ಚೆಲವಾರ ಜಲಪಾತ ಮರೆಯದಿರಿ
ಅರೆ… ಬಿ ಕೂಲ್! ಅಲ್ಲಿ ಪಾರ್ಕಿಂಗ್ ಕಾಟವಿಲ್ಲ. ಹಣ ಪೀಕುವವರೂ ಇಲ್ಲ. ಬೆಟ್ಟದ ಕೆಳಗೆ ಬೇಕೆಂದೆಡೆ ಬೈಕುಗಳನ್ನು ನಿಲ್ಲಿಸಬಹುದು. ನಾವು ನಡೆದದ್ದೇ ದಾರಿ. ಜೋಶ್ ನಲ್ಲಿ ಸುಮ್ಮನೆ ನಡೆಯುತ್ತಾ ಹೋಗಬೇಕು. ದಾರಿ ಮಧ್ಯೆ ಯಾರು ಸಿಗುತ್ತಾರೋ ಬಿಡುತ್ತಾರೋ; ಆದರೆ ರಕ್ತ ಹೀರಲು ಅವನೊಬ್ಬನಿರುತ್ತಾನೆ. ಅವನ ಹೆಸರು ಇಂಬಳ. ಚಾರಣಿಗರ ರಕ್ತ ಸಂಬಂಧಿ. ಅಲ್ಲಿ ಅವನದ್ದೇ ರಾಜಾತಿಥ್ಯ!
- ಯತೀಶ ಎಸ್
ಅಲ್ಲಿ ಬೆಳಗಿನ ಸೂರ್ಯ ಕಚಗುಳಿ ಇಡುತ್ತಾನೆ. ಜೋರಾದ ಮಳೆಯ ಹನಿಗಳು ನೆತ್ತಿಯ ಮೇಲೆ ಬಿದ್ದಾಗ ಮೈ ಮನಸ್ಸಿಗೆ ಪುಳಕವಾಗುತ್ತದೆ. ಹಸಿರಿನ ಸೆರಗು ಚಾಚಿದ ಪ್ರಕೃತಿ ಬರಸೆಳೆದು ಅಪ್ಪಿಕೊಳ್ಳುತ್ತದೆ. ಜೋಮು ಹಿಡಿದು ಹೋಗಿದ್ದ ಕಾಲುಗಳು ಒಮ್ಮೆಲೆ ಚುರುಕಾಗುತ್ತವೆ. ಜಗದ ಗೊಡವೆಯೆಲ್ಲವೂ ಮರೆತು ಹೋಗುತ್ತದೆ. ಮನದ ದುಗುಡವೂ ದಾರಿ ತಪ್ಪಿಸಿಕೊಂಡು ಓಡಿ ಹೋಗಿರುತ್ತದೆ. ಇದು ಚಾರಣದ ಸಮಯ. ನೆಪ ಹೇಳಿಕೊಂಡು ಕೂರಲು ಸಮಯವಿಲ್ಲ. ಬೆಟ್ಟ-ಗುಡ್ಡಗಳನ್ನು ಹತ್ತಿ ಇಳಿಯಲೇಬೇಕು. ಮಂಕು ಕವಿದ ಬದುಕಿಗೆ ಟಾನಿಕ್ ಬೇಕು. ಈ ಕ್ಷಣಕ್ಕೆ ಕಬ್ಬೆ ಬೆಟ್ಟ ನಮ್ಮ ಗೆಳೆಯ. ನೋವು ಮರೆಸುವ ದೋಸ್ತ್. ನಮ್ಮೊಳಗೊಂದು ಭರವಸೆ ತುಂಬುವ ಕುಚಿಕು.

ಜಗದ ಸೌಂದರ್ಯವನ್ನೆಲ್ಲ ಅಂಗೈಯಲ್ಲಿಟ್ಟುಕೊಂಡು ಸದಾ ಕಂಗೊಳಿಸುವ ಬನಸಿರಿಯ ನೆಲವಾದ ಕೊಡಗಿನಲ್ಲಿ ಪುರಾಣ ಪ್ರಸಿದ್ಧ ಬೆಟ್ಟವಿದೆ. ಅದು ಪಶ್ಚಿಮಘಟ್ಟದ ಸಾಲು ಸಾಲು ಬೆಟ್ಟಗಳ ನಡುವೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಭವ್ಯವಾದ ಪ್ರಕೃತಿ ಸೌಂದರ್ಯದಿಂದ ಕಣ್ಮನ ಸೆಳೆಯುತ್ತದೆ. ಸೂರ್ಯ ನೆತ್ತಿ ಸುಡುವ ಮೊದಲೇ ಅಂದರೆ ಬೆಳಗಿನ ಜಾವದ ನಸುಗತ್ತಲಿನಲ್ಲಿ ಅಲ್ಲಿಗೆ ಹೋದರೆ ಹಿತಾನುಭವ. ಕೆಲವೊಮ್ಮೆ ಸೂರ್ಯನ ಬಿಸಿಲನ್ನೂ ಅಡಗಿಸಿ ಕಬ್ಬೆ ಬೆಟ್ಟ ಮಂಜಿನಿಂದ ಕಂಗೊಳಿಸುತ್ತಿರುತ್ತದೆ. ಮಡಿಕೇರಿಯಿಂದ ಕೇವಲ 28 ಕಿಮೀ ಇರುವ ಈ ಬೆಟ್ಟ, ಬ್ರಹ್ಮಗಿರಿಯ ತಪ್ಪಲಿನಲ್ಲಿರುವ ಕೂಸು. ಮುಂಜಾನೆಯೇ ಎದ್ದು ಹೊರಟರೆ ಏಕಕಾಲಕ್ಕೆ ಚೆಲವಾರದ ಹಳ್ಳಿಯ ಸೊಬಗು, ಹಕ್ಕಿಗಳ ಕಲರವ ಮತ್ತು ಕಡಿದಾದ ದಾರಿಯ ಮನೋಹರ ನೋಟವನ್ನು ಅನುಭವ ಮತ್ತು ಅನುಭಾವಕ್ಕೆ ತಂದುಕೊಳ್ಳಬಹುದು. ಅರೆ.. ಬಿ ಕೂಲ್! ಅಲ್ಲಿ ಪಾರ್ಕಿಂಗ್ ಕಾಟವಿಲ್ಲ. ಹಣ ಪೀಕುವವರೂ ಇಲ್ಲ. ಬೆಟ್ಟದ ಕೆಳಗೆ ಬೇಕೆಂದೆಡೆ ಬೈಕುಗಳನ್ನು ನಿಲ್ಲಿಸಬಹುದು. ನಾವು ನಡೆದದ್ದೇ ದಾರಿ. ಜೋಶ್ ನಲ್ಲಿ ಸುಮ್ಮನೆ ನಡೆಯುತ್ತಾ ಹೋಗಬೇಕು. ಬೆಟ್ಟದ ತುದಿ ಎಲ್ಲಿದೆ ಎಂದು ಮಾತ್ರ ಅಪ್ಪನಾಣೆಗೂ ಗೊತ್ತಾಗುವುದಿಲ್ಲ. ಪ್ರಕೃತಿಯೊಂದಿಗೆ ಬೆರೆಯುತ್ತಾ, ಅದರ ಮೌನ ಭಾಷೆಯನ್ನು ಅರ್ಥಮಾಡಿಕೊಳ್ಳುತ್ತ, ಕುಳಿರ್ಗಾಳಿಗೆ ಮೈಯೊಡ್ಡುತ್ತ ಸಾಗಬೇಕು. ದಾರಿ ಮಧ್ಯೆ ಯಾರು ಸಿಗುತ್ತಾರೋ ಬಿಡುತ್ತಾರೋ. ಆದರೆ ರಕ್ತ ಹೀರಲು ಅವನೊಬ್ಬನಿರುತ್ತಾನೆ. ಅವನ ಹೆಸರು ಇಂಬಳ. ಚಾರಣಿಗರ ರಕ್ತ ಸಂಬಂಧಿ. ಅಲ್ಲಿ ಅವನದ್ದೇ ರಾಜಾತಿಥ್ಯ!
ಒಂದಂತೂ ನಿಜ. ಒಂದರಿಂದ ಒಂದೂವರೆ ಗಂಟೆಯಲ್ಲಿ ಹತ್ತಬಹುದಾದ ಕಬ್ಬೆ ಬೆಟ್ಟವು ಚಾರಣಕ್ಕೆ ಹೇಳಿ ಮಾಡಿಸಿದ ಜಾಗ. ಹಾಂ. ನೆನಪಿರಲಿ. ಮಳೆಗಾಲದಲ್ಲಿ ಕಾಲು ಜಾರಿ ಬೀಳುವ ಸಾಧ್ಯತೆಯಿರುತ್ತದೆ. ಹುಷಾರಾಗಿ ಹೆಜ್ಜೆ ಇರಿಸಬೇಕು. ಜತೆಗೆ ನೀರಿನ ಬಾಟಲಿ ಹಾಗೂ ಸ್ನ್ಯಾಕ್ಸ್ ತೆಗೆದುಕೊಂಡು ಹೋಗುವುದು ಸೂಕ್ತ. ಯಾಕೆಂದರೆ ಸುತ್ತಲೂ ತಿನ್ನಲು ಬಿಡಿ, ಕುಡಿಯಲು ನೀರೂ ಸಿಗುವುದಿಲ್ಲ. ಏನು ಎತ್ತ ಎಂದು ವಿಚಾರಿಸಲೂ ಅಲ್ಲಿ ಒಂದು ನರಪಿಳ್ಳೆಯೂ ಇರುವುದಿಲ್ಲ. ಬೆಟ್ಟ ಏರಿ ಮೇಲೆ ಮೇಲೆ ಹೋಗುತ್ತಿದ್ದಂತೆ ಅವ್ಯಕ್ತ ಆನಂದ. ಅಬ್ಬಾ! ಅದನ್ನು ವರ್ಣಿಸಲು ಅಸಾಧ್ಯ, ತಣ್ಣನೆಯ ಗಾಳಿ, ಸುತ್ತಲೂ ಮಂಜು, ಅತ್ತ ತಿರುಗಿದರೆ ಬ್ರಹ್ಮಗಿರಿಯ ಹಸಿರಿನ ಶ್ಯಾಮಲೆ, ಇತ್ತ ತಿರುಗಿದರೆ ಬೆಟ್ಟದ ರಾಶಿ.
ಚೆಲವಾರ ಜಲಪಾತ
ನೀವು ಬೆಟ್ಟಕ್ಕೆ ಹೋಗುವ ದಾರಿಯಲ್ಲೇ ಚೆಲವಾರ ಜಲಪಾತ ಸಿಗುತ್ತದೆ. ಅಲ್ಲಿ ಕಾಣುವ ಸೂಚನಾಫಲಕದ ಮುಂದೆಯೇ ಗಾಡಿಗಳನ್ನು ಪಾರ್ಕ್ ಮಾಡಿ ಮೇಲೆ ನಡೆದು ಹೋದರೆ ಕಿರಿದಾದ ದಾರಿಯಲ್ಲಿ ತುಂಬಿ ಹರಿಯುವ ಚೆಲವಾರ ಜಲಪಾತ ಕಾಣಿಸುತ್ತದೆ. ನೀರಿನ ಒಳಗೆ ಇಳಿಯಲು ಆಗದ ಹಾಗೆ ಬೇಲಿ ಕಟ್ಟಲಾಗಿದೆ. ಹರಸಾಹಸಪಟ್ಟರೂ ನೀರಿನಲ್ಲಿ ಆಟವಾಡಲಾಗುವುದಿಲ್ಲ. ದೂರದಿಂದಲೇ ಜಲಪಾತದ ವೈಭವವನ್ನು ಕಣ್ತುಂಬಿಕೊಳ್ಳಬೇಕು.

ಇಲ್ಲಿಗೆ ಹೋಗುವುದಕ್ಕೆ ಇರುವ ಒಂದೇ ಆಪ್ಷನ್ ಅಂದರೆ ಖಾಸಗಿ ವಾಹನ. ಯಾವುದೇ ಬಸ್ ಅಥವಾ ರಿಕ್ಷಾ ವ್ಯವಸ್ಥೆ ಇರುವುದಿಲ್ಲ. ಮಡಿಕೇರಿಯಿಂದ ನಾಪೋಕ್ಲು ನಂತರ ಕೋಕೇರಿ ನಂತರ ಚೆಯ್ಯಾಂಡನೆ ಪೋಸ್ಟ್ ಆಫೀಸ್ ನಿಂದ ಮೊದಲನೇ ಎಡ ತಿರುವಿನ ಹಾದಿ ಕಬ್ಬೆ ಬೆಟ್ಟಕ್ಕೆ ಕರೆದೊಯ್ಯುತ್ತದೆ.
ಚಾರಣ ಮುಗಿಸಿ ಅಲ್ಲಿಂದ ಹೊರಟು ಕೇವಲ 15 ಕಿಮೀ ದೂರದಲ್ಲಿರುವ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯಕ್ಕೆ ಹೋಗಿ ಭಕ್ತಿ ಭಾವ ಮೆರೆಯಬಹುದು. ಅದು ಕೊಡಗಿನ ಸಂಸ್ಕೃತಿಯ ಕನ್ನಡಿಯಾಗಿ ನಿಂತಿರುವ ಸುಂದರವಾದ ತಾಣ. ಬೆಳಗ್ಗೆ 5 ರಿಂದ ಮಧ್ಯಾಹ್ನ 12.15 ರವರೆಗೆ ಹಾಗೂ ಸಂಜೆ 6 ರಿಂದ 7 ರವರಿಗೆ ಮಾತ್ರ ಈ ದೇವಾಲಯ ತೆರೆದಿರುತ್ತದೆ.
ಈ ದೇವಾಲಯವನ್ನು 1153 ರಲ್ಲಿ ಸ್ಥಾಪಿಸಲಾಗಿದೆ ಎಂದು ನಂಬಲಾಗಿದೆ. ಕೊಡಗನ್ನು ತಮ್ಮ ವಾಸಸ್ಥಾನವಾಗಿ ಆಯ್ಕೆ ಮಾಡಿಕೊಂಡ ಏಳು ದೈವಿಕ ಸಹೋದರರಲ್ಲಿ ಇಗ್ಗುತಪ್ಪ ಒಬ್ಬನೆಂಬ ದಂತಕಥೆಯೊಂದು ಹೇಳುತ್ತದೆ. ಭಕ್ತಿ ಭಾವದಲ್ಲಿ ಮೈ ಮರೆತ ಮೇಲೆ ತಲಕಾವೇರಿಯ ಕಡೆ ಸಾಗಬಹುದು. ಪ್ರಶಾಂತತೆಯ ನಡುವೆ ವಿಶ್ರಾಂತಿ ಬೇಕೆನಿಸಿದರೆ ಅಲ್ಲೇ ಸುತ್ತ ಮುತ್ತಲು ಹಲವಾರು ಹೋಂಸ್ಟೇಗಳಿವೆ, ಪ್ರಕೃತಿಯ ಸೊಬಗನ್ನು ಸವಿಯಲು ಅಲ್ಲೇ ಉಳಿದು ಬರಬಹುದು.

ಗಮನಿಸಿ:
ಯಾವ ಋತುವಲ್ಲಾದರೂ ಕಬ್ಬೆ ಬೆಟ್ಟಕ್ಕೆ ಭೇಟಿ ನೀಡಬಹುದು
ಪ್ರವೇಶ ಶುಲ್ಕ: ಉಚಿತ
ಚಾರಣದ ಸಮಯ: ಕನಿಷ್ಠ ಒಂದು ಗಂಟೆ
ಭೇಟಿ: ವೀಕೆಂಡ್, ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯ ಬೆಸ್ಟ್
ರೇನ್ ಜಾಕೆಟ್, ಕಾಲಿಗೆ ಶೂಸ್ ಮತ್ತು ತಲೆಗೆ ಕ್ಯಾಪ್ ಧರಿಸುವುದು ಸೂಕ್ತ
ದಾರಿ ಹೇಗೆ?
ಬೆಂಗಳೂರಿನಿಂದ ವಿರಾಜಪೇಟೆ- 246 ಕಿ.ಮೀ
ವಿರಾಜಪೇಟೆಯಿಂದ ಕಬ್ಬೆ ಬೆಟ್ಟ- 23 ಕಿ.ಮೀ
ಕಾರು, ಟ್ಯಾಕ್ಸಿ ಮತ್ತು ಬೈಕ್ ಮೂಲಕ ತಲುಪಬಹದು