ವ್ಯೂ ಪಾಯಿಂಟ್ ಕುಮಾರ್ ಪರ್ವತ ಶಿಖರ
ಕುಮಾರ ಪರ್ವತದ ನೈರುತ್ಯ ದಿಕ್ಕಿನಲ್ಲಿ ಸಾಗಿದರೆ 5 ನಿಮಿಷದಲ್ಲೇ ಮಾರಿಗುಂಡಿ ಕಣಿವೆ-ಸಿದ್ಧ ಪರ್ವತದ ವೀಕ್ಷಣಾ ಸ್ಥಳ ಸಿಗುತ್ತವೆ. ಇವುಗಳ ಜತೆಗೆ ಬ್ರಹ್ಮಗಿರಿ ಪರ್ವತ, ಕುಮಾರ ಪರ್ವತ, ಶೇಷ ಪರ್ವತದ ತಪ್ಪಲಿನ ಹಳ್ಳಿಗಳು, ಶ್ರೀ ಹರಿಹರೇಶ್ವರ ದೇವಸ್ಥಾನದ ಬಳಿ ಎರಡು ನದಿಗಳು ಇನ್ನೂ ಅನೇಕ ಅತ್ಯದ್ಭುತಗಳ ಕಾಣಲು ಸಿಗುತ್ತವೆ. ಈ ಸ್ಥಳ ಎಷ್ಟು ಚೆಂದವೋ ಅಷ್ಟೇ ಅಪಾಯಕಾರಿ. ಯಾಮಾರಿದರೆ ಯಮಪುರಿ!
- ಶ್ರೀಕರ ಬಿ
ಕುಮಾರ ಪರ್ವತ, ಇದು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಚಿರಪರಿಚಿತ ಹೆಸರು. ಸುಬ್ರಹ್ಮಣ್ಯಕ್ಕೆ ಬರುವವರಿಗೆ ದೇವಸ್ಥಾನದ ಹಿಂಬದಿಯಲ್ಲಿನ ಬೆಟ್ಟ ಯಾವುದು ಎಂದರೆ ತಕ್ಷಣ ಹೇಳುವುದು ಕುಮಾರ ಪರ್ವತ(ಆದರೆ ನಿಜವಾಗಿ ಅದು ಶೇಷ ಪರ್ವತ) ಎಂದು. ಕುಮಾರ ಪರ್ವತ ಅಷ್ಟು ಚಿರಪರಿಚಿತವಾಗಿದೆ. ಚಾರಣಪ್ರಿಯರಿಗೆ ಇದು ಸ್ವರ್ಗ! ಎಷ್ಟು ಬಾರಿ ಚಾರಣ ಮಾಡಿದರೂ ಮತ್ತೆ ತನ್ನತ್ತ ಚಾರಣ ಪ್ರಿಯರನ್ನು ಸೆಳೆಯುವ ಶಿಖರವಿದು. ನೋಡಲು ಎಷ್ಟು ಸುಂದರವೋ ಅಷ್ಟೇ ಕಠಿಣದ ಚಾರಣವಿದು!
ಎರಡು ವರ್ಷಗಳ ಹಿಂದೆ ಸುಬ್ರಹ್ಮಣ್ಯದಿಂದ ಕುಮಾರ ಪರ್ವತಕ್ಕೆ ಚಾರಣ ಮಾಡಿದ್ದೆ. ಆ ಬಳಿಕ ಬದಲಾದ ನಿಯಮಗಳಿಂದ ಕುಮಾರ ಪರ್ವತ ಚಾರಣ ಕೇವಲ ಒಂದೇ ದಿನಕ್ಕೆ ಸೀಮಿತಗೊಂಡಿತು. ಸುಬ್ರಹ್ಮಣ್ಯ ಭಾಗದಿಂದ ಹೋಗುವುದಾದರೂ ಒಂದೇ ದಿನದಲ್ಲಿ ಕುಮಾರ ಪರ್ವತ ಹತ್ತಿ ಇಳಿಯಬೇಕು. ಗಿರಿಗದ್ದೆಯಲ್ಲಿ ಭಟ್ಟರಮನೆ ಅಥವಾ ಅರಣ್ಯ ಇಲಾಖೆಯ ಚೆಕ್ ಪೋಸ್ಟ್‌ನಲ್ಲಿ ರಾತ್ರಿ ತಂಗುವಂತಿಲ್ಲ.
ಇದನ್ನೂ ಓದಿ: 32ರ ಸಂಭ್ರಮದಲ್ಲಿ ಅಡಿಗಾಸ್ ಯಾತ್ರಾ
ಈ ಚಾರಣ, ಮೋಜು ಮಸ್ತಿಗಾಗಿ ಎಂದಾದರೆ ಖಂಡಿತ ಸಾಧ್ಯವಿಲ್ಲ! ಇದಕ್ಕೆ ನಮ್ಮ ದೇಹ ಮತ್ತು ಮನಸು ಎರಡೂ ಗಟ್ಟಿಯಾಗಿರಬೇಕು. ಚಾರಣ ಮಾಡಬಲ್ಲೆ ಎನ್ನುವ ಧೃಡ ನಿರ್ಧಾರವಿದ್ದರೆ ಮಾತ್ರ ಒಂದೇ ದಿನದಲ್ಲಿ ಹತ್ತಿ ಇಳಿಯಬಹುದು! ಇಲ್ಲದಿದ್ದರೆ ಅರ್ಧ ದಾರಿಯಲ್ಲಿ ನೀವು ಬಾಕಿ ಆಗುವುದು ಖಂಡಿತ.
ಪ್ರತಿ ಬಾರಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಮಹೋತ್ಸವ, ಅದರ ಬಳಿಕ ಕುಮಾರ ಪರ್ವತದಲ್ಲಿ ನಡೆಯುವ ಕುಮಾರ ಪಾದಪೂಜೆ, ಪಾದಯಾತ್ರೆಯ ಸುದ್ದಿ, ಫೊಟೋ, ವಿಡಿಯೋಗಳನ್ನು ನೋಡುತ್ತಿದ್ದೆ. ಕಳೆದ 4-5 ವರ್ಷಗಳಿಂದ ಇದರಲ್ಲಿ ಪಾಲ್ಗೊಂಡು ಕುಮಾರ ಪರ್ವತದಲ್ಲಿ ಪೂಜೆ ನೋಡಬೇಕು ಎಂಬ ಆಸೆ ಇತ್ತು. ಆದರೆ, ಕಾರಣಾಂತರಗಳಿಂದ ಪ್ರತಿ ಬಾರಿಯೂ ಅದು ಸಾಧ್ಯವಾಗಲಿಲ್ಲ. ಕೊನೆಗೆ ಅವಕಾಶ ದೊರೆತಿದ್ದರಿಂದ ಗೆಳೆಯರ ಜತೆಗೆ ಎರಡು ದಿನ ಸುಬ್ರಹ್ಮಣ್ಯ ಭಾಗದಿಂದ ಕುಮಾರ ಪರ್ವತ ಚಾರಣ ಮಾಡಿದ್ದೆ. ಚಾರಣ ಮಾಡಿ ಸುಬ್ರಹ್ಮಣ್ಯಕ್ಕೆ ಇಳಿಯುವಾಗ ಮತ್ತೊಮ್ಮೆ ಸಮಯ ಸಿಕ್ಕಾಗ ಕುಮಾರ ಪರ್ವತ ಹತ್ತಬೇಕು ಎಂದು ಅನಿಸಿತು. ಸಮಯ ಉರುಳಿತು.

ಈ ವರ್ಷ ದೇವರ ಸಂಕಲ್ಪವೋ ಏನೋ ದಿನಾಂಕ ತಿಳಿದು ಹೋಗಲು ಅಣಿಯಾಗಿದ್ದಾಯಿತು. ಅಂತಿಮವಾಗಿ ದೇವಸ್ಥಾನದ ತಂಡ, ಊರಿನ ಭಕ್ತಾದಿಗಳು, ಚಾರಣಗಿರ ಜತೆಗೆ ಸೋಮವಾರಪೇಟೆ ತಾಲೂಕಿನ ಬೀಡಳ್ಳಿಯಿಂದ ಕುಮಾರ ಪರ್ವತದ ಚಾರಣ ಮಾಡಿದೆವು.
ಬೀಡಳ್ಳಿ- ಮೊದಲ ವ್ಯೂ ಪಾಯಿಂಟ್
ಮೊದಲು ಬೀಡಳ್ಳಿ ಬಳಿಯ ಪುಷ್ಪಗಿರಿ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ಹೋಗಿ, ದೇವರ ದರ್ಶನ ಪಡೆದೆವು. ಬಳಿಕ ಅಲ್ಲಿಂದ ಬೀಡಳ್ಳಿ ಅರಣ್ಯ ಇಲಾಖೆಯ ಚೆಕ್ ಪೋಸ್ಟಿಗೆ ಹೋಗಿ, ತಪಾಸಣೆಯ ಬಳಿಕ ಚಾರಣಕ್ಕೆ ಅನುಮತಿ ನೀಡಿದರು. ಅಲ್ಲಿಂದ ಹೊರಟು ಕಾಡಿನ ಮಧ್ಯೆ ಸಾಗುತ್ತಾ ಮೊದಲು ಕುಮಾರಧಾರ ನದಿಗೆ ಅಡ್ಡಲಾಗಿರುವ ತೂಗು ಸೇತುವೆಯನ್ನು ದಾಟಿ ಕುದುರೆದೊಡ್ಡಿ ದಾಟಿ ಕಾಡಿನ ಮಧ್ಯೆ ಹತ್ತುತ್ತಾ 1 ಗಂಟೆ 14 ನಿಮಿಷದಲ್ಲಿ ಮೊದಲ ವ್ಯೂ ಪಾಯಿಂಟ್ ತಲುಪಿದೆವು. ಇಲ್ಲಿ ಮಲ್ಲಳ್ಳಿ, ಕುಮಾರ ಹಳ್ಳಿ, ಬೀಡಳ್ಳಿ, ಪುಷ್ಪಗಿರಿ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ, ಬಿಸಿಲೆ ಭಾಗದ ಬೆಟ್ಟಗಳನ್ನು ನೋಡಬಹುದು.
ವ್ಯೂ ಪಾಯಿಂಟ್- ಕುಮಾರ ಪರ್ವತ ಶಿಖರ
ಇಲ್ಲಿನ ಮೊದಲ ವೀಕ್ಷಣಾ ಸ್ಥಳದಿಂದ ಹೊರಟು 3 ಕಿಮೀ ಫಲಕವನ್ನು ದಾಟಿ ಸ್ವಲ್ಪ ದೂರ ಕ್ರಮಿಸಿದಾಗ ಮೊಲನೆಯ ಬಂಡೆ ಸಿಗುತ್ತದೆ. ಇದು ಚಾರಣದ ಅತ್ಯಂತ ಕಠಿಣ ಭಾಗ. ಈ ಬಂಡೆಯಲ್ಲಿ ನೀರು ಹರಿಯುವ ಕಾರಣ ಜಾರುತ್ತಿತ್ತು. ಆದರೆ, ಬಂಡೆಯ ಎಡಗಡೆಯಲ್ಲಿ ಹಗ್ಗವನ್ನು ಕಟ್ಟಲಾಗಿದ್ದು, ಅದರ ಸಹಾಯದಿಂದ ಮುಂದೆ ಹೋಗಬಹುದು. ಆದರೆ ನಾವು ಎಡಕ್ಕೆ ತಿರುಗದೆ ನೇರವಾಗಿ ಬಂಡೆಯನ್ನು ಹತ್ತಿದೆವು. ಈ ಬಂಡೆಯನ್ನು ಹತ್ತಿದಾಗ ಸುತ್ತಮುತ್ತಲಿನ ಪರ್ವತ ಶ್ರೇಣಿಗಳನ್ನು ಚೆನ್ನಾಗಿ ನೋಡಬಹುದು. ಇಲ್ಲಿಂದ ಸ್ವಲ್ಪ ದೂರದಲ್ಲೇ ಎರಡನೆಯ ಬಂಡೆ ಸಿಗುತ್ತದೆ. ಇದು ಮೊದಲಿನದಕ್ಕಿಂತ ಕಡಿದಾಗಿದ್ದರೂ ಜಾರದ ಕಾರಣ ಸುಲಭವಾಗಿ ಹತ್ತಬಹುದು. ಎರಡನೆಯ ಬಂಡೆಯನ್ನು ಹತ್ತಿದ ಬಳಿಕ ಬಲಬದಿಯಲ್ಲಿ ಶೇಷ ಪರ್ವತದ ಮೊದಲ ನೋಟವನ್ನು ಕಾಣಬಹುದು. ಸ್ವಲ್ಪ ದೂರ ಕಾಡಿನ ಮಧ್ಯೆ ನಡೆದ ನಂತರ ಮೂರನೆಯ ಬಂಡೆ ಸಿಗುತ್ತದೆ. ಇಲ್ಲಿಂದ ನಾವು ನೇರವಾಗಿ ಕುಮಾರ ಪರ್ವತಕ್ಕೆ ಹೋಗುವ ಬದಲು ಎಡಕ್ಕೆ ತಿರುಗಿ ಕುಮಾರ ತೀರ್ಥಕ್ಕೆ ಹೋದೆವು. ಕುಮಾರ ತೀರ್ಥ ಪವಿತ್ರ ಕುಮಾರಧಾರ ನದಿಯ ಉಗಮ ಸ್ಥಾನವಾಗಿದೆ. ಇಲ್ಲಿ ಒಂದು ಸಣ್ಣ ಕೊಳವಿದ್ದು, ಶುದ್ಧ ನೀರು ಸಿಗುತ್ತದೆ.
ಕುಮಾರ ತೀರ್ಥಕ್ಕೆ ಹೋಗಲು ಯಾವುದೇ ಫಲಕಗಳಿಲ್ಲ. ದಾರಿ ಗೊತ್ತಿದ್ದರೆ ಮಾತ್ರ ಹೋಗಬಹುದು. ಕುಮಾರ ತೀರ್ಥದಿಂದ ಮರಳಿ ಬಳಿಕ ಕುಮಾರ ಪರ್ವತ ತಲುಪಿದೆವು. ನಾವು ತಲುಪುವಾಗಲೇ ಕುಮಾರ ಪಾದಪೂಜೆ ಆರಂಭವಾಗಿದ್ದರಿಂದ ನೇರವಾಗಿ ಪೂಜೆಯಲ್ಲಿ ಪಾಲ್ಗೊಂಡೆವು. ಸುಬ್ರಹ್ಮಣ್ಯ ದೇವರ ಪಾದಕ್ಕೆ ಹಾಗೂ ಬೆಳ್ಳಿಯ ವಿಗ್ರಹಕ್ಕೆ ಅಭಿಷೇಕವನ್ನು ಕಣ್ತುಂಬಿಕೊಂಡೆವು. ಬಳಿಕ ಶ್ರೀ ಶಾಂತ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು ಸುತ್ತಮುತ್ತ ವಿಹರಿಸಿದೆವು. ಪರ್ವತದ ಶಿಖರ ಸಮತಟ್ಟಾಗಿದೆ. ಇಲ್ಲಿ ನಿಮಗೆ ಪಶ್ಚಿಮ ಘಟ್ಟಗಳ ವಿಹಂಗಮ ನೋಟ ಸಿಗುತ್ತದೆ.
ಯಾಮಾರಿದರೆ ಯಮಪುರಿ!
ಕುಮಾರ ಪರ್ವತದ ನೈರುತ್ಯ ದಿಕ್ಕಿನಲ್ಲಿ ಸಾಗಿದರೆ 5 ನಿಮಿಷದಲ್ಲೇ ಮಾರಿಗುಂಡಿ ಕಣಿವೆ-ಸಿದ್ಧ ಪರ್ವತದ ವೀಕ್ಷಣಾ ಸ್ಥಳ ಸಿಗುತ್ತವೆ. ಇವುಗಳ ಜತೆಗೆ ಬ್ರಹ್ಮಗಿರಿ ಪರ್ವತ, ಕುಮಾರ ಪರ್ವತ, ಶೇಷ ಪರ್ವತದ ತಪ್ಪಲಿನ ಹಳ್ಳಿಗಳು, ಹರಿಹರೇಶ್ವರ ದೇವಸ್ಥಾನದ ಬಳಿ ಎರಡು ನದಿಗಳು ಇನ್ನೂ ಅನೇಕ ಅತ್ಯದ್ಭುತಗಳ ಕಾಣಲು ಸಿಗುತ್ತವೆ. ಈ ಸ್ಥಳ ಎಷ್ಟು ಚೆಂದವೋ ಅಷ್ಟೇ ಅಪಾಯಕಾರಿ. ಯಾಮಾರಿದರೆ ಯಮಪುರಿ! ಮರಳಿ ಕುಮಾರ ಪಾದದ ಬಳಿ ಬಂದು ಪೂಜೆಯಲ್ಲಿ ಭಾಗವಹಿಸಿ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕರಿಂದ ತೀರ್ಥ ಪ್ರಸಾದವನ್ನು ಸ್ವೀಕರಿಸಿದೆವು. ನಂತರ ಅದೇ ವೀಕ್ಷಣಾ ಸ್ಥಳಕ್ಕೆ ಬಂದು ನಮ್ಮ ಜತೆಗೆ ತಂದಿದ್ದ ಉಪಾಹಾರವನ್ನು ಸೇವಿಸಿದೆವು. ಈ ಬಾರಿ 8 ಜನರ ಜತೆಗೆ ನಾನು ಚಾರಣ ಮಾಡಿದೆ. ಕುಮಾರ ಪರ್ವತದ ಸುತ್ತಲೂ ಪರ್ವತ ಶ್ರೇಣಿಗಳು, ಅಲ್ಲಲ್ಲಿ ಪಟ್ಟಣಗಳು ಕಾಣಲು ಸಿಗುತ್ತವೆ. ಎಲ್ಲವನ್ನೂ ಕಣ್ತುಂಬಿಕೊಂಡು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಮರಳಿ ಬೀಡಳ್ಳಿ ಕಡೆಗೆ ಹೊರಟೆವು.

ಎರಡೆರಡು ಮಾರ್ಗಗಳು
ಕುಮಾರ ಪರ್ವತ ಚಾರಣ ಮಾಡಲು ಎರಡು ದಾರಿಗಳಿವೆ. ಸುಬ್ರಹ್ಮಣ್ಯ-ಕುಮಾರಪರ್ವತ-ಸುಬ್ರಹ್ಮಣ್ಯ ಚಾರಣ (ಒಟ್ಟು 28 ಕಿಮಿ). ಇದು ದಕ್ಷಿಣ ಭಾರತದಲ್ಲಿ ಕಠಿಣ ಹಾಗೂ ಪ್ರಸಿದ್ಧ ಚಾರಣ. ಮತ್ತೊಂದು ಮಾರ್ಗ ಸೋಮವಾರಪೇಟೆ ತಾಲೂಕಿನ ಬೀಡಳ್ಳಿಯಿಂದ ಕುಮಾರ ಪರ್ವತ ಚಾರಣ. ಇದು ಸುಲಭ ಹಾಗೂ ಹತ್ತಿರದ ಮಾರ್ಗ. ಬೀಡಳ್ಳಿಯಿಂದ ಕುಮಾರ ಪರ್ವತದ ಒಟ್ಟು ಚಾರಣದ ದೂರ ಕೇವಲ 7 ಕಿಮೀ ಮಾತ್ರ.
ಚಾರಣದ ಬುಕಿಂಗ್ಗಾಗಿ
ಕುಮಾರ ಪರ್ವತ ಚಾರಣಕ್ಕೆ ಪ್ರತಿಯೊಬ್ಬರಿಗೆ 350 ರುಪಾಯಿ ಶುಲ್ಕವಿದೆ. ಬದಲಾದ ನಿಯಮಗಳ ಪ್ರಕಾರ ಚಾರಣದ ಟಿಕೆಟ್ ಕಾಯ್ದಿರಿಸಲು ಅರಣ್ಯ ವಿಹಾರ ಜಾಲತಾಣವಿದೆ. ಈ ಜಾಲತಾಣದಲ್ಲಿ ಕಡ್ಡಾಯವಾಗಿ ಬುಕ್ ಮಾಡಬೇಕು. ಇಲ್ಲದಿದ್ದರೆ ಚಾರಣಕ್ಕೆ ಅವಕಾಶವೂ ಇಲ್ಲ. ಪ್ರತಿದಿನ ಚಾರಣಕ್ಕೆ ಹೋಗುವ ಜನರ ಮಿತಿ ಇರುತ್ತದೆ. ಅಷ್ಟರೊಳಗೆ ಬುಕ್ ಮಾಡಿಕೊಳ್ಳಿ. ಪ್ಲಾಸ್ಟಿಕ್, ಪೇಪರ್ ವಸ್ತುಗಳಿಗೆ ಸಂಪೂರ್ಣ ನಿಷೇಧವಿದೆ. ನೀರನ್ನು ಸ್ಟೀಲ್ ಬಾಟಲಿಯಲ್ಲಿ, ಆಹಾರವನ್ನೂ ಸ್ಟೀಲ್ ಡಬ್ಬಿಯಲ್ಲೇ ತನ್ನಿ.
ಪುರಾಣದ ಪ್ರಕಾರ
ಕುಮಾರ ಪರ್ವತದಲ್ಲಿ ಸುಬ್ರಹ್ಮಣ್ಯ ದೇವರು ತಾರಕಾದಿ ರಾಕ್ಷಸರನ್ನು ಕೊಂದು ಕತ್ತಿಯ ಅಲಗನ್ನು ಇಲ್ಲಿ ಹುಟ್ಟುವ ಧಾರಾ ನದಿಯಲ್ಲಿ ತೊಳೆದರು. ಇದರಿಂದ ಧಾರಾ ನದಿಗೆ ಕುಮಾರಧಾರ ಹೆಸರು ಬಂದಿದೆ ಎಂದು, ಬಳಿಕ ಷಣ್ಮುಖನು ವಾಸುಕಿಯೊಂದಿಗೆ ಕುಕ್ಕೆಯಲ್ಲಿ ನೆಲೆಸಿದರು ಎಂದು ಕ್ಷೇತ್ರ ಪುರಾಣ ಉಲ್ಲೇಖಿಸಿದೆ. ಈ ಪರ್ವತ ಶ್ರೇಣಿಯಲ್ಲೇ ತ್ರಿಮೂರ್ತಿಗಳ ಸಮ್ಮುಖದಲ್ಲಿ ಮಾರ್ಗಶಿರ ಶುದ್ಧ ಷಷ್ಠಿ(ಚಂಪಾಷಷ್ಠಿ)ಯ ದಿನ ದೇವೇಂದ್ರನ ಮಗಳಾದ ದೇವಸೇನೆಯ ಜತೆಗೆ ಷಣ್ಮುಖನಿಗೆ ವಿವಾಹ ಮಾಡಿಸಿ ಪಟ್ಟಾಭಿಷೇಕ ಮಾಡಿಸಲಾಯಿತು. ಈ ಅಭಿಷೇಕದ ನೀರು ಮುಂದೆ ಹರಿದು ಕುಮಾರಧಾರಾ ನದಿಯಾಯಿತು ಎಂದೂ ಪುರಾಣಗಳು ಉಲ್ಲೇಖಿಸಿವೆ.
ಕುಮಾರಪಾದ
ಷಣ್ಮುಖನಿಗೆ ವಿವಾಹವಾದ ಪ್ರದೇಶದಲ್ಲಿ ಈಗಲೂ ಸುಬ್ರಹ್ಮಣ್ಯ ದೇವರ ಪಾದಗಳಿವೆ. ಇದನ್ನು ʻಕುಮಾರಪಾದʼ ಎನ್ನುತ್ತಾರೆ. ಇದರ ಪಕ್ಕದಲ್ಲಿ ವಾಸುಕಿಯೂ ಗೋಚರಿತವಾಗಿದೆ. ಇದಕ್ಕೆ ʻಬಹುಳ ಷಷ್ಠಿʼಯಂದು ಕುಕ್ಕೆ ದೇಗುಲದ ಪ್ರಧಾನ ಅರ್ಚಕರು ಪೂಜೆ ಸಲ್ಲಿಸುತ್ತಾರೆ.
ಪೇಟೆಯ ಜಂಜಾಟದಿಂದ ವಿಶ್ರಾಂತಿ ಪಡೆಯಲು, ಪರಿಸರದ ಮಧ್ಯೆ ಸಮಯ ಕಳಿಯಲು, ಚಾರಣಕ್ಕೆ ಹೋಗುವ ಅಭ್ಯಾಸ ಇರುವವರಿಗೆ ಕುಮಾರ ಪರ್ವತ ದಿ ಬೆಸ್ಟ್.