ಯಾಣ ತೋರಿಸಿದ ಶಿವಣ್ಣನ ಪ್ರಯಾಣ!
ನಮ್ಮೂರ ಮಂದಾರ ಹೂವೇ..ಈ ಚಿತ್ರ ಒಂದು ಉತ್ತರ ಕನ್ನಡ ಪ್ರವಾಸ ಕಥನ ಅಂದರೂ ತಪ್ಪಾಗುವುದಿಲ್ಲ. ಚಿತ್ರದ ಮೊದಲ ದೃಶ್ಯದಿಂದಲೇ ತೆರೆದ ಜೀಪಿನಲ್ಲಿ ಬೆಂಗಳೂರಿನಿಂದ ಉತ್ತರಕನ್ನಡದ ಕಡೆ ಹೊರಡುವ ನಾಯಕನ ಜರ್ನಿ ದೃಶ್ಯಗಳೇ ನಮ್ಮನ್ನು ಪ್ರವಾಸದ ಮೂಡ್ ಗೆ ಸೆಳೆದುಕೊಳ್ಳುತ್ತವೆ.
ಉತ್ತರಕನ್ನಡ ಪ್ರಕೃತಿಯನ್ನು ಮೊತ್ತಮೊದಲ ಬಾರಿಗೆ ಅದ್ಭುತವಾಗಿ ಬೆಳ್ಳಿತೆರೆಗೆ ತಂದ ಚಿತ್ರ ಯಾವುದು? ಈ ಪ್ರಶ್ನೆಗೆ ನನ್ನ ಉತ್ತರ ನಮ್ಮೂರ ಮಂದಾರ ಹೂವೇ.
ಯಾಣ ಕಪ್ಪುಬಂಡೆಗಳ ಕಗ್ಗತ್ತಲ ಜಾಗ ಈ ಹಿಂದೆ ಆಗಂತುಕ ಎಂಬ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ಕಾಣಿಸಿತ್ತು. ಆದರೆ ಯಾಣ ಅಂದು ಕಂಡದ್ದು ಒಂದು ಭಯಹುಟ್ಟಿಸುವ ಸ್ಥಳದಂತೆ. ಆದರೆ ಯಾಣಕ್ಕೊಂದು ರೊಮ್ಯಾಂಟಿಕ್ ಟಚ್ ಕೊಟ್ಟದ್ದು ನಮ್ಮೂರ ಮಂದಾರ ಹೂವೇ ಚಿತ್ರ.
ಇದನ್ನೂ ಓದಿ: ಗಾಳಿಪಟ ಸಿನಿಮಾದಲ್ಲಿ ಮಲೆನಾಡೇ ಸೆರೆಯಾಗಿದೆ
1997ರಲ್ಲಿ ತೆರೆಕಂಡ ನಮ್ಮೂರ ಮಂದಾರ ಹೂವೇ ಕನ್ನಡ ಚಿತ್ರರಂಗ ಹಲವು ವಿಶೇಷಗಳಿಗೋಸ್ಕರ ನೆನಪಿಟ್ಟುಕೊಳ್ಳಬೇಕಾದ ಚಿತ್ರ. ಅದುವರೆಗೂ ಸಸ್ಪೆನ್ಸ್ ಥ್ರಿಲ್ಲರ್ ಗಳನ್ನು ನಿರ್ದೇಶಿಸುತ್ತಿದ್ದ ಸುನಿಲ್ ಕುಮಾರ್ ದೇಸಾಯಿ, ಬೆಳದಿಂಗಳ ಬಾಲೆ ಚಿತ್ರಿಸಿದ ನಂತರ ತಾನು ಫುಲ್ ಟೈಮ್ ಮ್ಯೂಸಿಕಲ್ ರೊಮ್ಯಾಂಟಿಕ್ ಲವ್ ಸ್ಟೋರಿಯನ್ನೂ ತೆರೆಗೆ ತರಬಲ್ಲೆ ಎಂಬ ಆತ್ಮವಿಶ್ವಾಸದಲ್ಲಿ ನಮ್ಮೂರ ಮಂದಾರ ಹೂವೇ.. ಅಂದರು.
ಶಿವರಾಜ್ ಕುಮಾರ್, ಪ್ರೇಮಾ ಮತ್ತು ರಮೇಶ್ ನಡುವಣ ತ್ರಿಕೋಣ ಪ್ರೇಮಕಥೆಯನ್ನು ದೇಸಾಯಿಯವರು ಹವ್ಯಕ ಭಾಷೆ, ಉತ್ತರಕನ್ನಡದ ಸಂಸ್ಕೃತಿ, ಪ್ರಕೃತಿ ಸೌಂದರ್ಯ, ಯಕ್ಷಗಾನ ಇತ್ಯಾದಿಗಳೆಲ್ಲದರ ಹದಮಿಶ್ರಣ ಮಾಡಿ ತೆರೆಗೆ ತಂದರು.

ಮನೋಜ್(ಶಿವಣ್ಣ) ಒಬ್ಬ ಸಿನಿಮಾ ನಿರ್ದೇಶಕ. ಆತ ತನ್ನ ಮುಂದಿನ ಸಿನಿಮಾಗೆ ಲೊಕೇಷನ್ ಹುಡುಕಲೆಂದು ಉತ್ತರಕನ್ನಡಕ್ಕೆ ಬರುತ್ತಾನೆ. ಅಲ್ಲಿ ತನ್ನ ಜೀವದ ಗೆಳೆಯ ಪ್ರವೀಣ್ (ರಮೇಶ್ ಅರವಿಂದ್) ಮನೆಯಲ್ಲಿ ತಂಗುತ್ತಾನೆ. ಆತನ ತಂಗಿಯ ಗೆಳತಿ ಸುಮಾ (ಪ್ರೇಮಾ) ಮೇಲೆ ಮನೋಜ್ ಗೆ ಲವ್ ಆಗುತ್ತದೆ. ಆದರೆ ಅದಕ್ಕೂ ಮುನ್ನವೇ ಪ್ರವೀಣ್ ಗೆ ಸುಮಾ ಮೇಲೆ ಪ್ರೀತಿ ಇದ್ದೂ ಹೇಳಿಕೊಳ್ಳಲಾಗಿರುವುದಿಲ್ಲ. ಗೆಳೆಯರಿಬ್ಬರೂ ಒಬ್ಬಳನ್ನೇ ಪ್ರೀತಿಸಿ, ನಂತರ ಗೆಳೆತನ ಉಳಿಸಿಕೊಳ್ಳಲು ಪ್ರೀತಿ ತ್ಯಾಗಕ್ಕೆ ಸಿದ್ಧರಾಗುತ್ತಾರೆ. ಒಂದು ಅದ್ಭುತ ಕ್ಲೈಮ್ಯಾಕ್ಸ್ ದೃಶ್ಯ ಚಿತ್ರಕ್ಕೆ ಸುಖಾಂತ್ಯ ನೀಡುತ್ತದೆ.
ಇದು ಅಂದಿನ ಕಾಲಕ್ಕೆ ಒಂದು ಅಸಾಮಾನ್ಯ ಪ್ರೇಮಕಥೆ. ಆದರೆ ಸಿನಿಮಾದ ಜೀವಾಳ ಕೇವಲ ಅದಷ್ಟೇ ಅಲ್ಲ. ಅದ್ಭುತ ಲೊಕೇಷನ್ ಗಳು ಮತ್ತು ಅದಕ್ಕೆ ಒಪ್ಪುವ ಇಳಯರಾಜ ಸಂಗೀತ ಹಾಗೂ ಛಾಯಾಗ್ರಹಣ ಚಿತ್ರವನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ದಿತ್ತು.
ಈ ಚಿತ್ರ ಒಂದು ಉತ್ತರ ಕನ್ನಡ ಪ್ರವಾಸ ಕಥನ ಅಂದರೂ ತಪ್ಪಾಗುವುದಿಲ್ಲ. ಚಿತ್ರದ ಮೊದಲ ದೃಶ್ಯದಿಂದಲೇ ತೆರೆದ ಜೀಪಿನಲ್ಲಿ ಬೆಂಗಳೂರಿನಿಂದ ಉತ್ತರಕನ್ನಡದ ಕಡೆ ಹೊರಡುವ ನಾಯಕನ ಜರ್ನಿ ದೃಶ್ಯಗಳೇ ನಮ್ಮನ್ನು ಪ್ರವಾಸದ ಮೂಡ್ ಗೆ ಸೆಳೆದುಕೊಳ್ಳುತ್ತವೆ.
ಯಲ್ಲಾಪುರ, ಶಿರಸಿ, ಬನವಾಸಿ, ಯಾಣ ಹೀಗೆ ಚೆಂದದ ಜಾಗ ಸಿಕ್ಕಲ್ಲೆಲ್ಲ ದೇಸಾಯಿ ಶೂಟ್ ಮಾಡುತ್ತಾ ಹೋಗುತ್ತಾರೆ. ಸ್ಕ್ರೀನ್ ಪ್ಲೇ ಇಲ್ಲದೆಯೇ ಶೂಟ್ ಮಾಡಿದ್ದು ಅಂತ ದೇಸಾಯಿ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಬಹಳಷ್ಟು ದೃಶ್ಯಗಳು ಕ್ಯಾಂಡಿಡ್ ಆಗಿ ಕಾಣುವುದು ಅದೇ ಕಾರಣಕ್ಕಿದ್ದಿರಬಹುದು. ಸಾತೋಡಿ ಜಲಪಾತದ ಎದುರು ನೆನೆಯುತ್ತಾ ಹಾಡಿನೊಂದಿಗೆ ಪರಿಚಯವಾಗುವ ಪ್ರೇಮಾ, ಆಕೆಯ ಸೌಂದರ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಾ ಮೈಮರೆಯುವ ಶಿವಣ್ಣ ಅದ್ಭುತ ಪ್ರಕೃತಿ ಸೌಂದರ್ಯದ ದರ್ಶನ ಮಾಡಿಸುತ್ತಾರೆ. ಶಿರಸಿ ಪಟ್ಟಣ, ಯಲ್ಲಾಪುರದ ಹಸಿರು, ಅಲ್ಲಿನ ಜನಜೀವನ, ಹವ್ಯಕ ಭಾಷೆ, ಆಹಾರ ಪದ್ಧತಿ, ಅಡಿಕೆ ತೋಟ ಎಲ್ಲವೂ ಒಂದು ಪ್ರವಾಸದ ಅನುಭವ ಕೊಡುತ್ತದೆ. ಕೆರೆಮನೆ ಶಂಭು ಹೆಗಡೆ ಅವರ ಪಾತ್ರವನ್ನೂ ತಂದು ಯಕ್ಷಗಾನದ ಸೊಬಗನ್ನೂ ಪರಿಚಯಿಸಿಕೊಡುತ್ತಾರೆ ದೇಸಾಯಿ. ಇನ್ನು ಯಾಣದ ದೃಶ್ಯಗಳಂತೂ ವಾಹ್ ಅನಿಸುವಂತಿವೆ. ಅಂದಿಗೆ ಡ್ರೋನ್ ಥರದ ಸುಸಜ್ಜಿತ ಕ್ಯಾಮೆರಗಳಿರಲಿಲ್ಲ. ಆದರೆ ಹೆಲಿಕಾಪ್ಟರ್ ಬಳಸಿ ಏರಿಯಲ್ ಶಾಟ್ ತೆಗೆದು ಯಾಣದ ವಿಹಂಗಮ ನೋಟ ತೋರಿಸಿದ್ದರು ದೇಸಾಯಿಗಾರು! ಈ ಚಿತ್ರದ ನಂತರ, ಉತ್ತರ ಕನ್ನಡ ಪ್ರವಾಸೋದ್ಯಮ ನೆಕ್ಸ್ಟ್ ಲೆವೆಲ್ ಗೆ ಹೋಗಿದ್ದು, ಯಾಣ ಹಾಟ್ ಟೂರಿಸ್ಟ್ ಸ್ಪಾಟ್ ಆಗಿದ್ದು ಸುಳ್ಳಲ್ಲ. ಪ್ರವಾಸಿಗರ ಹಾವಳಿ ಮತ್ತು ಪ್ರವಾಸಿಗರು ಮಾಡುತ್ತಿರುವ ಗಲೀಜಿನಿಂದಾಗಿ ಸ್ಥಳೀಯರು ಈ ಸಿನಿಮಾವನ್ನು ಬಯ್ದುಕೊಳ್ಳುವ ಹಂತಕ್ಕೂ ಹೋಗಿತ್ತು. ಸಾತೋಡಿ ಮತ್ತು ಇನ್ನಿತರ ಜಲಪಾತಗಳಿಗೆ ಪ್ರವಾಸಿ ಮೆರುಗು ಬಂದದ್ದೂ ಈ ಚಿತ್ರದ ನಂತರವೇ. ಮುತ್ತು ಮುತ್ತು ನೀರ ಹನಿಯ ತಾಂತನ ಎಂಬ ಗೀತೆ ಬನವಾಸಿಯ ಮಳೆಯಲ್ಲಿ ಚಿತ್ರಿತಗೊಂಡಿತ್ತು. ಅಲ್ಲಿಗೂ ಜನ ಇನ್ನಿಲ್ಲದಂತೆ ಧಾವಿಸತೊಡಗಿದರು.

ಮುಂಗಾರುಮಳೆಯಲ್ಲಿ ಜೋಗಜಲಪಾತ ನೋಡಿ ಜನ ಹೇಗೆ ಜೋಗದೆಡೆಗೆ ದೌಡಾಯಿಸಿದ್ದರೋ ಹಾಗೆಯೇ ನಮ್ಮೂರ ಮಂದಾರ ಹೂವೇ ನೋಡಿ ಯಾಣ ಹಾಗೂ ಉತ್ತರಕನ್ನಡದ ಇತರ ಪ್ರವಾಸಿತಾಣಗಳ ಕಡೆಗೆ ಓಡಿದ್ದು ದಿಟ. ಹತ್ತಾರು ಅಜ್ಞಾತ ಜಾಗಗಳು ಪ್ರವಾಸಿ ತಾಣಗಳಾಗಿ ಬದಲಾಗಿದ್ದು ಈ ಚಿತ್ರ ಬಂದ ನಂತರವೇ. ಒಟ್ಟಾರೆ ಹೇಳುವುದಾದರೆ ನಮ್ಮೂರ ಮಂದಾರ ಹೂವೇ ಟೂರಿಸಂಗೆ ಕೊಟ್ಟಿರುವ ಕೊಡುಗೆ ಬಹು ದೊಡ್ಡದು.
ಚಿತ್ರ: ನಮ್ಮೂರ ಮಂದಾರ ಹೂವೇ
ವರ್ಷ: 1997
ಪಾತ್ರವರ್ಗ: ಶಿವಣ್ಣ, ಪ್ರೇಮಾ, ರಮೇಶ್
ನಿರ್ದೇಶಕ: ಸುನೀಲ್ ಕುಮಾರ್ ದೇಸಾಯಿ
ಸಂಗೀತ: ಇಳಯರಾಜ