ಈಜಿಪ್ಟಿಗೆ ಹೋಗುವ ಮುನ್ನ ಒಂದಷ್ಟು ತಯಾರಿ ಬೇಕು!
ಎಲ್ಲಾ ದೇಶಗಳಲ್ಲೂ ಈ ಏರ್ ಬಿ ಎನ್ ಬಿ ಒಂದೇ ರೀತಿ ಇರುವುದಿಲ್ಲ. ನಾವು ಯಾವ ದೇಶಕ್ಕೆ ಹೋಗುತ್ತಿದ್ದೇವೆ, ಅಲ್ಲಿನ ದೇಶದ ಜನರ ಮೆಂಟಾಲಿಟಿ ಬಗ್ಗೆ ಒಂದಷ್ಟು ತಿಳಿದುಕೊಂಡು, ಆನ್ ಲೈನ್ ರಿವ್ಯೂ ಓದಿಕೊಂಡು ಬುಕ್ ಮಾಡುವುದು ಒಳ್ಳೆಯದು. ಇದೇ ಅಂಶವನ್ನು ನಾವು ಕಾರ್ ರೆಂಟಲ್ ವಿಷಯದಲ್ಲಿ ಹೇಳುವಂತಿಲ್ಲ. ಈ ವಲಯದ ಜನ ಬಹಳ ವೃತ್ತಿಪರರು. ಇಲ್ಲಿನ ಕಾರು ಪೂರ್ಣವಾಗಿ ನಾವು ಬಾಡಿಗೆ ಪಡೆದಷ್ಟು ದಿನಕ್ಕೆ ವಿಮೆ ಮಾಡಿಸಿರುತ್ತಾರೆ. ಹೀಗಾಗಿ ನಾವು ವಾಪಸ್ ಕೊಡುವಾಗ ಕಾರಿಗೆ ಏನಾದರೂ ಡೆಂಟ್ ಅಥವಾ ಜಖಂ ಆಗಿದ್ದರೂ ಅವರು ಕಿರಿಕಿರಿ ಮಾಡುವುದಿಲ್ಲ.
- ರಂಗಸ್ವಾಮಿ ಮೂಕನಹಳ್ಳಿ
ನಿತ್ಯದ ಮಾತುಕತೆಯಲ್ಲಿ ಈಜಿಪ್ಟಿಗೆ ಹೋಗೋಣವೇ? ಎನ್ನುವ ಪ್ರಶ್ನೆಯೊಂದಿಗೆ ಈಜಿಪ್ಟ್ ಪ್ರವಾಸ ಶುರುವಾದದ್ದು, ಮುಗಿದು ಹೋಗುತ್ತದೆ ಎಂದರೆ ಹೇಗಾಗಿರಬೇಡ? ಈ ಜಗತ್ತಿನಲ್ಲಿ ಶುರುವಾದ ಎಲ್ಲಕ್ಕೂ ಅಂತ್ಯ ಎನ್ನುವುದು ಇದ್ದೇ ಇರುತ್ತದೆ. ನಮಗಿಷ್ಟವಿರಲಿ, ಬಿಡಲಿ ಅದು ಮುಕ್ತಾಯದ ಹಂತಕ್ಕೆ ಬಂದುಬಿಡುತ್ತದೆ. ಸಹೋದರ ನಾಗೇಂದ್ರ ಒಬ್ಬ ಉತ್ತಮ ಸಹಪಯಣಿಗ. ಬಹಳ ಜನ solo ಟ್ರಿಪ್ ಬಗ್ಗೆ ಹೇಳುತ್ತಾರೆ. ಆದರೆ ನನಗೆ ಒಂಟಿ ಪ್ರಯಾಣ ರುಚಿಸುವುದಿಲ್ಲ. ಜತೆಗೊಬ್ಬರು ಅಥವಾ ನಾಲ್ಕು ಜನರ ಗುಂಪು ಪ್ರಯಾಣ ನನಗೆ ಬಹಳ ಇಷ್ಟ. ಪ್ರವಾಸ ಮಾಡುವವರ ಮನಸ್ಥಿತಿ ಬೇರೆಯದಿರಬೇಕು ಎಂದು ನನ್ನ ಭಾವನೆ. ನಾವು ಅನುಭವಗಳನ್ನು ಕಟ್ಟಿಕೊಂಡು ಬರಲು, ಹೊಸತನ್ನು ಕಾಣಲು ಹೊರಟಿರುತ್ತೇವೆ. ಈ ಸಮಯದಲ್ಲಿ ಅತ್ಯಂತ ದೊಡ್ಡ ವಿಷಯಕ್ಕೂ ಕಿರಿಕಿರಿ ಆಗದಂತೆ ನಮ್ಮ ಮನಸನ್ನು ನಾವು ಸಿದ್ಧಪಡಿಸಿಕೊಂಡು ಹೋಗಬೇಕು ಎನ್ನುವುದು ಅನುಭವ ಕಲಿಸಿರುವ ಪಾಠ. ಸಹೋದರ ನಾಗೇಂದ್ರನ ಜತೆಗೆ ಇದು ನನ್ನ ಚೊಚ್ಚಲ ಪ್ರವಾಸ. ಯಾವುದೇ ಸನ್ನಿವೇಶ ಬಂದರೂ ಅಡ್ಜಸ್ಟ್ ಮಾಡಿಕೊಳ್ಳಬೇಕು ಎನ್ನುವ ಮನೋಭಾವದೊಂದಿಗೆ ನಾನು ಹೊರಟಿದ್ದೆ. ಆಶ್ಚರ್ಯ ಎನ್ನುವಂತೆ ನಾಗೇಂದ್ರ ಕೂಡ ಅದೇ ಮನಸ್ಥಿತಿಯಲ್ಲಿ ಬಂದಿದ್ದರು. ಪ್ರವಾಸದ ಅಷ್ಟೂ ದಿನವೂ ಯಾವುದಕ್ಕೂ ನೆಗೆಟಿವ್ ಹೇಳದೆ 'ಯೆಸ್' ಅನ್ನಬೇಕು ಎನ್ನುವ ನಿರ್ಧಾರದೊಂದಿಗೆ ಬಂದಿದ್ದೆ ಎಂದು ಅವರೇ ಆ ನಂತರ ಹೇಳಿದರು.
ಇದನ್ನೂ ಓದಿ: ಕಣಿವೆ ರಾಜರ ಸಮಾಧಿಯ ಕಲ್ಲುಗಳು ಹೇಳುವ ಇತಿಹಾಸದ ಕಥೆಗಳು
ಜತೆ ಪ್ರಯಾಣದಲ್ಲಿ ನಾವು ನಮ್ಮ ಸಹಪಯಣಿಗರ ಬೇಕುಬೇಡಗಳನ್ನು ಕೂಡ ಅರಿತುಕೊಳ್ಳಬೇಕು. ಕೆಲವು ಕೆಲಸಗಳನ್ನು ನಾವು ಅತ್ಯುತ್ತಮವಾಗಿ ಮಾಡಬಲ್ಲೆವು ಎನ್ನುವುದನ್ನು ತಿಳಿಸಿ ಹೇಳಿ ಅದನ್ನು ನಾವು ಮಾಡಬೇಕು. ಅವರಲ್ಲಿ ಯಾವ ವಿಶೇಷತೆಯಿದೆಯೋ ಅದನ್ನು ಅವರಿಗೆ ಮಾಡಲು ಬಿಟ್ಟುಬಿಡಬೇಕು. ಎಲ್ಲಕ್ಕೂ ಮುಖ್ಯ ಇಗೋ ಎನ್ನುವ ಘಾತಕ ಅಂಶವನ್ನು ಮೂಟೆ ಕಟ್ಟಿ ಒಂದೆಡೆ ಇಟ್ಟು ಬರಬೇಕು. ಸಹಜವಾಗಿ, ಸರಳವಾಗಿ ಎಲ್ಲರೊಂದಿಗೆ ಬೆರೆಯಬೇಕು. ನಾಗೇಂದ್ರನಿಗೆ ಬೆಳಗಿನ ಟೀ ಅತ್ಯಂತ ಮುಖ್ಯ. ಅದು ಅವರ ಪಾಲಿನ ಜೀವದ್ರವ್ಯ. ನನ್ನ ಲೈಫ್ ಪಾರ್ಟ್ನರ್ ರಮ್ಯಳಿಗೂ ಟೀ ಅಂದ್ರ ಪಂಚಪ್ರಾಣ. ಕೇವಲ ಪ್ರವಾಸ ಎಂದಲ್ಲ, ನಿತ್ಯದ ಬದುಕಿನಲ್ಲೂ, ಪ್ರತಿದಿನವೂ ಅವಳಿಗೆ ಟೀ ಮಾಡಿಕೊಡುವುದು ನಾನೇ! ಹೀಗಾಗಿ ನಮ್ಮ ಪ್ರವಾಸದ ದಿನಗಳಲ್ಲಿ ಟೀ ಮಾಡಿ ನಾಗೇಂದ್ರ ಅವರ ಕೈಗಿಡುತ್ತಿದ್ದೆ. ಅವರು ಅದನ್ನು ಆಸ್ವಾದಿಸಿ ಕುಡಿಯುತ್ತಿದ್ದರು. ಬೆಳಗ್ಗೆ ಮನೆ ಬಿಡುವ ಮುನ್ನ ಎರಡು ಅಥವಾ ಮೂರು ಕಪ್ ಟೀ ಕುಡಿದಿರುತ್ತಿದ್ದೆವು.

ಈಜಿಪ್ಟಿನ ಎಲ್ಲ ನಗರಗಳಲ್ಲೂ ನಾವು ಏರ್ ಬಿ ಎನ್ ಬಿ ಮೂಲಕ ಮನೆಯನ್ನು ಕಾಯ್ದಿರಿಸಿದ್ದೆವು. ಇವುಗಳಲ್ಲಿ 90 ಪ್ರತಿಶತ ಉತ್ತಮ ಅನುಭವ ನಮಗಾಯ್ತು. ಒಂದು ಕಡೆ ಮಾತ್ರ ನಾವು ಮೊದಲೇ, ಅಂದರೆ ವಾರ ಮುಂಚೆಯೇ ಬುಕ್ ಮಾಡಿ, ಅದನ್ನು ಆ ಮನೆಯವರು ಕನ್ಫರ್ಮ್ ಮಾಡಿ ಕೂಡ ಕೊನೆ ಘಳಿಗೆಯಲ್ಲಿ ಮನೆ ಇಲ್ಲ ಎಂದುಬಿಟ್ಟರು. ಅವತ್ತಿನ ದಿನ ಮತ್ತೊಂದು ಮನೆ ಹುಡುಕಿ, ದಿಂಬಿಗೆ ತಲೆ ಇಡುವಷ್ಟರಲ್ಲಿ ರಾತ್ರಿ ಹನ್ನೆರಡು ದಾಟಿತ್ತು. ಇದನ್ನು ಹೇಳುವ ಉದ್ದೇಶ ಸರಳ. ಎಲ್ಲಾ ದೇಶಗಳಲ್ಲೂ ಈ ಏರ್ ಬಿ ಎನ್ ಬಿ ಒಂದೇ ರೀತಿ ಇರುವುದಿಲ್ಲ. ನಾವು ಯಾವ ದೇಶಕ್ಕೆ ಹೋಗುತ್ತಿದ್ದೇವೆ, ಅಲ್ಲಿನ ದೇಶದ ಜನರ ಮೆಂಟಾಲಿಟಿ ಬಗ್ಗೆ ಒಂದಷ್ಟು ತಿಳಿದುಕೊಂಡು, ಆನ್ ಲೈನ್ ರಿವ್ಯೂ ಓದಿಕೊಂಡು ಬುಕ್ ಮಾಡುವುದು ಒಳ್ಳೆಯದು. ನಾವು ಈಜಿಪ್ಟ್ ತಲುಪುವ ಮುಂಚೆಯೇ ಒಂದೆರಡು ಕಡೆಗಳಲ್ಲಿ ನಮ್ಮ ಬುಕಿಂಗ್ ಕ್ಯಾನ್ಸಲ್ ಮಾಡಿಕೊಂಡಿದ್ದರು. ಹಣ ಆಗಲೇ ನಮ್ಮ ಖಾತೆಯಿಂದ ಹೋಗಿತ್ತು. ಹೊಸದಾಗಿ ಬುಕ್ ಮಾಡಿದಾಗ ಮತ್ತೆ ಹಣ ಹೋಯ್ತು. ಕ್ಯಾನ್ಸಲ್ ಆದ ಹಣ ನಮ್ಮ ಖಾತೆಗೆ ಮರಳಿ ಬರುವಷ್ಟರಲ್ಲಿ ವಾರ ಕಳೆದಿರುತ್ತದೆ. ಹೀಗಾಗಿ ಪರಿಶೀಲಿಸಿ ಬುಕ್ ಮಾಡುವುದು ಉತ್ತಮ ಮಾರ್ಗ. ಬಜೆಟ್ ಟ್ರಾವೆಲರ್ಸ್ ಇಷ್ಟು ಹಣ ಎಂದು ನಿಗದಿ ಮಾಡಿಕೊಂಡಿರುತ್ತಾರೆ. ಈ ರೀತಿ ಆದಾಗ ಹೊಸ ಹಣ ಬೇಕಾಗುತ್ತದೆ. ಮೊದಲೇ ಹೇಳಿದಂತೆ ನಿಮ್ಮ ಕ್ಯಾನ್ಸಲ್ ಆದ ಬುಕಿಂಗ್ ಹಣ ವಾಪಸ್ ಬರುತ್ತದೆ. ಆದರೆ ಅದು ಬರುವುದಕ್ಕೆ ಮುಂಚೆ ಖರ್ಚಿಗೆ ಹಣ ಇರಬೇಕಾಗುತ್ತದೆ. ಈಜಿಪ್ಟ್ ಈ ವಿಷಯದಲ್ಲಿ ಒಂದಷ್ಟು ಖತರ್ನಾಕ್ ಎಂದು ಹೇಳಬಹುದು. ನೀವು ಅಲ್ಲಿಗೆ ಹೋಗುವರಿದ್ದರೆ ಒಂದಷ್ಟು ಅಳೆದುತೂಗಿ ನಂತರ ಬುಕ್ ಮಾಡಿ. ಇದರರ್ಥ ಎಲ್ಲರೂ ಹೀಗೆ ಅಂದಲ್ಲ, ಆದರೆ ಬೇರೆ ದೇಶಗಳಿಗೆ ಹೋಲಿಸಿದರೆ ಇಲ್ಲಿ, ಈ ವಿಷಯದಲ್ಲಿ ವೃತ್ತಿಪರತೆ ಇಲ್ಲ ಎಂದು ಧಾರಾಳವಾಗಿ ಹೇಳಬಹುದು.
ಇದೇ ಅಂಶವನ್ನು ನಾವು ಕಾರ್ ರೆಂಟಲ್ ವಿಷಯದಲ್ಲಿ ಹೇಳುವಂತಿಲ್ಲ. ಈ ವಲಯದ ಜನ ಬಹಳ ವೃತ್ತಿಪರರು. ಇಲ್ಲಿನ ಕಾರು ಪೂರ್ಣವಾಗಿ ನಾವು ಬಾಡಿಗೆ ಪಡೆದಷ್ಟು ದಿನಕ್ಕೆ ವಿಮೆ ಮಾಡಿಸಿರುತ್ತಾರೆ. ಹೀಗಾಗಿ ನಾವು ವಾಪಸ್ ಕೊಡುವಾಗ ಕಾರಿಗೆ ಏನಾದರೂ ಡೆಂಟ್ ಅಥವಾ ಜಖಂ ಆಗಿದ್ದರೂ ಅವರು ಕಿರಿಕಿರಿ ಮಾಡುವುದಿಲ್ಲ. ಕಾರುಗಳು ಕೂಡ ಉತ್ತಮ ಕಂಡೀಷನ್ ಹೊಂದಿದ್ದವು. ಭಾರತದಿಂದ ಹೋಗುವವರು ಇಂಟರ್ ನ್ಯಾಷನಲ್ ಡ್ರೈವಿಂಗ್ ಲೈಸೆನ್ಸ್ ಹೊಂದಿರುವುದು ಕಡ್ಡಾಯ. ನೀವು ಅದ್ಭುತವಾಗಿ ಕಾರು ಓಡಿಸಲು ಬಲ್ಲವರಾಗಿದ್ದಾರೆ ಮಾತ್ರ ಕಾರನ್ನು ಬಾಡಿಗೆಗೆ ಪಡೆದು ಎಲ್ಲೆಡೆ ಓಡಾಡಿ. ಇಲ್ಲವೇ ಅಲ್ಲಿ ಡ್ರೈವರ್ ಸಮೇತ ಕಾರನ್ನು ಬಾಡಿಗೆಗೆ ಪಡೆಯಿರಿ. ಇದು ಸ್ವಲ್ಪ ಖರ್ಚಿನ ಬಾಬ್ತು. ಆದರೂ ಇದು ಬೆಸ್ಟ್. ಏಕೆಂದರೆ ಇಲ್ಲಿನ ಜನ ಭಾರತೀಯರಿಗಿಂತ ವಾಹನ ಚಾಲನೆಯಲ್ಲೂ ಖತರ್ನಾಕ್!

ಇನ್ನು ಈ ದೇಶಕ್ಕೆ ಬರುವವರು ಕನಿಷ್ಠ 12-15 ದಿನ ಪ್ರವಾಸಕ್ಕೆ ಎಂದು ಮೀಸಲಿಡುವುದು ಉತ್ತಮ. ನಾವು ಹತ್ತು ದಿನ ಇದ್ದೆವು. ನಾವು ನಮ್ಮ ಕಾರಿನಲ್ಲಿ ಎಲ್ಲೆಡೆ ಪ್ರಯಾಣಿಸಿದ ಕಾರಣ ಸಾಕಷ್ಟು ಸಮಯ ಉಳಿತಾಯವಾಯ್ತು. ಜತೆಗೆ ನಾವು ಶಾಪಿಂಗ್ ಎನ್ನುವ ಭೂತಪ್ಪನಿಗೆ ಶರಣಾಗದೇ ಇದ್ದ ಕಾರಣವೂ ನಮಗೆ ಬಹಳಷ್ಟು ಸಮಯ ಸಿಕ್ಕಿತು. ಆದರೂ 12 ದಿನ ಬೇಕಾಗಿತ್ತು ಎಂದು ನಮಗೆ ಅನಿಸಿತು.ಇಲ್ಲಿನ ರಸ್ತೆ ರಸ್ತೆಯೂ, ಗಲ್ಲಿ ಗಲ್ಲಿಯೂ ಹೇಳುವ ಕಥೆ ಕೇಳಲು ವರ್ಷವೂ ಸಾಲದು ಎನ್ನುವುದು ಬೇರೆಯ ಕಥೆ. ಈ ದೇಶಕ್ಕೆ ಬರಲು ಅಕ್ಟೋಬರ್ ನಿಂದ ಏಪ್ರಿಲ್ ವರೆಗೆ ಅತ್ಯುತ್ತಮ ಸಮಯ ಎನ್ನಬಹುದು. ಮಾರ್ಚ್ ಮತ್ತು ಏಪ್ರಿಲ್ ಅವಾಯ್ಡ್ ಮಾಡುವುದು ಉತ್ತಮ. ಏಕೆಂದರೆ ಆಗ ಹೆಚ್ಚು ಜನಸಂದಣಿ ಇರುತ್ತದೆ. ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಕೂಡ ಇಲ್ಲಿ ಹೆಚ್ಚಿನ ಬೆಲೆಯನ್ನು ವಿಧಿಸುತ್ತಾರೆ. ನಾವು ನವೆಂಬರ್ ತಿಂಗಳಲ್ಲಿ ಹೋಗಿದ್ದೆವು. ಇದು ನಾನ್ ಪೀಕ್ ಸೀಸನ್. ಹೀಗಾಗಿ ಎಲ್ಲೆಡೆ ನಮಗೆ ಉತ್ತಮ ಡೀಲ್ ದೊರೆತವು. ಹತ್ತು ದಿನದಲ್ಲಿ ನಮ್ಮಿಬ್ಬರಿಗೆ ಆದ ಖರ್ಚು ಮೂರು ಲಕ್ಷ ರುಪಾಯಿ ಮಾತ್ರ! ಇದರಲ್ಲಿ ವಿಮಾನ ಪ್ರಯಾಣದ ಖರ್ಚು ಕೂಡ ಸೇರಿದೆ. ನೆನಪಿರಲಿ ಖರ್ಚು ಎನ್ನುವುದು ಆಯಾ ವ್ಯಕ್ತಿಗಳ ಮೇಲೆ ಅವಲಂಬಿತ. ನಾವು ಅತ್ಯುತ್ತಮ ಐಷಾರಾಮಿ ಮನೆಗಳನ್ನು ಮಾಡಿದ್ದೆವು. ಬಹಳಷ್ಟು ಕಡೆ ಪಂಚತಾರಾ ಹೊಟೇಲುಗಳಲ್ಲಿ ಊಟ ಮಾಡಿದೆವು. ರಸ್ತೆ ಬದಿಯಲ್ಲೂ ತಿಂದೆವು. ನಮ್ಮಲ್ಲಿನ ದರ್ಶಿನಿ ದರ್ಜೆಯ ಹೊಟೇಲುಗಳಲ್ಲಿ ಕೂಡ ರುಚಿ ನೋಡಿದೆವು. ಹೀಗಾಗಿ ನಾವು ಖರ್ಚು ಮಾಡಿದ ಹಣದ ದುಪ್ಪಟ್ಟು ಕೂಡ ಖರ್ಚು ಮಾಡಬಹುದು. ಅದೇ ಸಮಯದಲ್ಲಿ ನಾವು ಖರ್ಚು ಮಾಡಿದ ಹಣಕ್ಕಿಂತ ಕಡಿಮೆ ಖರ್ಚಿನಲ್ಲೂ ಪ್ರವಾಸ ಮಾಡಬಹುದು.

ವಿಮಾನದಲ್ಲಿ ಸ್ಥಳ ಕಾಯ್ದಿರಿಸುವಾಗ ದೊಡ್ಡದಾದ, ಅಗಲವಾದ, ಕಾಲು ಆರಾಮಾಗಿ ಚಾಚಿ ಕೂರಬಹುದಾದ ಫ್ಲೆಕ್ಸಿ ಸೀಟುಗಳನ್ನು ಬುಕ್ ಮಾಡಿ. ಅದು ಸಾಮಾನ್ಯ ಎಕಾನಮಿ ಕ್ಲಾಸಿನ ಸೀಟಿಗಿಂತ 15-20 ಪ್ರತಿಶತ ಬೆಲೆ ಹೆಚ್ಚಿರುತ್ತದೆ. ಬ್ಯುಸಿನೆಸ್ ಕ್ಲಾಸ್ ಗಿಂತ ಬಹಳ ಕಡಿಮೆ! ನಾನೂ ನಾಗೇಂದ್ರ ಇಬ್ಬರೂ 'ಭಾರಿ ' ಆಸಾಮಿಗಳು, ಹೀಗಾಗಿ ನಾವು ಫ್ಲೆಕ್ಸಿ ಸೀಟುಗಳನ್ನು ಬುಕ್ ಮಾಡಿದ್ದೆವು. ನಿಮ್ಮ ದೇಹಪ್ರಕಾರ, ನಿಮಗೆಷ್ಟು ಕಂಫರ್ಟ್ ಬೇಕು ಎನ್ನುವುದರ ಮೇಲೆ ಇದು ಕೂಡ ಅವಲಂಬಿಸಿದೆ.
ಒಟ್ಟಾರೆ ಈಜಿಪ್ಟಿನಲ್ಲಿ ಹತ್ತು ದಿನ ಎನ್ನುವುದು ಕ್ಷಣ ಕಳೆದಂತೆ ಕಳೆದುಹೋಯ್ತು. ಇಲ್ಲಿಂದ ಹೊತ್ತು ತಂದ ಅನುಭವಗಳು ಬಹಳಷ್ಟು, ಅವುಗಳಲ್ಲಿ ಒಳಿತಿನ ಅನುಭವಗಳು ಸಿಂಹಪಾಲು. ನಿಜ ಹೇಳಬೇಕೆಂದರೆ ನೆಗೆಟಿವ್ ಇಲ್ಲ ಎನ್ನುವಷ್ಟು ಗೌಣ. ಪ್ರವಾಸಿಗನಾದವನು ಮುಕ್ತ ಮನಸಿನಿಂದ ಹೋಗಬೇಕು. ತನ್ನ ಮೂಲ ದೇಶದೊಂದಿಗೆ ಅಥವಾ ಇನ್ನ್ಯಾವುದೂ ಅನುಭವದೊಂದಿಗೆ ತಳುಕು ಹಾಕಲು ಹೋಗಬಾರದು. ಎಲ್ಲವನ್ನೂ ಮುಕ್ತ ಮನಸ್ಸಿನಿಂದ, ಆಸ್ವಾದನೆ ಮಾಡುವ ಮನೋಭಾವದಿಂದ ನೋಡಿದಾಗ ಎಲ್ಲವೂ ಸಹ್ಯ ಎನ್ನಿಸುತ್ತದೆ. ಹೊಸ ಅನುಭವ ಸಿಕ್ಕುವುದು ಹೀಗೆ. ನಾವು ನಮ್ಮ ಹಳೆಯ ಅನುಭವಗಳ ಕೋಟೆಯಲ್ಲಿ ಬಂಧಿಯಾಗಿದ್ದರೆ, ಕಣ್ಣೆದುರಿರುವ ಹೊಸ ಅನುಭವ ದಕ್ಕುವುದಿಲ್ಲ. 2250 ಕಿಲೋಮೀಟರ್ ರಸ್ತೆ ಪ್ರಯಾಣದಲ್ಲಿ ಒಂದು ಸಣ್ಣ ಅವಘಡಕ್ಕೂ ಈಡು ಮಾಡದೆ, ಎಲ್ಲಾ ಸಾಹಸಗಳಿಗೆ, ಹೊಸತನಕ್ಕೆ ಜೈ ಎನ್ನುತ್ತಿದ್ದ ನಾಗೇಂದ್ರನಂಥ ಸಹಪ್ರಯಾಣಿಕ ಸಿಕ್ಕರೆ ಸಮಯವೆನ್ನುವುದು ಚಿಟಿಕೆ ಹೊಡೆಯುವಷ್ಟರಲ್ಲಿ ಮುಗಿದು ಹೋಗುತ್ತೆ.
ಈಜಿಪ್ಟ್ ಅನುಭವಗಳನ್ನು ತಲುಪಿಸುವ ಪ್ರಯತ್ನ ಮಾಡಿದ್ದೇನೆ. ಅಲ್ಲಿಗೆ ಹೋಗಬಯಸುವರಿಗೆ ಇದು ಒಂದಷ್ಟು ಸಹಾಯ ಮಾಡಬಹುದು ಎನ್ನುವ ನಂಬಿಕೆಯೊಂದಿಗೆ ವಿರಮಿಸುವೆ.