-ಅಂಜಲಿ ರಾಮಣ್ಣ

ಮೊನ್ನೆಯ ಶಿವರಾತ್ರಿಯ ಫಲಾಹಾರದ ಘಮ ಇನ್ನೂ ಕಣ್ಣಲ್ಲಿ ತೇಲುತ್ತಿರುವಾಗ, ಡಬ್ಬಿಯಲ್ಲಿಟ್ಟ ತಂಬಿಟ್ಟು ಒಂದೊಂದೇ ಇಳಿಮುಖವಾಗಿ, ಕನ್ನಡ ಸಿನಿಮಾಗಳಲ್ಲಿ ’ಯಾವೋನೋ ಇವನು ಗಿಲ್ಲಕ್ಕೋ… ಗಿಲ್ಲಕ್ಕೊ ಶಿವಾ ಗಿಲ್ಲಕ್ಕೊ… ’ ಅಂತೆಲ್ಲಾ ನಾವುಗಳು ಅಮಲಿನಲ್ಲಿಯೇ ಇರುವಾಗ ’ಶಿವ ಟೂರಿಸಂ’ ಪ್ರವಾಸೋದ್ಯಮದಲ್ಲಿ ನಿಧಾನವಾಗಿ ಸದ್ದು ಮಾಡುತ್ತಿದೆ. ಭಾರತದಾಚೆಯ ದೇಶಗಳು ಶಿವನನ್ನು ಆವಾಹಿಸಿಕೊಂಡ ಬಗೆಯು ಬಲು ಮಾರ್ಮಿಕ ಮಾತ್ರವಲ್ಲ ಇತಿಹಾಸದ ಹೆಗ್ಗುರುತು ಕೂಡ. ಶಿವರಾತ್ರಿಯಂದು ದೇವಸ್ಥಾನಗಳಿಗೆ ಹೋಗುವುದು ವಾಡಿಕೆ. ಸಾಧಾರಣವಾಗಿ, ಮನೆ ಬಳಿಯಲ್ಲಿಯೇ ಇರುವ ಶಿವನ ದೇವಸ್ಥಾನಕ್ಕೆ ಹೋಗಿ ಕೈಮುಗಿದು ಬಂದು ಉಪವಾಸ ಎನ್ನುತ್ತಲೇ ಭರ್ಜರಿ ಭೋಜನ ಉಂಡು ಜಾಗರಣೆ ಹೆಸರಿನಲ್ಲಿ ಎಗ್ಗುಸಿಗ್ಗಿಲ್ಲದ ನರ್ತನ ಮಾಡಿ, ಮಾರನೆ ದಿನ ನಾವು ಮಲಗುವಾಗ ವಿದೇಶಗಳಲ್ಲಿ ಅಲ್ಲಿನ ಮತ್ತು ಇಲ್ಲಿಂದ ಹೋಗುವ ಶಿವಭಕ್ತರು ವ್ರತದ ಸಂತಸದಲ್ಲಿ ಮುಳುಗೇಳುವುದು ಮಾತ್ರ ಅಚ್ಚರಿ.

ಇದನ್ನೂ ಓದಿ: ಚಿಟ್ಟೀ ಆಯೀ ಹೈ ಆಯೀ ಹೈ.. ಚಿಟ್ಟಿ ಆಯೀ ಹೈ...!

ಈಗ ದೀಪಾವಳಿ ಧರ್ಮಾತೀತವಾಗಿ, ದೇಶದೇಶಗಳ ಚೌಕಟ್ಟನ್ನು ಮೀರಿ ಜಾಗತಿಕ ಹಬ್ಬವಾಗಿ ಹೋಗಿದೆ. ಹಿಂದು ಧರ್ಮದ ದೇವರುಗಳೂ ವಿದೇಶ ಪ್ರವಾಸ ಮಾಡಲು ಆರಂಭವಾಗಿ ಶತಮಾನಗಳೇ ಕಳೆದಿವೆ. ಇಂದಿಗೂ ಜಗತ್ತಿನಲ್ಲಿ ಅತೀ ಹೆಚ್ಚು ಆರಾಧಿಸಲ್ಪಡುವ ದೇವರು ಶಿವ ಎನ್ನುತ್ತವೆ ದಾಖಲೆಗಳು. ನೇಪಾಳ, ಮಾರಿಷಸ್, ಇಂಡೋನೇಷ್ಯಾ ಮತ್ತು ಶ್ರೀಲಂಕಾ ದೇಶಗಳಲ್ಲಿ ನಡೆಯುವ ಶಿವಪೂಜೆಗೆ ಸಹಸ್ರ ವರ್ಷಗಳ ಹಿನ್ನೆಲೆ ಇದೆ. ನೇಪಾಳದ ಪಶುಪತಿನಾಥ ದೇವಾಲಯ ನಮ್ಮದೇ ಪಕ್ಕದ ಮನೆ ಎನ್ನುವಷ್ಟು ಪರಿಚಯವಾಗಿದೆ ನಮಗೆ. ’ಶಿವ ಟೂರಿಸಂ’ ಎನ್ನುವ ಹೊಸ ಪರಿಕಲ್ಪನೆಯನ್ನು ಪ್ರವಾಸೋದ್ಯಮ ಅತಿ ಉತ್ಸಾಹದಿಂದ ಬರಮಾಡಿಕೊಂಡಿದೆ.

Untitled design - 2026-03-04T182645.594

ಉಜ್ಜಯನಿ, ಕೇದಾರ, ಶ್ರೀಶೈಲ ಹೀಗೆ ಹೆಸರಾಂತ ಜ್ಯೋತಿರ್ಲಿಂಗಗಳ ದರ್ಶನಕ್ಕೆ ಹಲವಾರು ಆಯೋಜಕರು ಪ್ರವಾಸ ಕರೆದುಕೊಂಡು ಹೋಗುತ್ತಿದ್ದಾರೆ. ನೇಪಾಳದಲ್ಲಿರುವ ಪಶುಪತಿನಾಥನನ್ನೂ ತೋರಿಸುತ್ತಿದ್ದಾರೆ. ಶ್ರೀಲಂಕಾದ ಮುನೇಶ್ವರ ದೇವಸ್ಥಾನಕ್ಕೆ ಬಹುಪಾಲು ತಮಿಳರು ಹರಕೆಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಇಂಡೋನೇಷ್ಯಾದ ಬಾಲಿಯಲ್ಲಿ ಪುರ ಲುಹುರ್ ವುಲುವಾಟು ಎನ್ನುವ ಸ್ಥಳದಲ್ಲಿ ಬೆಟ್ಟೇಣುವಿನ ಚೂಪು ತುದಿಯಲ್ಲಿ 70 ಮೀಟರ್ ಎತ್ತರದ ಬಂಡೆಯ ಮೇಲೆ ಸ್ಥಿತಗೊಂಡಿದೆ ಶಿವನ ದೇವಸ್ಥಾನ. ಇಲ್ಲಿ ಅವನು ರುದ್ರ ರೂಪದಲ್ಲಿ ಅವಿರ್ಭವಿಸಿದ್ದಾನೆ ಎಂದು ನಂಬಿರುವುದರಿಂದ ಅಲ್ಲಿನ ಜನರು ಇಲ್ಲಿನ ರುದ್ರನನ್ನು ವಾಯು ಮತ್ತು ಚಂಡಮಾರುತದ ದೇವ ಎಂದೇ ಭಾವಿಸಿ ಪೂಜಿಸುತ್ತಾರೆ. ರುದ್ರರಮಣೀಯ ತಾಣವಾಗಿರುವುದರಿಂದ ಅಲ್ಲಿಗೆ ತಲುಪಲು ಪ್ರಯಾಸ ಪಡಬೇಕಿರುತ್ತದೆ. ಪ್ರವಾಸಕ್ಕೆ ಇನ್ನಷ್ಟೇ ತೆರೆದುಕೊಳ್ಳಬೇಕಾಗಿದೆ. ಅಂದಹಾಗೆ ಈ ದೇವಸ್ಥಾನಕ್ಕೆ ಹೋಗಬೇಕು ಎಂದರೆ ದುಬಾರಿ ದರದ ಟಿಕೆಟ್ ಕೊಳ್ಳಬೇಕಿರುತ್ತದೆ.

ಈ ನಡುವೆ ನಮ್ಮ ದೇಶದ ರಾಜ್ಯ ಅರುಣಾಚಲ ಪ್ರದೇಶದ ಸರ್ಕಾರವು ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ದಾಪುಗಾಲು ಹಾಕುತ್ತಿದೆ. ಆದರೆ ಅಲ್ಲಿನ ಬಹುಪಾಲು ಜನರಿಗೇ ತಿಳಿಯದ ಶಿವನೊಬ್ಬ ಇಲ್ಲಿ ಬಯಲ ಬಣ್ಣವ ಮಾಡಿ; ಸ್ವಯವ ನಿಲವ ಮಾಡಿ; ಸುಳಿಯುತ್ತಾ ಆಕಾಶಕ್ಕೆದ್ದು ನಿಂತಿದ್ದಾನೆ. ಪರ್ವತ ಹಿಮಮೌನದಲ್ಲಿ 25 ಅಡಿ ಎತ್ತರದ 22 ಅಡಿಗಳಷ್ಟು ಅಗಲದ ಶಿವಲಿಂಗಾಕೃತಿಗೆ ವಿಭೂತಿ ಪಟ್ಟೆ, ರುದ್ರಾಕ್ಷಿ ಮಾಲೆ, ನಾಗಾಭರಣ ಎಲ್ಲವೂ ಸ್ವಯಂಭುವಾಗಿದೆ. ಜಗತ್ತಿನ ಮತ್ತ್ಯಾವ ಶಿವಾಲಯದಲ್ಲಿ ಸಿಗದ ಆಸಕ್ತಿದಾಯಕ ವಿಷಯವೊಂದು ಇಲ್ಲಿದೆ. ಅಷ್ಟು ದೊಡ್ಡ ಶಿವಲಿಂಗದ ಕಾಲ ಕೆಳಗೆ ಸತತವಾಗಿ ನೀರು ಹರಿಯುತ್ತಿದೆ. ಪುರಾತತ್ವ ಇಲಾಖೆಯ ತಜ್ಞರು ಅದರ ಮೂಲವನ್ನು ಗಂಗಾ ನದಿ ಎಂದು ಗುರುತಿಸಿದ್ದಾರೆ. ಎಲ್ಲೆಡೆಯಲ್ಲಿ ಶಿವನ ಜಟೆಯಲ್ಲಿ ಇರುವ ಗಂಗಮ್ಮ ಇಲ್ಲಿ ತನ್ನ ಶಿರದಲ್ಲೇ ಅವನನ್ನು ಧರಿಸಿದ್ದಾಳೆ, ಭರಿಸುತ್ತಿದ್ದಾಳೆ. ಈ ಲಿಂಗದ ಬಗ್ಗೆ ಶಿವಪುರಾಣದ 17ನೆಯ ಅಧ್ಯಾಯವಾದ ರುದ್ರಖಂಡದಲ್ಲಿ ಉಲ್ಲೇಖಿಸಲಾಗಿದೆ ಎನ್ನುತ್ತಾರೆ ಪುರಾಣ ಪಂಡಿತರು.

ಜ್ಯೋತಿರ್ಲಿಂಗ ರೂಪದಲ್ಲಿನ ಶಿವ ಅಘನಾಶನ ಎನಿಸಿಕೊಂಡರೆ, ಅಗಾಧಾಕಾರದಲ್ಲಿ ನಿಂತು ಇಲ್ಲಿ ಇಷ್ಟಾರ್ಥ ಸಿದ್ಧಿಸಿಕೊಡುತ್ತಾ ನಿಂತಿರುವ ಶಿವನನ್ನು ಸಿದ್ಧೇಶ್ವರ ಎನ್ನುತ್ತಾರೆ. ಈ ಸ್ಥಳವನ್ನು “ಸಿದ್ಧಪೀಠ” ಎಂದು ಗುರುತಿಸಲಾಗಿದೆ. ಇಲ್ಲಿನ ವಿಶ್ವಹಿಂದೂ ಪರಿಷತ್ತಿನವರು ಒಂದು ಸಮಿತಿಯನ್ನು ರಚಿಸಿ ಅದರ ಮೂಲಕ ಇದರ ಉಸ್ತುವಾರಿ ಮಾಡುತ್ತಿದ್ದಾರೆ. ಬಹುಶಃ ಅರುಣಾಚಲ ಪ್ರದೇಶದಲ್ಲಿ ಪ್ರವಾಸ ಸಂಪೂರ್ಣ ಪ್ರಚಾರಕ್ಕೆ ಬಂದಾಗ ಈ ಶಿವನೂ ಎಲ್ಲರಿಗೂ ದರ್ಶನ ಕೊಡಲು ಸಜ್ಜಾಗುತ್ತಾನೇನೋ.

ಇಲ್ಲಿಗೆ ಭೇಟಿ ನೀಡುವವರಿಗಿಂತ ಹೆಚ್ಚಿನ ಜನರು ಮಾರಿಷಸ್ ನೋಡಲು ಹೋಗುವುದು ಖಚಿತ. ಅಲ್ಲಿನ ಪ್ರಕೃತಿ ಮಾತ್ರವಲ್ಲ ನೀರಾಟ (Water sports) ಎಲ್ಲರಿಗೂ ಬಲು ದೊಡ್ಡ ಆಕರ್ಷಣೆ. ಮಾರಿಷಸ್‍ನ ಪ್ರವಾಸ ಇಷ್ಟಕ್ಕೇ ಸೀಮಿತಗೊಂಡರೆ ಮೆಚ್ಚನಾ ಮಾದೇಸನು! ಭಾರತ ದೇಶದ ಹೊರಗೆ ನಡೆಯುವ ಶಿವನ ಪೂಜೆಗಳಲ್ಲಿಯೇ ಅತ್ಯಂತ ದೊಡ್ಡಸಂಖ್ಯೆಯ ಭಕ್ತರು ಸೇರುವ ಜಾಗ ಮಾರಿಷಸ್. ವರ್ಷಕ್ಕೆ 2 ರಿಂದ 5 ಲಕ್ಷ ಜನರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಈ ಬಾರಿಯ ಶಿವರಾತ್ರಿಯಂದು ನಾಲ್ಕು ಲಕ್ಷ ಜನರು ಸೇರಿದ್ದರು ಎನ್ನುವ ವರದಿ ಇದೆ. Grand Bassin ಎನ್ನುವ ಜಾಗದಲ್ಲಿ ಗಂಗಾ ತಾಲಾಬ್ ಎನ್ನುವ ದೊಡ್ಡ ಕಲ್ಯಾಣಿ ಇದೆ. ಅದರ ನಟ್ಟನಡುವೆ ಶಿವಮಂದಿರವನ್ನು ಸ್ಥಾಪಿಸಲಾಗಿದೆ. ವೃತ್ತದ ನಾಲ್ಕೂ ದಿಕ್ಕುಗಳಿಂದ ನೀರಿನ ಮೇಲೆಯೇ ನಡೆದುಕೊಂಡು ದೇವಸ್ಥಾನ ತಲುಪುವಂತೆ ಸಣ್ಣ ಅಗಲದ ಹೆಚ್ಚು ಎತ್ತರವಿಲ್ಲದ ಸೇತುವೆಗಳನ್ನು ಕಟ್ಟಲಾಗಿದೆ.

Untitled design - 2026-03-04T182933.489

ಶಿವಲಿಂಗ ಎಂದರೆ ಕಪ್ಪುವರ್ಣವೇ ಹೌದು ಆದರೆ ಇಲ್ಲಿ ಶಿವಲಿಂಗದಿಂದ ಹಿಡಿದು ದೇವಾಲಯದ ಗೋಡೆಗಳು, ಗೋಪುರ, ಪ್ರಾಂಗಣ, ಸೇತುವೆ, ಪಾದ ಮಾರ್ಗ ಎಲ್ಲವೂ ಶುಭ್ರಶ್ವೇತ ಬಣ್ಣದ್ದಾಗಿದೆ. ಶಿವರಾತ್ರಿಯ ಹತ್ತು ದಿನಗಳ ಹಿಂದಿನಿಂದ ಉಪವಾಸ ವ್ರತಾಚರಣೆಯಲ್ಲಿ ಬಿಳಿ ಬಟ್ಟೆಗಳನ್ನು ಧರಿಸಿದ ಭಕ್ತರು ಶಿವನಾಮ ಜಪಿಸುತ್ತಾ ಎಲ್ಲೆಲ್ಲಿಂದಲೋ ನಡೆದುಕೊಂಡು ಬಂದು ಇಲ್ಲಿ ಸೇರಿ ಪೂಜೆ ಮಾಡಿ ಜಾಗರಣೆ ಮಾಡುತ್ತಾರೆ. ಅಲ್ಲಿ ಎಲ್ಲವೂ ಎಲ್ಲರೂ ಬಿಳಿ ಬೆಳಕಿನಷ್ಟು ಝಗಮಗ. ಅಷ್ಟೇ ಅಲ್ಲ ಮಾರಿಷಸ್ ದೇಶದ GDPಯ ಶೇಕಡಾ 12ರಷ್ಟು ಭಾಗ ಈ ಶಿವಾಲಯದ ಹಬ್ಬಹರಿದಿನದ ಆಚರಣೆಯಿಂದ ಹುಟ್ಟುತ್ತದೆ. ಅದಕ್ಕೇ ಅಲ್ಲಿನ ಸರ್ಕಾರವು ಪ್ರವಾಸಿಗಳು ಈ ದೇವಾಲಯಕ್ಕೆ ಭೇಟಿ ಕೊಡಲು ಅನುಕೂಲವಾಗಲು ಐಷಾರಾಮಿ ಬಸ್‍ಗಳನ್ನು ನೀಡಿದೆ. ಬಹಳವೇ ಕಡಿಮೆ ದರದ ಟಿಕೆಟ್ ಇಟ್ಟು ಹೆಚ್ಚುಹೆಚ್ಚು ಜನರನ್ನು ಆಕರ್ಷಿಸುವ ಜಾಣತನ ತೋರಿದೆ.

’ಶಿವನೇ ನಿನ್ನಾಟ ಬಲ್ಲೋರ್ಯಾರವ್ರೋ... ಶಿವನೇ ನಿನ್ನಾಟ ಬಲ್ಲೋರೆಲ್ಲವ್ರೋ...’ ಎನ್ನುವ ಪಲ್ಲವಿಗೆ ನಿಜವಾದ ಅರ್ಥ ಸಿಗುವುದು ಜರ್ಮನಿ ದೇಶದ ಮ್ಯೂನಿಕ್ ನಗರದ Marian Platz ಎನ್ನುವ ಚೌಕದಲ್ಲಿ ನಿಂತಿರುವ ಸೈಕಲ್ ರಿಕ್ಷಾಗಳನ್ನು ನೋಡಿದಾಗ. ಅಲ್ಲಿನ ಸೈಕಲ್ ರಿಕ್ಷಾಗಳ ಕೆಳಭಾಗದಲ್ಲಿ ಶಿವನ ಚಿತ್ರವನ್ನು ಬಣ್ಣದಿಂದ ಬರೆಸಿಕೊಂಡಿರುತ್ತಾರೆ ಅಥವಾ ಸ್ಟಿಕ್ಕರ್ ಅಂಟಿಸಿಕೊಂಡಿರುತ್ತಾರೆ ಚಾಲಕರು. ಅವರುಗಳು ಭಾರತದಿಂದ ಹೋಗಿ ಅಲ್ಲಿ ದುಡಿಯುತ್ತಿರುವವರೇನೋ ಎಂದುಕೊಂಡರೆ ಉಹುಂ, ಜರ್ಮನಿ ದೇಶದವರೂ ಹೀಗೆ ಶಿವನನ್ನು ಬರಮಾಡಿಕೊಂಡಿದ್ದಾರೆ. ಅದನ್ನು ಯಾರೂ ಯಾರಿಗೂ ತೋರಿಸುವುದಿಲ್ಲ, ಪ್ರಚಾರ ಮಾಡುವುದಿಲ್ಲ. ಸದ್ದಿಲ್ಲದೆ ಗಮನಿಸುವವರಿಗೆ ಮಾತ್ರ ಕಾಣುತ್ತಾನೆ ಎರಡು ಗಾಲಿಗಳ ನಡುವಿನ ಅಂತರವನ್ನು ಕಾಯುತ್ತಿರುವ ಶಿವ. ಹೀಗೆ ಪ್ರವಾಸಕ್ಕೂ ಅದರಿಂದಾದ ಉದ್ಯಮಕ್ಕೂ ಮಂಗಳ ಉಂಟು ಮಾಡುತ್ತಿರುವ ಶಿವ ನಮ್ಮವನು ಎನ್ನುವುದು ಹೆಮ್ಮೆಯಷ್ಟೆ.