ರನ್ ವೇ ಮೇಲಿನ ಗುರುತುಗಳು
ರನ್‌ವೇಯ ಪ್ರಾರಂಭದಲ್ಲಿ ದೊಡ್ಡ ಬಿಳಿ ಸಂಖ್ಯೆಗಳನ್ನು (ಉದಾಹರಣೆಗೆ 27 ಅಥವಾ 09) ನೀವು ನೋಡಿರುತ್ತೀರಿ. ಇವು ರನ್‌ವೇಯ ಕಾಂತೀಯ ದಿಕ್ಕನ್ನು ಸೂಚಿಸುತ್ತವೆ. ಉದಾಹರಣೆಗೆ, ‘27’ ಎಂದರೆ ರನ್‌ವೇಯು 270 ಡಿಗ್ರಿ (ಪಶ್ಚಿಮ) ದಿಕ್ಕಿನಲ್ಲಿ ಇದೆ ಎಂದು ಅರ್ಥ. ಹಾಗೆಯೇ ‘09’ ಎಂದರೆ 90 ಡಿಗ್ರಿ ಪೂರ್ವ ದಿಕ್ಕಿನಲ್ಲಿದೆ ಎಂದು ಅರ್ಥ.
ಸೂಕ್ಷ್ಮವಾಗಿ ಗಮನಿಸಿದರೆ ವಿಮಾನ ನಿಲ್ದಾಣದ ರನ್‌ವೇ ಮೇಲೆ ಹಲವು ಗುರುತುಗಳು ಇರುವುದನ್ನು ಕಾಣಬಹುದು. ಸಾಮಾನ್ಯ ಪ್ರಯಾಣಿಕರಿಗೆ ಇವುಗಳ ಬಗ್ಗೆ ಹೆಚ್ಚಿನ ಗಂಧ-ಗಾಳಿ ಇರುವುದಿಲ್ಲ. ಆದರೆ ರನ್‌ವೇ ಮತ್ತು ವಿಮಾನ ನಿಲ್ದಾಣದ ನೆಲದ ಮೇಲೆ ಬರೆದಿರುವ ಪ್ರತಿ ಚಿಹ್ನೆ, ಗುರುತುಗಳಿಗೂ ನಿರ್ದಿಷ್ಟ ಅರ್ಥ, ಉದ್ದೇಶವಿದೆ. ವಿಮಾನ ನಿಲ್ದಾಣದ ರನ್‌ವೇಯಲ್ಲಿರುವ ಪ್ರತಿಯೊಂದು ಗುರುತೂ ವಿಮಾನಗಳ ಸುರಕ್ಷಿತ ಕಾರ್ಯಾಚರಣೆಗೆ ಅತ್ಯಗತ್ಯ.
ರನ್‌ವೇಯ ಪ್ರಾರಂಭದಲ್ಲಿ ದೊಡ್ಡ ಬಿಳಿ ಸಂಖ್ಯೆಗಳನ್ನು (ಉದಾಹರಣೆಗೆ 27 ಅಥವಾ 09) ನೀವು ನೋಡಿರುತ್ತೀರಿ. ಇವು ರನ್‌ವೇಯ ಕಾಂತೀಯ ದಿಕ್ಕನ್ನು ಸೂಚಿಸುತ್ತವೆ. ಉದಾಹರಣೆಗೆ, ‘27’ ಎಂದರೆ ರನ್‌ವೇಯು 270 ಡಿಗ್ರಿ (ಪಶ್ಚಿಮ) ದಿಕ್ಕಿನಲ್ಲಿ ಇದೆ ಎಂದು ಅರ್ಥ. ಹಾಗೆಯೇ ‘09’ ಎಂದರೆ 90 ಡಿಗ್ರಿ ಪೂರ್ವ ದಿಕ್ಕಿನಲ್ಲಿದೆ ಎಂದು ಅರ್ಥ.
ಇದನ್ನೂ ಓದಿ: ವಿಮಾನದ ಸಂಚಾರ ದೀಪಗಳು
ಒಂದು ರನ್‌ವೇಯನ್ನು ಎರಡು ದಿಕ್ಕುಗಳಿಂದಲೂ ಬಳಸಬಹುದಾದ್ದರಿಂದ, ಅದರ ಇನ್ನೊಂದು ತುದಿಯಲ್ಲಿ ವಿರುದ್ಧ ದಿಕ್ಕಿನ ಸಂಖ್ಯೆ ಇರುತ್ತದೆ (ಉದಾಹರಣೆಗೆ, 27ರ ಇನ್ನೊಂದು ತುದಿಯಲ್ಲಿ 09 ಇರುತ್ತದೆ). ‘18’ ಎಂದು ಗುರುತಿಸಲಾದ ರನ್‌ವೇ 180 ಡಿಗ್ರಿ ದಕ್ಷಿಣ ದಿಕ್ಕಿನಲ್ಲಿರುತ್ತದೆ ಮತ್ತು ಅದರ ವಿರುದ್ಧ ದಿಕ್ಕಿನಲ್ಲಿ ‘36’ (360 ಡಿಗ್ರಿ = ಉತ್ತರ) ಎಂದು ಗುರುತಿಸಲಾಗುತ್ತದೆ.
ರನ್‌ವೇಯಲ್ಲಿ ಸೆಂಟರ್‌ಲೈನ್ ಇರುವುದನ್ನು ಗಮನಿಸಿರಬಹುದು. ಇದು ರನ್‌ವೇಯ ಮಧ್ಯದಲ್ಲಿರುವ ಬಿಳಿ ಡ್ಯಾಶ್ ಮಾಡಿದ ಗೆರೆ. ಟೇಕಾಫ್ ಮತ್ತು ಲ್ಯಾಂಡಿಂಗ್ ಸಮಯದಲ್ಲಿ ವಿಮಾನವನ್ನು ನೇರವಾಗಿ ನಿರ್ವಹಿಸಲು ಇದು ಪೈಲಟ್‌ಗಳಿಗೆ ಸಹಾಯಕ. ರನ್‌ವೇಯ ಪ್ರಾರಂಭದಲ್ಲಿ 4 ರಿಂದ 16 ದಪ್ಪ ಬಿಳಿ ಪಟ್ಟೆಗಳಿರುತ್ತವೆ.
ಇವು ವಿಮಾನವು ಎಲ್ಲಿಂದ ಇಳಿಯಲು ಪ್ರಾರಂಭಿಸಬೇಕು ಎಂಬುದನ್ನು ಸೂಚಿಸುತ್ತವೆ. ಇವುಗಳಿಗೆ ಥ್ರೆಶೋಲ್ಡ್ ಗುರುತುಗಳು (Threshold Markings) ಎಂದು ಕರೆಯುತ್ತಾರೆ. ಥ್ರೆಶೋಲ್ಡ್‌ನಿಂದ ಸುಮಾರು ಒಂದು ಸಾವಿರ ಅಡಿ ದೂರದಲ್ಲಿರುವ ದಪ್ಪ ಬಿಳಿ ಆಯತಾಕಾರದ ಬ್ಲಾಕ್‌ಗಳನ್ನು ಗುರಿಬಿಂದು ಗುರುತುಗಳು (Aiming Point Markings) ಎನ್ನುತ್ತಾರೆ.
ಲ್ಯಾಂಡಿಂಗ್ ಸಮಯದಲ್ಲಿ ಪೈಲಟ್‌ಗಳು ಈ ಗುರುತುಗಳನ್ನು ಗಮನದಲ್ಲಿರಿಸಿಕೊಂಡು ಸರಿಯಾದ ಸ್ಥಳದಲ್ಲಿ ಇಳಿಯಲು ಪ್ರಯತ್ನಿಸುತ್ತಾರೆ. ಗುರಿಬಿಂದುವಿನ ಆಚೆಗೆ ಇರುವ ಸರಣಿ ಪಟ್ಟೆಗಳನ್ನು ಗಮನಿಸಿರಬಹುದು. ಇವುಗಳಿಗೆ ಟಚ್‌ಡೌನ್ ಝೋನ್ ಗುರುತುಗಳು (Touchdown Zone Markings) ಅಂತಾರೆ. ಲ್ಯಾಂಡಿಂಗ್‌ನ ನಿಖರತೆಗಾಗಿ ಪೈಲಟ್‌ಗಳಿಗೆ ದೂರವನ್ನು ಅಂದಾಜು ಮಾಡಲು ಇವು ಸಹಾಯಕ. ಬಿಳಿ ಗೆರೆ ಮತ್ತು ಅದಕ್ಕೆ ಮುನ್ನ ಬರುವ ಬಿಳಿ ಬಾಣದ ಗುರುತುಗಳಿಗೆ ಸ್ಥಳಾಂತರಗೊಂಡ ಥ್ರೆಶೋಲ್ಡ್ (Displaced Threshold) ಅಂತಾರೆ.
ರನ್‌ವೇಯ ಈ ಭಾಗವನ್ನು ಲ್ಯಾಂಡಿಂಗ್‌ಗೆ ಬಳಸುವಂತಿಲ್ಲ, ಆದರೆ ಟೇಕಾಫ್ ಅಥವಾ ಟ್ಯಾಕ್ಸಿಂಗ್‌ಗೆ (ರನ್‌ವೇಯಲ್ಲಿ ವಿಮಾನವನ್ನು ಚಲಾಯಿಸಲು) ಬಳಸಬಹುದು. ಇದು ವಿಮಾನಗಳಿಗೆ ಸುರಕ್ಷಿತವಾಗಿ ಇಳಿಯಲು ಲಭ್ಯವಿರುವ ನಿಜವಾದ ರನ್ ವೇಯ ಭಾಗವನ್ನು ಸ್ಪಷ್ಟಪಡಿಸುತ್ತದೆ. ರನ್‌ವೇಯ ಅಂಚುಗಳನ್ನು ವ್ಯಾಖ್ಯಾನಿಸುವ ಘನ ಬಿಳಿ ಗೆರೆಗಳನ್ನು ಗಮನಿಸಿರಬಹುದು.
ಇದಕ್ಕೆ ರನ್‌ವೇ ಸೈಡ್ ಸ್ಟ್ರೈಪ್ (Runway Side Stripe) ಎನ್ನುತ್ತಾರೆ. ವಿಮಾನಗಳು ಬಳಸಬಹು ದಾದ ರನ್‌ವೇಯ ಗಡಿಗಳನ್ನು ಇವು ಸೂಚಿಸುತ್ತವೆ. ರನ್‌ವೇ ನಂತರ ಹಳದಿ ಬಾಣದ ಗುರುತು ಗಳನ್ನು ನೋಡಿರಬಹುದು. ಇದಕ್ಕೆ ಶೆವ್ರಾನ್‌ಗಳು (Chevrons) ಅಂತಾರೆ. ರನ್‌ವೇಯ ಕೊನೆಯಲ್ಲಿ ರುವ ಬ್ಲಾ ಪ್ಯಾಡ್‌ನಂಥ, ಸಾಮಾನ್ಯ ಕಾರ್ಯಾಚರಣೆಗಳಿಗೆ ಬಳಸಲಾಗದ ಪ್ರದೇಶವನ್ನು ಇವು ಸೂಚಿಸುತ್ತವೆ.
ಟ್ಯಾಕ್ಸಿವೇ ಛೇದಕಗಳಲ್ಲಿ ಕಂಡುಬರುವ ಹೋಲ್ಡ್ ಶಾರ್ಟ್ ಗುರುತುಗಳು ( Hold Short Markings ) ಡಬಲ್ ಘನ ಮತ್ತು ಡ್ಯಾಶ್ ಮಾಡಿದ ಹಳದಿ ಗೆರೆಗಳು, ಸಕ್ರಿಯ ರನ್‌ವೇಗೆ ಪ್ರವೇಶಿಸುವ ಮೊದಲು ಪೈಲಟ್‌ಗಳು ಎಲ್ಲಿ ನಿಲ್ಲಬೇಕು ಎಂಬುದನ್ನು ತಿಳಿಸುತ್ತವೆ. ಇದು ರನ್‌ವೇಗೆ ಹಠಾತ್ ಆಗಮಿಸುವ ವಿಮಾನವನ್ನು ತಡೆಯಲು ಅತ್ಯಗತ್ಯ. ರನ್ವೇ ಶೋಲ್ಡರ್ ಗುರುತುಗಳು (Runway Shoulder Markings) ರನ್‌ವೇ ಅಂಚುಗಳ ಹೊರಗಿರುವ ಹಳದಿ ಪಟ್ಟೆಗಳು. ಈ ಪ್ರದೇಶವು ವಿಮಾನ ಕಾರ್ಯಾಚರಣೆಗೆ ಉದ್ದೇಶಿಸಿಲ್ಲ ಎಂಬುದನ್ನು ಇವು ಸೂಚಿಸುತ್ತವೆ.
ಈ ಎಲ್ಲ ಗುರುತುಗಳು ಅಂತಾರಾಷ್ಟ್ರೀಯ ವಿಮಾನಯಾನ ಮಾನದಂಡಗಳನ್ನು (ICAO ಮತ್ತು FAA) ಅನುಸರಿಸುತ್ತವೆ ಮತ್ತು ಇವನ್ನು ಕಟ್ಟುನಿಟ್ಟಾಗಿ ನಿರ್ವಹಿಸಲಾಗುತ್ತವೆ. ಜಗತ್ತಿನ ಯಾವುದೇ ವಿಮಾನ ನಿಲ್ದಾಣಕ್ಕೆ ಹೋದರೂ ಈ ಗುರುತುಗಳನ್ನು ಕಾಣಬಹುದು.