ಹಿಡಿಂಬೆ.. ನಿನಗೆ ಶರಣೆಂಬೆ ಇಲ್ಲಿ ದಾನವಿಗೂ ದೇವಾಲಯ..!
ಬರೀ ಕಟ್ಟಿಗೆಯಿಂದ ತಯಾರಾದ ಇದರ ವಿಶಿಷ್ಟ ಕೆತ್ತನೆಯ ಬಾಗಿಲಿನ ಒಳಹೊಕ್ಕರೆ ಇಕ್ಕಟ್ಟಾದ ಸ್ಥಳದಲ್ಲಿ ಬಂಡೆಯೊಂದರ ಕೆಳಗೆ ಒಂದು ಕಲ್ಲಿನ ತೊಟ್ಟಿಲು, ಪಕ್ಕದಲ್ಲಿ ಎರಡು ಪಾದಗಳು ಗೋಚರವಾಗುತ್ತವೆ. ಹಿಡಿಂಬಾದೇವಿಯ ಪಾದಗಳನ್ನು ಹಣೆಗೊತ್ತಿಗೊಂಡು ಅರ್ಚಕರಿಂದ ಹಣೆಗೆ ತಿಲಕ, ಕುಸುರೆಳ್ಳು ಮಂಡಕ್ಕಿಯ ಪ್ರಸಾದ ಪಡೆದು ಹೊರಗೆ ಬಂದರೆ ಜೀವನ ಪಾವನ!
ದೇವಾನುದೇವತೆಗಳಿಗಿರುವಂತೆ ರಾಕ್ಷಸಿ ಹಿಡಿಂಬೆಗೂ ದೇವಾಲಯವಿದ್ದು ಅಸಂಖ್ಯ ಭಕ್ತಗಣ ಇಂದಿಗೂ ಪೂಜಿಸುತ್ತಿರುವ ವಿಚಿತ್ರ ಸಂಗತಿ ನಿಮಗೆ ಗೊತ್ತೇ ? ಈ ದೇಗುಲ ಉತ್ತರದ ಹಿಮಾಚಲ ಪ್ರದೇಶದ ಕುಲೂ ಜಿಲ್ಲೆಯ ಮನಾಲಿಯ ಬಳಿ ಇದೆ.ಮನಾಲಿ ನಗರದ ನೈಋತ್ಯಕ್ಕೆ ಎತ್ತರದ ಪರಿಸರದಲ್ಲಿನ " ಧುನ್ ಗಿರಿ ಟೆಂಪಲ್ " ನಲ್ಲಿ ರಾಕ್ಷಸಿ ಹಿಡಿಂಬೆ " ಹಡಿಂಬಾದೇವಿ " ಹೆಸರಿನಲ್ಲಿ ಭಕ್ತಗಣದಿಂದ ಆರಾಧಿಸಲ್ಪಡುತ್ತಿದ್ದಾಳೆ. ಸ್ಥಳೀಯರಿಗೆ ಇವಳು ದ್ರಾವಿಡ ಜನಾಂಗದ ಮಹಾ ಪತಿವ್ರತೆ, ಉಪಾಸನಾ ದೇವತೆ, ರೌದ್ರರೂಪಿ ಕಾಳಿಕಾಂಬೆ. ಅಲ್ಲಿನ ಭಕ್ತರ ಪಾಲಿಗೆ ಇದು ಕೊಡುಗೈದಾತೆಯ ಧಾರ್ಮಿಕ ಕೇಂದ್ರ.

ಪುರಾಣ ಸಾರ
ಮಹಾಭಾರತದ ಆದಿಪರ್ವದಲ್ಲಿ ಹೇಳಿದಂತೆ ಪಾಂಡವರು ವನವಾಸದ ಅವಧಿಯಲ್ಲಿ ಚಿತ್ರಕೂಟದಲ್ಲಿದ್ದಾಗ ಅಲ್ಲಿನ ರಾಕ್ಷಸರಾಜ ಹಿಡಿಂಬಾಸುರನ ತಂಗಿ ಹಿಡಿಂಬೆ ಭೀಮಸೇನನನ್ನು ಮೋಹಿಸಿ ಭೀಮ ಒಪ್ಪದಿದ್ದಾಗ ಅಣ್ಣನ ಬಳಿ ದೂರುತ್ತಾಳೆ. ಈರ್ವರಲ್ಲಿ ಕಾಳಗ ನಡೆದು ಸೋಲೊಪ್ಪಿಕೊಳ್ಳುವ ಹಿಡಿಂಬಾಸುರ ತನ್ನ ತಂಗಿಯನ್ನು ವಿವಾಹವಾಗುವಂತೆ ಕೋರುತ್ತಾನೆ. ಮದುವೆ ಸುಸಂಪನ್ನವಾಗುತ್ತದೆ. ನಂತರ ಮಹಾ ಪರಾಕ್ರಮಶಾಲಿ ಘಟೋತ್ಕಚ ಜನಿಸುತ್ತಾನೆ. ಪಾಂಡವರು ಅಜ್ಞಾತವಾಸಕ್ಕೆಂದು ವಿರಾಟನಗರಿಗೆ ಹೊರಟ ನಂತರ ವಿರಹಿ ಹಿಡಿಂಬೆ ಈ ಸ್ಥಳದಲ್ಲಿ ಸುದೀರ್ಘ ಘೋರ ತಪಸ್ಸು ಮಾಡುವುದರ ಮೂಲಕ ದೈವಸ್ವರೂಪಿಣಿಯಾಗಿ ನೆಲೆಸುತ್ತಾಳೆ.
ವಿಗ್ರಹವೇ ಇಲ್ಲ!
ಈ ದೇಗುಲವನ್ನು 1553 ರಲ್ಲಿ ರಾಜಾ ಬಹದ್ದೂರ್ ಸಿಂಗ್ ನಿರ್ಮಿಸಿದ್ದು ಒಳಗೆ ಯಾವುದೇ ವಿಗ್ರಹವಿಲ್ಲ. ಮೂರಂತಸ್ತಿನ ಪಗೋಡಾ ಮಾದರಿಯ ಬರೀ ಕಟ್ಟಿಗೆಯಿಂದ ತಯಾರಾದ ಇದರ ವಿಶಿಷ್ಟ ಕೆತ್ತನೆಯ ಬಾಗಿಲಿನ ಒಳಹೊಕ್ಕರೆ ಇಕ್ಕಟ್ಟಾದ ಸ್ಥಳದಲ್ಲಿ ಬಂಡೆಯೊಂದರ ಕೆಳಗೆ ಒಂದು ಕಲ್ಲಿನ ತೊಟ್ಟಿಲು, ಪಕ್ಕದಲ್ಲಿ ಎರಡು ಪಾದಗಳು ಗೋಚರವಾಗುತ್ತವೆ. ಹಿಡಿಂಬಾದೇವಿಯ ಪಾದಗಳನ್ನು ಹಣೆಗೊತ್ತಿಗೊಂಡು ಅರ್ಚಕರಿಂದ ಹಣೆಗೆ ತಿಲಕ, ಕುಸುರೆಳ್ಳು ಮಂಡಕ್ಕಿಯ ಪ್ರಸಾದ ಪಡೆದು ಹೊರಗೆ ಬಂದರೆ ಜೀವನ ಪಾವನ!
ದೇಗುಲದ ಒಳಗೆ ಛಾಯಾಗ್ರಹಣಕ್ಕೆ ಅವಕಾಶವಿಲ್ಲ. ಹೊರಬದಿ ಗೋಡೆಯುದ್ದಕ್ಕೂ ಕಾಡುಪ್ರಾಣಿಗಳ ಸುಂದರ ಕೆತ್ತನೆಗಳು. ದೇಗುಲದ ತುತ್ತತುದಿ ತ್ರಿಕೋನಾಕಾರದಲ್ಲಿದೆ. ಬಹುಶಃ ಹಿಮಪಾತವಾದರೆ ಹಿಮವೆಲ್ಲ ಜಾರಿಹೋಗಲು ಮಾಡಿರಬೇಕು. ದೇವಾಲಯದ ಹೊರಗೆ ಸುತ್ತಲೂ ನಯನ ಮನೋಹರ ದೃಶ್ಯಾವಳಿ. ಒಂದೆಡೆ ಹಚ್ಚಹಸಿರು ಹಾಸಿಹೊದ್ದಿರುವ ಮನಮೋಹಕ "ಧುಂಗ್ರಿವನ" ಇನ್ನೊಂದೆಡೆ ತುಂಬು ಜವ್ವನೆಯಂಥ ಧವಳ ಹಿಮಾವೃತ ಬೆಟ್ಟದ ಸಾಲು. ಅಲ್ಲಲ್ಲಿ ಹಾವಿನಂತೆ ನುಲಿದು ಜಲಲ ಜಲಲ ಹರಿಯುವ ಜಲಧಾರೆಯ ಝರಿಗಳು, ಗಗನಕ್ಕೆ ಮುತ್ತಿಕ್ಕಲು ಪೈಪೋಟಿ ನಡೆಸುವ ಪೈನ್, ದೇವದಾರು ಮರಗಳು. ಹರಿದ್ವರ್ಣದ ಕಾನನ. ಹಂತ ಹಂತವಾಗಿ ನಿರ್ಮಿಸಿದ ಪುಟ್ಟ ಚೆಂದದ ಮನೆಗಳು, ವರ್ಷದ ಎಲ್ಲ ಕಾಲವೂ ಧರೆಗೆ ಸುರಿಯುವ ಮಳೆ, ಆಗಾಗ ಬೀಳುವ ಹಿಮದ ರಾಶಿ .ಅಬ್ಬಾ ! ಕಿರುಬೆರಳಿನ ಅಂತರದಲ್ಲಿ ಸ್ವರ್ಗ ! ನೋಡಲು ಭಗವಂತ ಇನ್ನೂ ನಾಲ್ಕು ಕಂಗಳು ಕೊಡಬಾರದಿತ್ತೇ ಎನಿಸುವುದು ಖಂಡಿತ.

ಘಟೋತ್ಕಜನಿಗೂ ಪೂಜೆ
ದೇಗುಲದ ಬಲಭಾಗದಲ್ಲಿ ಬೃಹತ್ ದೇವದಾರು ವೃಕ್ಷವೊಂದಿದ್ದು ಅದರ ಅಡಿಯಿಂದ ಮುಡಿಯವರೆಗೆ ಪ್ರಾಣಿಗಳ ಕೋಡುಗಳಿಂದ ಅಲಂಕರಿಸಿದ್ದಾರೆ. ಕೆಳಗೊಂದು ವಧಾಸ್ಥಾನ. ಅಲ್ಲಿ ಆಗಾಗ ಪ್ರಾಣಿಬಲಿ ಕೊಡುವ ಸಂಪ್ರದಾಯವಿದೆ. ಇನ್ನೊಂದು ಬದಿಯಲ್ಲಿ ಮತ್ತೊಂದು ಭಾರೀ ವೃಕ್ಷದ ಕೆಳಗೆ ಘಟೋತ್ಕಚನ ದೇಗುಲವಿದ್ದು ಅಮ್ಮ, ಮಗ ಈರ್ವರೂ ಅನತಿ ದೂರದಲ್ಲಿಯೇ ಪೂಜಿಸಲ್ಪಡುತ್ತಾರೆ. ಸದಾ ಪ್ರವಾಸಿಗಳಿಂದ ಕಿಕ್ಕಿರಿದು ತುಂಬಿರುವ ಈ ದೇಗುಲ ಮನಾಲಿ ಜನರ ಪಾವಿತ್ರ್ಯ, ಸಂಸ್ಕೃತಿಯ ಅಸ್ಮಿತೆ. ಭಕ್ತಿಯಿಂದ ಆರಾಧಿಸಿದರೆ ದೇವಿ ಬೇಡಿದ್ದನ್ನು ಕೊಡುವಳೆಂಬ ಅಚಲ ನಂಬಿಕೆ ಇವರದ್ದು. ಅದು ನಿಜವೂ ಕೂಡ.
ಮುಸಲ್ಮಾನರೂ ಬರ್ತಾರೆ
ಪ್ರತಿವರ್ಷ ಮೇ ತಿಂಗಳಲ್ಲಿ "ಧುಂಗ್ರಿಮೇಳ " ಎಂಬ ಉತ್ಸವ ನಡೆಯುತ್ತದೆ. ಅಂದು ದೇವಿಯ ಜನ್ಮದಿನೋತ್ಸವ. ಸಾವಿರಾರು ಜನ ನೆರೆದು ಪೂಜಿಸಿ ಗಾನ, ನಾಟ್ಯ, ನಾಟಕ ಮುಂತಾದ ಮನರಂಜನೆ ಕಾರ್ಯಕ್ರಮ ನಡೆಸುತ್ತಾರೆ. ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿ ಸೇರುವುದು ಅಂದಿನ ವಿಶೇಷ. ಉಳಿದಂತೆ ಮನಾಲಿಯ ಶ್ರೀರಾಮ ದೇವಸ್ಥಾನ, ಸದಾ ಪ್ರವಹಿಸುವ ಬಿಸಿನೀರ ಬುಗ್ಗೆಯ ವಸಿಷ್ಠ ಬಾತ್, ಬೌದ್ಧಮಂದಿರ, ರೋಥಾಂಗ್ ಪಾಸ್, ಸೋಲಾಂಗ್ ಕಣಿವೆ, ಮನು ಟೆಂಪಲ್, ವಸ್ತು ಪ್ರದರ್ಶನಾಲಯ, ಬೋಟ್ ಕ್ಲಬ್ ಎಲ್ಲವೂ ಸುಂದರ.
ಮಕ್ಕಳಿಗೆ ಹಾಗೂ ನವ ವಿವಾಹಿತರಿಗೆ ಮನಾಲಿ ಅಚ್ಚುಮೆಚ್ಚು. ಇಲ್ಲಿನ ಸ್ಕೂಟರ್ ಕುದುರೆ ಸವಾರಿ, ಹಿಮರಾಶಿ, ಟ್ರೆಕ್ಕಿಂಗ್, ಸ್ಕೀಯಿಂಗ್, ಯಾಕ್ ಸವಾರಿ, ಆಕ್ರೋಟ್ ಹಣ್ಣು, ಎಲ್ಲೆಡೆ ಹಾಲಿನಂತೆ ಜುಳುಜುಳು ಹರಿಯುವ ಬಿಯಾಸ್ ನದಿ ಅದ್ಭುತ ಅನುಭವ ನೀಡುತ್ತದೆ.

ದಾರಿ ಹೇಗೆ?
ಬೆಂಗಳೂರಿನಿಂದ ಮನಾಲಿಗೆ 2673 ಕಿ.ಮೀ.
ಮನಾಲಿಯಿಂದ ದೇಗುಲಕ್ಕೆ 2 ಕಿ.ಮೀ.
ಸಮೀಪದ ವಿಮಾನ ನಿಲ್ದಾಣ ಭಂಟಾರ್
ಮನಾಲಿಯಿಂದ 50 ಕಿ.ಮೀ.
ಕುಲು ಪ್ರದೇಶದಿಂದ ಮನಾಲಿಗೆ 10 ಕಿ.ಮೀ.
ದೆಹಲಿಯಿಂದ ಮನಾಲಿಗೆ 50 ಕಿ.ಮೀ.