Saturday, October 17, 2026
Saturday, October 17, 2026

ಪಯಣದ ನೆನಪಿನ ತುಣುಕು ಮನೆಗೆ ಮರಳುವ ಮುನ್ನ…

ನೀವು ಎಲ್ಲರೂ ಹೋಗಿ ಹೋಗಿ, ಏನೂ unique ಅನಿಸದೇ ಇರುವ ಜಾಗಕ್ಕೆ ಹೋಗುತ್ತಿದ್ದೀರಾದರೆ ಅಲ್ಲಿಂದ ಸ್ಪೆಷಲ್‌ ಅನಿಸುವುದನ್ನು ಕೊಡುವುದಕ್ಕೆ ಅಲ್ಲಿ ಅಂಥದ್ದೇನೂ ಹೊಸದು ಸಿಗುವುದು ಕಷ್ಟ. ಇನ್ನೊಂದು ನೀವು ಯಾರಿಗೆ ಕೊಡುತ್ತೀರಿ ಅನ್ನೋದೂ ಕೂಡ ಮುಖ್ಯ. ಒಂದು ವೇಳೆ ನೀವು ಕೊಡುವವರು ತೀರಾ ಹತ್ತಿರದವರು ಅಂದರೆ ಬೇರೆ, ತೀರಾ ಅನಿವಾರ್ಯವಾಗಿ ಅವರಿಗೇನನ್ನೋ ಕೊಡಬೇಕು ಅಂತ ನೀವು ಕೊಡುತ್ತಿರುವುದಾದರೆ ಅದು ಬೇರೆ. ಇದೆಲ್ಲಕ್ಕೆ ಅನುಗುಣವಾಗಿ ನೀವು ಏನನ್ನ ಕೊಡಬಹುದು ಅನ್ನೋದನ್ನು ನಿರ್ಧಾರ ಮಾಡುತ್ತೀರಿ.

  • ಬಡೆಕ್ಕಿಲ ಪ್ರದೀಪ್‌

ಪ್ರತಿ ಪ್ರಯಾಣಕ್ಕೂ ಒಂದು ಅಂತ್ಯ ಇರುತ್ತದೆ. ಪಯಣಿಗನ ಧಾವಂತ ಹೊರಡುವ ಮುನ್ನ ಹೇಗಿರುತ್ತದೋ, ಮತ್ತೆ ಮನೆಗೆ ಮರಳುವ ಮುನ್ನ ಕೂಡ ಅವನ ಮನದಲ್ಲಿ ಇನ್ನೊಂದು ಧಾವಂತ ಪೊಡಮೂಡುತ್ತದೆ.

ಇದು ನಮ್ಮೆಲ್ಲರಿಗೂ ಆಗುತ್ತದೆ ಅಂತಲ್ಲ. ಆದರೆ, ನಮ್ಮಲ್ಲಿ ಹೆಚ್ಚಿನವರ ಮನಸಲ್ಲಿ ಮನೆಗೆ ತಲುಪುವ ಮುನ್ನ ಈ ಚ್ಯಾಲೆಂಜ್‌ ಎದುರಿಸಿಯೇ ಎದುರಿಸುತ್ತಾನೆ. ಇದು ಕೇವಲ ಒಂದು ಟ್ರಿಪ್‌ ಮಾಡಿ ಬರುವವನ ಮನಸ್ಥಿತಿಯಲ್ಲ. ಹಲವು ಕಾಲದ ನಂತರ ಮನೆಗೆ ಮರಳುವ ವೇಳೆ ಕೂಡ ನಮಗೆ ಬರುವ ದೊಡ್ಡ ಚ್ಯಾಲೆಂಜ್‌ ಅಂದರೆ ಮರಳಿ ಮನೆಗೆ ಹೋದಾಗ ಮನೆಯವರು, ಹತ್ತಿರದವರು ಬಯಸುತ್ತಾರೋ ಇಲ್ವೋ, ಅವರಿಗಾಗಿ ಏನಾದರೂ ಕೊಂಡೊಯ್ಯೋದು!

ಇದನ್ನೂ ಓದಿ: ಲೋಕದಲ್ಲೆಲ್ಲೂ ಸಿಗದು ಲೋಕಲ್‌ ತಿಂಡಿ ರುಚಿ

ನಾನೂ ಚಿಕ್ಕವನಿದ್ದಾಗ ಮನೆಗೆ ನೆಂಟರು ಬರುವಾಗ, ಅದರಲ್ಲೂ ನನ್ನ ದೂರದೂರಿನಲ್ಲಿರುವ ಅತ್ತೆಯಂದಿರು, ದೊಡ್ಡಪ್ಪಂದಿರು ಊರಿನ ವಿಸಿಟ್‌ಗೆ ಬರುವಾಗ ತರುವ ಗಿಫ್ಟ್‌ಗಳನ್ನು ಬಯಸಿಯೂ ಬಯಸದೆಯೂ ನಿರೀಕ್ಷಿಸುತ್ತಿರುತ್ತಿದ್ದೆವು. ದೂರದ ಅಲ್ಜೀರಿಯಾ‌ ದೇಶದಲ್ಲಿದ್ದ ನನ್ನ ದೊಡ್ಡಪ್ಪ ಅಲ್ಲಿಂದ ತಂದಿದ್ದ ಚಾಕೋಲೆಟುಗಳು, ಪೋಸ್ಟ್‌ ಕಾರ್ಡ್‌ಗಳು ಇಂದಿಗೂ ನನ್ನ ನೆನಪಿನ ಪಟಲದಲ್ಲಿವೆ.

ಯಾಕೀ ಗಿಫ್ಟ್‌ಗಳು?

ಎಲ್ಲ ಭಾವನಾತ್ಮಕ ಯೋಚನೆಗಳನ್ನು ದೂರವಿಟ್ಟು ಒಂದು ಕ್ಷಣ ಪಯಣಿಗನಾಗಿ ಯೋಚಿಸುವುದಾದರೆ ಈ ಗಿಫ್ಟ್‌ಗಳು ಎರಡು ಮುಖ್ಯ ಕೆಲಸವನ್ನು ಮಾಡುತ್ತವೆ.

ಮೊದಲನೆಯದು ನಾವು ಪಯಣಿಸಿ ಬಂದ ಊರಿನಿಂದ ತಂದ ಗಿಫ್ಟ್‌ ಆ ಊರಿನ ಒಂದು ತುಣುಕನ್ನು ನಮ್ಮೊಂದಿಗೆ ತಂದು ಅದನ್ನು ನಮ್ಮ ಪ್ರೀತಿಪಾತ್ರರಿಗೆ ಹಂಚುವ ಖುಷಿ, ಅದರ ಮೂಲಕ ಅವರನ್ನು ಕೂಡ ಆ ಪ್ರಯಾಣದಲ್ಲಿ ಒಬ್ಬರನ್ನಾಗಿಸಿಕೊಂಡ ಸಾರ್ಥಕತೆ.

ಇನ್ನೊಂದು ಪ್ರತಿಯೊಬ್ಬನಲ್ಲೂ ಇರುವ ಪಯಣಿಗನನ್ನು ಬಡಿದೆಬ್ಬಿಸುವ ಕೌತುಕ. ಇದು ಗಿಫ್ಟ್‌ ಕೊಟ್ಟವರ ಮನದಲ್ಲಿತ್ತೋ ಇಲ್ಲವೋ ಗೊತ್ತಿಲ್ಲ. ಅದನ್ನು ತೆಗೆದುಕೊಂಡವರ ಮನಸಲ್ಲಿ ಆ ಕ್ಷಣದಲ್ಲಿ ಎದ್ದು ಬರುವ ಭಾವನೆಯೂ ಅಲ್ಲ ಅದು. ಆದರೆ, ಆ ಗಿಫ್ಟ್‌ ಮನೆಯ ಮೂಲೆಯಲ್ಲಿ ಕುಳಿತಿದ್ದರೂ, ಮನದ ಮೂಲೆಯಲ್ಲಿರುವ ನಮ್ಮ ಪಯಣಿಗನನ್ನು ಆಗಾಗ ಪ್ರೇರೇಪಿಸುತ್ತಿರುತ್ತದೆ.

ಅದೊಂಥರಾ ರಿಲೇ ಓಟದಲ್ಲಿ ಒಬ್ಬ ಓಟಗಾರ ಇನ್ನೊಬ್ಬನ ಕೈಗೆ ಕೊಡುವ baton (ಕೋಲು) ಹಾಗೆ. ತಾನು ಒಬ್ಬ ಪಯಣಿಗನಾಗಿ ಅನುಭವಿಸಿದ ಆಹ್ಲಾದವನ್ನು ಇನ್ನೊಬ್ಬನಿಗೆ ಅನುಭವಿಸಲು ನೀಡುವ ಪ್ರೇರೇಪಣೆ.

ಏನು ಕೊಂಡೊಯ್ಯೋದು?

ನಾವು ಹೋದ ಊರಿನ ತುಣುಕು ಕೊಡಬೇಕು ಅಂದರೆ ಅದಕ್ಕೆ ತಕ್ಕುದಾದುದೇನನ್ನೋ ಕೊಡಬೇಕು. ಊಟಿಗೋ, ಮಡಿಕೇರಿಗೋ ಹೋದರೆ ಅಲ್ಲಿನ ಚಾಕೋಲೆಟು, ಜೇನು ಕೊಡುವುದು ಸುಲಭ, ಸೂಕ್ತ ಹೌದು. ಆದರೆ, ಅದಕ್ಕೂ ಮೀರಿದ್ದನ್ನೇನೋ ಕೊಡಬೇಕು, ಆ ಗಿಫ್ಟ್‌ ಅವರ ಮನೆಯ ಕಪಾಟಿನಲ್ಲೋ, ಮನದಲ್ಲೋ ಗಟ್ಟಿಯಾಗಿ ಜಾಗ ಮಾಡಬೇಕು ಅನ್ನೋವಷ್ಟೆಲ್ಲಾ ನೀವು ಯೋಚನೆ ಮಾಡಲು ಹೋಗಬೇಕಾದರೆ ಹಲವು ವಿಚಾರಗಳಿವೆ.

ನೀವು ಎಲ್ಲರೂ ಹೋಗಿ ಹೋಗಿ, ಏನೂ unique ಅನಿಸದೇ ಇರುವ ಜಾಗಕ್ಕೆ ಹೋಗುತ್ತಿದ್ದೀರಾದರೆ ಅಲ್ಲಿಂದ ಸ್ಪೆಷಲ್‌ ಅನಿಸುವುದನ್ನು ಕೊಡುವುದಕ್ಕೆ ಅಲ್ಲಿ ಅಂಥದ್ದೇನೂ ಹೊಸದು ಸಿಗುವುದು ಕಷ್ಟ. ಇನ್ನೊಂದು ನೀವು ಯಾರಿಗೆ ಕೊಡುತ್ತೀರಿ ಅನ್ನೋದೂ ಕೂಡ ಮುಖ್ಯ. ಒಂದು ವೇಳೆ ನೀವು ಕೊಡುವವರು ತೀರಾ ಹತ್ತಿರದವರು ಅಂದರೆ ಬೇರೆ, ತೀರಾ ಅನಿವಾರ್ಯವಾಗಿ ಅವರಿಗೇನನ್ನೋ ಕೊಡಬೇಕು ಅಂತ ನೀವು ಕೊಡುತ್ತಿರುವುದಾದರೆ ಅದು ಬೇರೆ. ಇದೆಲ್ಲಕ್ಕೆ ಅನುಗುಣವಾಗಿ ನೀವು ಏನನ್ನ ಕೊಡಬಹುದು ಅನ್ನೋದನ್ನು ನಿರ್ಧಾರ ಮಾಡುತ್ತೀರಿ.

ತೀರಾ ಅನಿವಾರ್ಯ ಅನಿಸಿ ಕೊಡುವುದಾದರೆ ಇಂದೋ ನಾಳೆಯೋ ತಿಂದು ಮುಗಿಯುವುದೇನನ್ನೋ, ಅಥವಾ ಕೀಚೈನ್‌ ಇತ್ಯಾದಿ ಬೇಗ ಮರೆತು ಹೋಗುವ, ನಿಮ್ಮ ಜೇಬಿಗೂ ಭಾರವೆನಿಸದ ವಸ್ತುವನ್ನು ಕೈಗೆತ್ತಿಕೊಳ್ಳುತ್ತೀರಿ.

ಒಟ್ಟಿನಲ್ಲಿ ನಿಮ್ಮ emotional ಕನೆಕ್ಷನ್‌ ಎಷ್ಟಿದೆ ಎನ್ನುವುದರ ಮೇಲೆ ನೀವು ಏನನ್ನು ಕೊಡುತ್ತೀರಿ ಅನ್ನೋದು ನಿರ್ಧಾರವಾಗುತ್ತದೆ.

ಎಲ್ಲಿ ತಗೊಳ್ಳೋದು?

ಏನು ತಗೊಳ್ಳೋದು ಅನ್ನೋದರ ಜತೆಗೆ ಎಲ್ಲಿ ತಗೊಳ್ಳೋದು ಅನ್ನೋದಕ್ಕೆ ನೀವು ಎಷ್ಟು ಪ್ಲಾನಿಂಗ್‌ ಮಾಡಿದ್ದೀರಿ ಎನ್ನೋದರ ಜತೆಗೆ ಎಲ್ಲಿಗೆ ಹೋಗಿದ್ದೀರಿ ಅನ್ನೋದು ಕೂಡ ಮುಖ್ಯವಾಗುತ್ತದೆ.

ಇಲ್ಲಾಂದ್ರೆ ಲಾಸ್ಟ್‌ ಮಿನಿಟಲ್ಲಿ ಸಿಕ್ಕ ಸಿಕ್ಕದ್ದನ್ನು ಬ್ಯಾಗಿಗೆ ಹೇರಿಕೊಂಡು ಬರೋದೇ ದಾರಿ. ಇಲ್ಲಾ ಇಂಟರ್‌ನ್ಯಾಷನಲ್‌ ಟ್ರಿಪ್‌ ಆದರೆ ಇನ್ನೇನು ಮನೆ ಬಂದೇ ಬಿಡ್ತು ಅಂದಾಗ ಕೊನೆಗೆ ಏರುವ ವಿಮಾನ ನಿಲ್ದಾಣದಲ್ಲಿ ಡ್ಯೂಟಿ ಫ್ರೀ ಸೆಕ್ಷನ್‌ನಲ್ಲಿ ಏನಾದರೂ ಪೇರಿಸಿಕೊಂಡು ಬರೋದೇ ಬಿಡಿ.

ರಿಕ್ವೆಸ್ಟ್‌ಗಳೂ ಹುಡುಕಾಟಗಳೂ

ನೀವೇ ಸ್ವ-ಇಚ್ಛೆಯಿಂದ ಕೊಡೋ ಗಿಫ್ಟ್‌ಗಳೇ ಬೇರೆ, ನೀವು ಹೋಗುವ ಟ್ರಿಪ್ಪಿನ ವಾಸನೆ ಬಂದ ಕೂಡಲೇ ನಿಮ್ಮಲ್ಲೊಂದು ಗಿಫ್ಟ್‌ ರಿಕ್ವೆಸ್ಟ್‌ ಅಥವಾ ಏನಾದರೂ ಬೇಕೆನ್ನುವ ರಿಕ್ವೆಸ್ಟ್‌ ಇಟ್ಟುಕೊಂಡು ಬರುವ ಮಂದಿಯ ಕಥೆಯೇ ಬೇರೆ.

ಫ್ರಿಜ್‌ಗಳು ಬಂದ ಮೇಲೆ ಎಲ್ಲರ ಫ್ರಿಜ್‌ಗಳೂ ತುಂಬಿಕೊಂಡಿವೆ. ಆದರೆ, ಅವುಗಳ ಹೊರಭಾಗವನ್ನು ಮ್ಯಾಗ್ನೆಟ್‌ಗಳಿಂದ ತುಂಬಿಸುವುದು ಫ್ಯಾಶನ್‌. ಇದಕ್ಕೆ ಆ ಜಾಗಕ್ಕೆ ಹೋಗಿ ಬಂದ ನೆನಪಿಗೆ ಅಲ್ಲಿಂದ ಏನಾದರೂ ತಂದು ಅಂಟಿಸುವುದು ವಾಡಿಕೆಯಾದರೆ, ಇನ್ನು ಕೆಲವರಿಗೆ ತಮ್ಮ ಫ್ರಿಜ್‌ ತುಂಬಾ ಬೇರೆ ಬೇರೆ ದೇಶದ ನೆನಪಿನ ಮ್ಯಾಗ್ನೆಟ್‌ಗಳನ್ನು ಅಂಟಿಸುವ ಆಸೆ. ಒಂದು ಕಾಲದಲ್ಲಿ ವಿದೇಶದಿಂದ ಮರಳುವವರ ಹತ್ತಿರ ತಮಗೆ ಬೇಕಾದ ಫೋನ್‌ಗಳೋ, ಅದಕ್ಕೂ ಹಿಂದೆ ಕ್ಯಾಮೆರಾ ಇತ್ಯಾದಿಗಳನ್ನೋ ತನ್ನಿ ಅನ್ನುವ ರಿಕ್ವೆಸ್ಟ್‌ಗಳನ್ನು ಮಾಡುವುದೂ ಜೋರಾಗಿ ನಡೆದಿತ್ತು.

ನೀವು ಎಲ್ಲೇ ಹೋದರೂ ನಿಮ್ಮ ನೆನಪಿನ ಬುತ್ತಿಯಲ್ಲಿ ಏನು ತಂದಿದ್ದೀರೋ ಅದನ್ನು ಜನರಿಗೆ ಹಂಚುವ ಅದ್ಭುತ ದಾರಿ ಈ ಗಿಫ್ಟ್‌ಗಳು. ಅವನ್ನು ನೀವು ಜನರಿಗೂ ಹಂಚಬಹುದು, ನಿಮ್ಮ ಮನೆಯನ್ನೂ ತುಂಬಬಹುದು. ನಿಮ್ಮ ಮನೆ ಮನ ತುಂಬುವ ಸೆಲ್ಫ್‌ ಗಿಫ್ಟಿಂಗ್‌ನ ಬಗ್ಗೆ ಇನ್ನೊಂದು ದಿನ ಮಾತಾಡೋಣ!

ಪಂಚ್‌-ರ್‌ ಶಾಪ್‌

ನೀವು ಟ್ರಿಪ್ಪಿಗೆ ಹೋಗ್ತಿದೀರಿ ಅನ್ನೋದು ನಿಮಗೆ ಎಷ್ಟು ಖುಷಿ ಕೊಡೊತ್ತೋ ಗೊತ್ತಿಲ್ಲ, ಗಿಫ್ಟ್‌ಗಳನ್ನು ನಿರೀಕ್ಷಿಸುವ, ಕೊನೆಗೂ ಪಡೆದೇ ಬಿಡುವವರಿಗಂತೂ ಅದು ಜಾಕ್‌ಪಾಟ್‌ ಇದ್ದಂತೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat