Wednesday, June 24, 2026
Wednesday, June 24, 2026

ಅರುಣಾಚಲೇಶ್ವರ ಮತ್ತು ರಮಣ ಮಹರ್ಷಿಗಳ ಕ್ಷೇತ್ರದರ್ಶನ

ಅರುಣಾಚಲೇಶ್ವರನ ದರ್ಶನ ಪಡೆದು, ಶ್ರೀ ರಮಣ ಆಶ್ರಮದ ಪ್ರಶಾಂತವಾದ ವಾತಾವರಣದಲ್ಲಿ ಧ್ಯಾನ ಮಾಡಿ, ಶ್ರೀ ಲಕ್ಷ್ಮಿ ಅಮ್ಮನ ಕುಂಕುಮಾರ್ಚನೆಯ ಅವಿಸ್ಮರಣೀಯ ಅನುಭವ ಆನಂದಿಸಿ ಬೆಂಗಳೂರು ತಲುಪಿದಾಗ ಮನಸಿನಲ್ಲಿ ಸಮಾಧಾನ ತುಂಬಿತ್ತು.

  • ಸಿ.ಎ. ವಿಲಾಸ ನಾ ಹುದ್ದಾರ

ಒಮ್ಮೆ ಬ್ರಹ್ಮ ಮತ್ತು ವಿಷ್ಣು ಅವರಲ್ಲಿ ಯಾರು ಶ್ರೇಷ್ಠ ಎಂಬ ವಿವಾದ ಉಂಟಾದಾಗ ಶಿವನು ಅಗ್ನಿ ಸ್ತಂಭದ ರೂಪ ತಳೆದು ಅವರಿಗೆ ಸ್ತಂಭದ ಆದಿ ಅಥವಾ ಅಂತ್ಯವನ್ನು ನೋಡಿ ತನಗೆ ತಿಳಿಸಲು ಹೇಳಿದನು. ವಿಷ್ಣುವಿಗೆ ಆದಿ, ಅಂತ್ಯ ಕಂಡು ಬರಲಿಲ್ಲ. ಆದರೆ ಬ್ರಹ್ಮನು ತಾನು ಆದಿಯನ್ನು ನೋಡಿದೆನು ಎಂದು ಸುಳ್ಳು ಹೇಳಿದನು. ಏಕೆಂದರೆ ಆ ಅಗ್ನಿ ಸ್ತಂಭಕ್ಕೆ ಆದಿ, ಅಂತ್ಯವಿರಲಿಲ್ಲ. ಬ್ರಹ್ಮನ ಅಸತ್ಯ ಮಾತನ್ನು ಕೇಳಿ ಅವನ ಐದನೆಯ ತಲೆ ಕಡಿದು ಅವನಿಗೆ ಯಾವದೇ ದೇವಸ್ಥಾನದಲ್ಲಿ ಪೂಜೆ ಸಲ್ಲಬಾರದೆಂಬ ಶಾಪವಿತ್ತನು. ಆಮೇಲೆ ಆ ಸ್ತಂಭವು ಆಣ್ಣಾಮಲೈ ಪರ್ವತವಾಗಿ ರೂಪಗೊಂಡು ಲಿಂಗದಲ್ಲಿ ರೂಪಾಂತರವಾಗಿ ಆಣ್ಣಾಮಲೈ ಪರ್ವತದ ತಪ್ಪಲಿನಲ್ಲಿ ಅರುಣಾಚಲೇಶ್ವರನಾಗಿ ಸ್ಥಿತಗೊಂಡನು ಎಂಬ ಪ್ರತೀತಿ ಇದೆ. ಈ ದೇವಸ್ಥಾನಕ್ಕೆ ಅಣ್ಣಾಮಲೈರ್ ಎಂದೂ ಕರೆಯುತ್ತಾರೆ. ಭಕ್ತರಲ್ಲಿ ಈ ಪರ್ವತದ (14 ಕಿ.ಮೀ) ಪರಿಕ್ರಮ ಮಾಡಿದರೆ ತಮ್ಮ ಮನೋಕಾಂಕ್ಷೆಗಳು ಸಿದ್ಧಿಸುತ್ತವೆ ಎಂಬ ಅಚಲವಾದ ನಂಬಿಕೆಯಿದೆ.

ಇದನ್ನೂ ಓದಿ: ಜಲಾಸುರನ ಕೊಂದ ನರಸಿಂಹನ ದೇವಾಲಯ

ಈ ದೇವಸ್ಥಾನ 24 ಎಕರೆ ವಿಸೀರ್ಣದಲ್ಲಿ ಹರಡಿದೆ. ದೇವಸ್ಥಾನದ ಕಟ್ಟಡ ಉತ್ತರಕ್ಕೆ 1590 ಅಡಿ ಉದ್ದವಾಗಿದ್ದು ನಾಲ್ಕೂ ದಿಕ್ಕುಗಳಲ್ಲಿ ಆಕರ್ಷಕ ಎತ್ತರದ ಗೋಪುರಗಳಿವೆ. ರಾಜಗೋಪುರದ ಎತ್ತರ 217 ಅಡಿ ಇದೆ. ದೇವಸ್ಥಾನವು ಪ್ರಭಾವಶಾಲಿ ವಾಸ್ತಶಿಲ್ಪ ಮತ್ತು ಕೆತ್ತನೆಯನ್ನು ಒಳಗೊಂಡಿದೆ. ಶಿವನು ಇಲ್ಲಿ ಪಂಚಭೂತಗಳಲ್ಲೊಂದಾದ ಅಗ್ನಿಯನ್ನು ಪ್ರತಿನಿಧಿಸುತ್ತಾನೆ. ಅವನ ಸಂಗಾತಿಯಾಗಿ ಪಾರ್ವತಿಯ ದೇವಸ್ಥಾನವೂ ಇದೆ. ಉನ್ನಮಲೈ ಅಮ್ಮಾಯಿ ಎಂದೂ ಸಂಬೋಧಿಸುತ್ತಾರೆ. ಈ ದೇವಸ್ಥಾನವು ಶೈವ ಸಂಪ್ರದಾಯಕ್ಕನುಗುಣವಾಗಿ ಸಾಕಷ್ಟು ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ಈ ದೇವಾಲಯದ ಅಭಿವೃದ್ಧಿಯು ಕ್ರಿ.ಶ. 1136ರಿಂದ 1570ರವರೆಗೆ ಸಂಗಮ, ಸಾಳುವಾ, ಹೊಯ್ಸಳ ರಾಜವಂಶದವರ ಆಡಳಿತದ ಅವಧಿಯಲ್ಲಿ ಆಗಿದೆ ಎಂದು ದಾಖಲಾಗಿದೆ. ಪ್ರಸ್ತುತ ಈಗ ಈ ಗುಡಿಯು ತಮಿಳುನಾಡಿನ ಸರಕಾರದ ಧರ್ಮದತ್ತಿ ಇಲಾಖೆಯ ಸುಪರ್ದಿಯಲ್ಲಿದೆ. ಧರ್ಮದರ್ಶನ ಮತ್ತು ರೂ.50 ಕೊಟ್ಟರೆ ವಿಶೇಷ ದರ್ಶನವೂ ಲಭ್ಯವಿದೆ.

ನಾವು ಸುಮಾರು 2 ಗಂಟೆ ಧರ್ಮದರ್ಶನ ಸಾಲಿನಲ್ಲಿ ನಿಂತು ಶಿವಲಿಂಗದ ದರ್ಶನವಾದಾಗ ನಮಗೆ ಅಲೌಕಿಕವಾದ ಅನುಭವವಾಯಿತು. ತನು, ಮನದಲ್ಲಿ ಧನ್ಯತಾಭಾವ ತಾನೇ ತಾನಾಗಿ ತುಂಬಿಕೊಂಡಿತು.

Untitled design (2)

ಶ್ರೀ ರಮಣ ಮಹರ್ಷಿ ಆಶ್ರಮ

ಶುಚಿ-ರುಚಿಯಾದ ಊಟ ಮಾಡಿ ಅಣ್ಣಾಮಲೈ ಪರ್ವತದ ತಪ್ಪಲಿನಲ್ಲಿರುವ ರಮಣ ಆಶ್ರಮವನ್ನು ಪ್ರವೇಶಿಸಿದೆವು. ಆ ಜಾಗಕ್ಕೆ ಹೋಗುತ್ತಿದ್ದಂತೆಯೇ ಪ್ರಶಾಂತವಾದ ಅನುಭೂತಿಯಾಯಿತು. ಮೆಟ್ಟಿಲುಗಳನ್ನು ಹತ್ತಿ ಹೋದರೆ ಎಡ ಬದಿಗೆ ಶ್ರೀ ರಮಣ ಮಹರ್ಷಿಗಳ ಮಾತೆ ಅಳಗಮ್ಮಾ ಅವರ ಮತ್ತು ಶ್ರೀ ರಮಣರ ಸಮಾಧಿಗಳಿವೆ. ಅಳಗಮ್ಮಾ ಅವರು ಮಗನ ಕಾರ್ಯದಲ್ಲಿ ಸಹಾಯ ಮಾಡುತ್ತ ಅಲ್ಲಿ ಬರುವ ಭಕ್ತರಿಗೆ ಆಹಾರದ ವ್ಯವಸ್ಥೆ ಮಾಡುತ್ತಿದ್ದರು. ಬಳಿಕ 1922ರಲ್ಲಿ ಮೋಕ್ಷ ಪಡೆದರು.

ಶ್ರೀ ರಮಣರ ಪೂರ್ವ ನಾಮ ವೆಂಕಟರಮಣ ಅಯ್ಯರ್(30.12.1879-14.4.1950). 16ನೆಯ ವಯಸ್ಸಿನಲ್ಲಿಯೇ ʼಸಾವಿನ ಅನುಭವʼ ಆಗಿ, ʼನಾನು ಯಾರು?ʼ ಎಂದು ಅನ್ವೇಷಣೆ ಮಾಡುವದೇ ಆವರ ಜೀವನದ ಮುಖ್ಯ ಧ್ಯೇಯವಾಯಿತು. ಎಲ್ಲರಿಗೂ ಅದನ್ನೇ ಉಪದೇಶಿಸುತ್ತಿದ್ದರು. ಅಲ್ಲೇ ಸಮೀಪದಲ್ಲಿ ಧ್ಯಾನ ಮಂದಿರವಿದೆ. ಆ ಸ್ಥಳದ ಮಹತ್ವವೇನೆಂದರೆ ಅಲ್ಲಿ ಧ್ಯಾನಕ್ಕೆ ಕುಳಿತರೆ ನಾವು ಜಗತ್ತನ್ನೇ ಮರೆಯುತ್ತೇವೆ. ಆ ಮಟ್ಟದ ಶಾಂತತೆ, ಮೌನ ಅಲ್ಲಿ ನೆಲೆಸಿದೆ. ಸ್ವಲ್ಪ ದೂರದಲ್ಲಿ ಶ್ರೀ ರಮಣರ ವಿಶ್ರಾಂತಿ ಕೋಣೆ ಇದೆ. ಅಲ್ಲೇ ಹತ್ತಿರದಲ್ಲಿ ಕಾಗೆ, ಹಸು, ನಾಯಿ ಹೀಗೆ ಪಶು-ಪಕ್ಷಿಗಳ ಸಮಾಧಿಯೂ ಕಂಡು ಬರುತ್ತವೆ. ವಿರುಪಾಕ್ಷಾ ಗುಹಾ/ಸ್ಕಂದಾಶ್ರಮಕ್ಕೂ ಅಲ್ಲಿಂದ ಹೋಗಬಹುದು.

ಅಲ್ಲಿ ಗರಿಷ್ಠ 3 ದಿನಗಳ ವಾಸ್ತವ್ಯ ಮಾಡಬಹುದು. ಅದಕ್ಕೆ ಎಲ್ಲ ಅನುಕೂಲಗಳಿವೆ. ಆನ್-ಲೈನ್‌ನಲ್ಲಿ ಎರಡು ತಿಂಗಳು ಮುಂಚಿತವಾಗಿಯೇ ಕಾಯ್ದಿರಿಸಿಕೊಳ್ಳಬೇಕು. ವಾಸ್ತವ್ಯಕ್ಕೆ ಯಾವುದೇ ಹಣವನ್ನು ಕೊಡುವ ಅಗತ್ಯವಿಲ್ಲ. ಆದರೆ, ನೀವು ದೇಣಿಗೆ ನೀಡಬಹುದು.

Untitled design (63)

ಗೋಲ್ಡನ್ ಟೆಂಪಲ್-ನಾರಾಯಣಿ ದೇವಸ್ಥಾನ

ವೆಲ್ಲೂರನಲ್ಲಿರುವ ನಾರಾಯಣಿ ದೇವಸ್ಥಾನವು ತಿರುವಣ್ಣಾಮಲೈನಿಂದ 84 ಕಿ.ಮೀ ದೂರದಲ್ಲಿದೆ. ಗೋಲ್ಡನ್ ಟೆಂಪಲ್‌ನ ವಿಸ್ತೀರ್ಣ ಸುಮಾರು 100 ಎಕರೆ. ಹಸಿರಿನಿಂದ ಕಂಗೊಳಿಸುತ್ತಿದೆ. ಧಾರ್ಮಿಕ ಗುರುಗಳಾದ ಶ್ರೀ ಶಕ್ತಿ ಅಮ್ಮಾ(ನಾರಾಯಣಿ ಅಮ್ಮಾ) ಇದರ ಸಂಸ್ಥಾಪಕರು ಮತ್ತು ಪೀಠಾಧಿಪತಿಗಳು. ಪ್ರವೇಶ ದ್ವಾರದಿಂದ ಮಧ್ಯದಲ್ಲಿರುವ ದೇವಸ್ಥಾನದವರೆಗೆ ಇರುವ ಫಲಕಗಳಲ್ಲಿ ಶ್ರೀ ಶಕ್ತಿ ಅಮ್ಮಾ ಅವರ ಅಮೃತ ವಾಣಿಗಳಿವೆ. ಅದನ್ನು ಓದುತ್ತ ನಡೆದರೆ ದೇವಸ್ಥಾನವು ಬಂದದ್ದೇ ತಿಳಿಯುವದಿಲ್ಲ. ಬಂಗಾರದಿಂದ ಆಚ್ಛಾದಿತವಾದ ದೇವಸ್ಥಾನವು ಮಲೈಕುಡಿ ಪರ್ವತದ ಮಡಿಲಲ್ಲಿ ಪ್ರತಿಷ್ಠಾಪಿತವಾಗಿದೆ. ದೇವಸ್ಥಾನಕ್ಕೆ ಹೊಂದಿಕೊಂಡೇ ಒಂದು ಪುಟ್ಟ ಪುಷ್ಕರಣಿ ಇದೆ. ಮನಸಿನ ಇಚ್ಛೆಗಳನ್ನು ಪ್ರಾರ್ಥಿಸಿಕೊಂಡು ಅದರೊಳಗೆ ನಾಣ್ಯ ಹಾಕಿದರೆ ಅವು ಪೂರ್ತಿಯಾಗುತ್ತವೆ.

ಮಾಹಿತಿ ಪೆಟ್ಟಿಗೆ:

*16ನೆಯ ವಯಸ್ಸಿನಲ್ಲಿಯೇ ʼಸಾವಿನ ಅನುಭವʼ ಆಗಿ, ʼನಾನು ಯಾರು?ʼ ಎಂದು ಅನ್ವೇಷಣೆ ಮಾಡಿದವರು ರಮಣ ಮಹರ್ಷಿ.

* ಅರುಣಾಚಲೇಶ್ವರ ದೇವಾಲಯಕ್ಕೆ ಅಣ್ಣಾಮಲೈರ್ ಎಂದೂ ಕರೆಯುತ್ತಾರೆ

ಲೇಖಕರು: ಹವ್ಯಾಸಿ ಬರಹಗಾರರು

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Previous

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

ವಿಹಂಗಮ ಸಂಗಮ

Read Next

ವಿಹಂಗಮ ಸಂಗಮ