Tuesday, November 3, 2026
Tuesday, November 3, 2026

ಭೂಲೋಕದ ಸ್ವರ್ಗ ‘ಹೈಗುಂದ ದ್ವೀಪʼ

ಶರಾವತಿ ನದಿಯ ಮಡಿಲಲ್ಲಿ ನೆಲೆಸಿರುವ ಪುಟ್ಟ ಹೈಗುಂದ ದ್ವೀಪವು ಪ್ರಕೃತಿ ಸೌಂದರ್ಯದ ಜತೆಗೆ ಸಾವಿರಾರು ವರ್ಷಗಳ ಇತಿಹಾಸವನ್ನೂ ತನ್ನೊಳಗೆ ಅಡಗಿಸಿಕೊಂಡಿದೆ. ಹೈಗುಂದದ ದುರ್ಗಾಂಬಿಕೆಯ ಸಾನ್ನಿಧ್ಯ, ಪ್ರಾಚೀನ ಯಾಗಭೂಮಿಯ ಕುರುಹುಗಳು ಹಾಗೂ ಹವ್ಯಕ ಪರಂಪರೆಯ ನಂಟು ಈ ಕ್ಷೇತ್ರದ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿವೆ. ನದಿ, ನಿಸರ್ಗ, ಇತಿಹಾಸ ಮತ್ತು ದೈವಿಕತೆಯ ಅಪೂರ್ವ ಸಂಗಮವಾಗಿರುವ ಹೈಗುಂದ ಪ್ರವಾಸಿಗರು ಮತ್ತು ಇತಿಹಾಸಾಸಕ್ತರನ್ನು ಸೆಳೆಯುವ ವಿಶಿಷ್ಟ ತಾಣವಾಗಿದೆ.

  • ಸಂದೇಶ ತಲಕಾಲಕೊಪ್ಪ

ಶ್ರೀರಾಮನ ಶರದಿಂದ ಹುಟ್ಟಿದ ಪುಣ್ಯನದಿ ಶರಾವತಿಯ ಮಧ್ಯದಲ್ಲಿ ಶೋಭಾಯಮಾನವಾಗಿರುವ ಹೈಗುಂದವು ಪುಟ್ಟ ದ್ವೀಪವಾದರೂ, ದೊಡ್ಡ ಇತಿಹಾಸವನ್ನೇ ಹೊಂದಿದೆ! ಭವ್ಯತೆಯನ್ನೇ ಹೊದ್ದ ಬೆಳಕಿನ ನದಿ ಶರಾವತಿಯ ಮಡಿಲಲ್ಲಿರುವ ದಿವ್ಯತೆಯನ್ನು ಹೊತ್ತ ಕ್ಷೇತ್ರ ಹೈಗುಂದ. ಹವ್ಯಕ ಮಂಡಲಾಧೀಶ್ವರಿಯಾದ ತಾಯಿ ದುರ್ಗಾಂಬಿಕೆಯ ಸಾನ್ನಿಧ್ಯ ಈ ಕ್ಷೇತ್ರವನ್ನು ಪಾವನವಾಗಿಸಿದರೆ, ಯಾಗಭೂಮಿಯಾದ ಈ ದ್ವೀಪ ದೊಡ್ಡ ಇತಿಹಾಸವನ್ನೇ ತನ್ನೊಡಲಿನಲ್ಲಿ ಇಟ್ಟುಕೊಂಡಿದೆ.

ಇದನ್ನೂ ಓದಿ: ವಿಶ್ವದ ಅತಿದೊಡ್ಡ ದ್ವೀಪಗಳ ಪರಿಚಯ ನಿಮಗಿದೆಯಾ ?

ಪ್ರಾಚೀನ ಶಿಲ್ಪಗಳು, ಪುರಾತನ ಇಟ್ಟಿಗೆಗಳು, ಸಹ್ಯಾದ್ರಿಯ ಬೆಟ್ಟಗುಡ್ಡಗಳ ಪರಿಸರ, ಶಾಂವಾಗಿ ಹರಿಯುವ ಸುಂದರ ಶರಾವತಿಯ ನೀರು, ಸದ್ದುಗದ್ದಲಗಳಿಲ್ಲದ ಪ್ರಶಾಂತ ಪರಿಸರ – ಈ ಎಲ್ಲ ಕಾರಣಗಳಿಂದ ‘ಹೈಗುಂದʼ ದ್ವೀಪ ವಿಶಿಷ್ಟವಾಗಿದ್ದು, ಹಲವು ಹತ್ತು ವೈಶಿಷ್ಟ್ಯಗಳನ್ನು ಹೊತ್ತ ಈ ದ್ವೀಪ ಭೂಲೋಕದ ಸ್ವರ್ಗ ಎಂದರೆ ತಪ್ಪಾಗಲಾರದು.

ಕದಂಬರಿಂದ ಸಂಸ್ಥಾಪಿತ ದುರ್ಗಾಂಬಿಕೆ

ಹೈಗುಂದ ದ್ವೀಪದಲ್ಲಿರುವ ದುರ್ಗಾಂಬಿಕಾ ದೇವಾಲಯವು ಕದಂಬರಿಂದ ಸಂಸ್ಥಾಪಿತವಾಗಿರುವ ಐತಿಹ್ಯವಿದ್ದು, ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಯಜ್ಞ - ಯಾಗಗಳಿಗಾಗಿ ಪರ್ಯಾಯ ದ್ವೀಪವಾಗಿದ್ದ ಈ ಭೂಮಿಯನ್ನು ಮಯೂರವರ್ಮ ದ್ವೀಪವಾಗಿ ಪರಿವರ್ತಿಸಿದ ಎಂಬುದಾಗಿಯೂ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಪದ್ಮಾಸನಸ್ಥಿತಳಾಗಿ ಮಂದಸ್ಮಿತದೊಂದಿಗೆ ಭಕ್ತರಿಗೆ ಅಭಯಪ್ರದಾನ ಮಾಡುತ್ತಿರುವ ಹೈವಪುರವರಾಧೀಶ್ವರಿ ಶ್ರೀ ದುರ್ಗಾಂಬಿಕಾ ದೇವಿಯ ವಿಗ್ರಹವು ಕಣ್ಣನ್ನು ಮಾತ್ರವಲ್ಲ ಹೃದಯವನ್ನೂ ತುಂಬುತ್ತದೆ! ಶಾಸನಗಳಲ್ಲಿ 'ಗುಂದದಬ್ಬೆ', 'ಪೈವಗುಂದದ ಅಬ್ಬೆ' ಎಂದೆಲ್ಲಾ ಕರೆಸಿಕೊಂಡರೂ, ಸ್ಥಳೀಯರ ಬಾಯಲ್ಲಿ 'ಅಮ್ಮನೋರು' ಆಗಿ ನಂಬಿ ಬಂದವರನ್ನು ಸಲಹುತ್ತಿದ್ದಾಳೆ.

Untitled Design - 2026-11-03T144353.233

ಹವ್ಯಕ ಬ್ರಾಹ್ಮಣರ ಮೂಲ

ದ್ರಾವಿಡ ಬ್ರಾಹ್ಮಣ ವರ್ಗದಲ್ಲಿ ಗುರಿತಿಸಲ್ಪಡುವ ಹವ್ಯಕ ಬ್ರಾಹ್ಮಣರ ಮೂಲ ಸ್ಥಾನ ಈ ದಿವ್ಯ ದ್ವೀಪವಾಗಿದ್ದು, ಸ್ಕಂದಪುರಾಣದ ಭಾಗವೆಂದು ಪರಿಗಣಿಸಲ್ಪಡುವ ಉತ್ತರ ಸಹ್ಯಾದ್ರಿ ಖಂಡದ 85 ಹಾಗೂ 86 ಅಧ್ಯಾಯಗಳು ಈ ಕುರಿತಾಗಿ ಬೆಳಕನ್ನು ಚಲ್ಲುತ್ತವೆ. 85ನೆಯ ಅಧ್ಯಾಯವು ರಾಜ ಮಯೂರವರ್ಮನು ಉತ್ತರದ ಅಹಿಚ್ಛತ್ರದಿಂದ ಸಮರ್ಥರಾದ ದ್ರಾವಿಡ ಬ್ರಾಹ್ಮಣರನ್ನು ಗುರುತಿಸಿ; ಬನವಾಸಿ ದೇಶಕ್ಕೆ ಪುನಃ ತಂದು ನೆಲೆಗೊಳಿಸುವ ಕುರಿತಾಗಿ ವಿವರಿಸಿದರೆ, 86ನೆಯ ಅಧ್ಯಾಯವಾದ 'ಹವ್ಯದೇಶೋತ್ಪತ್ತಿ ವರ್ಣನಂ' ಮಯೂರವರ್ಮನ ಅಳಿಯ ಲೋಕಾದಿತ್ಯನು ಬನವಾಸಿ ದೇಶದಿಂದ ಗೋರಾಷ್ಟ್ರಕ್ಕೆ ಬ್ರಾಹ್ಮಣರನ್ನು ಕರೆತಂದು ನೆಲೆಗೊಳಿಸಿದ್ದು, ಹೈಗುಂದದಲ್ಲಿ ಬೃಹತ್ ರೀತಿಯಲ್ಲಿ ಹಲವಾರು ಯಜ್ಞ - ಯಾಗಗಳು ನಡೆಸಿದ್ದು, ಆ ಯಾಗಗಳ ಪರಿಣಾಮವಾಗಿ 'ಗೋರಾಷ್ಟ್ರ'ವು 'ಹವ್ಯದೇಶ' ಎಂದೇ ಖ್ಯಾತವಾದ ಕುರಿತು ಉಲ್ಲೇಖಿಸಿದೆ. ಇದರಿಂದ ಸಂಪ್ರೀತನಾದ ಲೋಕಾದಿತ್ಯನು ಅಹಿಚ್ಛತ್ರದಿಂದ ಆಗಮಿಸಿದ ದ್ರಾವಿಡ ಬ್ರಾಹ್ಮಣರಿಗೆ 'ಹವ್ಯಕ' ಎಂಬ ಶುಭಾಭಿದಾನವನ್ನೂ ನೀಡಿ, ಸಪ್ತಗೋತ್ರಜರಾದ ಅವರಿಗೆ ಭಟ್ಟ, ಯಾಜಿ, ಮಧ್ಯಸ್ಥ, ಪ್ರಭು (ಹೆಗಡೆ), ಸಭಾಹಿತಾದಿ ಏಳು ವಿಶಿಷ್ಟ ಉಪನಾಮಗಳನ್ನೂ ನೀಡಿದ ಇತಿಹಾಸವನ್ನು ದಾಖಲಿಸಿದೆ. ಹಾಗೆಯೇ ಕನ್ನಡದ ಮೊದಲ ರಾಜವಂಶವೆಂಬ ಖ್ಯಾತಿಯ ಕದಂಬರ ಪ್ರಥಮ ದೊರೆ ರಾಜಾ ಮಯೂರವರ್ಮ ಹವ್ಯಕ ಬ್ರಾಹ್ಮಣರನ್ನು ಹೈಗುಂದದಲ್ಲಿ ತಂದು ನೆಲೆಗೊಳಿಸಿದ ಕುರಿತಾಗಿಯೂ ಕೆಲವು ದಾಖಲೆಗಳಿದ್ದು, ಹಲವಾರು ಗೆಜೆಟಿಯರ್‌ಗಳಲ್ಲೂ ಹೈಗುಂದವನ್ನು ಉಲ್ಲೇಖಿಸುವಾಗ ಅಲ್ಲಿ ಬೃಹತ್ ಯಾಗದ ಕುರುಹು ಇರುವುದನ್ನು ಮತ್ತು ಹೈಗ ಅಥವಾ ಹವ್ಯಕ ಬ್ರಾಹ್ಮಣರನ್ನು ರಾಜನು ಕರೆತಂದು ನೆಲೆಗೊಳಿಸಿದ್ದರ ಕುರಿತಾಗಿಯೂ ಸ್ಪಷ್ಟ ಉಲ್ಲೇಖಗಳಿವೆ.

ಪ್ರಾಚೀನ ಶಿಲ್ಪಗಳು

ಅಗೆದಲ್ಲೆಲ್ಲ ಯಾವುದಾದರೊಂದು ಅವಶೇಷ ಸಿಗುವ ಈ ನೆಲದಲ್ಲಿ ಸಾವಿರಾರು ವರ್ಷಗಳ ಇತಿಹಾಸ ಅಡಗಿದ್ದು, ಬಗೆದಲ್ಲೆಲ್ಲಾ ಸಿಗುವ ಪ್ರಾಚೀನ ಇಟ್ಟಿಗೆಗಳ ರಾಶಿಯು ಯಾಗಭೂಮಿ ಎಂಬುದನ್ನು ದೃಢೀಕರಿಸುತ್ತದೆ. ದೇವಾಲಯದ ಶಿಲಾಮೂರ್ತಿಯ ಕೆಳಗಡೆ ಕಂಚಿನ ವಿಗ್ರಹವಿದ್ದು, ಒಂದು ಕೈಯಲ್ಲಿ ಗಿಳಿ, ಇನ್ನೊಂದರಲ್ಲಿ ಮಗುವಿದ್ದು, ಮಗುವಿಗೆ ಗಿಳಿಯನ್ನು ತೋರಿಸಿ ಸಮಾಧಾನ ಪಡಿಸಿ ಎದೆಹಾಲು ಉಣಿಸಲು ಅಣಿಯಾದಂತೆ ಕಂಡರೂ, ಅದು ಮಗುವಿಗೆ ಆತ್ಮಜ್ಞಾನದ ಸಾಕ್ಷಾತ್ಕಾರ ನೀಡುವ ದಿವ್ಯಮೂರ್ತಿ ಎಂಬುದು ವೇದಾಂತಿಗಳ ವ್ಯಾಖ್ಯಾನ. ದೇವಾಲಯದ ಹೊರಗಡೆ ಪುರಾತನ ಕಾಲದ ಸುಮಾರು 5 ಅಡಿ ಎತ್ತರದ ಪುರುಷಪ್ರಮಾಣದ ಯಕ್ಷ ಶಿಲ್ಪವಿದ್ದು, ತನ್ನ ಪ್ರಮಾಣ, ನಿಲುವು, ಭಂಗಿಗಳಿಂದ ಅತ್ಯಂತ ಭವ್ಯವು, ಆಕರ್ಷಣೀಯವೂ ಆಗಿದೆ. ಅಲ್ಲಲ್ಲಿ ಅನೇಕ ಭಗ್ನ ಶಿಲಾಮೂರ್ತಿಗಳಿದ್ದು, ಕ್ಷೇತ್ರದ ಇತಿಹಾಸವನ್ನು ಸಂಶೋಧಿಸುವ ಜಿಜ್ಞಾಸೆಗಳಿಗೆ ಅನೇಕ ವಿಷಯಗಳು ಇಲ್ಲಿದೆ.

ಸ್ವಾತಂತ್ರ್ಯ ಸಮರದ ಭೂಮಿ

ಹೈಗುಂದದ ದಿಬ್ಬದ ಮೇಲೆ ಬ್ರಿಟಿಷರ ಪ್ರವಾಸಿ ಮಂದಿರವಿದ್ದು, ಅಂದು ಅಲ್ಲಿದ್ದ ಬ್ರಿಟಿಷ್ ಅಧಿಕಾರಿಗಳಿಗೆ ಹೊನ್ನಾವರದಿಂದ ಆಹಾರ ಸಾಮಗ್ರಿಗಳೆಲ್ಲಾ ಆಮದಾಗುತ್ತಿದ್ದವು. ಅದು ದೇಶದಾದ್ಯಂತ ಬ್ರಿಟಿಷರ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದ ಕಾಲ. ಇದರಿಂದ ಪ್ರೇರಣೆಗೊಂಡ ಹೈಗುಂದ ಪರಿಸರದ ಸ್ವಾತಂತ್ರ್ಯ ಹೋರಾಟಗಾರರು, ಬ್ರಿಟಿಷರಿಗಾಗಿ ಲಾಂಚಿನಲ್ಲಿ ಬರುತ್ತಿದ್ದ ಸೀಮೆಎಣ್ಣೆ ಹಾಗೂ ಇನ್ನಿತರ ಸಾಮಗ್ರಿಗಳನ್ನು ಶರಾವತಿ ನದಿಗೆ ಚೆಲ್ಲಿ ಪ್ರತಿಭಟನೆ ನಡೆಸಿದ್ದ ಸ್ವಾರಸ್ಯಕರವಾದ ಸ್ವಾತಂತ್ರ್ಯ ಹೋರಾಟವನ್ನೂ ಐತಿಹಾಸ ದಾಖಲಿಸಿದೆ.

Untitled Design - 2026-11-03T144523.652

ನವರಾತ್ರಿ ವಿಶೇಷ ಪೂಜೆ

ಭಕ್ತರ ಭಕ್ತಿಯ ಕಾಣಿಕೆ ಅವರ ಮನೋಭೀಷ್ಟ ಪೂರ್ಣತೆಗೆ ಇಲ್ಲಿ ಕಾಣಿಕೆಯಾಗುತ್ತದೆ ಎಂಬುದು ಹೈಗುಂದದ ದುರ್ಗಾಂಬೆಯ ವಿಶೇಷತೆಯಾಗಿದ್ದು, ದೇವಿಯ ಸನ್ನಿಧಿಯಲ್ಲಿ ಶರನ್ನವರಾತ್ರಿ ಉತ್ಸವವು ವಿಜೃಂಭಣೆಯಿಂದ ಪ್ರತಿವರ್ಷ ನಡೆಯುತ್ತದೆ. ದೂರದೂರುಗಳಿಂದಲೂ ಭಕ್ತರು ಇಲ್ಲಿಗೆ ಬಂದು ಹವ್ಯಕ ಮಂಡಲಾಧೀಶ್ವರಿಯಲ್ಲಿ ಇಷ್ಟಾರ್ಥಗಳನ್ನು ಪ್ರಾರ್ಥಿಸುತ್ತಾರೆ. ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ದೇವಾಲಯವು ಕಾರ್ಯಾಚರಿಸುತ್ತಿದ್ದು, ನವರಾತ್ರಿಯ ಪರ್ವಕಾಲದಲ್ಲಿ ಚಂಡಿ ಹೋಮ, ಸಪ್ತಶತಿ ಪಾರಾಯಣ, ದುರ್ಗಾ ದೀಪ ನಮಸ್ಕಾರ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಭಕ್ತರಿಗೆ ಅನ್ನದಾನವೂ ವಿಶೇಷವಾಗಿ ನಡೆಯಲಿದೆ.

ಹೈಗುಂದವು ಹೊನ್ನಾವರದಿಂದ ಸುಮಾರು 20 ಕಿಮೀ. ದೂರದ ರಮ್ಯ ಪರಿಸರದಲ್ಲಿದ್ದು, ಇತಿಹಾಸದ ದೃಷ್ಟಿಯಿಂದ ಸ್ವಾರಸ್ಯವನ್ನೂ, ದಿವ್ಯದೃಷ್ಟಿಯಿಂದ ದೇವಿಯ ಅನುಗ್ರಹವನ್ನೂ, ಮನೋರಂಜನೆಯ ದೃಷ್ಟಿಯಿಂದ ಭವ್ಯಪರಿಸರವನ್ನೂ ಹೊಂದಿರುವ ಅಪರೂಪದ ಸ್ಥಳ ಇದಾಗಿದೆ. ಕ್ಲೇಶಮಯ ಜೀವನಕ್ಕೆ ನವೋಲ್ಲಾಸವನ್ನು ಪಡೆಯಲು ಹೈಗುಂದಕ್ಕೆ ಭೇಟಿ ನೀಡಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ

ಶರಾವತಿ ನದಿಯ ಮಧ್ಯದಲ್ಲಿರುವ ಹೈಗುಂದವನ್ನು ಕೇವಲ ದ್ವೀಪವೆಂದು ನೋಡಲಾಗದು. ಪ್ರಾಚೀನ ಯಜ್ಞ–ಯಾಗಗಳ ನೆಲೆಯಾಗಿದ್ದುದಕ್ಕೆ ಸಾಕ್ಷಿಯಾಗಿ ಇಲ್ಲಿ ಪುರಾತನ ಇಟ್ಟಿಗೆಗಳ ಅವಶೇಷಗಳು ದೊರೆಯುತ್ತವೆ ಎನ್ನುವುದು ಇದರ ವೈಶಿಷ್ಟ್ಯ. ಹವ್ಯಕ ಪರಂಪರೆಯೊಂದಿಗೆ ನಂಟು ಹೊಂದಿರುವ ಈ ದ್ವೀಪದಲ್ಲಿ ಇತಿಹಾಸ, ಪುರಾತತ್ವ ಮತ್ತು ದೈವಿಕತೆ ಒಂದೇ ತಾಣದಲ್ಲಿ ಬೆಸೆದುಕೊಂಡಿವೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..