Thursday, July 16, 2026
Thursday, July 16, 2026

ಕೃಷ್ಣ- ಬಲರಾಮರು ವಿದ್ಯಾಭ್ಯಾಸ ಮಾಡಿದ ಗುರುಕುಲವಿದು

ಆಶ್ರಮದ ಮುಖ್ಯವಾದ ಆಕರ್ಷಣೆ ಎಂದರೆ ವೇದ, ವ್ಯಾಕರಣ, ಛಂದಸ್ಸು ಇತ್ಯಾದಿ 14 ಓದು-ಬರಹದ ವಿದ್ಯೆಗಳು ಮತ್ತು ನಿತ್ಯ ಜೀವನೋಪಯೋಗಿಗಳಾದ 64 ಕಲೆಗಳ ಸುಂದರವಾದ ಚಿತ್ರಗಳು. ಈ ಎಲ್ಲ ವಿದ್ಯೆಗಳು ಮತ್ತು ಕಲೆಗಳನ್ನು ಶ್ರೀಕೃಷ್ಣ- ಬಲರಾಮ- ಸುದಾಮರು ಅಭ್ಯಾಸ ಮಾಡಿದರು ಎನ್ನಲಾಗಿದೆ. ಕಲಾವಿದರ ತಂಡದಿಂದ ರಚನೆಯಾದ ಈ ಚಿತ್ರಗಳು ಬಹಳ ಅದ್ಭುತವಾಗಿ ಮೂಡಿ ಬಂದಿವೆ.

  • ವೇದಾ ಆಠವಳೆ, ಬೆಂಗಳೂರು

ವಸುದೇವಸುತಂ ದೇವಂ ಕಂಸ ಚಾಣೂರ ಮರ್ದನಂ |

ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ ||

ಜಗತ್ತಿಗೇ ಗುರುವಾದ ಶ್ರೀ ಕೃಷ್ಣನಿಗೆ ಶರಣು ಅನ್ನುತ್ತದೆ ಈ ಶ್ಲೋಕ. ಇಂತಿಪ್ಪ ಕೃಷ್ಣನೂ ಬಾಲ್ಯದಲ್ಲಿ ಗುರುವಿಗೆ ಗುಲಾಮನಾಗಿಯೇ ಎಲ್ಲಾ ವಿದ್ಯೆಗಳನ್ನು ಕಲಿತು ಮುಂದೆ ಶ್ರೇಷ್ಠನೆನಿಸಿಕೊಂಡಿದ್ದು! ಸಾಂದೀಪನಿ ಆಶ್ರಮದ ಹಳೆ ವಿದ್ಯಾರ್ಥಿಯಾದ ಶ್ರೀ ಕೃಷ್ಣನ ವಿದ್ಯಾಭ್ಯಾಸದ ವಿವರಗಳನ್ನು ನೋಡುವ ಅವಕಾಶ ನನಗೆ ಇತ್ತೀಚೆಗೆ ಒದಗಿತ್ತು. ಗುರು ಸಾಂದೀಪನಿಯ ಆಶ್ರಮವೆಂದು ಖ್ಯಾತವಾದ ಆ ಕಲಾ ಗ್ಯಾಲರಿ ಮಧ್ಯಪ್ರದೇಶದ ಉಜ್ಜಯಿನಿಯಿಂದ ಕೇವಲ ಆರು ಕಿಲೋಮೀಟರ್ ದೂರದಲ್ಲಿದೆ.

ಇದನ್ನೂ ಓದಿ:ದ್ವಾರಕಾಧೀಶನ ರಾಜ್ಯದಲ್ಲಿ..

ಕೃಷ್ಣ-ಬಲರಾಮರ ವಿದ್ಯಾಭ್ಯಾಸ ಮಾಡಿದ ಗುರುಕುಲ

ಗೋಕುಲ ಮತ್ತು ಮಧುರೆಯಲ್ಲಿ ಬಾಲ್ಯವನ್ನು ಕಳೆದ ಕೃಷ್ಣ- ಬಲರಾಮರು, 500 ಕಿಲೋಮೀಟರ್ ದೂರದ ಸಾಂದೀಪನಿಯ ಆಶ್ರಮಕ್ಕೆ ವಿದ್ಯಾಭ್ಯಾಸಕ್ಕಾಗಿ ಬಂದದ್ದು ಗುರುಕುಲ ವಿದ್ಯಾಭ್ಯಾಸದ ಮಹತ್ವವನ್ನು ಸಾರಿ ಹೇಳುತ್ತದೆ. ಭಾಗವತ ಪುರಾಣದಲ್ಲಿ ಈ ಬಗ್ಗೆ ವಿವರಗಳು ಸಿಗುತ್ತವೆ. ಮಹರ್ಷಿ ಸಾಂದೀಪನಿಯ ಬಳಿಯಲ್ಲಿ ದೇವರ ಅವತಾರವೆಂದೇ ನಂಬಲಾಗುವ ಶ್ರೀ ಕೃಷ್ಣ- ಬಲರಾಮರ ಜತೆಗೆ ಸುದಾಮನೆಂಬ ಸಾಮಾನ್ಯ ಬಾಲಕನೂ ವಿದ್ಯಾಭ್ಯಾಸ ಮಾಡಿದ್ದು ವಿಶೇಷ. ಈ ಮೂವರ ದೈನಂದಿನ ವಿದ್ಯಾರ್ಥಿ ಜೀವನದ ಚಿತ್ರಗಳನ್ನು ಗ್ಯಾಲರಿಯಲ್ಲಿ ಸುಂದರವಾಗಿ ಬಿಡಿಸಿದ್ದಾರೆ.

Untitled design - 2026-07-15T191138.548

ಕೃಷ್ಣ ಸೃಷ್ಟಿಸಿದ ಪುಷ್ಕರಣಿ

ಆಶ್ರಮದ ಪರಿಸರದಲ್ಲಿ ಗೋಮತಿಕುಂಡ ಮತ್ತು ಸರ್ವೇಶ್ವರ ಮಹಾದೇವನ ಮಂದಿರವೂ ಇದೆ. ಗುರು ಸಾಂದೀಪನಿಗೆ ವಯಸ್ಸಿನ ಕಾರಣದಿಂದ ನೀರಿಗಾಗಿ ದೂರ ಹೋಗಲು ಕಷ್ಟಸಾಧ್ಯವಾದಾಗ ಕೃಷ್ಣನೇ ಈ ಗೋಮತಿ ಕುಂಡವನ್ನು ಸೃಷ್ಟಿಸಿದ ಎಂಬ ನಂಬಿಕೆ ಇದೆ. ಇಳಿ ಮೆಟ್ಟಲಿನ ಈ ಪುಷ್ಕರಣಿ ಸುಂದರವಾಗಿದೆ. ಸರ್ವೇಶ್ವರ ಮಹಾದೇವನ ಗುಡಿಯ ಮುಂದೆ ಇರುವ ನಂದಿ ನಿಂತಿರುವ ಭಂಗಿಯಲ್ಲಿರುವುದು ಕುತೂಹಲಕಾರಿ ಅಂಶ.

ಇಲ್ಲಿರುವ ಇನ್ನೊಂದು ವಿಶೇಷತೆ ಎಂದರೆ ಒಂದರಿಂದ ನೂರರ ತನಕ ಅಂಕೆಗಳು ಬರೆದಿರುವ ಕಲ್ಲಿನ ಪಟ್ಟಿ. ಇದಕ್ಕೆ ಅಂಕಪಟ ಎನ್ನುತ್ತಾರೆ. ಸಾಂದೀಪನಿ ಮಹರ್ಷಿಗಳು ಇದನ್ನು ತಯಾರು ಮಾಡಿದ್ದರು ಎಂಬ ನಂಬಿಕೆ ಇದೆ. ಈಗಲೂ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಮೊದಲು ಈ ಅಂಕಪಟ್ಟಿಗೆ ಪ್ರಾರ್ಥನೆ ಸಲ್ಲಿಸುವ ಸಂಪ್ರದಾಯ ಈ ಭಾಗದಲ್ಲಿದೆ.

Untitled design (99)

14 ವಿದ್ಯೆಗಳು, 64 ಕಲೆಗಳ ಚಿತ್ತಾರ

ಆಶ್ರಮದ ಮುಖ್ಯವಾದ ಆಕರ್ಷಣೆ ಎಂದರೆ ವೇದ, ವ್ಯಾಕರಣ, ಛಂದಸ್ಸು ಇತ್ಯಾದಿ 14 ಓದು-ಬರಹದ ವಿದ್ಯೆಗಳು ಮತ್ತು ನಿತ್ಯ ಜೀವನೋಪಯೋಗಿಗಳಾದ 64 ಕಲೆಗಳ ಸುಂದರವಾದ ಚಿತ್ರಗಳು. ಈ ಎಲ್ಲ ವಿದ್ಯೆಗಳು ಮತ್ತು ಕಲೆಗಳನ್ನು ಶ್ರೀಕೃಷ್ಣ- ಬಲರಾಮ- ಸುದಾಮರು ಅಭ್ಯಾಸ ಮಾಡಿದರು ಎನ್ನಲಾಗಿದೆ. ಕಲಾವಿದರ ತಂಡದಿಂದ ರಚನೆಯಾದ ಈ ಚಿತ್ರಗಳು ಬಹಳ ಅದ್ಭುತವಾಗಿ ಮೂಡಿ ಬಂದಿವೆ. ಈ ಕಲಾ ಗ್ಯಾಲರಿಯ ಕೊನೆಯಲ್ಲಿ ಭಗವದ್ಗೀತೆಯ ವಿವರಗಳ ಚಿತ್ರಗಳೂ ಇವೆ. ಹುಲ್ಲಿನ ಮೇಲ್ಚಾವಣಿಯ, ಬಿದಿರು ಹೊದಿಸಿದ ಗೋಡೆಗಳು ಮತ್ತು ಸಗಣಿ ಸಾರಿಸಿದ ಪರಿಸರ ಈ ಚಿತ್ರಗಳ ಮೋಡಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಗುರು-ಶಿಷ್ಯರ ನಡುವೆ ನಡೆಯುವ 64 ಕಲೆಗಳ ವಿವರಗಳು ಸೊಗಸಾಗಿ ಅನಾವರಣಗೊಂಡಿವೆ. ಅಡುಗೆಮನೆಯ ಒಳಾಂಗಣ ವಿನ್ಯಾಸ, ಹೂಮಾಲೆ ಮಾಡುವುದರಿಂದ ಹಿಡಿದು ರತ್ನ ಪರೀಕ್ಷೆ, ನೃತ್ಯ, ಸಂಗೀತದವರೆಗೂ ಹರಡಿರುವ ಜ್ಞಾನ ವೈವಿಧ್ಯ ನಮ್ಮನ್ನು ಮೂಕರನ್ನಾಗಿಸುತ್ತದೆ.

ವಿದ್ಯೆ ಎಂದರೆ ಕೇವಲ ಓದು-ಬರಹವಲ್ಲ; ನಿತ್ಯ ಜೀವನಕ್ಕೆ ಬೇಕಾದ ಕೌಶಲ್ಯಗಳು ಕೂಡ ಮುಖ್ಯ. ಇದನ್ನೆಲ್ಲ ಕಲಿತ ವ್ಯಕ್ತಿ ಮಾತ್ರವೇ ಶ್ರೀಕೃಷ್ಣ ಪರಮಾತ್ಮನಂತೆ ಪರಿಪೂರ್ಣ ಎನಿಸಿಕೊಳ್ಳುತ್ತಾನೆ ಅಲ್ಲವೇ?

ಕೃಷ್ಣ- ಬಲರಾಮರು ನೀಡಿದ ಗುರುದಕ್ಷಿಣೆ ಪ್ರಸಂಗ

ವಿದ್ಯಾಭ್ಯಾಸವನ್ನು ಮುಗಿಸಿದ ಶ್ರೀಕೃಷ್ಣ- ಬಲರಾಮರು ಗುರುದಕ್ಷಿಣೆಯನ್ನು ಅರ್ಪಿಸುವ ಕತೆ ಬಹಳ ಕುತೂಹಲಕಾರಿಯಾಗಿದೆ. ಶ್ರೀಕೃಷ್ಣ- ಬಲರಾಮರು ಸಾಂದೀಪನಿ ಮಹರ್ಷಿಗಳನ್ನು ಗುರುದಕ್ಷಿಣೆಯಾಗಿ ಏನನ್ನು ಕೊಡಲಿ ಎಂದು ಪ್ರಾರ್ಥಿಸಿದಾಗ, ತಮ್ಮ ಕಳೆದುಹೋದ ಮಗನನ್ನು ಮರಳಿ ತಂದುಕೊಡಿ ಎನ್ನುತ್ತಾನೆ ಗುರು. ಸಾಂದೀಪನಿಯ ಮಗ ಪ್ರಭಾಸ ಕ್ಷೇತ್ರದ ಬಳಿ ಸಮುದ್ರಸ್ನಾನ ಮಾಡುವಾಗ ಕಾಣೆಯಾದದ್ದನ್ನು ತಿಳಿದು. ಶ್ರೀಕೃಷ್ಣ- ಬಲರಾಮರು ಅಲ್ಲಿಗೆ ಹೋಗಿ ಸಮುದ್ರರಾಜನಲ್ಲಿ ಗುರುಪುತ್ರನನ್ನು ಮರಳಿಸುವಂತೆ ಕೇಳಿಕೊಳ್ಳುತ್ತಾರೆ. ಸಮುದ್ರರಾಜ ಇದರಲ್ಲಿ ನನ್ನದೇನು ತಪ್ಪಿಲ್ಲ, ಇಲ್ಲಿ ವಾಸಿಸುವ ಪಂಚಜನನೆಂಬ ರಾಕ್ಷಸನು ಮಗುವನ್ನು ಒಯ್ದದ್ದಾಗಿ ಹೇಳುತ್ತಾನೆ. ಶ್ರೀಕೃಷ್ಣ -ಬಲರಾಮರು ಪಂಚಜನನ ಬಳಿಗೆ ಹೋಗಿ ಕೇಳುವಾಗ ಮಗು ಅಲ್ಲಿರುವುದಿಲ್ಲ. ಬದಲಾಗಿ ಅಪೂರ್ವ ಶಂಖವೊಂದು ಕೃಷ್ಣನಿಗೆ ಲಭಿಸುತ್ತದೆ. ಗುರುಪುತ್ರನು ಯಮಲೋಕಕ್ಕೆ ಹೋಗಿರುವುದನ್ನು ತಿಳಿದ ಕೃಷ್ಣ- ಬಲರಾಮರು ಅಲ್ಲಿಗೆ ಹೋಗುತ್ತಾರೆ. ಅಲ್ಲಿ ಪಾಂಚಜನ್ಯವನ್ನು ಕೃಷ್ಣನು ಊದಿದಾಗ ಯಮ ಹೊರಗಡೆ ಬರುತ್ತಾನೆ ಮತ್ತು ಗುರುಪುತ್ರನನ್ನು ಮರಳಿಸುತ್ತಾನೆ. ಮಗನನ್ನು ಮರಳಿ ಪಡೆದ ಸಾಂದೀಪನಿ ಮಹರ್ಷಿಗಳು ಅತ್ಯಂತ ಹರ್ಷಗೊಂಡು ಕೃಷ್ಣ- ಬಲರಾಮರನ್ನು ಆಶೀರ್ವದಿಸುತ್ತಾರೆ. ಶಿಷ್ಯನ ಸಾಮರ್ಥ್ಯದಲ್ಲಿ ನಂಬಿಕೆ ಇರುವ ಗುರು, ಅಸಾಧ್ಯ ಎನಿಸುವ ಕೆಲಸವನ್ನು ಮಾಡಲು ಶಿಷ್ಯನಿಗೆ ಪ್ರೇರಣೆ ಕೊಡುವ ಮತ್ತು ಗುರುವಿನ ಇಚ್ಛೆಯನ್ನು ಪೂರೈಸಲು ಎಂಥ ಸಾಹಸಕ್ಕೂ ಹಿಂಜರಿಯದ ಶಿಷ್ಯನ ಸುಂದರವಾದ ರೂಪಕದಂತೆ ಈ ಪ್ರಸಂಗವಿದೆ.

ಗುರುಕುಲ ವಿದ್ಯಾಭ್ಯಾಸದ ಪರಿಚಯ ಮಾಡಿಕೊಡುವ ಸಾಂದೀಪನಿ ಆಶ್ರಮ ಒಂದೊಳ್ಳೆಯ ಪ್ರೇಕ್ಷಣೀಯ ಸ್ಥಳ. ಉಜ್ಜಯಿನಿಯ ಮಹಾಕಾಲ ಮತ್ತು ಕಾಲಭೈರವನ ದರ್ಶನವನ್ನು ಪಡೆದ ಮೇಲೆ ಈ ಕಲಾ ಪ್ರಪಂಚವನ್ನು ಸಂದರ್ಶಿಸಲು ಮರೆಯದಿರಿ.

ದಾರಿ ಹೇಗೆ?

ಮಧ್ಯಪ್ರದೇಶದ ಉಜ್ಜಯಿನಿಯಿಂದ ಕೇವಲ 6 ಕಿ.ಮೀ ದೂರದಲ್ಲಿ ಈ ಗ್ಯಾಲರಿ ಇದೆ. ಉಜ್ಜಿಯಿನಿಯಿಂದ ಸ್ಥಳೀಯ ವಾಹನಗಳ ಮೂಲಕ ತಲುಪಬಹುದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Previous

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

ವಿಹಂಗಮ ಸಂಗಮ

Read Next

ವಿಹಂಗಮ ಸಂಗಮ