ಗೋಕಾಕ್ ಫಾಲ್ಸ್ ನಲ್ಲಿ ಕೆಂಪು ನೀರಿನ ಜಲಧಾರೆ
ಜಲಪಾತವು ಮೈದುಂಬಿ ಹರಿಯುತ್ತಿರುವಾಗ ಈ ತೂಗು ಸೇತುವೆ ಮೇಲೆ ನಡೆದಾಡುವುದೇ ಒಂದು ರೋಮಾಂಚಕಾರಿ ಅನುಭವ. ತೂಗು ಸೇತುವೆ ಮೇಲೆ ನಡೆಯುತ್ತಿದ್ದೇವೆಯೋ ಅಥವಾ ತೂಗುಯ್ಯಾಲೆಯಲ್ಲಿ ತೂಗಾಡುತ್ತಿದ್ದೇವೆಯೋ..ಅನಿಸುವಂತೆ ಮಾಡುತ್ತದೆ. ಪ್ರವಾಸಿಗರಿಗೆ ಜಲಪಾತದ ಸುಂದರ ದೃಶ್ಯ ಕಣ್ತುಂಬಿಕೊಳ್ಳಲು ಹಾಗೂ ಕ್ಯಾಮೆರಾದಲ್ಲಿ ಸೆರೆಹಿಡಿಯಲು ಈ ತೂಗು ಸೇತುವೆ ಸಹಾಯಕ. ರಾಜ್ಯದಲ್ಲೇ ಅತಿದೊಡ್ಡ ತೂಗು ಸೇತುವೆ ಎನ್ನುವ ಹೆಗ್ಗಳಿಕೆ ಇದರದ್ದು.
- ಸಂತೋಷ್ ರಾವ್ ಪೆರ್ಮುಡ
ಕರ್ನಾಟಕದ ಎರಡನೇ ಅತಿ ದೊಡ್ಡ ಜಲಪಾತವೆಂದು ಗೋಕಾಕ್ ಜಲಪಾತವನ್ನು ಕರೆಯಲಾಗುತ್ತದೆ. ಇದು ಕರ್ನಾಟಕದ ಬೆಳಗಾವಿ ಜಿಲ್ಲೆಯ ಗೋಕಾಕ್ ಪಟ್ಟಣದಿಂದ 6 ಕಿ.ಮೀ ದೂರದಲ್ಲಿದೆ. ಈ ಜಲಪಾತವು ಘಟಪ್ರಭಾ ನದಿಯಿಂದ ಉಂಟಾಗುತ್ತದೆ. ಇದು ಕೆನಡಾ ಮತ್ತು ಅಮೆರಿಕ ದೇಶದ ನಡುವೆ ಇರುವ ನಯಾಗರ ಜಲಪಾತದಂತೆ ಕಾಣಿಸುವುದರಿಂದ ಇದನ್ನು ಭಾರತದ ನಯಾಗರವೆಂದು ಕರೆಯುತ್ತಾರೆ. ಸುಮಾರು 180 ಅಡಿ ಎತ್ತರದಿಂದ ಧುಮುಕುವ ನೀರು ಇಲ್ಲಿ ರಮಣೀಯವಾಗಿ ಕಾಣುತ್ತದೆ. ಮಳೆಗಾಲದ ಜೂನ್ ತಿಂಗಳಿನಿಂದ ಡಿಸೆಂಬರ್ ಅಂತ್ಯದವರೆಗೂ ಈ ಜಲಪಾತದಲ್ಲಿ ಹೇರಳ ನೀರಿರುವುದರಿಂದ ಪ್ರವಾಸಿಗರು ಇಲ್ಲಿಗೆ ಇನ್ನು ಆರು ತಿಂಗಳಲ್ಲಿ ಎಂದಾದರೂ ಭೇಟಿ ನೀಡಬಹುದು. ಮಳೆಗಾಲದಲ್ಲಿ ಕೆಂಪು ಬಣ್ಣದ ನೀರಿನೊಂದಿಗೆ ಈ ಜಲಪಾತವು ಭೋರ್ಗರೆಯುತ್ತಾ ಧುಮುಕುತ್ತದೆ.
ತೂಗು ಸೇತುವೆ
ಗೋಕಾಕ್ ಫಾಲ್ಸ್ ನ ಮತ್ತೊಂದು ವಿಶೇಷತೆ ಎಂದರೆ ತೂಗು ಸೇತುವೆ. ಜಲಪಾತದ ನೀರು ಧುಮುಕುವ ಸ್ಥಳಕ್ಕೆ ಹೋಗಲು ಸಾಧ್ಯ ಆಗುವಂತೆ ಬ್ರಿಟಿಷರ ಕಾಲದಲ್ಲಿ ಮರದ ಕಟ್ಟಿಗೆ (ಪಳಿಗಳು) ಮತ್ತು ಕಬ್ಬಿಣದ ಸರಳುಗಳಿಂದ ಈ ತೂಗು ಸೇತುವೆಯನ್ನು ಕಟ್ಟಲಾಯಿತು. ಈ ಸೇತುವೆಯು 201 ಮೀಟರ್ (659ಅಡಿ) ಉದ್ದವಿದ್ದು, 14 ಮೀಟರ್ (46 ಅಡಿ) ಎತ್ತರವಿದೆ. ಜಲಪಾತವು ಮೈದುಂಬಿ ಹರಿಯುತ್ತಿರುವಾಗ ಈ ತೂಗು ಸೇತುವೆ ಮೇಲೆ ನಡೆದಾಡುವುದೇ ಒಂದು ರೋಮಾಂಚಕಾರಿ ಅನುಭವ. ತೂಗು ಸೇತುವೆ ಮೇಲೆ ನಡೆಯುತ್ತಿದ್ದೇವೆಯೋ ಅಥವಾ ತೂಗುಯ್ಯಾಲೆಯಲ್ಲಿ ತೂಗಾಡುತ್ತಿದ್ದೇವೆಯೋ..ಅನಿಸುವಂತೆ ಮಾಡುತ್ತದೆ. ಪ್ರವಾಸಿಗರಿಗೆ ಜಲಪಾತದ ಸುಂದರ ದೃಶ್ಯ ಕಣ್ತುಂಬಿಕೊಳ್ಳಲು ಹಾಗೂ ಕ್ಯಾಮೆರಾದಲ್ಲಿ ಸೆರೆಹಿಡಿಯಲು ಈ ತೂಗು ಸೇತುವೆ ಸಹಾಯಕ. ರಾಜ್ಯದಲ್ಲೇ ಅತಿದೊಡ್ಡ ತೂಗು ಸೇತುವೆ ಎನ್ನುವ ಹೆಗ್ಗಳಿಕೆ ಇದರದ್ದು.

ಈ ಜಲಪಾತದ ಕೆಳಗೆ ಒಂದು ವಿದ್ಯುತ್ ಉತ್ಪಾದನೆ ಘಟಕವಿದ್ದು, ಇಲ್ಲಿ ಬ್ರಿಟಿಷರ ಕಾಲದಲ್ಲೇ ಅಂದರೆ 1885-87ರಲ್ಲಿ ವಿದ್ಯುತ್ ಉತ್ಪಾದನೆ ಆರಂಭಿಸಲಾಯಿತು. ಏಷ್ಯಾಖಂಡದಲ್ಲೇ ಪ್ರಪ್ರಥಮ ಬಾರಿಗೆ ವಿದ್ಯುತ್ ಉತ್ಪಾದನೆ ಮಾಡಲಾದ ವಿದ್ಯುತ್ ಉತ್ಪಾದನಾ ಘಟಕ ಎನ್ನುವ ಇತಿಹಾಸವೂ ಇದಕ್ಕಿದೆ. ಈ ಜಲಪಾತದ ವಿದ್ಯುತ್ತನ್ನು ಗೋಕಾಕ್ ಫಾಲ್ಸ್ ಟೆಕ್ಸ್ ಟೈಲ್ಸ್ ಮಿಲ್, ಹೆಸ್ಕಾಂ ಸೇರಿದಂತೆ ಸ್ಥಳೀಯವಾಗಿ ನೆಲೆಸಿರುವ ವಿದ್ಯುತ್ ಉತ್ಪಾದನಾ ಘಟಕದ ಕಾರ್ಮಿಕರ ಮನೆಗಳಿಗೆ ಸರಬರಾಜು ಮಾಡಲಾಗುತ್ತದೆ.
180 ಅಡಿ ಎತ್ತರದಿಂದ ಧುಮುಕುವ ನೀರು ಹಚ್ಚಹಸಿರಿನ ಪ್ರಕೃತಿಯ ನಡುವೆ ನದಿಯಾಗಿ ಹರಿಯುತ್ತದೆ. ಈ ಜಲಪಾತವನ್ನು ದೂರದಿಂದ ನೋಡಲು 'ವೀಕ್ಷಣಾ ಸ್ಥಳ’ವನ್ನು ನಿರ್ಮಿಸಲಾಗಿದ್ದು, ಇಲ್ಲಿ ನಿಂತು ಜಲಪಾತದ ವಿಹಂಗಮ ನೋಟವನ್ನು ನೋಡಬಹುದು ಮತ್ತು ಕ್ಯಾಮೆರಾದಲ್ಲಿ ಕ್ಲಿಕ್ಕಿಸಿಕೊಳ್ಳಬಹುದು. ಗೋಕಾಕ್ ಜಲಪಾತದಿಂದ ಕೆಲವೇ ಕೆಲವು ಕಿ.ಮೀ ದೂರದಲ್ಲಿ ಗೊಡ್ಚಿನಮಲ್ಕಿ ಎಂಬ ಮತ್ತೊಂದು ಜಲಪಾತವಿದ್ದು, ಅಲ್ಲಿಗೂ ಭೇಟಿ ನೀಡಬಹುದು.
ಜಲಪಾತದ ಪಕ್ಕದಲ್ಲಿ ಚಾಲುಕ್ಯ ಶೈಲಿಯ ವಾಸ್ತುಶಿಲ್ಪ ಶೈಲಿಯ ಮಹಾಲಿಂಗೇಶ್ವರ ದೇವಸ್ಥಾನವಿದೆ. ಜಲಪಾತಕ್ಕೆ ಇಳಿಯುವ ರಸ್ತೆಯ ಇನ್ನೊಂದು ಭಾಗದಲ್ಲಿ ಹತ್ತಿ ಬಟ್ಟೆ ತಯಾರಿಸುವ ಐತಿಹಾಸಿಕ ಕಾರ್ಖಾನೆಯೂ ಇದೆ. ಇಲ್ಲಿಂದ ಪ್ರವಾಸಿಗರು ಹತ್ತಿ ಬಟ್ಟೆಗಳನ್ನು ಖರೀದಿಸಬಹುದು. ಈ ಜಲಪಾತವು ಬೆಂಗಳೂರಿನಿಂದ 622 ಕಿಲೋಮೀಟರ್, ಬೆಳಗಾವಿ ಪಟ್ಟಣದಿಂದ 62 ಕಿಲೋಮೀಟರ್ ದೂರದಲ್ಲಿದ್ದು, ಗೋಕಾಕ್ ಹೆದ್ದಾರಿಯ ಪಕ್ಕದಲ್ಲಿದೆ. ಪ್ರವಾಸಿಗರಿಗೆ ವಾಸ್ತವ್ಯದ ವ್ಯವಸ್ಥೆ ಬೇಕೆಂದರೆ ಆರು ಕಿಲೋಮೀಟರ್ ದೂರದ ಗೋಕಾಕ್ ಪಟ್ಟಣಕ್ಕೆ ತೆರಳಬೇಕು. ಈ ಜಲಪಾತದಿಂದ ಮೂರು ಕಿಲೋಮೀಟರ್ ದೂರದಲ್ಲಿ ಯೋಗಿಕೊಳ್ಳಿ ಎಂಬ ಚಾರಣ ಪ್ರದೇಶ, ಎಂಟು ಕಿಲೋಮೀಟರ್ ದೂರದಲ್ಲಿ ಮಾರ್ಕಂಡೇಯ ನದಿಯಲ್ಲಿ ಬೋಟಿಂಗ್ ವ್ಯವಸ್ಥೆಯಿದೆ. ಜಲಪಾತ ಧುಮುಕುವ ಸ್ಥಳಕ್ಕೆ ಪ್ರವಾಸಿಗರಿಗೆ ಹೋಗಲು ಮುಕ್ತ ಅವಕಾಶವಿದ್ದು, ಮಕ್ಕಳನ್ನು ಕರೆದುಕೊಂಡು ಹೋದಾಗ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ವಾರಾಂತ್ಯದ ಅವಧಿಗಳಲ್ಲಿ ಇಲ್ಲಿ ಪ್ರವಾಸಿಗರ ದಟ್ಟಣೆ ಹೆಚ್ಚಿರುತ್ತದೆ.