Wednesday, March 18, 2026
Wednesday, March 18, 2026

ದೇಶಗಳನ್ನು ನಾವು ನೋಡುವ ರೀತಿ ಬದಲಾಗುವ ರೀತಿಯೇ ಅಚ್ಚರಿ!

ಯಾವುದೇ ದೃಢವಾದ ವಸ್ತುವಿನ ಆಸರೆಯಿಲ್ಲದೆ ಆಕಾಶದಲ್ಲಿ ತೇಲಾಡುವ ವಿಮಾನವನ್ನು ಅಪನಂಬಿಕೆಯಿಂದ ನೋಡುವರ ಸಂಖ್ಯೆಯೂ ಕಡಿಮೆಯಿಲ್ಲ. ಸಂಖ್ಯೆ 13 ಕುರಿತು ಕೂಡ ಬಹುತೇಕ ಯುರೋಪಿನಲ್ಲಿ ಅದು ದುರದೃಷ್ಟದ ಸಂಖ್ಯೆ ಎನ್ನುವ ಭಾವನೆಯಿದೆ. ಹೀಗಾಗಿ ಹಲವಾರು ಕಟ್ಟಡದಲ್ಲಿ 12ರ ನಂತರ 12A ಅಂತಲೋ ಅಥವಾ ನೇರವಾಗಿ 14 ಅಂತಲೋ ಉಲ್ಲೇಖಿಸುತ್ತಾರೆ. ಇನ್ನು ದೆವ್ವ, ಭೂತ, ಆತ್ಮಗಳಲ್ಲಿ, ಕರ್ಮದಲ್ಲಿ ಕೂಡ ನಂಬಿಕೆ ಉಂಟು. ಆದರೆ ಬಹುತೇಕ ಜನರು ಪುನರ್ಜನ್ಮವನ್ನು ನಂಬುವುದಿಲ್ಲ.

  • ರಂಗಸ್ವಾಮಿ ಮೂಕನಹಳ್ಳಿ

ಬಾರ್ಸಿಲೋನಾದಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತಾ ಹೋದಂತೆಲ್ಲ ಭಾಷೆಯ ಜೊತೆಗೆ ಅವರ ಹಾವಭಾವಗಳು, ಕೆಲವು ಸಾಮಾನ್ಯ ಉದ್ಗಾರಗಳು ತಿಳಿಯಲು ಶುರುವಾಯ್ತು. ಮಾತಿನ ಮಧ್ಯದಲ್ಲಿ 'ಅವೆರ್' ಎನ್ನುವುದನ್ನು ಇಲ್ಲಿ ಬಹಳಷ್ಟು ಜನ ಬಳಸುತ್ತಾರೆ. ಈ ಪದಕ್ಕೆ ಡಿಕ್ಷನರಿ ಅರ್ಥ ’ಲೆಟ್ಸ್ ಸೀ’ ಎಂದಾಗುತ್ತದೆ. ಆದರೆ ಮಾತಿನ ಮಧ್ಯ ಬಹಳಷ್ಟು ಬಾರಿ ಇದು ಯಾವುದೇ ಅರ್ಥ ನೀಡದ ಉದ್ಗಾರ. ಇನ್ನು ಕೆಲವೊಮ್ಮೆ ಅವೆರ್ ನಂತರ ಏನು ಮಾತನಾಡುತ್ತೇವೆಯೋ ಆ ಸಂದರ್ಭಕ್ಕೆ ತಕ್ಕ ಅರ್ಥವನ್ನು ಈ ಪದ ನೀಡುತ್ತದೆ. ಪ್ರವಾಸಿಯಾಗಿಯೂ ಅಥವಾ ಕೇವಲ ಒಂದಷ್ಟು ದಿನ ಅಲ್ಲಿದ್ದು ಬರುವುದಿದ್ದರೆ, ಕೆಲವೊಂದು ಸೂಕ್ಷ್ಮಗಳು ತಿಳಿಯುವುದಿಲ್ಲ. ಕನ್ನಡದಲ್ಲಿ ಬೇರೆ ಬೇರೆ ಅರ್ಥವನ್ನು ನೀಡುವ ಒಂದೇ ಪದಗಳು ಬೇಕಾದಷ್ಟಿವೆ ಅಲ್ಲವೇ, ಹಾಗೆಯೇ ಸ್ಪ್ಯಾನಿಶ್ ನಲ್ಲಿ ಕೂಡ ಬಹಳಷ್ಟಿವೆ. ಉಚ್ಚಾರಣೆಯಲ್ಲಿ ಒಂದಷ್ಟು ಬದಲಾದರೂ ಸಾಕು ಅದು ಪರಿಪೂರ್ಣ ಬೇರೆಯ ಅರ್ಥವನ್ನು ನೀಡುವ ಪದಗಳಿಗೂ ಕನ್ನಡದಲ್ಲಿ ಕೊರತೆಯಿಲ್ಲ. ಅಂತೆಯೇ ಸ್ಪ್ಯಾನಿಶ್ ನಲ್ಲಿ ಕೂಡ ಇಂಥ ಪದಗುಚ್ಛಗಳು ಬಹಳ ಇವೆ.
ಇದನ್ನೂ ಓದಿ: ಕಾಗನೇರ್ ಬೊಂಬೆಯ ಸೃಷ್ಟಿಯ ಹಿಂದಿನ ರಹಸ್ಯ!

ಹೀಗೆ ನಾವು ಮಾತಿನಲ್ಲಿ ಹಲವಾರು ಗಾದೆ ಮಾತುಗಳನ್ನು, ಆಡುಮಾತುಗಳನ್ನು ಬಳಸುತ್ತೇವೆ ಅಲ್ಲವೇ? ಇಲ್ಲಿನ ಜನರು ಕೂಡ ಮಾತಿನ ನಡುವೆ ಗಾದೆ ಮಾತುಗಳನ್ನು ಬಳಸುತ್ತಾರೆ. ಹೆಚ್ಚು ಸಮಯ ಇಲ್ಲಿ ಕಳೆಯುತ್ತಾ ಹೋದಂತೆ, ಆಫೀಸ್ ನಲ್ಲಿ ಕೆಲಸ ಮಾಡುವವರ ಹೊರತು ಪಡಿಸಿ ಕೂಡ ಅನೇಕ ಸ್ನೇಹಿತರು ಸಿಗುತ್ತಾ ಹೋದರು. ಹೆಚ್ಚು ಹೆಚ್ಚು ಇಲ್ಲಿನ ಜನರ ಜೊತೆ ಬೆರೆಯುತ್ತಾ ಹೋದಂತೆಲ್ಲ ಇವರಿಗೂ ನಮಗೂ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ ಅನಿಸತೊಡಗಿತು. ಹೀಗೆ ಅನಿಸಲು ಪ್ರಮುಖ ಕಾರಣ ಬಾರ್ಸಿಲೋನಾ ನಗರಕ್ಕೆ ನಮ್ಮಲ್ಲಿ ಊರ ಹಬ್ಬ, ಊರ ದೇವತೆ ಇದೆ. ಮೊನ್ಸರಾತ್ ಎನ್ನುವ ನಮ್ಮ ಚಾಮುಂಡಿ ಬೆಟ್ಟವನ್ನು ಹೋಲುವ ಒಂದು ಬೆಟ್ಟವಿದೆ. ಇಲ್ಲಿ ಸಂತ ಮಾರಿಯಾ ದೆ ಮೊನ್ಸರಾತ್ ಎನ್ನುವ ಚರ್ಚು ಇದೆ. ಸಂತ ಮಾರಿಯಾ ಬಾರ್ಸಿಲೋನಾ ನಗರವನ್ನು ಎಲ್ಲಾ ಕೆಟ್ಟ ಶಕ್ತಿಗಳಿಂದ ಕಾಪಾಡುತ್ತಾರೆ ಎನ್ನುವ ನಂಬಿಕೆ ಇಲ್ಲಿಯವರದು.

Untitled design (72)

ಹೀಗೆ ಒಂದು ದಿನ ಪಕ್ಕದ ಲಂಡನ್ ನಗರಕ್ಕೆ ಹೋಗೋಣ ಎನ್ನುವ ಯೋಜನೆಯನ್ನು ಮಾಡಿಕೊಂಡು ಗೆಳೆಯ ಕಾರ್ಲೋಸ್ ನನ್ನು ಕೇಳಿದೆ. ನಾಲ್ಕೈದು ದಿನ ರಜೆ ಬೇರೆ ಇತ್ತು. ಅಂದಹಾಗೆ ಸ್ಪೇನ್ ನಲ್ಲಿ ಕೂಡ ಬಹಳ ರಜೆಗಳು ಇರುತ್ತವೆ. ಆಯಾ ಪ್ರಾಂತ್ಯದಲ್ಲಿ ಅಲ್ಲಿನ ನಂಬಿಕೆಗಳಿಗೆ ಅನುಗುಣವಾಗಿ ಸಣ್ಣ ಪುಟ್ಟ ಹಬ್ಬಗಳಿಗೂ ರಜೆ ನೀಡುವುದು ಕೂಡ ಇಲ್ಲಿ ಸಾಮಾನ್ಯ. ನಾನು ಮಂಗಳವಾರ ಹೊರತು ಶುಕ್ರವಾರ ವಾಪಸ್ ಬರುವುದು ಅಂದುಕೊಂಡಿದ್ದೆ. ಕಾರ್ಲೋಸ್ ಹೆಚ್ಚು ಕಡಿಮೆ ನನ್ನ ವಯಸ್ಸಿನವನು. ಅವನು ' ಮಾರ್ತೇಸ್ ನೀ ಕಾಸೆಸ್, ನೀ ಎಂಬಾರ್ಕೇಸ್ ' ಎಂದ. ಅಂದರೆ ಮಂಗಳವಾರ ಮದುವೆ ಆಗಬೇಡ, ವಿಮಾನವನ್ನು ಕೂಡ ಹತ್ತಬೇಡ' ಎನ್ನುವ ಅರ್ಥ. ಅಯ್ಯೋ ಇದೊಳ್ಳೆ ಫಜೀತಿ ಆಯ್ತಲ್ಲ ಎಂದು. ಏಕೆ ಕಾರ್ಲೋಸ್ ಏನಾಯ್ತು? ಎಂದು ಪ್ರಶ್ನಿಸಿದೆ. ಅದಕ್ಕವನು ನಮ್ಮಜ್ಜಿ, ನಮ್ಮಮ್ಮ ಎಲ್ಲರೂ ಇದನ್ನೇ ಹೇಳುತ್ತಾ ಬಂದಿದ್ದಾರೆ. ಮಂಗಳವಾರ ಶುಭ ಕೆಲಸ ಮಾಡುವಂತಿಲ್ಲ ಎಂದ. ಅದಕ್ಕೆ ಅಲ್ಲಿನ ಸಮಾಜದಲ್ಲಿ ಅಂದಿನ ಕಾಲಘಟ್ಟದಲ್ಲಿ ಏನೋ ಅರ್ಥ ಖಂಡಿತ ಇರುತ್ತದೆ. ಆದರೆ ಇಂದಿನವರಿಗೆ ಅದರ ಅರ್ಥ ತಿಳಿದಿಲ್ಲ. ಆದರೂ ಮಂಗಳವಾರ ಇಲ್ಲಿ ಅಶುಭ ಎನ್ನುವುದು ಎಲ್ಲರ ಮನಸಿನಲ್ಲಿ ಅಲ್ಲದಿದ್ದರೂ ಇನ್ನೂ ಹಲವಾರು ಜನರ ಮನದಲ್ಲಿ ಉಳಿದಿದೆ.

ಉಳಿದಂತೆ ವಿಮಾನವನ್ನು ಏರಲು ಬಹಳಷ್ಟು ಜನ ಇಷ್ಟ ಪಡುವುದಿಲ್ಲ. ಯಾವುದೇ ದೃಢವಾದ ವಸ್ತುವಿನ ಆಸರೆಯಿಲ್ಲದೆ ಆಕಾಶದಲ್ಲಿ ತೇಲಾಡುವ ವಿಮಾನವನ್ನು ಅಪನಂಬಿಕೆಯಿಂದ ನೋಡುವರ ಸಂಖ್ಯೆಯೂ ಕಡಿಮೆಯಿಲ್ಲ. ಸಂಖ್ಯೆ 13 ಕುರಿತು ಕೂಡ ಬಹುತೇಕ ಯುರೋಪಿನಲ್ಲಿ ಅದು ದುರದೃಷ್ಟದ ಸಂಖ್ಯೆ ಎನ್ನುವ ಭಾವನೆಯಿದೆ. ಹೀಗಾಗಿ ಹಲವಾರು ಕಟ್ಟಡದಲ್ಲಿ 12ರ ನಂತರ 12A ಅಂತಲೋ ಅಥವಾ ನೇರವಾಗಿ 14 ಅಂತಲೋ ಉಲ್ಲೇಖಿಸುತ್ತಾರೆ. ಇನ್ನು ದೆವ್ವ, ಭೂತ, ಆತ್ಮಗಳಲ್ಲಿ, ಕರ್ಮದಲ್ಲಿ ಕೂಡ ನಂಬಿಕೆ ಉಂಟು. ಆದರೆ ಬಹುತೇಕ ಜನರು ಪುನರ್ಜನ್ಮವನ್ನು ನಂಬುವುದಿಲ್ಲ.

ದೂರದಿಂದ ನೋಡಿದಾಗ ಇವರಲ್ಲಿ ಕುಟುಂಬ ವ್ಯವಸ್ಥೆ ಬಹಳ ಕೆಟ್ಟದಾಗಿದೆ. ವಿಚ್ಛೇದನ ಜಾಸ್ತಿ ಎನ್ನುವಂತೆ ಕಾಣುತ್ತದೆ. ವಿಚ್ಛೇದನ ಎನ್ನುವುದು ಈಗ ಜಗತ್ತಿನಾದ್ಯಂತ ಸೇಮ್ ಎನ್ನುವಂತಾಗಿದೆ. ಸ್ಪೇನ್ ಮತ್ತು ಇಟಲಿಯಲ್ಲಿ ಬೇರೆ ದೇಶಗಳಿಗಿಂತ ಉತ್ತಮ ಕುಟುಂಬ ವ್ಯವಸ್ಥೆಯಿದೆ. ಕೆಲಸಕ್ಕೆ ಹೋಗುವ ಮಹಿಳೆಯರು ತಮ್ಮ ಮಕ್ಕಳನ್ನು ಅಮ್ಮನ ಬಳಿ ಅಂದರೆ ಮಗುವನ್ನು ಅಜ್ಜಿಯ ಮನೆಯಲ್ಲಿ ಬಿಟ್ಟು ಹೋಗುವುದು ಇಲ್ಲಿ ಅತ್ಯಂತ ಸಾಮಾನ್ಯ. ಮದುವೆ ಆಗುವವರೆಗೆ ಬಹಳಷ್ಟು ಕುಡಿತ -ಕುಣಿತ -ಓಡಾಟದಲ್ಲಿ ಸಮಯ ಕಳೆಯುವ ಜನ ಆ ನಂತರ ಬದುಕನ್ನು ಸೀರಿಯಸ್ಸಾಗಿ ತೆಗೆದುಕೊಳ್ಳುತ್ತಾರೆ. ಇದು ಮೆಜಾರಿಟಿ ಜನರ ಕಥೆ. ಅಪವಾದಗಳು ಎಲ್ಲಾ ವಿಷಯದಲ್ಲೂ ಇದ್ದೇ ಇರುತ್ತವೆ ಅಲ್ಲವೇ?

Untitled design (74)

ಹೀಗೆ ಸ್ಪ್ಯಾನಿಶ್ ಬದುಕನ್ನು ಹತ್ತಿರದಿಂದ ನೋಡುತ್ತಾ ಬಂದಂತೆ ಒಂದು ವಿಷಯ ಸ್ಪಷ್ಟವಾಯ್ತು. ನಮ್ಮೆಲ್ಲಾ ಭಿನ್ನತೆಗಳ ನಡುವೆ ಕೂಡ ನಮ್ಮನ್ನು ಬೆಸೆಯುವ ಕೊಂಡಿಗಳು ಬೇಕಾದಷ್ಟಿವೆ. ಈ ಅನುಭವ ವಿದೇಶಕ್ಕೆ ಹೋದವರ ಅಥವಾ ಬಹಳಷ್ಟು ವರ್ಷ ವಿದೇಶದಲ್ಲಿ ಇದ್ದವರು ಬದುಕನ್ನು ಕಾಣುವ ರೀತಿಯನ್ನು ಐದು ಹಂತಗಳನ್ನಾಗಿ ವಿಭಾಗಿಸಬಹುದು ಎನ್ನುವುದು ಕಲಿಸಿದೆ.

ಮೊದಲ ಹಂತದಲ್ಲಿ ನಾವು ಯಾವ ದೇಶಕ್ಕೆ ಹೋಗಿರುತ್ತೇವೆ ಅದು ತುಂಬಾ ಸುಂದರ, ಇಲ್ಲಿನ ವ್ಯವಸ್ಥೆ ಅತ್ಯಂತ ಪರ್ಫೆಕ್ಟ್. ಇಲ್ಲಿ ಎಲ್ಲವೂ ಚೆನ್ನಾಗಿದೆ ಎನ್ನುವುದು ಸಾಮಾನ್ಯವಾಗಿರುತ್ತದೆ. ಆದರೆ ನಾವು ಮೊದಲ ದಿನ ಆಡಿದ ಮಾತು, ಕಂಡ ನೋಟಗಳು ಕೊನೆಯ ತನಕ ಉಳಿದುಕೊಳ್ಳುವುದಿಲ್ಲ. ಬದುಕೆಂದರೆ ಅದು ಬದಲಾವಣೆ.

ಎರಡನೆಯ ಹಂತದಲ್ಲಿ ಬಿಟ್ಟು ಬಂದ ದೇಶದಲ್ಲಿ ಯಾವುದೂ ಸರಿಯಿಲ್ಲ. ಅದು ದುರವಸ್ಥೆಯ ಕೂಪ. ಏನಾದರೂ ಸರಿಯೇ ಮತ್ತೆಂದೂ ಅಲ್ಲಿಗೆ ಮರಳಿ ಹೋಗಲಾರೆ ಎನ್ನುವ ಭಾವನೆ ಹೆಚ್ಚಾಗಿರುತ್ತದೆ.

ಮೂರನೆಯ ಹಂತದಲ್ಲಿ ನಿಧಾನವಾಗಿ ನಾವು ನೆಲೆ ಕಂಡುಕೊಂಡ ದೇಶದ ಲೋಪದೋಷಗಳು, ಇಲ್ಲಿನ ಸಮಾಜದಲ್ಲಿ ಇರುವ ಹುಳುಕುಗಳು ಕಾಣತೊಡಗುತ್ತದೆ. ಅಯ್ಯೋ ಇವರು ನಮ್ಮಂತೆ, ಅಂಥ ವ್ಯತ್ಯಾಸವೇನೂ ಇಲ್ಲ ಎನ್ನುವ ಭಾವನೆ ಶುರುವಾಗುತ್ತದೆ.

ನಾಲ್ಕನೆಯ ಹಂತದಲ್ಲಿ ತನ್ನ ಮೂಲ ದೇಶದಲ್ಲಿ ಸಿಗುತ್ತಿದ್ದ ಕೆಲವು ಸೇವೆ, ಸರಕುಗಳ ಕೊರತೆ ಕಾಡಲು ಶುರುವಾಗುತ್ತದೆ. ಅದರಲ್ಲೂ ಮಕ್ಕಳ ವಿದ್ಯಾಭ್ಯಾಸದ ವಿಷಯ ಬಂದಾಗ ಯುರೋಪಿನಲ್ಲಿ ನೆಲೆ ನಿಂತವರು ಯೋಚಿಸಲು ಶುರು ಮಾಡುತ್ತಾರೆ.

ಐದನೆಯ ಹಂತದಲ್ಲಿ ಎಲ್ಲಿದ್ದರೇನು? ನಾವು ಪ್ರಸ್ತುತರಾಗಿರಬೇಕು ಎನ್ನುವ ಮನಸ್ಥಿತಿ ಬರುತ್ತದೆ.

ಮೇಲೆ ಹೇಳಿದ ಸ್ಥಿತಿ ಎಲ್ಲರಿಗೂ ಆಗಬೇಕೆಂದಿಲ್ಲ. ಬಹಳಷ್ಟು ಜನ ಐದನೆಯ ಹಂತವನ್ನು ತಲುಪಿ ಕೂಡ ಅಲ್ಲೇ ಉಳಿದುಕೊಳ್ಳುತ್ತಾರೆ. ಭಾರತಕ್ಕೆ ಮರಳಿ ಬರುವುದು ಮತ್ತು ಇಲ್ಲಿನ ವ್ಯವಸ್ಥೆಗೆ ಮತ್ತೆ ಹೊಂದಿಕೊಳ್ಳುವುದು ಬಹಳ ಕಷ್ಟದ ಕೆಲಸ.

Untitled design (73)

ಅದು ಫೆಬ್ರವರಿ 2011ರ ಸಮಯ ಬೆಳಗ್ಗೆಯಿಂದ ಸ್ಪ್ಯಾನಿಶ್ ಮಿತ್ರರು ನ್ಯೂಸ್ ನೋಡಿ ಒಂದೇ ಸಮ ಏಕೆ ನಿಮ್ಮ ದೇಶ ಹೀಗೆ? ಎಂದು ಕೇಳಲು ಶುರು ಮಾಡಿದರು. ಕುಂಭಮೇಳದಲ್ಲಿ ಕಾಲ್ತುಳಿತ ಉಂಟಾಗಿ ನೂರಾರು ಜನ ಸತ್ತದ್ದು ಇಂಟರ್ ನ್ಯಾಷನಲ್ ನ್ಯೂಸ್ ಆಗಿತ್ತು. ಈ ಸಮಯಕ್ಕಾಗಲೇ ನನ್ನ ಸ್ಪಾನಿಶ್ ಭಾಷೆಯ ಗ್ರಹಿಕೆ ಮಜಬೂತಾಗಿತ್ತು. ಅಲ್ಲಿನ ಗಾದೆಗಳು ಆಡುಮಾತುಗಳನ್ನು ಮಾತಿನ ಮಧ್ಯೆ ಉದಾಹರಿಸುವ ಮಟ್ಟಕ್ಕೆ ಅವರ ಸಂಸ್ಕಾರದಲ್ಲಿ ಒಂದಾಗಿ ಹೋಗಿದ್ದೆ. ಅವರಿಗೆ ತಿಂಗಳ ಕೆಳಗೆ ಮ್ಯಾಡ್ರಿಡ್’ನ ಮ್ಯೂಸಿಕ್ ಕಾನ್ಸರ್ಟ್’ನಲ್ಲಿ ಹೀಗೆ ಕಾಲ್ತುಳಿತದಲ್ಲಿ 5-6 ಜನ ಸತ್ತದ್ದನ್ನೇ ಉದಾಹರಿಸಿ ಹೇಳಿದೆ. ನನ್ನ ಸ್ಪಾನಿಶ್ ಮಿತ್ರರು ಸುಮ್ಮನಾದರು.

ಇದನ್ನೂ ಓದಿ: ಈಜಿಪ್ಟಿಗೆ ಹೋಗುವ ಮುನ್ನ ಒಂದಷ್ಟು ತಯಾರಿ ಬೇಕು!

ವಸ್ತುಸ್ಥಿತಿಯನ್ನು ಯಥಾವತ್ತಾಗಿ ಚಿತ್ರಿಸುವುದು, ಇದ್ದದ್ದು ಇದ್ದ ಹಾಗೆ ಹೇಳುವುದು ಇಂದಿನ ದಿನದಲ್ಲಿ ಕಡಿಮೆ. ಎಲ್ಲರೂ ಅವರ ಮೂಗಿನ ನೇರಕ್ಕೆ ಮಾತನಾಡುತ್ತಾರೆ. ನಾವೇನೇ ಹೇಳಲಿ, ಬುದ್ಧವಂತ ಓದುಗ ನಿಜ ಸ್ಥಿತಿಯನ್ನು ಬಹುಬೇಗ ಗ್ರಹಿಸುತ್ತಾನೆ.

ದೇಶದಿಂದ ದೇಶಕ್ಕೆ ಬದುಕುವ ರೀತಿ ಬದಲಾಗುತ್ತಾ ಹೋಗುತ್ತದೆ. ಭಾಷೆ, ವೇಷ, ಆಹಾರ ಎಲ್ಲವೂ ಬದಲಾಗುತ್ತದೆ. ಒಂದಷ್ಟು ದಿನ ನೆಲೆ ನಿಂತು ಪ್ರೀತಿಯ ಕಣ್ಣಿಂದ ನೋಡಿದಾಗ ವ್ಯತ್ಯಾಸಗಳು ಕಡಿಮೆ ಅನಿಸತೊಡಗುತ್ತದೆ. ನಮ್ಮ ಪಲಾವ್ ಬಾರ್ಸಿಲೋನಾದ 'ಪೆಯೆಯ್ಯ' ದಲ್ಲಿ ಕಾಣಿಸತೊಡಗುತ್ತದೆ. ಬದುಕು ಆಪ್ತವಾಗುತ್ತಾ ಹೋಗುತ್ತದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?