ಗೋದಾವರಿಯ ಸುತ್ತಲಿನ ಗಿರಿದಾರಿಯಲ್ಲಿ
ಎತ್ತರದ ʻಪುಟ್ಟಕೊಂಡʼ ಎನ್ನುವ ಬೆಟ್ಟದ ಮೇಲಿನ ಈ ದೇವಾಲಯದ ಸುತ್ತ ಸುಂದರ ಹಸಿರಿನ ಪರಿಸರವಿದೆ. ದೇವರ ದರ್ಶನಕ್ಕೆ 140-150 ಮೆಟ್ಟಿಲುಗಳನ್ನಾದರೂ ಹತ್ತಬೇಕು. ಇಲ್ಲಿ 9 ಅಡಿ ಎತ್ತರದ ಉಗ್ರ ನರಸಿಂಹನ ಮೂರ್ತಿಯ ಭುಜದಿಂದ ಕೆಳಭಾಗ ಮನುಷ್ಯ ರೂಪದಲ್ಲಿದ್ದು, ಎದೆಯ ಭಾಗ ಮುಟ್ಟಿದರೆ ಮನುಷ್ಯ ದೇಹದಂತೆ ಒಳಗೆ ಹೋಗುತ್ತದೆ. ಮುಟ್ಟಿದ ಜಾಗದಲ್ಲಿ ಗುರುತು ಮೂಡುತ್ತದೆ. ಅಲ್ಲದೆ ಹೊಕ್ಕುಳಿನಿಂದ ನೀರು ಬರುತ್ತಿದ್ದು, ಇದಕ್ಕೆ ʻಚಿಂತಾಮಣಿ ಜಲಧಾರೆʼ ಎಂದೂ ಕರೆಯುತ್ತಾರೆ. ಇದನ್ನು ತೀರ್ಥವಾಗಿ ಭಕ್ತಾದಿಗಳಿಗೆ ಕೊಡುತ್ತಾರೆ. ಚಂದನದ ಪರಿಮಳದ ಈ ನೀರಿಗೆ ರೋಗ ರುಜಿನ ಮತ್ತು ಪಾಪ ಕಳೆಯುವ ಶಕ್ತಿ ಇದೆ ಎಂದು ನಂಬಲಾಗಿದೆ.
-ಗೀತಾ ಕುಂದಾಪುರ
ನಮಗೆ ಗೋದಾವರಿ ಹತ್ತಿರವಾಗಿದ್ದು ಯಂಡಮೂರಿ ವೀರೇಂದ್ರನಾಥ್‌ರ ಕಾದಂಬರಿಯಿಂದಾಗಿ. ಅವರ ಕಾದಂಬರಿಯಲ್ಲಿ ಗೋದಾವರಿ ಮನ ತುಂಬಿ ಹರಿದಿದ್ದಳು. ಭಾರತದ ಎರಡನೆಯ ಅತಿ ದೊಡ್ಡ ಈ ನದಿ ಹುಟ್ಟುವುದು ಮಹಾರಾಷ್ಟ್ರದಲ್ಲಿ. ಕೃಷಿ ಪ್ರಧಾನ ತೆಲಂಗಾಣಕ್ಕಂತೂ ಇದು ಜೀವನದಿ. ಅಲ್ಲಿನ ದೇವಾಲಯಗಳೂ ಗೋದಾವರಿಯ ದಡದಲ್ಲಿದೆ. ಹಾಗಾಗಿ ಗೋದಾವರಿ ತೀರವೆಂದರೆ ಪ್ರಕೃತಿ ಮತ್ತು ಪ್ರಾರ್ಥನೆಯ ಸಂಗಮ ಎನ್ನಬಹುದು. ಇತ್ತೀಚೆಗೆ ಗೋದಾವರಿ ತೀರದ ಭದ್ರಾಚಲಂಗೆ ಪ್ರವಾಸ ಹೋಗಿದ್ದೆವು.
ಭಕ್ತಿ, ಪ್ರಾರ್ಥನೆ, ಸಂಗೀತದ ಸುಗಂಧವಿರುವ ಭದ್ರಾಚಲಂ ಸುತ್ತುತ್ತ ಈ ಪುಣ್ಯ ಭೂಮಿಯ ಭಾಗವಾದೆವು. ಈ ಪ್ರವಾಸದಲ್ಲಿ ನಾವು ನೋಡಿದ್ದು ಇಷ್ಟು.
ಶ್ರೀ ಸೀತಾ ರಾಮಚಂದ್ರ ಸ್ವಾಮಿ ದೇವಸ್ಥಾನ

ಗೋದಾವರಿ ನದಿಯ ತೀರದಲ್ಲಿನ ಈ ದೇವಾಲಯ ʻದಕ್ಷಿಣ ಅಯೋಧ್ಯʼ ಎಂದೇ ಪ್ರಸಿದ್ಧಿ ಪಡೆದಿದೆ. ದಂಡಕಾರಣ್ಯದ ಭಾಗವಾದ ಈ ಜಾಗ ಒಂದು ಕಾಲದಲ್ಲಿ ಶ್ರೀರಾಮಚಂದ್ರ ಸೀತೆ ಮತ್ತು ಲಕ್ಷ್ಮಣನೊಂದಿಗೆ ವನವಾಸದಲ್ಲಿದ್ದಾಗ ಇಲ್ಲಿ ಸಾಕಷ್ಟು ಸಮಯ ಕಳೆದಿದ್ದನಂತೆ. ಇದೇ ಹಿನ್ನೆಲೆಯಿಂದ ಈ ಪ್ರದೇಶ ದಕ್ಷಿಣ ಭಾರತದಲ್ಲೇ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಪ್ರತಿದಿನ ಸಾವಿರಾರು ಭಕ್ತರು ಇಲ್ಲಿಗೆ ಬರುತ್ತಾರೆ.
ಪೌರಾಣಿಕ ಹಿನ್ನೆಲೆ
ಪ್ರಭು ಶ್ರೀರಾಮಚಂದ್ರ ವನವಾಸದಲ್ಲಿದ್ದಾಗ ಅವನ ಕೈಗೆ ತಾಗಿದ ಕಲ್ಲೊಂದು ಮನುಷ್ಯನಾಯಿತು. ಮುಂದೆ ಅವನು ʻಭದ್ರʼನೆಂದು ಕರೆಯಲ್ಪಟ್ಟ. ಅವನು ರಾಮಚಂದ್ರನ ಭಕ್ತನಾದ. ರಾಮಚಂದ್ರನನ್ನು ಮತ್ತೊಮ್ಮೆ ನೋಡಲು ಬಯಸಿ ಗೋದಾವರಿ ತೀರದಲ್ಲಿ ರಾಮನಾಮ ಜಪಿಸುತ್ತಾ ಕುಳಿತ. ಆದರೆ, ರಾಮನಿಗೆ ಮತ್ತೆ ಭದ್ರನನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಭಕ್ತೆಗೆ ಮೆಚ್ಚಿ ವಿಷ್ಣುವೇ ರಾಮನ ಅವತಾರದಲ್ಲಿ ದರ್ಶನ ನೀಡಿದ. ಆಗ ವಿಷ್ಣುವು ರಾಮನಾಗಿ ದರ್ಶನ ನೀಡಿದರೂ 4 ಕೈಗಳಿತ್ತು. ಹಾಗಾಗಿ ದೇವಾಲಯದ ಗರ್ಭಗುಡಿಯಲ್ಲಿನ ಮೂರ್ತಿಯಲ್ಲಿ ರಾಮನಿಗೆ ನಾಲ್ಕು ಕೈಗಳಿವೆ. ಮೇಲಿನ ಕೈಗಳಲ್ಲಿ ಶಂಖ, ಚಕ್ರ ಮತ್ತು ಕೆಳಗಿನ ಕೈಗಳಲ್ಲಿ ಬಿಲ್ಲು-ಬಾಣಗಳಿವೆ. ಸೀತೆಯೂ ಲಕ್ಷ್ಮಿಯಂತೆ ರಾಮನ ತೊಡೆಯ ಮೇಲೆ ಕುಳಿತಿದ್ದಾಳೆ. ಪಕ್ಕದಲ್ಲಿ ಲಕ್ಷ್ಮಣ ನಿಂತಿದ್ದಾನೆ. ದೇವಾಲಯದ ನಕ್ಷೆನ್ನು ಭದ್ರನಿಗೆ ಹೋಲಿಸಲಾಗಿದೆ. ಗರ್ಭಗುಡಿ ಭದ್ರನ ಹೃದಯವಾದರೆ ಗೋಪುರ ಅವನ ಕಾಲಿನ ಭಾಗ ಎನ್ನುತ್ತಾರೆ. ಈ ವಿಷಯಗಳೇ ಕೌತುಕದವು.
ದೇವಾಲಯದ ಮುಂದಿನ ಭಾಗದಲ್ಲಿ ಸುಮಾರು 50-60 ಮೆಟ್ಟಿಲುಗಳಿವೆ. ಪಕ್ಕದಲ್ಲಿ ವಾಹನಗಳಿಗೆ ದಾರಿಯೂ ಇದೆ. ದೇವಾಲಯದ ಮುಂಬಾಗದಲ್ಲಿ ಧ್ವಜಸ್ತಂಭವಿದೆ. ರಂಗನಾಥನ ಗುಡಿಯಿದೆ. ಇಲ್ಲಿ ಒರಗಿಕೊಂಡಿರುವ ವಿಷ್ಣುವಿನ ಮೂರ್ತಿಯಿದೆ. ಎದುರಿಗೆ ಲಕ್ಷ್ಮಿಯ ಗುಡಿಯಿದೆ.
ಐತಿಹಾಸಿಕ ಹಿನ್ನೆಲೆ
17ನೆಯ ಶತಮಾನದಲ್ಲಿ ಗೋಲ್ಕೊಂಡಾ ನಿಜಾಮ ತನಹ್‌ಶಾ ರಾಜ್ಯದಲ್ಲಿ ಗೋಪಣ್ಣ ಎನ್ನುವವನು ತಹಶಿಲ್ದಾರನಾಗಿದ್ದ. ಅವನು ಶ್ರೀರಾಮನ ಭಕ್ತ, ಭದ್ರಾಚಲಂನಲ್ಲಿ ಇರುವ ದೇವಾಲಯದ ಪುನರುತ್ಥಾನದ ಕಾರ್ಯಕ್ಕೆ ರಾಜ್ಯದ ಬೊಕ್ಕಸದ ಹಣವನ್ನು ರಾಜನ ಅನುಮತಿ ಪಡೆಯದೇ ವಿನಿಯೋಗಿಸಿದ ಎನ್ನಲಾಗಿದೆ. ಹಾಗೆಯೇ ದೇವರ ಮೂರ್ತಿಗೆ ಸಾಕಷ್ಟು ಚಿನ್ನ ಮತ್ತು ಆಭರಣದ ಅಲಂಕಾರವನ್ನೂ ಮಾಡಿಸಿದ. ಇದು ತೀವ್ರ ಆಕ್ಷೇಪಕ್ಕೆ ಒಳಗಾಗಿ ನಿಜಾಮ ತನಹ್‌ಶಾ ಗೋಪಣ್ಣನನ್ನು ಸೆರೆಯಲ್ಲಿಟ್ಟ. ಗೋಪಣ್ಣ 12 ವರ್ಷಗಳ ಕಾಲ ಸೆರೆಯಲ್ಲಿ ಕಳೆದ. ಮುಂದೊಂದು ದಿನ ನಿಜಾಮನ ಕನಸಿನಲ್ಲಿ ರಾಮ, ಲಕ್ಷ್ಮಣರು ಬಂದು ಗೋಪಣ್ಣ ಉಪಯೋಗಿಸಿದ ಚಿನ್ನವನ್ನು ಹಿಂತಿರುಗಿಸಿದಾಗ ನಿಜಾಮ ಪರಿವರ್ತನೆಗೊಂಡ ಎನ್ನುತ್ತಾರೆ. ಗೋಪಣ್ಣನನ್ನು ಬಿಡುಗಡೆ ಮಾಡಿದ ನಿಜಾಮ, ದೇವಾಲಯದಲ್ಲಿ ಪ್ರತಿವರ್ಷ ನಡೆಯುವ ಕಲ್ಯಾಣೋತ್ಸವಕ್ಕೆ ಮುತ್ತು, ಹವಳದ ಉಡುಗೊರೆಯನ್ನು ಕಳುಹಿಸಿದ. ಈ ಕ್ರಮ ಇಂದಿಗೂ ಮುಂದುವರಿಯುತ್ತಿದ್ದು, ಸರಕಾರವು ಆ ವಾಡಿಕೆಯನ್ನು ಪಾಲಿಸುತ್ತಿದೆ. ಗೋಪಣ್ಣ ಕವಿ ಮತ್ತು ಹಾಡುಗಾರ, ಜೈಲಿನಲ್ಲಿ ಇದ್ದುಕೊಂಡೇ ಗೋಪಣ್ಣ ಸಹಸ್ರಾರು ಹಾಡುಗಳನ್ನು ಬರೆದ, ಹಾಡಿದ, ಭಕ್ತ ರಾಮದಾಸನಾಗಿ ಬಹಳಷ್ಟು ಹೆಸರು ಮಾಡಿದ ಎನ್ನಲಾಗಿದೆ.
ಇಲ್ಲಿ ಪುಟ್ಟ ಮ್ಯೂಸಿಯಮ್ ಇದ್ದು, ಪ್ರವಾಸಿಗರು ಸಂದರ್ಶಿಸಬಹುದು. ಇಲ್ಲಿ ದೇವರ ಬೆಲೆಬಾಳುವ ಆಭರಣಗಳ ಪ್ರದರ್ಶನವಿದೆ.
ಮಲ್ಲೂರು ನರಸಿಂಹ ಸ್ವಾಮಿ ದೇವಾಲಯ

ಇದು ಭದ್ರಾಚಲಂನಿಂದ ಸುಮಾರು 80ಕಿಮೀ ದೂರದಲ್ಲಿ ವಾರಾಂಗಲ್ ಜಿಲ್ಲೆಯಲ್ಲಿದೆ. ಇದಕ್ಕೆ ಹೇಮಾಚಲ ನರಸಿಂಹ ಸ್ವಾಮಿ ದೇವಾಲಯ ಎನ್ನುವ ಹೆಸರೂ ಇದೆ. ಸುಮಾರು 1,500 ಅಡಿ ಎತ್ತರದ ʻಪುಟ್ಟಕೊಂಡʼ ಎನ್ನುವ ಬೆಟ್ಟದ ಮೇಲಿನ ಈ ದೇವಾಲಯದ ಸುತ್ತ ಸುಂದರ ಹಸುರಿನ ಪರಿಸರವಿದೆ. ದೇವರ ದರ್ಶನಕ್ಕೆ 140-150 ಮೆಟ್ಟಿಲುಗಳನ್ನಾದರೂ ಹತ್ತಬೇಕು. ಇಲ್ಲಿನ ವಿಶೇಷವೆಂದರೆ 9 ಅಡಿ ಎತ್ತರದ ಉಗ್ರ ನರಸಿಂಹನ ಮೂರ್ತಿಯ ಭುಜದಿಂದ ಕೆಳಭಾಗ ಮನುಷ್ಯ ರೂಪದಲ್ಲಿದ್ದು, ಎದೆಯ ಭಾಗ ಮುಟ್ಟಿದರೆ ಮನುಷ್ಯ ದೇಹದಂತೆ ಒಳಗೆ ಹೋಗುತ್ತದೆ. ಮುಟ್ಟಿದ ಜಾಗದಲ್ಲಿ ಗುರುತು ಮೂಡುತ್ತದೆ. ಅಲ್ಲದೆ ಹೊಕ್ಕುಳಿನಿಂದ ನೀರು ಬರುತ್ತಿದ್ದು, ಇದಕ್ಕೆ ʻಚಿಂತಾಮಣಿ ಜಲಧಾರೆʼ ಎಂದೂ ಕರೆಯುತ್ತಾರೆ, ಇದನ್ನು ತೀರ್ಥವಾಗಿ ಭಕ್ತಾದಿಗಳಿಗೆ ಕೊಡುತ್ತಾರೆ, ಚಂದನದ ಪರಿಮಳದ ಈ ನೀರಿಗೆ ರೋಗ ರುಜಿನ ಮತ್ತು ಪಾಪ ಕಳೆಯುವ ಶಕ್ತಿ ಇದೆ ಎಂದು ನಂಬಲಾಗಿದೆ. ದೇವಾಲಯದಲ್ಲಿ ಹೆಚ್ಚೇನೂ ಆಕರ್ಷಕ ಕೆತ್ತನೆಗಳಿಲ್ಲ. ವಿಷ್ಣುವಿನ ಪತ್ನಿ ಲಕ್ಷ್ಮಿಯನ್ನು ಆದಿಲಕ್ಷ್ಮಿ ಮತ್ತು ಚೆಂಚುಲಕ್ಷ್ಮಿ ಎಂದೂ ಪೂಜಿಸಾಲಗುತ್ತಿದೆ. ಅವರಿಗೆ ಪಕ್ಕದಲ್ಲೇ ಪ್ರತ್ಯೇಕ ಗುಡಿಯೂ ಇದೆ.
ಈ ಸ್ಥಳಕ್ಕೆ ಸುಮಾರು 4,772 ವರ್ಷಗಳ ಇತಿಹಾಸವಿದೆ. ಈ ಬೆಟ್ಟಕ್ಕೆ ಋಷಿ ಅಗಸ್ತ್ಯ ಹೇಮಾಚಲ ಪರ್ವತವೆಂದು ಕರೆದರು. ರಾವಣ ಈ ಜಾಗವನ್ನು ತನ್ನ ತಂಗಿ ಶೂರ್ಪನಖಿಗೆ ಉಡುಗೊರೆಯಾಗಿ ನೀಡಿದ್ದ ಎನ್ನುತ್ತಾರೆ. ಇಲ್ಲೇ ರಾಮನು 14 ಸಾವಿರ ರಾಕ್ಷರನ್ನು ಕೊಂದ ಎನ್ನಲಾಗಿದೆ. ಈ ದೇವಾಲಯವನ್ನು ಕಟ್ಟಿದವರು ಯಾರು, ಯಾವಾಗ ಎನ್ನುವ ಕುರಿತು ಗೊಂದಲಗಳಿವೆ. ಕೆಲವರು 6ನೆಯ ಶತಮಾನ ಎಂದರೆ ಇನ್ನೂ ಕೆಲವರು ವಿಜಯನಗರದ ಅರಸರ ಕಾಲದಲ್ಲಿ ಸಂತ ಮಲ್ಲಪ್ಪ ಸ್ವಾಮಿ ಕಟ್ಟಿಸಿದ್ದೆಂದೂ ಹೇಳುತ್ತಾರೆ. ಮಲ್ಲಪ್ಪ ಸ್ವಾಮಿಯು ನರಸಿಂಹ ಸ್ವಾಮಿ ಭಕ್ತನಾಗಿದ್ದು, ಈ ದೇವಾಲಯವನ್ನು ಕಟ್ಟಿಸಿ ತನ್ನ ಜೀವನವನ್ನು ನರಸಿಂಹನ ಸೇವೆಯಲ್ಲಿ ಕಳೆದ ಎಂದೂ ಹೇಳುತ್ತಾರೆ. ಇದನ್ನು ಕಟ್ಟಿಸಿದವರ ಹೆಸರುಗಳಲ್ಲಿ ಚೋಳರಾಜರ ಹೆಸರೂ ಕೇಳಿ ಬರುತ್ತದೆ.
ನರಸಿಂಹ ಸ್ವಾಮಿ ಪಾದದಿಂದ ಹರಿಯುವ ʻಚಿಂತಾಮಣಿ ಜಲಧಾರೆʼಯು ಸ್ವಲ್ಪ ದೂರದಲ್ಲಿರುವ ಆಂಜನೇಯನ ಗುಡಿಯ ಪಕ್ಕದಲ್ಲಿ ಹರಿದು ಬಂದು, ಅಲ್ಲಿರುವ ಹೊಂಡಕ್ಕೆ ಬೀಳುತ್ತದೆ. ಜನರು ಇದನ್ನು ತೀರ್ಥರೂಪದಲ್ಲಿ ಸ್ವೀಕರಿಸುತ್ತಾರೆ.
ಪರ್ಣಸಾಲ

ಪರ್ಣಸಾಲ ಭದ್ರಾಚಲಂನಿಂದ ಸುಮಾರು 30-35 ಕಿಮೀ ದೂರದಲ್ಲಿದೆ. ಸ್ವಲ್ಪ ಎತ್ತರದ ಜಾಗದಲ್ಲಿರುವ ಈ ಹಳ್ಳಿಯು ಕಮ್ಮಮ್ ಜಿಲ್ಲೆಯಲ್ಲಿದ್ದು, ಇಲ್ಲಿಯೂ ಗೋದಾವರಿ ಹರಿಯುತ್ತಾಳೆ.
ಇಲ್ಲಿನ ಸೀತಾರಾಮ ದೇವಾಲಯವು ಬಹಳ ಪ್ರಸಿದ್ಧಿ ಪಡೆದಿದೆ. ಹಳ್ಳಿಯು ಕಾಡಿನ ಒಳಗೆ ಇದ್ದಂತೆ ಕಂಡರೂ ಪ್ರತಿದಿನ ನೂರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಭದ್ರಾಚಲಂನ ಸೀತಾರಾಮ ದೇವಾಲಯದಲ್ಲಿ ಸೀತೆ ರಾಮನ ತೊಡೆಯ ಮೇಲೆ ಕುಳಿತಿದ್ದರೆ ಇಲ್ಲಿ ಪಕ್ಕದಲ್ಲಿ ನಿಂತಿದ್ದಾಳೆ. ಪರ್ಣಸಾಲ ಅಂದರೆ ಎಲೆಯ ಗುಡಿಸಲು. ರಾಮಾಯಣದ ಘಟನೆಗಳನ್ನು ಸಾರುವ ಆಳೆತ್ತರದ ಚೆಂದದ ಮೂರ್ತಿಗಳು ಇಲ್ಲಿದೆ. ಅಶೋಕವನದಲ್ಲಿ ಶೋಕದಲ್ಲಿ ಸೀತೆ ಮಲಗಿರುವಾಗ ಆ ಜಾಗವನ್ನೇ ಎತ್ತಲು ಪ್ರಯತ್ನಿಸುವ ರಾವಣ; ಸೀತೆಯನ್ನು ಅಪಹರಿಸಲು ಭಿಕ್ಷೆ ಬೇಡುತ್ತ ಮಾರುವೇಷದಲ್ಲಿ ಬಂದ ರಾವಣ; ಆತ್ಮೀಯವಾಗಿ ನಿಂತಿರುವ ರಾಮ, ಸೀತೆ, ಸ್ವಲ್ಪ ದೂರದಲ್ಲಿ ನಿಂತಿರುವ ಲಕ್ಷ್ಮಣ, ಮೂರ್ತಿಗಳು ನೋಡುಗರ ಕಣ್ಮನ ಸೇಳೆಯುವಂತಿವೆ. ಆದರೆ, ಇಲ್ಲಿ ಮೊಬೈಲ್, ಕ್ಯಾಮೆರಾ ತರುವಂತಿಲ್ಲ, ಫೊಟೋ ಬೇಕಿದ್ದರೆ ಅಲ್ಲಿರುವ ಕ್ಯಾಮೆರಾದವರನ್ನು ಅವಲಂಭಿಸಬೇಕು.
ರಾಮ, ಲಕ್ಷ್ಮಣ, ಸೀತೆ ವನವಾಸದ ಸಮಯದಲ್ಲಿ ಇಲ್ಲೇ ಸ್ವಲ್ಪ ಕಾಲ ತಂಗಿದ್ದರು ಎನ್ನಲಾಗಿದೆ. ರಾಮ, ರಾವಣರ ಹೆಜ್ಜೆಯ ಗುರುತಿರುವ ಕಲ್ಲು ಇಲ್ಲದೆ.
ಚಿನ್ನ ಅರುಣಾಚಲ ದೇವಾಲಯ

ಹೆಚ್ಚೇನು ಸದ್ದು ಗದ್ದಲವಿಲ್ಲದ ಪ್ರಶಾಂತ ವಾತಾವರಣದ ಚಿನ್ನ ಅರುಣಾಚಲ ದೇವಾಲಯದಲ್ಲಿ 1008 ಲಿಂಗಗಳಿವೆ. ಈ ಮಂದಿರದ ಪ್ರಧಾನ ಆಕರ್ಷಣೆ 12 ಜೋತಿರ್ಲಿಂಗಗಳ ಪ್ರತಿಕೃತಿ. ಇಲ್ಲಿ ಹತ್ತು ಅಡಿಗೂ ದೊಡ್ಡದಾದ ಶಿವಲಿಂಗವಿದೆ.
ಶಿವಲಿಂಗದ ನಾಲ್ಕು ದಿಕ್ಕುಗಳಲ್ಲಿ ಮತ್ತು ಮೇಲ್ಬಾಗದಲ್ಲಿ ಶಿವನ ಮುಖದ ಕೆತ್ತನೆ ಇರುವ ಸುಂದರ ಶಿವಲಿಂಗವೊಂದು ಗಮನ ಸೆಳೆಯುತ್ತದೆ. ಇಂದ್ರ, ಅಗ್ನಿ, ಯಮ, ನಿರುತಿ, ವರುಣ, ವಾಯು, ಕುಬೇರ ಮತ್ತು ಈಶಾನ್ಯ ಲಿಂಗಗಳು ಇಲ್ಲಿನ ಮತ್ತೊಂದು ಆಕರ್ಷಣೆ. ಶ್ರೀಚಕ್ರ ಲಿಂಗ, ಪಚ್ಚೆ ಲಿಂಗ, ಸ್ಫಟಿಕ ಲಿಂಗ, ಪಾದರಸ ಲಿಂಗವೂ ಇದ್ದು, ನೋಡುತ್ತಾ ಹೋದಂತೆ ಭಕ್ತಿಯೊಂದಿಗೆ ದಿಗ್ಭ್ರಮೆಯೂ ಹುಟ್ಟಿಸುತ್ತದೆ. ಹಾಗೆಯೇ ಗಾಜಿನ ಕೊಠಡಿಯೊಳಗೆ ಶ್ರೀರಾಮ, ಲಕ್ಷ್ಮಣ ಮತ್ತು ಸೀತೆಯ ಮೂರ್ತಿ ಇದ್ದು, ಇದರ ಬಿಂಬ ನಾಲ್ಕೂ ದಿಕ್ಕಿನಲ್ಲಿ ನೋಡಬಹುದು. ಇಲ್ಲಿನ ಮತ್ತೊಂದು ಆಕರ್ಷಣೆಯೆಂದರೆ ದೇವಾಲಯದ ಹೊರಗಿರುವ ಎತ್ತರದ ಸುಬ್ರಮಣ್ಯನ ಮೂರ್ತಿ.
ಪಾಪಿಕೊಂಡ
ಪೂರ್ವಘಟ್ಟಗಳ ಮಧ್ಯೆ ಗಂಭೀರವಾಗಿ, ತಣ್ಣಗೆ ಹರಿಯುವ ಗೋದಾವರಿಯನ್ನು ಪಾಪಿಕೊಂಡದಲ್ಲಿ ಪೂರ್ವಘಟ್ಟಗಳು ಸುತ್ತವರಿಯುತ್ತವೆ. ಸುತ್ತ ಸಾಲು ಸಾಲು ಘಟ್ಟಗಳು, ಮಧ್ಯೆ ನೀರು- ಸುತ್ತಲು ಹಸಿರು, ಮೇಲೆ ನೀಲಿ ಆಕಾಶ, ಅಲ್ಲೊಂದು-ಇಲ್ಲೊಂದು ಹಾರುವ ಹಕ್ಕಿಗಳು, ಪ್ರವಾಸಿಗರಿಗೆ ಹಸುರಿನ ಸೊಬಗಿನ ಈ ನೋಟವನ್ನು ಕಾಣಿಸಲೆಂದೇ ಸಾಲು ಸಾಲು ದೋಣಿಗಳೂ ಇರುತ್ತವೆ ಇನ್ನೇನು ಬೇಕು ನಮಗೆ? ನಾವಂತೂ ಈ ಪ್ರವಾಸವನ್ನು ಎಂಜಾಯ್ ಮಾಡಿದ್ದೇವೆ.