ಕಥೆಗಳನ್ನೇ ಉಸಿರಾಡುವ ʼಶೋಲೆʼ ಬೆಟ್ಟ
ʼಕಿತ್ನೇ ಆದ್ಮಿ ಥೇ?ʼ ಎನ್ನುವ ಗಬ್ಬರ್ ಸಿಂಗ್‌ನ ಐಕಾನಿಕ್ ಡೈಲಾಗ್ ಶೂಟ್ ಆಗಿದ್ದು ಇದೇ ಬೆಟ್ಟದ ಮೇಲೆ. ಈ ಚಿತ್ರದ ಚಿತ್ರೀಕರಣಕ್ಕಾಗಿ ಸುಮಾರು ಎರಡೂವರೆ ವರ್ಷಗಳ ಕಾಲ ಇಡೀ ಚಿತ್ರತಂಡ ಇಲ್ಲೇ ಬೀಡುಬಿಟ್ಟಿತ್ತು ಮತ್ತು ಚಿತ್ರಕ್ಕಾಗಿ ಒಂದು ಇಡೀ ಹಳ್ಳಿಯ ಸೆಟ್ ಅನ್ನೇ ಇಲ್ಲಿ ನಿರ್ಮಿಸಲಾಗಿತ್ತು. ಚಲನಚಿತ್ರದ ದೃಶ್ಯಗಳಲ್ಲಿ ಕಾಣಿಸುವ ಈ ವಿಶಿಷ್ಟ ಕಲ್ಲಿನ ಬೆಟ್ಟಗಳ ಹಿನ್ನೆಲೆ, ಇಡೀ ಸಿನಿಮಾ ಕಥೆಯ ಭಾಗವೇ ಆಗಿತ್ತು.
ಹಳೆಯ ಬುಲೆಟ್ ಬೈಕ್‌ನಲ್ಲಿ ʼಯೇ ದೋಸ್ತಿ ಹಮ್ ನಹೀ ತೋಡೆಂಗೆʼ ಎಂಬ ಹಾಡನ್ನು ಹಾಡುತ್ತಾ ಜೈ(ಅಮಿತಾಭ್) ಮತ್ತು ವೀರು (ಧರ್ಮೇಂದ್ರ) ಬರುವ ʼಶೋಲೆʼ ಚಿತ್ರದ ದೃಶ್ಯ ಈಗಲೂ ಐಕಾನಿಕ್. ಹಾಗೇ ಬಳಿಕ ಅವರು ಬಂದು ಸೇರುವುದು ರಾಮಗಢ್ ಎಂಬ ಜಾಗವನ್ನು. ಇದೊಂದು ಕಾಲ್ಪನಿಕ ಊರು. ಆದರೆ, ಇದನ್ನು ಚಿತ್ರೀಕರಣ ಮಾಡಿದ್ದು ನಮ್ಮ ಕರ್ನಾಟಕದಲ್ಲಿ. ವಿಶೇಷ ಎಂದರೆ ಆ ಜಾಗ ʼಶೋಲೆ ಬೆಟ್ಟʼ ಎಂದೇ ಖ್ಯಾತಿ ಪಡೆಯಿತು.
ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಪ್ರಭಾವಶಾಲಿ ಮತ್ತು ಯಶಸ್ವಿ ಚಿತ್ರಗಳಲ್ಲಿ ಒಂದಾದ 'ಶೋಲೆ' ನಿರ್ದೇಶಕ ರಮೇಶ್ ಸಿಪ್ಪಿ ಅವರ ಕಲ್ಪನೆಯಲ್ಲಿ ಮೂಡಿಬಂದಿದ್ದು, 1975 ರಲ್ಲಿ ಬಿಡುಗಡೆಯಾಗಿತ್ತು. ಇಂದಿಗೂ ಪ್ರೇಕ್ಷಕರ ಮನಸಿನಲ್ಲಿ ಈ ಸಿನಿಮಾ ಹಸಿರಾಗಿ ಉಳಿದಿದೆ. ಜೈ, ವೀರು, ಠಾಕೂರ್, ಬಸಂತಿ ಮತ್ತು ಕ್ರೂರ ವಿಲನ್ ಗಬ್ಬರ್ ಸಿಂಗ್‌ನಂಥ ಪಾತ್ರಗಳು ಭಾರತೀಯ ಪಾಪ್ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿವೆ. ಕಥೆ, ಸಂಭಾಷಣೆ, ಅಭಿನಯ ಮತ್ತು ಸಂಗೀತದ ಜತೆಗೆ ಈ ಚಿತ್ರದ ಯಶಸ್ಸಿನಲ್ಲಿ ಅದರ ಶೂಟಿಂಗ್ ನಡೆದ ಸ್ಥಳವೂ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ.
ಇದನ್ನೂ ಓದಿ: ಫ್ರಾನ್ಸಿಗೊಂದು ಪಯಣ
ಚಿತ್ರದಲ್ಲಿ ಬರುವ ಕಾಲ್ಪನಿಕ ಗ್ರಾಮ 'ರಾಮ್‌ಗಢ್' ಅನ್ನು ಸೃಷ್ಟಿಸಲು ಕರ್ನಾಟಕದ ರಾಮನಗರದ ಕಲ್ಲಿನ ಬೆಟ್ಟಗಳನ್ನು ಬಳಸಿಕೊಳ್ಳಲಾಯಿತು. ಇಲ್ಲಿನ ರಾಮದೇವರ ಬೆಟ್ಟದ ಒರಟಾದ, ಬೃಹತ್ ಬಂಡೆಗಳಿಂದ ಕೂಡಿದ ಭೂಪ್ರದೇಶವು ಗಬ್ಬರ್ ಸಿಂಗ್ ಮತ್ತು ಅವನ ದರೋಡೆಕೋರರ ತಂಡಕ್ಕೆ ಅತ್ಯಂತ ಸೂಕ್ತವಾದ ಅಡಗುದಾಣವಾಗಿ ಮಾರ್ಪಟ್ಟಿತ್ತು. ʼಕಿತ್ನೇ ಆದ್ಮಿ ಥೇ?ʼ ಎನ್ನುವ ಗಬ್ಬರ್ ಸಿಂಗ್‌ನ ಐಕಾನಿಕ್ ಡೈಲಾಗ್ ಶೂಟ್ ಆಗಿದ್ದು ಇದೇ ಬೆಟ್ಟದ ಮೇಲೆ. ಈ ಚಿತ್ರದ ಚಿತ್ರೀಕರಣಕ್ಕಾಗಿ ಸುಮಾರು ಎರಡೂವರೆ ವರ್ಷಗಳ ಕಾಲ ಇಡೀ ಚಿತ್ರತಂಡ ಇಲ್ಲೇ ಬೀಡುಬಿಟ್ಟಿತ್ತು ಮತ್ತು ಚಿತ್ರಕ್ಕಾಗಿ ಒಂದು ಇಡೀ ಹಳ್ಳಿಯ ಸೆಟ್ ಅನ್ನೇ ಇಲ್ಲಿ ನಿರ್ಮಿಸಲಾಗಿತ್ತು. ಚಲನಚಿತ್ರದ ದೃಶ್ಯಗಳಲ್ಲಿ ಕಾಣಿಸುವ ಈ ವಿಶಿಷ್ಟ ಕಲ್ಲಿನ ಬೆಟ್ಟಗಳ ಹಿನ್ನೆಲೆ, ಇಡೀ ಸಿನಿಮಾ ಕಥೆಯ ಭಾಗವೇ ಆಗಿತ್ತು. ಬೇಡಿಗಳಲ್ಲಿ ಬಂಧಿಯಾದ ವೀರು ʼಇನ್ ಕುತ್ತೋಂ ಕೆ ಸಾಮ್ನೆ ಮತ್ ನಾಚ್ನಾ ಬಸಂತಿʼ ಎಂದು ಜೋರಾಗಿ ಕೂಗುತ್ತಾನೆ. ಆದರೆ, ಬಸಂತಿ ಕಾಲಿಗ ಗಾಜಿನ ಚೂರುಗಳು ತಾಗಿದರೂ ಗಬ್ಬರ್ ಸಿಂಗ್‌ನ ಗ್ಯಾಂಗ್ ಎದುರು ಕುಣಿಯುವುದು ಇದೇ ಬೆಟ್ಟದ ಮೇಲೆ.

ಶೋಲೆ ಚಿತ್ರದ ಅಭೂತಪೂರ್ವ ಯಶಸ್ಸು ರಾಮನಗರದ ಈ ಬೆಟ್ಟದ ಹಣೆಬರಹವನ್ನೇ ಬದಲಾಯಿಸಿತು. ಅಲ್ಲಿಯವರೆಗೆ ಕೇವಲ ಒಂದು ಸಣ್ಣ ಹಳ್ಳಿಯಾಗಿದ್ದ ಈ ಪ್ರದೇಶ, ಚಿತ್ರದ ಬಿಡುಗಡೆಯ ನಂತರ ರಾತ್ರೋರಾತ್ರಿ ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧಿ ಪಡೆಯಿತು. ಜನರು ಈ ಜಾಗವನ್ನು ರಾಮದೇವರ ಬೆಟ್ಟ ಎನ್ನುವುದಕ್ಕಿಂತ ಹೆಚ್ಚಾಗಿ 'ಶೋಲೆ ಬೆಟ್ಟ' ಎಂದೇ ಗುರುತಿಸಲು ಆರಂಭಿಸಿದರು. ಇಂದಿಗೂ ದೇಶದ ವಿವಿಧ ಮೂಲೆಗಳಿಂದ ಬರುವ ಸಿನಿಮಾ ಪ್ರೇಮಿಗಳು ಮತ್ತು ಪ್ರವಾಸಿಗರು ಗಬ್ಬರ್ ಸಿಂಗ್‌ನ ಅಡಗುದಾಣವನ್ನು ನೋಡಲು ಇಲ್ಲಿಗೆ ಭೇಟಿ ನೀಡುತ್ತಾರೆ. ಆ ದಿನಗಳಲ್ಲಿ ಚಿತ್ರತಂಡ ಇಲ್ಲಿ ರಸ್ತೆಗಳನ್ನು ನಿರ್ಮಿಸಿದ್ದರಿಂದ ಸ್ಥಳೀಯ ಮೂಲಸೌಕರ್ಯಕ್ಕೂ ಸಾಕಷ್ಟು ಸಹಾಯವಾಗಿತ್ತು. ಪ್ರಸ್ತುತ ಈ ಪ್ರದೇಶವು ರಣಹದ್ದುಗಳ ಸಂರಕ್ಷಿತ ಪ್ರದೇಶವಾಗಿ ಮಾರ್ಪಟ್ಟಿದ್ದರೂ, ಪ್ರವಾಸಿಗರಿಗೆ ಮತ್ತು ಚಾರಣಿಗರಿಗೆ ಇದು ಇಂದಿಗೂ ಅತ್ಯಂತ ಪ್ರಿಯವಾದ ಐಕಾನಿಕ್ ತಾಣವಾಗಿದೆ.
ಈ ಚಿತ್ರದ ಬಹುಪಾಲು ಚಿತ್ರೀಕರಣ ರಾಮನಗರದಲ್ಲೇ ನಡೆದಿದ್ದರೂ, ಚಿತ್ರದ ಕೆಲವು ಪ್ರಮುಖ ದೃಶ್ಯಗಳನ್ನು ಬೇರೆ ಕಡೆಗಳಲ್ಲೂ ಚಿತ್ರೀಕರಿಸಲಾಗಿದೆ. ಸಿನಿಮಾದ ಆರಂಭದಲ್ಲಿ ಬರುವ ಅತ್ಯಂತ ರೋಮಾಂಚಕ ರೈಲು ದರೋಡೆ ಮತ್ತು ಸಾಹಸ ದೃಶ್ಯವನ್ನು ರಾಮನಗರ ರೈಲ್ವೇ ನಿಲ್ದಾಣದ ಸಮೀಪವಿರುವ ಹಳೆಯ ರೈಲ್ವೇ ಸೇತುವೆಯ ಮೇಲೆ ಶೂಟ್ ಮಾಡಲಾಗಿತ್ತು. ಇದರೊಂದಿಗೆ ಜೈ ಮತ್ತು ವೀರು ಕುದುರೆ ಸವಾರಿ ಮಾಡುವ ಕೆಲವು ದೃಶ್ಯಗಳನ್ನು ರಾಮನಗರದ ಹತ್ತಿರವಿರುವ ಸಾವನದುರ್ಗ ಬೆಟ್ಟಗಳು ಮತ್ತು ಎಸ್‌ಆರ್‌ಎಸ್ ಬೆಟ್ಟಗಳ ಸುತ್ತಮುತ್ತ ಚಿತ್ರೀಕರಿಸಲಾಗಿತ್ತು. ಇನ್ನು ತಾಂತ್ರಿಕ ಕಾರಣಗಳಿಗಾಗಿ ಜೈಲು ಮತ್ತು ಕೆಲವು ಒಳಾಂಗಣ ದೃಶ್ಯಗಳಿಗಾಗಿ ಮುಂಬೈನ ರಾಜಕಮಲ್ ಸ್ಟುಡಿಯೋದಲ್ಲಿ ಹೊರಾಂಗಣ ಸೆಟ್ ನಿರ್ಮಿಸಿ ಚಿತ್ರೀಕರಣವನ್ನು ಪೂರ್ಣಗೊಳಿಸಲಾಗಿತ್ತು. ಒಟ್ಟಾರೆಯಾಗಿ, ಕರ್ನಾಟಕದ ನೈಸರ್ಗಿಕ ಸೌಂದರ್ಯ ಮತ್ತು ಒರಟಾದ ಬೆಟ್ಟಗಳು ಶೋಲೆ ಚಿತ್ರಕ್ಕೆ ಜೀವ ತುಂಬಿ, ಆ ಮೂಲಕ ರಾಮನಗರವನ್ನು ಭಾರತದ ಪ್ರವಾಸೋದ್ಯಮದ ನಕ್ಷೆಯಲ್ಲಿ ಶಾಶ್ವತವಾಗಿ ಅಚ್ಚೊತ್ತುವಂತೆ ಮಾಡಿತು.