Tuesday, March 10, 2026
Tuesday, March 10, 2026

ವಿದೇಶ ಪ್ರವಾಸ ಸಸ್ಯಾಹಾರಿಗಳಿಗೆ ಸಾಹಸ

ವಿದೇಶ ಪ್ರವಾಸದಲ್ಲಿ ಕೆಲವರಿಗೆ ಆಹಾರವೇ ಸಮಸ್ಯೆ. ಶುದ್ಧ ಸಸ್ಯಾಹಾರ ಕೆಲವು ದೇಶಗಳಲ್ಲಿ ಸಿಗುವುದೇ ಕಷ್ಟ. ದಿನವಿಡೀ ಸಸ್ಯಾಹಾರ ಎಲ್ಲಿ ಸಿಗುತ್ತದೋ ಅಲ್ಲಿ ತಿಂದು ಪ್ರವಾಸ ಮುಂದುವರಿಸಬೇಕು. ಒಂದು ವೇಳೆ ಸಸ್ಯಾಹಾರ ಸಿಕ್ಕರೂ ಅದರ ಬೆಲೆ ಆಕಾಶ ನೋಡುತ್ತಿರುತ್ತದೆ. ಪ್ರವಾಸಕ್ಕೆ ತಂದ ಹಣವೆಲ್ಲ ಊಟಕ್ಕೆ ಸುರಿಯಬೇಕಾಗುತ್ತದೆ. ಬೇಕಾದರೆ ಜಪಾನ್‌ನಲ್ಲಿ 1 ಕೆಜಿ ಅಕ್ಕಿಯ ಬೆಲೆ ಗೂಗಲ್‌ ಮಾಡಿನೋಡಿ ಪಕ್ಕಾ ಶಾಕ್‌ ಆಗುತ್ತೀರಿ. ಅಕ್ಕಿಯ ಬೆಲೆಯೇ 400 ರುಪಾಯಿಗಿಂತ ಹೆಚ್ಚು! ಇನ್ನೂ ಅದನ್ನು ಬೇಯಿಸಿ ಆಹಾರ ತಯಾರಿಸುವ ಹೊತ್ತಿಗೆ ಅದರ ಬೆಲೆ ಎಷ್ಟಾಗಿರಬೇಕು?

ಟ್ರಾವೆಲ್ ಏಜೆನ್ಸಿಯನ್ನು ಕೇಳಿ ತಿಳಿಯಿರಿ

ನೀವು ಟ್ರಾವೆಲ್ ಏಜೆನ್ಸಿಯ ಮೂಲಕ ವಿದೇಶ ಪ್ರವಾಸ ಕೈಗೊಂಡಿದ್ದರೆ, ಅವರೇ ನಿಮಗೆ ಸಸ್ಯಾಹಾರದ ವ್ಯವಸ್ಥೆ ಮಾಡಿಕೊಡಬಹುದು. ಕೆಲವು ಪ್ರತಿಷ್ಠಿತ ಏಜೆನ್ಸಿಗಳು ಸಸ್ಯಾಹಾರಿಗಳಿಗೇ ಪ್ರತ್ಯೇಕ ಪ್ರವಾಸ ಪ್ಯಾಕೇಜ್‌ಗಳನ್ನು ನೀಡಿರುತ್ತವೆ. ಅದರಲ್ಲಿ ಆಹಾರದ ಮೆನು ನಮೂದಾಗಿರುತ್ತವೆ. ಇನ್ನೂ ಕೆಲವು ಏಜೆನ್ಸಿಗಳು ಪ್ರವಾಸಿ ತಾಣದ ಹತ್ತಿರ ಲಭ್ಯವಿರುವ ಸಾಮಾಗ್ರಿಗಳನ್ನು ಬಳಸಿ ಆಹಾರ ತಯಾರಿಸಿ ನೀಡುತ್ತಾರೆ. ಅಲ್ಲಿ ನಿಮಗೆ ಅಡುಗೆ ಮಾಡಿ ಬಡಿಸುವವರೂ ಭಾರತೀಯರೇ ಆಗಿರುತ್ತಾರೆ. ಸ್ಥಳೀಯ ಸಸ್ಯಾಹಾರ ನಮಗೆ ಬೇಕು ಎಂದು ಮೊದಲೇ ನೀವು ಅವರಿಗೆ ತಿಳಿಸಿದ್ದರೆ ಅದರ ವ್ಯವಸ್ಥೆಯನ್ನೂ ಏಜೆನ್ಸಿಗಳು ಕೆಲವೊಮ್ಮೆ ಮಾಡಿಕೊಡುತ್ತವೆ.

ಹಣ್ಣು ಮತ್ತು ತರಕಾರಿಗಳಿವೆ

New Project (30)

ನೀವು ಪ್ರವಾಸಕ್ಕೆ ಹೋದಾಗ ಸಸ್ಯಾಹಾರ ಸಿಗುವುದು ಕಷ್ಟ, ಸಿಕ್ಕರೂ ಅದು ಎಷ್ಟು ನಂಬಲಾರ್ಹ ನಮಗೆ ತಿಳಿದಿರುವುದಿಲ್ಲ. ಈ ಗೊಂದಲಗಳನ್ನು ತಪ್ಪಿಸಲು ನೀವು ಅಲ್ಲಿನ ತರಕಾರಿ ಮತ್ತು ಹಣ್ಣುಗಳನ್ನು ಬಳಸಬಹುದು. ಇದನ್ನು ಹೆಸರಾಂತ ಟ್ರಾವೆಲ್‌ ವ್ಲಾಗರ್‌ ಡಾ||ಬ್ರೋ ಹೇಳಿಕೊಂಡಿದ್ದಾರೆ. ವಿದೇಶಗಳಲ್ಲಿ ಅನಿವಾರ್ಯವಿದ್ದಾಗ ಹೀಗೆ ಮಾಡಿ. ತರಕಾರಿ ಮತ್ತು ಹಣ್ಣುಗಳಿಂದಲೇ ಹೆಸರಾಗಿರುವ ಹಲವು ದೇಶಗಳಿವೆ. ಅಲ್ಲಿ ಇದರ ಉತ್ಪನ್ನಗಳೂ ದೊರೆಯುತ್ತವೆ. ಅಲ್ಲಿ ನೀವು ಐಸ್‌ಕ್ರೀಮ್, ಜ್ಯೂಸ್‌, ಸಲಾಡ್‌ಗಳನ್ನು ಸೇವಿಸಬಹುದು. ನಿಮ್ಮ ದೇಹದ ಆರೋಗ್ಯಕ್ಕೂ ಇವು ಸಹಕಾರಿಯಾಗಿರುತ್ತವೆ.

ರೆಡಿ-ಟು-ಈಟ್‌ ಪೊಟ್ಟಣ ಬಳಸಿ

New Project (28)

ಭಾರತದಲ್ಲೇ ಕೆಲವು ಆಹಾರ ಕಂಪನಿಗಳು ರೆಡಿ-ಟು-ಈಟ್‌ ಆಹಾರದ ಪೊಟ್ಟಣಗಳನ್ನು ಮಾರಾಟ ಮಾಡುತ್ತವೆ. ವಿವಿಧ ಬಗೆಯ ಆಹಾರ ಪೊಟ್ಟಣಗಳು ಸಿಗುತ್ತವೆ. ನೀವು ಅವುಗಳನ್ನು ಕೊಳ್ಳಬಹುದು. ವಿಮಾನದಲ್ಲೂ ಅವುಗಳನ್ನು ಸೀಮಿತ ಪ್ರಮಾಣದಲ್ಲಿ ನಿಮ್ಮೊಂದಿಗೆ ಕೊಂಡೊಯ್ಯಬಹುದು. ಜಸ್ಟ್‌ ಬಿಸಿನೀರಿನಲ್ಲಿ ಹಾಕಿದರೆ ಸಾಕು, ಐದಾರು ನಿಮಿಷಗಳಲ್ಲೇ ಬಿಸಿ ಆಹಾರ ತಯಾರಾಗುತ್ತದೆ. ಇವು ಸ್ಟೀಮ್‌ ರೈಸ್‌ನೊಂದಿಗೆ ತಯಾರಾದ ಪೊಟ್ಟಣಗಳು. ಪಲಾವ್‌, ರಾಜ್ಮಾ, ಪುಳಿಯೊಗರೆ, ಬಿಸಿಬೇಳೆಬಾತ್‌, ಲೆಮೆನ್‌ ರೈಸ್‌ ಪೊಟ್ಟಣಗಳು ಸಿಗುತ್ತವೆ. ನಿಮ್ಮಿಷ್ಟದ ಪೊಟ್ಟಣಗಳನ್ನು ಕೊಂಡೊಯ್ಯಬಹುದು.

ಹಾಲಿನ ಉತ್ಪನ್ನಗಳನ್ನು ಬಳಸಿ

New Project (31)

ಹಾಲಿಗೆ ವಿದೇಶಗಳಲ್ಲಿ ಬೆಲೆ ಹೆಚ್ಚು. ಆದರೂ ವಿದೇಶ ಪ್ರವಾಸಕ್ಕೆ ಹೋದಾಗ ಹಾಲಿನ ಉತ್ಪನ್ನಗಳು ಹೆಚ್ಚಾಗಿ ಸಿಗುತ್ತವೆ. ವಿಶೇಷವಾಗಿ ಕೆಲವು ದೇಶಗಳು ಸಸ್ಯಾಹಾರಿ ಪ್ರವಾಸಿಗಳಿಗೇ ಹಾಲಿನ ಉತ್ಪನ್ನಗಳ ತಯಾರಿಗೆ ಉತ್ತೇಜನ ನೀಡುವುದುಂಟು. ಗಿಣ್ಣು, ಮಜ್ಜಿಗೆ, ಮೊಸರು, ಚೀಸ್‌, ಬೆಣ್ಣೆ ಸಿಕ್ಕೇ ಸಿಗುತ್ತವೆ. ಅವುಗಳನ್ನು ಕೊಂಡು ಬ್ರೆಡ್‌, ಕೇಕ್‌ಗಳೊಟ್ಟಿಗೆ ತಿನ್ನಬಹುದು.

ತಳ್ಳುವ ಗಾಡಿಗಳೂ ಇರುತ್ತವೆ

ನಮ್ಮಲ್ಲಿ ಇರುವಂತೆ ನಮ್ಮ ನೆರೆಯ ಕೆಲ ದೇಶಗಳಲ್ಲೂ ತಳ್ಳುವ ಗಾಡಿಯಲ್ಲಿ ಭಾರತೀಯ ಶೈಲಿಯ ಆಹಾರಗಳು ಸಿಗುತ್ತವೆ. ಶ್ರೀಲಂಕಾ, ಮಲೇಷಿಯಾ, ಸಿಂಗಾಪುರ, ಥೈಲ್ಯಾಂಡ್‌ಗಳಲ್ಲಿ ಭಾರತೀಯ ಆಹಾರಗಳೂ ಸಿಗುತ್ತವೆ. ಇಲ್ಲಿನ ಆಹಾರದ ರುಚಿಯೂ ಥೇಟ್‌ ಭಾರತೀಯ ಸ್ವಾದವನ್ನು ನೀಡುತ್ತವೆ. ಇಡ್ಲಿ, ದೋಸೆ, ಡ್ರೈಫ್ರೂಟ್‌ಗಳನ್ನು ಹಾಕಿ ತುಪ್ಪದಲ್ಲಿ ಮಾಡುವ ಗೀರೈಸ್‌ ಈಗ ಭಾರತದ ಸಾಗರೋಲ್ಲಂಘನ ಮಾಡಿದೆ. ಶ್ರೀಲಂಕಾ, ಸಿಂಗಾಪುರ, ಮಲೇಷಿಯಾ ಹೀಗೆ ವಿವಿಧ ದೇಶಗಳಲ್ಲೂ ಸಿಗುತ್ತವೆ. ಬೆಲೆಯ ಜತೆಗೆ ರುಚಿಯೂ ಒಂದು ಕೈ ಹೆಚ್ಚೇ ಇರುತ್ತದೆ.

ಕುರುಕಲು ತಿಂಡಿಗಳಿವೆ

New Project (32)

ಕುಕ್ಕಿಸ್‌ಗಳು, ಬಿಸ್ಕತ್‌, ಚಿಪ್ಸ್‌, ಡ್ರೈಫ್ರೂಟ್‌ಗಳಿಂದ ಮಾಡಿದ ಚಾಕೋಲೆಟ್‌ ಬಾರ್‌ಗಳು, ಹುರಿದ ಡ್ರೈ ಫ್ರೂಟ್‌ಗಳನ್ನು ಸ್ನ್ಯಾಕ್ಸ್‌ನಂತೆ ಸೇವಿಸಬಹುದು. ಇದು ಆರೋಗ್ಯಕ್ಕೂ ಒತ್ತು ನೀಡುತ್ತವೆ. ಆದರೆ ಒಟ್ಟು ಪ್ರವಾಸದಲ್ಲಿ ಇವುಗಳ ಮೇಲೆ ಅವಲಂಬಿತವಾಗುವುದು ಕಷ್ಟಸಾಧ್ಯ. ಹಾಗಾಗಿ ಅವಕಾಶ ಸಿಕ್ಕಾಗ ಅಲ್ಲಿ ಸ್ಥಳೀಯ ರೆಸ್ಟೋರೆಂಟ್‌ಗಳಲ್ಲಿ ಸಿಗುವ ಮತ್ತು ಸ್ಥಳೀಯವಾದರೂ ಸಸ್ಯಾಹಾರ ಪದಾರ್ಥಗಳನ್ನು ಸೇವಿಸಲೇಬೇಕು. ಒಂದೆರಡು ದಿನಗಳ ಮಟ್ಟಿಗೆ ನಿಮ್ಮ ಪ್ರವಾಸ ಸೀಮಿತವಾಗಿದ್ದರೆ ಈ ಅಗತ್ಯವಿಲ್ಲ. ನೀವು ನಿಮ್ಮ ಮನೆಗಳಿಂದ ತೆಗೆದುಕೊಂಡು ಹೋಗುವ ತಿನಿಸುಗಳು ಸಾಕಾಗಬಹುದು.

Jadesha Emmiganur

Jadesha Emmiganur

Jadesha Emmiganur Is a Passionate Journalist from Ballari

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಮೆರಿಕದ ಸಾರ್ವಜನಿಕ ಗ್ರಂಥಾಲಯದಲ್ಲಿ ಒಂದು ದಿನ

Read Next

ಅಮೆರಿಕದ ಸಾರ್ವಜನಿಕ ಗ್ರಂಥಾಲಯದಲ್ಲಿ ಒಂದು ದಿನ