• ಡಾ. ಜೆ ಎನ್ ಜಗನ್ನಾಥ್

ಗುರುಪ್ರಸಾದ ಹಾಲ್ಕುರಿಕೆ ಅವರು ಚಾರಣವನ್ನು ಪ್ರಾರಂಭಿಸಿದ್ದು 60ನೆಯ ವಯಸ್ಸಿಗೆ. ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದಿಂದ ನಿವೃತ್ತರಾದ ಮೇಲೆ. ಈ ಕೃತಿಯ ಬಗ್ಗೆ ಮುನ್ನುಡಿಯನ್ನು ಬರೆದಿರುವ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಶ್ರೀ ಡಿ ವಿ ಗುರುಪ್ರಸಾದ್ ಮತ್ತು ಸಮನ್ವಯ ಸಮಿತಿಯ ಬೆಂ ಶ್ರೀ ರವೀಂದ್ರ ಉತ್ತಮ ಮಾಹಿತಿಗಳನ್ನು ನೀಡಿದ್ದಾರೆ.

ಇದನ್ನೂ ಓದಿ: ಭಾರತ ಸುತ್ತಿದ ಅಮ್ಮ ಮಗನಿಗೆ ಕಾರ್ ಉಡುಗೊರೆ ಕೊಟ್ಟ ಆನಂದ್ ಮಹೀಂದ್ರ!

ಗುರುಪ್ರಸಾದರಿಗೆ ಈಗ 77 ವಯಸ್ಸು. ಈ ವಯಸ್ಸಿನಲ್ಲಿ ಚಾರಣ ಮಾಡುವವರು ಅತಿ ವಿರಳ. ಏಕೆಂದರೆ ಚಾರಣ ಒಂದು ಸಾಹಸದ ಪ್ರಕ್ರಿಯೆ. ಅದನ್ನು ಕೈಗೊಳ್ಳಬೇಕಾದರೆ ನಮ್ಮ ದೇಹ ಬಹಳ ಫಿಟ್ ಆಗಿ ಆರೋಗ್ಯಕರ ವಾಗಿರಬೇಕಾಗುತ್ತದೆ. ಆಮ್ಲಜನಕವು ಕಡಿಮೆ ಇರುವ ಜಾಗಗಳಲ್ಲಿ ನಾವು ನಮ್ಮ ದೇಹವನ್ನು ದಂಡಿಸಬೇಕಾಗುತ್ತದೆ. ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದರೂ ಅಪಾಯವಾಗುತ್ತದೆ. ಇದಲ್ಲದೆ ಆ ದುರ್ಗಮ ಜಾಗಗಳಲ್ಲಿ ಅಪಘಾತಗಳಾಗುವ ಸಂಭವಗಳೂ ಹೆಚ್ಚೇ. ಸಾಹಸಮಯ ರೀತಿಯಲ್ಲಿ ಪ್ರಕೃತಿಯ ಆನಂದವನ್ನು ಸವಿಯುವುದು ಎಲ್ಲರಿಗೂ ಸಾಧ್ಯವಿಲ್ಲ. ಆದರೆ ನಮ್ಮ ಹೆಮ್ಮೆಯ ಹಾಲ್ಕುರಿಕೆ ಗುರುಪ್ರಸಾದ್ ಈಗಾಗಲೇ ಹಿಮಾಲಯದ 17 ಚಾರಣಗಳನ್ನು ಮಾಡಿದ್ದಾರೆ. ಇದಲ್ಲದೆ ತಿರುಪತಿ ಬೆಟ್ಟವನ್ನು 50 ಬಾರಿ ಕಾಲ್ನಡಿಗೆಯಲ್ಲಿ ಹತ್ತಿದ್ದಾರೆ. ತಿರುವಣ್ಣಾಮಲೈ ಗಿರಿಯ ಪ್ರದಕ್ಷಿಣೆಯನ್ನು 25 ಬಾರಿ ಮಾಡಿದ್ದಾರೆ. ಕರ್ನಾಟಕದ ಹಲವಾರು ಜಾಗಗಳಿಗೆ ಚಾರಣ ಹೋಗಿದ್ದಾರೆ. ಇದು ಅವರನ್ನು ಒಬ್ಬ ವಿಶಿಷ್ಟ ವ್ಯಕ್ತಿಯನ್ನಾಗಿಸಿದೆ. ಕೇವಲ ಚಾರಣವನ್ನು ಮಾಡಿದರೆ ಸಾಲದು, ಅದರ ಅಪ್ರತಿಮ ಅನುಭವಗಳನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳಬೇಕೆನ್ನುವ ಉದ್ದೇಶದಿಂದ ಗುರುಪ್ರಸಾದ್ ‘ಚಾರಣ ಸವಿ ಹೂರಣ’ ಎನ್ನುವ ಈ ಕೃತಿಯನ್ನು ರಚಿಸಿದ್ದಾರೆ. ತಮ್ಮ ಈ ಸ್ಫೂರ್ತಿದಾಯಕ ಕೃತಿಯಲ್ಲಿ ಚಾರಣದ ವಿವರಗಳ ಜತೆಜತೆಗೆ ತಾವು ನೋಡಿದ ಹಲವಾರು ಜಾಗಗಳ ಬಗ್ಗೆ, ಹಲವು ಜನರು ಮತ್ತು ಸಂಪ್ರದಾಯಗಳ ಬಗ್ಗೆ ಅವರು ನಮೂದಿಸಿದ್ದಾರೆ. ಇವೆಲ್ಲ ಅನುಭವಗಳು ದಿನಚರಿಯ ರೂಪದಲ್ಲಿ ಮೂಡಿಬಂದಿವೆ. ಆಯಾ ದಿನಗಳಂದು ನಡೆದ ಪ್ರಮುಖ ಘಟನೆಗಳು, ನೋಡಿದ ಪ್ರಮುಖ ಸ್ಥಳಗಳು, ಮುಂತಾದವುಗಳನ್ನು ಅವರು ಯಥಾವತ್ತಾಗಿ ಬಣ್ಣಿಸಿದ್ದಾರೆ. ಮಾನಸ ಸರೋವರದಲ್ಲಿ ಮಿಂದಾಗ ತಮಗಾದ ಕೃತಜ್ಞತಾ ಭಾವನೆಯನ್ನು ವಿಶಿಷ್ಟ ರೀತಿಯಲ್ಲಿ ನಿರೂಪಿಸಿದ್ದಾರೆ.

New Project (26)

‘ಕಂಡರಿಯದ ಹಾದಿಯಲ್ಲಿ ಹಿಂಜರಿಕೆಯ ಸೋಗಿಲ್ಲದೆ ನಮ್ಮೊಳಗೆ ನಾವು ಹುಡುಕುವುದೇ ಚಾರಣ’.

ಉತ್ತರಾಖಂಡದ ಕೋಸಾನಿಯಲ್ಲಿ ಸೂರ್ಯೋದಯವಾಗುವಾಗ ಚಿನ್ನದಂತೆ ಹೊಳೆಯುವ ತ್ರಿಶೂಲ ಪರ್ವತವನ್ನು ಕಂಡಾಗ ಆಗುವ ಅನುಭವ ಅನಿರ್ವಚನೀಯ. ಇದೇ ಕಾರಣಕ್ಕಾಗಿಯೇ ಈ ಜಾಗವನ್ನು ಮಹಾತ್ಮ ಗಾಂಧಿ ‘ಸ್ವಿಟ್ಜರ್ ಲ್ಯಾಂಡ್ ಆಫ್ ಇಂಡಿಯಾ’ ಎಂದು ಬಣ್ಣಿಸಿದರು.

‘ಹಿಮಾಲಯದ ಚಾರಣಗಳೆದಷ್ಟೋ ಗೆಳೆಯ ಒಂದು ಜನ್ಮ ಸಾಲದು, ಭಾರತೀಯರಾಗಿ ಹೆಮ್ಮೆಯಲಿ ನಡೆಯಿರಿ ನುಡಿಚಾರಣದಿ ಶಿವನ ಸೇರಿಬಿಡೋಣ’ ಎಂದು ಲೇಖಕರು ಹೇಳಿರುವುದು ಅಪ್ಪಟ ಸತ್ಯ. ಈ ಪುಸ್ತಕದಲ್ಲಿ ಗುರುಪ್ರಸಾದ್‍ರ ಶಿಸ್ತು, ಕುತೂಹಲ, ಎಲ್ಲರೊಂದಿಗೆ ಬೆರೆಯುವ ಸ್ವಭಾವ ಎದ್ದು ಕಾಣುತ್ತದೆ. ಚಾರಣ ಒಂದು ಗುಂಪಿನ ಜೊತೆ ಸೇರಿ ಮಾಡುವ ಸಾಹಸ. ಎಲ್ಲಕ್ಕಿಂತ ಮಿಗಿಲಾಗಿ ಲೇಖಕರು ಒಬ್ಬ ಸಣ್ಣ ಬಾಲಕನಂತೆ ಕುತೂಹಲವನ್ನು ಹೊಂದಿದ್ದಾರೆ.

ಚಾರಣವು ದೈಹಿಕ ಮತ್ತು ಮಾನಸಿಕ ಸವಾಲುಗಳನ್ನು ನೀಡುವ ಅನುಭವ. ಅದಕ್ಕಾಗಿ ಪೂರ್ವ ಸಿದ್ಧತೆ ಬಹಳ ಅವಶ್ಯಕ. ತಾವು ಹೋಗಬೇಕೆಂದಿರುವ ಚಾರಣದ ಬಗ್ಗೆ ಗುರುಪ್ರಸಾದ್‌ ಅವರು ಬಹಳ ಮುನ್ನವೇ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸುತ್ತಾರೆ. ಹೋಗಿ ಬರುವ ದಿನಾಂಕಗಳು, ದಿನವಹಿ ಸವೆಸಬೇಕಾದ ಹಾದಿ, ಸವಾಲುಗಳು ಹಾದುಹೋಗುವ ಪ್ರತಿ ಸ್ಥಳದ ಬಗ್ಗೆ ಪ್ರಾಕೃತಿಕ ಮಾಹಿತಿ ಐತಿಹ್ಯಗಳು, ಸಂಬಂಧಿಸಿದ ಕಥನಗಳು... ಮೊದಲಾದವುಗಳನ್ನು ಸಂಗ್ರಹಿಸಿಕೊಳ್ಳುತ್ತಾರೆ. ನಂತರ ಮಾಹಿತಿಯ ಸ್ಪಷ್ಟ ಮತ್ತು ಖಚಿತವಾದ ವಿಶ್ಲೇಷಣೆ ಮಾಡುತ್ತಾರೆ. ಈ ಹೊತ್ತಿಗೆ ಮನಸಿನಲ್ಲಿ ಚಾರಣದ ಒಂದು ಛಾಯಾಚಿತ್ರ ಸಿದ್ಧವಾಗುತ್ತದೆ. ಚಾರಣದ ಸವಾಲುಗಳನ್ನು ಎದುರಿಸಲು ದೈಹಿಕ ಮತ್ತು ಮಾನಸಿಕ ತಯಾರಿಯಲ್ಲಿ ತೊಡಗಿಕೊಳ್ಳುತ್ತಾರೆ. ಪ್ರತಿದಿನ ಹತ್ತಾರು ಕಿಲೋಮೀಟರ್ ನಡೆಯುವುದು, ದಿನದಿಂದ ದಿನಕ್ಕೆ ನಡಿಗೆಯ ದೂರವನ್ನೂ ವೇಗವನ್ನು ಹೆಚ್ಚು ಮಾಡಿಕೊಳ್ಳುವುದು, ಹೊಂದಿಸಿಕೊಳ್ಳುವುದು, ನಿಯಮಿತ ವ್ಯಾಯಾಮ ಮಾಡುವುದು ಮತ್ತು ಆರೋಗ್ಯಕರವಾದ ಆಹಾರ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಜತೆಗೆ ಚಾರಣಕ್ಕೆ ಅಗತ್ಯವಾದ ಸಾಮಗ್ರಿಗಳನ್ನು ಜೋಡಿಸಿಕೊಳ್ಳುವುದರಲ್ಲಿ ತೊಡಗಿಕೊಳ್ಳುತ್ತಾರೆ.

New Project (25)

ಪ್ರಮುಖವಾಗಿ ತಮ್ಮ ಚಾರಣದ ಅನುಭವವನ್ನು ಪ್ರಾಕೃತಿಕ ಆಧಾರದ ಮೇಲೆ ನಾಲ್ಕು ಅಧ್ಯಾಯಗಳಲ್ಲಿ ಲೇಖಕರು ವಿಂಗಡಿಸಿದ್ದಾರೆ. 1. ಹಿಮಾಲಯದ ಪ್ರದೇಶ; 2. ಪಶ್ಚಿಮ ಘಟ್ಟಗಳು; 3. ಇತರ ಪ್ರದೇಶಗಳು; 4. ಅಮೆರಿಕದಲ್ಲಿನ ಚಾರಣಗಳು. 2005ರಿಂದ 2020ರ ವರೆಗೆ ಹಬ್ಬಿರುವ ಈ ಚಾರಣದ ಅನುಭವಗಳು ಆಸಕ್ತಿಯನ್ನೂ, ಕುತೂಹಲವನ್ನೂ, ರೋಮಾಂಚನವನ್ನೂ ಉಂಟುಮಾಡುತ್ತದೆ. ಗುರುಪ್ರಸಾದರ ಬರಹದ ಭಾಷೆ ಸರಳ. ಕೆಲವು ಹಂತಗಳಲ್ಲಿ ಕಾವ್ಯಮಯವೂ ಆಗುತ್ತದೆ.

ಅಧ್ಯಾಯ ಒಂದರಲ್ಲಿ ಹಿಮಾಲಯದ ಹದಿನೇಳು ಚಾರಣಗಳು ಚಿತ್ರವತ್ತಾಗಿ ಮೂಡಿವೆ. ರೂಪಕುಂಡ ಚಾರಣವು 16500 ಅಡಿಗಳ ಎತ್ತರದವರೆಗೂ ಇವರನ್ನು ಕೊಂಡೊಯ್ಯುತ್ತದೆ.

ಹರ್‌-ಕಿ-ಧುನ್‌ ಚಾರಣದಲ್ಲಿ ಕೌತುಕವಾದ ವಿಷಯವೊಂದು ತೆರೆದುಕೊಳ್ಳುತ್ತದೆ. ಪರಿಸರ ಮಾಲಿನ್ಯವಿಲ್ಲದ ಓಸ್ಲಾ ಹಳ್ಳಿಯ ಬುಡಕಟ್ಟು ಜನಾಂಗದವರು ಕೌರವ ನಾಯಕ ದುರ್ಯೋಧನನ ಅನುಯಾಯಿಗಳು. ಅವರು ದುರ್ಯೋಧನನನ್ನು ಹೊರತುಪಡಿಸಿ ಬೇರೆ ಯಾರನ್ನೂ ಪೂಜಿಸುವುದಿಲ್ಲ.

ಪರಾಶರ ಸರೋವರವು ಅಪರೂಪದ ಜನಜೀವನದ ಅಭ್ಯಾಸಗಳನ್ನು ತೆರೆದಿಡುತ್ತದೆ. ಈ ಪವಿತ್ರ ಸರೋವರದ ನೀರನ್ನು ಯಾರೂ ಮುಟ್ಟುವಂತಿಲ್ಲ. ಆಶ್ಚರ್ಯವೆಂದರೆ ಮಲಾನ ಹಳ್ಳಿಯೂ ತನ್ನದೇ ಆದ ಕಾನೂನು, ಸಂಪ್ರದಾಯ, ಆಡಳಿತ ವ್ಯವಸ್ಥೆಯಿರುವ ಪ್ರಜಾಪ್ರಭುತ್ವವಾಗಿದೆ. ಇಂಥ ಹಲವಾರು ವಿಷಯಗಳನ್ನು ಲೇಖಕರು ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ.

ಲೇಖನವು ಕಾವ್ಯಮಯವಾಗಿರುವಂತೆಯೇ ಹಲವಾರು ಸೂಕ್ಷ್ಮ ಆಧ್ಯಾತ್ಮಿಕ ಅನುಭವಗಳನ್ನು ಗುರುಪ್ರಸಾದ್‌ ವಿವರಿಸಿದ್ದಾರೆ. ವಾಸ್ತವ ಅನುಭವಕ್ಕೆ ಒತ್ತು ಕೊಟ್ಟಿರುವುದರಿಂದ ಲೇಖನವು ಗಟ್ಟಿಯಾಗಿ ಮೂಡಿಬಂದಿದೆ.

New Project (23)

ಸಿಕ್ಕಿಂ, ಅರುಣಾಚಲ ಪ್ರದೇಶ, ವ್ಯಾಲಿ ಆಫ್‌ ಫ್ಲವರ್ಸ್‌ (ಪುಷ್ಪ ಕಣಿವೆ), ದಯಾರಾ ಬುಗ್ಯಾಲ್‌, ಸಂಡಕ್ಫೂ ಮತ್ತು ಫಾಲೂಟ್ ಅನುಭವಗಳು ನಮ್ಮ ಆಸಕ್ತಿಯನ್ನು ಕೆರಳಿಸುತ್ತದೆ.

ಪಶ್ಚಿಮ ಘಟ್ಟದ ಚಾರಣಗಳು ಹಿತವಾದ ಅನುಭವವನ್ನು ಕೊಡುತ್ತದೆ.

ತಡಿಯಾಂಡಮಾಲ್‌, ಕುದುರೆಮುಖ, ಕೋಟೆಬೆಟ್ಟ, ಯಲ್ಲಾಪುರ ಯಾಣ, ಗೋವಾ ನ್ಯಾಷನಲ್, ನೀಲಗಿರಿ ಸರೋವರ, ಮಾಕಳಿ ದುರ್ಗ, ಪ್ರತಾಪಗಢ, ರಾಯಗಢ ಚಾರಣಗಳು ಲೇಖಕರಿಗೆ ಹೆಚ್ಚಿನ ಅನುಭವವನ್ನು ಒದಗಿಸಿದೆ. ಜೊತೆಗೆ ದಕ್ಷಿಣ ಭಾರತದಲ್ಲಿ ವಿಶೇಷವಾಗಿ ಕರ್ನಾಟಕದಲ್ಲಿ ಹೆಚ್ಚು ಚಾರಣ ಜಾಡುಗಳನ್ನು ಅನ್ವೇಷಿಸಬೇಕಾದ ಅಗತ್ಯವನ್ನು ಒತ್ತಿ ಹೇಳುತ್ತದೆ.

ಬಹಳ ಸುಂದರ ಶೈಲಿಯಲ್ಲಿ, ಸಾಮಾನ್ಯರು ಸುಲಭವಾಗಿ ಅರ್ಥಮಾಡಿ ಕೊಳ್ಳುವ ಹಾಗೆ ಈ ಪುಸ್ತಕವನ್ನು ಬರೆದಿದ್ದಾರೆ.

‘ಚಾರಣ ಸವಿ ಹೂರಣ’ ಎಲ್ಲರ ಮನೆಯಲ್ಲಿಯೂ ಇರಲೇಬೇಕಾದ ಪುಸ್ತಕವಾಗಿದ್ದು ಚಾರಣ ಹೋಗಲಾಗದಿರುವವರಿಗೂ ಮನೆಯಲ್ಲಿಯೇ ಕುಳಿತು ಚಾರಣದ ಅನುಭವವನ್ನು ಸವಿಯುವಂತೆ ಇದು ಮಾಡುತ್ತದೆ. ಚಾರಣವನ್ನು ಮಾಡಲು ಉದ್ದೇಶಿಸಿರುವವರಿಗೆ ಇದೊಂದು ಆಕರ ಗ್ರಂಥವೂ ಆಗಿದೆ.

ಪುಸ್ತಕ ಪರಿಚಯ

ಪುಸ್ತಕದ ಹೆಸರು : ಚಾರಣ ಸವಿ ಹೂರಣ

ಲೇಖಕರು : ಹೆಚ್‌ಎಲ್ ಗುರುಪ್ರಸಾದ್

ಪುಟಗಳ ಸಂಖ್ಯೆ : 328

ಬೆಲೆ : 395 ರು.

ಪ್ರಕಾಶಕರು : ಸ್ನೇಹ ಬುಕ್ ಹೌಸ್

+91 98862 99710