ಸೆಲ್ಫೀ ಟ್ರೆಂಡ್ ಹೇಗೆ ಶುರುವಾಯಿತು ಗೊತ್ತಾ?
ಬ್ರಾಡ್ಲೆ ಕೂಪರ್ 2014ರಲ್ಲಿ ತೆಗೆದ ಆಸ್ಕರ್ ಸೆಲ್ಫೀ ʼಗ್ರೂಪ್ ಸೆಲ್ಫೀʼಯಾಗಿತ್ತು. ಅದರಲ್ಲಿ ಎಲಾನ್ ಡಿ ಜೆನೆರಸ್, ಬ್ರಾಡ್ ಪಿಟ್, ಏಂಜಲೀನ ಜೋಲಿ, ಜೂಲಿಯಾ ರಾಬರ್ಟ್ಸ್ ಇದ್ದರು. ಇದು ಖ್ಯಾತನಾಮರ ಪ್ರಸಿದ್ಧ ಸೆಲ್ಫೀಯಾಗಿತ್ತು. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಎರಡು ಗಂಟೆಯೊಳಗೆ ಅಂದು ಇಪ್ಪತ್ತು ಲಕ್ಷ ವೀಕ್ಷಣೆಯಾಗಿತ್ತು!
- ಅನಂತ್ ಹರಿತ್ಸ
ಪ್ರಪಂಚದ ಪ್ರಪ್ರಥಮ ಸೆಲ್ಫಿಯನ್ನು ತೆಗೆದುಕೊಂಡದ್ದು 1839ರಲ್ಲಿ. ಅಮೆರಿಕ ಪೆನ್ಸಲ್ವೇನಿಯಾ ಫಿಲಿಡೆಲ್ಫಿಯಾದ ಛಾಯಾಗ್ರಾಹಕ ರಾಬರ್ಟ್ ಕಾರ್ನೇಲಿಯಸ್ ತನ್ನ ಡೆಗ್ಗೊರೆಟೈಪ್ ಕ್ಯಾಮೆರಾವನ್ನು ಬಳಸಿ ಸ್ವಯಂ ಛಾಯಾಚಿತ್ರವನ್ನು ತೆಗೆದ. ತನ್ನ ಮನೆಯ ಗ್ಯಾಸ್ ಲೈಟ್ ಸ್ಟೋರ್‌ನಲ್ಲಿ ಬೆಳ್ಳಿಯ ಪ್ಲೇಟ್ ಬಳಸಿ ತೆಗೆದುಕೊಂಡ ಈ ಚಿತ್ರ ಪ್ರಪಂಚದ ಪ್ರಪ್ರಥಮ ಸ್ವಯಂ ಛಾಯಾಚಿತ್ರವೆಂದು ಪರಿಗಣಿಸಲ್ಪಟ್ಟಿತು. ಕ್ಯಾಮೆರಾದ ಮಸೂರದ ಮುಚ್ಚಳವನ್ನು ತೆಗೆದಿಟ್ಟು ಬೆಳ್ಳಿಯ ಪ್ಲೇಟಿನ ಮೇಲೆ ಬೆಳಕು ಹರಿಯುವಂತೆ ಮಾಡಿ, ಓಡಿ ಹೋಗಿ ಕ್ಯಾಮೆರದ ಎದುರು ಚಿತ್ರದ ಫ್ರೇಮಿಗೆ ಸರಿಯಾಗಿ ಅಲುಗಾಡದೆ ರಾಬರ್ಟ್ ಕುಳಿತುಕೊಳ್ಳುತ್ತಾನೆ. ಬೆಳ್ಳಿಯ ಪ್ಲೇಟಿಗೆ ಬೆಳಕು ಹರಿದು ಚಿತ್ರವು ಮೂಡಲು ಹದಿನೈದು ನಿಮಿಷ ತಗಲುತ್ತಿತ್ತು. ಅಲ್ಲಿಯವರೆಗೂ ರಾಬರ್ಟ್ ಅಲುಗಾಡದೆ ಕುಳಿತಿದ್ದನು. ಮೊದಲೆಲ್ಲ ಕ್ಯಾಮೆರಾದ ಬೆಳ್ಳಿಯ ಪ್ಲೇಟಿನಲ್ಲಿ ಚಿತ್ರ ಮೂಡಿಸಲು ಅರ್ಧಗಂಟೆಯಾದರೂ ಮಿಸುಕಾಡದೆ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳಬೇಕಿತ್ತು. ಆಗ ವ್ಯಕ್ತಿಯ ತಲೆಯು ಅಲ್ಲಾಡದಿರಲೆಂದು ಕ್ಲಾಂಪ್ ಹಾಕಿ ಕೂರಿಸಲಾಗುತಿತ್ತು.
1914ರಲ್ಲಿ ರಷ್ಯಾದ ಅನಸ್ತೇಷಿಯ ನಿಕೊಲ್ವಾನ, ಕನ್ನಡಿಯಲ್ಲಿ ತನ್ನ ಚಿತ್ರವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಾಳೆ. ಅದನ್ನು ಮೊದಲ ʼಮಿರರ್ ಸೆಲ್ಫೀʼ ಎನ್ನಲಾಯಿತು.
ಇದನ್ನೂ ಓದಿ: ಭಾರತದಲ್ಲಿ ಮೊದಲ ಕ್ಯಾಮೆರಾ ತಯಾರಾಗಿದ್ದು ಹೇಗೆ ಗೊತ್ತಾ?
ಎರಡು ಗಂಟೆಯೊಳಗೆ 20 ಲಕ್ಷ ವೀಕ್ಷಣೆ
ಬ್ರಾಡ್ಲೆ ಕೂಪರ್ 2014ರಲ್ಲಿ ತೆಗೆದ ಆಸ್ಕರ್ ಸೆಲ್ಫೀ ʼಗ್ರೂಪ್ ಸೆಲ್ಫೀʼಯಾಗಿತ್ತು. ಅದರಲ್ಲಿ ಎಲಾನ್ ಡಿ ಜೆನೆರಸ್, ಬ್ರಾಡ್ ಪಿಟ್, ಏಂಜಲೀನ ಜೋಲಿ, ಜೂಲಿಯಾ ರಾಬರ್ಟ್ಸ್ ಇದ್ದರು. ಇದು ಖ್ಯಾತನಾಮರ ಪ್ರಸಿದ್ಧ ಸೆಲ್ಫೀಯಾಗಿತ್ತು. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಎರಡು ಗಂಟೆಯೊಳಗೆ ಅಂದು ಇಪ್ಪತ್ತು ಲಕ್ಷ ವೀಕ್ಷಣೆಯಾಗಿತ್ತು!
ಚರ್ಚೆ ಹುಟ್ಟುಹಾಕಿದ್ದ ಸೆಲ್ಫೀ
ಡ್ಯಾನಿಷ್ ಪ್ರಧಾನಿ ಹೆಲ್ಲೆ ತೋರಿಂಗ್ ಶಮಿಡ್ ತೆಗೆದ ಸೆಲ್ಫೀ ಪ್ರಸಿದ್ದ ರಾಜಕೀಯ ನಾಯಕರುಗಳ ಗ್ರೂಪ್ ಸೆಲ್ಫೀಯಾಗಿತ್ತು. ಇದನ್ನು ನೆಲ್ಸನ್ ಮಂಡೇಲಾ ಮೆಮೋರಿಯಲ್ ಹಾಲ್‌ನಲ್ಲಿ 2013ರಲ್ಲಿ ತೆಗೆಯಲಾಯಿತು. ಚಿತ್ರದಲ್ಲಿ ಹೆಲ್ಲೆ ತೋರಿಂಗ್ ಶಮಿಡ್ ಜತೆಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಹಾಗೂ ಡೇವಿಡ್ ಕ್ಯಾಮರೂನ್ ಇದ್ದರು. ಈ ಸೆಲ್ಫೀಯು ರಾಜಕೀಯ ಚರ್ಚೆಯನ್ನು ಹುಟ್ಟುಹಾಕಿತು. ಅದೊಂದೆ ಏನು? ನಮ್ಮ ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಇಟಾಲಿಯ ಪ್ರಧಾನಿ ಜಾರ್ಜಿಯೊ ಮೊಲೋನಿಯವರ ಮೆಲೋಡಿ ಸೆಲ್ಫೀ ಬಹಳಷ್ಟು ಪರ-ವಿರೋಧ ಚರ್ಚೆಗೆ ಆಸ್ಪದ ನೀಡಿತು.

ಭಾರತದ ಮೊದಲ ಸೆಲ್ಫೀ
ಭಾರತದ ಮೊದಲ ಸೆಲ್ಫೀ ತೆಗೆದುಕೊಂಡದ್ದು 1880ರಲ್ಲಿ. ತ್ರಿಪುರದ ರಾಜ ಮಹಾರಾಜಾ ಬೀರ್ ಚಂದ್ರ ಮಾಣಿಕ್ಯ ಮತ್ತು ಆತನ ಮಡದಿ ರಾಣಿ ಕೂಮನ್ ಚಾನೂ ಮನಮೋಹಿನೀ ದೇವಿ. ಇವರು ಛಾಯಾಗ್ರಹಣದಲ್ಲಿ ಅಪಾರವಾದ ಆಸಕ್ತಿ ಹೊಂದಿದ್ದಲ್ಲದೆ ಕಲೆಗೆ ಒತ್ತು ನೀಡಿದ್ದರು. ಅಗರ್ತಲ ನಗರವನ್ನು ಆಧುನೀಕರಣಗೊಳಿಸಿದ ಕೀರ್ತಿ ಮಹಾರಾಜಾ ಬೀರ್ ಚಂದ್ರ ಮಾಣಿಕ್ಯರದ್ದು. ಅವರು ಒಂದು ಉದ್ದನೆಯ ಕೊಳವೆಗೆ ಹಗ್ಗವನ್ನು ಅಳವಡಿಸಿ ಕ್ಯಾಮೆರಾ ಮಸೂರದ ಮುಚ್ಚಳವನ್ನು ತೆಗೆಯುವಂತೆ ಬಳಸಿ, ತಾವು ರಾಣಿಯೊಡನೆ ಆಪ್ತವಾಗಿ ಕುಳಿತಿರುವ ಚಿತ್ರವನ್ನು ಯಾವ ಛಾಯಾಗ್ರಾಹಕರ ಸಹಾಯವಿಲ್ಲದೆ ಸ್ವಯಂ ತೆಗೆದುಕೊಂಡರು. ಅದುವೇ ಭಾರತದ ಪ್ರಪ್ರಥಮ ಸೆಲ್ಫೀಯಾಗಿ ಗುರುತಿಸಿಕೊಂಡಿತು.

ಇಂದೋರಿನ ರಾಜ ದೀನ್ ದಯಾಳ್ ನಂತರ ಕ್ಯಾಮೆರಾವನ್ನು ಹೊಂದಿದ್ದ ಭಾರತದ ಎರಡನೆಯ ರಾಜ ರಾಜ ಬೀರ್ ಚಂದ್ರ ಆಗಿದ್ದರು. ಮಡದಿ ರಾಣಿ ಕೂಮನ್ ಚಾನೂ ಮನಮೋಹಿನೀ ದೇವಿ ಸಹ ಛಾಯಗ್ರಾಹಕಿಯಾಗಿದ್ದರು. ರಾಜ ಬೀರ್ ಚಂದ್ರ ಮಾಣಿಕ್ಯ ಕ್ಯಾಮೆರಾವನ್ನು ಬಳಸುವ ವಿಧಾನವನ್ನು ಸ್ವತಃ ಕಲಿತಿದ್ದರು. ಸಂಸ್ಕರಣೆಯನ್ನೂ ತಾವೇ ಮಾಡಲು ತಿಳಿದಿದ್ದರು. ರಾಸಾಯನಿಕಗಳನ್ನು ಹತ್ತಿರದ ಕಲ್ಕತ್ತಾದಿಂದ ತರಿಸಿಕೊಳ್ಳುತ್ತಿದ್ದ ಅವರು ತಮ್ಮದೆ ಸುಸಜ್ಜಿತ ಸಂಸ್ಕರಣ ಲ್ಯಾಬನ್ನು ಹೊಂದಿದ್ದರು. ಅವರ ಛಾಯಾಗ್ರಹಣದ ಆಸಕ್ತಿ ಎಷ್ಟಿತ್ತು ಎಂದರೆ ಅಗರ್ತಲದ ತಮ್ಮ ಅರಮನೆಯಲ್ಲಿ ಕ್ಯಾಮೆರಾ ಕ್ಲಬ್ ಸ್ಥಾಪಿಸಿದ್ದರು. ತಾವು ತೆಗೆದ ಚಿತ್ರಗಳ ಪ್ರದರ್ಶನವನ್ನು ಏರ್ಪಡಿಸುತ್ತಿದ್ದರು.
ಇದನ್ನೂ ಓದಿ: ಕ್ಯಾಮೆರಾ ಚರಿತೆ
ಬೀರ್ ಚಂದ್ರ 1896ರಲ್ಲಿ ವಿಧಿವಶರಾದರು. ರಾಣಿ ಮನಮೋಹಿನಿ ದೇವಿ 1905ರಲ್ಲಿ ವಿಧಿವಶರಾದರು. ಅವರ ಮೂರು ಗಂಡು ಮಕ್ಕಳು ಸಹ ಪ್ರಸಿದ್ದ ಛಾಯಾಗ್ರಾಹಕರಾಗಿದ್ದರು.
ಸೆಲ್ಫೀ ಎನ್ನುವುದು ಬರಿಯ ಸ್ವಯಂ ಛಾಯಾಗ್ರಹಣವಲ್ಲ; ಕಾಲಕ್ಕೆ ತಕ್ಕಂತೆ ಬದಲಾಗುವ ಫ್ಯಾಷನ್. ಟ್ರೆಂಡಿಗೆ ಸರಿಯಾಗಿ ಸೆಲ್ಫೀಗೂ ಹೊಸ ಹೊಸ ಹೆಸರುಗಳು ಜನಪ್ರಿಯವಾಗುತ್ತಿವೆ. ಕನ್ನಡಿಯ ಮುಂದೆ ನಿಂತು ಫೊಟೋ ಕ್ಲಿಕ್ಕಿಸಿಕೊಂಡರೆ ʼMirror Selfiʼ ಎಂತಲೂ ಒಂದಷ್ಟು ಜನರು ಕೂಡಿದಾಗ ತೆಗೆದ ಚಿತ್ರಕ್ಕೆ ʼGroufieʼ ಅಥವಾ ʼUsieʼ ಎಂದು ಕರೆಯುತ್ತಾರೆ. ಎಲ್ಲವೂ ಅಪ್‌ಡೇಟ್ ಅಗುತ್ತಿರುತ್ತದೆ. ಹಳತನದಿಂದ ಕಲಿತು ಹೊಸದಾಗಬೇಕು ಅಷ್ಟೆ.