ಹೆಸರೇ ಇಲ್ಲದ ಜಲಧಾರೆಗಳು
ಯಾವುದೇ ಹೆಸರು, ಪ್ರಚಾರವಿಲ್ಲದೆ, ರಸ್ತೆಗಳ ತಿರುವಿನಲ್ಲಿ ತಮ್ಮ ಪಾಡಿಗೆ ತಾವು ಮೌನವಾಗಿ ಹರಿಯುವ ಈ ಮಿನಿ ಜಲಧಾರೆಗಳು, ಕೇವಲ ನೀರು ಹರಿಯುವ ಸ್ಥಳಗಳಲ್ಲ, ಪ್ರಕೃತಿಯ ವರ. ಇವು ದೊಡ್ಡ ಜಲಪಾತಗಳಿಗೆ ಮೂಲವಷ್ಟೇ ಅಲ್ಲ, ಅಷ್ಟೇ ಅನಂದವನ್ನು ನೀಡುತ್ತವೆ. ಇವುಗಳನ್ನು ನೋಡುವುದು, ಅನುಭವಿಸುವುದು ಹಾಗೂ ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ.
- ಮೃತ್ಯುಂಜಯ ಹೆಗ್ಡೆ
ಭೋರ್ಗರೆವ ದೊಡ್ಡ ಜಲಪಾತಗಳ ಗಂಭೀರ ಸೌಂದರ್ಯ ಮತ್ತು ಭವ್ಯತೆಯನ್ನು ನೋಡಿ ವಾವ್! ಅನಿಸುವುದೇನೋ ಸಹಜ. ಆದರೆ, ಮಳೆಗಾಲದ ದಿನಗಳಲ್ಲಿ ಪಶ್ಚಿಮ ಘಟ್ಟಗಳ ತಿರುವು ರಸ್ತೆಗಳಲ್ಲಿ ಪ್ರಯಾಣಿಸುವಾಗ, ನಾವು ಅನೇಕ ಸಣ್ಣಪುಟ್ಟ ‘ಅನಾಮಿಕ ಜಲಧಾರೆ’ಗಳನ್ನು ಕಾಣುತ್ತೇವೆ. ಯಾವುದೇ ಹೆಸರು, ಪ್ರಚಾರವಿಲ್ಲದೆ, ತಮ್ಮ ಪಾಡಿಗೆ ತಾವು ಮೌನವಾಗಿ ಹರಿಯುವ ಈ ಜಲಧಾರೆಗಳು, ದೊಡ್ಡ ಜಲಪಾತಗಳಷ್ಟೇ ಅನಂದವನ್ನು ನೀಡುತ್ತವೆ. ಅವುಗಳ ಚಿಕ್ಕ ಅಸ್ತಿತ್ವದಲ್ಲೂ ಅಡಗಿರುವ ಅಗಾಧ ಸೌಂದರ್ಯ ಮತ್ತು ಪ್ರಶಾಂತತೆಯು ದಾರಿಹೋಕರನ್ನು ಸಮ್ಮೋಹಿನಿಗೊಳಿಸುತ್ತವೆ.
ಜಟಿಲ ಕಾನನದ ಕುಟಿಲ ಪಥ:
ಥ್ರಿಲ್ ಎನಿಸುವ ಹಾವು ಬಳುಕಿನ ಹಾದಿಯಲ್ಲಿ, ಮುಗಿಲೆತ್ತರದ ಪರ್ವತಗಳ ಸಾಲು, ಹಚ್ಚ ಹಸಿರಿನ ಹಚ್ಚಡ ಹೊದ್ದ ಗಿಡ-ಮರಗಳ ನಡುವೆ ರಸ್ತೆ ಉದ್ದಕ್ಕೂ ಪ್ರತಿ ತಿರುವುಗಳಲ್ಲಿ ಗುಪ್ತ ಹಾದಿಗಳಲ್ಲಿ ಹರಿದು ಬಂದು ಧುಮ್ಮಿಕ್ಕುವ ಜಲಪಾತಗಳ ಸೊಬಗು ಸವಿಯುತ್ತಾ, ಮಾಡುವ ಪ್ರಯಾಣ ಮಜವಾಗಿರುತ್ತದೆ. ಮಳೆಗಾಲ-ಚಳಿಗಾಲವೇ ಇರಲಿ, ಬೇಸಗೆಯೇ ಬರಲಿ, ಎಲ್ಲಾ ಸಮಯದಲ್ಲೂ ಚಿಮ್ಮುವ ಪುಟ್ಟ ಪುಟ್ಟ ಸುಂದರ ಕಿರು ಜಲಪಾತಗಳನ್ನು ರಸ್ತೆಗಳ ಅಕ್ಕಪಕ್ಕದ ತಿರುವುತಿರುವುಗಳಲ್ಲೂ ಅತ್ಯಂತ ಸಮೀಪದಿಂದ ಕಂಡು ಆನಂದಿಸಬಹುದಾದ ಅವಕಾಶ ಪಶ್ಚಿಮ ಘಟ್ಟಗಳಲ್ಲಿ ಕಾಣಬಹುದು. ಪ್ರವಾಸಿ ನಕ್ಷೆಗಳಲ್ಲಿ ಸ್ಥಾನ ಪಡೆಯದ, ತಮ್ಮದೇ ಆದ ಸೌಂದರ್ಯದಿಂದ ಕಣ್ಮನ ಸೆಳೆಯುವ ಈ ಅನಾಮಧೇಯ ಜಲಧಾರೆಗಳು ದೊಡ್ಡ ಜಲಪಾತಗಳಂತೆ ಭವ್ಯವಾಗಿಲ್ಲದಿದ್ದರೂ, ತಮ್ಮದೇ ಆದ ಸೌಂದರ್ಯದಿಂದ ಪ್ರವಾಸೋದ್ಯಮಕ್ಕೆ ಮಹತ್ವದ ಕೊಡುಗೆ ನೀಡುತ್ತವೆ.

ಸುಲಭ ಪ್ರವೇಶ ಮತ್ತು ತಾತ್ಕಾಲಿಕ ವಿರಾಮ:
ಈ ಕಿರು ಜಲಧಾರೆಗಳು ರಸ್ತೆಪಕ್ಕದಲ್ಲೇ ಧುಮುಕುತ್ತಿರುವುದರಿಂದ ದೂರದ ಪ್ರಯಾಣದ ಅಗತ್ಯವಿಲ್ಲದೆ, ಶುಲ್ಕ ರಹಿತವಾಗಿ, ರಸ್ತೆಯ ಬದಿಯಲ್ಲೇ ನಿಂತು ವೀಕ್ಷಿಸಬಹುದು. ದೀರ್ಘ ಪ್ರಯಾಣದ ನಂತರ ರಸ್ತೆ ಪಕ್ಕದ ಈ ಜಲಪಾತಗಳ ಬಳಿ ನಿಲ್ಲುವುದು ಒಂದು ರಿಫ್ರೆಷಿಂಗ್ ಅನುಭವ ನೀಡುತ್ತದೆ. ತಂಪಾದ ವಾತಾವರಣ, ಜಲಧಾರೆಗಳ ನಾದ ಮತ್ತು ನೋಟ ಮನಸ್ಸಿಗೆ ಶಾಂತಿ ಮತ್ತು ದೇಹಕ್ಕೆ ಚೈತನ್ಯ ನೀಡುತ್ತದೆ. ಚಾಲಕರು ಮತ್ತು ಪ್ರಯಾಣಿಕರು ಸ್ವಲ್ಪ ಸಮಯ ನಿಂತು, ನಿಸರ್ಗದ ಸೌಂದರ್ಯವನ್ನು ಸವಿದು, ಮತ್ತೆ ಪ್ರಯಾಣ ಮುಂದುವರಿಸುವುದರಿಂದ ಪ್ರಯಾಣದ ಆಯಾಸವೂ ಕಡಿಮೆಯಾಗುತ್ತದೆ. ನೀರಿನ ಮಂಜುಳ ನಿನಾದ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ, ಶಾಂತಿ ತರುವುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಈ ಮಾರ್ಗದ ಮೂಲಕ ಹಾದುಹೋಗುವವರಿಗೆ ಇದೊಂದು ಹೆಚ್ಚುವರಿ ಆಕರ್ಷಣೆಯಾಗಿದ್ದು; ಅದರಲ್ಲೂ ಪಶ್ಚಿಮ ಘಟ್ಟಗಳು ಮಳೆಗಾಲದಲ್ಲಿ ತಮ್ಮ ಪೂರ್ಣ ಸೌಂದರ್ಯವನ್ನು ಅನಾವರಣಗೊಳಿಸುತ್ತವೆ, ಬೈಕ್ ಅಥವಾ ಟ್ರೆಕ್ಕಿಂಗ್ ಮೂಲಕ ಘಟ್ಟದ ರಮಣೀಯ ನೋಟವನ್ನುಅನುಭವಿಸುವುದು ಒಂದು ಅದ್ಭುತ ಅನುಭವ.
ವಿಶಿಷ್ಟ ಸೌಂದರ್ಯ:
ಪ್ರತಿ ಮಿನಿ ಜಲಪಾತವೂ ಅನನ್ಯ. ದಟ್ಟ ಅರಣ್ಯದ ತಂಪು ಪರಿಸರದಲ್ಲಿ ತುಂತುರು, ತುಂತುರಾಗಿ ಬಂಡೆಯ ಮೇಲೆ ಚಿಮ್ಮುವ, ಸ್ಪಟಿಕದಂಥ ನೀರನ್ನು ನೋಡುವುದೇ ಕಣ್ಣಿಗೆ ಹಬ್ಬ. ಕೆಲವು ಕಲ್ಲುಗಳ ಮೇಲೆ ನಯವಾಗಿ ಜಾರಿದರೆ, ಕೆಲವು ಎತ್ತರದಿಂದ ಚಿಮ್ಮುತ್ತವೆ, ಮತ್ತೆ ಕೆಲವು ಹಲವಾರು ಚಿಕ್ಕ ಹಂತಗಳಲ್ಲಿ ಬಳುಕುತ್ತವೆ. ಒಂದಕ್ಕೊಂದು ತಬ್ಬಿಕೊಂಡಂತೆ ಒತ್ತೊತ್ತಾಗಿರುವ ಬಂಡೆಗಳು, ಆ ಬಂಡೆಗಳ ಕೂಡು ಪದರಗಳ ಎಡೆಯಲ್ಲಿ ಬೇರು ಬಿಟ್ಟ ಸಸ್ಯ ಸಂಪತ್ತು, ಕಲ್ಲನಪ್ಪಿದ ಜಿಗುಟಾದ ಹಸಿರು ಪಾಚಿಗಳ ನಡುವೆ ಅರಳಿರುವ ಪುಟ್ಟ, ಪುಟ್ಟ ಹೂಗೊಂಡೆಗಳು, ಜೊತೆಗೆ ಹಸಿರು ಹುಲ್ಲು, ಗಿಡಮೂಲಿಕೆಗಳು, ಅಪರೂಪದ ಕಾಡು ಹೂವುಗಳ ಸುಗಂಧ, ಹಾಗೂ ನೀರಿನ ಬಳಿ ಕುಣಿಯುವ ಚಿಟ್ಟೆಗಳು, ಪಕ್ಷಿಗಳ ಇಂಚರ, ಇವೆಲ್ಲಾ ಜಲಧಾರೆಗಳ ಸೌಂದರ್ಯವನ್ನು ದ್ವಿಗುಣಗೊಳಿಸುತ್ತವೆ. ಮಳೆಗಾಲದಲ್ಲಿ ಇವುಗಳ ಜೀವಂತಿಕೆ ಇನ್ನೂ ಹೆಚ್ಚಾಗುತ್ತದೆ. ಅಪರೂಪಕ್ಕೆ ಸಹ್ಯಾದ್ರಿ ಪರ್ವತ ಪ್ರದೇಶದ ಕಾಡು ಪ್ರಾಣಿಗಳ ದರ್ಶನವೂ ಆಗುತ್ತದೆ. ಹೀಗೆ ಹರಿಯುವ ಕಿರು ಜಲಪಾತಗಳ ಒಂದು ವಿಶೇಷತೆಯೆಂದರೆ, ಪಶ್ಚಿಮ ಘಟ್ಟಗಳಲ್ಲಿ ಇರುವ ದೊಡ್ಡ ಜಲಪಾತಗಳು ಮತ್ತು ಟ್ರೆಕ್ಕಿಂಗ್ ಮಾರ್ಗಗಳತ್ತ ಪ್ರವಾಸಿಗರ ಕಾತರವನ್ನು ಹುಟ್ಟುಹಾಕುತ್ತವೆ, ಇದರಿಂದಾಗಿ ಪ್ರವಾಸಿಗರು ಹೆಚ್ಚಿನ ಅನ್ವೇಷಣೆಗೆ ಪ್ರೇರಿತರಾಗುತ್ತಾರೆ.

ಛಾಯಾಗ್ರಹಣಕ್ಕೆ ಸೂಕ್ತ ತಾಣ:
ಜಲಧಾರೆಯನ್ನು ಹಿಡಿದಿಡಲು ಬಯಸುವ ಪ್ರಯಾಣಿಕರಿಗೆ ಇವು ಹೇಳಿ ಮಾಡಿಸಿದ ತಾಣಗಳಾಗಿವೆ. ತುಂತುರು ಹನಿಗಳು, ನೀರಿನ ಹರಿವು ಮತ್ತು ಸುತ್ತಲಿನ ಹಸಿರು ವಾತಾವರಣ, ಸುಂದರ ಚಿತ್ರಗಳನ್ನು ಸೆರೆಹಿಡಿಯಲು ಅನುವು ಮಾಡಿಕೊಡುತ್ತದೆ. ನೈಸರ್ಗಿಕ ಸೌಂದರ್ಯವನ್ನು ತಮ್ಮ ಕ್ಯಾಮೆರಾ ಅಥವಾ ಮೊಬೈಲ್ ಫೋನ್ ನಲ್ಲಿ ಶಾಶ್ವತಗೊಳಿಸಿಕೊಳ್ಳಬಹುದು. ಸೆಲ್ಫಿ ಪ್ರಿಯರಿಗಂತೂ ಇಷ್ಟದ ತಾಣ. ಈ ಜಲಪಾತಗಳು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಶೂಟ್ ಗಳ ಹಾಟ್‌ಸ್ಪಾಟ್ ಆಗುತ್ತವೆ.
ಸ್ಥಳೀಯ ಆರ್ಥಿಕತೆ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ:
ರಸ್ತೆಯ ಅಂಚಿನ ಈ ಜಲಪಾತಗಳ ಬಳಿ ಪ್ರಯಾಣಿಕರು ನಿಲ್ಲುವುದರಿಂದ ಸಮೀಪದ ಹಳ್ಳಿ ಜನರಿಗೆ ವ್ಯಾಪಾರದ ಅವಕಾಶ ತೆರೆಯುತ್ತವೆ. ಸ್ಥಳೀಯರು ತಮ್ಮ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನ, ಸಣ್ಣಪುಟ್ಟ ಲಘು ಆಹಾರ ಪಾನೀಯಗಳ ಜೊತೆಗೆ ಸ್ಥಳೀಯ ಕರಕುಶಲ ವಸ್ತುಗಳು ಇತ್ಯಾದಿಗಳನ್ನು ಮಾರಾಟ ಮಾಡುವ ಮೂಲಕ ಆದಾಯ ಗಳಿಸಬಹುದು. ಇದು ಗ್ರಾಮೀಣ ಆರ್ಥಿಕತೆಗೆ ಸಣ್ಣ ಪ್ರಮಾಣದಲ್ಲಿ ಬೆಂಬಲ ನೀಡುತ್ತದೆ. ಸ್ಥಳೀಯ ಪ್ರವಾಸೋದ್ಯಮಕ್ಕೆ ಪರೋಕ್ಷವಾಗಿ ನೆರವಾಗುತ್ತದೆ.
ಸಂರಕ್ಷಿಸಿ, ಗೌರವಿಸಿ, ಬೆರೆತು ಸಾಗಿ:
ಈ ಪುಟ್ಟ, ಪುಟ್ಟ ಜಲಪಾತಗಳು ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ವ್ಯವಸ್ಥೆಯ ಭಾಗವಾಗಿರುವುದರಿಂದ, ಅವುಗಳ ಸುತ್ತಲಿನ ಸ್ವಚ್ಛತೆ ಮತ್ತು ಸಂರಕ್ಷಣೆಯ ಬಗ್ಗೆ ಪ್ರವಾಸಿಗರಲ್ಲಿ ಜಾಗೃತಿ ಅಗತ್ಯ. ಪ್ರಯಾಣಿಕರು ತಿನ್ನುವ ಆಹಾರದ ಪೊಟ್ಟಣಗಳು, ಪ್ಲಾಸ್ಟಿಕ್ ಬಾಟಲಿಗಳು ಮತ್ತು ಇತರೆ ಕಸವನ್ನು ಅಲ್ಲೇ ಎಸೆಯುವುದು ಒಂದು ದೊಡ್ಡ ಸಮಸ್ಯೆ. ಇದು ಜಲಪಾತದ ಸೌಂದರ್ಯವನ್ನು ಕೆಡಿಸುವುದಲ್ಲದೆ, ಪರಿಸರ ಮಾಲಿನ್ಯಕ್ಕೆ ಕಾರಣವಾಗಿ, ಈ ತಾಣಗಳ ಸೌಂದರ್ಯಕ್ಕೆ ಧಕ್ಕೆ ತರುತ್ತವೆ. ಆದ್ದರಿಂದ, ಅವುಗಳ ನೈಸರ್ಗಿಕ ಸೌಂದರ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಜಲಪಾತದ ಸುತ್ತಲಿನ ಸೂಕ್ಷ್ಮ ಪರಿಸರ ವ್ಯವಸ್ಥೆಯನ್ನು (ಸಸ್ಯಗಳು, ಸೂಕ್ಷ್ಮಜೀವಿಗಳು) ಹಾಳುಮಾಡದಂತೆ ಪ್ರವಾಸಿಗರು ಮತ್ತು ಸ್ಥಳೀಯ ಆಡಳಿತ ಎಚ್ಚರವಹಿಸಬೇಕು.

ಯಾವುದೇ ಸ್ಥಳಕ್ಕೆ ಪ್ರವಾಸ ಹೋದಾಗ, ಅಲ್ಲಿನ ಸ್ಥಳೀಯ ಜನರೊಂದಿಗೆ ಬೆರೆಯುವುದು ಅತ್ಯಗತ್ಯ. ಪಶ್ಚಿಮ ಘಟ್ಟಗಳಲ್ಲಿ ವಾಸಿಸುವ ಸ್ಥಳೀಯ ಜನರು ತಮ್ಮದೇ ಆದ ವಿಶಿಷ್ಟ ಸಂಸ್ಕೃತಿ, ಸಂಪ್ರದಾಯಗಳನ್ನು ಹೊಂದಿದ್ದಾರೆ. ಅಲ್ಲಿನವರು ಕಾಡು-ಮೇಡುಗಳ ಸಹಜತೆಯನ್ನು ತಮ್ಮ ಬದುಕಿನ ತತ್ವವಾಗಿ ಆಧರಿಸಿಕೊಂಡು ಅದರ ಅನನ್ಯತೆಯೊಂದಿಗೆ ಬದುಕುವವರು. ಅವರೊಡನೆ ಸೌಜನ್ಯದಿಂದ ವರ್ತಿಸಿ. ಅವರ ಸಂಪ್ರದಾಯ, ಜೀವನಶೈಲಿಯನ್ನು ಗೌರವಿಸಿ. ಅವರ ನಂಬಿಕೆಗಳಿಗೆ ಧಕ್ಕೆ ತರುವಂಥ ವರ್ತನೆಗಳಿಂದ ದೂರವಿರಿ.
ಯಾವುದೇ ಹೆಸರು, ಪ್ರಚಾರವಿಲ್ಲದೆ, ರಸ್ತೆಗಳ ತಿರುವಿನಲ್ಲಿ ತಮ್ಮ ಪಾಡಿಗೆ ತಾವು ಮೌನವಾಗಿ ಹರಿಯುವ ಈ ಮಿನಿ ಜಲಧಾರೆಗಳು, ಕೇವಲ ನೀರು ಹರಿಯುವ ಸ್ಥಳಗಳಲ್ಲ, ಪ್ರಕೃತಿಯ ವರ. ಇವು ದೊಡ್ಡ ಜಲಪಾತಗಳಿಗೆ ಮೂಲವಷ್ಟೇ ಅಲ್ಲ, ಅಷ್ಟೇ ಅನಂದವನ್ನು ನೀಡುತ್ತವೆ. ಇವುಗಳನ್ನು ನೋಡುವುದು, ಅನುಭವಿಸುವುದು ಹಾಗೂ ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ. ಜಾಗರೂಕತೆಯಿಂದ ಅನುಭವಿಸಿ, ಅವುಗಳ ಸಹಜ ಸೌಂದರ್ಯ ಮತ್ತು ಸ್ವಚ್ಛತೆಯನ್ನು ಭವಿಷ್ಯದ ಪೀಳಿಗೆಗಾಗಿ ಕಾಪಾಡುವುದು ಪ್ರತಿಯೊಬ್ಬ ಪ್ರಯಾಣಿಕರ ಕರ್ತವ್ಯ. ಮುಂದಿನ ಬಾರಿ ಪಶ್ಚಿಮ ಘಟ್ಟಗಳ ಪ್ರವಾಸ ಕೈಗೊಂಡಾಗ, ರಸ್ತೆಯ ಅಂಚಿನಲ್ಲಿ ಅರಳಿದ ಪ್ರಕೃತಿಯ ಈ ಚಿಕ್ಕ ಅದ್ಭುತಗಳನ್ನು ಕಣ್ತುಂಬಿಕೊಳ್ಳಿ. ಅವುಗಳ ಅನನ್ಯ ಸೌಂದರ್ಯವನ್ನು ಆಸ್ವಾದಿಸಲು ಕೆಲ ಸಮಯ ಮೀಸಲಿಡಿ.