ನೆಲ್ಲಿತೀರ್ಥದ ಗುಹೆಯೊಳಗೆ ಸ್ವಯಂಭೂ ಸೋಮನಾಥ
ನೆಲ್ಲಿತೀರ್ಥ ಗುಹೆಯು ಪ್ರಾಕೃತಿಕವಾಗಿ ನಿರ್ಮಾಣವಾಗಿದೆ. ಹಾಗಾಗಿ ಇದು ನಿಸರ್ಗ ಪ್ರೇಮಿಗಳ ನೆಚ್ಚಿನ ಧಾರ್ಮಿಕ ಶ್ರದ್ಧಾ ಭಕ್ತಿಯ ತಾಣವಾಗಿದೆ. ಈ ಗುಹೆಯ ಒಳಭಾಗ ಸಂಪೂರ್ಣ ಕತ್ತಲಿನಿಂದ ಆವೃತವಾಗಿರುತ್ತದೆ. ಹಾಗಾಗಿ ಭಕ್ತರು ಒಳ ಪ್ರವೇಶಿಸಲು ಅನುವಾಗುವಂತೆ ಅಲ್ಲಲ್ಲಿ ತೈಲದ ‘ದೊಂದಿ’ಗಳನ್ನು ಹಚ್ಚಿಡುತ್ತಾರೆ. ಗುಹೆಯ ಪ್ರವೇಶ ದ್ವಾರವು ಬಹಳಷ್ಟು ವಿಶಾಲವಾಗಿದೆ. ಆದರೆ, ಒಳಗೆ ಸಾಗುತ್ತಿದ್ದಂತೆ ಗುಹೆಯು ಅತ್ಯಂತ ಕಿರಿದಾಗುತ್ತಾ ಸಾಗುತ್ತದೆ.
- ಸಂತೋಷ್ ರಾವ್ ಪೆರ್ಮುಡ
ದಕ್ಷಿಣ ಕನ್ನಡ ಜಿಲ್ಲೆಯನ್ನು ವೈಶಿಷ್ಟ್ಯಪೂರ್ಣ ದೇವಾಲಯಗಳ ಜಿಲ್ಲೆಯೆಂದರೆ ತಪ್ಪಾಗದು. ಏಕೆಂದರೆ ಇಲ್ಲಿನ ದೇವಾಲಯಗಳು ಅಷ್ಟು ವೈವಿಧ್ಯಮಯ ತಾಣಗಳಲ್ಲಿ ನೆಲೆಯಾಗಿವೆ. ಅಂಥ ಸಾಲಿನಲ್ಲಿ ಮಂಗಳೂರು ತಾಲೂಕಿನ ಬಡಗ ಎಕ್ಕಾರು ಗ್ರಾಮದ ‘ನೆಲ್ಲಿತೀರ್ಥ’ ಸೋಮನಾಥೇಶ್ವರ ಗುಹಾ ದೇವಾಲಯವೂ ಒಂದು. ಈ ದೇವಾಲಯ ಗುಹೆಯೊಳಗೆ ನಿರ್ಮಾಣಗೊಂಡಿದೆ. ಈ ಗುಹದೇವಾಲಯ ಸಾವಿರಾರು ವರ್ಷಗಳಷ್ಟು ಪುರಾತನವಾದುದು ಎಂಬುದು ಇಲ್ಲಿನ ಸ್ಥಳ ಪುರಾಣದ ಮೂಲಕ ತಿಳಿದುಬರುತ್ತದೆ.
ನಾಮ ಕಾರಣ
ಈ ನೆಲ್ಲಿತೀರ್ಥ ಗುಹಾಲಯವು ಪ್ರತಿವರ್ಷದ ತುಲಾ ಸಂಕ್ರಮಣದಂದು ತೆರೆದುಕೊಂಡು ಮೇಷ ಸಂಕ್ರಮಣದಂದು ಸಕಲ ವಿಧಿ ವಿಧಾನಗಳೊಂದಿಗೆ ಮುಚ್ಚಿಕೊಳ್ಳುತ್ತದೆ. ಈ ಗುಹೆಯ ಒಳಗೆ ಒಂದು ಶಿವಲಿಂಗವಿದೆ. ಅದರ ಮೇಲೆ ಗುಹೆಯ ಮೇಲ್ಭಾಗದಲ್ಲಿನ ಕಲ್ಲುಗಳ ಸಂದಿಯಿಂದ ಅಂತರಗಂಗೆ ನೆಲ್ಲಿಕಾಯಿ ಗಾತ್ರದಲ್ಲಿ ಹನಿ ಹನಿಯಾಗಿ ತೊಟ್ಟಿಕ್ಕುತ್ತಿದೆ. ಹಾಗಾಗಿ ಈ ಕ್ಷೇತ್ರಕ್ಕೆ ‘ನೆಲ್ಲಿತೀರ್ಥ’ವೆಂಬ ಹೆಸರು ಬಂದಿದೆ.
ಇದನ್ನೂ ಓದಿ: ಬಂಡೀಪುರದಲ್ಲಿ ಚಿರತೆಯ ತೀಕ್ಷ್ಣ ನೋಟ
ಕಟೀಲು ದುರ್ಗಾ ಪರಮೇಶ್ವರಿ
ನೆಲ್ಲಿತೀರ್ಥದಲ್ಲಿ ಜಾಬಾಲಿ ಮುನಿಗಳು ತಪಸ್ಸನ್ನು ಆಚರಿಸುತ್ತಿದ್ದರು. ಅವರ ತಪಸ್ಸಿಗೆ ಮೆಚ್ಚಿದ ದುರ್ಗಾ ಮಾತೆಯು ಪ್ರತ್ಯಕ್ಷಳಾಗಿ ‘ಅರುಣಾಸುರ’ನೆಂಬ ರಾಕ್ಷಸನನ್ನು ಸಂಹಾರ ಮಾಡುವ ಅಭಯವನ್ನು ನೀಡುತ್ತಾಳೆ. ಅದರಂತೆ ದುರ್ಗಾಮಾತೆಯು ‘ದುಂಬಿ’ಯ ರೂಪವನ್ನು ತಾಳಿ ಅಲ್ಲೇ ಸಮೀಪದಲ್ಲಿ ಹರಿಯುತ್ತಿರುವ ‘ನಂದಿನಿ’ ನದಿಯ ತಟದಲ್ಲಿ ಅರುಣಾಸುರನನ್ನು ಸಂಹಾರ ಮಾಡಿದರು. ನಂತರ ಅದೇ ಸ್ಥಳದಲ್ಲಿ ನೆಲೆನಿಂತರು. ಈ ಕ್ಷೇತ್ರವೇ ‘ಶ್ರೀ ಕ್ಷೇತ್ರ ಕಟೀಲು’ ಎಂದು ಪ್ರಸಿದ್ದವಾಗಿದೆ. ಈ ಕ್ಷೇತ್ರವು ನೆಲ್ಲಿತೀರ್ಥ ಗುಹಾ ದೇವಾಲಯದಿಂದ ಅನತಿ ದೂರದಲ್ಲೇ ಇದೆ.
ಹುಟ್ಟಿನಿಂದ ಸಾವಿನವರೆಗೆ 18 ಅವಸ್ಥೆಗಳನ್ನು ಅರ್ಥೈಸುವ ಗುಹೆ
ನೆಲ್ಲಿತೀರ್ಥ ಗುಹೆಯು ಪ್ರಾಕೃತಿಕವಾಗಿ ನಿರ್ಮಾಣವಾಗಿದೆ. ಹಾಗಾಗಿ ಇದು ನಿಸರ್ಗ ಪ್ರೇಮಿಗಳ ನೆಚ್ಚಿನ ಧಾರ್ಮಿಕ ಶ್ರದ್ಧಾ ಭಕ್ತಿಯ ತಾಣವಾಗಿದೆ. ಈ ಗುಹೆಯ ಒಳಭಾಗ ಸಂಪೂರ್ಣ ಕತ್ತಲಿನಿಂದ ಆವೃತವಾಗಿರುತ್ತದೆ. ಹಾಗಾಗಿ ಭಕ್ತರು ಒಳ ಪ್ರವೇಶಿಸಲು ಅನುವಾಗುವಂತೆ ಅಲ್ಲಲ್ಲಿ ತೈಲದ ‘ದೊಂದಿ’ಗಳನ್ನು ಹಚ್ಚಿಡುತ್ತಾರೆ. ಗುಹೆಯ ಪ್ರವೇಶ ದ್ವಾರವು ಬಹಳಷ್ಟು ವಿಶಾಲವಾಗಿದೆ. ಆದರೆ, ಒಳಗೆ ಸಾಗುತ್ತಿದ್ದಂತೆ ಗುಹೆಯು ಅತ್ಯಂತ ಕಿರಿದಾಗುತ್ತಾ ಸಾಗುತ್ತದೆ. ಅಲ್ಲಿನ ಗಾಢ ಕತ್ತಲು ಮತ್ತು ಬಾವಲಿಗಳ ಹಾರಾಟದ ಸದ್ದಿನಿಂದ ಭಕ್ತರು ಹೆದರುವುದೂ ಸಹಜ. ಒಳಗೆ ಸಾಗುವ ದಾರಿಯು ಮನುಷ್ಯನ ಜೀವನದ ಹುಟ್ಟಿನಿಂದ ಸಾವಿನವರೆಗಿನ ಸುಮಾರು ‘ಹದಿನೆಂಟು ಅವಸ್ಥೆ’ಗಳನ್ನು ನೆನಪಿಸುತ್ತದೆ. ಕೆಲವೆಡೆ ಬಾಗಿಕೊಂಡು ಸಾಗಿದರೆ, ಕೆಲವೆಡೆ ಮೊಣಕಾಲಿನಿಂದ ತೆವಳಿಕೊಂಡೇ ಸಾಗಬೇಕಾದಷ್ಟು ಕಠಿಣವಾಗಿದೆ ಎನ್ನಬಹುದು. ಗುಹೆಯು ಸಂಪೂರ್ಣವಾಗಿ ತೆವದಿಂದ ಕೂಡಿದ್ದು, ಇಲ್ಲಿ ಅತ್ಯಂತ ತಂಪಾದ ವಾತಾವರಣವಿದೆ. ಗುಹೆಯ ಒಳ ಭಾಗದಲ್ಲಿ ಸುಮಾರು 15-20 ಅಡಿ ವಿಸ್ತಾರವಾದ ಪ್ರದೇಶವಿದ್ದು, ಅಲ್ಲೇ ಎತ್ತರದ ಪ್ರದೇಶದಲ್ಲಿ ವಿಶಿಷ್ಟವಾದ ‘ಸ್ವಯಂಭೂ ಲಿಂಗವಿದೆ’. ಅದರ ದರ್ಶನಕ್ಕೆ ಬರುವ ಭಕ್ತರು ನಿಲ್ಲುವ ಜಾಗವಿದೆ. ಅಲ್ಲೆ ಗುಹೆಯ ಮೇಲ್ಭಾಗದಿಂದ ತೊಟ್ಟಿಕ್ಕುವ ಅಂತರಗಂಗೆ ಶೇಖರಣೆಯಾಗಿದ್ದು, ಈ ನೀರಿನಿಂದ ಭಕ್ತರು ಶಿವಲಿಂಗಕ್ಕೆ ಅಭಿಷೇಕವನ್ನು ಮಾಡಿ ಪುನೀತರಾಗುತ್ತಾರೆ, ಭಕ್ತಿ ಹಾಗೂ ಧನ್ಯತಾ ಭಾವದಲ್ಲಿ ಮಿಂದೇಳುತ್ತಾರೆ ಎಂದು ಇಲ್ಲಿನ ಮೊಕ್ತೇಸರರಾದ ಶ್ರೀ ಸುಬ್ರಾಯ ಭಟ್ ಹೇಳುತ್ತಾರೆ.

ಇಲ್ಲಿನ ಮೃತ್ತಿಕೆಯೇ ಔಷಧ
ಈ ಗುಹದೇವಾಲಯದ ಒಳಗಿನ ಮಣ್ಣಿನಲ್ಲಿ ಔಷಧೀಯ ಗುಣವಿದ್ದು, ಭಕ್ತರು ಇಲ್ಲಿನ ಮಣ್ಣನ್ನೇ ಪ್ರಸಾದವಾಗಿ ಮೈಯೆಲ್ಲಾ ಲೇಪಿಸಿಕೊಂಡು ಹೊರಬರುತ್ತಾರೆ. ಇದರಿಂದ ಚರ್ಮ ಸಂಬಂಧಿತ ವ್ಯಾಧಿಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ. ಈ ಗುಹೆಯನ್ನು ಪ್ರವೇಶಿಸುವ ಮೊದಲು ದೇವಾಲಯದ ಸಮೀಪದಲ್ಲೇ ಇರುವ ನೈಸರ್ಗಿಕವಾದ ‘ನಾಗಪ್ಪನ ಕೆರೆ’ಯಿದೆ. ಭಕ್ತರು ಇಲ್ಲಿ ಸ್ನಾನವನ್ನು ಮಾಡಿಯೇ ಗುಹೆಯೊಳಗೆ ಸಾಗುತ್ತಾರೆ.
ವರ್ಷದ ಆರು ತಿಂಗಳುಗಳ ಕಾಲ ಸಂಪೂರ್ಣ ಗುಹದೇವಾಲಯ ಮುಚ್ಚಿರುವುದರಿಂದ ಈ ಅವಧಿಯಲ್ಲಿ ಯಾವುದೇ ಪೂಜೆಗಳು ಶಿವಲಿಂಗಕ್ಕೆ ನಡೆಯುವುದಿಲ್ಲ. ಈ ಅವಧಿಯಲ್ಲಿ ಗುಹೆಯೊಳಗೆ ದೇವಾನುದೇವತೆಗಳು ಹಾಗೂ ಋಷಿಗಳು ಶಿವನ ದರ್ಶನವನ್ನು ಪಡೆಯುತ್ತಾರೆ ಎನ್ನುವ ಪ್ರತೀತಿ ಇಲ್ಲಿದೆ. ಸೋಮನಾಥೇಶ್ವರ ಈ ದೇವಾಲಯದ ಮುಖ್ಯ ದೇವರು. ಪಕ್ಕದಲ್ಲಿ ‘ಮಹಾಗಣಪತಿ’ ಮತ್ತು ‘ಜಾಬಾಲಿ ಮಹರ್ಷಿ’ಯ ಗುಡಿಗಳು ಇದರ ಜತೆಗೆ ದೇವಾಲಯದ ಪಕ್ಕದಲ್ಲೇ ಪಿಲಿಚಾಮುಂಡಿ, ರಕ್ತೇಶ್ವರಿ, ಧೂಮಾವತಿ ಮತ್ತು ಕ್ಷೇತ್ರಪಾಲ ದೈವಗಳ ಆಲಯವಿದೆ. ಈ ದೇವಾಲಯದ ಆಡಳಿತವನ್ನು ತುಳುನಾಡಿನ ಪ್ರಮುಖ ಮನೆತನಗಳಲ್ಲೊಂದಾದ ‘ಚೌಟ’ ಮನೆತನ ನೋಡಿಕೊಳ್ಳುತ್ತಿದೆ.
ದಾರಿ ಹೇಗೆ?
ನೆಲ್ಲಿತೀರ್ಥವು ಬಜ್ಪೆ ವಿಮಾನ ನಿಲ್ದಾಣಕ್ಕೆ ಅತ್ಯಂತ ಸನಿಹದಲ್ಲಿದೆ. ಮಂಗಳೂರಿನಿಂದ ಮೂಡುಬಿದರೆ ಮಾರ್ಗವಾಗಿ ಹೊರಟು ಎಡಪದವು ತಲುಪಿ, ಅಲ್ಲಿಂದ ಸುಮಾರು 8 ಕಿಮೀ ಪ್ರಯಾಣ ಮಾಡಿದರೆ ಈ ದೇವಾಲಯವನ್ನು ತಲುಪಬಹುದು.