ಜಗತ್ತಿನಲ್ಲಿ ಯುದ್ಧವೇ ಇಲ್ಲದೆ ಹೋದರೆ ನಲಿವಿನ ಪ್ರವಾಸ ಸಾಧ್ಯ!..
ಪ್ಯಾಲೇಸ್ ಎಂದೊಡನೆ ಭಾರತೀಯ ಮನಸುಗಳಲ್ಲಿ ಅಗಾಧ ಗಾತ್ರದ ಅರಮನೆಗಳ ಚಿತ್ರ ಸರಬರ ಓಡಾಡುತ್ತವೆ. ಆದರೆ ಈ ಪ್ಯಾಲೇಸ್ ಆಫ್ ಜಸ್ಟಿಸ್ ಒಂದು ಪುಟ್ಟದಾದ ಅನಾಕರ್ಷಣೀಯ ಕಟ್ಟಡ. 300 ಮೀಟರ್ ಅಡಿ ಎತ್ತರದ ಒಂದು ಕಪ್ಪು ಗುಡ್ಡದ ಮೇಲಿರುವ ಪ್ಯಾಲೇಸ್ ಆಫ್ ಜಸ್ಟಿಸ್ ಎರಡು ನೆಲಮಾಳಿಗೆ ಮತ್ತು ನಾಲ್ಕು ಅಂತಸ್ತಿನ ಮಹಡಿಗಳನ್ನು ಹೊಂದಿರುವ 2,37,000 ಚದರಡಿಯ ಕಟ್ಟಡ. ಅದರಲ್ಲಿ ಕೋಣೆ ಸಂಖ್ಯೆ 600 ಮತ್ತು 601 ಇಲ್ಲಿ ನ್ಯೂರೆಂಬರ್ಗ್ ನ್ಯಾಯ ಪ್ರಕ್ರಿಯೆ ನಡೆದದ್ದು ಅದಕ್ಕೇ ಅವುಗಳನ್ನು ಮ್ಯುಸಿಯಂ ಮಾದರಿಯಲ್ಲಿ ತಯಾರಿಸಿ ಪ್ರವಾಸಿಗನಿಗೆ ನೋಡಲು ತೆರೆದಿರಿಸಲಾಗಿದೆ.
-ಅಂಜಲಿ ರಾಮಣ್ಣ
What Next? ಇದು ಈಗ ಎಲ್ಲರ ಮನಸಿನಲ್ಲೂ ಎದ್ದಿರುವ ಪ್ರಶ್ನೆ. ಯಾವುದೋ ದೇಶ ಮತ್ತ್ಯಾವುದೋ ದೇಶದ ಮೇಲೆ ದಂಡೆತ್ತಿ ಹೋದರೂ ಯುದ್ಧದಲ್ಲಿ ಯಾವ ವಿಧದಲ್ಲಿಯೂ ಭಾಗಿಯಾಗದ ದೇಶಗಳು ಅನುಭವಿಸುತ್ತಿರುವ ಯಾತನೆಗೆ ಯಾರನ್ನು ಹೊಣೆ ಮಾಡುವುದು? ಯುದ್ಧ ನಿಂತ ನಂತರ ತಪ್ಪಿತಸ್ಥ ದೇಶಗಳನ್ನು ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯಗಳು ಪ್ರಕ್ರಿಯೆಗೆ ಒಳಪಡಿಸಿ ಶಿಕ್ಷೆ ನೀಡುತ್ತದೆಯೇ? ನೊಂದ ದೇಶಗಳಿಗೆ ಪರಿಹಾರ ಒದಗಿಸಿಕೊಡುತ್ತದೆಯೇ? ಸಾಮಾನ್ಯನೊಬ್ಬನ ಈ ಪ್ರಶ್ನೆಗಳಿಗೆ ಜರ್ಮನಿ ದೇಶದ ಅತೀ ದೊಡ್ಡ ರಾಜ್ಯವಾದ ಬವೇರಿಯಾದ ನ್ಯೂರಂಬರ್ಗ್ ಊರಿನ ಪ್ರವಾಸ ಮಾಡಿರುವ ಪ್ರವಾಸಿಯೊಬ್ಬ ಹೊಸ ಆಯಾಮ ನೀಡಬಲ್ಲ.
ಇದನ್ನೂ ಓದಿ: ಡಾರ್ಕ್ ಟೂರಿಸಂ ಸೃಷ್ಟಿಗಾಗಿ ಯುದ್ಧ ಬಯಸಬೇಕೇ?
1945ರಲ್ಲಿ ಎರಡನೆಯ ಮಹಾಯುದ್ಧ ಮುಗಿದಾಗ, ಸಂಯುಕ್ತ ರಾಷ್ಟ್ರಗಳು ಇಂಥದ್ದೇ ಪ್ರಶ್ನೆಗಳನ್ನು ಎದುರಿಸಿದವು. ನರಮೇಧ, ಆಕ್ರಮಣಕಾರಿ ಯುದ್ಧ ಮತ್ತು ಅಸ್ತಿತ್ವದಲ್ಲಿದ್ದ ಕಾನೂನುಗಳಲ್ಲಿ ಇನ್ನೂ ವ್ಯಾಖ್ಯಾನಿಸಲಾಗದೆ ಇರುವ ಅಪರಾಧಗಳಿಗೆ ಹೊಣೆಗಾರರಾದ ನಾಜಿ ನಾಯಕರನ್ನು ಏನು ಮಾಡಬೇಕು. ಅವರನ್ನು ತಕ್ಷಣ ಕೊಲ್ಲುವುದು ಪರಿಹಾರ ಎನಿಸಬಹುದು, ಆದರೆ ನ್ಯಾಯವು ಕಾಲಾನುಕಾಲದಲ್ಲಿ ಗಟ್ಟಿಯಾಗಿ ನಿಲ್ಲಬೇಕಾದರೆ ನಿರ್ಣಯಗಳು ಉದ್ವೇಗದಿಂದ ಕೂಡಿರಬಾರದು. ಜತೆಗೆ ನ್ಯಾಯಪೀಠದಲ್ಲಿ ಕುಳಿತುಕೊಂಡವರು ಅಧಿಕಾರ ಕಳೆದುಕೊಂಡರೆ ಅಶಾಂತಿ ಉಂಟಾಗುತ್ತದೆ. ಹಾಗೆಂದು ಅಪರಾಧಿಗಳನ್ನು ಮತ್ತು ಅಪರಾಧಗಳನ್ನು ನಿರ್ಲಕ್ಷಿಸುವುದು ಬಲಿಪಶುಗಳಿಗೆ ದ್ರೋಹ ಮಾಡಿದಂತೆ ಆಗುತ್ತದೆ. ಈ ಹಿನ್ನೆಲೆಯಲ್ಲಿ ನ್ಯೂರೆಂಬರ್ಗ್‌ನಲ್ಲಿ ʼಅಂತಾರಾಷ್ಟ್ರೀಯ ಸೇನಾ ನ್ಯಾಯಮಂಡಳಿʼ ಎಂಬ ಅಭೂತಪೂರ್ವ ನ್ಯಾಯಾಲಯ ಸ್ಥಾಪಿತವಾಗಿತ್ತು.
ಆಗ ಅಲ್ಲಿ ಅರಮನೆಯೊಂದಿತ್ತು. ಈಗ ಅದನ್ನು ಪ್ಯಾಲೇಸ್ ಆಫ್ ಜಸ್ಟಿಸ್ ಎಂದು ಕರೆಯಲಾಗುತ್ತಿದೆ. ಅಲ್ಲಿ ಈ ನ್ಯಾಯ ಮಂಡಳಿಯನ್ನು ಸ್ಥಾಪಿಸಿ 24 ಪ್ರಮುಖ ನಾಜಿಗಳನ್ನು ವಿಚಾರಣೆ ಮಾಡಲಾಯಿತು. ಈ ನ್ಯಾಯ ಮಂಡಳಿ ಸ್ಥಾಪಿತವಾಗುವ ಮೊದಲೇ ಹಿಟ್ಲರ್ ಆತ್ಮಹತ್ಯೆ ಮಾಡಿಕೊಂಡಿದ್ದ. ಅಮೆರಿಕ, ಬ್ರಿಟನ್, ಫ್ರಾನ್ಸ್ ಮತ್ತು ಸೋವಿಯತ್ ಒಕ್ಕೂಟದಿಂದ ಆಯ್ಕೆಯಾದ ನ್ಯಾಯಾಧೀಶರುಗಳು ನ್ಯಾಯ ಮಂಡಳಿಯ ನ್ಯಾಯಪೀಠದಲ್ಲಿ ಕುಳಿತಿದ್ದರು.

ಹಿಟ್ಲರ್‌ನ ಆಜ್ಞೆಯನ್ನು ಮಾತ್ರ ಪಾಲಿಸಿದ್ದೇವೆ ಎನ್ನುತ್ತಿದ್ದ ಪ್ರತಿವಾದಿಗಳ ಮೇಲೆ ನಾಲ್ಕು ಮುಖ್ಯ ಆರೋಪಗಳನ್ನು ಲಗತ್ತಿಸಲಾಯಿತು. ಸಂಚು, ವಿಶ್ವದಾದ್ಯಂತ ಅಶಾಂತಿ ಸೃಷ್ಟಿಸಿದ್ದು, ಯುದ್ಧ ಮಾಡಿದ್ದು ಮತ್ತು ನರಮೇಧ ಮಾಡಿದ್ದು ಈ ಆರೋಪಗಳ ಅಡಿಯಲ್ಲಿ ಪೋಲ್ಯಾಂಡ್ ದೇಶದ ಅಶ್ವಿಟ್ಜ್, ಬರ್ಕೆನವ್, ವಾರ್ಸ ಮತ್ತು ಜರ್ಮನಿಯ ಡಕಾವ್, ಆಸ್ಟ್ರಿಯಾ ದೇಶದ ಮೌತಸೆನ್ ಹೀಗೆ ಹಲವಾರು ದೇಶಗಳಲ್ಲಿ ಯಹೂದಿಯರನ್ನು ಸಾಮೂಹಿಕವಾಗಿ ಕೊಲ್ಲಲು ನಿರ್ಮಿಸಲಾಗಿದ್ದ ಸ್ಥಳಗಳು, ಅವರನ್ನು ಎಲ್ಲೆಡೆಯಿಂದ ಆ ಸ್ಥಳಗಳಿಗೆ ಕೊಂಡೊಯ್ಯುತ್ತಿದ್ದ ರೈಲುಗಳ ಕುರುಹು, ವೇಳಾಪಟ್ಟಿ, ನಂತರ ತೆಗೆಯಲಾಗುತ್ತಿದ್ದ ಫೊಟೋಗಳು, ರೆಜಿಸ್ಟರಿಗಳು, ದಾಖಲಾಗಿದ್ದ ದ್ವೇಷ ಭಾಷಣಗಳು, ಹೀಗೆ ಹಲವಾರು ದಾಖಲೆಗಳನ್ನು ಬಳಸಿ ನ್ಯಾಯಾಲಯದ ಪ್ರಕ್ರಿಯೆ ನಡೆಸಲಾಯಿತು. ಕೊನೆಯಲ್ಲಿ, 1946 ಅಕ್ಟೋಬರ್ 1 ರಂದು, 12 ಮಂದಿಗೆ ಗಲ್ಲು ಶಿಕ್ಷೆ, 3 ಮಂದಿಗೆ ಜೀವಾವಧಿ, 4 ಮಂದಿಗೆ ಕಾರಾಗೃಹ ಶಿಕ್ಷೆ ನೀಡಲಾಯಿತು. 3 ಮಂದಿ ನಿರಪರಾಧಿಗಳಾಗಿ ಬಿಡುಗಡೆಯಾದರು. ಇದೊಂದು ಐತಿಹಾಸಿಕ ನ್ಯಾಯ ಪ್ರಕ್ರಿಯೆ ಎಂದು ದಾಖಲಾದ ಕಾರಣ ಜರ್ಮನಿ ದೇಶದ ಬವೇರಿಯಾ ರಾಜ್ಯದ ನ್ಯೂರಂಬರ್ಗ್ ಊರಿನಲ್ಲಿ ಪ್ಯಾಲೇಸ್ ಆಫ್ ಜಸ್ಟಿಸ್ ಸ್ಥಳವನ್ನು ಪ್ರವಾಸಿ ತಾಣವನ್ನಾಗಿ ಮಾಡಲಾಗಿದೆ.
ಪ್ಯಾಲೇಸ್ ಎಂದೊಡನೆ ಭಾರತೀಯ ಮನಸುಗಳಲ್ಲಿ ಅಗಾಧ ಗಾತ್ರದ ಅರಮನೆಗಳ ಚಿತ್ರ ಸರಬರ ಓಡಾಡುತ್ತವೆ. ಆದರೆ ಈ ಪ್ಯಾಲೇಸ್ ಆಫ್ ಜಸ್ಟಿಸ್ ಒಂದು ಪುಟ್ಟದಾದ ಅನಾಕರ್ಷಣೀಯ ಕಟ್ಟಡ. 300 ಮೀಟರ್ ಅಡಿ ಎತ್ತರದ ಒಂದು ಕಪ್ಪು ಗುಡ್ಡದ ಮೇಲಿರುವ ಪ್ಯಾಲೇಸ್ ಆಫ್ ಜಸ್ಟಿಸ್ ಎರಡು ನೆಲಮಾಳಿಗೆ ಮತ್ತು ನಾಲ್ಕು ಅಂತಸ್ತಿನ ಮಹಡಿಗಳನ್ನು ಹೊಂದಿರುವ 2,37,000 ಚದರಡಿಯ ಕಟ್ಟಡ. ಅದರಲ್ಲಿ ಕೋಣೆ ಸಂಖ್ಯೆ 600 ಮತ್ತು 601 ಇಲ್ಲಿ ನ್ಯೂರೆಂಬರ್ಗ್ ನ್ಯಾಯ ಪ್ರಕ್ರಿಯೆ ನಡೆದದ್ದು ಅದಕ್ಕೇ ಅವುಗಳನ್ನು ಮ್ಯೂಸಿಯಂ ಮಾದರಿಯಲ್ಲಿ ತಯಾರಿಸಿ ಪ್ರವಾಸಿಗನಿಗೆ ನೋಡಲು ತೆರೆದಿರಿಸಲಾಗಿದೆ. ಅಲ್ಲಿ ಅಪರಾಧಿಗಳು, ವಕೀಲರು, ಕ್ಲರ್ಕುಗಳು ಕುಳಿತಿದ್ದ ಜಾಗದಲ್ಲಿ ನಾವುಗಳು ಕುಳಿತುಕೊಳ್ಳಬಹುದು. ಆಗ ಬಳಸಲಾಗಿದೆ ಎನ್ನಲಾದ ಮೈಕುಗಳು ಈಗಲೂ ಕೆಲಸ ಮಾಡುವಂತೆ ನೋಡಿಕೊಳ್ಳಲಾಗಿದೆ. ಸಾಕ್ಷಿಗಳಾಗಿ ಬಳಸಲಾದ ಸಾವಿರಾರು ಪುಟಗಳ ದಾಖಲೆಗಳನ್ನು ಅಲ್ಲಿಯೇ ಕುಳಿತು ಓದಬಹುದು. ಆಡಿಯೋ ಮಾದರಿಗಳನ್ನು ಕಿವಿಗೆ ಸಿಕ್ಕಿಸಿಕೊಂಡು ಅಂದಿನ ಪ್ರಕ್ರಿಯೆಯ ಇಂಚು ಇಂಚನ್ನೂ ಕಣ್ಮುಂದೆ ತಂದುಕೊಳ್ಳುವಂಥ ವ್ಯವಸ್ಥೆ ಅಲ್ಲಿದೆ. ಈ ಎರಡು ಕೋಣೆಗಳನ್ನು ಬಿಟ್ಟು ಉಳಿದ ಜಾಗದಲ್ಲಿ ಬವೇರಿಯಾ ರಾಜ್ಯ ಸರಕಾರದ ಸರಿಸುಮಾರು 448 ಕಚೇರಿಗಳು ಇಂದಿಗೆ ಅಲ್ಲಿ ಕಾರ್ಯ ನಿರ್ವಹಿಸುತ್ತಿವೆ.

ಅಂದಿನ ನ್ಯೂರೆಂಬರ್ಗ್ ಟ್ರೈಯಲ್ ಇಂದಿನ ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯ (International Criminal Court) ವನ್ನು ಪ್ರಾಕೃತಿಕ ನ್ಯಾಯ ತತ್ವಗಳ ಮೇಲೆ ರಚಿಸಿಕೊಳ್ಳಲು ಪ್ರೇರಣೆಯಾಯಿತು. 17 ಜುಲೈ 1998ರಲ್ಲಿ ವಿಶ್ವಸಂಸ್ಥೆಯ ಮಾದರಿಯಲ್ಲಿಯೇ ದೇಶದೇಶಗಳು ಮುಂದೆ ಬಂದು ಈ ಅಪರಾಧ ನ್ಯಾಯಾಲಯವನ್ನು ಸ್ಥಾಪಿಸಿಕೊಂಡರೂ ನ್ಯೂರೆಂಬರ್ಗಿನ ನ್ಯಾಯ ಮಂಡಳಿಗೆ ಇರುವಂಥ ಅಧಿಕಾರ ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯಕ್ಕೆ ಇಲ್ಲ. ಯಾವ ದೇಶಗಳು ಅದರ ಸದಸ್ಯತ್ವವನ್ನು ಪಡೆದಿವೆಯೋ ಆ ದೇಶಗಳು ಇತರೆ ದೇಶಗಳ ಮೇಲೆ ಯುದ್ಧ ಸಾರಿದರೆ ಅಥವಾ ಸದಸ್ಯ ದೇಶಗಳಿಗೆ ಬೇರೆ ಯಾವುದೇ ದೇಶಗಳ ನಡುವೆ ನಡೆದ ಯುದ್ಧದಿಂದ ಹೊಡೆತ ಬಿದ್ದಿದ್ದರೆ ಆ ದೇಶದ ಮನವಿಯ ಮೇರೆಗೆ ಮಾತ್ರ ಪ್ರಕ್ರಿಯೆಯನ್ನು ನಡೆಸಲು ಸಾಧ್ಯವಾಗುವ ಸೀಮಿತ ಅಧಿಕಾರವ್ಯಾಪ್ತಿ ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯಕ್ಕೆ ಇರುವುದು.
ಈಗ ಯುದ್ಧ ಸಾರಿರುವ ಅಮೆರಿಕ, ಇಸ್ರೇಲ್ ಮತ್ತು ಇರಾನ್ ದೇಶಗಳಾಗಲೀ ಪರೋಕ್ಷವಾಗಿ ದಾಳಿಗೆ ತುತ್ತಾಗಿರುವ ದುಬೈ ಮತ್ತಿತರೇ ಸೌದಿ ಅರೇಬಿಯಾದ ದೇಶಗಳಾಗಲೀ ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯದ ಸದಸ್ಯತ್ವವನ್ನು ಹೊಂದಿಲ್ಲ. ಹಾಗಾಗಿ ಈ ಯುದ್ಧದ ನಂತರವೂ ನ್ಯಾಯಾಲಯವು ಏನೂ ಮಾಡಲು ಆಗುವುದಿಲ್ಲ. ಅಫ್ಘಾನಿಸ್ತಾನವು ಈ ನ್ಯಾಯಾಲಯದ ಸದಸ್ಯ ಆಗಿದ್ದರೂ, ಯುದ್ಧದಿಂದ ನೊಂದಿದ್ದರೂ ಬಲಿಷ್ಠ ರಾಷ್ಟ್ರಗಳನ್ನು ವಿಚಾರಣೆಗೆ ಗುರಿಪಡಿಸಿ ಎಂದು ಮನವಿ ಮಾಡಿಕೊಳ್ಳಲಾರದು. ಹಾಗಾಗಿ ನ್ಯೂರೆಂಬರ್ಗ್ ನ್ಯಾಯಪ್ರಕ್ರಿಯೆಯನ್ನು ನೆನಪು ಮಾಡಿಕೊಂಡು ಈಗ ನಡೆಯುತ್ತಿರುವ ಎಲ್ಲಾ ಯುದ್ಧಗಳ ಕೊನೆಗೂ ನೊಂದವರಿಗೆ ನ್ಯಾಯ ಸಿಗಬೇಕು ಎಂದು ಬಯಸುವುದು ಕಾಲಾಪಹರಣ ಮಾತ್ರ.
ಅಂದಹಾಗೆ 2000ನೆಯ ಇಸವಿಯಲ್ಲಿ ಭಾರತ ದೇಶವು ರೋಮ್ ಒಡಂಬಡಿಕೆಯ (Rome Statute) ಮೂಲಕ ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯದ ಸದಸ್ಯತ್ವವನ್ನು ಪಡೆದಿತ್ತು. ಆದರೆ ತನ್ನ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆಯಾಗುತ್ತದೆ ಎನ್ನುವ ಕಾರಣಕ್ಕೆ 2013ರಲ್ಲಿ ಸದಸ್ಯತ್ವ ನವೀಕರಣಕ್ಕೆ ಒಪ್ಪಿಗೆ ಕೊಡಲಿಲ್ಲ ಹಾಗಾಗಿ ಈಗ ಭಾರತ ಈ ನ್ಯಾಯಾಲಯದ ಸದಸ್ಯ ರಾಷ್ಟ್ರ ಆಗಿರುವುದಿಲ್ಲ. ಒಂದು ಪ್ರವಾಸ ಎಷ್ಟೆಲ್ಲಾ ಪಾಠ ಕಲಿಸಿಕೊಡುತ್ತದೆ ಯುದ್ಧದಲ್ಲೂ, ಶಾಂತಿಯಲ್ಲೂ. ಆದರೆ ನೆಮ್ಮದಿಯ ಕಲಿಕೆ, ನಲಿವಿನ ಪ್ರವಾಸ ಸಾಧ್ಯವಾಗುವುದು ಮಾತ್ರ ಯುದ್ಧವೆ ಇಲ್ಲದಾಗಷ್ಟೇ.