Thursday, February 26, 2026
Thursday, February 26, 2026

ಚಿಟ್ಟೀ ಆಯೀ ಹೈ ಆಯೀ ಹೈ.. ಚಿಟ್ಟಿ ಆಯೀ ಹೈ...!

ಅವಳು ನಿತ್ಯವೂ ನಿಂತು ರೋಮಿಯೋನ ಹಾದಿ ಕಾಯುತ್ತಿದ್ದಳೆಂದು ಹೇಳಲಾಗಿರುವ ಆ ಬಾಲ್ಕನಿಯ ಕೆಳಗೆ ಪುಷ್ಪೋದ್ಯಾನದ ನಡುವಿನಲ್ಲಿ ಗೌನ್ ಹಾಕಿಕೊಂಡು ತೆರೆದೆದೆಯಲ್ಲಿ ನಿಂತಿರುವ ಜೂಲಿಯೆಟ್‍ಳ ಕಂಚಿನ ಪ್ರತಿಮೆಯನ್ನು ನಿಲ್ಲಿಸಲಾಗಿದೆ. ಆ ಪ್ರತಿಮೆಯಲ್ಲಿ ಜೂಲಿಯೆಟ್ ಳ ಬಲಭಾಗದ ಎದೆಯನ್ನು ಮುಟ್ಟಿದರೆ ಹಾಗೆ ಮುಟ್ಟಿದವರ ಪ್ರೇಮ ಫಲಿಸುವುದು ಎನ್ನುವುದು ಒಂದು ನಂಬಿಕೆ.

  • ಅಂಜಲಿ ರಾಮಣ್ಣ

ಅಡುಗೆ ಪದಾರ್ಥಗಳನ್ನು ದೇವಸ್ಥಾನಗಳಿಗೆ ದಾನ ಮಾಡಿದರೆ ಭಕ್ತಾದಿಗಳಿಗೆ ಊಟ ಬಡಿಸುತ್ತಾರೆ. ಹುಂಡಿಗೆ ಚಿನ್ನ ಬೆಳ್ಳಿ ಹಾಕಿದರೆ ಅದನ್ನು ಮಾರಿ ಬಂದ ಹಣವನ್ನು ಪ್ರಾಂಗಣದ ಏಳಿಗೆಗೆ ಬಳಸಿಕೊಳ್ಳುತ್ತಾರೆ. ಸೀರೆ ವಸ್ತ್ರಗಳನ್ನು ಹರಕೆಯಾಗಿ ಸಲ್ಲಿಸಿದಾಗ ಪ್ರಸಾದ ಎಂದು ಹರಾಜು ಹಾಕಿ ಬರುವ ದುಡ್ಡನ್ನು ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸುತ್ತಾರೆ. ಆದರೆ ಭಕ್ತರು ತಮ್ಮ ಕಷ್ಟಗಳನ್ನು ಚೀಟಿಗಳಲ್ಲಿ ಬರೆದೋ ಅಥವಾ ತಮಗಿರುವ ಪ್ರಶ್ನೆಗಳನ್ನು ಕಾಗದದಲ್ಲಿ ಬರೆದು ಹುಂಡಿಗೆ ಹಾಕಿದರೆ ಏನು ಮಾಡುತ್ತಾರೆ?, ದೇವಸ್ಥಾನದಲ್ಲಿನ ಅರ್ಚಕರು, ಪುರೋಹಿತರು ಕಕ್ಕಾಬಿಕ್ಕಿಗೊಳ್ಳುತ್ತಾರೆ ಅಷ್ಟೆ. ಹೆಚ್ಚೆಂದರೆ ಎಲ್ಲರಿಗೂ ಒಳಿತಾಗಲಿ ಎನ್ನುತ್ತಾ ದೇವರಿಗೆ ಕೈ ಮುಗಿಯುತ್ತಾರೆ ಅಷ್ಟೇ.

ಇದನ್ನೂ ಓದಿ: ಪ್ರವಾಸಿಯಾಗಿ ಹೋಗಿ ರೈತರಾಗಿ ಬನ್ನಿ!

ಆದರೆ ಪ್ರೇಮಿಗಳು ತಮ್ಮ ಪ್ರೇಮ ನಿವೇದನೆಯನ್ನು ಮಾಡಿಕೊಂಡಾಗ, ಪ್ರೀತಿಯಲ್ಲಿ ಏಳುವ ದ್ವಂದ್ವಗಳ ಬಗ್ಗೆ ಪ್ರಶ್ನೆ ಕೇಳಿದಾಗ, ನಿರಾಸೆಗಳನ್ನು ತೋಡಿಕೊಂಡಾಗ ಎಲ್ಲಕ್ಕೂ ಸಮಾಧಾನದಿಂದ ಉತ್ತರ ಹೇಳುವ, ದಿಕ್ಕು ತೋರುವ ದೇವತೆಯೊಬ್ಬಳು ಒಂದು ಊರಿನಲ್ಲಿ ಇದ್ದಾಳೆ. ಮೊದಲೆಲ್ಲಾ ಕೈಯಲ್ಲಿ ಬರೆದ ಪತ್ರದಲ್ಲಿಯೇ ಉತ್ತರ ಕೊಡುತ್ತಿದ್ದವಳು ಈಗ ಅಪರೂಪಕ್ಕೆ ಲೇಖನಿಯಿಂದ ಬರೆಯುತ್ತಾ, ಸಾಧ್ಯವಾದರೆ ತಪ್ಪದೆ ನಿತ್ಯವೂ ಇ-ಮೇಲ್‍ಗಳಲ್ಲಿ ಉತ್ತರಿಸುತ್ತಾಳೆ ಈ ಪ್ರೇಮದೇವತೆ.

Untitled design (23)

ಶೇಕ್ಸ್ ಪಿಯರ್ ಸಾಹಿತ್ಯದಲ್ಲಿ ’ಪ್ರೀತಿ ಏಕೆ ಭೂಮಿ ಮೇಲಿದೆ...ಬೇರೆ ಎಲ್ಲೂ ಜಾಗವಿಲ್ಲದೆ...’ ಎಂದು ಹಾಡಿಕೊಳ್ಳುತ್ತಾ ರೋಮಿಯೋ ಜೂಲಿಯೆಟ್ ಸುತ್ತಿದ್ದರು ಎನ್ನಲಾದ ಒಂದು ಊರಿದೆ. ಉತ್ತರ ಇಟಲಿಯಲ್ಲಿ ಇರುವ ಆ ಊರಿನ ಹೆಸರು ವೆರೋನ. ರೋಮಿಯೋ ಜೂಲಿಯೆಟ್ ಕಾಲ್ಪನಿಕ ಪಾತ್ರಗಳು ಎನ್ನುವ ವಾದ ಇನ್ನೂ ಜೀವಂತವಿರುವಾಗಲೇ ವೆರೋನದ Arena Di Verona ಎನ್ನುವ ಜಾಗದಲ್ಲಿ ಜೂಲಿಯೆಟ್ ಇದ್ದಳು ಎನ್ನಲಾಗುವ ಮನೆಯೊಂದಿದೆ. ಗಿಡದಿಂದ ಗುಲಾಬಿ ಹೂವುಗಳು ತೊನೆದು ಕೆಳಗೆ ನೋಡುತ್ತಿರುವ ಜೂಲಿಯೆಟ್ ಬಾಲ್ಕನಿಯೂ ಅಲ್ಲಿದೆ. ಇದನ್ನು ನೋಡಲು ದಿನವೊಂದಕ್ಕೆ ಏಳರಿಂದ ಹತ್ತು ಸಾವಿರ ಪ್ರವಾಸಿ ಪ್ರೇಮಿಗಳು ಬರುತ್ತಾರೆ. ಅವಳು ನಿತ್ಯವೂ ನಿಂತು ರೋಮಿಯೋನ ಹಾದಿ ಕಾಯುತ್ತಿದ್ದಳೆಂದು ಹೇಳಲಾಗಿರುವ ಆ ಬಾಲ್ಕನಿಯ ಕೆಳಗೆ ಪುಷ್ಪೋದ್ಯಾನದ ನಡುವಿನಲ್ಲಿ ಗೌನ್ ಹಾಕಿಕೊಂಡು ತೆರೆದೆದೆಯಲ್ಲಿ ನಿಂತಿರುವ ಜೂಲಿಯೆಟ್‍ಳ ಕಂಚಿನ ಪ್ರತಿಮೆಯನ್ನು ನಿಲ್ಲಿಸಲಾಗಿದೆ. ಆ ಪ್ರತಿಮೆಯಲ್ಲಿ ಜೂಲಿಯೆಟ್ ಳ ಬಲಭಾಗದ ಎದೆಯನ್ನು ಮುಟ್ಟಿದರೆ ಹಾಗೆ ಮುಟ್ಟಿದವರ ಪ್ರೇಮ ಫಲಿಸುವುದು ಎನ್ನುವುದು ಒಂದು ನಂಬಿಕೆ. ಬರುವವರೆಲ್ಲಾ ಮುಟ್ಟಿಮುಟ್ಟಿ ಕಂಚಿನ ಜೂಲಿಯೆಟ್ ಎದೆಯಿಂದ ಸೊರಗಿದ್ದಾಳೆ; ಹೃದಯದಿಂದ ನಲುಗಿದ್ದಾಳೆ ಕೂಡ.

ಅಲ್ಲಿನ ಮತ್ತೊಂದು ಸ್ವಾರಸ್ಯಕರ ವಿಷಯವೆಂದರೆ ಹಾಗೆ ಪ್ರತಿಮೆಯನ್ನು ಸ್ಪರ್ಶಿಸುವ ಮೊದಲು ಅವರುಗಳು ತಮ್ಮ ಪ್ರೇಮಾಕಾಂಕ್ಷೆಯನ್ನು ಒಂದು ಚೀಟಿಯಲ್ಲಿ ಬರೆದು ಆ ಪ್ರತಿಮೆಯ ಎದುರು ಇಟ್ಟಿರುವ ಮರದ ಪಟ್ಟಿಗೆಯಲ್ಲಿ ಹಾಕುತ್ತಾರೆ. ಹಾಗೆ ಪತ್ರಗಳನ್ನು ಡಬ್ಬದೊಳಗೆ ಹಾಕುವಾಗ ಕೆಲವರು ನಗುತ್ತಲೋ, ಮತ್ತೆ ಕೆಲವರು ಕಣ್ಮುಚ್ಚಿ ಪ್ರಾರ್ಥನೆ ಮಾಡುತ್ತಲೋ ಇನ್ನೊಂದಷ್ಟು ಜನರು ಧಾರಾಕಾರವಾಗಿ ಅಳುತ್ತಾ ಇದ್ದದ್ದನ್ನು ಗಮನಿಸಿದೆ. ಅದೇನು ಅಂಥ ದೊಡ್ಡ ಪೆಟ್ಟಿಗೆಯಾಗಿರಲಿಲ್ಲ. ಅದರಲ್ಲಿ ಚೀಟಿಗಳು ತುಂಬಿ ಹೋದ ನಂತರ ಅವುಗಳನ್ನು ಏನು ಮಾಡುತ್ತಾರೆ ಎನ್ನುವ ಕುತೂಹಲದಿಂದ ಅತ್ತಿತ್ತ ನೋಡಿದಾಗ ’I love you more than yesterday, less than tomorrow’ ಎನ್ನುವ ಶೇಕ್ಸ್ ಪಿಯರ್ ನದ್ದೇ ಮಾತನ್ನು ಬಾಗಿಲಿಗೆ ಸಿಕ್ಕಿಸಿಕೊಂಡಿದ್ದ ಒಂದು ಕೊಠಡಿ ಕಾಣಿಸಿತು.

ಅಲ್ಲಿದೆ ’Juliet Club’. ಅಲ್ಲಿ ಸ್ವಯಂಸೇವೆ ಸಲ್ಲಿಸುವವರಿಗೆ ‘Juliet Secretary’ ಎನ್ನುತ್ತಾರೆ. ಹಸಿವು ನೀಗಿಸುವ, ಬಟ್ಟೆ ಕೊಡುವ, ಔಷಧ ಒದಗಿಸಿಕೊಡುವ ಇನ್ನೂ ಮುಂತಾದ ವಿಷಯಗಳ ಸ್ವಯಂಸೇವೆಯ ಬಗ್ಗೆ ಅರಿವಿದ್ದವಳ ಮನಸಿನಲ್ಲಿ ಜೂಲಿಯೆಟ್ ಯಾವ ರೀತಿಯ ಸ್ವಯಂ ಸೇವೆ ಮಾಡುತ್ತಾಳೆ ಎನ್ನುವ ಕುಚೋದ್ಯ ಹುಟ್ಟಿತು. ಅಲ್ಲಿದ್ದ ಅಲೆನಾ ಎನ್ನುವಾಕೆ ಮಾಹಿತಿ ಕೊಡುತ್ತಾ ಹೋದಳು. 1930ರಲ್ಲಿ ಜೂಲಿಯೆಟ್ ಸಮಾಧಿಯನ್ನು ನೋಡಿಕೊಳ್ಳುತ್ತಿದ್ದ ಎಟೋರ್ ಸೊಲಿಮಾನಿ ಆ ಸಮಾಧಿಗೆ ಬಂದು ಕಣ್ಣೀರು ಹಾಕುತ್ತಾ, ಜನರು ಕೆಲವು ಪತ್ರಗಳನ್ನು ಅಲ್ಲಿಟ್ಟು ಹೋಗುತ್ತಿದ್ದನ್ನು ಗಮನಿಸಿ ಅವುಗಳನ್ನೆಲ್ಲಾ ಸಂಗ್ರಹಿಸಿ ಜೋಪಾನ ಮಾಡುತ್ತಿದ್ದನಂತೆ. ಪತ್ರಕಂತೆಯ ಗಾತ್ರ ಹೆಚ್ಚುತ್ತಾ ಹೋದಂತೆ ಏನೂ ಮಾಡಲು ತೋಚದೆ ಒಂದೊಂದೇ ಪತ್ರವನ್ನು ತೆರೆದು ಓದುತ್ತಿದ್ದಾಗ ಸೊಲಿಮಾನಿಗೆ ಇವುಗಳಿಗೆ ಪ್ರತ್ಯುತ್ತರ ಯಾಕೆ ಬರೆಯಬಾರದು ಅನಿಸಿ ವಿಳಾಸ ಇದ್ದವರ ಪತ್ರಗಳಿಗೆ ಕಾಗದ ಬರೆಯಲು ಶುರು ಮಾಡಿದನಂತೆ. 1972ರ ವೇಳೆಗೆ ವೆರೋನ ನಗರವು ಪ್ರಪಂಚದ ‘Town of Love’ ಎನ್ನುವ ಖ್ಯಾತಿ ಪಡೆದಿತ್ತು.

Untitled design (26)

ಆಗ ಶೇಕ್ಸ್ ಪಿಯರ್ ಸಾಹಿತ್ಯದ ಕಟ್ಟಾಭಿಮಾನಿ ಗಿಯುಲಿಯೊ ತಮಾಸಿಯಾ ಎನ್ನುವ ಪ್ರೇಮಿ ಒಂದಷ್ಟು ಸಮಾನಾಸಕ್ತರ ಜತೆ ಆರಂಭಿಸಿದ್ದು ಜೂಲಿಯಟ್ ಕ್ಲಬ್. ಬರುವ ಎಲ್ಲಾ ಪತ್ರಗಳಿಗೂ ಆ ತಂಡ ಉತ್ತರಿಸುತ್ತಾ, ಇಂದಿಗೆ ಪ್ರೇಮಿಗಳ ನೋವಿಗೆ ಮುಲಾಮು ಹಚ್ಚುವ ನಲಿವಿಗೆ ನಗುವಾಗುವ ಒಂದು ದೊಡ್ಡ ಸ್ವಯಂಸೇವಾ ಸಂಸ್ಥೆಯಾಗಿ ಬೆಳೆದಿದೆ. 30ರಿಂದ 40 ಜನರು ಪಾಳಿಗಳಲ್ಲಿ ಕೆಲಸ ಮಾಡುತ್ತಾರೆ. ಎಲ್ಲರೂ ಸ್ವಯಂಸೇವಕರು. ಹಾಗೆಂದ ಮಾತ್ರಕ್ಕೆ ಯಾರ್ಯಾರೋ ಅಲ್ಲಿ ಹೋಗಿ ತಮ್ಮನ್ನು ತಾವು ಜೂಲಿಯಟ್ ಸೆಕ್ರೆಟರಿ ಎಂದುಕೊಳ್ಳುವ ಹಾಗಿಲ್ಲ. ಅವರ ಆಯ್ಕೆಗೆ ಒಂದು ನಿಗದಿತ ಪ್ರಕ್ರಿಯೆ ಇದೆ. ಈ ಕೆಲಸಕ್ಕಾಗಿ ಸಾವಿರಾರು ಅರ್ಜಿಗಳು ಬರುತ್ತವೆ.

ಮೊದಲೆಲ್ಲಾ ಈ ಜಾಗಕ್ಕೆ ಬಂದವರು ಆ ಮರದ ಪೆಟ್ಟಿಗೆಯಲ್ಲಿ ಹಾಕುತ್ತಿದ್ದ ಪತ್ರಗಳಿಗೆ ಉತ್ತರಿಸಲಾಗುತ್ತಿತ್ತು. ನಂತರ ಅಂಚೆಯಲ್ಲಿ ಬರುವ ಪತ್ರಗಳಿಗೆ ಮತ್ತು ಈ ದಿನಕ್ಕೆ ಇ-ಮೇಲ್‍ನಲ್ಲಿ ಬರುವ ಸಂದೇಶಗಳಿಗೂ ಉತ್ತರಿಸಲಾಗುತ್ತದೆ. ಹೊಸ ಪ್ರೇಮಿಗಳು, ಬ್ರೇಕ್‍ಅಪ್ ಆದವರು, ಗಂಡು ಹೆಣ್ಣುಗಳು, ಮದುವೆಯಾದವರು, ವಿಚ್ಛೇದಿತರು ಹೀಗೆ ಎಲ್ಲಾ ಬಗೆಯ ಜನರೂ ಎಲ್ಲಾ ವಯಸ್ಸಿನವರೂ ಪತ್ರಿಸುತ್ತಾರೆ. ಪ್ರೇಮಿಗಳೊಡನೆ ಮಾತನಾಡಲು ಎಷ್ಟು ಸಂವೇದನಾಶೀಲರಾಗಿರಬೇಕು ಎನ್ನುವ ತರಬೇತಿ ಪಡೆದಿರುವ ಜೂಲಿಯೆಟ್ ಕಾರ್ಯದರ್ಶಿಗಳು ಸದಾ ಹಸನ್ಮುಖಿಗಳು. ಅಂಚೆಯಲ್ಲಿ, ಅಲ್ಲಿನ ಡಬ್ಬದಲ್ಲಿ ಹಾಕಿರುವ ಹಾಗೂ ಇ-ಮೇಲ್‍ಗಳು ಸೇರಿದಂತೆ, ಪ್ರತಿ ವರ್ಷ 50000 ಜನರಿಗೆ ಉತ್ತರಗಳನ್ನು ಕೊಡುತ್ತಿದೆ ಜೂಲಿಯೆಟ್ ಕ್ಲಬ್. ಆ ಕಾಗದಗಳನ್ನು ಗೋದಾಮಿನಲ್ಲಿ ಸಂರಕ್ಷಿಸಲಾಗುತ್ತಿದೆ.

ಬಹಳ ವಿಶೇಷವಾಗಿದೆ ಎನಿಸುವ ಪತ್ರಗಳನ್ನು ಸಾಂಸ್ಕೃತಿಕ ಹಬ್ಬಗಳಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತದೆ. ಜೂಲಿಯೆಟ್‍ಳ ಹುಟ್ಟಿದ ದಿನವನ್ನು ದೊಡ್ಡ ಹಬ್ಬವಾಗಿ ಆಚರಿಸುತ್ತಾರೆ. ಆ ದಿನ ಟೌನ್ ಕೌನ್ಸಿಲ್ ಸಂಸ್ಕೃತಿ ಇಲಾಖೆಯ ವತಿಯಿಂದ ಅಂತಾರಾಷ್ಟ್ರೀಯ ಮಾಧ್ಯಮಗಳ ಎದುರು ’ಜೂಲಿಯೆಟ್ ಪತ್ರ ರೂಪಕ’ವನ್ನು ನಿರೂಪಿಸಲಾಗುತ್ತದೆ. ಅತ್ಯುತ್ತಮ ಎನಿಸಿದ ಪತ್ರಕ್ಕೆ ‘Dear Juliet’ ಎನ್ನುವ ಹಾಗೂ ಜಗತ್ತಿನ ಯಾವುದೇ ಭಾಷೆಯಲ್ಲಿ ಪ್ರಕಟವಾದ ಪ್ರೀತಿ ಕಥಾನಕಕ್ಕೆ ’Scrivere- per- Amore’ ಎನ್ನುವ ಪ್ರಶಸ್ತಿ ಕೊಡುತ್ತಾರೆ.

Untitled design (24)

ಹೌದು, ಇವತ್ತಿಗೂ ಜೂಲಿಯಟ್ ಕ್ಲಬ್ ಕೆಲಸ ಮಾಡುತ್ತಿದೆ. ನಾನೂ ಕೂಡ dearjuliet@julietclub.com ಇಲ್ಲಿಗೆ ಮಿಂಚಂಚೆಯಲ್ಲಿ ಪ್ರೇಮ ಪ್ರೀತಿಯ ಸಂಕಷ್ಟವನ್ನು ತೋಡಿಕೊಂಡಿದ್ದೆ. ಉತ್ತರ ಬಂದಿದೆ. ನಿಮ್ಮ ಪತ್ರಗಳಿಗೂ ಉತ್ತರ ಬಂದಾಗ ಖುಷಿಯಿಂದ ಯಾವ ಹಾಡು ಹಾಡಿಕೊಳ್ಳುವುದು ಎಂದು ನನ್ನ ಹಾಗೆಯೇ ನೀವೂ ಯೋಚಿಸುವಾಗಲೇ ಜೂಲಿಯೆಟ್ ಕ್ಲಬ್‍ನ ದುಡಿಮೆಯ ಬಗ್ಗೆಯೂ ತಿಳಿದುಕೊಂಡು ಬಿಡೋಣ. ಈ ಸಂಸ್ಥೆಯ ಮುಖ್ಯ ಆದಾಯ ದಾನಗಳಿಂದ ಬರುತ್ತದೆ. ತನ್ನ ಹಾಗೂ ತಾನು ರೂಪಿಸುವ ಕಾರ್ಯಕ್ರಮಗಳ ನಿರ್ವಹಣೆಯನ್ನು ಅದೇ ಹಣದಿಂದ ಮಾಡಿಕೊಳ್ಳುವ ಜೂಲಿಯೆಟ್ ಕ್ಲಬ್ 2024ರಲ್ಲಿ ಗಳಿಸಿದ ಒಟ್ಟು ಹಣ $2.57 ಮಿಲಿಯನ್ ಡಾಲರುಗಳು. ತನ್ನ ಖರ್ಚು ಕಳೆದು ಮಿಕ್ಕ $169,800 ಡಾಲರುಗಳನ್ನು ಸಾಹಿತ್ಯದ ವಿದ್ಯಾರ್ಥಿಗಳಿಗೆ ಸಹಾಯ ಮೊತ್ತವನ್ನಾಗಿ ನೀಡಿದೆ.

ಭಾವ ಸ್ಪಂದನವೂ ಹೇಗೆ ಪ್ರವಾಸೋದ್ಯಮವಾಗಬಲ್ಲದು ಮತ್ತು ಸಮಾಜಮುಖಿಯೂ ಆಗಿರಬಹುದು ಎನ್ನುವುದಕ್ಕೆ ಸಾಕ್ಷಿ ಜೂಲಿಯೆಟ್ ಕ್ಲಬ್. ಈ ಪ್ರೇಮಿಗಳ ದಿನದಂದು ಉತ್ಕಟ ಪ್ರೇಮಿಗಳಿಗೆ ಅಥವಾ ಭಾವನಾತ್ಮಕ ಜೀವಿಗಳಿಗೆ ಸಾಂತ್ವನ ಒದಗಿಸುವ ವಹಿವಾಟನ್ನು ಆರಂಭಿಸಬಲ್ಲ ಸ್ಟಾರ್ಟ್ ಅಪ್ ಬಗ್ಗೆ ಕೆಲವರಲ್ಲಾದರೂ ಯೋಜನೆ ಹುಟ್ಟಲಿ, ಯಶಸ್ಸು ಸಿಗಲಿ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?