• ಅಂಜಲಿ ರಾಮಣ್ಣ

ರಕ್ತಕ್ಕೆ ಅಂಟಿದೆಯೇನೋ ಎನ್ನುವ ಅನುಮಾನ ಬರುವಷ್ಟು ಕೊಳಕುತನ ಇರುವ ಬಹುಪಾಲು ಭಾರತೀಯರ ನಡವಳಿಕೆಗೆ ತೀರಾ ವಿಭಿನ್ನವಾಗಿ ಭೂಪಟದಲ್ಲಿ ಗುರುತಿಸಿಕೊಂಡಿರುವ ಹಳ್ಳಿಯೊಂದು ನಮ್ಮಲ್ಲೇ ಇದೆ. ಅಲ್ಲಿಗೆ ಹೋದಾಗ ಅರೆ, ಇದು ಭಾರತ ದೇಶವೇ ಏನು? ಎನ್ನುವ ಅನುಮಾನ ಬರದಿದ್ದರೆ ನನ್ನಾಣೆ! ತನ್ನ ಪಾಡಿಗೆ ತಾನು ತಣ್ಣಗೆ, ನಿರುಮ್ಮಳವಾಗಿ ಕುಳಿತಿದ್ದ ಈ ಜಾಗಕ್ಕೆ ಯಾವಾಗ ಏಷ್ಯಾ ಖಂಡದ ಸ್ವಚ್ಛ ಗ್ರಾಮ ಎನ್ನುವ ಬಿರುದು ಬಂದಿತೋ ಆಗಿನಿಂದ ಅದು ಸುಳ್ಳೋ ನಿಜವೋ ಎಂದು ನೋಡಲಷ್ಟೇ ಸಾವಿರಾರು ಜನ ಪ್ರವಾಸಿಗಳು ಅಲ್ಲಿಗೆ ಹೋಗಲು ಶುರುವಿಟ್ಟರು. ಕೇವಲ 600ರಿಂದ 700 ಜನರು ವಾಸವಿರುವ ಈ ಪುಟ್ಟ ಗ್ರಾಮಕ್ಕೆ ಶನಿವಾರ ಮತ್ತು ಭಾನುವಾರಗಳಂದು ಭೇಟಿ ಕೊಡುವ ಪ್ರವಾಸಿಗರ ಸಂಖ್ಯೆ ಬರೋಬರಿ ಒಂದು ಸಾವಿರ!

ಇದನ್ನೂ ಓದಿ: ಬರಬೇಡ..ಬರಬೇಡ..ನನಗೆ ಪ್ರವಾಸಿಗರು ಬೇಕಿಲ್ಲ...!

ಪ್ರವಾಸಿಗಳಿಂದಲೇ ಪ್ರಸಿದ್ಧಿಗೆ ಬಂದ ಈ ಹಳ್ಳಿ ಈಗ ‘Sunday No Tourists’ ಎನ್ನುವ ಬೋರ್ಡ್ ತಗುಲಿಸಿಕೊಂಡು ಭಾನುವಾರಗಳಂದು ತನ್ನಲ್ಲಿಗೆ ಪ್ರವಾಸಿಗಳು ಬರುವುದನ್ನು ನಿಷೇಧಿಸಿಬಿಟ್ಟಿದೆ. ಇಲ್ಲಿನ ವಾಸಿಗಳು ಈಗ ವಾರದಲ್ಲಿ ಒಂದು ದಿನ ತಮ್ಮ ಜೀವನ ತಮಗಾಗಿ ಮಾತ್ರ ಎನ್ನುವ ನಿರ್ಧಾರಕ್ಕೆ ಬಂದು ಬಿಟ್ಟಿದ್ದಾರೆ. 2026ರ ಜನವರಿಯಿಂದ, ಗ್ರಾಮಕ್ಕೆ ಹೋಗುವ ಏಕೈಕ ರಸ್ತೆಯ ಮೇಲೆ ನಿರ್ಮಿಸಲಾಗಿರುವ ಕಪ್ಪು ಕಬ್ಬಿಣದ ಗೇಟ್‌ಗಳನ್ನು ಭಾನುವಾರಗಳಂದು ಬೀಗ ಹಾಕಿ ಕಾವಲು ಕಾಯಲಾಗುತ್ತಿದೆ. ನಿವಾಸಿಗಳು ಅನಿರೀಕ್ಷಿತ ಹೆಜ್ಜೆಯನ್ನಿಟ್ಟು ಭಾನುವಾರದಂದು ದಿನದ ಪ್ರವಾಸಿಗರನ್ನು ನಿಷೇಧಿಸಿದ್ದಾರೆ, ಪ್ರವಾಸಿಗರನ್ನು ಮತ್ತು ಅವರು ತರುವ ಆದಾಯವನ್ನು ತಿರಸ್ಕರಿಸುತ್ತಿದ್ದಾರೆ.

Untitled design - 2026-07-12T155552.410

ವೀಕ್‍ಎಂಡ್ ಮೋಜಿಗಾಗಿ ಅಲ್ಲಿ ಹೂ ಕಣಿವೆಯಂಥ ರಸ್ತೆಗಳ ನಡುವಿನಲ್ಲಿ ಅಡ್ಡಾಡಿ ಕನ್ನಡಿಯಷ್ಟು ಸ್ವಚ್ಛ ರಸ್ತೆಗಳ ಮೇಲೆ ವಿವಿಧ ಭಂಗಿಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ಪ್ರವಾಸಿಗರು ಈಗ ಸೋಮವಾರದ ಸೂರ್ಯೋದಯಕ್ಕೆ ಕಾಯಬೇಕಾಗಿದೆ. ಪ್ರವಾಸೋದ್ಯಮದಿಂದ ಅದೃಷ್ಟ ಬದಲಿಸಿಕೊಂಡ ಗ್ರಾಮವೊಂದು ವಾರದಲ್ಲಿ ಒಂದು ದಿನ ತನ್ನನ್ನು ತಾನು ಏಕೆ ಮುಚ್ಚಿಕೊಳ್ಳುತ್ತದೆ? ಅಲ್ಲಿನ ವಾಸಿಗಳ ಪ್ರಕಾರ ಈ ನಿಷೇಧವು ತಾವು ‘ನೈಜ ಗ್ರಾಮೀಣ ಜೀವನ’ ಎಂದು ಕರೆಯುವುದನ್ನು ಮರಳಿ ಪಡೆಯುವ ಪ್ರಯತ್ನವಾಗಿದೆ.

ಭಾರತದ ಈಶಾನ್ಯ ರಾಣಿ ಎಂದು ಕರೆಯಲಾಗುವ ಮೇಘಾಲಯ ರಾಜ್ಯದಲ್ಲಿ ಬಾಂಗ್ಲಾದೇಶದ ಗಡಿಯಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ಹಳ್ಳಿ ಮಾವ್ಲಿನ್ನಾಂಗ್. 2003ರಲ್ಲಿ ಡಿಸ್ಕವರ್ ಇಂಡಿಯಾ ನಿಯತಕಾಲಿಕವು ಇದನ್ನು ಏಷ್ಯಾದ ಅತ್ಯಂತ ಸ್ವಚ್ಛ ಗ್ರಾಮ ಎಂದು ಹೆಸರಿಸಿದ ನಂತರ ಜನಪ್ರಿಯ ಪ್ರವಾಸಿ ಆಕರ್ಷಣೆಯಾಯಿತು. ನೈರ್ಮಲ್ಯದ ಕೊರತೆಗೆ ಹೆಸರಾದ ನಮ್ಮ ದೇಶದಲ್ಲಿ ಇದು ಸಣ್ಣ ಸಾಧನೆಯಲ್ಲ. ಮಾವ್ಲಿನ್ನಾಂಗ್‌ನಲ್ಲಿ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಸ್ವಚ್ಛತೆಯನ್ನು ಕಲಿಸಲಾಗುತ್ತದೆ. ಅನೇಕರು ಶಾಲೆಗೆ ಹೋಗುವ ಮೊದಲು ಪ್ರತಿ ಬೆಳಗ್ಗೆ ಬೀದಿಗಳಿಗೆ ಇಳಿದು ಒಣಗಿದ ಎಲೆಗಳನ್ನು ಗುಡಿಸಿ, ಕಸದ ಬುಟ್ಟಿಗಳನ್ನು ಖಾಲಿ ಮಾಡುತ್ತಾರೆ. ಗ್ರಾಮಸ್ಥರು ಜೈವಿಕ ವಿಘಟನೀಯ ತ್ಯಾಜ್ಯವನ್ನು ವಿಲೇವಾರಿ ಮಾಡುತ್ತಾರೆ ಮತ್ತು ಸಾರ್ವಜನಿಕ ಭಾಗೀದಾರಿಕೆಯ ತೋಟಗಾರಿಕೆಯ ಬಗ್ಗೆ ಹೆಮ್ಮೆ ಪಡುತ್ತಾರೆ.

2014ರಲ್ಲಿ ತಮ್ಮ ರಾಷ್ಟ್ರೀಯ ಸ್ವಚ್ಛ ಭಾರತ ಅಭಿಯಾನವನ್ನು ಪ್ರಾರಂಭಿಸಿದ ಸ್ವಲ್ಪ ಸಮಯದ ನಂತರ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರೇಡಿಯೋ ಭಾಷಣದಲ್ಲಿ ಗ್ರಾಮದ ಬಗ್ಗೆ ಮತ್ತಷ್ಟು ಗಮನ ಸೆಳೆದರು. ‘ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ನಿವಾಸಿಗಳ ಅಭ್ಯಾಸವಾಗಿದೆ’ ಎಂದು ಅಲ್ಲಿನ ಸ್ವಚ್ಛತಾ ಸಂಸ್ಕೃತಿಯ ದೇಶವೇ ತಿರುಗಿ ನೋಡುವಂತೆ ಮಾಡಿದರು. ಇದರ ಪಾರ್ಶ್ವ ಪರಿಣಾಮ ನಿವಾಸಿಗಳು ಕೃಷಿ ಕೆಲಸದಿಂದ ಪ್ರವಾಸೋದ್ಯಮಕ್ಕೆ ತಿರುಗಿ, ಅತಿಥಿಗೃಹಗಳು ಮತ್ತು ರೆಸ್ಟೋರೆಂಟ್‌ಗಳನ್ನು ತೆರೆದರು. ಸ್ಮರಣಿಕೆ ಮತ್ತು ಚಹಾ ಅಂಗಡಿಗಳಿಂದ ಸುತ್ತುವರಿದ ಕಾರ್ ಪಾರ್ಕ್‌ಅನ್ನು ನಿರ್ಮಿಸಿದರು. ಪ್ರವಾಸಿಗರು ಮೊದಲು ಗ್ರಾಮಕ್ಕೆ ಬರಲು ಆರಂಭಿಸಿದ ಎರಡು ದಶಕಗಳ ನಂತರ, ಸಾಮಾಜಿಕ ಮಾಧ್ಯಮವು ಹೊಸ ತಲೆಮಾರುಗಳನ್ನು ಆಕರ್ಷಿಸುತ್ತಿದ್ದಂತೆ ಗ್ರಾಮದ ಆಚಾರ ವಿಚಾರಗಳಲ್ಲಿ ಅಸಮತೋಲನ ಆರಂಭವಾಯಿತು.

Untitled design (99)

ಇದನ್ನು ಗಮನಿಸಿದ ಮಾವ್ಲಿನ್ನಾಂಗ್‌ನ ಗ್ರಾಮ ಸಮಿತಿಯು ತನ್ನ ಯುವಜನರು ಆಧುನಿಕತೆಯ ನಾಗಾಲೋಟದಲ್ಲಿ ಕಳೆದು ಹೋಗದೆ ಮೂಲ ಸಾಂಸ್ಕೃತಿಕ ಧಾತುವನ್ನು ಉಳಿಸಿಕೊಂಡು ಸಮತೋಲನ ಕಾಪಾಡಿಕೊಳ್ಳಲು ಅನುಕೂಲವಾಗುವಂತೆ ಭಾನುವಾರಗಳಂದು ಪ್ರವಾಸಿಗಳ ಆಗಮನಕ್ಕೆ ಬಾಗಿಲು ಮುಚ್ಚಿತು. ಆ ಸಮಿತಿಯ ಸದಸ್ಯ ಪ್ರೆಶಿಯಸ್ ಖೋಂಗ್ಡಪ್ ಹೇಳುವುದು ಹೀಗೆ - ‘ಗ್ರಾಮದ ಬಹುಸಂಖ್ಯಾತ ಕ್ರೈಸ್ತ ಜನಸಂಖ್ಯೆಯು ಭಾನುವಾರ ಪ್ರವಾಸಿಗರ ಸೇವೆಯಲ್ಲಿ ಕಳೆಯದೆ ಚರ್ಚಿಗೆ ಹೋಗಲು ಅನುಕೂಲವಾಗುವಂತೆ ಭಾನುವಾರ ಪ್ರವಾಸಿಗಳಿಗೆ ವಿರಾಮ ಘೋಷಿಸಲಾಗಿದೆ. ನಮಗೆ ಒಂದು ವಿರಾಮ ಬೇಕು. ನಾವು ಪ್ರವಾಸಿಗರಿಂದ ಒಂದು ದಿನ ದೂರವಿದ್ದರೂ ನಮ್ಮ ನೈಜ ಗ್ರಾಮೀಣ ಜೀವನವನ್ನು ಹೊಂದಬಹುದು’.

ಭಾನುವಾರಗಳಂದು ಬಿದಿರಿನ ದೊಡ್ಡ ನಡೆಸೇತುವೆಯನ್ನು ದಾಟಿ ಚರ್ಚಿಗೆ ಹೋಗಲು ತಮಗೆ ಈ ವಿರಾಮ ಅನುಕೂಲ ಮಾಡಿಕೊಟ್ಟಿದೆ ಎನ್ನುತ್ತಿದ್ದಾರೆ ಅಲ್ಲಿನ ಜನ. ನಿಷೇಧಕ್ಕೆ ಮೊದಲೂ ಹೆಚ್ಚಿನ ಪ್ರವಾಸೋದ್ಯಮ ವ್ಯವಹಾರಗಳು ಭಾನುವಾರ ತೆರೆಯದಿರಲು ನಿರ್ಧರಿಸಿದ್ದವು. ಕೇವಲ ಎರಡು ರೆಸ್ಟೋರೆಂಟ್‌ಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದವು ಇದರಿಂದ ಪ್ರವಾಸಿಗಳಿಗೂ ಕಿರಿಕಿರಿಯಾಗುತ್ತಿತ್ತು. ಆದರೆ ಶನಿವಾರ ಮತ್ತು ಭಾನುವಾರ ಅತಿಥಿಗೃಹದ ಕೊಠಡಿಗಳನ್ನು ಕಾಯ್ದಿರಿಸುವ ಪ್ರವಾಸಿಗಳಿಗೆ ಭಾನುವಾರದ ನಿಷೇಧದಿಂದ ವಿನಾಯಿತಿ ಇದೆ.

19ನೆಯ ಶತಮಾನದ ಮಧ್ಯಭಾಗದಿಂದ ಮೇಘಾಲಯಕ್ಕೆ ಯುರೋಪಿಯನ್ ಕ್ರಿಶ್ಚಿಯನ್ ಮಿಷನರಿಗಳ ಭೇಟಿಗಳು ರಾಜ್ಯದ ಅತಿದೊಡ್ಡ ಬುಡಕಟ್ಟು ಗುಂಪಾದ ಖಾಸಿಗಳಲ್ಲಿ ಕ್ರಿಶ್ಚಿಯನ್ ನಂಬಿಕೆಯನ್ನು ಹೆಚ್ಚಿಸತೊಡಗಿತು. 1902ರಲ್ಲಿ ಇಲ್ಲಿ ದೊಡ್ಡ ಚರ್ಚ್ ಒಂದರ ಸ್ಥಾಪನೆಯಾಯಿತು. ಕಾಲಾನುಕ್ರಮದಲ್ಲಿ ಪೂಜೆಯಿಂದ ಪ್ರವಾಸೋದ್ಯಮದ ಆದಾಯದ ಕಡೆಗೆ ಹೊರಳಿತು ಈ ಚರ್ಚ್. 2003ಕ್ಕಿಂತ ಮೊದಲು ಮಾವ್ಲಿನ್ನಾಂಗ್ ಹತ್ತಿರದ ಗ್ರಾಮಗಳಿಗೆ ಸರಿಯಾದ ರಸ್ತೆಗಳಿಂದ ಸಂಪರ್ಕ ಹೊಂದಿರಲಿಲ್ಲ. ಕೇವಲ ಒಂದು ಪೀಳಿಗೆಯ ಹಿಂದೆ, ಇಲ್ಲಿನ ಅನೇಕ ಕುಟುಂಬಗಳು ಹುಲ್ಲಿನ ಗುಡಿಸಲುಗಳನ್ನು ಮಾತ್ರ ಹೊಂದಲು ಸಾಧ್ಯವಿತ್ತು. ಈಗ ಗ್ರಾಮದ ಜನಸಂಖ್ಯೆ ‘100% ಕ್ರಿಶ್ಚಿಯನ್’. ಎಷ್ಟೇ ಲಾಭವಿದ್ದರೂ ತಮ್ಮ ಧಾರ್ಮಿಕ ನಂಬಿಕೆಯಿಂದ ವಿಚಲಿತಗೊಳ್ಳದಿರಲು ನಿರ್ಧರಿಸಿದ ಜನತೆ ಭಾನುವಾರಗಳಂದು ಪ್ರವಾಸಿಗರಿಗೆ ನಿಷೇಧ ಹೇರಬೇಕೆಂಬ ಅಭಿಪ್ರಾಯ ವ್ಯಕ್ತವಾದಾಗ ಒಕ್ಕೊರಲಿನ ಬೆಂಬಲ ಕೊಟ್ಟಿದೆ.

Untitled design (100)

ಹೊರನೋಟಕ್ಕೆ ಇದು ಹುಚ್ಚುತನ. ಪ್ರವಾಸೋದ್ಯಮವೇ ಮಾವ್ಲಿನ್ನಾಂಗ್‌ಗೆ ಜಗತ್ತಿನ ವೇದಿಕೆಯಲ್ಲಿ ಜಾಗ ಕೊಟ್ಟಿದ್ದು. ಹೀಗಿರುವಾಗ, ಗ್ರಾಮದ ಜೀವನಾಡಿಯಾದ ಪ್ರವಾಸಿಗಳಿಗೆ ತನ್ನ ಅತ್ಯಂತ ಫಲವತ್ತಾದ ದಿನವನ್ನು ಏಕೆ ಸ್ವಯಂ ತ್ಯಾಗ ಮಾಡಿತು? ಎನ್ನುವ ಪ್ರಶ್ನೆಗೆ ಉತ್ತರವು ಅರ್ಥಶಾಸ್ತ್ರದ ಖಾತೆ ಪುಸ್ತಕದಲ್ಲಿಲ್ಲ. ಅದು ಮನುಷ್ಯನ ಮೂಲಭೂತ ಹಕ್ಕಿನಲ್ಲಿ ಅಡಗಿದೆ. ಯಾವೊಬ್ಬ ಸ್ಥಳೀಯನು ಬಯಸುವ ತಡೆ ಅಡ್ಡಿಯಿಲ್ಲದೆ ಬದುಕುವ, ತನ್ನದೇ ಲಯದಲ್ಲಿ ಉಸಿರಾಡುವ ಹಕ್ಕನ್ನು ಪಡೆದುಕೊಳ್ಳಲು ಮೀಸಲಿಟ್ಟ ಒಂದು ದಿನ. BBCಯ ವರದಿಗಳು, UNESCOದ ಮೆಚ್ಚುಗೆಗಳು, ಲಕ್ಷಾಂತರ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳು ಈ ಹಳ್ಳಿಯನ್ನು ದಂತಕತೆಯಾಗಿಸಿವೆ.

ವಾರಾಂತ್ಯದ ದಂಡು ಹೆಚ್ಚಾದಂತೆ, ಚರ್ಚಿನ ಬೆಂಚುಗಳು ಬರಿದಾದವು, ಅಂಗಡಿಯ ಮುಂದೆ ಸಾಲು ಬೆಳೆಯಿತು. ಒಂದು ಕಾಲದಲ್ಲಿ ಪ್ರಾರ್ಥನಾ ಮಂದಿರದಲ್ಲಿ ಭಜಿಸುತ್ತಿದ್ದ ಅಕ್ಕಂದಿರು ಈಗ ಚಹಾ ಲೋಟ ತೊಳೆಯುತ್ತಿದ್ದರು. ಅಜ್ಜಿಯ ತೊಡೆಯ ಮೇಲೆ ತಲೆ ಇಡಬೇಕಾದ ತಮ್ಮಂದಿರು ಪ್ರವಾಸಿಗರಿಗೆ ಸ್ಕೈ ವಾಕ್‌ನ ದಾರಿ ತೋರಿಸುತ್ತಿದ್ದರು. ಎಲ್ಲರೂ ಚರ್ಚಿನಲ್ಲಿದ್ದಾಗ ಸಾರ್ವಜನಿಕ ಶೌಚಾಲಯಗಳ ಬಾಗಿಲು ಮುಚ್ಚಿರುತ್ತಿತ್ತು ಅದರಿಂದಾಗುತ್ತಿದ್ದ ತೊಂದರೆಗಳು ಊಹೆಗೆ ನಿಲುಕುತ್ತಿತ್ತು. ಆಗ ಗ್ರಾಮಸ್ಥರಿಗೆ ಅರಿವಾಗಿದ್ದು ಮಾವ್ಲಿನ್ನಾಂಗ್ ನಿಧಾನವಾಗಿ ಒಂದು ರಂಗಮಂಟಪವಾಗುತ್ತಿದೆ. ಕ್ಯಾಮೆರಾಗೆ ಚೆಂದ, ಆದರೆ ಆತ್ಮಕ್ಕೆ ಆಯಾಸ ಎನ್ನುವುದು. ಹೀಗಾಗಿ ಅಲ್ಲೊಂದು ಒಂದು ಮೌನ ಕ್ರಾಂತಿ ಮೂಡಿತು. ಮಾವ್ಲಿನ್ನಾಂಗ್ ಭಾನುವಾರದಂದು ಕಂಡುಕೊಂಡಿದೆ ಪವಿತ್ರ ಏಕಾಂತವನ್ನು, ಈಗ ಮೌನವನ್ನು ಸಂಭ್ರಮಿಸುತ್ತಿದೆ.