ಲಕ್ಕುಂಡಿಯಲ್ಲಿ ದೊರೆತಿದ್ದ ನಿಧಿಯನ್ನು ಸರಕಾರದ ಸುಪರ್ದಿಗೆ ಒಪ್ಪಿಸಿದ್ದ ಮನೆಯವರಿಗೆ ಪ್ರತಿಯಾಗಿ ಸರಕಾರ ಈವರೆಗೆ ಏನೂ ನೀಡಿಲ್ಲ, ಎಂಬ ಹಲವರ ಪ್ರಶ್ನೆಗೆ ನೇರವಾಗಿ ಪ್ರವಾಸೋದ್ಯಮ ಸಚಿವರಾದ ಎಚ್‌ ಕೆ ಪಾಟೀಲ್‌ ಸುದ್ದಿಗೋಷ್ಟಿಯ ಮೂಲಕ ಉತ್ತರ ನೀಡಿದ್ದಾರೆ.

ತಮಗೆ ದೊರೆತಿದ್ದ ನಿಧಿಯನ್ನು ಪ್ರಮಾಣಿಕವಾಗಿ ಸರಕಾರಕ್ಕೆ ಒಪ್ಪಿಸಿದ್ದ ಪ್ರಜ್ವಲ್‌ ರಿತಿ ಕುಟುಂಬಕ್ಕೆ ಉದ್ಯೋಗ ಮತ್ತು ಮನೆ ನೀಡುವ ಕುರಿತು ಚಿಂತನೆ ನಡೆಸಲಾಗಿದೆ. ಈ ಕುರಿತ ಅಧಿಕೃತ ಆದೇಶ ಪತ್ರವನ್ನು ಜನವರಿ 26ಕ್ಕೆ ಅಂದರೆ ಗಣರಾಜ್ಯೋತ್ಸವದ ವೇಳೆ ಹಸ್ತಾಂತರಿಸಲಾಗುವುದು. ಕಾನೂನು ತಜ್ಞರೊಂದಿಗೆ ಮಾತನಾಡಿ ಈ ಪ್ರಕರಣವನ್ನು ವಿಶೇಷ ಪ್ರಕರಣ ಎಂದು ಗುರುತಿಸಿ, ನಿಧಿ ಯಾವ ಕಾಲಘಟ್ಟಕ್ಕೆ ಸೇರಿದ್ದು ಎಂದು ತಿಳಿದು, ಕುಟುಂಬಕ್ಕೆ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.

ಇದೇ ವೇಳೆ ಲಕ್ಕುಂಡಿಯ 16 ತಾಣಗಳನ್ನು ಪುರಾತತ್ವ ಇಲಾಖೆ ಸಂರಕ್ಷಿತ ತಾಣವಾಗಿ ಗುರುತಿಸಲಾಗಿದೆ. ಅದರ ಜತೆಗೆ ಇನ್ನೂ 8 ದೇವಾಲಯಗಳನ್ನು ಇದೇ ಫೆಬ್ರವರಿ ಅಂತ್ಯದ ವೇಳೆಗೆ ಸಂರಕ್ಷಿತ ತಾಣವಾಗಿ ಘೋಷಿಸಲಾಗುವುದು. ಇನ್ನು 20 ದೇವಾಲಯಗಳನ್ನು ರಾಜ್ಯ ಸಂರಕ್ಷಿತ ತಾಣಗಳ ಪಟ್ಟಿಗೆ ಸೇರಿಸಲು ಇದೇ ತಿಂಗಳ ಅಂತ್ಯದ ವೇಳೆಗೆ ಸರಕಾರಕ್ಕೆ ಪ್ರಸ್ತಾವನೆ ಸಿದ್ಧ ಪಡಿಸುವಂತೆ ಪ್ರಾದಿಕಾರದ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಸಚಿವ ಎಚ್‌ ಕೆ ಪಾಟೀಲ್‌ ತಿಳಿಸಿದ್ದಾರೆ. ಈ ಪ್ರಸ್ತಾವ ಪೂರ್ಣವಾದರೆ ಲಕ್ಕುಂಡಿಯಲ್ಲಿ ಒಟ್ಟು 44 ತಾಣಗಳ ಅಭಿವೃದ್ಧಿಗೆ ಅನುದಾನ ಲಭ್ಯವಾಗಲಿವೆ. ತಾಣಗಳ ರಕ್ಷಣೆಗೂ ಒತ್ತು ಸಿಗಲಿದೆ.