• ರಂಗಸ್ವಾಮಿ ಮೂಕನಹಳ್ಳಿ

ಸ್ವಿಟ್ಜರ್‌ಲ್ಯಾಂಡ್ 26 ಸಣ್ಣ ರಾಜ್ಯಗಳಾಗಿ ವಿಭಾಗಿಸಲ್ಪಟ್ಟಿದೆ. ಜ್ಯೂರಿಚ್ ಅತಿ ದೊಡ್ಡ ನಗರ; ಆದರೆ ರಾಜಧಾನಿಯಲ್ಲ. ಬೆರ್ನ್ ಸ್ವಿಟ್ಜರ್‌ಲ್ಯಾಂಡ್‌ನ ರಾಜಧಾನಿ. ಜ್ಯೂರಿಚ್ಚಿನಿಂದ ಎಲ್ಲಿಗೆ ಬೇಕಾದರೂ ಅರ್ಧ ಗಂಟೆಯಿಂದ ಮೂರು ಗಂಟೆಯೊಳಗೆ ತಲುಪಬಹುದು. ನಾವು ಜ್ಯೂರಿಚ್ಚನ್ನು ಕೇಂದ್ರಬಿಂದುವಾಗಿಸಿಕೊಂಡು ಸುತ್ತುವುದು ಎಂದು ತೀರ್ಮಾನಿಸಿದ್ದೆವು. ಅಂತೆಯೇ ಮಧ್ಯ ಸ್ವಿಟ್ಜರ್‌ಲ್ಯಾಂಡ್‌ನ ಆತ್ಮ, ಯಾತ್ರಿಕರ ಮೊದಲ ಗುರಿ, ಮನಮೋಹಕ ನಿಸರ್ಗ ತಾಣವೆಂದು ಜಗತ್ತಿನಲ್ಲೇ ಹೆಸರುವಾಸಿಯಾಗಿರುವುದು ಲೂಸೆರ್ನ್ ಎಂಬ ಸ್ಥಳ. ನಾವೇ ಹುಡುಕಿ ಹೊರಟರೆ ಹಣ-ಕಾಲ ಎರಡೂ ಹೆಚ್ಚು ವ್ಯಯವಾಗುವುದೆಂದು `ಬೆಸ್ಟ್ ಆಫ್ ಸ್ವಿಟ್ಜರ್‌ಲ್ಯಾಂಡ್ ಟೂರ್’ನವರು ಏರ್ಪಡಿಸುವ ಒಂದು ದಿನದ ಪ್ಯಾಕೇಜಿನಲ್ಲಿ ನಮ್ಮ ಹೆಸರನ್ನು ನೋಂದಾಯಿಸಿಕೊಂಡೆವು. ಹೋಟೆಲಿನಲ್ಲಿ ಸಿಕ್ಕ ತಿಂಡಿಯನ್ನು ತಿಂದು ಅಣಿಯಾದೆವು. ಇಲ್ಲಿ ಎಲ್ಲಾ ಸಸ್ಯಾಹಾರಿಗಳಿಗೂ ಹೇಳಲೇಬೇಕಾದ ಒಂದು ವಿಷಯವಿದೆ. ಊಟ ಕಷ್ಟ. ಮದ್ಯ-ಮಾಂಸಾಹಾರ ಸೇವಿಸುವವರಿಗೆ ಎಲ್ಲೆಡೆಯೂ ಸ್ವಾಗತ. ನಮ್ಮಂತೆ ಕಠಿಣ-ಕಡ್ಡಾಯ ಸಸ್ಯಾಹಾರಿಗಳಾದರೆ ಮಾತ್ರ ಸಿಕ್ಕಿದ್ದು ತಿನ್ನಲು (ಬೇಯಿಸಿದ ಆಲೂಗಡ್ಡೆ, ಹುರುಳಿಕಾಯಿ, ಟೊಮ್ಯಾಟೊ, ಈರುಳ್ಳಿ ಇತ್ಯಾದಿ) ಅಣಿಯಾಗಿರಬೇಕು.

Untitled design (2)

ಬೆಳಗಿನ 9.30ಕ್ಕೆ ಜ್ಯೂರಿಚ್ ನಗರವನ್ನು ಬಿಟ್ಟು ಲೂಸೆರ್ನಿನತ್ತ ಮುಖ ಮಾಡಿದೆವು. ನಿನ್ನೆಯೆಲ್ಲಾ ಸೌಮ್ಯ ಬಾಲಕಿಯಂತೆ ಮುದ್ದಾಗಿದ್ದ ವಾತಾರವಣ, ಇಂದು ಅಚಾನಕ್ಕಾಗಿ ಬಂಗಾಲಿ ಕಾಳಿಯಂತಾಗಿದ್ದಳು! ಬಸ್ಸಿನ ಪ್ರಯಾಣದುದ್ದಕ್ಕೂ ಹಿಮ, ರಾಶಿ ರಾಶಿಯಾಗಿ ಬೀಳುತ್ತಲೇ ಇತ್ತು. ರಸ್ತೆಯಲ್ಲಿ ಹಿಮವನ್ನು ತೆಗೆದು ಪ್ರಯಾಣಿಸಲು ಜಾಗಮಾಡಿಕೊಡುವ ವಾಹನಗಳು ಅಲ್ಲಲ್ಲಿ ಕಂಡವು.

ಇದನ್ನೂ ಓದಿ: ಕಾಗನೇರ್ ಬೊಂಬೆಯ ಸೃಷ್ಟಿಯ ಹಿಂದಿನ ರಹಸ್ಯ!

ನಾವು ಲೂಸೆರ್ನ್ ತಲುಪಿದ ಕೆಲವೇ ಕ್ಷಣಗಳಲ್ಲಿ ಪ್ರಕೃತಿಮಾತೆ ಸೌಮ್ಯವಾದಳು. ಲೂಸೆರ್ನನ್ನು ಪ್ರವಾಸಿಗರ ಪ್ರಮುಖ ಆಕರ್ಷಣಾ ಕೇಂದ್ರವೆಂದು ಏಕೆ ಕರೆಯುತ್ತಾರೆಂದು ನನಗಾಗ ತಿಳಿಯಿತು. ಅದು ಅಷ್ಟೊಂದು ಸುಂದರವಾಗಿರಲು ಪ್ರಮುಖ ಕಾರಣ ಮೌಂಟ್ ರಿಗಿ ಮತ್ತು ಮೌಂಟ್ ಪಿಲಾಟಸ್ಸುಗಳ ನಡುವೆ ಹರಿಯುವ ಲೇಕ್. ಲೂಸೆರ್ನ್ (ವಿಯರ್ವಾಲ್ಡ್ ಸ್ಟಾಟೆರ್ಸ್) ಆಸುಪಾಸಿನಲ್ಲಿ ಸುಂದರ ಮನೆಗಳು, ಹಾವಿನಂತೆ ಹರಿದು ಹೋಗಿರುವ ರಸ್ತೆ, ಬೆಟ್ಟವನ್ನು ಮುಟ್ಟಿರುವ ಹಿಮದ ರಾಶಿ. ಹಳೆಯ ಕನ್ನಡ ಚಲನಚಿತ್ರಗಳಲ್ಲಿ ಕಂಡಿದ್ದ, ಶಿವನ ಕೈಲಾಸ ಪರ್ವತ ನೆನಪಿಗೆ ಬಂತು. ಅಲ್ಲದೆ, ಚಿರಯೌವ್ವನೆ ಲೂಸೆರ್ನಳ ಮಡಿಲಲ್ಲಿ ಹುಚ್ಚರಾಗಿದ್ದ ನಾವು ಏನನ್ನೂ ಯೋಚಿಸದೆ, ಯಾವ ಬೇರೆ ವಿಚಾರಗಳೂ ತಲೆಗೆ ತಾಕದ ಭ್ರಾಮಕ ಸ್ಥಿತಿಯಲ್ಲಿದ್ದೆವು.

ಲೂಸೆರ್ನ್ - ಲೂಸೆರ್ನ್ ರಾಜ್ಯದ ರಾಜಧಾನಿ. ರಾಜ್ಯ ಹಾಗೂ ರಾಜಧಾನಿಯ ಎರಡೂ ಹೆಸರು ಒಂದೇ. ಇಲ್ಲಿನ ಜನಸಂಖ್ಯೆ 57,890. ಈ ನಗರದಲ್ಲಿ ಅತ್ಯಂತ ಪ್ರಮುಖ ಆಕರ್ಷಣೆಗಳೆಂದರೆ ಚಾಪೆಲ್ ಬ್ರಿಜ್‌. ಹದಿನಾಲ್ಕನೆಯ ಶತಮಾನದಲ್ಲಿ ನಿರ್ಮಿಸಿದ ಮರದಲ್ಲಿ ತಯಾರಾದ ಸೇತುವೆ ಹಾಗೂ ಅದಕ್ಕೆ ಹೊಂದಿಕೊಂಡೇ ಇರುವ ನೀರನ್ನು ಶೇಖರಿಸುವ ದೊಡ್ಡ ಕಟ್ಟಡ. ಎರಡನೆಯದಾಗಿ ಲಯನ್ ಮಾನ್ಯುಮೆಂಟ್ ಹಾಗೂ ಮಂಗಳವಾರ, ಶನಿವಾರ ನಡೆಯುವ ಸಂತೆ ಮತ್ತು ಟ್ರಾನ್ಸ್‌ಪೋರ್ಟ್ ಮ್ಯೂಸಿಯಂ.

Untitled design (3)

ಬಹುಶಃ ಸ್ವಿಟ್ಜರ್‌ಲ್ಯಾಂಡ್‌ನ ಅತ್ಯಂತ ಹಳೆಯ, ಮರದಿಂದ ತಯಾರಾದ ಬ್ರಿಜ್‌ ಇದು. ಚರಿತ್ರೆಯ ಪ್ರಕಾರ 1367ರಲ್ಲಿ ಇದ್ದುದಕ್ಕೆ ದಾಖಲೆಯಿದೆ. ವಿಶೇಷವೆಂದರೆ ಕೆಲವೇ ಕೆಲವು ಬ್ರಿಜ್‌ಗಳು ಮೇಲ್ಚಾವಣಿಯಲ್ಲಿ ಚಿತ್ರಗಳನ್ನು ಹೊಂದಿವೆ. ಚಾಪೆಲ್ ಬ್ರಿಜ್‌ ಅವುಗಳಲ್ಲೊಂದು. ಚಾಪೆಲ್ ಬ್ರಿಜ್‌ ಹಾಗೂ ವಾಟರ್ ಟ್ಯಾಂಕ್ ಪುರಾತನ ಲೂಸೆರ್ನ್ ನಗರದ ಪಳೆಯುಳಿಕೆಗಳಾಗಿ ಇಂದಿಗೂ ಜಗತ್ತಿಗೆ ಸೋಜಿಗವಾಗಿ ನಿಂತಿವೆ. ಲೂಸೆರ್ನಿನ ಜೀವ ನದಿ ರೂಸಿನ ನೀರನ್ನು ಹಿಡಿದಿಡಲು ಈ ವಾಟರ್ ಟ್ಯಾಂಕನ್ನು ಉಪಯೋಗಿಸುತ್ತಿದ್ದರಂತೆ. 19ನೆಯ ಶತಮಾನದಿಂದೀಚೆಗೆ ಲೂಸೆರ್ನಿನ ಹಳೆಯ ಸಂಘವೊಂದು ಅದನ್ನು ಕ್ಲಬ್ ರೂಮಾಗಿ ಪರಿವರ್ತಿಸಿ ಉಪಯೋಗಿಸಿಕೊಳ್ಳುತ್ತಿದೆ. ಹಾಗಾಗಿ, ಸಾರ್ವಜನಿಕರಿಗೆ ಅದರ ಒಳಗೆ ಪ್ರವೇಶವಿಲ್ಲ, ಹೊರಗಿನಿಂದಲೇ ಅದರ ಸವಿಯನ್ನು ಕಣ್ಣು ತುಂಬಿಕೊಂಡೆವು. ರಸ್ತೆಯ ಒಂದು ಬದಿಯಿಂದ ಮತ್ತೊಂದು ತುದಿಗೆ ಹೋಗಲು ಲೇಕ್ ಲೂಸೆರ್ನಿನ ಮೇಲೆ ಗಂಭೀರವಾಗಿ ನಿಂತಿರುವ ಚಾಪೆಲ್ ಬ್ರಿಜ್ಜನ್ನು ಬಳಸಿಕೊಂಡು ಹೋಗಬಹುದು. ಲೂಸೆರ್ನಿನ ಅತ್ಯಂತ ಹಳೆಯ ಚರ್ಚ್ ಬೆನೆಡಿಕ್ಟಿನ್ ಮಾನೆಸ್ಟ್ರಿಯೊಂದಿಗೆ ಬೆಸೆದುಕೊಂಡಿದೆ. ಚಾಪೆಲ್ ಬ್ರಿಜ್ಜಿನ ಒಂದು ತುದಿ ನೇರವಾಗಿ ಈ ಚರ್ಚಿಗೆ ಕರೆದೊಯ್ಯುತ್ತದೆ.

ಹದಿನಾಲ್ಕನೆಯ ಶತಮಾನದಲ್ಲಿ ನಿರ್ಮಿತವಾದ ಬ್ರಿಜ್‌ ಮೇಲೆ ನಿಂತಿದ್ದೇವೆಂದು ಹೆಮ್ಮೆಯಿಂದ ಒಂದು ತುದಿಯಿಂದ ಮತ್ತೊಂದು ತುದಿಯವರೆಗೂ ಓಡಾಡಿದೆವು. ರಮ್ಯ ಹದಿನಾರಾಣೆ ಸಂಶೋಧಕರ ಮನೆಯಲ್ಲಿ ಹುಟ್ಟಿದವಳು. `ಈ ಮರದ ತುಂಡು ನೋಡಿದರೆ ಹದಿನಾಲ್ಕನೆಯ ಶತಮಾನದ್ದು ಅನ್ನಿಸುವುದಿಲ್ಲ’ ಅಂತ ರಾಗ ತೆಗೆದಳು. ಅವಳ ಮಾತಿನಲ್ಲಿ ಸತ್ಯವಿತ್ತು. ನಮ್ಮ ಜತೆಯ ಗೈಡನ್ನು ಪ್ರಶ್ನಿಸಲು ಆಕೆ 1993ರಲ್ಲಿ ಚಾಪೆಲ್ ಬ್ರಿಜ್‌ ಬೆಂಕಿಯಿಂದ ಸುಟ್ಟುಹೋದ ವಿಷಯ ತಿಳಿಯಿತು. 18ನೆಯ ಆಗಸ್ಟ್, 1993ರ ಮಧ್ಯರಾತ್ರಿಯ ವೇಳೆಗೆ ಚಾಪೆಲ್ ಬ್ರಿಜ್ಜಿಗೆ ಬೆಂಕಿ ಬಿತ್ತು. ಸುಮಾರು ಮೂರನೇ ಎರಡು ಭಾಗ ಸುಟ್ಟುಹೋಯಿತು. ಬ್ರಿಜ್‌ನ ಮೇಲ್ಚಾವಣಿ, ಆಧಾರಸ್ತಂಭಗಳು ಹಾಗೂ ವಾಟರ್‌ ಟ್ಯಾಂಕನ್ನು ಮಾತ್ರ ಬೆಂಕಿಯಿಂದ ಉಳಿಸಲಾಯಿತು. ಉಳಿದೆಲ್ಲವೂ ಹಸಿದ ಅಗ್ನಿಯ ಹೊಟ್ಟೆಗೆ ಆಹಾರವಾಗಿದ್ದವು. ಕೇವಲ ಒಂದೇ ವರ್ಷದಲ್ಲಿ ಅದೇ ಮಾದರಿಯಲ್ಲಿ ಸೇತುವೆ ಸಿದ್ಧವಾಯಿತು. ಆ ಕೊರೆವ ಚಳಿಯಲ್ಲಿ ಬೆಂಕಿ ಬಿದ್ದದ್ದಾದರೂ ಹೇಗೆ? ಯಾರೋ ಪುಣ್ಯಾತ್ಮ ಸಿಗರೇಟು ತುಂಡು ಬಿಸುಟಿದ್ದನಂತೆ.

ಬ್ರಿಜ್ಜಿನಲ್ಲಿ ಇದ್ದ 110 ಚಿತ್ರಗಳಲ್ಲಿ, 85 ಸುಟ್ಟು, ಇತಿಹಾಸವಾದವು, ಉಳಿದದ್ದು 25 ಮಾತ್ರ. 1611ರ ಆಸುಪಾಸಿನ ಚಿತ್ರಗಳವು. ಇವುಗಳನ್ನು ಜತನದಿಂದ ಕಾಪಾಡಿ, ಕಾರ್ನಿವಲ್ ಸಮಯದಲ್ಲಿ ಪ್ರದರ್ಶಿಸುತ್ತಾರೆ. ಕೆಲವು ಸುಟ್ಟ ಚಿತ್ರಗಳನ್ನು ಕೂಡ ಪ್ರದರ್ಶಿಸುತ್ತಾರಂತೆ. ಹೀಗೆ ಬೆಂಕಿ ಬಿದ್ದವನ್ನು ನೆನಪಿಸಲು, ಇತ್ತೀಚಿನ ದಿನಗಳಲ್ಲಿ ಹಳೆಯ ಚಿತ್ರಗಳ ಜಾಗವನ್ನು ಹೊಸ ಚಿತ್ರಗಳು ಆಕ್ರಮಿಸುತ್ತಿವೆ. ಚಾಪೆಲ್ ಬ್ರಿಜ್‌ನ ದುರಂತ ಕಥೆಯನ್ನು ಕೇಳುತ್ತಾ ಹೊರಟು ತಲಪಿದ್ದು ಸಿಟಿಯ ಮಧ್ಯಭಾಗದಲ್ಲಿದ್ದ ಲಯನ್ ಮಾನ್ಯುಮೆಂಟಿಗೆ. ವಿಶಾಲವಾದ ಜಾಗದಲ್ಲಿ ಪುಟ್ಟ ಗುಡ್ಡದಂಥ ಗೋಡೆಯ ಮೇಲೆ ಸಿಂಹ ರೋಧಿಸುತ್ತಾ ಅಥವಾ ದುಃಖತಪ್ತವಾಗಿ ಮಲಗಿರುವ ಚಿತ್ರವನ್ನು ಕೆತ್ತಲಾಗಿದೆ. 1800ರ ಸುಮಾರಿಗೆ ಡ್ಯಾನಿಷ್ ಕಲೆಗಾರ/ಶಿಲ್ಪಿ ಬೆರೆಲ್ ತೊರ್ವಲ್ಡಸೆನ್ನನನ್ನು ಈ ಶಿಲ್ಪವನ್ನು ಕೆತ್ತಲು ನೇಮಿಸಲಾಯಿತು. ಮರಳುಗಲ್ಲಿನಲ್ಲಿ ಕೆತ್ತಲಾಗಿರುವ ಈ ಸಿಂಹದ ಚಿತ್ರವು 1821ರಲ್ಲಿ ಜಗತ್ತಿಗೆ ಅರ್ಪಿಸಲ್ಪಟ್ಟಿತು. ಅಲ್ಲಿಂದೀಚೆಗೆ ಈ ಜಾಗವನ್ನು ನೋಡಲು ಬಂದ ಪ್ರವಾಸಿಗರ ಸಂಖ್ಯೆಯನ್ನು `ನಿಖರವಾಗಿ ಲೆಕ್ಕವಿಡದಷ್ಟು’ ಎಂದು ಹೇಳಿ ಸ್ವಿಸ್ ಟೂರಿಸಂ ಕೈತೊಳೆದುಕೊಂಡಿದೆ.

Untitled design (5)

ಇಂಥ ಪ್ರಸಿದ್ಧ ತಾಣದ ನಿರ್ಮಾಣದ ಹಿಂದಿರುವ ಕಥೆಯೂ ಸ್ವಾರಸ್ಯಕರ. ಹಿಂದೆ ಸ್ವಿಸ್ಸಿನ ಸೈನಿಕರನ್ನು ಇತರೇ ದೇಶಗಳಿಗೆ ರಾಜ್ಯವಂಶಸ್ಥರ, ಮುಖ್ಯಸ್ಥರ ರಕ್ಷಣೆಗಾಗಿ ಕಳಿಸುವ ಪರಿಪಾಠವಿತ್ತಂತೆ. ಏಕೆಂದರೆ, ಏನೇ ಬರಲಿ, ತಮ್ಮ ಸ್ವಾಮಿಯ ಪ್ರಾಣ ರಕ್ಷಿಸುವುದಲ್ಲದೆ ಮತ್ತಾವ ಯೋಚನೆಯೂ ಇವರಿಗೆ ಬರುತ್ತಿರಲಿಲ್ಲವಂತೆ. ಹೀಗೆ ತಮ್ಮ ಸ್ವಾಮಿ ನಿಷ್ಠೆ, ಧೈರ್ಯ, ಸಾಹಸಗಳಿಗೆ ಹೆಸರಾದ ಸ್ವಿಸ್ ಸೈನಿಕ/ಅಂಗರಕ್ಷಕರಿಗೆ ಸತ್ವಪರೀಕ್ಷೆಯ ವರ್ಷ 1792. ಪಾಪ, ಅಂಗರಕ್ಷರಿಗೆ ಅದು ಗೊತ್ತೇ ಇರಲಿಲ್ಲ. ಕಿಂಗ್ ಲೂಯಿಸ್ ಘಿಗಿ I, ಮೇರಿ ಅಂಟಾಯಿನೆಸ್ ಮತ್ತು ಅವರ ಮಕ್ಕಳು ಫ್ರೆಂಚರ ಕ್ರಾಂತಿಯಿಂದ ಹೆದರಿ `ಟ್ಯುಲೆನ್ಸ್’ ಎಂಬ ಪ್ಯಾರಿಸ್ಸಿನ ಬಳಿಯ ಜಾಗಕ್ಕೆ ಓಡಿಹೋದರು. ಆಗ, ಬಡ ಕೂಲಿಕಾರ್ಮಿಕರ, ಪರ್ಷಿಯನ್ನರ ಒಂದು ಗುಂಪು ಅರಮನೆಯ ಮೇಲೆ ದಾಳಿಮಾಡಿತು. ರಾಜವಂಶಸ್ಥರ ರಕ್ತದ ಜಾಡು ಹಿಡಿದು, ಸರಿಸುಮಾರು 700 ಜನ ಸ್ವಿಸ್ ಸೈನಿಕರು ಅರಮನೆಯನ್ನು ರಕ್ಷಿಸಲು ಹೋರಾಡಿ ಸತ್ತರು. ಈ ಮಧ್ಯೆ ರಾಜವಂಶದ ಮುಖ್ಯ ಕೆಲಸಗಾರರೆಲ್ಲ ಅರಮನೆ ಬಿಟ್ಟು ಓಡಿಹೋಗಿದ್ದರು. ಇದರ ಅರಿವೇ ಇರದ ಸ್ವಿಸ್ ಸೈನಿಕರು ಮಾತ್ರ ನಿಷ್ಠೆಯಿಂದ ಹೋರಾಡಿ ಪ್ರಾಣತೆತ್ತಿದ್ದರು. ಸತ್ತ ಸೈನಿಕರ ನೆನಪಿಗಾಗಿ ನಿರ್ಮಿಸಲ್ಪಟ್ಟಿದೆ ಈ ಲಯನ್ ಮಾನ್ಯುಮೆಂಟ್. ಎಲ್ಲವೂ ಸರಿಯೇ! ಆದರೆ ದುಃಖಭರಿತ ಸಿಂಹದ ಚಿತ್ರವೇಕೆ? ಹೋರಾಡಿ ತಮ್ಮ ದೇಶದ ಗರಿಮೆಯನ್ನು ಎತ್ತಿ ಹಿಡಿದ ವೀರರ ಸಾವಿನ ನೆನಪಿಗಾಗಿ ಅಳುವ ಸಿಂಹವೇ?

ನಾನು ಚಿಕ್ಕವನಿದ್ದಾಗ ಭಾನುವಾರಕ್ಕಾಗಿ ಕಾಯುತ್ತಿದ್ದೆ. ರಾಮ, ಕಾಂತರೊಂದಿಗೆ ಹೊಡೆದಾಡಿ, ಅಪ್ಪನೊಂದಿಗೆ ಸೈಕಲ್ ಏರಿ ಯಶವಂತಪುರದ ಸಂತೆಗೆ ಹೋಗುವುದಕ್ಕೆ. ತಿಂಗಳಲ್ಲಿ ಮೂರು ಬಾರಿ ಸಿಗುತ್ತಿತ್ತು ಸೈಕಲ್ ಸವಾರಿ. ಇಂದು ಸ್ವಿಟ್ಜರ್‌ಲ್ಯಾಂಡ್‌ನ ಲೂಸೆರ್ನ್ ಎಂಬ ಪುಟ್ಟ ರಾಜ್ಯದ ರಾಜಧಾನಿಯಲ್ಲಿ ಸಂತೆ! ನಡೆದಾಡಿದೆವು, ನಕ್ಕೆವು, ಪುಕ್ಕಟೆಯಾಗಿ ಚೀಸಿನ ರುಚಿ ನೋಡಲು ನೀಡುತ್ತಿದ್ದ ಮಹಿಳೆಯಿಂದ ಒಂದು ತುಂಡು ಪಡೆದು ತಿಂದೆವು. ಜೇನುತುಪ್ಪ, ಚೀಸ್, ಹಲವು ಹತ್ತು ತರಕಾರಿಗಳು ಸಂತೆಯಲ್ಲಿ ಪ್ರದರ್ಶನಕ್ಕಿದ್ದವು. ಜನರಲ್ಲಿ ಒಂದು ರೀತಿಯ ಸಡಗರ ಕಂಡುಬಂತು.

ಇದನ್ನೂ ಓದಿ: ಈಜಿಪ್ಟಿಗೆ ಹೋಗುವ ಮುನ್ನ ಒಂದಷ್ಟು ತಯಾರಿ ಬೇಕು!

ಶರತ್ಕಾಲ ಬಂತೆಂದರೆ ಚೀಸ್‍ನಟ್ಸ್ ಹಾಗೂ ಅಣಬೆಯಾಕಾರದಲ್ಲಿ ಮಾರುಕಟ್ಟೆಯಲ್ಲಿ ಚಾಕೊಲೆಟ್‌ಗಳು ಲಭ್ಯ. ಚಳಿಗಾಲ, ಕ್ರಿಸ್‍ಮಸ್ ಸಮಯದಲ್ಲಿ ತರಹೇವಾರಿ, ಬಣ್ಣಬಣ್ಣದ ಬ್ಯಾಗ್ ತುಂಬ ಚಾಕೊಲೆಟ್ ತುಂಬಿ ಕೊಡುಗೆ ನೀಡುವುದು ಇಲ್ಲಿ ಅತಿ ಸಾಮಾನ್ಯ. ಹೀಗೆ ಕೇವಲ ಋತುಗಳಿಗೆ ತಕ್ಕಂತೆ ಚಾಕೊಲೆಟ್‌ ರೂಪಾಂತರ ಹೊಂದುವುದು ಮಾತ್ರವೇ ಅಲ್ಲ, ಪ್ರದೇಶದಿಂದ ಪ್ರದೇಶಕ್ಕೆ ರೂಪ, ವಿಧ ಹಾಗೂ ವಿಧಾನ ಬದಲಾಗುತ್ತಾ ಹೋಗುತ್ತದೆ. ಉದಾಹರಣೆಗೆ: ಜುರ ಬೆಟ್ಟದ ಆಸುಪಾಸಿನ ಜನ ಸಣ್ಣ ಸಣ್ಣ ಚಾಕೊಲೆಟ್‌ ಮತ್ತು ವಾಚುಗಳನ್ನು ತಯಾರಿಸಿದರೆ, ಸ್ವಿಸ್ಸಿನ ರಾಜಧಾನಿ ಬೆರ್ನಿನಲ್ಲಿ ಚಾಕೊಲೆಟ್‌ ಬಿಯರ್ ತಯಾರಿಸುತ್ತಾರೆ! ಸ್ವಿಸ್ಸಿಗೆ ಭೇಟಿ ಕೊಡುವ ಪ್ರತಿಯೊಬ್ಬ ಪ್ರವಾಸಿಗನಿಗೂ ಬೆಸೆಯುತ್ತದೆ ಚಾಕೊಲೆಟ್‌ನ ನಂಟು. ತಾನು ತಿಂದು, ತಮ್ಮವರಿಗಾಗಿ ಒಂದೋ, ಎರಡೋ ಪ್ಯಾಕ್ ಚಾಕೊಲೆಟ್‌ ಕೊಳ್ಳುವುದು ಅಲಿಖಿತ ನಿಯಮ