Tuesday, May 12, 2026
Tuesday, May 12, 2026

ವಿಶ್ವ ವಿಖ್ಯಾತ ಮೈಸೂರಲ್ಲಿ ʻವಿವೇಕ ಸ್ಮಾರಕʼ

ಮೈಸೂರು ಅರಮನೆಗೆ ಭೇಟಿ ನೀಡುವ ಮುನ್ನ ವಿವೇಕಾನಂದರು ಅಂಬಾವಿಲಾಸ ಅರಮನೆ ಹಾಗೂ ಜಗನ್ಮೋಹನ ಅರಮನೆಗೆ ಕೇವಲ 200-300 ಮೀ ದೂರದಲ್ಲಿನ ನಾರಾಯಣ ಶಾಸ್ತ್ರಿ ರಸ್ತೆ ಹಾಗೂ ಶೇಷಾದ್ರಿ ರಸ್ತೆ ಎರಡಕ್ಕೂ ಅಂಟಿಕೊಂಡಂತಿರುವ ನಿರಂಜನ ಮಠದಲ್ಲಿ ತಂಗಿದ್ದರು. ಅಲ್ಲಿ ಅನಾಥ ಮಕ್ಕಳ ಜತೆಗೆ ಪ್ರತಿನಿತ್ಯ ಧ್ಯಾನ, ಪ್ರವಚನಗಳನ್ನು ಮಾಡುತ್ತಾ ದಿನ ಕಳೆಯುತ್ತಿದ್ದರು. ಅರಮನೆಯ ವೈಭೋಗವನ್ನು ಅನುಭವಿಸುವುದನ್ನು ನಿರಾಕರಿಸಿ ಅನಾಥಾಲಯದಲ್ಲಿ ಉಳಿದರು. ದಿನನಿತ್ಯ ಅವರನ್ನು ನೋಡಲು ಬರುವ ಜನರಿಗೆ ಬೋಧನೆ ಹಾಗೂ ವಿದ್ವಾಂಸರ ಜತೆಗೆ ಚರ್ಚೆ ನಡೆಸುತ್ತಾ ಜನಸಾಮಾನ್ಯರಲ್ಲಿ ಬೆರೆಯುತ್ತಿದ್ದರು...

  • ನಂಜನಗೂಡು ಪ್ರದ್ಯುಮ್ನ

ಭಾರತದೆಲ್ಲೆಡೆ ಸ್ವಾತಂತ್ರ್ಯ ಸಂಗ್ರಮ ನಡೆಯುತ್ತಿದ್ದ ಸಂದರ್ಭ. ಅದಾಗಲೇ ಬ್ರಿಟಿಷರ ವಿರುದ್ಧ ಭಾರತ ಬಿಟ್ಟು ತೊಲಗಿ ಕೂಗು ದೇಶದ ಮೂಲೆ ಮೂಲೆಯಲ್ಲೂ ಮೊಳಗುತ್ತಿತ್ತು. ಒಂದೆಡೆ ಸ್ವತಂತ್ರ ಸಂಗ್ರಾಮದ ಕಿಚ್ಚು ಹೆಚ್ಚುತ್ತಿದ್ದರೆ ಮತ್ತೊಂದೆಡೆ ಧರ್ಮ ಜಾಗೃತಿಯ ಕೆಲಸವೂ ಸದ್ದಿಲ್ಲದೆ ಸಾಗುತ್ತಿತ್ತು. 'ಯುವಕರೆ ಏಳಿ ಎದ್ದೇಳಿ' ಎಂಬ ಘೋಷ ವಾಕ್ಯ ಅಂದಿನ ಯುವ ಪೀಳಿಗೆಯನ್ನು ಜಾಗೃತಗೊಳಿಸುತ್ತಿತ್ತು. ಆ ಮಾತು ಅವರ ಧ್ವನಿ ಇಂದಿಗೂ ಕೆಲಸ ಮಾಡುತ್ತಿದೆ. ದೇಶದ ಯುವಜನರಲ್ಲಿ ಉತ್ಸಾಹ ತುಂಬಿ, ದೇಶಭಕ್ತಿ ಹಾಗೂ ಧರ್ಮ ಜಾಗೃತಿಯ ಕಿಚ್ಚನ್ನು ಹೆಚ್ಚಿಸುವ ಕೆಲಸದಲ್ಲಿ ನಿರತರಾಗಿ ಭಾರತಾದ್ಯಂತ ಸಂಚಾರ ಮಾಡಿದ ಮಾಹಾನ್ ವ್ಯಕ್ತಿ ಯುವ ಸನ್ಯಾಸಿ 'ಸ್ವಾಮಿ ವಿವೇಕಾನಂದ'.

ಇದನ್ನೂ ಓದಿ: ಮೈಸೂರು ಅರಮನೆಯ ಸುತ್ತಮುತ್ತಲಿನ ದೇವಾಲಯಗಳು...

ದೇಶದ ಜನರಲ್ಲಿ ಧರ್ಮಜಾಗೃತಿ ಹಾಗೂ ದೇಶಭಕ್ತಿಯನ್ನು ಪಸರಿಸುವ ಸಂಕಲ್ಪದೊಂದಿಗೆ ದೇಶದುದ್ದಗಲಕ್ಕೂ ಸಂಚರಿಸುತಿದ್ದ ಸ್ವಾಮಿ ವಿವೇಕಾನಂದರು1892ರಲ್ಲಿ ಬೆಂಗಳೂರಿಗೆ ಆಗಮಿಸಿದ್ದರು. ಆಗ ಮೈಸೂರಿನ ದಿವಾನರಾಗಿದ್ದ ಶೇಷಾದ್ರಿ ಅಯ್ಯರ್ ಮತ್ತು ವಿವೇಕಾನಂದರು ಪರಸ್ಪರ ಭೇಟಿಯಾದರು. 29 ವರ್ಷದ ತರುಣ ಸನ್ಯಾಸಿಯನ್ನು ಕಂಡ ದಿವಾನರು ಅವರ ಚತುರತೆ, ಮುಖದಲ್ಲಿನ ತೇಜಸ್ಸು ಅವರಲ್ಲಿದ್ದ ಉತ್ಸಾಹಗಳನ್ನು ಕಂಡು ಆಕರ್ಷಿತರಾಗಿ ಅವರನ್ನು ಮೈಸೂರಿಗೆ ಆಗಮಿಸುವಂತೆ ಆಹ್ವಾನ ನೀಡಿದರು. ಆಹ್ವಾನದ ಮೇರೆಗೆ ಮೈಸೂರಿಗೆ ಬಂದ ವಿವೇಕಾನಂದರನ್ನು ಅಂದಿನ ಮೈಸೂರು ಮಹಾರಾಜರಾಗಿದ್ದ 10ನೆಯ ಚಾಮರಾಜೇಂದ್ರ ಒಡೆಯರ್‌ರ ಅವರು ಅರಮನೆಗೆ ಆಹ್ವಾನಿಸಿದ್ದರು.

New Project (22)

ಮೈಸೂರು ಅರಮನೆಗೆ ಭೇಟಿ ನೀಡುವ ಮುನ್ನ ವಿವೇಕಾನಂದರು ಅಂಬಾವಿಲಾಸ ಅರಮನೆ ಹಾಗೂ ಜಗನ್ಮೋಹನ ಅರಮನೆಗೆ ಕೇವಲ 200-300 ಮೀ ದೂರದಲ್ಲಿನ ನಾರಾಯಣ ಶಾಸ್ತ್ರಿ ರಸ್ತೆ ಹಾಗೂ ಶೇಷಾದ್ರಿ ರಸ್ತೆ ಎರಡಕ್ಕೂ ಅಂಟಿಕೊಂಡಂತಿರುವ ನಿರಂಜನ ಮಠದಲ್ಲಿ ತಂಗಿದ್ದರು. ಅಲ್ಲಿ ಅನಾಥ ಮಕ್ಕಳ ಜತೆಗೆ ಪ್ರತಿನಿತ್ಯ ಧ್ಯಾನ, ಪ್ರವಚನಗಳನ್ನು ಮಾಡುತ್ತಾ ದಿನ ಕಳೆಯುತ್ತಿದ್ದರು. ಅರಮನೆಯ ವೈಭೋಗವನ್ನು ಅನುಭವಿಸುವುದನ್ನು ನಿರಾಕರಿಸಿ ಅನಾಥಾಲಯದಲ್ಲಿ ಉಳಿದರು. ದಿನನಿತ್ಯ ಅವರನ್ನು ನೋಡಲು ಬರುವ ಜನರಿಗೆ ಬೋಧನೆ ಹಾಗೂ ವಿದ್ವಾಂಸರ ಜತೆಗೆ ಚರ್ಚೆ ನಡೆಸುತ್ತಾ ಜನಸಾಮಾನ್ಯರಲ್ಲಿ ಬೆರೆಯುತ್ತಿದ್ದರು ಎಂದು ಅನೇಕ ಇತಿಹಾಸಕಾರರು ಹಾಗೂ ಸ್ಥಳಿಯರು ದಾಖಲಿಸಿದ್ದಾರೆ. ಬಳಿಕ ಮಹಾರಾಜರ ಭೇಟಿ, ಅರಮನೆ ಸತ್ಕಾರ ನಂತರ ಅಮೆರಿಕದ ಚಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನಕ್ಕೆ ತೆರಳಲು ವಿವೇಕಾನಂದರಿಗೆ ಮಹಾರಾಜರು ಮಾಡಿದ ಸಹಾಯ ಎಲ್ಲವೂ ಇತಿಹಾಸವಾಗಿದೆ. ಸ್ವಾಮಿ ವಿವೇಕಾನಂದರ ಈ ಭೇಟಿಯನ್ನು ಚಿರಸ್ಥಾಯಿಯಾಗಿಸಲು ನಿರಂಜನ ಮಠದ ಪಕ್ಕದ ಸ್ಥಳದಲ್ಲಿ ಭವ್ಯವಾದ ವಿವೇಕ ಸ್ಮಾರಕ ತಲೆ ಎತ್ತಿದೆ.

ವಿವಾದಕ್ಕೆ ತೆರವು ನೀಡಿದ ನ್ಯಾಯಾಲಯ

ಪ್ರಸ್ತುತ ನಿರ್ಮಾಣವಾಗುತ್ತಿರುವ ವಿವೇಕ ಸ್ಮಾರಕ ಜಾಗದಲ್ಲಿ, ಮೈಸೂರು ಮಹಾರಾಣಿಯಾಗಿದ್ದ ವಾಣಿವಿಲಾಸ ಸನ್ನಿದಾನ ಅವರು ಬಾಲಕಿಯರಿಗಾಗಿ ಮೊಟ್ಟಮೊದಲಬಾರಿಗೆ ಕನ್ನಡ (ಎನ್.ಟಿ.ಎಂ) ಶಾಲೆಯೊಂದನ್ನು ಪ್ರಾರಂಭಿಸಿದರು.

ಪ್ರಾರಂಭದ ದಿನಗಳಲ್ಲಿ ಅರಮನೆ ಆವರಣದಲ್ಲೇ ವಿದ್ಯಾರರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿತ್ತು. 1911ರಲ್ಲಿ ಪ್ರಸ್ತುತ ಸ್ಮಾರಕ ನಿರ್ಮಾಣವಾಗುತ್ತಿರುವ ಜಾಗಕ್ಕೆ ಶಾಲೆಯನ್ನು ಸ್ಥಳಾಂತರ ಮಾಡಲಾಯಿತು. 1971ರಲ್ಲಿ ನಡೆದ ಶಾಲೆಯ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ನೂತನ ಶಾಲಾ ಕಟ್ಟಡವನ್ನು ಉದ್ಘಾಟನೆ ಮಾಡಲಾಯಿತು.

ವಿವೇಕ ಸ್ಮಾರಕ ನಿರ್ಮಿಸಬೇಕು ಎನ್ನುವ ಗುಂಪು ಮತ್ತು ಐತಿಹಾಸಿಕ ಶಾಲೆಯ ಜಾಗದಲ್ಲಿ ಸ್ಮಾರಕ ಬೇಡ ಎನ್ನುವ ಇನ್ನೊಂದು ಗುಂಪಿನ ನಡುವೆ ಪ್ರತಿಭಟನೆ, ವಾಗ್ವಾದಗಳು ನಡೆಯುತ್ತಿದ್ದವು. ಕೊನೆಗೆ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತು. ವಿವೇಕ ಸ್ಮಾರಕ ನಿರ್ಮಾಣಕ್ಕೆ ನ್ಯಾಯಾಲಯ ಅನುಮತಿ ನೀಡಿತು. ಸರಕಾರಿ ಶಾಲೆಯನ್ನು ಪಕ್ಕದಲ್ಲಿದ್ದ ದೇವರಾಜ ಶಾಲೆಯೊಂದಿಗೆ ವಿಲಿನ ಮಾಡುವಂತೆ ಆದೇಶ ನೀಡಿ ವಿವಾದಗಳಿಗೆ ತೆರೆ ಎಳೆಯಿತು. ಈ ಸ್ಮಾರಕದ ಉದ್ದೇಶವೂ ವಿದ್ಯಾರ್ಥಿಗಳ ವಿದ್ಯಾಭ್ಯಾಸ, ಕೌಶಲ್ಯಭಿವೃದ್ಧಿ ಸೇರಿದಂತೆ ಯುವ ಪೀಳಿಗೆಯ ಭವಿಷ್ಯದ ಚಿಂತನೆಯಾಗಿತ್ತು.

New Project (24)

ಸ್ಮಾರಕ ನಿರ್ಮಾಣ ಜವಬ್ಧಾರಿ ಹೊತ್ತ ರಾಮಕೃಷ್ಣ ಮಿಷನ್

2008ರಲ್ಲಿ ವಿವೇಕ ಸ್ಮಾರಕ ನಿರ್ಮಾಣದ ಕನಸು ವಿವೇಕನಾಂದರ ಅನುಯಾಯಿಗಳು, ರಾಮಕೃಷ್ಣ ಆಶ್ರಮದ ಭಕ್ತರಲ್ಲಿ ಮೊಳಕೆಯೊಡೆಯಿತು. ಅಂದು ಪ್ರಾರಂಭವಾದ ಸ್ಮಾರಕ ನಿರರ್ಮಾಣದ ಕಾರ್ಯ 2026ಕ್ಕೆ ಕೊನೆಯ ಹಂತ ತಲುಪಿದೆ. ಶೀಘ್ರದಲ್ಲೇ ಸ್ಮಾರಕ ನಿರ್ಮಾಣ ಪೂರ್ಣಗೊಳ್ಳಲಿದೆ.

ಸ್ಮಾರಕದ ನಿರ್ಮಾಣದ ಸಂಪೂರ್ಣ ಜವಬ್ಧಾರಿಯನ್ನು ರಾಮಕೃಷ್ಣ ಆಶ್ರಮ ಮೈಸೂರು ಶಾಖೆ ಹೊತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ನೀಡಿದ ಅನುದಾನ ಹಾಗೂ ಮಠದ ಶಿಷ್ಯರು, ಸಾರ್ವಜನಿಕರು ನೀಡಿದ ದೇಣಿಗೆಯಿಂದ ಸುಮಾರು 40ಕೋಟಿ ರು. ವೆಚ್ಚದಲ್ಲಿ ಸ್ಮಾರಕ ನಿರ್ಮಿಸಲಾಗುತ್ತಿದೆ. ಈ ಸ್ಮಾರಕದ ನಕ್ಷೆ ತಯಾರಿಸಿದ್ದು ಆಶ್ರಮದ ಹಿರಿಯ ವಿದ್ಯಾರ್ಥಿಯಾದ ಕೆ.ರವೀಂದ್ರ ಅವರು ಎನ್ನುವುದು ವಿಶೇಷ. ಕಟ್ಟಡದ ಎತ್ತರದ ತುದಿಯಲ್ಲಿ ವಿವೇಕಾನಂದ ಭಾವಚಿತ್ರವೊಂದನ್ನು ವಿನ್ಯಾಸ ಮಾಡಲಾಗಿದ್ದ, ಕಟ್ಟಡಕ್ಕೆ ಒಂದು ವಿಶೇಷ ಆಕರ್ಷಣೀಯ ರೂಪ ನೀಡಿದೆ.

ಸ್ಮಾರಕದೊಳಗಿರುವ ವ್ಯವಸ್ಥೆ

  • ಸುಮಾರು 600 ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆಯ ಆಂಫಿಥಿಯೇಟರ್
  • ಪ್ರಾರ್ಥನೆ ಹಾಗೂ ಸಭೆಗಳಿಗೆ ಸಭಾಂಗಣ
  • ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ, ಪ್ರವಚನ, ಬೋದನೆ ಹಾಗೂ ಅವರು ಮೈಸೂರಿಗೆ ಭೇಟಿ ನೀಡಿದ್ದ ಬಗ್ಗೆ ಮಾಹಿತಿ ನೀಡುವ ವಸ್ತುಸಂಗ್ರಹಾಲಯ
  • ಶೈಕ್ಷಣಿಕ ಕಲಿಕೆಗೆ ಪೂ೩ರಕವಾಗುವ, ವಿವಿಧ ಕ್ಷೇತ್ರಗಳಲ್ಲಿ ಯುವಕರಿಗೆ ಅಲ್ಪಾವಧಿ ಕೋರ್ಸ್‌ಗಳನ್ನು ನಡೆಸಲು ತರಗತಿ ಕೊಠಡಿಗಳು
  • ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ವಿದ್ಯಾರ್ಥಿಗಳಿಗೆ ಸುಸಜ್ಜಿತ ಗ್ರಂಥಾಲಯ ಮತ್ತು ಅಧ್ಯಯನ ಕೊಠಡಿ, ಮಿನಿ ಸೆಮಿನಾರ್ ಸಭಾಂಗಣ
  • ಯೋಗ, ಧ್ಯಾನ ಮತ್ತು ಇತ್ಯಾದಿ ಚಟುವಟಿಕೆಗಳಿಗಾಗಿ ಬೃಹತ್‌ ಸಭಾಂಗಣ

ಚಾಮರಾಜೇಂದ್ರ ಒಡೆಯರ್ ಮತ್ತು ವಿವೇಕಾನಂದರ ನಡುವೆ ನಡೆದಿದ್ದ ಪತ್ರ ವ್ಯವಹಾರಗಳ ಕೆಲವು ಪತ್ರಗಳನ್ನು ನಿರಂಜನ ಮಠದಲ್ಲಿ ಪ್ರದರ್ಶಿಸಲಾಗಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..