ಕೆ ಸ್ಥಳೀಯ ಆಡಳಿತವು 2019ರಲ್ಲಿ ಮೊದಲ ಬಾರಿಗೆ ಈ ಟ್ರೇನ್‌ ಸ್ಟ್ರೀಟ್ಅನ್ನು ಪ್ರವಾಸಿಗರಿಗೆ ಸಂಪೂರ್ಣವಾಗಿ ಬಂದ್ ಮಾಡಿತ್ತು. ನಂತರ ಸ್ಥಳೀಯರ ಉದ್ಯೋಗ ಮತ್ತು ಪ್ರವಾಸೋದ್ಯಮದ ದೃಷ್ಟಿಯಿಂದ ಇದನ್ನು ಮತ್ತೆ ತೆರೆಯಲಾಯಿತಾದರೂ, ಸುರಕ್ಷತೆಯ ನಿಯಮಗಳನ್ನು ಅತ್ಯಂತ ಕಟ್ಟುನಿಟ್ಟುಗೊಳಿಸಲಾಯಿತು.