Thursday, January 15, 2026
Thursday, January 15, 2026

ಕಾಶಿ ಯಾತ್ರೆಯ ಚೆನ್ನಾಗಿ ಮಾಡೋ

ಗಂಗಾ ತೀರದ ಮೆಟ್ಟಿಲುಗಳೇ ಘಾಟ್. ಒಟ್ಟು 84 ಘಾಟ್‌ಗಳಿವೆ! ದಶಾಶ್ವಮೇಧ ಘಾಟ್‌ನಲ್ಲಿ ಗಂಗಾರತಿ ವಿಜೃಂಭಣೆಯಿಂದ ಮಾಡಲಾಗುತ್ತದೆ. ಹರಿಶ್ಚಂದ್ರ ಘಾಟ್ ಮತ್ತು ಮಣಿಕರ್ಣಿಕ ಘಾಟ್‌ಗಳಲ್ಲಿ ಪ್ರತಿನಿತ್ಯ ಅಂದಾಜು 50ಕ್ಕಿಂತ ಹೆಚ್ಚು ಶವಗಳ ದಹನ ನಡೆಯುತ್ತದೆ! ಅಸ್ಸಿ ಘಾಟ್, ಅಸ್ಸಿ - ಗಂಗಾ ನದಿಗಳು ಸಂಗಮ ಹೊಂದುವುದರಿಂದ ಈ ಹೆಸರು ಪಡೆದಿದೆ. ಇದು ವಾರಾಣಸಿಯ ಅತ್ಯಂತ ದೊಡ್ಡ ಘಾಟ್. ಅತಿಹೆಚ್ಚು ಜನರು ಭೇಟಿ ನೀಡುವ ಸ್ಥಳ. ನಿತ್ಯ ವೇದೋಕ್ತಿ, ಆಧ್ಯಾತ್ಮಿಕ ಕಾರ್ಯಕ್ರಮಗಳು, ಯೋಗ, ಸಂಗೀತ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಇತ್ತೀಚಿಗೆ ಸೇರಲ್ಪಟ್ಟ 'ನಮೋ ಘಾಟ್' ನಮಸ್ಕಾರ ಮುದ್ರೆಯೊಂದಿಗೆ ಇಲ್ಲಿದೆ.

- ಡಾ. ಶ್ರೀಲತಾ ಪದ್ಯಾಣ

'ಕಾಶಿ' ಯು ಪ್ರಪಂಚದಲ್ಲೇ ಅತ್ಯಂತ ಪುರಾತನ ಸ್ಥಳ. ಇಂದಿಗೂ ಜನನಿಬಿಡ ಪ್ರದೇಶಗಳಲ್ಲೊಂದು. ಉತ್ತರಪ್ರದೇಶ ರಾಜ್ಯದಲ್ಲಿದ್ದು, ವಾರಣಾಸಿ, ಬನಾರಸ್ ಎಂಬ ಹೆಸರುಗಳಿಂದಲೂ ಪ್ರಸಿದ್ಧ. ಹಿಂದೂ ಧಾರ್ಮಿಕ ಪವಿತ್ರ ಸ್ಥಳ ಎಂದು ಪರಿಗಣಿಸಲಾಗಿದೆ. ಅಂದೆಲ್ಲಾ ವಯಸ್ಸಾದವರು ಮಾತ್ರ ಹೆಚ್ಚಾಗಿ ಕಾಶಿಗೆ ಹೋಗುತ್ತಿದ್ದರು. ಅಂತಿಮ ದಿನಗಳನ್ನು ಕಳೆಯಲೋ ನಿಧನರಾದವರ ಆತ್ಮಕ್ಕೆ ಶಾಂತಿಗಾಗಿ ಶ್ರಾದ್ಧಾ ಕಾರ್ಯಗಳನ್ನು ಮಾಡಲೋ ಹೋಗುವವರಿದ್ದರು. ತೀರ್ಥಯಾತ್ರೆಗೆ ಕಾಶಿ ಹೆಸರಾಗಿದೆ.

ಅತಿಹೆಚ್ಚು ಜನರು ಭೇಟಿ ನೀಡುವ ಭಾರತದ ದೇಗುಲಗಳಲ್ಲಿ ಕಾಶಿ ವಿಶ್ವನಾಥನ ಸನ್ನಿಧಿಯು ಒಂದು. ಎಲ್ಲರೂ ತಮ್ಮ ಜೀವನ ಪಾಪಗಳನ್ನೆಲ್ಲ ಕಳೆಯಲು, ನೆಮ್ಮದಿಯನ್ನರಸಿ ಹೋಗುವ ಸ್ಥಳವದು. ಅಲ್ಲಿ ಸಾಕ್ಷಾತ್ ಶಿವನಿದ್ದಾನೆ ಎಂಬ ನಂಬಿಕೆಯಿದೆ. ಪುರಾತನ ಈ ದೇಗುಲ 1780ರಲ್ಲಿ ರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರಿಂದ ಪುನರ್ನಿರ್ಮಾಣವಾಯಿತು. ಇದು ಪ್ರಸಿದ್ಧ ಜ್ಯೋತಿರ್ಲಿಂಗಗಳಲ್ಲಿ ಒಂದು. ಪೌರಾಣಿಕ ಚಿತ್ರಗಳನ್ನು ಬಿಂಬಿಸುವ ಶಿಲ್ಪ ಕೆತ್ತನೆಗಳೊಂದಿಗೆ ಚಿನ್ನದ ಗೋಪುರವನ್ನು ಹೊಂದಿದೆ. ಇತ್ತೀಚಿಗೆ ಕಾಶಿ ಕಾರಿಡಾರ್ ಯೋಜನೆಯ ಮೂಲಕ ದೇಗುಲದ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಯಿಂದ ಗಂಗಾ ನದಿ ಮತ್ತು ದೇಗುಲಕ್ಕೆ ಸುಲಭ ಮಾರ್ಗ, ಜನಸಂದಣಿ ನಿಯಂತ್ರಿಸಲು ಹೆಚ್ಚಿನ ಸ್ಥಳಾವಕಾಶ ಕಲ್ಪಿಸಲಾಗಿದೆ.

ಕಾಶಿ

ಗಂಗಾ, ಭಾರತದ ಪವಿತ್ರ ಮತ್ತು ದೇವನದಿ. ಗಂಗಾ ಸ್ನಾನವು ಪುಣ್ಯ ಸ್ನಾನ ಎಂದು ನಂಬಲಾಗಿದೆ. ವಾರಾಣಸಿಯ ಗಂಗಾರತಿ ಪ್ರಸಿದ್ಧವಾಗಿದ್ದು, ಸೂರ್ಯೋದಯ-ಸೂರ್ಯಾಸ್ತ ಸಮಯಗಳಲ್ಲಿ ಗಂಗಾರತಿ ನಡೆಯುತ್ತದೆ. ಇದನ್ನು ಜನರು ನದಿ ದಂಡೆಯ ಮೆಟ್ಟಿಲು, ದೋಣಿಗಳು, ಬೋಟ್‌ಗಳಲ್ಲಿ ಕುಳಿತು ಕಣ್ತುಂಬಿಕೊಳ್ಳಬಹುದು. ನದಿಯಲ್ಲಿ ಸಾರ್ವಜನಿಕರಿಗೆ ಆರತಿ ಬಿಡಲು ಅವಕಾಶವಿದೆ. ಹಾಗೆಯೇ ದೋಣಿಗಳಲ್ಲಿ ಗಂಗಾ ನದಿಯುದ್ದಕ್ಕೂ ಸಾಗಬಹುದು. ಬೋಟ್ ಒಳಗೆ ಮಾರ್ಗದರ್ಶಿಗಳು ನದಿ ದಂಡೆಯ ಘಟ್ಟಗಳನ್ನು ತೋರಿಸಿ ವಿವರಿಸುತ್ತಾರೆ. ಅಲ್ಲಿನ ದೃಶ್ಯಗಳು ಮನೋಹರವಾಗಿದ್ದು, ಸಾವಿರಾರು ಜನರು ಭಾಗವಹಿಸುತ್ತಾರೆ.

kashi ghat

ಗಂಗಾ ತೀರದ ಮೆಟ್ಟಿಲುಗಳೇ ಘಾಟ್. ಒಟ್ಟು 84 ಘಾಟ್‌ಗಳಿವೆ! ದಶಾಶ್ವಮೇಧ ಘಾಟ್‌ನಲ್ಲಿ ಗಂಗಾರತಿ ವಿಜೃಂಭಣೆಯಿಂದ ಮಾಡಲಾಗುತ್ತದೆ. ಹರಿಶ್ಚಂದ್ರ ಘಾಟ್ ಮತ್ತು ಮಣಿಕರ್ಣಿಕ ಘಾಟ್‌ಗಳಲ್ಲಿ ಪ್ರತಿನಿತ್ಯ ಅಂದಾಜು 50ಕ್ಕಿಂತ ಹೆಚ್ಚು ಶವಗಳ ದಹನ ನಡೆಯುತ್ತದೆ! ಅಸ್ಸಿ ಘಾಟ್, ಅಸ್ಸಿ - ಗಂಗಾ ನದಿಗಳು ಸಂಗಮ ಹೊಂದುವುದರಿಂದ ಈ ಹೆಸರು ಪಡೆದಿದೆ. ಇದು ವಾರಾಣಸಿಯ ಅತ್ಯಂತ ದೊಡ್ಡ ಘಾಟ್. ಅತಿಹೆಚ್ಚು ಜನರು ಭೇಟಿ ನೀಡುವ ಸ್ಥಳ. ನಿತ್ಯ ವೇದೋಕ್ತಿ, ಆಧ್ಯಾತ್ಮಿಕ ಕಾರ್ಯಕ್ರಮಗಳು, ಯೋಗ, ಸಂಗೀತ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಇತ್ತೀಚಿಗೆ ಸೇರಲ್ಪಟ್ಟ 'ನಮೋ ಘಾಟ್' ನಮಸ್ಕಾರ ಮುದ್ರೆ ಹೊಂದಿದ್ದು 'ಅತಿಥಿ ದೇವೋಭವ' ಕಲ್ಪನೆಯನ್ನು ಸೂಚಿಸುತ್ತದೆ. ಎಲ್ಲ ಘಾಟ್‌ಗಳನ್ನೂ ಗಮನಿಸುತ್ತಾ ಬಂದರೆ ಅಲ್ಲಿನ ಆಚಾರ ವಿಚಾರಗಳು, ಸಂಸ್ಕೃತಿ, ಪರಂಪರೆ, ಪ್ರಸ್ತುತತೆ ಅರ್ಥವಾಗುತ್ತಾ ಹೋಗುವುದರೊಂದಿಗೆ ಅಲ್ಲಿನ ವಿಶಾಲ ಪ್ರಕೃತಿ ಸೌಂದರ್ಯ, ಪ್ರಶಾಂತತೆ, ಹರಿಯುವ ನೀರಿನ ಜುಳುಜುಳು ನಾದ, ಹುಟ್ಟು ಹಾಕುತ್ತಿರುವ ದೋಣಿಗಳು, ಸ್ವಚ್ಛಂದವಾಗಿ ಹಾರುವ ಹಕ್ಕಿಗಳು, ಸುಪ್ತವಾಗಿರುವ ಮೆಟ್ಟಿಲುಗಳು, ತಲೆಯೆತ್ತಿ ನೋಡುತ್ತಾ ನಿಂತಿರುವ ಗೋಪುರಗಳೆಲ್ಲವೂ ಅಲ್ಲೇ ನಿಂತು ನೋಡುತ್ತಲೇ ಇರಬೇಕೆನಿಸುವಂಥವು.

kashi2

ಕಾಶಿಯ ಗಲ್ಲಿಗಳು, ಕಿರಿದಾದ ದಾರಿ ಅಲ್ಲಲ್ಲಿ ಕವಲೊಡೆದು, ಜನರಿಂದ ಕಿಕ್ಕಿರಿದಿರುತ್ತವೆ. ಆ ಗಲ್ಲಿಗಳಿಗೆ ಅಂಟಿಕೊಂಡಿರುವ ದೇಗುಲ, ಅಂಗಡಿ, ಭಿತ್ತಿಚಿತ್ರಗಳನ್ನು ನೋಡುತ್ತಾ ಸಾಗುವುದೇ ಖುಷಿ. ಸದಾ ಜನರಿಂದ ತುಳುಕುತ್ತಿರುವ ಗಲ್ಲಿರಸ್ತೆಗಳಲ್ಲಿ ವಸ್ತುಪ್ರಪಂಚವನ್ನೇ ಕಾಣಬಹುದು. ಏಕೆಂದರೆ ಬೇರೆಡೆ ಸಿಗುವ ವಸ್ತುಗಳೆಲ್ಲ ಕಡಿಮೆ ದರದಲ್ಲಿ ಇಲ್ಲಿ ಲಭ್ಯವಾಗುತ್ತವೆ. ಅದರಲ್ಲಿಯೂ ಚೌಕಾಸಿ ಮಾಡಲು ಒಂದೊಳ್ಳೆ ಸ್ಥಳವೇ ಸರಿ.

ಕಾಶೀ ಸೀರೆ ಎಂದರೆ ಬಹು ಪ್ರಸಿದ್ಧಿ. ದೇಶ-ವಿದೇಶಗಳಿಂದಲೂ 'ಬನಾರಸ್ ಸೀರೆ' ಕೊಳ್ಳಲು ಜನರು ಮುಗಿಬೀಳುತ್ತಾರೆ. ಹೆಜ್ಜೆಹೆಜ್ಜೆಗೂ ಸೀರೆಯಂಗಡಿ ನಮ್ಮನ್ನು ಮೋಡಿ ಮಾಡುತ್ತವೆ. ಹಾಗೆ ಬಂದವರು ದುಬಾರಿ ಬೆಲೆಯಿಂದ ಹಿಡಿದು ಸಣ್ಣ ಬೆಲೆಯ ಸೀರೆಗಳನ್ನು ಚೌಕಾಸಿ ಮಾಡಿಯಾದರೂ ಸರಿ ಕೊಳ್ಳದೇ ಹೋಗುವುದಿಲ್ಲ.

kashi streat

ಕಣ್ಣೆದುರೇ ತಯಾರಾಗುವ ಬನಾರಸ್ ಜಿಲೇಬಿ ತಿನ್ನದೇ ಹೋಗಲು ಸಾಧ್ಯವೇ ಇಲ್ಲ. ಸಿಹಿತಿಂಡಿಗಳಲ್ಲಿ ಪೇಡಾ, ಮೋತಿಚೂರ್, ತೆಂಗಿನಕಾಯಿ ಲಡ್ಡು, ಬರ್ಫಿ, ಮಲೈಯೊ, ರಸಗುಲ್ಲಾ ಕೂಡ ಇಲ್ಲಿ ಹೆಸರು ಮಾಡಿವೆ. 'ಕಾಶಿ ಚಾಟ್ಸ್ ಭಂಡಾರಗಳಲ್ಲಿ ಆಲೂ ಟಿಕ್ಕಿ, ಟಮಾಟರ್ ಚಾಟ್ಸ್, ಗೋಲ್ ಗಪ್ಪ, ಸಮೋಸ, ರಾಜ್ ಕಚೋರಿ, ದಹಿ ವಡಾ ಇನ್ನೂ ಹಲವಾರು ಹೆಸರಂತ ಚಾಟ್ಸ್ ಅಲ್ಲಿ ಸವಿಯಲೇಬೇಕು. ಲಸ್ಸಿಗೂ ಇಲ್ಲಿ ಭಾರೀ ಬೇಡಿಕೆಯಿದೆ. 'ಬ್ಲ್ಯೂ ಲಸ್ಸಿ ಶಾಪ್', 'ಪಹಲ್ವಾನ್ ಲಸ್ಸಿ ಶಾಪ್'ಗಳು ಇಲ್ಲಿ ಫೇಮಸ್‌. ಮಣ್ಣಿನ ಮಡಕೆಯಲ್ಲಿ ಕೆನೆಭರಿತ ಮೊಸರಿಗೆ ಡ್ರೈ ಫ್ರೂಟ್ಸ್‌ಗಳಿಂದ ಅಲಂಕಾರಗೊಂಡ ಸಾಂಪ್ರದಾಯಿಕ ಲಸ್ಸಿಯನ್ನು ನಮ್ಮೆದುರುಗಡೆಯೇ ತಯಾರಿಸುತ್ತಾರೆ. ಹಾಗಾಗಿ ಅದರ ಗುಣಮಟ್ಟ, ವೈವಿಧ್ಯ ಎಲ್ಲವೂ ಸವಿಯುವಂತೆ ಮಾಡುತ್ತದೆ.

ವಾಹನಗಳ ಹಾರ್ನ್ ಸದ್ದು ಕಿವಿ ತೂತು ಮಾಡುವಂತಿರುತ್ತದೆ. ರಸ್ತೆಗಳಲ್ಲಿ ಸೈಕಲ್ ರಿಕ್ಷಾಗಳು, ಟುಕ್ ಟುಕ್ ಗಾಡಿ, ವಿದ್ಯುತ್ಚಾಲಿತ ಆಟೋಗಳು, ಬೈಕುಗಳೆಲ್ಲವೂ ಹಾರ್ನ್‌ಗಳ ಮೂಲಕವೇ ಹೋಗುವುದು. ಎಷ್ಟೇ ಜನಸಂದಣಿ, ವಾಹನಗಳು ಹಿಂದೆ ಮುಂದಿರಲಿ, ಒಂದಕ್ಕೊಂದು ಪರಸ್ಪರ ತಾಕದಂತೆ ವೇಗವಾಗಿಯೇ, ಅಲ್ಪ ಸ್ವಲ್ಪ ಜಾಗವಿದ್ದರೂ ಬಿಡದೆ ನುಗ್ಗಿಸಿ, ನಾಜೂಕಾಗಿ ಗಾಡಿ ಓಡಿಸುವ ದೃಶ್ಯಗಳೂ ಕಾಶಿ ಬಿಟ್ಟರೆ ಬೇರೆಲ್ಲೂ ಬಹುಶಃ ಇರಲಿಕ್ಕಿಲ್ಲ!

ಆ ಗಲ್ಲಿಗಳಲ್ಲಿ ನಾವು ಹೋಗುತ್ತಿರುವ ದಾರಿಯೇ ಪುನಃ ತಿರುಗಿ ಬರಲು ಸಿಗಬಹುದೆಂದು ಖಚಿತವಾಗಿರುವುದಿಲ್ಲ. ಅಷ್ಟೂ ಗೊಂದಲಮಯ ದಾರಿಗಳು! ಇನ್ನೊಂದು ವಿಶೇಷ ಅನುಭವ ನೀಡುವಂಥದ್ದು ನಮ್ಮ ಮನಸಿಗೆ ನೋವು-ನಲಿವು ಎರಡೂ ಒಂದೇ ಕ್ಷಣಕ್ಕೆ ಅನುಭವವಾಗುವಂಥ ಸ್ಥಳವಿದು. ಏಕೆಂದರೆ ಗಲ್ಲಿಗಳಲ್ಲಿ ವಸ್ತುಗಳನ್ನು ಖರೀದಿಸಿ ಸುತ್ತಾಡಿದ ಆನಂದದ ಜತೆಗೆ ಕಣ್ಣೆದುರೇ ಹೊತ್ತೊಯ್ಯುವ ಚಟ್ಟ ಕಟ್ಟಿ ಮಲಗಿಸಿದ ಹೆಣ, ಅವರ ಹಿಂದೆ ಸಾಗುವ ಹಲವು ಮಂದಿ ಹೇಳುವ 'ರಾಮ್ ನಾಮ ಸತ್ಯ ಹೇ, ರಾಮ್ ನಾಮ ನಿತ್ಯ ಹೇ' ಸ್ಮರಣೆಯಂತೂ ಒಮ್ಮೆಗೇ ಬದುಕಿನ ಹುಟ್ಟು ಸಾವಿನ ಚಕ್ರವನ್ನು ತೋರಿಸಿಬಿಡುತ್ತದೆ. ಆ ಕ್ಷಣಕ್ಕೆ ಮೈಮನ ಮರೆಯುವಂತಾಗಿ ಬದುಕು ನಶ್ವರ ಎಂದು ತೋರಿಸಿಬಿಡುತ್ತದೆ. ಇವೆಲ್ಲಾ ಇಲ್ಲಿನ ಜನಜೀವನದ ನಿತ್ಯ ಚಟುವಟಿಕೆ ಮಾತ್ರವಲ್ಲದೆ ಅವರ ಸೂಕ್ಷ್ಮರೂಪವನ್ನು ತೋರಿಸಿಬಿಡುತ್ತದೆ. ಆದರೆ ಈ ಕಾಶಿ ನಗರಿ ನಮ್ಮನ್ನು ಮತ್ತೆ ಮತ್ತೆ ಹೋಗಿ ನೋಡಬೇಕೆಂದೆನಿಸುವಷ್ಟು ಆಪ್ತವಾಗಿಬಿಡುವುದಂತೂ ನಿಜ. ಕಾಶಿಯನ್ನು ಭೇಟಿ ಮಾಡುವ ಅವಕಾಶ ಸಿಕ್ಕರೆ ಖಂಡಿತಾ ಹೋಗದೆ ಇರಬೇಡಿ...

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ