ಪಾಪ-ಪುಣ್ಯದ ಕೆರೆ.. ನರಸಿಂಹ ಪರ್ವತದ ಕರೆ!
ಇಲ್ಲಿಯ ಸ್ಥಳ ಪುರಾಣಗಳ ಪ್ರಕಾರ ಮಕ್ಕಳಾಗದ ಮೈಸೂರು ಮಹಾರಾಜರು ಇಲ್ಲಿ ಪುತ್ರ ಕಾಮೇಷ್ಠಿ ಯಾಗ ಮಾಡಿದ್ದರು ಎಂಬ ಪ್ರತೀತಿ ಕೂಡ ಇದೆ. ನರಸಿಂಹ ದೇವರ ಅಭಿಷೇಕಕ್ಕೆ ಬಳಸುವ, ಪ್ರಸಾದದ ಅಡುಗೆಗೆ ಬಳಸುವ ಜೋಡಿ ಕೆರೆಗಳಲ್ಲಿ ವರ್ಷಾವಧಿ ನೀರು ತುಂಬಿಕೊಂಡಿರುವುದು ಮತ್ತೊಂದು ಸ್ಥಳ ವಿಶೇಷ.
- ಶುಭಶ್ರೀ ಭಟ್ಟ
ಕೆಲವು ವರ್ಷದ ಹಿಂದೆ ಒಂದು ರಸ್ತೆಯಿಂದ ಇನ್ನೊಂದು ರಸ್ತೆಯ ತುದಿಗೆ ಓಡಾಡಲು ರಿಕ್ಷಾ ಸಿಗಬಹುದಾ ಎಂದು ಹುಡುಕುತ್ತಿದ್ದೆ. 'ಸುಮ್ಮನೆ ನಡಿ' ಅಂತ ಬೈಯ್ದರೂ ಬೈಸಿಕೊಂಡು ಜೊತೆಗಿದ್ದವರನ್ನು ಆಟೋರಿಕ್ಷಾದಲ್ಲಿ ಎಳೆದೊಯ್ಯುತ್ತಿದ್ದೆ. ಮನಸು ಮಾಡಿದರೆ ಏನನ್ನಾದರೂ ಸಾಧಿಸಬಹುದು ಎಂಬುದು ಕೇವಲ ನಾನು ಓದುವ ಪುಸ್ತಕ ಹಾಗೂ ಬರೆಯುವ ಅಕ್ಷರಕ್ಕೆ ಮೀಸಲಾಗಿತ್ತು ಎಂಬಂತೆ ಇದ್ದು ಬಿಟ್ಟಿದ್ದವಳು. ತನ್ನದೇ ವೈಯಕ್ತಿಕ ಸಮಸ್ಯೆಗಳಿಂದ, ಕೀಳರಿಮೆಯಿಂದ ತನ್ನ ಸುತ್ತಲೊಂದು ವರ್ತುಲ ಹಾಕಿಕೊಂಡು ಬದುಕಿದ್ದವಳಿಗೆ ಅದನ್ನು ದಾಟುವ ಯೋಚನೆಯೂ ಇರಲಿಲ್ಲ. ಒಂದು ರೀತಿಯಲ್ಲಿ ಸುತ್ತಲಿದ್ದವರು ಅಷ್ಟಾಗಿ ಗಣನೆಗೆ ತೆಗೆದುಕೊಳ್ಳದ್ದಕ್ಕೆ ಇದೂ ಒಂದು ಮುಖ್ಯವಾದ ಕಾರಣವಾಗಿತ್ತು. ಅಳುವ ತನಕ ಅತ್ತು, ಕುಸಿದು ಕೂತವಳು ಕೊನೆಗೊಮ್ಮೆ ಮೈಕೊಡವಿ ನಿಂತಾಗ ಜೊತೆಯಾಗಿದ್ದೇ ಈ ಪ್ರವಾಸ, ಟ್ರೆಕ್ಕಿಂಗ್ ಮತ್ತು ಬರವಣಿಗೆ.
ನನ್ನೂರು ಶೃಂಗೇರಿ ಸಮೀಪದಲ್ಲಿ 'ನರಸಿಂಹ ಪರ್ವತ' ಎಂಬ ದೊಡ್ಡ ಬೆಟ್ಟವಿದೆ. ಇತ್ತ ಕಿಗ್ಗದಿಂದಲೂ ಅತ್ತ ಆಗುಂಬೆಯಿಂದಲೂ ಹತ್ತಬಹುದಾದ 'ನರಸಿಂಹ ಪರ್ವತ' ಆಗುಂಬೆಯ ಸುತ್ತಮುತ್ತಲಿನ ಅತ್ಯಂತ ಎತ್ತರದ ಬೆಟ್ಟವೂ ಹೌದು. ಸಾರಿಗೆ ವ್ಯವಸ್ಥೆಯಿಲ್ಲದ ಕಾಲದಲ್ಲಿ ಶೃಂಗೇರಿಯ ಸುತ್ತಮುತ್ತಲಿನ ಜನರು ಈ ಬೆಟ್ಟದ ಮುಖಾಂತರ ಸೀತಾನದಿ ಕಡೆಗೆ ತೆರಳಿ ಅಲ್ಲಿಂದ ದನಕರುಗಳನ್ನು ತರುತ್ತಿದ್ದರಂತೆ. ಇಲ್ಲಿಯ ಸ್ಥಳ ಪುರಾಣಗಳ ಪ್ರಕಾರ ಮಕ್ಕಳಾಗದ ಮೈಸೂರು ಮಹಾರಾಜರು ಇಲ್ಲಿ ಪುತ್ರ ಕಾಮೇಷ್ಠಿ ಯಾಗ ಮಾಡಿದ್ದರು ಎಂಬ ಪ್ರತೀತಿ ಕೂಡ ಇದೆ.

ಪರ್ವತದ ಸ್ಥಳ ಪುರಾಣ, ಇತಿಹಾಸ ಕೇಳಿದಾಗಲೆಲ್ಲ ನನಗೂ ಹೋಗಬೇಕೆಂಬ ಆಸೆ ಜಾಸ್ತಿಯಾಗ್ತಿತ್ತು. ಆದರೆ ಬಹುತೇಕರು 'ನಿನ್ನ ಹತ್ತಿರ 'ನರಸಿಂಹ ಪರ್ವತದ ಚಾರಣವಾ?' ಉಹೂಂ ಅದರ ಅರ್ಧ ದಾರಿ ತನಕ ಹೋಗ್ಲಿಕ್ಕೂ ಸಾಧ್ಯವಿಲ್ಲ' ಎನ್ನುತ್ತಾ ಅಲ್ಲಗಳೆಯುತ್ತಿದ್ದರು. ಆದರೆ ಈ ಹೊಸ ವರ್ಶನ್ನಿಗೆ ಸಾಹಸ ಮಾಡುವ ಹುಚ್ಚು ಚೂರು ಜಾಸ್ತಿಯೇ. ಆದ್ದರಿಂದ ಹಟ ಮಾಡಿ ನಸುಕಿನಲ್ಲಿಯೇ ಜೊತೆಗಿದ್ದವರನ್ನು ಚಾರಣಕ್ಕೆ ಎಳೆದೊಯ್ಯಲಾಗಿತ್ತು. ಹೆಚ್ಚೆಂದರೆ ನಾಕೈದು ಕಿ.ಮೀ ಎತ್ತರದ ಚಾರಣವನ್ನಷ್ಟೆ ಮಾಡಿ ಅನುಭವವಿದ್ದವಳಿಗೆ ಹನ್ನೊಂದು ಕಿ.ಮೀ ಚಾರಣ ಮಾಡುವಾಗ ಹೊಸ ಪುಳಕ ಜೊತೆಯಾಗಿತ್ತು. ಬೆಟ್ಟ ಹತ್ತುವ ದಾರಿ ಸುಲಭದ್ದೂ, ಸಲೀಸಿನದೂ ಆಗಿರಲಿಲ್ಲ. ಕಲ್ಲು ಬಂಡೆಗಳೂ, ಮುಳ್ಳು ಪೊದೆಗಳೂ, ದಿಬ್ಬಗಳ ಏರು, ಜಾರುವಂಥ ಕಾಲುದಾರಿಯ ಇಳಿಜಾರು ಎಲ್ಲವನ್ನೂ ಆಸ್ವಾದಿಸುತ್ತಾ ಅರ್ಧ ದಾರಿಗೆ ಬರುವಾಗ ಉಸಿರು ನಿಧಾನಕ್ಕೆ ತಾಳ ತಪ್ಪುತ್ತಿತ್ತು. ತಂಪಾದ ಕಲ್ಲು ಬಂಡೆಯ ಮೇಲೆ ಕುಳಿತು ನೀರು ಕುಡಿಯುವಾಗ ಮುಂದೆ ಸಾಗುವುದೇ ಬೇಡ ಅಂತನಿಸಿಬಿಟ್ಟಿತ್ತು. ಆದರೆ ಮತ್ತೆ ಬಿಸಿಲು ನೆತ್ತಿಗೇರಿದರೆ ಪರ್ವತದ ತುದಿಯ ಚೆಂದದ ನೋಟ ಕಳೆದುಕೊಳ್ಳುವ ಭಯಕ್ಕೆ ಸುಸ್ತಾದರೂ, ಹಸಿವಾದರೂ ಪಟಪಟನೆ ಮುನ್ನಡೆದೆವು. ಮಾಗಿಯ ಚಳಿಯಲ್ಲಿಯೂ ಬೆವರು ಮುಂಜಾವಿನ ಇಬ್ಬನಿಯಂತೆ ಮೈಪೂರ್ತಿ ಆವರಿಸಿತ್ತು.
ವಿಶೇಷ ದಿನಗಳಂದು ನರಸಿಂಹ ದೇವರ ಅಭಿಷೇಕಕ್ಕೆ ಬಳಸುವ, ಪ್ರಸಾದದ ಅಡುಗೆಗೆ ಬಳಸುವ ಪಾಪದ ಕೆರೆ, ಪುಣ್ಯದ ಕೆರೆ ಎಂಬ ಹೆಸರಿನಿಂದ ಕರೆಯಲ್ಪಡುವ ಜೋಡಿ ಕೆರೆಗಳಲ್ಲಿ ವರ್ಷಾವಧಿ ನೀರು ತುಂಬಿಕೊಂಡಿರುವುದು ಮತ್ತೊಂದು ಸ್ಥಳ ವಿಶೇಷ. ಅಲ್ಲಿಯೇ ತುಸು ದೂರದಲ್ಲಿ ಹರಿಯುತ್ತಿರುವ ತಣ್ಣನೆಯ ತೊರೆಯ ಪಕ್ಕ ಕುಳಿತು ಅದರ ನೀರವ ಸದ್ದನ್ನು ಆಲಿಸುತ್ತಾ ಸದ್ದಿಲ್ಲದೇ ತಿಂಡಿ ತಿನ್ನುವ ಅನುಭವದ ಮುಂದೆ ಪಂಚತಾರ ಹೊಟೇಲುಗಳನ್ನು ನಿವಾಳಿಸಿ ಒಗೆಯಬೇಕು. ಅಲ್ಲಿಂದ ಚೂರು ದೂರ ಹೋದರೆ ನಕ್ಸಲ್ ನಿಗ್ರಹ ಪಡೆಯವರು ಕಟ್ಟಿಕೊಂಡಿದ್ದ ಮನೆಯ ಅವಶೇಷ ಕಾಣಿಸಿತು. ಇಂಥ ದಂಡಕಾರಣ್ಯದಲ್ಲಿ ಬಂದು ವರ್ಷಗಟ್ಟಲೇ ಉಳಿದವರ ಬಗ್ಗೆ ಸೋಜಿಗಗೊಳ್ಳುತ್ತಲೇ ಮುಂದೆ ನಡೆದೆವು.

ಮತ್ತೊಂದೆರಡ್ಮೂರು ಕಿ.ಮೀ ನಡೆದಾಗ ಪರ್ವತದ ತುದಿಗೆ ತಲುಪಿದ್ದು ಅರಿವಾಯ್ತು. ಅಷ್ಟು ಚಂದದ ಪ್ರಕೃತಿಯ ನಡುವೆ ಯಾವ ಗುಡಿ-ಗೋಪುರಗಳ ಹಂಗಿಲ್ಲದೇ ನಿಶ್ಚಲನಾಗಿ ನಿಂತಿರುವ ನರಸಿಂಹ ದೇವರ ಮೂರ್ತಿ, ಬಂಡೆಯ ಮೇಲಿದ್ದ ಪಾದುಕೆ ಎಲ್ಲವನ್ನೂ ನೋಡಿ ಮನಸ್ಸು ಅರೆಕ್ಷಣ ಭಾವಪರವಶವಾಯ್ತು. ಸುತ್ತಲೂ ಕಾಣುತ್ತಿರುವ ಹತ್ತೂರು, ಮುದಗೊಳಿಸುವ ಆ ಸೊಬಗಿಗೆ, ಇಂಪಾಗಿ ಹಾಡುವ ಹಕ್ಕಿಗಳ ಮಾರ್ದನಿಗೆ, ಉರಿಬಿಸಿಲಿದ್ದರೂ ಬೀಸುತ್ತಿದ್ದ ಶೀತಲ ಶುಭ್ರ ತಂಗಾಳಿಗೆ ಅಷ್ಟು ಹೊತ್ತಿನ ಸುಸ್ತನ್ನು ಮರೆಸುವ ಅಪ್ರತಿಮ ಶಕ್ತಿಯಿತ್ತು. ಎಲ್ಲೆಗಳ ಮೀರಿ ನಡೆಯಲು ಶುರು ಮಾಡಿದವಳಿಗೆ ಈ ಟ್ರೆಕ್ಕಿಂಗ್ ಕಟ್ಟಿಕೊಟ್ಟ ಅನುಭವ ಅನೂಹ್ಯ.
ವಿ.ಸೂ: ಅಂದ ಹಾಗೆ ಇಲ್ಲಿಗೆ ಹೋಗಲು ಬಯಸುವವರು ಊರಿನ ಮಾರ್ಗದರ್ಶಕರ ಜೊತೆ, ಅರಣ್ಯಾಧಿಕಾರಿಗಳ ಒಪ್ಪಿಗೆಯನ್ನು ತೆಗೆದುಕೊಂಡು ಹೋಗುವುದೊಳಿತು.