Thursday, September 10, 2026
Thursday, September 10, 2026

ಮುಕ್ತಿ ಧಾಮ: ಮೈಸೂರಲ್ಲಿ ಮಸಣ ಪ್ರವಾಸ

ಒಂದು ಬದಿಯಲ್ಲಿ ಗಣಪತಿ ಮತ್ತೊಂದು ಬದಿ ಭಗವಾನ್ ಬುದ್ಧನ ಪ್ರತಿಮೆ ಸ್ಮಶಾನಕ್ಕೆ ದೈವಿಕ ಸ್ಪರ್ಶ ನೀಡುವಂತೆ ಕಂಗೊಳಿಸುತ್ತಿದ್ದವು. ಮುಂದೆ ಸಾಗಿದಾಗ ವಿಶಾಲವಾದ ದ್ವಾರ ಉಳ್ಳ ಮುಖ್ಯ ಕಟ್ಟಡ. ಅಲ್ಲಿ ಮಧ್ಯ ಭಾಗದಲ್ಲಿ ಎರಡು ವಿದ್ಯುತ್ ಚಿತಾಗಾರಗಳು. ಶವಗಳನ್ನು ದಹಿಸುವಾಗ ಹೊಗೆಯಿಂದ ಪರಿಸರ ಮಾಲಿನ್ಯವಾಗದಂತೆ ತಡೆಯಲು 100 ಅಡಿ ಉದ್ದದ ಎರಡು ಚಿಮಣಿಗಳು ನಿಂತಿವೆ. ಚಿತಾಗಾರದ ಎರಡೂ ಬದಿಗಳಲ್ಲಿ ಮೃತರಿಗೆ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲು ಪ್ರತ್ಯೇಕ ಸ್ಥಳ. ಶವವನ್ನು ಇಡಲು ಕಪ್ಪು ಶಿಲೆಯ ಹಾಸುಗಳು, ಸುತ್ತಲೂ ಬಂಧು ಮಿತ್ರರು ಕುಳಿತು ವಿಧಿಯ ಆಟವನ್ನು ವೀಕ್ಷಿಸಲು ಮಿನಿ ಕ್ರಿಕೆಟ್ ಸ್ಟೇಡಿಯಂ ರೀತಿಯ ಸೋಪಾನಗಳಿವೆ.

  • ಲಕ್ಷ್ಮಣ್ ಗೊರ್ಲಕಟ್ಟೆ

ಯಾವಾಗಲೂ ಗಿಜಿಗಿಜಿ ಎನ್ನುವ ನಗರ ದಟ್ಟಣೆಯ ಗದ್ದಲದಿಂದ ದೂರ ಹೋಗಿ ಯಾವುದಾದರೂ ಒಂದು ಪ್ರಶಾಂತ ಸ್ಥಳಕ್ಕೆ ಪ್ರವಾಸ ಹೋಗೋಣವೆನಿಸಿತು. ರೆಸಾರ್ಟ್, ಹೊಟೇಲ್‌, ತಿಂಡಿ- ತಿನಿಸು, ಮೋಜು- ಮಸ್ತಿ ಬೇಡವೇ ಬೇಡ, ಚೆಕ್-ಇನ್, ಚೆಕ್-ಔಟ್ ಜಂಜಡ ಇಲ್ಲದೆ ಸ್ವಲ್ಪ ಸಮಯ ಏಕಾಂತವಾಗಿ ಸೋಲೋ ಪಯಣ ಮಾಡೋಣ ಎಂದು ನಿರ್ಧರಿಸಿ ಯೋಚಿಸಿದೆ. ಆಗ ನನಗೆ ಎಲ್ಲೋ ಓದಿದ್ದು, ಕೇಳಿದ್ದು ʼಒಮ್ಮೊಮ್ಮೆ ಸ್ಮಶಾನಕ್ಕೆ ಅಥವಾ ಆಸ್ಪತ್ರೆಗೆ ಭೇಟಿಕೊಡಿ ಆಗ ನಿಮಗೆ ನೀವು ಎಷ್ಟು ಅದೃಷ್ಟವಂತರು ಎಂದು ತಿಳಿಯುತ್ತದೆʼ ಎಂಬ ಸಲಹೆ ನೆನಪಾಯಿತು. ಹಾಗಾಗಿ ಕೂಡಲೆ ನಮ್ಮ ಮೈಸೂರಿನ ʼಮುಕ್ತಿ ಧಾಮ, ಅತ್ಯಾಧುನಿಕ ಚಿತಾಗಾರ, ವಿಜಯ ನಗರʼ ಸ್ಮಶಾನಕ್ಕೆ ಹೊರಟೆ. ದಾರಿಯುದ್ದಕ್ಕೂ ಡಿವಿಜಿ ಅವರ ಕಗ್ಗ,

ʻಬದುಕು ಜಟಕಾ ಬಂಡಿ ವಿಧಿಯದರ ಸಾಹೇಬ|

ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು||

ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು|

ಪದ ಕುಸಿಯೆ ನೆಲವಿಹುದು - ಮಂಕುತಿಮ್ಮ||

ಕಗ್ಗವನ್ನೇ ಮೆಲುಕು ಹಾಕುತ್ತಾ ಸಾಗುವಾಗ ನನ್ನ ‘ಪ್ರೇಕ್ಷಣಾ ಸ್ಥಳ’ ಬಂದೇ ಬಿಟ್ಟಿತು.

ಇದನ್ನೂ ಓದಿ: ಜಾಗತಿಕ ಮಟ್ಟದ ಸ್ಪರ್ಧಾತ್ಮ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಮೈಸೂರು ಸೇರ್ಪಡೆ?

ಮುಕ್ತಿ ಧಾಮ

ಸುಂದರ ಕಮಾನು, ಅದರ ಮೇಲೆ ʼಮುಕ್ತಿ ಧಾಮ, ಅತ್ಯಾಧುನಿಕ ಚಿತಾಗಾರ, ವಿಜಯನಗರʼ ಎಂಬ ಫಲಕ. ನನ್ನನ್ನು ʼಸ್ವಾಗತಿಸುವಂತೆʼ ತೋರಿತು! ಗೇಟ್ ಒಳಗೆ ಪ್ರವೇಶ ಮಾಡಿದ ಕೂಡಲೇ ಅಲ್ಲಿಯೇ ಇದ್ದ ಕಾವಲುಗಾರ ʼಸಾರ್ ಬಾಡಿ ಬರುತ್ತಾ ಇದೆಯಾ?ʼ ಎಂದ. ನಾನು ತಬ್ಬಿಬ್ಬಾಗಿ ʼಇಲ್ಲ ನಾನು ಸುಮ್ಮನೆ ಬಂದೆ, ನೋಡಿಕೊಂಡು ಹೋಗೋಣವೆಂದುʼ ಅಂದೆ. ಆಗ ಆತ ನನ್ನ ಕಡೆ ವಿಚಿತ್ರ ನಗೆ ಬೀರಿದ. ಅವನ ಒಪ್ಪಿಗೆ ಪಡೆದು ಒಳಗೆ ಹೋದೆ. ನನ್ನ ʼಜೀವಂತ ಬಾಡಿʼ ಸಮೇತ! ಒಳಗಡೆ ʼಸ್ಮಶಾನ ಮೌನʼ. ನಾನು ಹೋಗಿದ್ದ ಹೊತ್ತು ಯಾರ ಶವವೂ ಬಂದಿರಲಿಲ್ಲ. ನನ್ನ ಮಸಣದ ವೀಕ್ಷಣೆಗೆ ಅವಕಾಶ ಎನಿಸಿತು.

mukti dham

ವಿದ್ಯುತ್ ಚಿತಾಗಾರಗಳು

ಪ್ರವೇಶದ್ವಾರದಿಂದ ಸುಮಾರು 200 ಅಡಿ ಉದ್ದದ ದ್ವಿಪಥದ ವಿಶಾಲವಾದ ದಾರಿ. ಮಧ್ಯೆ ಹೂವಿನ ಗಿಡಗಳು ಬೆಳೆದ ಡಿವೈಡರ್‌. ದಾರಿಯ ಇಕ್ಕೆಲಗಳಲ್ಲಿ ಹೂವಿನ ಗಿಡಗಳು ಮತ್ತು ಮರಗಳು ಗಾಳಿಗೆ ತೂಗುತ್ತಾ ನನ್ನನ್ನು ಸ್ವಾಗತಿಸುವಂತೆ ಕಂಡವು. ಆ ದಾರಿಯಲ್ಲಿ ಎಡ-ಬಲಕ್ಕೆ ಹೊರಳಿ ನೋಡುತ್ತಾ ಮುಂದೆ ಸಾಗಿದೆ. ಅಲ್ಲಿ ಒಂದು ವೃತ್ತಾಕಾರದ ನೀರಿನ ಕೊಳವಿತ್ತು. ಅದರ ಮಧ್ಯದಲ್ಲಿ ನೀರಿನ ಚಿಲುಮೆ! ಒಂದರೆ ಕ್ಷಣ ನಾನೇನು ಸ್ಮಶಾನಕ್ಕೆ ಬಂದೆನೋ ಅಥವಾ ಯಾವುದೋ ಪಾರ್ಕ್‌ಗೆ ಬಂದೆನೋ ಎಂದು ಅನುಮಾನಿಸಿದೆ. ಕೊಳದ ಮಧ್ಯೆ ಸ್ಮಶಾನ ವಾಸಿ ಶಿವನ ಪ್ರತಿಮೆ ಇತ್ತು. ಒಂದು ಬದಿಯಲ್ಲಿ ಗಣಪತಿ ಮತ್ತೊಂದು ಬದಿ ಭಗವಾನ್ ಬುದ್ಧನ ಪ್ರತಿಮೆ ಸ್ಮಶಾನಕ್ಕೆ ದೈವಿಕ ಸ್ಪರ್ಶ ನೀಡುವಂತೆ ಕಂಗೊಳಿಸುತ್ತಿದ್ದವು. ಮುಂದೆ ಸಾಗಿದಾಗ ವಿಶಾಲವಾದ ದ್ವಾರ ಉಳ್ಳ ಮುಖ್ಯ ಕಟ್ಟಡ. ಅಲ್ಲಿ ಮಧ್ಯ ಭಾಗದಲ್ಲಿ ಎರಡು ವಿದ್ಯುತ್ ಚಿತಾಗಾರಗಳು. ಶವಗಳನ್ನು ದಹಿಸುವಾಗ ಹೊಗೆಯಿಂದ ಪರಿಸರ ಮಾಲಿನ್ಯವಾಗದಂತೆ ತಡೆಯಲು 100 ಅಡಿ ಉದ್ದದ ಎರಡು ಚಿಮಣಿಗಳು ನಿಂತಿವೆ. ಚಿತಾಗಾರದ ಎರಡೂ ಬದಿಗಳಲ್ಲಿ ಮೃತರಿಗೆ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲು ಪ್ರತ್ಯೇಕ ಸ್ಥಳ. ಶವವನ್ನು ಇಡಲು ಕಪ್ಪು ಶಿಲೆಯ ಹಾಸುಗಳು, ಸುತ್ತಲೂ ಬಂಧು ಮಿತ್ರರು ಕುಳಿತು ವಿಧಿಯ ಆಟವನ್ನು ವೀಕ್ಷಿಸಲು ಮಿನಿ ಕ್ರಿಕೆಟ್ ಸ್ಟೇಡಿಯಂ ರೀತಿಯ ಸೋಪಾನಗಳಿವೆ.

ಇದನ್ನೂ ಓದಿ: ಮೈಸೂರಿನ ಹತ್ತಿರ ಸೋಮನಾಥಪುರ…

ಕಟ್ಟಿಗೆ ಚಿತಾಗಾರಗಳೂ ಇವೆ

ವಿದ್ಯುತ್ ಚಿತೆ ಬೇಡವೆನ್ನುವವರಿಗೆ ಅಗ್ನಿ ಸ್ಪರ್ಶದಿಂದ ಸಂಸ್ಕಾರ ನೆರವೇರಿಸಲು ಮುಖ್ಯ ವಿದ್ಯುತ್ ಚಿತಾಗಾರದ ಹಿಂಬದಿಯಲ್ಲಿ ತೆರೆದ ಚಿತಾಗಾರ. ಒಟ್ಟಿಗೆ ನಾಲ್ಕು ಶವಗಳನ್ನು ದಹಿಸಲು ಪೀಠಗಳು, ಒಂದು ಅನಿಲ ಚಿತಾಗಾರ ಸಹ ಇದ್ದು ಮಳೆಯಿಂದ ರಕ್ಷಣೆಗೆಂದು ಮೇಲ್ಚಾವಣಿ ವ್ಯವಸ್ಥೆ ಮಾಡಲಾಗಿದೆ. ಈ ಬಯಲು ಚಿತಾಗಾರದ ಎರಡೂ ಬದಿಗಳಲ್ಲಿ ಇವೆ ಎರಡು ಮುಚ್ಚಿದ ಚಿತಾಗರಗಳು. ಶವ ಸಂಸ್ಕಾರಕ್ಕೆ ಬೇಕಾಗುವ ಕಟ್ಟಿಗೆಯ ಡಿಪೋ, ಅದರ ಬದಿಯಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾದ ಸ್ನಾನಗೃಹ-ಶೌಚಾಲಯಗಳ ವ್ಯವಸ್ಥೆ ಸಹ ಲಭ್ಯವಿದೆ.

mukti dham

ವಿಶಾಲ ಆವರಣ

ಐದು ಎಕರೆ ಹತ್ತು ಗುಂಟೆಯಷ್ಟು ವಿಶಾಲವಾದ ಆವರಣದಲ್ಲಿ ನಿರ್ಮಿತ ಸುಸಜ್ಜಿತ ಸ್ವಚ್ಛ ಸ್ಮಶಾನವಿದು. ಹತ್ತಾರು ವಾಹನಗಳ ನಿಲುಗಡೆಗೆ ಸಾಕಷ್ಟು ಜಾಗವಿದೆ. ವಿಶ್ರಮಿಸಲು ಅಲ್ಲಲ್ಲಿ ಗಿಡ-ಮರಗಳ ನೆರಳಿನಲ್ಲಿ ಕಲ್ಲು ಬೆಂಚುಗಳಿವೆ. ಸಾಮಾನ್ಯವಾಗಿ ನಮ್ಮಲ್ಲಿ ಸ್ಮಶಾನವೆಂದರೆ ಅವ್ಯವಸ್ಥೆ ಮತ್ತು ಕೊಳಕು ತುಂಬಿ ತುಳುಕುವ ಆಗರಗಳು. ಆದರೆ ಮೈಸೂರಿನ ವಿಜಯನಗರದ ಸ್ಮಶಾನ ಇದಕ್ಕೊಂದು ಅಪವಾದ. ಅದಕ್ಕೆ ಮುಕ್ತಿ ಧಾಮ ಎಂದು ಹೆಸರಿಟ್ಟಿರುವುದು ಸಾರ್ಥಕ ಎನಿಸಿತು. ನನಗೂ ಮನಸಿನೊಳಗೆ ʼಸತ್ತ ಮೇಲೆ ಇಲ್ಲೇ ಬರಬೇಕೆಂದುʼ ಅನಿಸಿಬಿಟ್ಟಿತು! ಅಲ್ಲಿಯವರೆಗೆ ಇಲ್ಲಿಗೆ ಆಗಾಗ ಹೀಗೆ ಸುಮ್ಮನೆ ಬಂದು ಹೋಗೋಣವೆನ್ನಿಸಿತು. ʼಅಲ್ಲಿ ಇದೆ ನಮ್ಮ ಮನೆ, ಇಲ್ಲಿ ಬಂದೆ ಇದು ಸುಮ್ಮನೆʼ ಎಂಬ ದಾಸವಾಣಿಯನ್ನು ನೆನೆಯುತ್ತಾ ಮುಕ್ತಿ ಧಾಮದಿಂದ ಹೊರ ನಡೆದೆ. ಆಗ ನನ್ನ ಮನಸಿನಲ್ಲಿ ಏನೋ ಧನ್ಯತಾ ಭಾವ, ಶಾಂತಿ ನೆಲೆಸಿತ್ತು.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..