Wednesday, February 4, 2026
Wednesday, February 4, 2026

ರಕ್ತ, ಶೃಂಗಾರ, ಅಧಿಕಾರ ವ್ಯಾಮೋಹದ ಅರಮನೆಯ ಅಂತರಂಗ

ವರ್ಸೈಲ್ಸ್ ಅರಮನೆಯು ಮನುಷ್ಯನ ಕಲಾ ತೃಷೆ ಮತ್ತು ಅಧಿಕಾರದ ಹಪಾಹಪಿ ಎರಡನ್ನೂ ಏಕಕಾಲಕ್ಕೆ ಪ್ರದರ್ಶಿಸುವ ಜಗತ್ತಿನ ಅದ್ವಿತೀಯ ಸ್ಮಾರಕ. ಇಲ್ಲಿನ 'ಹಾಲ್ ಆಫ್ ಮಿರರ್ಸ್' (ಕನ್ನಡಿಗಳ ಹಜಾರ), ಚಿನ್ನದ ಲೇಪಿತ ಅಲಂಕಾರಗಳು ಮತ್ತು ರಾಜ-ರಾಣಿಯರ ಐಷಾರಾಮಿ ಶಯನಗೃಹಗಳು ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸುತ್ತವೆ. ಅರಮನೆಯ ಹೊರಭಾಗದಲ್ಲಿರುವ ಮೈಲುಗಟ್ಟಲೆ ಹರಡಿರುವ ರಮಣೀಯ ತೋಟಗಳು, ಕಲಾತ್ಮಕ ಕಾರಂಜಿಗಳು ಮತ್ತು ಶಿಲ್ಪಕಲೆಗಳು ಫ್ರೆಂಚ್ ಕಲಾಪ್ರೌಢಿಮೆಯನ್ನು ಸಾರುತ್ತವೆ. ಇದು ಕೇವಲ ಕಟ್ಟಡವಲ್ಲ, ಫ್ರೆಂಚ್ ಇತಿಹಾಸದ ಉಚ್ಛ್ರಾಯ ಮತ್ತು ಕ್ರಾಂತಿಯ ಮೌನ ಸಾಕ್ಷಿಯಾಗಿದೆ.

ಪ್ಯಾರಿಸಿಗೆ ಹೋದವರು ಸಾಮಾನ್ಯವಾಗಿ, ಐಫೆಲ್ ಟವರ್, ಲೂವ್ರೆ ಮ್ಯೂಸಿಯಂ, ನೋಟ್ರೆ-ಡೇಮ್ ಕ್ಯಾಥೆಡ್ರಲ್, ಮೊಂಟ್ಮಾರ್ಟ್ರೆ ಮತ್ತು ಸ್ಯಾಕ್ರೆ-ಕೋಯರ್, ಚಾಂಪ್ಸ್-ಎಲಿಸೀಸ್ ಮತ್ತು ಆರ್ಕ್ ಡಿ ಟ್ರಯೋಂಫೆ, ಡಿಸ್ನಿಲ್ಯಾಂಡ್ ಗೆ ಭೇಟಿ ನೀಡಿ ಸೀನ್ ನದಿ ಕ್ರೂಸ್ ನಲ್ಲಿ ವಿಹರಿಸಿ, ಇಡೀ ನಗರವನ್ನು ನೋಡಿದ ಸಂತಸದಿಂದ ಮರಳುತ್ತಾರೆ. ಆದರೆ ಅನೇಕರು ನಗರದ ಹೊರವಲಯದಲ್ಲಿರುವ, ಫ್ರೆಂಚ್ ರಾಜವೈಭವದ ಸಂಕೇತ ಎಂದು ಕರೆಯಿಸಿಕೊಳ್ಳುವ 'ವರ್ಸೈಲ್ಸ್ ಅರಮನೆ'ಯನ್ನು ನೋಡದೇ ಬರುತ್ತಾರೆ. ಅಂಥವರಿಗೆ ಫ್ರೆಂಚ್ ಅರಸೊತ್ತಿಗೆಯ ವೈಭೋಗ ಎಂಥದು ಎಂಬುದು ಗೊತ್ತೇ ಆಗುವುದಿಲ್ಲ.

ವರ್ಸೈಲ್ಸ್ ಅರಮನೆಯು ಜಗತ್ತಿನ ಅತ್ಯಂತ ಭವ್ಯವಾದ ಸ್ಮಾರಕಗಳಲ್ಲಿ ಒಂದು. ಇದು ಅತಿಮಾನುಷ ವಾಸ್ತುಶಿಲ್ಪಕ್ಕೆ ಹೆಸರಾಗಿದೆ. ಈ ಅರಮನೆಯ ಭವ್ಯತೆಯನ್ನು ವಿವರಿಸಲು ಹೋದರೆ, ಅದು ಕೇವಲ ಒಂದು ಕಟ್ಟಡವಾಗಿ ಕಾಣದೇ ಒಂದು ‘ಸುವರ್ಣ ನಗರಿ’ಯಂತೆ ಭಾಸವಾಗುತ್ತದೆ. ಈ ಅರಮನೆಯು ಎಷ್ಟು ವಿಶಾಲವಾಗಿದೆ ಎಂದರೆ, ಇದರಲ್ಲಿ ಸುಮಾರು 2,300 ಕೊಠಡಿಗಳಿವೆ. ಒಟ್ಟು 63,000 ಚದರ ಮೀಟರ್‌ಗಿಂತಲೂ ಹೆಚ್ಚು ವಿಸ್ತೀರ್ಣದಲ್ಲಿ ಹರಡಿರುವ ಈ ಕಟ್ಟಡವು ಒಂದು ಕಾಲಕ್ಕೆ, ಸಾವಿರಾರು ರಾಜಮನೆತನದ ಸದಸ್ಯರು, ಸೇವಕರು ಮತ್ತು ಗಣ್ಯರನ್ನು ಒಳಗೊಳ್ಳುವ ಸಾಮರ್ಥ್ಯ ಹೊಂದಿತ್ತು. ವರ್ಸೈಲ್ಸ್ ಕೇವಲ ರಾಜರ ವಾಸಸ್ಥಾನವಾಗಿರಲಿಲ್ಲ, ಅದು ಫ್ರಾನ್ಸ್‌ನ ಅಧಿಕಾರದ ಕೇಂದ್ರವಾಗಿತ್ತು. 1919ರಲ್ಲಿ ಮೊದಲ ಜಾಗತಿಕ ಯುದ್ಧವನ್ನು ಅಧಿಕೃತವಾಗಿ ಕೊನೆಗೊಳಿಸಿದ ಪ್ರಸಿದ್ಧ 'ವರ್ಸೈಲ್ಸ್ ಒಪ್ಪಂದ' (Treaty of Versailles) ಈ ಅರಮನೆಯ ಕನ್ನಡಿಗಳ ಹಜಾರದಲ್ಲೇ ಸಹಿಯಾಗಿದ್ದು ಇದರ ಐತಿಹಾಸಿಕ ಮಹತ್ವವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ನವ ಪ್ರವಾಸೋದ್ಯಮ : ಪ್ರವಾಸಿಗರನ್ನು ಮತ್ತೆ ಮತ್ತೆ ಸೆಳೆಯುವ ಕಲೆ

ವರ್ಸೈಲ್ಸ್ ಅರಮನೆಯು ಮನುಷ್ಯನ ಕಲಾ ತೃಷೆ ಮತ್ತು ಅಧಿಕಾರದ ಹಪಾಹಪಿ ಎರಡನ್ನೂ ಏಕಕಾಲಕ್ಕೆ ಪ್ರದರ್ಶಿಸುವ ಜಗತ್ತಿನ ಅದ್ವಿತೀಯ ಸ್ಮಾರಕ. ಇಲ್ಲಿನ 'ಹಾಲ್ ಆಫ್ ಮಿರರ್ಸ್' (ಕನ್ನಡಿಗಳ ಹಜಾರ), ಚಿನ್ನದ ಲೇಪಿತ ಅಲಂಕಾರಗಳು ಮತ್ತು ರಾಜ-ರಾಣಿಯರ ಐಷಾರಾಮಿ ಶಯನಗೃಹಗಳು ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸುತ್ತವೆ. ಅರಮನೆಯ ಹೊರಭಾಗದಲ್ಲಿರುವ ಮೈಲುಗಟ್ಟಲೆ ಹರಡಿರುವ ರಮಣೀಯ ತೋಟಗಳು, ಕಲಾತ್ಮಕ ಕಾರಂಜಿಗಳು ಮತ್ತು ಶಿಲ್ಪಕಲೆಗಳು ಫ್ರೆಂಚ್ ಕಲಾಪ್ರೌಢಿಮೆಯನ್ನು ಸಾರುತ್ತವೆ. ಇದು ಕೇವಲ ಕಟ್ಟಡವಲ್ಲ, ಫ್ರೆಂಚ್ ಇತಿಹಾಸದ ಉಚ್ಛ್ರಾಯ ಮತ್ತು ಕ್ರಾಂತಿಯ ಮೌನ ಸಾಕ್ಷಿಯಾಗಿದೆ.

Untitled design (40)

ಒಮ್ಮೆ ಕಣ್ಣು ಮುಚ್ಚಿ ಕಲ್ಪನೆ ಮಾಡಿಕೊಳ್ಳಿ. ನೀವು ಪ್ಯಾರಿಸ್ ನಗರದ ಗದ್ದಲದಿಂದ ಸ್ವಲ್ಪ ದೂರ ಬಂದು, ಆ ಬೃಹತ್ ಚಿನ್ನದ ಬಾಗಿಲಿನ ಮುಂದೆ ನಿಂತಿದ್ದೀರಿ. ಸೂರ್ಯನ ಕಿರಣಗಳು ಆ ಬಾಗಿಲಿಗೆ ಬಡಿದು ನಿಮ್ಮ ಕಣ್ಣು ಕೋರೈಸುವಾಗ, 'ಅಬ್ಬಾ.. ಇದು ಮನುಷ್ಯ ಕಟ್ಟಿದ್ದಾ ಅಥವಾ ದೇವಲೋಕವೇ ಧರೆಗೆ ಇಳಿದು ಬಂದಿದ್ದಾ?' ಎಂಬ ಪ್ರಶ್ನೆ ನಿಮ್ಮನ್ನು ಕಾಡದಿದ್ದರೆ ಕೇಳಿ. ಇದು ಹದಿನಾಲ್ಕನೇ ಲೂಯಿ ಎಂಬ 'ಸೂರ್ಯ ರಾಜ' ಅಹಂಕಾರ ಮತ್ತು ಸೌಂದರ್ಯದ ಮಿಶ್ರಣದಿಂದ ಕಟ್ಟಿದ ಕನಸಿನ ಅರಮನೆ. ಇಲ್ಲಿನ ಗಾಳಿಯಲ್ಲೂ ಇಂದಿಗೂ ಆ ಫ್ರೆಂಚ್ ರಾಯಲ್ಟಿ ಮತ್ತು ಅಪ್ಸರೆಯರಂತಿದ್ದ ಸುಂದರಿಯರ ಸುಗಂಧದ ವಾಸನೆ ಅಡಗಿದಂತಿದೆ.

ಅರಮನೆಯ ಒಳಗೆ ಕಾಲಿಟ್ಟರೆ ನಿಮ್ಮನ್ನು ಎದುರುಗೊಳ್ಳುವುದು 'ಹಾಲ್ ಆಫ್ ಮಿರರ್ಸ್'. ಅದು ಬರಿ ಕನ್ನಡಿಗಳ ಹಜಾರವಲ್ಲ, ಅದು ವೈಭವದ ಪರಮಾವಧಿ. ಒಂದು ಕಡೆ ಸಾಲು ಸಾಲು ಬೃಹತ್ ಕಿಟಕಿಗಳು, ಇನ್ನೊಂದು ಕಡೆ ಅಷ್ಟೇ ದೊಡ್ಡದಾದ ಹದಿನೇಳು ಕನ್ನಡಿಗಳ ಕಮಾನುಗಳು. ಆ ಕನ್ನಡಿಗಳಲ್ಲಿ ನಿಮ್ಮ ಬಿಂಬವನ್ನು ನೋಡಿಕೊಂಡಾಗ, ನೀವು ಯಾವುದೋ ಕಾಲದ ರಾಜಕುಮಾರನಂತೆ ಭಾಸವಾಗುತ್ತೀರಿ. ಮೇಲ್ಛಾವಣಿಯತ್ತ ಕಣ್ಣು ಹಾಯಿಸಿದರೆ ಅಲ್ಲಿನ ಬಣ್ಣದ ಚಿತ್ರಗಳು ನಿಮ್ಮನ್ನು ಮತ್ತೊಂದು ಲೋಕಕ್ಕೆ ಕರೆದೊಯ್ಯುತ್ತವೆ. ಆ ಕಾಲದಲ್ಲೇ ಇಂಥ ತಂತ್ರಜ್ಞಾನ ಮತ್ತು ಕಲೆ ಇತ್ತಲ್ಲಾ ಅಂತ ಯಾರಿಗಾದರೂ ಬೆರಗಾಗದೇ ಇರದು.

ಇನ್ನು ಅಲ್ಲಿನ ರಾಜ ಮತ್ತು ರಾಣಿಯರ ಶಯನಗೃಹಗಳ ಕಥೆಯೇ ಬೇರೆ. ಆ ಮಖಮಲಿ ಪರದೆಗಳು, ರೇಷ್ಮೆಯ ಹಾಸಿಗೆಗಳು ಮತ್ತು ಮರದ ಮೇಲೆ ಕೆತ್ತಿದ ಆ ಸೂಕ್ಷ್ಮ ಕೆತ್ತನೆಗಳನ್ನು ನೋಡಿದರೆ, 'ರಾಜವೈಭೋಗ' ಅಂದರೆ ಏನು ಅಂತ ಅರ್ಥವಾಗುತ್ತದೆ. ಮೇರಿ ಆಂಟೊನೆಟ್ ಎಂಬ ಸುಂದರಿ ರಾಣಿ ತನ್ನ ಒಡವೆಗಳನ್ನು ಜೋಡಿಸಿಡುತ್ತಿದ್ದ ಜಾಗದಲ್ಲೇ ನಿಂತು ನೋಡುವಾಗ, ಅವಳ ರೇಷ್ಮೆ ಸೀರೆಯ ಸಪ್ಪಳ ಇಂದಿಗೂ ಅಲ್ಲಿನ ಗೋಡೆಗಳಲ್ಲಿ ಪ್ರತಿಧ್ವನಿಸುತ್ತಿದೆಯೇನೋ ಎಂಬ ಭ್ರಮೆ ಆವರಿಸುತ್ತದೆ. ಪ್ರತಿ ಮೂಲೆಯಲ್ಲೂ ಒಂದು ರಹಸ್ಯವಿದೆ, ಪ್ರತಿ ಕಂಬದಲ್ಲೂ ಒಂದು ಪ್ರೇಮಕಥೆಯಿದೆ.

ಅರಮನೆಯಿಂದ ಹೊರಬಂದು ಸ್ವಲ್ಪ ಮುಂದೆ ನಡೆದರೆ ನಿಮ್ಮ ಮುಂದೆ ತೆರೆದುಕೊಳ್ಳುವುದು ವಿಶಾಲವಾದ 'ಗಾರ್ಡನ್ಸ್ ಆಫ್ ವರ್ಸೈಲ್ಸ್'. ಅದು ಕೇವಲ ತೋಟವಲ್ಲ, ಅದು ಪ್ರಕೃತಿಯನ್ನು ಮನುಷ್ಯ ತನ್ನ ಇಚ್ಛೆಯಂತೆ ಬಗ್ಗಿಸಿದ ಅದ್ಭುತ. ಮೈಲುಗಟ್ಟಲೆ ಹರಡಿರುವ ಆ ಹಸಿರು ಹಾಸಿಗೆ, ಸಾಲು ಸಾಲು ಗಿಡಗಳು ಮತ್ತು ಆಕಾಶಕ್ಕೆ ಚಿಮ್ಮುವ ಆ ನೂರಾರು ಕಾರಂಜಿಗಳು ನಿಮ್ಮನ್ನು ಬೆಕ್ಕಸ ಬೆರಗಾಗಿಸುತ್ತವೆ. ಅಪೊಲೋ ದೇವತೆಯ ರಥದ ಕಾರಂಜಿಯ ಮುಂದೆ ನಿಂತು ಆ ನೀರಿನ ತುಂತುರನ್ನು ಮುಖಕ್ಕೆ ಚಿಮ್ಮಿಸಿಕೊಂಡಾಗ ಸಿಗುವ ಸುಖವಿದೆಯಲ್ಲ, ಅದು ಬಣ್ಣಿಸಲು ಅಸಾಧ್ಯ.

Untitled design (39)

ಆದರೆ ಈ ಎಲ್ಲ ಸೌಂದರ್ಯದ ಹಿಂದೆ ಒಂದು ನೋವಿನ ಕಥೆಯೂ ಇದೆ. ಅತ್ತ ಸಾಮಾನ್ಯ ಜನರು ಒಂದು ತುಂಡು ರೊಟ್ಟಿಗಾಗಿ ಕಣ್ಣೀರು ಹಾಕುತ್ತಿದ್ದಾಗ, ಇತ್ತ ರಾಜರು ಈ ಅರಮನೆಯಲ್ಲಿ ಮೋಜು ಮಸ್ತಿಯಲ್ಲಿ ಮುಳುಗಿದ್ದರು. ಕೊನೆಗೆ ಇದೇ ಅರಮನೆಯ ವೈಭವವೇ ಫ್ರೆಂಚ್ ಕ್ರಾಂತಿಗೆ ಕಿಚ್ಚು ಹಚ್ಚಿತು. ವರ್ಸೈಲ್ಸ್ ಅಂದರೆ ಬರಿ ಕಲ್ಲು, ಕನ್ನಡಿ ಮತ್ತು ಚಿನ್ನದ ರಾಶಿಯಲ್ಲ, ಅದು ಮನುಷ್ಯನ ಹಪಾಹಪಿ, ಸೌಂದರ್ಯ ಪ್ರಜ್ಞೆ ಮತ್ತು ಅಧಿಕಾರದ ಮದ ಎಲ್ಲವನ್ನೂ ಒಟ್ಟಿಗೆ ಸಾರುವ ಒಂದು ಜೀವಂತ ಇತಿಹಾಸ.

ಇತಿಹಾಸ ಅಂದ್ರೆ ಬರಿ ಸತ್ತ ಹೋದ ರಾಜರ ಕಥೆಯಲ್ಲ. ಅದು ರಕ್ತ, ಮಾಂಸ, ಹಸಿವು ಮತ್ತು ಹಪಾಹಪಿಗಳ ಒಂದು ವಿಚಿತ್ರ ಸಮ್ಮಿಶ್ರಣ. ಇಂದು ನಾವು ಫ್ರಾನ್ಸ್‌ನ ಪ್ಯಾರಿಸ್ ನಗರದ ಹೊರವಲಯದಲ್ಲಿ ನಿಂತು ಆ 'ವರ್ಸೈಲ್ಸ್' ಅರಮನೆಯನ್ನು ನೋಡಿದರೆ ನಮಗೆ ಕಾಣುವುದು ಬರಿ ಬಂಗಾರ, ಸುಂದರ ತೋಟಗಳು ಮತ್ತು ಪ್ರವಾಸಿಗರ ಗುಂಪು. ಆದರೆ, ಆ ಅರಮನೆಯ ಗೋಡೆಗಳ ಹಿಂದೆ ಅಡಗಿರುವ ರಹಸ್ಯಗಳು, ಅಲ್ಲಿ ನಡೆದ ಕಗ್ಗೊಲೆಗಳು ಮತ್ತು ಸುಗಂಧ ದ್ರವ್ಯಗಳ ಅಡಿಯಲ್ಲಿ ಮುಚ್ಚಿಹೋದ ಗಲೀಜು ಕಥೆಗಳು ನಿಜಕ್ಕೂ ಬೆಚ್ಚಿ ಬೀಳಿಸುವಂಥವು.

ಒಂದು ಕಾಲದಲ್ಲಿ ಈ ವರ್ಸೈಲ್ಸ್ ಅಂದ್ರೆ ಬರೀ ಕಾಡು. ಕಾಡುಹಂದಿಗಳ ಬೇಟೆಗೆ ರಾಜರು ಬರುತ್ತಿದ್ದ ಜಾಗ. ಆದರೆ, ಹದಿನಾಲ್ಕನೇ ಲೂಯಿಗೆ ಒಂದು ಹುಚ್ಚು ಹಿಡಿಯಿತು. ಆತನಿಗೆ ತನ್ನ ಶ್ರೀಮಂತಿಕೆ ಮತ್ತು ಶಕ್ತಿಯನ್ನು ಇಡೀ ಜಗತ್ತಿಗೆ ತೋರಿಸಬೇಕಿತ್ತು. ತನ್ನ ಮಂತ್ರಿ ಫೌಕೆಟ್ ಎಂಬಾತ ಅದ್ದೂರಿಯಾಗಿ ಮನೆ ಕಟ್ಟಿಸಿದ ಎನ್ನುವ ಒಂದೇ ಕಾರಣಕ್ಕೆ ಅವನನ್ನು ಜೈಲಿಗೆ ಹಾಕಿ, ಅವನ ಮನೆಯ ವಾಸ್ತುಶಿಲ್ಪಿಗಳನ್ನೇ ಕರೆಸಿ 'ನನಗೆ ಈ ಪ್ರಪಂಚದಲ್ಲೇ ಅತಿ ದೊಡ್ಡ ಅರಮನೆ ಬೇಕು' ಎಂದು ಹಠ ಹಿಡಿದು ಕೂತ. ಅಲ್ಲಿಂದ ಶುರುವಾಯ್ತು ನೋಡಿ ರಕ್ತದ ಇತಿಹಾಸ. ಜೌಗು ಪ್ರದೇಶವಾಗಿದ್ದ ಆ ಭೂಮಿಯಲ್ಲಿ ಅರಮನೆ ಕಟ್ಟಲು ಸಾವಿರಾರು ಕಾರ್ಮಿಕರು ಪ್ರಾಣ ಬಿಟ್ಟರು. ಸೊಳ್ಳೆಗಳ ಕಾಟ, ಮಲೇರಿಯಾ, ಅಪಘಾತಗಳ ಮಧ್ಯೆ ಎದ್ದು ನಿಂತಿತು ಈ 'ದರ್ಪದ ಬಂಗಲೆ'.

ನೀವು ನಂಬುತ್ತೀರೋ ಇಲ್ಲವೋ, ಇಂದು ವಿಶ್ವದ ಅತ್ಯಂತ ಸುಂದರ ಪ್ರವಾಸಿ ತಾಣವಾಗಿರುವ ವರ್ಸೈಲ್ಸ್ ಅರಮನೆ ಆ ಕಾಲದಲ್ಲಿ ಒಂದು 'ನರಕ'ದಂತೆ ವಾಸನೆ ಬಡಿಯುತ್ತಿತ್ತು. ಈ ಅರಮನೆಯಲ್ಲಿ ಸಾವಿರಾರು ಕೋಣೆಗಳಿದ್ದವು, ಆದರೆ ಅಚ್ಚರಿಯೆಂದರೆ ಒಂದೇ ಒಂದು ಶೌಚಾಲಯವೂ ಇರಲಿಲ್ಲ! ರಾಜರು, ರಾಣಿಯರು, ಮಂತ್ರಿಗಳು ಮತ್ತು ಅವರ ಅಸಂಖ್ಯಾತ ಪ್ರೇಯಸಿಯರು ಎಲ್ಲೆಂದರಲ್ಲಿ ಮಲಮೂತ್ರ ವಿಸರ್ಜನೆ ಮಾಡುತ್ತಿದ್ದರು. ಅರಮನೆಯ ಮೂಲೆ ಮೂಲೆಗಳು ನಾರುತ್ತಿದ್ದವು. ಆ ನಾರುವ ವಾಸನೆಯನ್ನು ಮರೆಮಾಚಲು ಫ್ರೆಂಚ್ ಜನರು ವಿಪರೀತ ಸುಗಂಧ ದ್ರವ್ಯ ಬಳಸಲು ಶುರು ಮಾಡಿದರು. ಇಂದಿಗೂ ಫ್ರಾನ್ಸ್ ಸುಗಂಧ ದ್ರವ್ಯಗಳಿಗೆ ಹೆಸರುವಾಸಿಯಾಗಿರುವುದರ ಹಿಂದೆ ಇಂಥದ್ದೊಂದು ಅಸಹ್ಯಕರ ಇತಿಹಾಸವಿದೆ!

Untitled design (38)

ವರ್ಸೈಲ್ಸ್ ಅರಮನೆಯ ಅತ್ಯಂತ ಆಕರ್ಷಕ ಜಾಗ ಅಂದ್ರೆ 'ಹಾಲ್ ಆಫ್ ಮಿರರ್ಸ್'. ಬರೋಬ್ಬರಿ 357 ಕನ್ನಡಿಗಳನ್ನು ಅಲ್ಲಿ ಜೋಡಿಸಲಾಗಿದೆ. ಅಂದಿನ ಕಾಲಕ್ಕೆ ಕನ್ನಡಿ ಅಂದ್ರೆ ಬಂಗಾರಕ್ಕಿಂತ ಬೆಲೆಬಾಳುವ ವಸ್ತು. ಇಟಲಿಯ ವೆನಿಸ್‌ನಿಂದ ಕನ್ನಡಿ ಮಾಡುವ ತಂತ್ರಜ್ಞರನ್ನು ಫ್ರಾನ್ಸ್‌ಗೆ ಕರೆತಂದ ಲೂಯಿ, ಅವರೆಲ್ಲರನ್ನು ಅಲ್ಲಿಂದ ಹೋಗದಂತೆ ಕಟ್ಟಿಹಾಕಿದ. ಯಾಕೆ ಗೊತ್ತಾ? ಆ ತಂತ್ರಜ್ಞಾನ ಬೇರೆಯವರಿಗೆ ಗೊತ್ತಾಗಬಾರದು ಎಂದು! ಕಲೆಗಾಗಿ ನಡೆದ ಈ ಕ್ರೌರ್ಯ ಅರಮನೆಯ ಗೋಡೆಗಳಲ್ಲಿ ಅಡಗಿದೆ.

ಫ್ರಾನ್ಸ್ ಇತಿಹಾಸದ ಅತ್ಯಂತ ಪ್ರಭಾವಶಾಲಿ, ವಿವಾದಾತ್ಮಕ ಮತ್ತು ವೈಭವೋಪೇತ ರಾಜನೆಂದರೆ ಅದು ಹದಿನಾಲ್ಕನೇ ಲೂಯಿ. ಇವನನ್ನು ಇತಿಹಾಸವು 'ಸೂರ್ಯ ರಾಜ' ಎಂದೇ ಗುರುತಿಸುತ್ತದೆ. ಇವನ ಜೀವನ ಕ್ರಮವು ಎಷ್ಟು ವಿಲಕ್ಷಣವಾಗಿತ್ತೆಂದರೆ, ಅದು ಸಾಮಾನ್ಯ ಮನುಷ್ಯನ ಕಲ್ಪನೆಗೂ ನಿಲುಕದ್ದು. ಇವನ ದೈನಂದಿನ ಬದುಕು ಕೇವಲ ಖಾಸಗಿ ಜೀವನವಾಗಿರಲಿಲ್ಲ, ಅದು ಇಡೀ ಫ್ರಾನ್ಸ್ ದೇಶದ ಒಂದು 'ರಾಜಕೀಯ ಪ್ರದರ್ಶನ'ವಾಗಿತ್ತು. ಲೂಯಿ ತನ್ನನ್ನು ತಾನು ಗ್ರೀಕ್ ದೇವತೆ 'ಅಪೊಲೊ'ನಿಗೆ ಹೋಲಿಸಿಕೊಳ್ಳುತ್ತಿದ್ದ. ಸೂರ್ಯ ಹೇಗೆ ಇಡೀ ಸೌರಮಂಡಲದ ಕೇಂದ್ರವೋ ಮತ್ತು ಸೂರ್ಯನಿಲ್ಲದೇ ಹೇಗೆ ಜಗತ್ತಿಲ್ಲವೋ, ಹಾಗೆಯೇ ತಾನಿಲ್ಲದೇ ಫ್ರಾನ್ಸ್ ಇಲ್ಲ ಎಂಬುದು ಅವನ ನಂಬಿಕೆಯಾಗಿತ್ತು. ಅವನ ಅಧಿಕಾರ ಮುದ್ರೆಗಳಲ್ಲಿ ಸೂರ್ಯನ ಚಿತ್ರವಿರುತ್ತಿತ್ತು. ‘ನಾನೇ ರಾಜ್ಯ’ ಎಂಬುದು ಅವನ ಪ್ರಸಿದ್ಧ ಮಾತು. ಅವನ ಜೀವನದ ಪ್ರತಿ ಕ್ಷಣವೂ ಸೂರ್ಯನ ಚಲನೆಯಷ್ಟೇ ನಿಖರ ಮತ್ತು ವೈಭವಯುತವಾಗಿರಬೇಕು ಎಂದು ಅವನು ಬಯಸುತ್ತಿದ್ದ.

ಲೂಯಿಯ ಜೀವನದ ಅತ್ಯಂತ ಆಸಕ್ತಿದಾಯಕ ಭಾಗವೆಂದರೆ ಅವನ ಬೆಳಗಿನ ಚಟುವಟಿಕೆ. ರಾಜ ಎದ್ದ ತಕ್ಷಣ ಅವನಿಗೆ ಸ್ನಾನ ಮಾಡಿಸುವುದು, ಬಟ್ಟೆ ತೊಡಿಸುವುದು ಕೂಡ ಒಂದು ದೊಡ್ಡ ಸಮಾರಂಭವಾಗಿತ್ತು. ಇದನ್ನು ‘ಲೇ ಲಿವರ್' ಎಂದು ಕರೆಯಲಾಗುತ್ತಿತ್ತು. ಪ್ರತಿ ಬೆಳಗ್ಗೆ ಸುಮಾರು ನೂರಕ್ಕೂ ಹೆಚ್ಚು ಗಣ್ಯರು ರಾಜನ ಶಯನಗೃಹದಲ್ಲಿ ಜಮಾಯಿಸುತ್ತಿದ್ದರು. ರಾಜನಿಗೆ ಅಂಗಿ ತೊಡಿಸುವ ಭಾಗ್ಯ ಅಥವಾ ಅವನಿಗೆ ಕ್ಷೌರ ಮಾಡುವಾಗ ಪಕ್ಕದಲ್ಲಿ ನಿಲ್ಲುವ ಅವಕಾಶ ಸಿಗುವುದು ಆ ಕಾಲದ ಗಣ್ಯರಿಗೆ ಸಿಗುತ್ತಿದ್ದ ಅತಿದೊಡ್ಡ ಗೌರವವಾಗಿತ್ತು! ರಾಜನು ತನ್ನ ಕಾಲುಗಳನ್ನು ಹಾಸಿಗೆಯಿಂದ ಕೆಳಗಿಟ್ಟ ಕೂಡಲೇ ಪ್ರಾರ್ಥನೆ ಸಲ್ಲಿಸಲಾಗುತ್ತಿತ್ತು. ಅಂದರೆ, ರಾಜ ಎದ್ದರೆ ಮಾತ್ರ ಫ್ರಾನ್ಸ್ ಎಚ್ಚರಗೊಂಡಂತೆ ಎಂಬ ವಾತಾವರಣ ಅಲ್ಲಿರುತ್ತಿತ್ತು.

ವಿಪರ್ಯಾಸವೆಂದರೆ, ಇಷ್ಟೊಂದು ವೈಭವದ ನಡುವೆ ಬದುಕುತ್ತಿದ್ದ ಲೂಯಿಗೆ ನೀರಿನಲ್ಲಿ ಸ್ನಾನ ಮಾಡುವುದೆಂದರೆ ವಿಪರೀತ ಭಯವಿತ್ತು. ಅವನು ತನ್ನ ಜೀವನದಲ್ಲಿ ಕೇವಲ ಎರಡೇ ಬಾರಿ ಪೂರ್ಣ ಪ್ರಮಾಣದ ಸ್ನಾನ ಮಾಡಿದ್ದ. ನೀರಿನಿಂದ ರೋಗಗಳು ಹರಡುತ್ತವೆ ಎಂಬ ಭಯ ಆ ಕಾಲದಲ್ಲಿತ್ತು. ಹೀಗಾಗಿ, ರಾಜನು ಸ್ನಾನದ ಬದಲು ಆಲ್ಕೋಹಾಲ್ ಮತ್ತು ಸೆಂಟ್ ಹಚ್ಚಿದ ಬಟ್ಟೆಗಳಿಂದ ತನ್ನ ದೇಹವನ್ನು ಒರೆಸಿಕೊಳ್ಳುತ್ತಿದ್ದ. ದಿನಕ್ಕೆ ಹಲವು ಬಾರಿ ಬಟ್ಟೆಗಳನ್ನು ಬದಲಾಯಿಸುವುದು ಅವನ ಅಭ್ಯಾಸವಾಗಿತ್ತು.

Untitled design (37)

ಲೂಯಿ ಮಹಾ ಹೊಟ್ಟೆಬಾಕನಾಗಿದ್ದ. ಅವನ ರಾತ್ರಿಯ ಊಟವು ಒಂದು ಅದ್ಭುತ ಪ್ರದರ್ಶನದಂತಿರುತ್ತಿತ್ತು. ಸುಮಾರು 40-50 ಬಗೆಯ ಖಾದ್ಯಗಳನ್ನು ಅವನ ಮುಂದೆ ಸಾಲಾಗಿ ಇಡಲಾಗುತ್ತಿತ್ತು. ಒಬ್ಬ ರಾಜನಾಗಿ ಅವನು ಕೇವಲ ನೈಸರ್ಗಿಕ ಹಣ್ಣುಗಳು, ಮಾಂಸ ಮತ್ತು ಸಿಹಿತಿಂಡಿಗಳನ್ನು ಮಾತ್ರ ಸೇವಿಸುತ್ತಿರಲಿಲ್ಲ, ಅವನು ಅವುಗಳ ಪ್ರದರ್ಶನಕ್ಕೂ ಮಹತ್ವ ನೀಡುತ್ತಿದ್ದ. ಊಟ ಮಾಡುವಾಗಲೂ ನೂರಾರು ಜನರು ಅವನ ಸುತ್ತ ನಿಂತು ಅವನು ಹೇಗೆ ತಿನ್ನುತ್ತಾನೆ ಎಂಬುದನ್ನು ನೋಡಬೇಕಿತ್ತು. ಲೂಯಿ ವರ್ಸೈಲ್ಸ್ ಅರಮನೆಯನ್ನು ಕಟ್ಟಿಸಿದ್ದು ಕೇವಲ ಸುಖಕ್ಕಾಗಿ ಮಾತ್ರವಲ್ಲ, ಅದೊಂದು ರಾಜಕೀಯ ತಂತ್ರವಾಗಿತ್ತು. ಫ್ರಾನ್ಸ್‌ನ ಪ್ರಬಲ ಜಮೀನುದಾರರು ಮತ್ತು ಶ್ರೀಮಂತರು ತನ್ನ ವಿರುದ್ಧ ಸಂಚು ಮಾಡಬಾರದೆಂದು ಅವರೆಲ್ಲರಿಗೂ ಅರಮನೆಯಲ್ಲೇ ವಾಸಿಸಲು ಕಡ್ಡಾಯ ಮಾಡಿದ್ದ. ಅವರು ರಾಜನ ಪ್ರೀತಿ ಮತ್ತು ಸೌಲಭ್ಯಗಳಿಗಾಗಿ ಹಪಹಪಿಸುವಂತೆ ಮಾಡಿದ್ದ. ಹೀಗಾಗಿ, ಪ್ರಬಲ ವ್ಯಕ್ತಿಗಳು ರಾಜ್ಯಭಾರದ ಬಗ್ಗೆ ತಲೆಕೆಡಿಸಿಕೊಳ್ಳುವ ಬದಲು, 'ರಾಜನ ಮುಂದೆ ನಿಲ್ಲಲು ಯಾವ ಬಣ್ಣದ ಬಟ್ಟೆ ಹಾಕಬೇಕು?' ಎಂಬ ಕ್ಷುಲ್ಲಕ ವಿಷಯಗಳಲ್ಲಿ ಸ್ಪರ್ಧಿಸುವಂತೆ ಚಾಣಾಕ್ಷ ಲೂಯಿ ಮಾಡಿದ್ದ.

ಹದಿನಾಲ್ಕನೇ ಲೂಯಿ ಕೇವಲ ಐದೂವರೆ ಅಡಿ ಎತ್ತರವಿದ್ದ. ತನ್ನ ಎತ್ತರ ಕಡಿಮೆ ಇದೆ ಎಂದು ಭಾವಿಸಿದ ಅವನು, ಐದು ಇಂಚು ಎತ್ತರದ ಹಿಮ್ಮಡಿಯ ಚಪ್ಪಲಿಗಳನ್ನು ಧರಿಸಲು ಶುರು ಮಾಡಿದ. ಆ ಹಿಮ್ಮಡಿಗಳು ಕೆಂಪು ಬಣ್ಣದಲ್ಲಿರಬೇಕಿತ್ತು. ಅಂದಿನಿಂದಲೇ ಕೆಂಪು ಬಣ್ಣದ ಹೀಲ್ಸ್ ಫ್ಯಾಷನ್ ಲೋಕಕ್ಕೆ ಕಾಲಿಟ್ಟಿತು. ಅಲ್ಲದೇ, ಅವನು ಬೃಹತ್ ಗಾತ್ರದ 'ವಿಗ್'ಗಳನ್ನು ಧರಿಸುತ್ತಿದ್ದ. ರಾಜನ ವಿಗ್ ದೊಡ್ಡದಿದ್ದಷ್ಟೂ ಅವನ ಅಧಿಕಾರ ದೊಡ್ಡದು ಎಂಬ ಸಂಕೇತ ಅದಾಗಿತ್ತು.

ಇದನ್ನೂ ಓದಿ: ಪ್ರವಾಸಿ ತಾಣವನ್ನು ಕುಲಗೆಡಿಸುವುದರಲ್ಲೂ ನಾವು 'ವಿಶ್ವಗುರು'!

ರಾಜನು ಮಲಗುವ ಸಮಯವೂ ಬೆಳಗಿನಷ್ಟೇ ಆಡಂಬರದಿಂದ ಕೂಡಿರುತ್ತಿತ್ತು. ಇದನ್ನು 'ಕೌಚರ್' ಎಂದು ಕರೆಯುತ್ತಿದ್ದರು. ಇಡೀ ದಿನದ ರಾಜಕಾರಣ, ಯುದ್ಧಗಳ ತಂತ್ರ ಮತ್ತು ಕಲಾ ಪ್ರದರ್ಶನಗಳ ನಂತರ ರಾಜನು ಮಲಗುವಾಗಲೂ ಜನಸಂದಣಿ ಇರುತ್ತಿತ್ತು. ಅವನು ಸುಮಾರು 72 ವರ್ಷಗಳ ಕಾಲ ಫ್ರಾನ್ಸ್ ಅನ್ನು ಆಳಿದ. ಇದು ಯುರೋಪಿನ ಇತಿಹಾಸದಲ್ಲೇ ಅತ್ಯಂತ ಸುದೀರ್ಘ ಆಳ್ವಿಕೆ. ಹದಿನಾಲ್ಕನೇ ಲೂಯಿಯ ಜೀವನ ಅತಿರೇಕದ ವೈಭವ ಮತ್ತು ಕಟ್ಟುನಿಟ್ಟಾದ ನಿಯಮಗಳ ಸಮ್ಮಿಲನವಾಗಿತ್ತು. ಅವನು ತನ್ನನ್ನು ತಾನು ದೇವರ ಪ್ರತಿನಿಧಿ ಎಂದು ನಂಬಿದ್ದ ಮತ್ತು ಅದರಂತೆಯೇ ಬದುಕಿದ. ಅವನ ಅತಿಯಾದ ಖರ್ಚು ಫ್ರಾನ್ಸ್ ಅನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಿದರೂ, ಅವನು ಬಿಟ್ಟು ಹೋದ ವರ್ಸೈಲ್ಸ್ ಅರಮನೆ ಮತ್ತು ಫ್ರೆಂಚ್ ಸಂಸ್ಕೃತಿಯ ಪ್ರಭಾವ ಇಂದಿಗೂ ಜಗತ್ತಿನಾದ್ಯಂತ ಅಚ್ಚಳಿಯದೆ ಉಳಿದಿದೆ.

ಹದಿನಾಲ್ಕನೇ ಲೂಯಿ ನಿರ್ಮಿಸಿದ ವರ್ಸೈಲ್ಸ್ ಅರಮನೆಯ ವೈಭವವು ಅವನ ಮರಿಮೊಮ್ಮಗ ಹದಿನಾರನೇ ಲೂಯಿ ಮತ್ತು ಅವನ ರಾಣಿ ಮೇರಿ ಆಂಟೊನೆಟ್ ಕಾಲಕ್ಕೆ ಬರುವಷ್ಟರಲ್ಲಿ ಒಂದು ಭೀಕರ ದುರಂತವಾಗಿ ಮಾರ್ಪಟ್ಟಿತು. ಇದು ಇತಿಹಾಸದ ಅತ್ಯಂತ ರೋಚಕ ಮತ್ತು ರಕ್ತಸಿಕ್ತ ಅಧ್ಯಾಯಗಳಲ್ಲಿ ಒಂದು. ಹದಿನಾರನೇ ಲೂಯಿ ಕೆಟ್ಟವನಾಗಿರಲಿಲ್ಲ, ಆದರೆ ಅವನು ಒಬ್ಬ 'ಅಸಮರ್ಥ' ರಾಜನಾಗಿದ್ದ. ಅವನಿಗೆ ರಾಜ್ಯಭಾರ ಮಾಡುವುದಕ್ಕಿಂತ ಬೀಗಗಳನ್ನು ದುರಸ್ತಿ ಮಾಡುವುದು (Locksmithing) ಮತ್ತು ಬೇಟೆಯಾಡುವುದೆಂದರೆ ಪಂಚಪ್ರಾಣ. ಅತ್ತ ಹದಿನಾಲ್ಕು ವರ್ಷದ ಬಾಲಕಿಯಾಗಿ ಆಸ್ಟ್ರಿಯಾದಿಂದ ಫ್ರಾನ್ಸ್‌ಗೆ ಸೊಸೆಯಾಗಿ ಬಂದ ಮೇರಿ ಆಂಟೊನೆಟ್, ವರ್ಸೈಲ್ಸ್‌ನ ಆಡಂಬರಕ್ಕೆ ಮರುಳಾದಳು. ಅವಳಿಗೆ ಫ್ರಾನ್ಸ್‌ನ ಹಸಿವು, ಬಡತನದ ಅರಿವೇ ಇರಲಿಲ್ಲ. ಅವಳು ರೇಷ್ಮೆ ಸೀರೆ, ವಜ್ರದ ಹಾರ ಮತ್ತು ಪಾರ್ಟಿಗಳಲ್ಲಿ ಮುಳುಗಿಹೋದಳು. ಇತಿಹಾಸ ಅವಳನ್ನು 'ಮ್ಯಾಡಮ್ ಡೆಫಿಸಿಟ್' (ಖರ್ಚುಬಾಕ ರಾಣಿ) ಎಂದೇ ಕರೆದಿದೆ.

ಫ್ರಾನ್ಸ್‌ನಲ್ಲಿ ಬರಗಾಲ ಬಂದು ಜನ ರೊಟ್ಟಿಗಾಗಿ ಬೀದಿಯಲ್ಲಿ ಸಾಯುತ್ತಿದ್ದರು. ಆಗ ರಾಣಿ ಮೇರಿ ಆಂಟೊನೆಟ್, ‘ಜನರಿಗೆ ರೊಟ್ಟಿ ಸಿಗದಿದ್ದರೆ ಏನಂತೆ, ಅವರು ಕೇಕ್ ತಿನ್ನಲಿ!’ ಎಂದು ಹೇಳಿದಳು ಎಂಬ ಮಾತು ಕಾಳ್ಗಿಚ್ಚಿನಂತೆ ಹರಡಿತು. ಇದು ನಿಜವೋ ಸುಳ್ಳೋ ಎಂಬ ಚರ್ಚೆ ಇಂದಿಗೂ ಇದೆ, ಆದರೆ ಈ ಮಾತು ಜನಸಾಮಾನ್ಯರ ಆಕ್ರೋಶಕ್ಕೆ ತುಪ್ಪ ಸುರಿಯಿತು. ವರ್ಸೈಲ್ಸ್ ಅರಮನೆಯ ಒಳಗಿನ ಐಷಾರಾಮಿ ಮತ್ತು ಹೊರಗಿನ ಜನರ ಹಸಿವು – ಈ ವ್ಯತ್ಯಾಸವೇ ಫ್ರೆಂಚ್ ಕ್ರಾಂತಿಗೆ ನಾಂದಿಯಾಯಿತು.

Untitled design (35)

1789ರ ಅಕ್ಟೋಬರ್‌ನಲ್ಲಿ ಸಾವಿರಾರು ಜನ ಮಹಿಳೆಯರು ರೊಟ್ಟಿಗಾಗಿ ಆಗ್ರಹಿಸಿ ಪ್ಯಾರಿಸ್‌ನಿಂದ ವರ್ಸೈಲ್ಸ್‌ಗೆ ಪಾದಯಾತ್ರೆ ಮಾಡಿದರು. ಅವರು ಅರಮನೆಯ ಬಾಗಿಲನ್ನು ಮುರಿದು ಒಳನುಗ್ಗಿದರು. ರಾಜ ಮತ್ತು ರಾಣಿಯನ್ನು ಅರಮನೆಯಿಂದ ಎಳೆದುಕೊಂಡು ಬಂದು ಪ್ಯಾರಿಸ್‌ನ 'ಟುಯಿಲೆರಿಸ್' ಎಂಬ ಜೈಲಿನಂಥ ಅರಮನೆಯಲ್ಲಿ ಇರಿಸಲಾಯಿತು. ಅಲ್ಲಿಂದ ಅವರ ವೈಭವದ ದಿನಗಳು ಮುಗಿದು, ಅವಮಾನದ ದಿನಗಳು ಶುರುವಾದವು. 1791ರಲ್ಲಿ ರಾಜ ಮತ್ತು ರಾಣಿ ಸಾಧಾರಣ ಬಟ್ಟೆ ಧರಿಸಿ ದೇಶ ಬಿಟ್ಟು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಗಡಿಗೆ ಹತ್ತಿರವಿರುವಾಗ ಒಬ್ಬ ಸಾಮಾನ್ಯ ವ್ಯಕ್ತಿ ರಾಜನ ಮುಖವನ್ನು ನೋಟಿನ ಮೇಲಿರುವ ಚಿತ್ರಕ್ಕೆ ಹೋಲಿಸಿ ಗುರುತಿಸಿಬಿಟ್ಟ! ರಾಜಮನೆತನವನ್ನು ಬಂಧಿಸಿ ವಾಪಸ್ ಪ್ಯಾರಿಸ್‌ಗೆ ತರಲಾಯಿತು. ಈ ಘಟನೆಯಿಂದ ಜನರಿಗೆ ರಾಜನ ಮೇಲೆ ಇದ್ದ ಅಲ್ಪಸ್ವಲ್ಪ ಗೌರವವೂ ಹೋಯಿತು. ರಾಜ ತನ್ನ ದೇಶವನ್ನೇ ಬಿಟ್ಟು ಓಡಿಹೋಗುತ್ತಿದ್ದಾನೆ ಅಂದರೆ ಅವನು ದೇಶದ್ರೋಹಿ ಎಂದು ಘೋಷಿಸಲಾಯಿತು.

ಫ್ರಾನ್ಸ್ ಗಣರಾಜ್ಯವಾಯಿತು. ರಾಜ ಹದಿನಾರನೇ ಲೂಯಿಯನ್ನು ನ್ಯಾಯಾಲಯಕ್ಕೆ ಎಳೆತರಲಾಯಿತು. ಅವನಿಗೆ ಮರಣದಂಡನೆ ವಿಧಿಸಲಾಯಿತು. 1793ರಲ್ಲಿ ಪ್ಯಾರಿಸ್‌ನ ಚೌಕದಲ್ಲಿ ಸಾವಿರಾರು ಜನರ ಮುಂದೆ ಲೂಯಿಯ ತಲೆಯನ್ನು 'ಗಿಲ್ಲೋಟಿನ್' (ತಲೆ ಕತ್ತರಿಸುವ ಯಂತ್ರ) ಎಂಬ ಯಂತ್ರದ ಅಡಿ ಇಟ್ಟು ಕತ್ತರಿಸಲಾಯಿತು. ಸಾಯುವ ಮುನ್ನ ಅವನು ‘ನಾನು ನಿರ್ದೋಷಿಯಾಗಿ ಸಾಯುತ್ತಿದ್ದೇನೆ’ ಎಂದು ಹೇಳಿದರೂ ಜನರ ಆರ್ಭಟದಲ್ಲಿ ಅದು ಯಾರಿಗೂ ಕೇಳಿಸಲಿಲ್ಲ.

ರಾಜನ ಸಾವಿನ ಕೆಲವು ತಿಂಗಳ ನಂತರ ಮೇರಿ ಆಂಟೊನೆಟ್ ಸರದಿ ಬಂತು. ಅವಳ ಮಕ್ಕಳನ್ನು ಅವಳಿಂದ ಕಸಿದುಕೊಳ್ಳಲಾಯಿತು. ಅವಳ ಸುಂದರವಾದ ಕೂದಲು ಬಿಳಿಯಾಗಿ ಹೋಗಿತ್ತು. ಅವಳನ್ನು ಒಂದು ಸಣ್ಣ ಮರದ ಗಾಡಿಯಲ್ಲಿ ಕೂರಿಸಿ, ಜನರ ಹೀಯಾಳಿಕೆಯ ನಡುವೆ ಅದೇ ಗಿಲ್ಲೋಟಿನ್ ಹತ್ತಿರ ಕರೆತರಲಾಯಿತು. 1793ರಲ್ಲಿ ಅವಳ ತಲೆಯೂ ಉರುಳಿತು. ಹದಿನಾಲ್ಕನೇ ಲೂಯಿ ಅಹಂಕಾರದಿಂದ ಕಟ್ಟಿದ ವರ್ಸೈಲ್ಸ್ ಅರಮನೆಯು, ಅವನ ಮರಿಮೊಮ್ಮಗನ ಕಾಲಕ್ಕೆ ರಕ್ತದ ಮಡುವಿನಲ್ಲಿ ಮುಳುಗಿಹೋಯಿತು. ಅತಿಯಾದ ಅಧಿಕಾರ ಮತ್ತು ಜನರ ಕಷ್ಟಗಳಿಗೆ ಕಿವುಡಾದ ರಾಜಪ್ರಭುತ್ವದ ಅಂತ್ಯ ಹೀಗೆಯೇ ಇರುತ್ತದೆ ಎಂಬುದಕ್ಕೆ ಈ ದಂಪತಿಗಳ ಕಥೆ ಒಂದು ಪಾಠ. ಇಂದು ವರ್ಸೈಲ್ಸ್ ಅರಮನೆಯಲ್ಲಿ ಅವರ ಚಿತ್ರಗಳನ್ನು ನೋಡುವಾಗ, ಆ ವೈಭವದ ಹಿಂದೆ ಅಡಗಿರುವ ಈ ಕಣ್ಣೀರಿನ ಕಥೆ ನಮ್ಮ ಎದೆ ತಟ್ಟದೇ ಇರದು.

ನೀವು ವರ್ಸೈಲ್ಸ್‌ಗೆ ಹೋದರೆ ಅಲ್ಲಿನ ಚಿನ್ನದ ಬಾಗಿಲುಗಳನ್ನು ನೋಡಿ ಮಾರು ಹೋಗಬೇಡಿ. ಆ ಬಾಗಿಲುಗಳ ಹಿಂದೆ ಅದೆಷ್ಟೋ ಜನರ ಶಾಪವಿದೆ, ಅದೆಷ್ಟೋ ಜನರ ಹಸಿವಿನ ಆರ್ತನಾದವಿದೆ. ವರ್ಸೈಲ್ಸ್ ಅಂದ್ರೆ ಕೇವಲ ಒಂದು ಕಟ್ಟಡವಲ್ಲ; ಅದು ಮನುಷ್ಯನ ಅತಿ ಆಸೆ, ಅಹಂಕಾರ ಮತ್ತು ಅಂತಿಮವಾಗಿ ಅವನ ಪತನದ ಮೌನ ಸಾಕ್ಷಿ. ಇತಿಹಾಸ ಎಂದರೆ ಹೀಗೆಯೇ... ಅದು ಸುಂದರವೂ ಹೌದು, ಭೀಕರವೂ ಹೌದು!

ವರ್ಸೈಲ್ಸ್ ಅರಮನೆಯಲ್ಲಿ ಗೋಡೆಗಳಿಗೂ ಕಿವಿಯಿತ್ತು. ರಾಜನಿಗೆ ತನ್ನ ವಿರುದ್ಧ ಯಾರು ಪಿತೂರಿ ಮಾಡುತ್ತಾರೆ ಎಂಬ ಆತಂಕವಿತ್ತು. ಅದಕ್ಕಾಗಿಯೇ ಅರಮನೆಯಲ್ಲಿ ನೂರಾರು 'ರಹಸ್ಯ ದಾರಿ'ಗಳನ್ನು ನಿರ್ಮಿಸಿದ್ದ. ರಾಜ ಯಾವಾಗ ಎಲ್ಲಿಂದ ಪ್ರತ್ಯಕ್ಷನಾಗುತ್ತಾನೋ ಯಾರಿಗೂ ತಿಳಿಯುತ್ತಿರಲಿಲ್ಲ. ಮಂತ್ರಿಗಳು ತಮ್ಮ ಪ್ರೇಯಸಿಯರ ಜತೆ ಆಡುವ ಖಾಸಗಿ ಮಾತುಗಳು ಕೂಡ ರಾಜನ ಕಿವಿಗೆ ತಲುಪುವಂತೆ ವ್ಯವಸ್ಥೆ ಇತ್ತು. ಈ ಅರಮನೆ ಅಕ್ಷರಶಃ ಒಂದು ಸುಂದರ 'ಜೈಲು' ಆಗಿತ್ತು. ಶ್ರೀಮಂತರು ಹೊರಗೆ ಹೋಗಿ ದಂಗೆ ಎಬ್ಬಿಸಬಾರದು ಎಂಬ ಕಾರಣಕ್ಕೆ ರಾಜ ಅವರೆಲ್ಲರಿಗೂ ಅರಮನೆಯಲ್ಲೇ ಐಷಾರಾಮಿ ವಾಸ್ತವ್ಯ ಕೊಟ್ಟು, ಅವರನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದ್ದ.

ನೀವು ವರ್ಸೈಲ್ಸ್‌ನ ಫೊಟೋ ನೋಡಿದರೆ ಮೊದಲು ಕಣ್ಣಿಗೆ ಬೀಳುವುದು ಅಲ್ಲಿನ ವಿಶಾಲವಾದ ಉದ್ಯಾನವನ (The Gardens of Versailles). ಮೈಲುಗಟ್ಟಲೆ ಹರಡಿರುವ ಈ ತೋಟದಲ್ಲಿ ಸಾವಿರಾರು ಕಾರಂಜಿಗಳಿವೆ. ಆದರೆ ಈ ಕಾರಂಜಿಗಳನ್ನು ಓಡಿಸಲು ಅಂದು ನೀರಿನ ತತ್ವಾರವಿತ್ತು. ಪ್ಯಾರಿಸ್‌ನ ಸೇನ್ ನದಿಯಿಂದ ನೀರನ್ನು ತರಲು 'ಮೆಷಿನ್ ಡಿ ಮಾರ್ಲಿ' ಎಂಬ ಬೃಹತ್ ಯಂತ್ರವನ್ನು ತಯಾರಿಸಲಾಯಿತು. ಇದು ಆ ಕಾಲದ ಎಂಜಿನಿಯರಿಂಗ್ ಅದ್ಭುತವೂ ಹೌದು. ಆದರೆ ಈ ಕಾರಂಜಿಗಳಿಗಾಗಿ ಹಳ್ಳಿಯ ರೈತರ ಬೆಳೆಗಳಿಗೆ ನೀರಿಲ್ಲದಂತೆ ಮಾಡಲಾಗಿತ್ತು. ರಾಜ ತೋಟದಲ್ಲಿ ನಡೆಯುವಾಗ ಮಾತ್ರ ಕಾರಂಜಿಗಳು ಚಿಮ್ಮುತ್ತಿದ್ದವು. ಆತ ಅಲ್ಲಿಂದ ಹೋದ ಕೂಡಲೇ ನೀರನ್ನು ಉಳಿಸಲು ಅವುಗಳನ್ನು ಆರಿಸಲಾಗುತ್ತಿತ್ತು!

ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಒಂದು ವಿಷಯ ಸ್ಪಷ್ಟವಾಗುತ್ತದೆ - ವರ್ಸೈಲ್ಸ್ ಅರಮನೆಯಲ್ಲಿ ಮರಣದ ವಾಸನೆ ಯಾವಾಗಲೂ ಇರುತ್ತಿತ್ತು. ಸರಿಯಾದ ವೈದ್ಯಕೀಯ ಸೌಲಭ್ಯವಿಲ್ಲದೇ, ಕೊಳಕು ವಾತಾವರಣದಲ್ಲಿ ರಾಜಮನೆತನದ ಅನೇಕ ಮಕ್ಕಳು ಹುಟ್ಟುತ್ತಲೇ ಸತ್ತು ಹೋದರು. ರಾಜ ಹದಿನಾಲ್ಕನೇ ಲೂಯಿ ತನ್ನ ಜೀವಿತಾವಧಿಯಲ್ಲಿ ತನ್ನ ಮಗ, ಮೊಮ್ಮಗ ಮತ್ತು ಮರಿಮೊಮ್ಮಗನ ಸಾವನ್ನು ಕಾಣಬೇಕಾಗಿ ಬಂತು. ಅರಮನೆಯ ವೈಭವ ಆತನ ದುಃಖವನ್ನು ಅಳಿಸಲಿಲ್ಲ. ವರ್ಸೈಲ್ಸ್ ಅರಮನೆಯ ವೈಭವಕ್ಕೆ ಮಂಗಳ ಹಾಡಿದ್ದು 1789ರ ಫ್ರೆಂಚ್ ಕ್ರಾಂತಿ. ಹಸಿವಿನಿಂದ ಕಂಗಾಲಾದ ಜನಸಾಮಾನ್ಯರು ಅರಮನೆಯ ಬಾಗಿಲು ಮುರಿದು ಒಳನುಗ್ಗಿದಾಗ, ಅಲ್ಲಿನ ರೇಷ್ಮೆ ಪರದೆಗಳು ರಕ್ತದಿಂದ ಒದ್ದೆಯಾದವು.

ಇಂದು ನೀವು ವರ್ಸೈಲ್ಸ್‌ಗೆ ಹೋದರೆ ಆ ಕನ್ನಡಿ ಮಹಲಿನಲ್ಲಿ ನಿಮ್ಮ ಪ್ರತಿಬಿಂಬ ನೋಡಿ ಸಂಭ್ರಮಿಸುತ್ತೀರಿ. ಆದರೆ ಒಂದು ಕ್ಷಣ ಕಣ್ಣು ಮುಚ್ಚಿ ಯೋಚಿಸಿ, ಅದೇ ಕನ್ನಡಿಗಳಲ್ಲಿ ಅಂದು ಅದೆಷ್ಟು ಪಿತೂರಿಗಳು, ಅದೆಷ್ಟು ಕಣ್ಣೀರು ಮತ್ತು ಅದೆಷ್ಟು ರಕ್ತದ ಕಲೆಗಳು ಮೂಡಿ ಮಾಯವಾಗಿವೆಯೋ? ಇತಿಹಾಸ ಅಂದ್ರೆ ಬರಿ ವಿಜಯಗಾಥೆಯಲ್ಲ, ಅದು ಮನುಷ್ಯನ ಪತನದ ಎಚ್ಚರಿಕೆಯ ಗಂಟೆ ಕೂಡ. ವರ್ಸೈಲ್ಸ್ ಒಂದು ಸುಂದರ ಸ್ಮಶಾನ. ಅಲ್ಲಿನ ಪ್ರತಿ ಇಟ್ಟಿಗೆಯೂ ಒಬ್ಬೊಬ್ಬ ಬಡವನ ಹಸಿವಿನ ಕಥೆ ಹೇಳುತ್ತದೆ.

Untitled design (36)

ಪ್ಯಾರಿಸ್ಸಿನ ವರ್ಸೈಲ್ಸ್ ಭವ್ಯ ಅರಮನೆಯ ಗರ್ಭದಲ್ಲಿ ಅಡಗಿರುವ ಕೆಲವು ರೋಚಕ ಸಂಗತಿಗಳು.

* ರಾಜನಿಗೆ ಬಿಸಿ ಬಿಸಿ ಊಟ ಮಾಡುವುದೆಂದರೆ ಇಷ್ಟ. ಆದರೆ ಅಡುಗೆ ಮನೆಯಿಂದ ರಾಜನ ಡೈನಿಂಗ್ ಟೇಬಲ್‌ಗೆ ಊಟ ತಲುಪಲು ಸುಮಾರು 15-20 ನಿಮಿಷ ಬೇಕಾಗುತ್ತಿತ್ತು. ಅಡುಗೆ ಮನೆ ಮತ್ತು ಡೈನಿಂಗ್ ಟೇಬಲ್ ನಡುವೆ ಮೈಲುಗಳ ದೂರವಿತ್ತು. ರಾಜನ ತಟ್ಟೆಗೆ ಬರುವಷ್ಟರಲ್ಲಿ ಊಟ ತಣ್ಣಗಾಗಿ ಗಟ್ಟಿಯಾಗಿರುತ್ತಿತ್ತು.

* ಹದಿನಾಲ್ಕನೇ ಲೂಯಿ ಅರಮನೆಯ ಪೀಠೋಪಕರಣಗಳನ್ನು ಶುದ್ಧ ಬೆಳ್ಳಿಯಿಂದ ಮಾಡಿಸಿದ್ದ. ಆದರೆ ದೇಶದಲ್ಲಿ ಹಣದ ಅಭಾವ ಬಂದಾಗ ಮತ್ತು ಯುದ್ಧ ಶುರುವಾದಾಗ, ತನ್ನ ಅಹಂಕಾರವನ್ನು ಬದಿಗಿಟ್ಟು ಆ ಬೆಳ್ಳಿಯ ಕುರ್ಚಿ, ಮೇಜುಗಳನ್ನೆಲ್ಲ ಕರಗಿಸಿ ಹಣವಾಗಿ ಪರಿವರ್ತಿಸಿದ್ದ!

* ಅಂದು ಕನ್ನಡಿ ತಯಾರಿಕೆಯಲ್ಲಿ ವೆನಿಸ್ ನಗರ ಏಕಸ್ವಾಮ್ಯ ಹೊಂದಿತ್ತು. ಫ್ರಾನ್ಸ್‌ಗೆ ಆ ತಂತ್ರಜ್ಞಾನ ಬೇಕಿತ್ತು. ವರ್ಸೈಲ್ಸ್‌ನ ಕನ್ನಡಿ ಮಹಲು ಕಟ್ಟಲು ವೆನಿಸ್‌ನಿಂದ ತಜ್ಞರನ್ನು ಕದ್ದು ಕರೆತರಲಾಯಿತು. ಇದನ್ನು ತಿಳಿದ ವೆನಿಸ್ ಸರಕಾರ, ಆ ರಹಸ್ಯವನ್ನು ಕಾಪಾಡಲು ಆ ತಜ್ಞರನ್ನು ಕೊಲ್ಲಲು ಸುಪಾರಿ ಕೊಲೆಗಾರರನ್ನು ಕಳುಹಿಸಿತ್ತಂತೆ!

* ರಾಣಿ ಮೇರಿ ಆಂಟೊಯಿನೆಟ್ ಅರಮನೆಯ ಕಟ್ಟುಪಾಡುಗಳಿಂದ ಬೇಸತ್ತು, ಅರಮನೆಯ ಒಳಗೆ ಒಂದು ಪುಟ್ಟ ಹಳ್ಳಿಯನ್ನೇ ಕಟ್ಟಿಸಿದ್ದಳು. ಅಲ್ಲಿ ಆಕೆ ಒಬ್ಬ ಸಾಮಾನ್ಯ ರೈತ ಮಹಿಳೆಯಂತೆ ವೇಷ ಧರಿಸಿ ಹಸುಗಳನ್ನು ಕರೆಯುತ್ತಿದ್ದಳು. ಇದು ಆಕೆಯ 'ಟೈಮ್ ಪಾಸ್' ಆಗಿತ್ತು.

* ಆ ಕಾಲದಲ್ಲಿ ಎಷ್ಟು ಕಿಟಕಿಗಳಿರುತ್ತವೆ ಎಂಬ ಆಧಾರದ ಮೇಲೆ ಮನೆಯ ಐಶ್ವರ್ಯ ನಿರ್ಧಾರವಾಗುತ್ತಿತ್ತು. ವರ್ಸೈಲ್ಸ್ ಅರಮನೆಯಲ್ಲಿ ಬರೋಬ್ಬರಿ 2143 ಕಿಟಕಿಗಳಿವೆ. ಇಂದಿಗೂ ಇವುಗಳನ್ನು ಒರೆಸಲು ವರ್ಷಪೂರ್ತಿ ಸಮಯ ಬೇಕಾಗುತ್ತದೆ.

* ಹದಿನಾಲ್ಕನೇ ಲೂಯಿ ರಾಜನಿಗೆ ಹಸಿರು ಬಟಾಣಿ ಅಂದರೆ ಪ್ರಾಣ. ಅರಮನೆಯಲ್ಲಿ ಬಟಾಣಿ ತಿನ್ನುವುದು ಒಂದು ದೊಡ್ಡ ಫ್ಯಾಷನ್ ಆಗಿತ್ತು. ಶ್ರೀಮಂತರು ಸಾವಿರಾರು ರುಪಾಯಿ ಖರ್ಚು ಮಾಡಿ ಬಟಾಣಿ ಖರೀದಿಸಿ ಸವಿಯುತ್ತಿದ್ದರು.

* ಅರಮನೆಯಲ್ಲಿ ಜನಸಾಮಾನ್ಯರಿಗೂ ಪ್ರವೇಶವಿತ್ತು. ಹೌದು, ಇದು ವಿಚಿತ್ರವೆನಿಸಿದರೂ ಸತ್ಯ. ನೀವು ಸರಿಯಾಗಿ ಡ್ರೆಸ್ ಮಾಡಿಕೊಂಡಿದ್ದರೆ ಮತ್ತು ಸೊಂಟಕ್ಕೊಂದು ಕತ್ತಿ ನೇತುಹಾಕಿಕೊಂಡಿದ್ದರೆ (ಅದನ್ನು ಬಾಡಿಗೆಗೆ ಪಡೆಯಬಹುದಿತ್ತು), ರಾಜನನ್ನು ನೋಡಲು ಯಾರೂ ಅಡ್ಡಿಪಡಿಸುತ್ತಿರಲಿಲ್ಲ!

* ವರ್ಸೈಲ್ಸ್‌ನಲ್ಲಿ ಒಂದು ದೊಡ್ಡ ಪ್ರಾಣಿಸಂಗ್ರಹಾಲಯವಿತ್ತು. ರಾಜನಿಗೆ ವಿಚಿತ್ರ ಪ್ರಾಣಿಗಳ ಮೇಲೆ ಮೋಹ. ಆ ಪ್ರಾಣಿಗಳು ಸತ್ತಾಗ ಅವುಗಳ ದೇಹವನ್ನು ಕತ್ತರಿಸಿ ಅಧ್ಯಯನ ಮಾಡಲಾಗುತ್ತಿತ್ತು. ಇದು ಆಧುನಿಕ ಪ್ರಾಣಿಶಾಸ್ತ್ರಕ್ಕೆ ನಾಂದಿ ಹಾಡಿತು.

* ಚಳಿಗಾಲದಲ್ಲಿ ಈ ಬೃಹತ್ ಅರಮನೆಯನ್ನು ಬೆಚ್ಚಗಿಡುವುದು ಅಸಾಧ್ಯವಾಗಿತ್ತು. ರಾಜನ ಕೋಣೆಯಲ್ಲೇ ನೀರು ಮತ್ತು ವೈನ್ ಹೆಪ್ಪುಗಟ್ಟಿ ಐಸ್ ಆಗುತ್ತಿದ್ದವು. ರಾಜ ರೇಷ್ಮೆಯ ನೈಟ್ ಗೌನ್ ಮೇಲೆ ಉಣ್ಣೆಯ ಕೋಟುಗಳನ್ನು ಧರಿಸಿ ಮಲಗುತ್ತಿದ್ದ.

* ಅರಮನೆಯಲ್ಲಿ ಮಂತ್ರಿಗಳು ಮತ್ತು ಅಧಿಕಾರಿಗಳು ಪ್ರತಿರಾತ್ರಿ ಜೂಜಾಟದಲ್ಲಿ ತೊಡಗುತ್ತಿದ್ದರು. ಸೋತವರು ಒಂದೇ ರಾತ್ರಿಯಲ್ಲಿ ತಮ್ಮ ಇಡೀ ಆಸ್ತಿಯನ್ನು ಕಳೆದುಕೊಂಡು ಬೀದಿಗೆ ಬಂದ ಉದಾಹರಣೆಗಳಿವೆ. ರಾಜನೇ ಇದಕ್ಕೆ ಕುಮ್ಮಕ್ಕು ನೀಡುತ್ತಿದ್ದ.

* ಈ ಅರಮನೆಯ ತೋಟವನ್ನು ಎಷ್ಟು ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ ಎಂದರೆ, ಅಲ್ಲಿನ ಮರಗಳು ಮತ್ತು ಕಾರಂಜಿಗಳು ಮುಂದಿನ ಐನೂರು ವರ್ಷಗಳ ಕಾಲ ಹೇಗೆ ಬೆಳೆಯಬೇಕು ಎಂಬುದನ್ನು ಅಂದೇ ಪ್ಲಾನ್ ಮಾಡಲಾಗಿತ್ತು.

ಇದು ವರ್ಸೈಲ್ಸ್ ಎಂಬ ಮಾಯಾಲೋಕ. ಈ ಅರಮನೆಯ ಪ್ರತಿ ಮೆಟ್ಟಿಲಲ್ಲೂ ಒಂದೊಂದು ಕಥೆಯಿದೆ. ಅಲ್ಲಿನ ವೈಭವದ ಹಿಂದೆ ಅದೆಷ್ಟೋ ನೋವುಗಳಿವೆ.

Vishweshwar Bhat

Vishweshwar Bhat

Editor in Chief

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?