- ಅಶ್ವಿನಿ ಕುಲಕರ್ಣಿ

ಉದದಿ ವ್ಯಾವೃತದೋಳ್ ಪಡಿ ಇಡಲ್

ಮುಮ್ಮಾಡಲು ಅರಿಯನಿದನ್

ದೇವಶಿಲ್ಪಿಗೆ ಮಾದರಿ ಇದಂ

ಪೋಲ್ವವಾ ಪೋಲ್ವವಂತಿದು

ದೇವಾಲಯ ಚಕ್ರವರ್ತಿ ಇದಂ

ಬ್ರಹ್ಮ ನಿರ್ಮಿಸಲರಿಯನಿಧಂ

ಸಮುದ್ರದಿಂದ ವ್ಯಾಪಿತವಾದ ಭೂಮಂಡಲದ ಮೇಲೆ ಕಾಲಿಡಲು ಇಷ್ಟೊಂದು ಅದ್ಭುತವಾದ ದೇವಾಲಯ ನೋಡಲು ಸಿಗುವುದು ಇಲ್ಲಿ ಮಾತ್ರ. ಇದು ವಿಶ್ವಕರ್ಮನಿಗೂ ಸಹ ಮಾದರಿ ಎನಿಸುವ ವಾಸ್ತು ಶೈಲಿಯ ದೇವಾಲಯ . ಬ್ರಹ್ಮನು ನಿರ್ಮಿಸಲರಿಯನಿದಂ ಅಂದರೆ ಮತ್ತೊಮ್ಮೆ ಇಂಥದೊಂದು ದೇವಾಲಯ ನಿರ್ಮಿಸುವುದು ಅಸಾಧ್ಯ ಎಂದು ಶಾಸನದಲ್ಲಿ ಉಲ್ಲೇಖಿತವಾಗಿರುವ ಈ ಸಾಲುಗಳು ಈ ದೇವಾಲಯದ ಹಿರಿಮೆಯನ್ನು ಸಾರುವಂಥದ್ದು. ದೇವಾಲಯಗಳ ಚಕ್ರವರ್ತಿ ಎಂದೇ ಕರೆಸಿಕೊಳ್ಳುವ ಈ ದೇವಾಲಯ ಯಾವುದು ಗೊತ್ತಾ? ಇಟ್ಟಿಗೆ ಅಥವಾ ಇಟಗಿ ಮಹಾದೇವ ದೇವಾಲಯ.

ದಂಡನಾಯಕನಿಂದ ನಿರ್ಮಾಣ

New Project (68)

ಕರ್ನಾಟಕವನ್ನು ಆಳಿದ ಹೆಮ್ಮೆಯ ಅನೇಕ ರಾಜ ಮನೆತನಗಳಲ್ಲಿ ಕಲ್ಯಾಣದ ಚಾಲುಕ್ಯರು ಪ್ರಮುಖರು. ಕಲ್ಯಾಣ ಚಾಲುಕ್ಯರ ಅಷ್ಟೇ ಏಕೆ ಕರ್ನಾಟಕದ ಇತಿಹಾಸದ ಮಹಾನ್ ಚಕ್ರವರ್ತಿಗಳ ಸಾಲಿನಲ್ಲಿ ಸದಾ ಮುಂಚೂಣಿಯಲ್ಲಿ ರಾರಾಜಿಸುವ ವಿಕ್ರಮ ಶಕೆಯನ್ನು ಆರಂಭಿಸಿದ ಶಖ ಪುರುಷ 6ನೆಯ ವಿಕ್ರಮಾದಿತ್ಯ . ಅಂಥ ಆರನೆಯ ವಿಕ್ರಮಾದಿತ್ಯನ ಮಹಾನ್ ದಂಡ ನಾಯಕನಾದ ಹಾಗು ಕನ್ನಡದ ಸಂಧಿ ವಿಗ್ರಹಿ ಎಂದೇ ಬಿರುದಾಂಕಿತನಾದ ಮಹಾದೇವ ದಂಡ ನಾಯಕ ಮಹಾನ ಶಿವ ಭಕ್ತ . ದಂಡ ನಾಯಕ ಮಹಾದೇವ ನಿರ್ಮಿಸಿದ ಈ ದೇವಾಲಯವೇ ಇಟಗಿಯ ಮಹದೇವ ದೇವಾಲಯ. ದಂಡನಾಯಕ ಮಹಾದೇವನ ಪ್ರಾಂತ್ಯವಾದ ಈ ಪ್ರದೇಶ ಆಗ ಸರಸ್ವತಿಯ ನೆಲೆಬೀಡು. ಸಹಸ್ರಾರು ವಿದ್ಯಾರ್ಥಿಗಳ ಅಧ್ಯಯನ ಅಧ್ಯಾಪನ ಇಲ್ಲಿ ಅವ್ಯಾಹತವಾಗಿ ಸಾಗಿತ್ತು. ಬ್ರಾಹ್ಮಣರು ನಿತ್ಯವೂ ಹೋಮಹವನಗಳನ್ನು ಮಾಡುತ್ತಿದ್ದ ಪ್ರದೇಶ ಇದಾಗಿದ್ದು ಇಷ್ಟಗಿ ಅಂದರೆ ಅಗ್ನಿಕೊಂಡ ಹೋಮಕುಂಡ ಎಂಬ ಹೆಸರೇ ಈ ಪ್ರದೇಶಕ್ಕೆ ಖಾಯಂ ಆಯಿತು. ಮುಂದೆ ಇಷ್ಟಿಗೆ ಜನರ ನಾಲಗೆಯಲ್ಲಿ ಇಟ್ಟಿಗೆ ಅಥವಾ ಇಟಗಿ ಆಯಿತು.

ಐಕಾನಿಕ್‌ ವಾಸ್ತುಶೈಲಿ

New Project (69)

11ನೆಯ ಶತಮಾನದಲ್ಲಿ ನಿರ್ಮಾಣವಾದ ಈ ದೇವಾಲಯ ದಂಡನಾಯಕನ ಆರಾಧ್ಯ ದೈವ ಭಗವಂತ ಮಹಾದೇವನ ಹೆಸರಿನಲ್ಲಿಯೂ; ನಿರ್ಮಿಸಿದ ಭಕ್ತನ ಹೆಸರಿನಲ್ಲಿಯೂ ಗುರುತಿಸಿಕೊಂಡು ಭಗವಂತ ಹಾಗು ಭಕ್ತಿಯ ದ್ಯೋತಕವಾಗಿ ಶತಶತಮಾನಗಳಿಂದ ವೈಭವದ ಕಥೆಯನ್ನು ಸಾರುತ್ತಾ ನಿಂತಿದೆ. ನಾಗರ ಹಾಗೂ ದ್ರಾವಿಡ ಶೈಲಿಗಳು ಮಿಳಿತಗೊಂಡ ವೇಸರ ಶೈಲಿಯಲ್ಲಿ ಬಳಪದ ಕಲ್ಲಿನಲ್ಲಿ ನಿರ್ಮಾಣವಾದ ಈ ದೇವಾಲಯ ಮಹಾದೇವ ವಿರಾಜಮಾನನಾದ ಗರ್ಭಗೃಹ, ಉತ್ಕೃಷ್ಟ ಮಟ್ಟದ ಸಕಾರಾತ್ಮಕ ಉರ್ಜೆಯನ್ನು ಹೊಂದಿರುವ ಹಾಗೂ ಧ್ಯಾನ ಪ್ರಾರ್ಥನೆಗೆ ನಿರ್ಮಿತವಾದ ಸುಖನಾಸಿ, ಭಗವಂತನ ರಂಗ ಸೇವೆ ನೃತ್ಯ ಸಂಗೀತಗಳು ನೆರವೇರುವ ಮುಖಮಂಟಪವನ್ನು ಒಳಗೊಂಡಿದ್ದು ಮುಖ ಮಂಟಪದಲ್ಲಿನ 26 ವಿಶಿಷ್ಟ ಹಾಗೂ ಸೂಕ್ಷ್ಮಕಲಾತ್ಮಕ ಕುಸುರಿ ಇರುವ ಸುಂದರ ಕಂಬಗಳು ದೇವಾಲಯದ ಪ್ರಮುಖ ಆಕರ್ಷಣೆ. ಗರ್ಭಗೃಹದ ಪ್ರವೇಶ ದ್ವಾರ ಮೇಲೆ ಕಲಾತ್ಮಕವಾಗಿ ನಿರ್ಮಿಸಿ ಮಕರ ತೋರಣ ಹಾಗೂ ಕಲ್ಯಾಣದ ಚಾಲುಕ್ಯರ ಲಾಂಛನ ವಿಶೇಷವಾಗಿ ಗಮನ ಸೆಳೆಯುತ್ತವೆ.ಮುಖಮಂಟಪದಿಂದ ಸುಕನಾಸಿಯನ್ನು ಪ್ರವೇಶಿಸುವ ಎರಡನೆಯ ದ್ವಾರದಲ್ಲಿ ಒಂದೇ ಕಲ್ಲಿನಲ್ಲಿ ಕೆತ್ತಿದ 9 ಪಟ್ಟಿಕೆಗಳು ಇದ್ದು ವಜ್ರಪಟ್ಟಿಕೆ, ಕುಂಭಪಟ್ಟಿಕೆ, ಲತಾಪಟ್ಟಿಕೆ, ನೃತ್ಯಂಗನೆಯರ ಹಾಗೂ ವಾದ್ಯಕಾರರ ಪಟ್ಟಿಕೆಗಳ ಕೆತ್ತನೆ ಅತ್ಯಂತ ವಿಶಿಷ್ಟ .ಮುಖ ಮಂಟಪದ ಮೇಲ್ಚಾವಣಿಯಲ್ಲಿ ನಿರ್ಮಿಸಿದ ಅಷ್ಟ ಕೋನಾಕೃತಿಯ ಭುವನೇಶ್ವರಿ ಮಧ್ಯದಲ್ಲಿ ನರ್ತಿಸುತ್ತಿರುವ ನಟರಾಜ , ಬ್ರಹ್ಮ ವಿಷ್ಣು ಮಹೇಶ್ವರ, ಹಾಗೂ ಕೀರ್ತಿ ಮುಖಗಳ ಅತ್ಯಂತ ಸುಂದರ ಸೂಕ್ಷ್ಮ ಕೆತ್ತನೆ ಕಲಾಪ್ರಿಯರ ಹುಬ್ಬೇರಿಸುವಂತೆ ಮಾಡುವುದು ಸುಳ್ಳಲ್ಲ.

ಕೀಲ ಹೊಂಡ

New Project (70)

ದೇವಾಲಯದ ಇನ್ನೊಂದು ವಿಶೇಷವೆಂದರೆ ದೇವಾಲಯದ ಹಿಂಭಾಗದಲ್ಲಿರುವ ಸುತ್ತಲೂ ನೂರಾರು ಮೆಟ್ಟಿಲುಗಳಿಂದ ನಿರ್ಮಿತವಾದ ಕೀಲ ಹೊಂಡ ಎಂಬ ಬಾವಿ. ಗುಜರಾತ್ ನ ರಾಣಿ ಕಿ ವಾವ್ ಅನ್ನು ನೆನಪಿಸುವ ಈ ಕೀಲ ಹೊಂಡ ಹಲವಾರು ಮೆಟ್ಟಿಲುಗಳಿಂದ ಕೂಡಿದ್ದು ಈಗಲೂ ನೀರಿನಿಂದ ತುಂಬಿಕೊಂಡಿದೆ. ಕೀಲ ಹೊಂಡದ ವಿಶೇಷವೆಂದರೆ ಮೂಲ ದೇವಾಲಯದ ಅಡಿಪಾಯದ ವಿನ್ಯಾಸದಲ್ಲಿಯೇ ನಿರ್ಮಿತವಾದ ಈ ಕೀಲ ಹೊಂಡ ದೇವಾಲಯವನ್ನು ತಲೆಕೆಳಗಾಗಿ ಮಾಡಿ ಈ ಹೊಂಡದಲ್ಲಿ ಹಾಕಿದರೆ ಅದರಲ್ಲಿ ಸರಿಯಾಗಿ ಪರಿಪೂರ್ಣವಾಗಿ ಕುಳಿತುಕೊಳ್ಳುವಂಥ ವಿಶಿಷ್ಟವಾಸ್ತುಶಿಲ್ಪವನ್ನು ಈ ಕಲ್ಯಾಣಿ ಹೊಂದಿದೆ. ಆಲಯದ ಹಿಂದಿನ ಕೀಲ ಬಾವಿಯಷ್ಟೇ ಅಲ್ಲದೆ ಮುಂದೆ ಒಂದು ಸುಂದರ ಕಲ್ಯಾಣಿಯು ಇದ್ದು ಸುಮಾರು 60 ಆನೆಗಳು ಒಟ್ಟಿಗೆ ಇಳಿದು ಜಲಕ್ರೀಡೆ ಆಡುವಷ್ಟು ದೊಡ್ಡದಾದ ಕಲ್ಯಾಣಿ ಇದಾಗಿತ್ತು ಎಂಬ ಉಲ್ಲೇಖವಿದೆ. ದೇವಾಲಯದ ಆವರಣದಲ್ಲಿ ಅನೇಕ ಸಣ್ಣ ಪುಟ್ಟ ದೇವಾಲಯಗಳ ಸಮುಚ್ಚಯವಿದ್ದು ಪರಿವಾರ ದೇವತೆಗಳ ಗುಡಿಗಳಾಗಿರಬಹುದು. ಇದರಲ್ಲಿ ಸರಸ್ವತಿ ಮಠವೂ ಒಂದು. ಇಲ್ಲಿ ಗರ್ಭಗೃಹದ ಎರಡು ಕಡೆ ಸುರಂಗ ಮಾರ್ಗಗಳನ್ನು ಸಹ ಕಾಣಬಹುದು. ಇನ್ನು ಮಹದೇವ ದಂಡನಾಯಕನ ತಾಯಿ ಹಾಗು ತಂದೆಯ ಹೆಸರಿನಲ್ಲಿ ಸಹ ಅವನು ದೇವಾಲಯಗಳನ್ನು ನಿರ್ಮಿಸಿದ್ದನು.

ದಾರಿ ಹೇಗೆ?

ಇತಿಹಾಸ ಹಾಗೂ ವಾಸ್ತುಶಿಲ್ಪ ಪ್ರಿಯರಿಗೆ ಕೊಪ್ಪಳ ಜಿಲ್ಲೆಯ ಇಟಗಿ ಖಂಡಿತವಾಗಿಯೂ ಇಷ್ಟವಾಗುವ ಸ್ಥಳ. ಇಟಗಿಯ ಬಳಿ ಕುಕುನೂರು ಕ್ಷೇತ್ರವಿದ್ದು ಮಹಾಲಕ್ಷ್ಮಿ ಮಹಾ ಸರಸ್ವತಿ ಮಹಾದುರ್ಗಿ ಸ್ವರೂಪಿಣಿಯಾದ ಮಹಾಮಾಯಿ ಇಲ್ಲಿ ನೆಲೆಯಾಗಿದ್ದಾಳೆ. ಈ ಕ್ಷೇತ್ರವು ಇತಿಹಾಸ ಪ್ರಸಿದ್ಧ ದೇವಾಲಯವಾಗಿದ್ದು ತನ್ನ ಪುರಾತನ ಕಥೆಗಳು ಹಾಗೂ ಇತಿಹಾಸದ ಮೂಲಕ ಗಮನ ಸೆಳೆಯುವುದು. ಇಟಿಗೆಗೆ ಹೋದವರು ಕುಕುನೂರು ಮಹಾಮಾಯಿ ದೇವಾಲಯಕ್ಕೂ ತಪ್ಪದೇ ಭೇಟಿ ಕೊಡಬಹುದು. ಅಲ್ಲದೇ ಒಂದಷ್ಟು ಸಮಯ ಇಟ್ಟುಕೊಂಡು ಹೋದರೆ ಅಲ್ಲಿಯೇ ಹತ್ತಿರದಲ್ಲಿರುವ ಕೊಪ್ಪಳ ಹಾಗೂ ಗದಗ ಜಿಲ್ಲೆಗಳ ಅನೇಕ ಐತಿಹಾಸಿಕ ಪ್ರೇಕ್ಷಣೀಯ ಸ್ಥಳಗಳನ್ನೂ ನೋಡಬಹುದು.