ರಟ್ಟೀಹಳ್ಳಿಯ ವೀರಭದ್ರ ಮತ್ತು ಶಿರಸ್ ಪವಾಡ!
ನಿನ್ನ ಭಕ್ತರ ಬಯಕೆಗಳನ್ನು ಈಡೇರಿಸುವುದಾಗದಿದ್ದರೆ ಬಿಡುವವನಾಗು. ನಾನು ಮಾತ್ರ ನನ್ನ ಸಂಕಲ್ಪದಿಂದ ಹಿಂದೆಗೆಯುವುದಿಲ್ಲ ಎಂದು ವೀರಬೊಬ್ಬೆಯಿಟ್ಟರು. ಆಗ ಕದಗಳು ತಾವಾಗಿಯೇ ತೆರೆದವು. ಆಗ ದಂಪತಿಗಳು ದೇವಾಲಯ ಪ್ರವೇಶಿಸಿದಾಗ ಕದ ಮತ್ತೆ ಮುಚ್ಚಲ್ಪಟ್ಟವು. ಇದನ್ನು ಕಂಡ ನೆರೆದ ಭಕ್ತರು ಮೂಕವಿಸ್ಮಿತರಾದರು. ಆಗಿನ ತಾಲೂಕ್ ಕಚೇರಿ ಅಧಿಕಾರಿಗಳು ದಂಪತಿಗಳ ರಕ್ಷಣೆಗೆ ಸಿಪಾಯಿಗಳನ್ನು ಕಳುಹಿಸಿದ್ದರು. ಆದರೆ ದೇವಾಲಯದ ಕದಗಳನ್ನು ತೆಗೆಯಲು ಆಗಲಿಲ್ಲ.
- ಮಲ್ಲೇಶ ಓಲೇಕಾರ
ಕುಮದ್ವತಿ ನದಿ ತೀರದ ರಟ್ಟೀಹಳ್ಳಿ ಶ್ರೀ ವೀರಭದ್ರೇಶ್ವರ ಅನೇಕ ಶತಮಾನಗಳಿಂದ ಪ್ರಸಿದ್ಧಿ ಪಡೆದ ಕ್ಷೇತ್ರವಾಗಿದೆ. ಸುಮಾರು 12-13ನೆಯ ಶತಮಾನದಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನದ ನಿರ್ಮಾಣ ಕಾರ್ಯ ಪೂರ್ಣವಾಗಿದೆ ಎಂದು ಶಿಲಾಶಾಸನದ ಪ್ರಕಾರ ತಿಳಿದು ಬಂದಿದೆ.
ಇಲ್ಲಿನ ವೀರಭದ್ರೇಶ್ವರ ಶರಭಾವತಾರಿಯಾಗಿದ್ದು ವಿಶೇಷವಾಗಿದೆ. ಚೌಡಯ್ಯದಾನಪುರ, ಕಾರಡಗಿ, ಸಿಂಗಟಾಲೂರ, ಆಂಧ್ರ ಪ್ರದೇಶದ ರಾಚೋಟಿಯಲ್ಲಿ ಮಾತ್ರ ಶರಭಾವತಾರಿ ವೀರಭದ್ರೇಶ್ವರ ಕಾಣಸಿಗುತ್ತವೆ. ಇಲ್ಲಿನ ರಥೋತ್ಸವ ಭಾರಿ ಪ್ರಸಿದ್ದಿಯನ್ನು ಪಡೆದಿದೆ. ರಾಜ್ಯದಲ್ಲಿಯೇ ಅತಿ ಎತ್ತರದ ರಥ ಎಂಬ ಹೆಗ್ಗಳಿಕೆಯನ್ನು ಈ ಹಿಂದೆ ಪಡೆದಿತ್ತು. ಕಾರಣಾಂತರಗಳಿಂದ ಈಗ ಎತ್ತರವನ್ನು ತಗ್ಗಿಸಲಾಗಿದೆ.
ಈ ರೋಚಕ ಕಥೆ ಕಥೆಯಲ್ಲ!
ಇತಿಹಾಸದಲ್ಲಿ ಕಂಡು ಕೇಳರಿಯದ ವಿಶೇಷವಾದ ಘಟನೆಯಿಂದ ಶ್ರೀ ವೀರಭದ್ರೇಶ್ವರ ಇಲ್ಲಿ ಅಜರಾಮರವಾಗಿ ಉಳಿದಿದ್ದಾನೆ. ಅಲ್ಲದೆ ಇದು ಜಾಗೃತ ಸ್ಥಳವಾಗಿ ಮಾರ್ಪಟ್ಟಿದೆ. ಇಲ್ಲಿಗೆ ಸಮೀಪದ ನೆಶ್ವಿ ಗ್ರಾಮಕ್ಕೂ ರಟ್ಟೀಹಳ್ಳಿಯ ಶ್ರೀ ವೀರಭದ್ರನಿಗೂ ಅವಿನಾಭಾವ ಸಂಬಂಧವಿದೆ.
ಶಿಕಾರಿಪುರ ತಾಲ್ಲೂಕಿನ ಇತಿಹಾಸ ಕಾಲದ “ನಾಗರಖಂಡ 70” ಕಂಪಣದಲ್ಲಿ ಸೇರಿದ್ದ ಒಂದು ವಿಶೇಷ ಗ್ರಾಮ ಚಿಕ್ಕಮಾಗಡಿ. ಈ ಚಿಕ್ಕಮಾಗಡಿ ಕ್ರಿ.ಶ. 902 ರಿಂದ ಕ್ರಿ.ಶ. 1256ರವರೆಗೂ ಅಂಡುವಂಶದ ಸಾಮಂತ ಮನೆತನದವರಿಗೆ ರಾಜಧಾನಿಯಾಗಿತ್ತು. ಈ ಗ್ರಾಮದ ವಿಶ್ವಕರ್ಮ ವಂಶದ ವೀರಭದ್ರಪ್ಪ ಮತ್ತು ಕಾಳಮ್ಮ ಎಂಬ ಸದ್ಭಕ್ತ ದಂಪತಿಗಳ ಮೊಮ್ಮಗನೇ ವೀರಬೊಮ್ಮಪ್ಪ. ಈತನೇ ಶಿರಸ್ ಪವಾಡ ಮಹಿಮೆಯ ಕೇಂದ್ರಬಿಂದು.
ಕರುಳುಗಳೇ ದೀಪದ ಬತ್ತಿ!
ವೀರಬೊಮ್ಮಪ್ಪ ವೀರಮ್ಮ ವೀರಭದ್ರನಲ್ಲಿ ಅಚಲವಾದ ನಂಬಿಕೆಯನ್ನು ಇಟ್ಟಿದ್ದರು. ವಂಶಪಾರಂಪರಿಕವಾಗಿ ಹರಿದ ಭಕ್ತಿ ರಸ ಇವರಲ್ಲಿ ಮಡುಗಟ್ಟಿತ್ತು. ವೀರಬೊಮ್ಮಪ್ಪನ ಭಯಂಕರವಾದ ಬಯಕೆ ಏನೆಂದರೆ ತಮ್ಮ ಶಿರವರಿದು ರಟ್ಟೀಹಳ್ಳಿ ವೀರೇಶನಿಗೆ ದೀಪ ಬೆಳಗಿ ಪ್ರತಿ ಶಿರ ಪಡೆಯಬೇಕು ಎಂಬುದು. ತಮ್ಮ ಬಯಕೆಯನ್ನು ವೀರಮ್ಮನವರಿಗೆ ತಿಳಿಸಿದಾಗ ವೀರಮ್ಮನವರು ಸಂತಸ ವ್ಯಕ್ತ ಪಡಿಸಿದರು. ಪತಿಯ ಬಯಕೆ ಈಡೇರಿಸಲು ನೆಶ್ವಿಯಿಂದ ರಟ್ಟೀಹಳ್ಳಿಗೆ ಆಗಮಿಸಿದರು. ಪವಿತ್ರ ಕುಮದ್ವತಿ ನದಿಯಲ್ಲಿ ಮಿಂದರು. ಆಗ ವೀರಮ್ಮನವರು ಸುರಗಿಯಿಂದ ತಮ್ಮ ಉದರ ಸೀಳಿ ಬತ್ತಿಗೆ ಬೇಕಾಗುವಷ್ಟು ಕರುಳುಗಳನ್ನು ಬೇರ್ಪಡಿಸಿ ನದಿಯಲ್ಲಿ ತೊಳೆದುಕೊಂಡು ಹೆಗಲ ಮೇಲೆ ಒಣಗಿಸಲು ಹಾಕಿಕೊಂಡರು. ವೀರಬೊಮ್ಮಪ್ಪ ಭಷಿತ ಭೂಷಿತನಾಗಿ ವೀರಗಾಸೆ ಧರಿಸಿ ಚಂದ್ರಾಯುಧ ಹಿಡಿದುಕೊಂಡು ಪತಿಪತ್ನಿಯರು ಹೊರಟರು. ಪತಿಪತ್ನಿಯರ ಅದ್ಭುತ ನೋಡಲು ದೇವಸ್ಥಾನದ ಬಳಿ ಜನ ಸಾಗರವೇ ನೆರೆದಿತ್ತು.
ತಾನಾಗಿ ಮುಚ್ಚಿಕೊಂಡ ಬಾಗಿಲು!
ವೀರಬೊಮ್ಮಪ್ಪ, ವೀರಮ್ಮನವರು ದೇವಸ್ಥಾನಕ್ಕೆ ಬರುತ್ತಿದ್ದಂತೆ ದೇವಾಲಯದ ಬಾಗಿಲುಗಳು ತಾವೇ ಮುಚ್ಚಿಕೊಂಡವು. ವೀರಬೊಮ್ಮಪ್ಪ ವೀರಾವೇಶದಿಂದ ಗುಡುಗಿದರು.ಹೇ! ದೇವರ ದೇವ, ಹರನ ನೇತ್ರದಲ್ಲಿ ಉದಿಸಿ ಸೊಕ್ಕಿದ ದಕ್ಷನ ಶಿರವರಿದು ಕರುಣಿಸಿ ಕುರಿತಲೆಯನ್ನಿರಿಸಿ ಸಲುಹಿದೆ. ದುರುಳನಾದ ನರಹರಿಯನ್ನು ಶರಭಾವತಾರದಿಂದ ಕೊಂದು ಅವನ ಶಿರವನ್ನು ಕೀರ್ತಿ ಮುಖವೆಂದು ಧರಿಸಿರುವೆ. ಲೋಕ ಕಂಟಕರಾದ ಜ್ವಾಲಾಸುರ. ವ್ಯಾಲಾಸುರ, ಪಂಚ ಮೇಡ್ರಾಸುರರನ್ನು ಕೊಂದು ಮುನಿ ದೇವತೆಗಳನ್ನು ಸಲಹಿದ ನೀನು ಹೀಗೆ ನಿನ್ನಾಲಯದ ಕದಗಳನ್ನು ಮುಚ್ಚಬಹುದೇ? ನಿನ್ನ ಭಕ್ತರ ಬಯಕೆಗಳನ್ನು ಈಡೇರಿಸುವುದಾಗದಿದ್ದರೆ ಬಿಡುವವನಾಗು. ನಾನು ಮಾತ್ರ ನನ್ನ ಸಂಕಲ್ಪದಿಂದ ಹಿಂದೆಗೆಯುವುದಿಲ್ಲ ಎಂದು ವೀರಬೊಬ್ಬೆಯಿಟ್ಟರು. ಆಗ ಕದಗಳು ತಾವಾಗಿಯೇ ತೆರೆದವು. ಆಗ ದಂಪತಿಗಳು ದೇವಾಲಯ ಪ್ರವೇಶಿಸಿದಾಗ ಕದ ಮತ್ತೆ ಮುಚ್ಚಲ್ಪಟ್ಟವು. ಇದನ್ನು ಕಂಡ ನೆರೆದ ಭಕ್ತರು ಮೂಕವಿಸ್ಮಿತರಾದರು. ಆಗಿನ ತಾಲೂಕ್ ಕಚೇರಿ ಅಧಿಕಾರಿಗಳು ದಂಪತಿಗಳ ರಕ್ಷಣೆಗೆ ಸಿಪಾಯಿಗಳನ್ನು ಕಳುಹಿಸಿದ್ದರು. ಆದರೆ ದೇವಾಲಯದ ಕದಗಳನ್ನು ತೆಗೆಯಲು ಆಗಲಿಲ್ಲ. ನವರಂಗದಲ್ಲಿ ನಿಂತಿದ್ದ ವೀರಬೊಮ್ಮಪ್ಪ ವೀರೇಶನಿಗೆ ನಮಸ್ಕರಿಸಿ ಚಂದ್ರಾಯುಧದಿಂದ ಶಿರವನ್ನು ಸೀಳಿ, ಬೆಳಗಿ ಕೆಳಗೆ ಇಡುತ್ತಿದ್ದಂತೆ, ಪ್ರತಿ ಶಿರ ಮೂಡಿ ಬಂದಿತು. ಪ್ರತ್ಯಕ್ಷ ದರ್ಶಿಯಾಗಿದ್ದ ವೀರಮ್ಮನವರು ಮೂಕ ವಿಸ್ಮಿತರಾಗಿದ್ದರು. ಸೀಳಿದ ಶಿರ ಶಿಲೆಯಾಗಿ ಮಾರ್ಪಟ್ಟಿತು. ಇದನ್ನು ಈಗಲೂ ದೇವಸ್ಥಾನದಲ್ಲಿ ಕಾಣಬಹುದು. ವೀರಮ್ಮನವರ ಸೀಳಿದ ಉದರ ಮತ್ತೆ ಮೊದಲಿನಂತಾಯಿತು. ದಂಪತಿಗಳು ವೀರೇಶನಿಗೆ ಜಯವಾಗಲಿ ಎನ್ನುತ್ತ ಹೊರ ಬಂದಾಗ ನೆರೆದಿದ್ದ ಜನಸ್ತೋಮ ನಡೆದ ಪವಾಡ ಮಹಿಮೆಯನ್ನು ಕೊಂಡಾಡಿದರು.
ಹೀಗೆ ಅಂದಿನಿಂದ ಇಂದಿನವರೆಗೆ ಭಕ್ತರ ಆಸೆ ಈಡೇರಿಸುವ ವೀರಭದ್ರೇಶ್ವರ ಜಾಗೃತ ದೇವರಾಗಿದ್ದಾನೆ. ವೀರೇಶ ಪೂಜಾ ಕೈಂಕರ್ಯದಿಂದ ಹರಕೆಗಳನ್ನು ಈಡೇರಿಸಿಕೊಂಡ ಉದಾಹರಣೆಗಳು ಸಾವಿರಾರು.