ಒಮ್ಮೆ ಸುಮ್ಮನೆ ಕಲ್ಪನೆ ಮಾಡಿಕೊಳ್ಳಿ. ನೀವು ಹಂಪಿಯ ವಿರೂಪಾಕ್ಷನ ಸನ್ನಿಧಿಯಲ್ಲಿ ನಿಂತಿದ್ದೀರಿ. ಬೆನ್ನ ಹಿಂದೆ ತುಂಗೆ ಹರಿಯುತ್ತಿದ್ದಾಳೆ. ಆ ಕಲ್ಲುಗಳ ಮೇಲೆ ಕೈಯಿಟ್ಟರೆ ಸಾಕು, ಐನೂರು ವರ್ಷಗಳ ಹಿಂದಿನ ಕೃಷ್ಣದೇವರಾಯನ ಸಭೆಯ ಪಿಸುಮಾತುಗಳು ಕೇಳಿಸುವಂತಿದೆ. ಅಲ್ಲಿನ ಪ್ರತಿ ಇಟ್ಟಿಗೆಯೂ ಒಂದು ಸ್ವಾರಸ್ಯಕರ ಕಥೆ ಹೇಳುತ್ತಿದೆ. ಆದರೆ, ಅದೇ ಹೊತ್ತಿಗೆ ನಿಮ್ಮ ಕಣ್ಣೆದುರು ಏನೇನೋ ವಿಚಿತ್ರಗಳು ಜರುಗುತ್ತಿದೆ. ಇತಿಹಾಸದ ಆ ಮೌನವನ್ನು ಸೀಳಿಕೊಂಡು ಸೆಲ್ಫಿ ಸ್ಟಿಕ್‌ಗಳು ಮೇಲೆದ್ದಿವೆ. ಪ್ರಾಚೀನ ಗೋಡೆಗಳ ಪಕ್ಕದಲ್ಲಿ ಕಾಂಕ್ರೀಟ್‌ನ ಆಧುನಿಕ ಶೌಚಾಲಯಗಳು ತಲೆ ಎತ್ತುತ್ತಿವೆ. ಎಲ್ಲೆಡೆ ಪ್ಲಾಸ್ಟಿಕ್ ಬಾಟಲಿಗಳು, ಚಿಪ್ಸ್ ಪ್ಯಾಕೆಟುಗಳು, ಬಿಯರು ಬಾಟಲಿಗಳು ಅನಾಥವಾಗಿ ಬಿದ್ದಿವೆ. ನಮ್ಮ ಇತಿಹಾಸದ ಹೆಪ್ಪುಗಟ್ಟಿದ ರಕ್ತದಂತಿರುವ ಆ ಶಿಲ್ಪಗಳ ಮೇಲೆ ಇಂದಿನ 'ನವನಾಗರೀಕತೆ' ಕೆಟ್ಟದಾಗಿ ಜಮೆಯಾಗುತ್ತಿದೆ.

ಇದನ್ನೂ ಓದಿ: ರಕ್ತ, ಶೃಂಗಾರ, ಅಧಿಕಾರ ವ್ಯಾಮೋಹದ ಅರಮನೆಯ ಅಂತರಂಗ

ನಿಜಕ್ಕೂ ನಮಗೆ ನಮ್ಮ ಇತಿಹಾಸದ ಬೆಲೆ ಗೊತ್ತಿದೆಯೇ? ಅಥವಾ ಅದನ್ನು ಬರಿಯ ಹಣ ಮಾಡುವ 'ಟೂರಿಸ್ಟ್ ಸ್ಟಾಲ್' ಅಂತ ತಿಳಿದುಕೊಂಡಿದ್ದೇವೆಯೇ? ಈ ಪ್ರಶ್ನೆ ನನ್ನನ್ನು ತುಂಬಾ ದಿನಗಳಿಂದ ಕಾಡುತ್ತಿದೆ. ಇತಿಹಾಸ ಅಂದರೆ ಕೇವಲ ಸತ್ತವರ ಕಥೆಯಲ್ಲ, ಅದು ನಮ್ಮ ಅಸ್ತಿತ್ವದ ಬೇರು. ಆ ಬೇರನ್ನು ಕಿತ್ತು ಹಾಕಿದರೆ ನಾಳೆ ನಾವು ಎಲ್ಲಿಗೆ ಹೋಗಿ ನಿಲ್ಲಬೇಕು? ಹಳೆಯ ಕೋಟೆಗಳ ಮೇಲೆ ಹೆಸರನ್ನು ಕೆತ್ತುವ, ಸ್ಮಾರಕದ ಪಕ್ಕದಲ್ಲಿ ತಗಡಿನ ಶೆಡ್ ಹಾಕುವ ನಮಗೆ ಆ ಕಲ್ಲಿನ ಒಳಗಿರುವ ಶಿಲ್ಪಿಯ ಕಣ್ಣೀರು ಕಾಣಿಸುವುದೇ ಇಲ್ಲ. ಅಭಿವೃದ್ಧಿ ಬೇಕು, ಖಂಡಿತ ಬೇಕು. ಆದರೆ ಅದು ಇತಿಹಾಸದ ಎದೆಯ ಮೇಲೆ ಮೆಟ್ಟಿ ನಿಲ್ಲುವ ಅಭಿವೃದ್ಧಿಯಾಗಬಾರದು.

New Project (89)

ಹಂಪಿ ಇರಲಿ, ಬೇಲೂರು ಇರಲಿ ಇಲ್ಲವೇ ಐಹೊಳೆ ಇರಲಿ – ಅಲ್ಲಿ ಹೋದಾಗ ನಿಮಗೆ ಒಂದು ಥರದ 'ಗುಮ್ಮ' ಹಿಡಿಯಬೇಕು. ಅಬ್ಬಾ, ಇಷ್ಟು ದೊಡ್ಡ ಸಾಮ್ರಾಜ್ಯ ಇಲ್ಲಿತ್ತು, ಈಗ ಎಲ್ಲಿದೆ ಅಂತ ಒಂದು ಕ್ಷಣ ಮೌನವಾಗಬೇಕು. ನಮ್ಮ ಯೋಚನೆ ಹಿಮ್ಮಡಿಯಲ್ಲಿ ನೂರಾರು ವರ್ಷ ಹಿಂದಕ್ಕೆ ಹೋಗಬೇಕು. ಆಗಿನ ಜನಜೀವನದ ಬಗ್ಗೆ ನಮ್ಮಲ್ಲಿ ನೂರಾರು ಪ್ರಶ್ನೆಗಳು ಏಳಬೇಕು. ನಾಗರೀಕತೆ ಸಾಗಿ ಬಂದ ಮೆರವಣಿಗೆ ನಮ್ಮ ಮುಂದೆ ಸಾಗುತ್ತಾ ಹೋಗಬೇಕು. ಒಂದು ಐತಿಹಾಸಿಕ ತಾಣ ನಮ್ಮನ್ನು ಅಂತರ್ಮುಖಿಯನ್ನಾಗಿ ಮಾಡಿ ನಮ್ಮಲ್ಲೊಂದು ದಿವ್ಯ ಅನುಭೂತಿಯನ್ನು ಸೃಷ್ಟಿಸಬೇಕು. ಆದರೆ ಇವತ್ತು ಏನಾಗುತ್ತಿದೆ? ಸ್ಮಾರಕಗಳ ಪಕ್ಕದಲ್ಲಿ ಬಣ್ಣಬಣ್ಣದ ಎಲ್ಇಡಿ ದೀಪಗಳು, ಸಾಲುಸಾಲು ಅಂಗಡಿಗಳು, ವಾಹನ ಭರಾಟೆ, ಕಿವಿಗಡಚಿಕ್ಕುವ ಮ್ಯೂಸಿಕ್ ಸಿಸ್ಟಮ್‌ಗಳು ಬಂದಿವೆ. ಇತಿಹಾಸದ ಮೌನಕ್ಕೂ ಒಂದು ಕಿಮ್ಮತ್ತಿದೆ ಎನ್ನುವುದನ್ನು ನಾವು ಮರೆತು ಹೋಗಿದ್ದೇವೆ. ಪಾರಂಪರಿಕ ತಾಣಗಳನ್ನು 'ಅಭಿವೃದ್ಧಿ' ಪಡಿಸುವ ಹೆಸರಿನಲ್ಲಿ ನಾವು ಮಾಡುತ್ತಿರುವ ಎಡವಟ್ಟುಗಳು ಒಂದೆರಡಲ್ಲ.

ಅಷ್ಟಕ್ಕೂ ಒಬ್ಬ ಪ್ರವಾಸಿಗ ಅಲ್ಲಿಗೆ ಬರುವುದು ಯಾಕೆ? ಇತಿಹಾಸದ ಉಸಿರನ್ನು ತಾಗಿಸಿಕೊಳ್ಳಲು, ಅನುಭವಿಸಲು. ಆದರೆ ನಾವು ಅವನಿಗೆ ಎಸಿ ರೂಮ್, ವೈ-ಫೈ ಮತ್ತು ಬರ್ಗರ್, ಪಿಜ್ಜಾ ಸೆಂಟರ್‌ಗಳನ್ನು ತೋರಿಸುವುದರಲ್ಲಿ ಬ್ಯುಸಿಯಾಗಿದ್ದೇವೆ. ಶಿಲ್ಪಕಲೆಯ ಸೌಂದರ್ಯಕ್ಕಿಂತ ಸೌಲಭ್ಯಗಳೇ ದೊಡ್ಡದಾದಾಗ, ಅಲ್ಲಿ ಇತಿಹಾಸ ಸೋತು ಹೋಗುತ್ತದೆ. ಇದು ಕೇವಲ ನಮ್ಮ ಕರ್ನಾಟಕದ ಕಥೆಯಲ್ಲ, ಇಡೀ ದೇಶ ಇವತ್ತು ಇದೇ ಸಂಕಟದಲ್ಲಿದೆ. ಪುರಾತನ ಕಲೆ ಮತ್ತು ಆಧುನಿಕ ಅವಶ್ಯಕತೆಗಳ ನಡುವೆ ಒಂದು ತೆಳುವಾದ ಗೆರೆಯಿದೆ. ಆ ಗೆರೆಯನ್ನು ದಾಟಿದ ಕೂಡಲೇ 'ಸಂರಕ್ಷಣೆ' ಹೋಗಿ 'ನಾಶ' ಶುರುವಾಗುತ್ತದೆ.

ಬಹಳ ನೋವಿನ ಸಂಗತಿ ಅಂದರೆ, ಅಭಿವೃದ್ಧಿಯ ಹೆಸರಿನಲ್ಲಿ ಆ ಪ್ರಾಚೀನ ಶೈಲಿಯನ್ನೇ ಹದಗೆಡಿಸುವುದು. ಹಳೆಯ ಕಲ್ಲಿನ ಕಟ್ಟಡಕ್ಕೆ ಸಿಮೆಂಟ್ ಹಚ್ಚಿ ಪ್ಲಾಸ್ಟರ್ ಮಾಡುವ ಬುದ್ಧಿ ನಮಗೆ ಬಂದಿದೆ ಅಂದಮೇಲೆ ನಾವು ಎತ್ತ ಸಾಗುತ್ತಿದ್ದೇವೆ ಅನ್ನೋದು ಸ್ಪಷ್ಟವಾಗುತ್ತದೆ. ಇತಿಹಾಸದ ಕುರುಹುಗಳನ್ನು ಪ್ರವಾಸಿ ತಾಣಗಳಾಗಿ ಮಾಡುವಾಗ ನಾವು ವಹಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಗಂಭೀರವಾಗಿ ಯೋಚಿಸಬೇಕಾದ ಕಾಲ ಇದು. ಇಲ್ಲದಿದ್ದರೆ, ನಮ್ಮ ಮುಂದಿನ ಪೀಳಿಗೆಗೆ ನಾವು ತೋರಿಸಲು ಉಳಿಯುವುದು ಬರಿ ಪ್ಲಾಸ್ಟಿಕ್ ಇತಿಹಾಸ ಮಾತ್ರ. ಅದು ಆಗಬಾರದು ಅಂದ್ರೆ ನಾವು ಏನು ಮಾಡಬೇಕು?

New Project (90)

ಪ್ರಾಚೀನ ಸ್ಮಾರಕಗಳ ಅಭಿವೃದ್ಧಿಯಲ್ಲಿನ ಮೊದಲ ಮತ್ತು ಪ್ರಮುಖ ಮುನ್ನೆಚ್ಚರಿಕೆ ಎಂದರೆ ವಾಸ್ತುಶಿಲ್ಪದ ನಿಷ್ಠೆ. ಹಳೆಯ ಕಲ್ಲಿನ ಕಟ್ಟಡಗಳ ಪಕ್ಕದಲ್ಲಿ ಆಧುನಿಕ ಶೈಲಿಯ ಗಾಜು ಅಥವಾ ಕಾಂಕ್ರೀಟ್ ಕಟ್ಟಡಗಳನ್ನು ಕಟ್ಟುವುದು ಆ ತಾಣದ ದೃಶ್ಯ ವೈಭವವನ್ನು ಹಾಳು ಮಾಡುತ್ತದೆ. ಇದಕ್ಕೆ ಪರಿಹಾರವೆಂದರೆ ಯಾವುದೇ ಹೊಸ ನಿರ್ಮಾಣವನ್ನು ಮಾಡುವಾಗ ಸ್ಮಾರಕದಿಂದ ಕನಿಷ್ಠ ಇನ್ನೂರು-ಮುನ್ನೂರು ಮೀಟರ್ ಅಂತರ ಕಾಯ್ದುಕೊಳ್ಳಬೇಕು. ಸೌಲಭ್ಯ ಕೇಂದ್ರಗಳನ್ನು ಕಟ್ಟುವಾಗಲೂ ಆ ಪ್ರದೇಶದ ಸ್ಥಳೀಯ ಶೈಲಿಯನ್ನೇ ಬಳಸಬೇಕು. ಉದಾಹರಣೆಗೆ, ಕಲ್ಲಿನ ದೇವಸ್ಥಾನದ ಪಕ್ಕದಲ್ಲಿ ಯಾತ್ರಿ ನಿವಾಸ ಕಟ್ಟುವಾಗಲೂ ಅದೇ ಥರದ ಕಲ್ಲುಗಳನ್ನು ಬಳಸಿದರೆ ಅದು ಪರಿಸರದೊಂದಿಗೆ ಬೆರೆಯುತ್ತದೆ.

ಪ್ರತಿ ಸ್ಮಾರಕಕ್ಕೂ ಒಂದು 'ಸಹಿಸುವ ಮಿತಿ' ಇರುತ್ತದೆ. ಒಂದು ದಿನಕ್ಕೆ ಎಷ್ಟು ಜನ ಪ್ರವಾಸಿಗರು ಅಲ್ಲಿಗೆ ಭೇಟಿ ನೀಡಬಹುದು ಎಂಬುದು ಆ ಕಟ್ಟಡದ ಗಟ್ಟಿತನ ಮತ್ತು ಸ್ಥಳದ ವಿಸ್ತೀರ್ಣದ ಮೇಲೆ ನಿರ್ಧಾರವಾಗಬೇಕು. ಅತಿಯಾದ ಜನಸಂದಣಿಯಿಂದ ಉಂಟಾಗುವ ಕಂಪನಗಳು, ತೇವಾಂಶ ಮತ್ತು ಮಾಲಿನ್ಯವು ಸ್ಮಾರಕದ ಆಯಸ್ಸನ್ನು ಕಡಿಮೆ ಮಾಡುತ್ತದೆ. ಇದಕ್ಕೆ ಪರಿಹಾರವೆಂದರೆ, ಆನ್‌ಲೈನ್ ಬುಕಿಂಗ್ ಮೂಲಕ ದಿನಕ್ಕೆ ಇಂತಿಷ್ಟೇ ಜನರಿಗೆ ಪ್ರವೇಶ ಎಂದು ನಿಯಂತ್ರಿಸಬೇಕು. ಜನಪ್ರಿಯ ತಾಣಗಳಲ್ಲಿ 'ಟೈಮ್ ಸ್ಲಾಟ್' ಪದ್ಧತಿ ಜಾರಿಗೆ ತರುವುದು ಅವಶ್ಯಕ.

New Project (91)

ಪ್ರಾಚೀನ ತಾಣಗಳು ಇಂದು ಪ್ಲಾಸ್ಟಿಕ್ ತ್ಯಾಜ್ಯದ ತೊಟ್ಟಿಗಳಾಗಿ ಬದಲಾಗುತ್ತಿವೆ. ಇದು ಕೇವಲ ಅಸಹ್ಯಕರವಷ್ಟೇ ಅಲ್ಲ, ಸ್ಮಾರಕಗಳ ಭದ್ರತೆಗೂ ಅಪಾಯಕಾರಿ. ಸ್ಮಾರಕದ ಸುತ್ತಲಿನ ಪ್ರದೇಶವನ್ನು 'ಝೀರೋ ಪ್ಲಾಸ್ಟಿಕ್ ಜೋನ್' ಎಂದು ಘೋಷಿಸಬೇಕು. ಕಸದ ಬುಟ್ಟಿಗಳನ್ನು ಕೂಡ ಸ್ಮಾರಕದ ಅಂದಗೆಡದಂತೆ ವಿನ್ಯಾಸಗೊಳಿಸಬೇಕು. ಸೌರಶಕ್ತಿ ಮತ್ತು ನೈಸರ್ಗಿಕ ಬೆಳಕನ್ನು ಬಳಸುವ ಮೂಲಕ ಪರಿಸರ ಸ್ನೇಹಿ ಮೂಲಸೌಕರ್ಯಗಳನ್ನು ಅಳವಡಿಸಬೇಕು. ಯಾವುದೇ ಪಾರಂಪರಿಕ ತಾಣದ ಅಭಿವೃದ್ಧಿಯು ಅಲ್ಲಿನ ಸ್ಥಳೀಯ ಸಮುದಾಯವನ್ನು ಒಳಗೊಳ್ಳದೇ ಯಶಸ್ವಿಯಾಗಲು ಸಾಧ್ಯವಿಲ್ಲ. ಸ್ಥಳೀಯರಿಗೆ ಪ್ರವಾಸೋದ್ಯಮದಿಂದ ಆದಾಯ ಸಿಕ್ಕಾಗ ಮಾತ್ರ ಅವರು ಆ ಸ್ಮಾರಕಗಳನ್ನು ತಮ್ಮದೆಂದು ಭಾವಿಸಿ ರಕ್ಷಿಸುತ್ತಾರೆ. ಸ್ಥಳೀಯ ಯುವಕರಿಗೆ ಮಾರ್ಗದರ್ಶಕರಾಗಿ (ಗೈಡ್ಸ್) ತರಬೇತಿ ನೀಡಬೇಕು. ಅವರು ಕೇವಲ ಕಥೆಗಳನ್ನು ಹೇಳದೇ, ಇತಿಹಾಸದ ಮಹತ್ವ ಮತ್ತು ಸ್ಮಾರಕದ ಪಾವಿತ್ರ್ಯವನ್ನು ಕಾಪಾಡುವ ಜವಾಬ್ದಾರಿಯನ್ನು ಹೊರಬೇಕು.

ಆಧುನಿಕ ಸೌಲಭ್ಯಗಳನ್ನು ನೀಡುವಾಗ ಅವು ಕಣ್ಣಿಗೆ ರಾಚುವಂತೆ ಅಥವಾ ಚುಚ್ಚುವಂತಿರಬಾರದು. ಡಿಜಿಟಲ್ ಮಾಹಿತಿಗಾಗಿ ಕ್ಯೂಆರ್ ಕೋಡ್‌ಗಳನ್ನು ಬಳಸಬಹುದು. ಇದರಿಂದ ದೊಡ್ಡ ದೊಡ್ಡ ಬೋರ್ಡ್‌ಗಳನ್ನು ಹಾಕಿ ದೃಶ್ಯ ಮಾಲಿನ್ಯ ಉಂಟುಮಾಡುವುದು ತಪ್ಪುತ್ತದೆ. ಸ್ಮಾರಕದ ಇತಿಹಾಸವನ್ನು ವಿವರಿಸಲು 'ಆಡಿಯೋ ಗೈಡ್‌'ಗಳನ್ನು ಪ್ರೋತ್ಸಾಹಿಸಬೇಕು. ಸ್ಮಾರಕಗಳ ಸುತ್ತ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ವಾಹನಗಳಿಂದ ಹೊರಬರುವ ಹೊಗೆಯು ಅಮೃತಶಿಲೆ ಅಥವಾ ಗ್ರಾನೈಟ್ ಕಲ್ಲುಗಳ ಬಣ್ಣವನ್ನು ಕೆಡಿಸುತ್ತದೆ. ಸ್ಮಾರಕದ ಹೊರಗೆ ಪಾರ್ಕಿಂಗ್ ವ್ಯವಸ್ಥೆ ಮಾಡಿ, ಅಲ್ಲಿಂದ ಸ್ಮಾರಕದವರೆಗೆ ಎಲೆಕ್ಟ್ರಿಕ್ ಗಾಡಿಗಳು ಅಥವಾ ಸೈಕಲ್‌ಗಳ ವ್ಯವಸ್ಥೆ ಮಾಡಬೇಕು. ಇದು ಪರಿಸರವನ್ನು ಶುದ್ಧವಾಗಿಡುವುದಲ್ಲದೆ ಪ್ರವಾಸಿಗರಿಗೆ ಶಾಂತವಾದ ಅನುಭವವನ್ನು ನೀಡುತ್ತದೆ. ರಾತ್ರಿ ವೇಳೆ ಪ್ರವಾಸಿಗರನ್ನು ಸೆಳೆಯಲು ಲೈಟ್ ಮತ್ತು ಸೌಂಡ್ ಶೋಗಳನ್ನು ನಡೆಸಲಾಗುತ್ತದೆ. ಆದರೆ, ಪ್ರಖರವಾದ ಲೈಟ್‌ಗಳು ಮತ್ತು ಅತಿ ಹೆಚ್ಚಿನ ಶಬ್ದವು ಸ್ಮಾರಕಗಳಲ್ಲಿ ವಾಸಿಸುವ ಪಕ್ಷಿಗಳು ಮತ್ತು ಬಾವಲಿಗಳಿಗೆ ತೊಂದರೆ ನೀಡುತ್ತದೆ. ಅಲ್ಲದೆ, ಶಾಖದ ಪರಿಣಾಮದಿಂದ ಕಲ್ಲುಗಳಲ್ಲಿ ಬಿರುಕು ಬಿಡುವ ಸಾಧ್ಯತೆಯೂ ಇರುತ್ತದೆ. ಸ್ಮಾರಕದ ಮೇಲೆ ನೇರವಾದ ಶಾಖ ಬೀರದಂತೆ 'ಕೋಲ್ಡ್ ಲೈಟಿಂಗ್' ತಂತ್ರಜ್ಞಾನ ಬಳಸಬೇಕು ಮತ್ತು ಶಬ್ದದ ಪ್ರಮಾಣವನ್ನು ನಿಗದಿತ ಮಟ್ಟದಲ್ಲಿಡಬೇಕು.

New Project (92)

ಆಧುನಿಕ ಸೌಲಭ್ಯ ಮತ್ತು ಪ್ರಾಚೀನ ಶೈಲಿಯ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಕಷ್ಟದ ಕೆಲಸವೇನಲ್ಲ, ಆದರೆ ಅದಕ್ಕೆ ದೂರದೃಷ್ಟಿಯ ಯೋಜನೆ ಬೇಕು. ಸಿಮೆಂಟ್ ಹಚ್ಚಿದ ಸ್ಮಾರಕ ಇತಿಹಾಸವಾಗುವುದಿಲ್ಲ, ಅದು ಕೇವಲ ಒಂದು ನಿರ್ಜೀವ ಗೋಡೆಯಷ್ಟೇ. ಈಗಿನ ಕಾಲದ ಎಂಜಿನಿಯರ್‌ಗಳು ಮತ್ತು ಕಾಂಟ್ರಾಕ್ಟರ್‌ಗಳಿಗೆ ಒಂದು ಬಗೆಯ ವಿಚಿತ್ರ ರೋಗ ಬಂದಿದೆ. ಹಳೆಯ ಕಟ್ಟಡ ಅಂದಾಕ್ಷಣ ಇವರಿಗೆ ಮೊದಲು ನೆನಪಾಗೋದೇ ಕಾಂಕ್ರೀಟ್ ಮಿಕ್ಸರ್. ಆ ಸುಣ್ಣ, ಬೆಲ್ಲ, ಮರಳು ಮತ್ತು ನೈಸರ್ಗಿಕ ಅಂಟಿನಿಂದ ಕಟ್ಟಿದ ಆ ಅದ್ಭುತ ವಾಸ್ತುಶಿಲ್ಪಕ್ಕೆ ಸಿಮೆಂಟಿನ ಲೇಪನ ಕೊಟ್ಟು, ಇತಿಹಾಸದ ಮುಖಕ್ಕೆ ಬಣ್ಣ ಬಳಿಯುವ ಕೆಟ್ಟ ಕೆಲಸ ಮಾಡುತ್ತಿದ್ದೇವೆ. ನೆನಪಿಡಿ, ಸ್ಮಾರಕದ ಮೇಲೆ ನೀವು ಹೊಡೆದ ಪ್ರತಿ ಹೊಡೆತವೂ ನಮ್ಮ ಸಂಸ್ಕೃತಿಯ ಎದೆಗೆ ನೀಡಿದ ಏಟು.

ಇತಿಹಾಸದ ಕುರುಹುಗಳನ್ನು ಪ್ರವಾಸಿ ತಾಣ ಮಾಡುವುದು ಅಂದ್ರೆ ಅಲ್ಲಿ ಬರಿ ಶೌಚಾಲಯ ಕಟ್ಟಿ, ಅಂಗಡಿಗಳನ್ನು ನಿಲ್ಲಿಸುವುದಲ್ಲ. ಅಲ್ಲಿನ ಮೌನವನ್ನು ಕಾಪಾಡುವುದು ಕೂಡ ಒಂದು ದೊಡ್ಡ ಕೆಲಸ. ಪ್ರವಾಸಿಗರಿಗೆ ಕೇವಲ ಭೌತಿಕ ಸೌಕರ್ಯಗಳಿಗಿಂತ 'ಆಧ್ಯಾತ್ಮಿಕ ಮತ್ತು ಐತಿಹಾಸಿಕ ಅನುಭವ' ಸಿಗುವುದು ಮುಖ್ಯ. ನಾವು ಇತಿಹಾಸವನ್ನು ಪ್ರವಾಸೋದ್ಯಮಕ್ಕೆ ಬಳಸಿಕೊಳ್ಳಬೇಕು, ಆದರೆ ಪ್ರವಾಸೋದ್ಯಮದ ಹೆಸರಿನಲ್ಲಿ ಇತಿಹಾಸವನ್ನು ಬಲಿಕೊಡಬಾರದು. ಅಭಿವೃದ್ಧಿ ಎಂಬುದು ಸ್ಮಾರಕಕ್ಕೆ ಹಾಕುವ 'ಮೇಕಪ್' ಆಗಬಾರದು, ಬದಲಾಗಿ ಅದು ಆ ಸ್ಮಾರಕದ ಘನತೆಯನ್ನು ಹೆಚ್ಚಿಸುವ 'ಕಿರೀಟ'ದಂತಿರಬೇಕು. ನಮ್ಮ ಇತಿಹಾಸದ ಕುರುಹುಗಳನ್ನು ಜತನದಿಂದ ಕಾಪಾಡಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

ನಮಗೆ ನಮ್ಮ ಇತಿಹಾಸದ ಬೆಲೆ ಗೊತ್ತಿರೋದು ಬರೀ ಫೇಸ್‌ಬುಕ್‌ನಲ್ಲಿ ಫೊಟೋ ಹಾಕಿಕೊಳ್ಳಲು ಮಾತ್ರ. ಸ್ಮಾರಕದ ಪಕ್ಕದಲ್ಲಿ ನಿಂತು ವಿಲಕ್ಷಣವಾಗಿ ಪೋಸ್ ಕೊಡುವ ನಮಗೆ, ಆ ಕಲ್ಲಿನ ಒಳಗಿರುವ ಶಿಲ್ಪಿಯ ಮೆಹನತ್ತು ಕಾಣಿಸುವುದಿಲ್ಲ. ಹಳೆಯ ಕೋಟೆಯ ಮೇಲೆ ಪ್ರೇಮಿಗಳು ಹೆಸರು ಕೆತ್ತುವುದು, ಸ್ಮಾರಕದ ಸನಿಹದಲ್ಲಿ ಅಸಹ್ಯವಾಗಿ ಕಸ ಎಸೆಯುವುದು – ಇವೆಲ್ಲ ಯಾವ ನಾಗರೀಕತೆಯ ಲಕ್ಷಣ? ನಿಜಕ್ಕೂ ಇತಿಹಾಸದ ಸಂರಕ್ಷಣೆ ಆಗಬೇಕು ಅಂದ್ರೆ ಮೊದಲು ನಮ್ಮ ಮನಸ್ಥಿತಿ ಬದಲಾಗಬೇಕು. ಅಭಿವೃದ್ಧಿ ಹೆಸರಿನಲ್ಲಿ ಅಲ್ಲಿನ ಮೂಲ ಸೌಂದರ್ಯಕ್ಕೆ ಧಕ್ಕೆ ತರುವ ಹಕ್ಕು ಯಾರಿಗೂ ಇಲ್ಲ. ಈಗ ಹಂಪಿಗೋ, ಬೇಲೂರು-ಹಳೆಬೀಡಿಗೋ ಹೋದರೆ ಅಲ್ಲಿನ ಪರಿಸರ ಎಷ್ಟೋ ಕಡೆ ಹದಗೆಟ್ಟು ಹೋಗಿದೆ. ಸ್ಮಾರಕದ ಸುತ್ತಲೂ ಕಾಂಕ್ರೀಟ್ ಜಂಗಲ್ ನಿರ್ಮಿಸಿ, ಅದನ್ನು ಒಂದು ಥೀಮ್ ಪಾರ್ಕ್ ಮಾಡುವ ಹಪಾಹಪಿ ನಮ್ಮನ್ನು ಎಲ್ಲಿಗೆ ತಲುಪಿಸಿದೆ ಗೊತ್ತಾ? ಅಪ್ಪಟವಾದ ಪ್ರಾಚೀನ ಅನುಭವ ಈಗ ಮಾಯವಾಗಿದೆ. ಕಾಂಕ್ರೀಟು ಮತ್ತು ಐಷಾರಾಮಿ ವ್ಯವಸ್ಥೆಗಳ ನಡುವೆ ಆ ಸ್ಮಾರಕದ ಆತ್ಮ ಸತ್ತು ಹೋಗುತ್ತಿದೆ.

New Project (93)

ಸ್ಮಾರಕಗಳನ್ನು ಉಳಿಸುವುದು ಅಂದ್ರೆ ಕೇವಲ ಅವಕ್ಕೆ ಬೇಲಿ ಹಾಕುವುದಲ್ಲ. ಅವುಗಳ ಉಸಿರು ಇರುವಂತೆ ನೋಡಿಕೊಳ್ಳುವುದು. ಕಲ್ಲು ಕಟ್ಟಡಕ್ಕೆ ತನ್ನದೇ ಆದ 'ಥರ್ಮಲ್ ಪ್ರಾಪರ್ಟಿ' ಇರುತ್ತದೆ. ಅದಕ್ಕೆ ಹೋಗಿ ಸಿಮೆಂಟ್ ಹಚ್ಚಿದರೆ ಆ ಕಲ್ಲಿಗೆ ಉಸಿರಾಡಲು ಸಾಧ್ಯವಾಗುವುದಿಲ್ಲ. ಕಾಲಕ್ರಮೇಣ ಅದು ಒಳಗಿನಿಂದಲೇ ಕೊಳೆಯಲು ಶುರುವಾಗುತ್ತದೆ. ಇಂಥ ಕನಿಷ್ಠ ಜ್ಞಾನವಿಲ್ಲದ ಜನ ಪ್ರವಾಸೋದ್ಯಮದ ಹೆಸರಿನಲ್ಲಿ ಕೋಟ್ಯಂತರ ರುಪಾಯಿ ಖರ್ಚು ಮಾಡಿ ಇತಿಹಾಸವನ್ನು ಧ್ವಂಸಗೊಳಿಸುತ್ತಿದಾರೆ. ಇದು ಆಗಬಾರದು ಅಂದ್ರೆ ನಾವು ಈಗಲೇ ಎಚ್ಚೆತ್ತುಕೊಳ್ಳಬೇಕು. ನಮ್ಮ ಇತಿಹಾಸದ ಕುರುಹುಗಳನ್ನು ಒಂದು ಪ್ರಾರ್ಥನಾ ಮಂದಿರದಂತೆ ಪವಿತ್ರವಾಗಿ, ಸೂಕ್ಷ್ಮವಾಗಿ ನೋಡಬೇಕು. ಪ್ರವಾಸೋದ್ಯಮ ಮುಖ್ಯವೇ, ಆದರೆ ಅದು ಇತಿಹಾಸದ ಬಲಿಪೀಠದ ಮೇಲೆ ಅಲ್ಲ. ಆಧುನಿಕತೆಯ ಅಬ್ಬರದಲ್ಲಿ ಪುರಾತನ ಶೈಲಿಗೆ ಒಂದು ಸಣ್ಣ ಪೆಟ್ಟು ಕೂಡ ಬೀಳದಂತೆ ನೋಡಿಕೊಳ್ಳುವ ತಾಳ್ಮೆ ನಮಗೆ ಬೇಕು. ಇತಿಹಾಸ ಅಂದರೆ ಕೇವಲ ಒಂದು ಮ್ಯೂಸಿಯಂ ಅಲ್ಲ, ಅದು ನಮ್ಮ ಪೂರ್ವಜರು ನಮಗಾಗಿ ಬಿಟ್ಟುಹೋದ ಅಮೂಲ್ಯವಾದ ಉಯಿಲು. ಆ ಉಯಿಲನ್ನು ನಾವು ನಾಶ ಮಾಡಿದರೆ ಇತಿಹಾಸ ನಮಗೆ ಯಾವತ್ತೂ ಕ್ಷಮೆ ನೀಡುವುದಿಲ್ಲ.