ತಿರುಗಿ ಕೆಟ್ಟವರಿಲ್ಲವೋ

'ಸ್ಕಾಟ್‌ಲೆಂಡ್‌ನಲ್ಲಿ ಮಳೆ ಸುರಿಯದ ದಿನ ಯಾವುದಾದರೂ ಇದೆ ಎಂದರೆ, ಅದು ಅಲ್ಲಿನ ಡಿಸ್ಟಿಲರಿಗಳಲ್ಲಿ ಸ್ಕಾಚ್ ತಯಾರಿಸಲು ನೀರು ಖಾಲಿಯಾದ ದಿನ ಮಾತ್ರ!' ಎಂಬ ಮಾತಿದೆ. ಸ್ಕಾಟ್‌ಲೆಂಡಿನಲ್ಲಿ ಇನ್ನೊಂದು ಮಾತಿದೆ - 'ಸ್ಕಾಚ್ ಕುಡಿಯಲು ಎರಡೇ ಸಂದರ್ಭಗಳು ಸೂಕ್ತ. ಒಂದು ನಮ್ಮ ಜನ್ಮದಿನವಿದ್ದಾಗ, ಮತ್ತೊಂದು ಜನ್ಮದಿನವಿಲ್ಲದಿದ್ದಾಗ.

ಸ್ಕಾಚ್‌ಗೂ, ಸುಂದರ ಪರಿಸರಕ್ಕೂ ಯಾವ ಸಂಬಂಧವೋ ಗೊತ್ತಿಲ್ಲ. ಆದರೆ ಸ್ಕಾಚ್ನಿಂದಾಗಿ ಸ್ಕಾಟ್‌ಲೆಂಡಿಗೆ ಮತ್ತಷ್ಟು ಸೌಂದರ್ಯ ಮತ್ತು ಪ್ರಾಮುಖ್ಯ ಬಂದಿರುವುದು ಸುಳ್ಳಲ್ಲ. ಸಾಮಾನ್ಯವಾಗಿ ಮದ್ಯಗಳನ್ನು ತಯಾರಿಸುವ ಡಿಸ್ಟಿಲರಿಗಳಿಂದ ಪರಿಸರಕ್ಕೆ ಹಾನಿಯಾಗಿವೆ. ಆದರೆ ಸ್ಕಾಟ್‌ಲೆಂಡಿನಲ್ಲಿರುವ ಡಿಸ್ಟಿಲರಿಗಳು ಪರಿಸರಕ್ಕೆ ವಿಶೇಷ ಮೆರುಗನ್ನು ತಂದುಕೊಟ್ಟಿವೆ.

ಸ್ಕಾಟ್‌ಲೆಂಡಿನಲ್ಲಿ ಎಲ್ಲೆಲ್ಲಿ ಡಿಸ್ಟಿಲರಿಗಳಿವೆಯೋ ಅಲ್ಲೆಲ್ಲ ನಯನಮನೋಹರ ದೃಶ್ಯಗಳಿವೆ ಅಥವಾ ಅಂಥ ದೃಶ್ಯಗಳಿರುವ ತಾಣಗಳಲ್ಲಿಯೇ ಡಿಸ್ಟಿಲರಿಗಳನ್ನು ಸ್ಥಾಪಿಸಿದ್ದಾರೆ. ಸ್ಕಾಚ್ ಎಂದ ಕೂಡಲೇ ಮನಸ್ಸು ಹೋಗಿ ನಿಲ್ಲುವುದು ಸ್ಕಾಟ್‌ಲೆಂಡಿನಲ್ಲಿಯೇ. ಎಲ್ಲ ಸ್ಕಾಚ್ ವಿಸ್ಕಿಗಳನ್ನೂ ಸ್ಕಾಟ್‌ಲೆಂಡಿನಲ್ಲಿ ಮಾಡುವುದಿಲ್ಲ. ಈಗ ಬೇರೆ ದೇಶಗಳಲ್ಲೂ ಅವನ್ನು ತಯಾರಿಸುತ್ತಿದ್ದಾರೆ. ಆದರೆ ಸ್ಕಾಟ್‌ಲೆಂಡಿನಲ್ಲಿ ತಯಾರಾಗುವುದೆಲ್ಲ ಸ್ಕಾಚ್ಗಳೇ.

ಇದನ್ನೂ ಓದಿ: ಪ್ರವಾಸಿ ಎಂಬ 'ಗ್ರಾಹಕ' ಮತ್ತು ಸಂಸ್ಕೃತಿ ಎಂಬ 'ಸರಕು’ ನಡುವೆ ತಿಕ್ಕಾಟ!

ಸ್ಕಾಟ್‌ಲೆಂಡಿನಲ್ಲಿ ಸ್ಕಾಚ್‌ನ್ನು ‘ನ್ಯಾಷನಲ್ ಡ್ರಿಂಕ್’ ಅಥವಾ ‘ವಾಟರ್ ಆಫ್ ಲೈಫ್’ ಎಂದು ಕರೆಯುತ್ತಾರೆ. ಜಗತ್ತಿನಲ್ಲಿಯೇ ಸ್ಕಾಚ್ ವಿಸ್ಕಿಗೆ ಹೆಸರುವಾಸಿಯಾಗಿರುವ ಸ್ಕಾಟ್‌ಲೆಂಡಿನಲ್ಲಿ ಇನ್ನೂರಕ್ಕೂ ಹೆಚ್ಚು ಸಣ್ಣ ಮತ್ತು ದೊಡ್ಡ ಪ್ರಮಾಣದ ಸ್ಕಾಚ್ ಡಿಸ್ಟಿಲರಿಗಳಿವೆ. ಜಗತ್ಪ್ರಸಿದ್ಧ ಗ್ಲೆನ್‌ಫಿಡಿಚ್, ಗ್ಲೆನ್ ಲಿವೆಟ್, ಹೈಲ್ಯಾಂಡ್ ಪಾರ್ಕ್, ಬಿಲ್ವಿನಿ, ಡೆಲ್ವಿನಿ, ಸ್ಪೆಯ್ ಬರ್ನ್, ಅಬೇರ್ ಲೌರ್, ಗ್ಲೇನ್ ರೋತೇಸ್, ಲಾಫ್ರೋಗ್, ಕ್ಲಾಯ್ಡ್ ಸೈಡ್, ಬೆನ್ ನೆವಿಸ್, ಸ್ಪ್ರಿಂಗ್ ಬ್ಯಾಂಕ್, ಟೆಲಿಸ್ಕರ್, ಗ್ಲೆನ್ ಟೆರ್ರೆಟ್ ಸೇರಿದಂತೆ ಸ್ಕಾಚ್ ಮತ್ತು ಸಿಂಗಲ್ ಮಾಲ್ಟ್ ವಿಸ್ಕಿಗಳು ತಯಾರುವುದು ಅಲ್ಲಿಯೇ.

ಸ್ಕಾಟ್ಲೆಂಡಿನಲ್ಲಿ ಸ್ಕಾಚ್ ವಿಸ್ಕಿಗಳನ್ನು ತಯಾರಿಸುವ ಬೇರೆ ಬೇರೆ ಪ್ರಾಂತ್ಯಗಳಿವೆ. ಅವುಗಳನ್ನು ಹೈಲ್ಯಾಂಡ್, ಲೋಲ್ಯಾಂಡ್, ಸ್ಪೆಯ್ ಸೈಡ್, ಐಲ್, ಐಲ್ಯಾಂಡ್, ಕ್ಯಾಂಪೆಲ್ ಟೌನ್ ಎಂದು ವಿಭಾಗಿಸಬಹುದು. ಸ್ಪೆಯ್ ಸೈಡ್ ಪ್ರಾಂತ್ಯದಲ್ಲೊಂದೇ ಏನಿಲ್ಲವೆಂದರೂ ಐವತ್ತಕ್ಕೂ ಹೆಚ್ಚು ಡಿಸ್ಟಿಲರಿಗಳಿವೆ. ಭಾರತದಲ್ಲಿ ಹೆಚ್ಚು ಮಾರಾಟವಾಗುವ ಜಾನಿ ವಾಕರ್, ಮಕಲಾನ್, ಗ್ಲೆನ್‌ಫಿಡಿಚ್ ಮತ್ತು ಶಿವಾಸ್ ರೀಗಲ್ ಬ್ಲೆಂಡೆಡ್ ಸ್ಕಾಚ್ ವಿಸ್ಕಿ ಸಹ ಈ ಪ್ರಾಂತ್ಯದಲ್ಲೇ ತಯಾರುಗುತ್ತದೆ.

ಒಂದು ಪ್ರಾಂತ್ಯದಲ್ಲಿ ತಯಾರಾಗುವ ಸ್ಕಾಚ್‌ಗೂ, ಮತ್ತೊಂದಕ್ಕೂ ಸ್ವಾದ ಅಥವಾ ರುಚಿಯಲ್ಲಿ ವ್ಯತ್ಯಾಸವಿರುತ್ತದೆ. ಸ್ಕಾಚ್‌ಗೂ ಮತ್ತು ಅದರ ವಯಸ್ಸಿಗೂ ಅವಿನಾಭಾವ ಸಂಬಂಧ. ಸ್ಕಾಚ್ ಎಂದ ಮೇಲೆ ಅದರ ವಯಸ್ಸು ಕನಿಷ್ಠ ಮೂರು ವರ್ಷಗಳಾದರೂ ಆಗಿರಬೇಕು. ಅವನ್ನು ತಯಾರಿಸಿದ ಬಳಿಕ ಅವನ್ನು ಕಾಪಿಡುವ ವಯಸ್ಸು ಹೆಚ್ಚಿದಂತೆಲ್ಲ ಅದರ ಬೆಲೆ ಜಾಸ್ತಿ. 1494ರಲ್ಲಿಯೇ ಸ್ಕಾಚ್ ವಿಸ್ಕಿ ತಯಾರಿಸಿದ ಬಗ್ಗೆ ದಾಖಲೆಗಳಿವೆ. ಆಗಾಗ ಪತ್ರಿಕೆಗಳಲ್ಲಿ ನೂರಾರು ವರ್ಷಗಳ ಹಳೆಯ ವಿಸ್ಕಿ ಸಿಕ್ಕ ಬಗ್ಗೆ ವರದಿಗಳು ಪ್ರಕಟವಾಗುವುದನ್ನು ಕಾಣಬಹುದು.

ಸ್ಕಾಟ್‌ಲೆಂಡಿನಲ್ಲಿ ಮರದ ಕಾಸ್ಕ್‌ಗಳಲ್ಲಿ ಅವನ್ನು ಶೇಖರಿಸಿ ಸಂಗ್ರಹಿಸಡಲಾಗುತ್ತದೆ. ಸ್ಕಾಟ್‌ಲೆಂಡಿನ ಪರಿಸರ, ನೀರು, ಹವಾಮಾನ ಸ್ಕಾಚ್ ವಿಸ್ಕಿ ತಯಾರಿಕೆಗೆ ಹೇಳಿ ಮಾಡಿಸಿದ್ದು. ಅದಕ್ಕಾಗಿಯೇ ಇಲ್ಲಿ ಇಷ್ಟೊಂದು ಪ್ರಮಾಣದ ಗಡಂಗುಗಳು ಇರುವುದು. ಏನಿಲ್ಲವೆಂದರೂ ಐವತ್ತು ಸಾವಿರಕ್ಕೂ ಅಧಿಕ ಮಂದಿ ಈ ಡಿಸ್ಟಿಲರಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅಷ್ಟೊಂದು ಜನರಿಗೆ ಈ ಉದ್ಯಮ ಉದ್ಯೋಗವನ್ನು ನೀಡಿದೆ.

Untitled design - 2026-05-12T132626.392

ಕಳೆದ ವರ್ಷ ಸುಮಾರು ಆರೂವರೆ ಶತಕೋಟಿ ಪೌಂಡ್ ಮೌಲ್ಯದ ಸ್ಕಾಚ್ ವಿಸ್ಕಿಗಳು ಸ್ಕಾಟ್‌ಲೆಂಡಿನಿಂದ ರಫ್ತಾಗಿವೆ. ಒಂದು ಅಂದಾಜಿನ ಪ್ರಕಾರ, ಪ್ರತಿದಿನ ಸುಮಾರು ಒಂದೂಕಾಲು ಲಕ್ಷ ಬಾಟಲಿಗಳು ಅಲ್ಲಿಂದ ಬೇರೆ ದೇಶಗಳಿಗೆ ಹೋಗುತ್ತವೆ. ವರ್ಷದಿಂದ ವರ್ಷಕ್ಕೆ ಮದ್ಯ ತಯಾರಿಕೆ ಪ್ರಮಾಣ ಜಾಸ್ತಿಯಾಗುತ್ತಿರುವುದು ಗಮನಾರ್ಹ.

ಇನ್ನೊಂದು ಕುತೂಹಲದ ವಿಷಯವೆಂದರೆ, ಈ ಪ್ರಾಂತ್ಯದ ಪರೋಕ್ಷ ಅಭಿವೃದ್ಧಿಗೆ ಕಾರಣವಾಗಿರುವುದು ಸ್ಕಾಚ್ ವಿಸ್ಕಿ ಪ್ರವಾಸೋದ್ಯಮ. ಇಲ್ಲಿನ ಡಿಸ್ಟಿಲರಿಗಳನ್ನು ನೋಡಲು ವಿಶ್ವದೆಲ್ಲೆಡೆಗಳಿಂದ ಜನ ಬರುತ್ತಾರೆ. ಇದು ಸ್ಥಳೀಯ ಪ್ರವಾಸೋದ್ಯಮ ಅಭಿವೃದ್ಧಿಗೂ ಕಾರಣವಾಗಿದೆ. ಕೋವಿಡ್‌ಗಿಂತ ಮೊದಲು ಅಂದರೆ, 2018 ರಲ್ಲಿ ಸುಮಾರು ಇಪ್ಪತ್ತು ಲಕ್ಷ ಜನ ಸ್ಕಾಟ್‌ಲೆಂಡಿನ ಡಿಸ್ಟಿಲರಿಗಳನ್ನು ವೀಕ್ಷಿಸಲು ಆಗಮಿಸಿದ್ದರು.

ಸಾಮಾನ್ಯವಾಗಿ ಎಲ್ಲ ಡಿಸ್ಟಿಲರಿಗಳೂ ಪ್ರವಾಸಿಗರಿಗೆ ತೆರೆದಿರುತ್ತವೆ. ಅವು ಪ್ರವಾಸಿಗರಿಗೆ ಸ್ಕಾಚ್ ಟೂರ್ ಅಥವಾ ವಿಸ್ಕಿ ಟೂರ್‌ಗಳನ್ನು ಏರ್ಪಡಿಸುತ್ತವೆ.

**

ಲಂಡನ್ನಿನ ರಸ್ತೆಗಳ ಹೆಸರು

ನೀವು ಯಾವುದೇ ಊರಿಗೆ ಅಥವಾ ದೇಶಕ್ಕೆ ಹೋದರೂ ನಾನು ಅಲ್ಲಿನ ರಸ್ತೆಗಳ ಹೆಸರುಗಳನ್ನು ಗಮನವಿಟ್ಟು ನೋಡುತ್ತಾ, ಓದುತ್ತಾ, ಟಿಪ್ಪಣಿ ಮಾಡಿಕೊಳ್ಳುತ್ತೇನೆ. ನಗರಪಿತೃಗಳು ಸುಖಾಸುಮ್ಮನೆ ತಮ್ಮ ನಗರಗಳ ರಸ್ತೆಗೆ ಯಾವ್ಯಾವುದೇ ಹೆಸರುಗಳನ್ನು ಇಡುವುದಿಲ್ಲ. ಪ್ರತಿ ರಸ್ತೆಯ ಹೆಸರಿನ ಹಿಂದೆ ಒಂದು ಕತೆ, ಕಾರಣ ಇದ್ದೇ ಇರುತ್ತದೆ. 'ರಸ್ತೆ ಹೇಳುವ ಕತೆ'ಗಳು ಸ್ವಾರಸ್ಯವಾಗಿರುತ್ತವೆ.

ಒಮ್ಮೆ ಒಂದು ರಸ್ತೆಯನ್ನು ಯಾವುದೋ ಒಂದು ಹೆಸರಿನಿಂದ ಕರೆಯಲಾರಂಭಿಸಿದರೆ, ಅದೇ ಖಾಯಂ ಆಗಿ ನೆಲೆಸಿಬಿಡುತ್ತದೆ. ಮುಂದೆ ಆ ರಸ್ತೆಗೆ ಬೇರೆ ಹೆಸರನ್ನು ಇಟ್ಟರೂ, ಎಲ್ಲರೂ ಮೊದಲ ಹೆಸರಿನಿಂದಲೇ ಕರೆಯುತ್ತಾರೆ.

ಇತ್ತೀಚೆಗೆ ನಾನು ಲಂಡನ್ನಿಗೆ ಹೋದಾಗ ಅಲ್ಲಿನ ರಸ್ತೆಗಳ ಹೆಸರನ್ನು ಕುತೂಹಲದಿಂದ ಗಮನಿಸುತ್ತಿದ್ದೆ. ಲಂಡನ್ನಿನ ಸ್ಪೈಟಲ್ ಫೀಲ್ಡ್ ಎಂಬ ಪ್ರದೇಶದಲ್ಲಿ 'ಫ್ರೈಯಿಂಗ್ ಪ್ಯಾನ್ (Frying Pan Alley) ಅಲ್ಲೇ' ಎಂಬ ಹೆಸರಿನ ರಸ್ತೆಯಿದೆ. ಒಂದು ರಸ್ತೆಗೆ 'ಬಾಣಲೆ' ಎಂಬ ಹೆಸರನ್ನು ಯಾಕೆ ಇಟ್ಟಿರಬಹುದು? ಒಮ್ಮೆ ಹದಿನೆಂಟನೆಯ ಶತಮಾನದ ಕೊನೆಯಲ್ಲಿ, ಈ ರಸ್ತೆಯಲ್ಲಿ ಬಾಣಲೆಗಳನ್ನು ತಯಾರಿಸುವ ಒಂದು ಘಟಕವಿತ್ತಂತೆ. ಆ ಕಟ್ಟಡದ ಮುಂದೆ ಗ್ರಾಹಕರನ್ನು ಸೆಳೆಯಲು ಗೋಡೆಗೆ ಬಾಣಲೆಯನ್ನು ನೇತು ಹಾಕಿದ್ದರಂತೆ. ಅದು ಬಾಣಲೆಗಳನ್ನು ತಯಾರಿಸುವ ಮತ್ತು ಮಾರಾಟ ಮಾಡುವ ಅಂಗಡಿ ಎಂಬುದು ಗೊತ್ತಾಗಲಿ ಎಂಬುದು ಉದ್ದೇಶವಾಗಿತ್ತು.

ಒಮ್ಮೆ ಆ ರಸ್ತೆಯಲ್ಲಿ ಪಾದಚಾರಿಯೊಬ್ಬರ ತಲೆಯ ಮೇಲೆ ಆ ಬಾಣಲೆ ಬಿತ್ತು. ಅದೃಷ್ಟವಶಾತ್ ಆತ ಪ್ರಾಣಾಪಾಯದಿಂದ ಪಾರಾದ. ಆದರೆ ಅಂದಿನಿಂದ ಆ ರಸ್ತೆಗೆ Frying Pan ರಸ್ತೆ ಎಂಬ ಹೆಸರು ಖಾಯಂ ಆಯಿತು. ಆ ರಸ್ತೆಯ ಹೆಸರನ್ನು ಇಂದಿಗೂ ಹಾಗೆ ಉಳಿಸಿಕೊಂಡಿದ್ದಾರೆ.

ಒಂದು ಕಾಲಕ್ಕೆ ಲಂಡನ್ನಿನ 'ಫ್ಲೀಟ್ ಸ್ಟ್ರೀಟ್' ಲೋಕವಿಖ್ಯಾತ. ಹದಿನೇಳನೆಯ ಶತಮಾನದಿಂದಲೇ ಬ್ರಿಟನ್ನಿನ ಪ್ರಮುಖ ಪತ್ರಿಕಾ ಕಚೇರಿಗಳ ಕಚೇರಿಗಳು ಆ ರಸ್ತೆಯಲ್ಲೇ ಇದ್ದವು. ಆದರೆ ಈಗ ಬಹುತೇಕ ಪತ್ರಿಕೆಗಳು ತಮ್ಮ ಕಚೇರಿಗಳನ್ನು ಬೇರೆಡೆಗೆ ವರ್ಗಾಯಿಸಿವೆ. ಆದರೂ 'ಫ್ಲೀಟ್ ಸ್ಟ್ರೀಟ್' ಅಂದ್ರೆ ತಕ್ಷಣ ನೆನಪಾಗುವುದು ಅಂದಿನ ಪತ್ರಿಕಾ ಕಚೇರಿಗಳಿದ್ದ ಬೀದಿಯೇ. ಆ ರಸ್ತೆಯಲ್ಲಿ ಪ್ರಸಿದ್ಧ ಪತ್ರಕರ್ತರಾದ ಸ್ಯಾಮುಯೆಲ್ ಪೇಪಿಸ್ ಮತ್ತು ಲಾರ್ಡ್ ನಾರ್ಥ್ ಕ್ಲಿಫ್ ಅವರ ಪುತ್ಥಳಿಗಳಿವೆ.

ಈ ರಸ್ತೆಗೆ ತಾಕಿಕೊಂಡು ಇನ್ನೊಂದು ರಸ್ತೆಯಿದೆ. ಅದರ ಹೆಸರು Hanging Sword Alley. ಅಂದರೆ ತೂಗುಗತ್ತಿ ರಸ್ತೆ. ಹದಿನೈದನೆಯ ಶತಮಾನದಲ್ಲಿ ಈ ರಸ್ತೆಯಲ್ಲಿ ಒಂದು ಶಾಲೆ ಇತ್ತಂತೆ. ಅಲ್ಲಿ ಒಂದು ಗಂಟೆಯನ್ನು ನೇತು ಹಾಕಿದ್ದರಂತೆ. ಅದು ದೂರದಿಂದ ತೂಗುಗತ್ತಿಯಂತೆ ಕಾಣುತ್ತಿತ್ತು. ಹೀಗಾಗಿ ಆ ಹೆಸರನ್ನೇ ಇಡಲಾಯಿತು. ಹದಿನೆಂಟನೆಯ ಶತಮಾನದಲ್ಲಿ ಆ ರಸ್ತೆಯ ಹೆಸರನ್ನು Blood Bowl Alley ಎಂದು ಬದಲಾಯಿಸಲಾಯಿತು. ಕಾರಣ ಆ ಹೆಸರಿನ ಬಾರ್ ಆ ರಸ್ತೆಯಲ್ಲಿ ತಲೆಯೆತ್ತಿ ಅದು ಬಹಳ ಪ್ರಸಿದ್ಧವಾಯಿತು. ಆದರೆ ಇಂದಿಗೂ ಆ ರಸ್ತೆ ತನ್ನ ಹಳೆಯ ಹೆಸರಿನಿಂದಲೇ ಪರಿಚಿತ.

ಲಂಡನ್ನಿನಲ್ಲಿ ಇನ್ನೊಂದು ವಿಚಿತ್ರ ರಸ್ತೆಯಿದೆ. ಅದರ ಹೆಸರು ವಾರ್ಡ್ರೋಬ್ (ಬಟ್ಟೆ ಇಡುವ ಕಪಾಟು) ಪ್ಲೇಸ್. ಹದಿನಾಲ್ಕನೆಯ ಶತಮಾನದಲ್ಲಿ ಮೂರನೇ ಕಿಂಗ್ ಎಡ್ವರ್ಡ್‌ನ ಪೋಷಾಕುಗಳನ್ನು ಇರಿಸಲೆಂದು ಒಂದು ಕಟ್ಟಡವನ್ನು ಕಟ್ಟಲಾಗಿತ್ತು. ಆಗಿನಿಂದಲೂ ಅದಕ್ಕೆ ಕಿಂಗ್ಸ್ ವಾರ್ಡ್ರೋಬ್ ಪ್ಲೇಸ್ ಎಂದೇ ಕರೆಯಲಾಗುತ್ತಿತ್ತು. ಹದಿನೇಳನೆಯ ಶತಮಾನದ ಮಧ್ಯಭಾಗದಲ್ಲಿ ಈ ಕಟ್ಟಡ ಅಗ್ನಿ ದುರ್ಘಟನೆಯಲ್ಲಿ ಧ್ವಂಸವಾಯಿತು. ಅಂದಿನಿಂದ ಈ ರಸ್ತೆಗೆ ಮತ್ತಷ್ಟು ಐತಿಹಾಸಿಕ ಮಹತ್ವ ಬಂದುಬಿಟ್ಟಿತು.

Untitled design - 2026-05-12T132405.890

ಲಂಡನ್ನಿನ ಮಧ್ಯಭಾಗದಲ್ಲಿ ಹೋಲ್ಬೋರ್ನ್ ಎಂಬ ಪ್ರದೇಶವಿದೆ. ಅಲ್ಲೊಂದು ರಸ್ತೆಯಿದೆ. ಅದರ ಹೆಸರು Bleeding Heart Yard. ಅಂದರೆ ಹೃದಯ ರಕ್ತಸ್ರಾವ ಪ್ರದೇಶ. ಆ ಪ್ರದೇಶದಲ್ಲಿ ಅದೇ ಹೆಸರಿನ ಹೊಟೇಲಿನಿಂದ ಆ ಹೆಸರು ಬಂದಿರಬಹುದು. ಹದಿನಾರನೆಯ ಶತಮಾನದಲ್ಲಿ ಆ ರಸ್ತೆಯಲ್ಲಿ ಬರ್ಬರ ಹತ್ಯೆ ನಡೆದಿತ್ತಂತೆ. ಹೀಗಾಗಿ ಆ ಹೆಸರು ಬಂದಿರಬಹುದು ಎಂದು ನಂಬಲಾಗಿದೆ.

**

ಸಭ್ಯತೆಯ ಕಾಲು ಗಂಟೆ

ಫ್ರಾನ್ಸ್‌ನಲ್ಲಿ ಯಾರಾದರೂ ನಿಮ್ಮನ್ನು ರಾತ್ರಿ ಊಟಕ್ಕೆ ಆಹ್ವಾನಿಸಿದಾಗ ನಿಖರ ಸಮಯಕ್ಕೆ ಹೋಗದೇ, ಸ್ವಲ್ಪ ತಡವಾಗಿ ಹೋಗುವ ಈ ಪದ್ಧತಿಯಿದೆ. ಇದನ್ನು 'ಸಭ್ಯತೆಯ ಕಾಲು ಗಂಟೆ' (Le quart d'heure poli) ಅಂತಾರೆ. ಸಾಮಾನ್ಯವಾಗಿ ಜಗತ್ತಿನ ಬಹುತೇಕ ಕಡೆಗಳಲ್ಲಿ ಸಮಯಪಾಲನೆಗೆ ಹೆಚ್ಚು ಒತ್ತು ನೀಡಲಾಗುತ್ತದೆ.

ಆದರೆ ಫ್ರಾನ್ಸ್‌ನ ಸಾಮಾಜಿಕ ಜೀವನದಲ್ಲಿ, ವಿಶೇಷವಾಗಿ ಮನೆಗಳಿಗೆ ಭೇಟಿ ನೀಡುವಾಗ, ನಿಗದಿತ ಸಮಯಕ್ಕಿಂತ 15 ರಿಂದ 20 ನಿಮಿಷ ತಡವಾಗಿ ಹೋಗುವುದೇ ಒಂದು ಸಂಸ್ಕಾರವೆಂದು ಪರಿಗಣಿಸಲಾಗುತ್ತದೆ.

ಮನೆಯವರು ಅತಿಥಿಗಳಿಗಾಗಿ ಅಡುಗೆ ಮಾಡುತ್ತಿರುತ್ತಾರೆ ಅಥವಾ ಮನೆಯನ್ನು ಅಲಂಕರಿಸುತ್ತಿರುತ್ತಾರೆ. ನೀವು ಸರಿಯಾದ ಸಮಯಕ್ಕೆ ಹೋದರೆ, ಮನೆಯವರು ಇನ್ನೂ ಕೆಲಸದಲ್ಲಿರಬಹುದು ಅಥವಾ ಅಡುಗೆಯ ಕೊನೆಯ ಹಂತದಲ್ಲಿರಬಹುದು. ಆ ಹೆಚ್ಚುವರಿ 15 ನಿಮಿಷಗಳು ಅವರಿಗೆ ಯಾವುದೇ ಒತ್ತಡವಿಲ್ಲದೇ ಅಂತಿಮ ಸಿದ್ಧತೆಗಳನ್ನು ಪೂರ್ಣಗೊಳಿಸಲು ನೆರವಾಗುತ್ತವೆ.

ಸಕಾಲಕ್ಕೆ ಹೋಗಿ ಅವರ ಕೆಲಸಕ್ಕೆ ಅಡ್ಡಿಪಡಿಸುವ ಬದಲು, ಅವರಿಗೆ ಸ್ವಲ್ಪ ಉಸಿರಾಡಲು, ವಿಶ್ರಮಿಸಲು ತುಸು ಸಮಯ ನೀಡುವುದು ಅಲ್ಲಿನ ಸೌಜನ್ಯ. 'ನಾನು ನಿಮ್ಮನ್ನು ಅತಿಯಾದ ಅವಸರಕ್ಕೆ ದೂಡಲು ಬಯಸುವುದಿಲ್ಲ' ಎಂಬ ಸಂದೇಶ ಇದರ ಹಿಂದಿದೆ. ಫ್ರಾನ್ಸ್‌ನಲ್ಲಿ ಊಟ ಎನ್ನುವುದು ಕೇವಲ ಹಸಿವು ನೀಗಿಸಿಕೊಳ್ಳುವ ಪ್ರಕ್ರಿಯೆಯಲ್ಲ, ಅದೊಂದು ಸಂಭ್ರಮ. ಈ ಹದಿನೈದು ನಿಮಿಷಗಳ ವಿಳಂಬವು ಅತಿಥೇಯರಿಗೆ ಸ್ನಾನ ಮುಗಿಸಿ, ಬಟ್ಟೆ ಬದಲಾಯಿಸಿ, ಅತಿಥಿಗಳನ್ನು ಸ್ವಾಗತಿಸಲು ಸನ್ನದ್ಧರಾಗಲು ಸಹಾಯ ಮಾಡುತ್ತದೆ.

ಈ ನಿಯಮವು ಕೇವಲ ಖಾಸಗಿ ಔತಣಕೂಟಗಳಿಗೆ ಅಥವಾ ಮನೆಗಳಿಗೆ ನೀಡುವ ಭೇಟಿಗೆ ಮಾತ್ರ ಸೀಮಿತವಾಗಿದೆ. ಹಾಗಂತ ನೀವು ಹೊಟೇಲ್‌ನಲ್ಲಿ ಟೇಬಲ್ ಬುಕ್ ಮಾಡಿದ್ದರೆ ಸರಿಯಾದ ಸಮಯದಲ್ಲಿ ಇರಬೇಕು. ಆಫೀಸ್ ಕೆಲಸ ಅಥವಾ ವೃತ್ತಿಪರ ಸಭೆಗಳಲ್ಲಿ ಸಮಯಪಾಲನೆ ಅತ್ಯಂತ ಮುಖ್ಯ. ದೊಡ್ಡ ಸಾರ್ವಜನಿಕ ಸಮಾರಂಭಗಳಲ್ಲಿ ನಿಗದಿತ ಸಮಯಕ್ಕೆ ಇರುವುದೇ ಸರಿ.

ಫ್ರಾನ್ಸ್‌ನ ಈ ಪದ್ಧತಿಯು ನಮಗೆ ಕಲಿಸುವುದೇನೆಂದರೆ, ಎಲ್ಲವನ್ನೂ ಯಾಂತ್ರಿಕವಾಗಿ ನೋಡುವುದಕ್ಕಿಂತ ಮನುಷ್ಯರ ಭಾವನೆ ಮತ್ತು ಅನುಕೂಲಕ್ಕೆ ಬೆಲೆ ಕೊಡುವುದು ಮುಖ್ಯ. ಈ 'ಸಭ್ಯತೆಯ ಕಾಲು ಗಂಟೆ' ಎಂಬುದು ಅತಿಥಿ ಮತ್ತು ಅತಿಥೇಯರ ನಡುವಿನ ಒಂದು ಅಲಿಖಿತ ಒಪ್ಪಂದದಂತೆ ಕೆಲಸ ಮಾಡುತ್ತದೆ.

**

ವೆನಿಸ್ ಸಿಂಡ್ರೋಮ್

ಇಟಲಿಯ ಪ್ರಸಿದ್ಧ ನೀರಿನ ನಗರವಾದ ವೆನಿಸ್ ಬಗ್ಗೆ ಬೆಸೆದುಕೊಂಡಿರುವ 'ವೆನಿಸ್ ಸಿಂಡ್ರೋಮ್' ಎಂಬುದು ಪ್ರವಾಸೋದ್ಯಮದ ಲೋಕದಲ್ಲಿ ಅತ್ಯಂತ ವಿಚಿತ್ರ ಹಾಗೂ ಸ್ವಲ್ಪಮಟ್ಟಿಗೆ ಆತಂಕಕಾರಿ ವಿದ್ಯಮಾನ. ಇದಕ್ಕೆ ಪ್ರಮುಖವಾಗಿ ಎರಡು ಆಯಾಮಗಳಿವೆ. ಮೊದಲನೆಯದು, ಪ್ರವಾಸಿಗರ ಮಾನಸಿಕ ಸ್ಥಿತಿಗೆ ಸಂಬಂಧಿಸಿದ್ದರೆ, ಎರಡನೆಯದು, ಆ ನಗರದ ಅಸ್ತಿತ್ವಕ್ಕೆ ಸಂಬಂಧಿಸಿದೆ.

ವೆನಿಸ್ ನಗರವು ತನ್ನ ಸೌಂದರ್ಯ, ಕಾಲುವೆಗಳು ಮತ್ತು ಪ್ರಾಚೀನ ವಾಸ್ತುಶಿಲ್ಪಕ್ಕೆ ಜಗತ್ಪ್ರಸಿದ್ಧ. ಆದರೆ ಕೆಲವು ಪ್ರವಾಸಿಗರು ಅಲ್ಲಿಗೆ ಹೋದಾಗ ವಿಚಿತ್ರವಾದ ಮಾನಸಿಕ ಸ್ಥಿತಿಗೆ ಒಳಗಾಗುತ್ತಾರೆ. ಇಲ್ಲಿಗೆ ಬರುವ ಕೆಲವು ಪ್ರವಾಸಿಗರಲ್ಲಿ ತೀವ್ರವಾದ ಖಿನ್ನತೆ ಅಥವಾ ಭ್ರಮೆ ಉಂಟಾಗುತ್ತದೆ. ನಗರದ ವಿಪರೀತ ಸೌಂದರ್ಯವು ಅವರಲ್ಲಿ ಒಂದು ರೀತಿಯ ಶೂನ್ಯಭಾವವನ್ನು ಸೃಷ್ಟಿಸುತ್ತದೆ.

ವಿಚಿತ್ರವೆಂದರೆ, ಪ್ರಪಂಚದ ವಿವಿಧ ಮೂಲೆಗಳಿಂದ ಬರುವ ಕೆಲವು ಪ್ರವಾಸಿಗರು ವೆನಿಸ್‌ನ ಸೌಂದರ್ಯದ ನಡುವೆಯೇ ತಮ್ಮ ಜೀವನವನ್ನು ಕೊನೆಗೊಳಿಸಿಕೊಳ್ಳಲು (ಆತ್ಮಹತ್ಯೆ) ಬಯಸುತ್ತಾರೆ. 'ಇಷ್ಟು ಸುಂದರವಾದ ಜಾಗದಲ್ಲಿ ಸಾಯುವುದು ಚೆಂದ' ಎಂಬ ವಿಕೃತ ತರ್ಕ ಅವರಲ್ಲಿ ಕೆಲಸ ಮಾಡುತ್ತದೆ.

ವೆನಿಸ್ ನಗರವು ವರ್ಷದಿಂದ ವರ್ಷಕ್ಕೆ ಸಮುದ್ರ ಮಟ್ಟ ಏರಿಕೆಯಿಂದಾಗಿ ನೀರಿನಲ್ಲಿ ಮುಳುಗುತ್ತಿದೆ ಎಂಬುದು ಜಗತ್ತಿಗೆ ತಿಳಿದಿರುವ ಸತ್ಯ. 'ನಮ್ಮ ಜೀವಿತಾವಧಿಯಲ್ಲೇ ಈ ನಗರ ಮುಳುಗಿ ಹೋದರೆ?' ಎಂಬ ಆತಂಕ ಪ್ರವಾಸಿಗರಲ್ಲಿ ಮನೆಮಾಡಿದೆ. ಈ ಭೀತಿಯಿಂದಾಗಿ ಲಕ್ಷಾಂತರ ಪ್ರವಾಸಿಗರು ಒಮ್ಮೆಯೇ ನಗರಕ್ಕೆ ಲಗ್ಗೆ ಇಡುತ್ತಿದ್ದಾರೆ. ಇದನ್ನು 'ಲಾಸ್ಟ್ ಚಾನ್ಸ್ ಟೂರಿಸಂ' ಎಂದೂ ಕರೆಯುತ್ತಾರೆ.

ಇದರ ಪರಿಣಾಮ? ಅತಿಯಾದ ಪ್ರವಾಸಿಗರ ಸಂಖ್ಯೆಯಿಂದಾಗಿ ನಗರದ ಮೂಲಸೌಕರ್ಯ ಕುಸಿಯುತ್ತಿದೆ, ಸ್ಥಳೀಯರು ನಗರ ಬಿಟ್ಟು ಹೋಗುತ್ತಿದ್ದಾರೆ. ಇದು ನಗರದ ಸಾಮಾಜಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಅತಿಯಾದ ಸೌಂದರ್ಯ ಅಥವಾ ಅತಿಯಾದ ಆತಂಕ ಎರಡೂ ಮನುಷ್ಯನ ಮನಸ್ಸಿನ ಮೇಲೆ ಅನಿರೀಕ್ಷಿತ ಪರಿಣಾಮ ಬೀರುವುದು ವೆನಿಸ್ ಸಿಂಡ್ರೋಮ್‌ನ ಲಕ್ಷ್ಮಣ.

**

ತಲೆ ಕೆಳಗಾದ ಚರ್ಚ್

ಸ್ಪೇನ್‌ನ ಮಜೋಲ್ಕಾದಲ್ಲಿ ಒಂದು ವಿಚಿತ್ರವಿದೆ. ಅಲ್ಲಿನ ಗಾಳಿ-ಬೆಳಕಿನ ಮಧ್ಯೆ ಈ ಚರ್ಚ್ ಅಪ್ಪಿತಪ್ಪಿಯೂ ನೆಲದ ಮೇಲೆ ಸರಿಯಾಗಿ ನಿಂತಿಲ್ಲ. ಯಾರೋ ದೈತ್ಯಾಕಾರದ ಶಿಲ್ಪಿ, ಆಕಾಶದಿಂದ ಚರ್ಚ್ ಅನ್ನು ಹಿಡಿದು ಸೀದಾ ನೆಲಕ್ಕೆ ಚುಚ್ಚಿದಂತೆ ಈ ಪ್ರತಿಮೆ ಇದೆ. ಅದರ ಗೋಪುರ ಸೀದಾ ಮಣ್ಣಿನ ಒಳಕ್ಕೆ ಇಳಿದಿದೆ, ಅಡಿಪಾಯ ಆಕಾಶಕ್ಕೆ ಕೈ ಚಾಚಿ ಕರೆಯುತ್ತಿದೆ. ಇದನ್ನು ಕಂಡರೆ ನಮಗೆ ಅನ್ನಿಸುವುದು ಇಷ್ಟೇ— 'ಪಾಪ, ದೇವರೂ ಕೂಡ ಕೆಲವೊಮ್ಮೆ ಗೊಂದಲದಲ್ಲಿ ಸಿಲುಕಿರಬಹುದು!'

Untitled design - 2026-05-12T132410.325

ಇದಕ್ಕೆ ಅವರು ಕೊಟ್ಟ ಹೆಸರು 'Device to Root Out Evil'. ಅಂದರೆ ಕೆಟ್ಟದ್ದನ್ನು ಬೇರು ಸಮೇತ ಕಿತ್ತೊಗೆಯುವ ಸಾಧನ. ಬಹುಶಃ ಈ ಚರ್ಚ್‌ಗೆ ಗೊತ್ತು— ಜಗತ್ತಿನಲ್ಲಿ ಪಾಪದ ಬೇರುಗಳು ಇರುವುದು ಮಣ್ಣಿನ ಅಡಿಯಲ್ಲಿ, ಹಾಗಾಗಿ ಪ್ರಾರ್ಥನೆಯನ್ನು ಸೀದಾ ಪಾತಾಳಕ್ಕೆ ಪಂಪ್ ಮಾಡಬೇಕು ಅಂತ ಈ ಪ್ಲಾನ್ ಇರಬಹುದು. ನಾವೆಲ್ಲರೂ ಆಕಾಶದ ಕಡೆ ಮುಖ ಮಾಡಿ 'ದೇವರೇ ಕಾಪಾಡು' ಎನ್ನುತ್ತೇವೆ, ಆದರೆ ಈ ಶಿಲ್ಪ ಮಾತ್ರ 'ದೇವರೇ, ಕೆಳಗಿನ ಗಲೀಜನ್ನೆಲ್ಲ ಒಮ್ಮೆ ನೋಡಿ ಕ್ಲೀನ್ ಮಾಡು' ಎಂದು ತಲೆಕೆಳಗಾಗಿ ಹಟ ಹಿಡಿದು ಕುಳಿತಿದೆ.

ನಮ್ಮೂರಿನ ಹೊಟೇಲ್‌ಗಳಲ್ಲಿ 'ಉಲ್ಟಾ ಪಲ್ಟಾ' ಪರೋಟ ಸಿಗುವಂತೆ, ಇಲ್ಲಿ ನಂಬಿಕೆಯೂ ಉಲ್ಟಾ ಆಗಿದೆ. ಗುರುತ್ವಾಕರ್ಷಣೆ ಎಂಬ ಮನುಷ್ಯ ನಿರ್ಮಿತ ನಿಯಮಕ್ಕೆ ಇಲ್ಲಿ ಜಾಗವಿಲ್ಲ. ಇದನ್ನು ನೋಡುವಾಗ, ನಮ್ಮೊಳಗಿನ ಯಾವುದೋ ಹಳೆಯ ಕಿಟಕಿಗಳು ಚಟಪಟ ಅಂತ ತೆರೆದುಕೊಳ್ಳುತ್ತವೆ. ಈ ಪ್ರತಿಮೆಯ ಹತ್ತಿರ ಹೋದರೆ, ನಮ್ಮ ಬದುಕಿನ ಗೋಜಲುಗಳೂ ಕೂಡ ಇದೇ ರೀತಿ ತಲೆಕೆಳಗಾಗಿ ನಿಂತಿವೆ ಅನ್ನಿಸುತ್ತದೆ. ಆದರೆ ಆ ಉಲ್ಟಾ ನಿಲುವಿನಲ್ಲೂ ಒಂದು ಬಗೆಯ ನೆಮ್ಮದಿ ಇದೆ, ಒಂದು ಬಚಾವಾದ ಭಾವವಿದೆ.

ಕೆಟ್ಟದ್ದನ್ನು ಬೇರು ಸಮೇತ ಕಿತ್ತು ಹಾಕಲು ಇಷ್ಟು ಸಾಕು ಅನ್ನಿಸುತ್ತದೆ— ಒಂದು ಮುಗ್ಧವಾದ ಉಲ್ಟಾ ನೋಟ! ಮಜೋಲ್ಕಾದ ಈ ಉಲ್ಟಾ ಚರ್ಚ್ ನಮ್ಮನ್ನು ನೋಡಿ ನಗುತ್ತಿದೆ. ಯಾಕೆಂದರೆ ನಾವು ಸರಿಯಾಗಿ ನಿಂತುಕೊಂಡೇ ಏನೆಲ್ಲ ಅವಾಂತರ ಮಾಡುತ್ತಿದ್ದೇವೆ, ಇನ್ನು ಈ ಚರ್ಚ್ ತಲೆಕೆಳಗಾಗಿ ನಿಂತು ಜಗತ್ತನ್ನು ಸರಿಪಡಿಸಲು ಹೊರಟಿದೆ. ಅದರ ಸೃಜನಶೀಲತೆಯ ನಶೆಯೇ ಹಾಗಿದೆ!

**

ಸಾಲು ಮರಗಳ ನಗರ

ಜಗತ್ತಿನ ಹಲವು ರಾಜಧಾನಿಗಳು ಇಂದು ಕಾಂಕ್ರೀಟ್ ಕಾಡುಗಳಾಗಿ ಪರಿವರ್ತನೆಯಾಗುತ್ತಿವೆ. ಆದರೆ, ಮಧ್ಯ ಏಷ್ಯಾದ ಕಿರ್ಗಿಸ್ತಾನ್ ದೇಶದ ರಾಜಧಾನಿ ಬಿಷ್ಕೆಕ್ ಇದಕ್ಕೆ ಅಪವಾದ. ಇದನ್ನು ಮೊದಲ ಬಾರಿ ನೋಡುವ ಪ್ರವಾಸಿಗರಿಗೆ ಇದೊಂದು ನಗರವೋ ಅಥವಾ ದಟ್ಟವಾದ ಕಾಡಿನೊಳಗೆ ನಿರ್ಮಿಸಲಾದ ವಸಾಹತೋ ಎಂಬ ಭ್ರಮೆ ಉಂಟಾಗುವುದು ಸಹಜ. ಬಿಷ್ಕೆಕ್ ಕೇವಲ ಒಂದು ಆಡಳಿತಾತ್ಮಕ ಕೇಂದ್ರವಲ್ಲ; ಅದು ಯೋಜಿತ ಹಸಿರು ವಲಯದ ಅದ್ಭುತ ಮಾದರಿ.

ಬಿಷ್ಕೆಕ್ ಇಷ್ಟೊಂದು ಹಸಿರಾಗಿರುವುದರ ಹಿಂದೆ ಸೋವಿಯತ್ ಒಕ್ಕೂಟದ ಕಾಲದ ಬಲವಾದ ದೂರದೃಷ್ಟಿಯಿದೆ. ಅಂದಿನ ನಗರ ಯೋಜಕರು ಕೇವಲ ಕಟ್ಟಡಗಳು ಮತ್ತು ರಸ್ತೆಗಳಿಗೆ ಪ್ರಾಮುಖ್ಯ ನೀಡದೇ, ಮನುಷ್ಯನ ಆರೋಗ್ಯ ಮತ್ತು ಪರಿಸರದ ಸಮತೋಲನಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ನಗರವನ್ನು ವಿನ್ಯಾಸಗೊಳಿಸುವಾಗಲೇ 'ಪ್ರತಿಯೊಬ್ಬ ನಾಗರಿಕನಿಗೂ ಇಂತಿಷ್ಟು ಮರಗಳು' ಎಂಬ ಲೆಕ್ಕಾಚಾರವನ್ನು ಹೊಂದಿದ್ದರು. ಈ ಲೆಕ್ಕಾಚಾರದ ಫಲವಾಗಿಯೇ ಇಂದು ಬಿಷ್ಕೆಕ್ ವಿಶ್ವದ ಅತ್ಯಂತ ಹಸಿರು ನಗರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಇಲ್ಲಿನ ಪ್ರತಿ ಚದರ ಮೀಟರ್ ವ್ಯಾಪ್ತಿಯಲ್ಲೂ ಇರುವ ಮರಗಳ ಸಂಖ್ಯೆ ಮತ್ತು ಹಸಿರು ಹೊದಿಕೆ ಬೇರೆ ಯಾವುದೇ ಆಧುನಿಕ ನಗರಗಳಲ್ಲಿ ಕಂಡುಬರುವುದು ವಿರಳ.

ಬಿಷ್ಕೆಕ್ ನಗರದ ರಸ್ತೆಗಳಲ್ಲಿ ಸಂಚರಿಸುವುದು ಒಂದು ಆಹ್ಲಾದಕರ ಅನುಭವ. ಇಲ್ಲಿನ ಬಹುತೇಕ ರಸ್ತೆಗಳ ಎರಡೂ ಬದಿಗಳಲ್ಲಿ ಸಾಲು ಸಾಲು ಮರಗಳನ್ನು ನೆಡಲಾಗಿದೆ. ಇವು ಕೇವಲ ಮರಗಳಲ್ಲ, ಬೇಸಿಗೆಯ ಪ್ರಖರ ಬಿಸಿಲಿನಿಂದ ಪಾದಚಾರಿಗಳನ್ನು ರಕ್ಷಿಸುವ ನೈಸರ್ಗಿಕ ಛತ್ರಿಗಳು. ಈ ಮರಗಳು ರಸ್ತೆಯ ಮೇಲ್ಭಾಗದಲ್ಲಿ ಒಂದಕ್ಕೊಂದು ಹೆಣೆದುಕೊಂಡು ಹಸಿರು ಕಮಾನುಗಳನ್ನು (Green Canopies) ಸೃಷ್ಟಿಸುತ್ತವೆ. ಪರಿಣಾಮವಾಗಿ, ಬಿಷ್ಕೆಕ್‌ನಲ್ಲಿ ಬೇಸಿಗೆಯ ತಾಪಮಾನವು ಹೆಚ್ಚಿದ್ದರೂ, ಪಾದಚಾರಿಗಳು ರಸ್ತೆಯ ನೆರಳಿನಲ್ಲೇ ಆರಾಮವಾಗಿ ಸಂಚರಿಸಬಹುದು. ಈ ಮರಗಳು ಕೇವಲ ನೆರಳು ನೀಡುವುದಲ್ಲದೆ, ನಗರದ ಧೂಳು ಮತ್ತು ಶಬ್ದ ಮಾಲಿನ್ಯವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಇದನ್ನೂ ಓದಿ: ಭೂತಾನ್ ಎಂಬ ಸುಂದರ ತಾಣ: ಲಿಂಡಾ ಲೀಮಿಂಗ್ ಕಂಡ ಸುಖದ ಹಾದಿಯ ಪಯಣ

ಈ ಹಸಿರನ್ನು ದಶಕಗಳಿಂದ ಕಾಪಾಡಿಕೊಂಡು ಬರಲು ಬಿಷ್ಕೆಕ್ ಒಂದು ವಿಶಿಷ್ಟವಾದ ಸಾಂಪ್ರದಾಯಿಕ ನೀರಾವರಿ ವ್ಯವಸ್ಥೆಯನ್ನು ಬಳಸುತ್ತಿದೆ. ಇದನ್ನು ಸ್ಥಳೀಯ ಭಾಷೆಯಲ್ಲಿ 'ಅರಿಕ್' ಎಂದು ಕರೆಯುತ್ತಾರೆ. ಇವು ರಸ್ತೆಗಳ ಬದಿಯಲ್ಲಿರುವ ಸಣ್ಣ ಕಾಲುವೆಗಳು. ಪರ್ವತಗಳಿಂದ ಹರಿದು ಬರುವ ಶುದ್ಧ ನೀರನ್ನು ಈ ಕಾಲುವೆಗಳ ಮೂಲಕ ನಗರದಾದ್ಯಂತ ಹರಿಸಲಾಗುತ್ತದೆ. ಈ ವ್ಯವಸ್ಥೆಯು ಮರಗಳಿಗೆ ನಿರಂತರವಾಗಿ ನೀರನ್ನು ಒದಗಿಸುವುದಲ್ಲದೆ, ನಗರದ ತಾಪಮಾನವನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ. ಸೋವಿಯತ್ ಕಾಲದ ಈ ಎಂಜಿನಿಯರಿಂಗ್ ಕೌಶಲ ಇಂದಿಗೂ ನಗರದ ಹಸಿರನ್ನು ಜೀವಂತವಾಗಿರಿಸಿದೆ.

ಬಿಷ್ಕೆಕ್ ನಗರವನ್ನು 'ಪಾರ್ಕುಗಳ ನಗರ' ಎಂದೂ ಕರೆಯಬಹುದು. ಓಕ್ ಪಾರ್ಕ್, ಪನ್ಫಿಲೋವ್ ಪಾರ್ಕ್ ಮತ್ತು ಎರ್ಶಿಂದಿಕ್ ಬೌಲೆವಾರ್ಡ್‌ನಂಥ ವಿಶಾಲವಾದ ಉದ್ಯಾನವನಗಳು ನಗರದ ಹೃದಯಭಾಗದಲ್ಲಿವೆ. ಇಲ್ಲಿ ನೂರಾರು ವರ್ಷ ಹಳೆಯದಾದ ಓಕ್ ಮರಗಳು ಮತ್ತು ಪಾಪ್ಲರ್ ಮರಗಳನ್ನು ಕಾಣಬಹುದು. ಈ ಪಾರ್ಕುಗಳು ಕೇವಲ ಪ್ರವಾಸಿ ತಾಣಗಳಲ್ಲ, ಬಿಷ್ಕೆಕ್ ನಿವಾಸಿಗಳ ದೈನಂದಿನ ಜೀವನದ ಭಾಗ. ಸಂಜೆಯ ವೇಳೆಯಲ್ಲಿ ಜನರು ಈ ಮರಗಳ ನೆರಳಿನಲ್ಲಿ ವಿಶ್ರಮಿಸುವುದು, ಪುಸ್ತಕ ಓದುವುದು ಇಲ್ಲಿನ ಸಾಮಾನ್ಯ ದೃಶ್ಯ.

ಬಿಷ್ಕೆಕ್‌ನ ಈ ಹಸಿರು ಪರಂಪರೆ ಇಂದಿನ ಪೀಳಿಗೆಗೆ ದೊಡ್ಡ ಕೊಡುಗೆಯಾಗಿದೆ. ಹವಾಮಾನ ವೈಪರೀತ್ಯದ ಈ ಕಾಲದಲ್ಲಿ, ಬಿಷ್ಕೆಕ್ ನಗರದ ವಿನ್ಯಾಸವು ಜಗತ್ತಿನ ಇತರ ನಗರಗಳಿಗೆ ಪಾಠದಂತಿದೆ. ಮರಗಳು ಕೇವಲ ಅಲಂಕಾರಿಕ ವಸ್ತುಗಳಲ್ಲ, ಅವು ನಗರದ ಶ್ವಾಸಕೋಶಗಳು ಎಂಬ ಸತ್ಯವನ್ನು ಬಿಷ್ಕೆಕ್ ಸಾಬೀತುಪಡಿಸಿದೆ. ಆದರೆ, ಹೆಚ್ಚುತ್ತಿರುವ ವಾಹನ ದಟ್ಟಣೆ ಮತ್ತು ನಗರೀಕರಣವು ಈ ಹಸಿರು ಹೊದಿಕೆಗೆ ಸವಾಲೊಡ್ಡುತ್ತಿವೆ. ಆದರೂ, ಅಲ್ಲಿನ ಸರಕಾರ ಮತ್ತು ಜನರು ತಮ್ಮ 'ಹಸಿರು ನಗರ'ದ ಅಸ್ಮಿತೆಯನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.

ಒಬ್ಬ ಪ್ರವಾಸ ಪ್ರೇಮಿಗೆ ಅಥವಾ ಪರಿಸರವಾದಿಗೆ ಬಿಷ್ಕೆಕ್ ಒಂದು ಮಾದರಿ ತಾಣ. ರಸ್ತೆಯ ಉದ್ದಕ್ಕೂ ಹರಡಿರುವ ನೆರಳು, ತಣ್ಣನೆಯ ಗಾಳಿ ಮತ್ತು ಕಣ್ಣಿಗೆ ರಾಚುವ ಹಸಿರು ಬಿಷ್ಕೆಕ್ ಅನ್ನು ವಿಶೇಷವಾಗಿಸಿದೆ. ಅದು ಪ್ರಕೃತಿ ಮತ್ತು ಮಾನವ ನಿರ್ಮಿತ ನಗರದ ನಡುವಿನ ಅದ್ಭುತ ಸಹಬಾಳ್ವೆ.

**