ದೇವನೊಬ್ಬ ರೂಪ ಹಲವು….
ಆ ನಂದಿಯನ್ನು ಹಿಡಿಯಲು ಪಾಂಡವರು ಪ್ರಯತ್ನಿಸಿದಾಗ ಆ ನಂದಿ ಭೂಮಿಯಲ್ಲಿ ಅಡಗಿ ಹೋಯಿತೆಂದೂ, ಅದರ ಬೆನ್ನು ಭಾಗ ಮಾತ್ರ ಭೂಮಿಯ ಮೇಲೆ ಉಳಿಯಿತೆಂಬ ನಂಬಿಕೆ ಇದೆ. ಆ ನಂದಿಯ ಬೆನ್ನನ್ನೇ ಕೇದಾರನಾಥೇಶ್ವರ ಎಂದು ಪೂಜಿಸಲಾಗುತ್ತದೆ. ಆ ಕೇದಾರನಾಥೇಶ್ವರ ದ್ವಿತೀಯ ಮಂಟಪದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಗೊಂಡಿದ್ದಾನೆ.
- ಅರುಣ ಷಡಕ್ಷರಿ
ಹೌದು ! ಅಲ್ಲಿರುವುದು ಮಹಾದೇವನೊಬ್ಬನೇ ! ಆದರೆ ಅವನು ಹನ್ನೆರಡು ರೂಪಗಳಲ್ಲಿ ಕಾಣಿಸಿಕೊಳ್ಳುತ್ತಾನೆ. ಅವೇ ದ್ವಾದಶ ಜ್ಯೋತಿರ್ಲಿಂಗಗಳು. ಮಹಾದೇವನ ಪವಿತ್ರ ಕ್ಷೇತ್ರಗಳು. ಅಲ್ಲಿ ಶಿವನನ್ನು ಸ್ವಯಂ ಪ್ರತ್ಯಕ್ಷವಾದ ಜ್ಯೋತಿರ್ಲಿಂಗದ ರೂಪದಲ್ಲಿ ದಿವ್ಯ ಪ್ರಕಾಶದ ಸ್ಥಂಭವಾಗಿ ಆರಾಧಿಸಲಾಗುತ್ತದೆ. ಅಲ್ಲಿಯ ಪ್ರತಿಯೊಂದು ಸ್ಥಳವೂ ಆಧ್ಯಾತ್ಮಿಕ ಶಕ್ತಿಯಿಂದ ತುಂಬಿದೆ. ಜೊತೆಗೆ ಪುರಾಣ, ಇತಿಹಾಸ ಮತ್ತು ಅದ್ಭುತ ವಾಸ್ತುಶಿಲ್ಪದಿಂದ ಕೂಡಿದೆ. ಕೇದಾರನಾಥದ ಹಿಮಾಚ್ಛಾದಿತ ಶಿಖರಗಳಿಂದ ಹಿಡಿದು ದಕ್ಷಿಣದ ರಾಮೇಶ್ವರಂವರೆಗೆ, ಗುಜರಾತಿನ ಸೌರಾಷ್ಟ್ರ ಸೋಮನಾಥದಿಂದ ಹಿಡಿದು ಕಾಶಿಯ ಗಂಗಾತೀರದ ವಿಶ್ವನಾಥನವರೆಗೆ ಎಲ್ಲಾ ಜ್ಯೋತಿರ್ಲಿಂಗಗಳು ಮಹಾದೇವನ ಅನಂತ ಶಕ್ತಿಯ ವಿಭಿನ್ನ ರೂಪಗಳನ್ನು ಪ್ರತಿಬಿಂಬಿಸುತ್ತವೆ. ಅವುಗಳ ಪರಿಚಯವನ್ನು ಒಂದೊಂದಾಗಿ ಮಾಡಿಕೊಳ್ಳಲು ಪ್ರಯತ್ನಿಸೋಣ.
ಎಲ್ಲಾ ಜ್ಯೋತಿರ್ಲಿಂಗಗಳಲ್ಲಿ ನನ್ನ ಮೆಚ್ಚಿನದು ಕೇದಾರನಾಥೇಶ್ವರ ! ಹಿಮಾಲಯದ ಗಡ್ವಾಲ್ ಪ್ರದೇಶದಲ್ಲಿ 3,583 ಮೀಟರ್ (11,755 ಅಡಿಗಳು) ಎತ್ತರದಲ್ಲಿ, ಶಾಂತ ಕಣಿವೆಯೊಂದರಲ್ಲಿ ನೆಲೆಸಿರುವ ಈ ದೇವಾಲಯ ಚಿಕ್ಕದಾಗಿದ್ದರೂ, ಅದ್ಭುತವಾದ ದಿವ್ಯತೆಯನ್ನು ಹೊಂದಿದೆ. ಅಲ್ಲಿ ಅತೀ ಚಳಿಯ ವಾತಾವರಣ ಇರುವುದರಿಂದ ಆ ದೇವಾಲಯ ಪ್ರತೀ ವರ್ಷ ಅಕ್ಟೋಬರ್ ತಿಂಗಳಿಂದ ಏಪ್ರಿಲ್ ತಿಂಗಳವರೆಗೆ ಮುಚ್ಚಿರುತ್ತದೆ.

ಎರಡು ವರ್ಷಗಳ ಹಿಂದೆ ಜೂನ್ ತಿಂಗಳಲ್ಲಿ ನಾನು ಅಲ್ಲಿಗೆ ಭೇಟಿ ನೀಡಿದಾಗ ಆಗಷ್ಟೇ ರಸ್ತೆಗಳನ್ನೂ, ದೇವಾಲಯದ ಬಾಗಿಲನ್ನೂ ತೆರೆದಿದ್ದರು. ನಾನು ಬೆಂಗಳೂರಿನಿಂದ ಉತ್ತರಾಕಾಂಡದ ಡೆಹೆರಾಡೂನಿನವರೆಗೆ ವಿಮಾನದಲ್ಲಿ ಪ್ರಯಾಣ ಮಾಡಿದೆ. ಅಲ್ಲಿಂದ ಕೇದಾರನಾಥಕ್ಕೆ ಹೆಲಿಕ್ಯಾಪ್ಟರಿನಲ್ಲಿ ಪ್ರಯಾಣಿಸಿದೆ. ಸುಮಾರು ನಲವತ್ತು ನಿಮಿಷಗಳ ಹೆಲಿಕ್ಯಾಪ್ಟರಿನ ಕಿರುಪ್ರಯಾಣ ಭಯ ಹುಟ್ಟಿಸುವಂತದ್ದು. ಆದರೆ ಅದು ಸಂಪೂರ್ಣ ಸುರಕ್ಷಿತವಾದ ಪ್ರಯಾಣ ಎಂಬ ಭರವಸೆ ನೀಡಲಾಗಿತ್ತು.
ಹೆಲಿಪ್ಯಾಡಿನಿಂದ ದೇವಾಲಯದವರೆಗೆ ಹದಿನೈದು ನಿಮಿಷಗಳ ಒಂದು ಚಿಕ್ಕ ಕಾಲ್ನಡಿಗೆ. ಹಾಗೆ ನಡೆಯುವಾಗ ಮುಂದಿನ ದೃಶ್ಯವನ್ನು ನೋಡಿ ಅತ್ಯಾಶ್ಚರ್ಯವಾಯಿತು. ಅಲ್ಲಿನ ಅದ್ಭುತ ಪ್ರಕೃತಿ ಸೌಂದರ್ಯದಿಂದ ! ಇಂದಿಗೂ ಆ ದೃಶ್ಯ ನನ್ನ ಕಣ್ಮುಂದೆಯೇ ತೇಲಾಡುತ್ತಿದೆ.
ಹಿಮಾಲಯದ ಉನ್ನತ ಪರ್ವತ ಶ್ರೇಣಿಗಳ ನಡುವೆ 45 ಅಡಿ ಎತ್ತರದ ಪ್ರಾಚೀನ ದೇವಾಲಯ ನಿಂತಿದೆ. ಕಣಿವೆಯ ಮಧ್ಯದಲ್ಲಿ ದೈತ್ಯ ಪರ್ವತ ಶ್ರೇಣಿಗಳ ನಡುವೆ ದೇವಾಲಯ ವಿನಮ್ರವಾಗಿ ನಿಂತಂತೆಯೂ ಕಾಣುತ್ತದೆ. ಸುತ್ತಲೂ ಮಂತ್ರಮುಗ್ಧಗೊಳಿಸುವ ಹಿಮಾಲಯದ ಪರ್ವತಶ್ರೇಣಿಗಳು. ಅದರ ಮಧ್ಯೆ ಈ ದೇವಾಲಯ! ವಾಹ್! ನಿಜಕ್ಕೂ ಅದ್ಭುತ!

ದೇವಾಲಯದಲ್ಲಿ ಎರಡು ಮಂಟಪಗಳಿವೆ. ಮೊದಲ ಮಂಟಪದ ಗೋಡೆಗಳಲ್ಲಿ ಪಾಂಡವರ ಶಿಲ್ಪಗಳಿದ್ದು, ಮಧ್ಯದಲ್ಲಿ ನಂದಿಯ ಮೂರ್ತಿಯು ಇದೆ. ಇದರ ಹಿನ್ನಲೆ ಏನೆಂದರೆ, ಮಹಾಭಾರತದ ಪ್ರಕಾರ, ಕುರುಕ್ಷೇತ್ರ ಯುದ್ಧದ ನಂತರ ಆ ಘೋರ ಯುದ್ಧವನ್ನು ಮಾಡಿದುದರ ಬಗ್ಗೆ ಪಶ್ಚಾತ್ತಾಪಗೊಂಡ ಪಾಂಡವರು, ಪರಶಿವನ ಬಳಿ ಕ್ಷಮೆ ಯಾಚಿಸಲು ಬಂದರಂತೆ. ಆದರೆ ಆ ಘೋರ ಯುದ್ಧದ ಬಗ್ಗೆ ಪರಶಿವನಿಗೂ ಬೇಸರ ಬಂದಿತ್ತಂತೆ. ಆತ ಪಾಂಡವರಿಗೆ ಕಾಣಿಸಿಕೊಳ್ಳಬಾರದೆಂದು ಯೋಚಿಸಿ ನಂದಿಯ ರೂಪವನ್ನು ತಾಳಿದನಂತೆ. ಆ ನಂದಿಯನ್ನು ಹಿಡಿಯಲು ಪಾಂಡವರು ಪ್ರಯತ್ನಿಸಿದಾಗ ಆ ನಂದಿ ಭೂಮಿಯಲ್ಲಿ ಅಡಗಿ ಹೋಯಿತೆಂದೂ, ಅದರ ಬೆನ್ನು ಭಾಗ ಮಾತ್ರ ಭೂಮಿಯ ಮೇಲೆ ಉಳಿಯಿತೆಂಬ ನಂಬಿಕೆ ಇದೆ. ಆ ನಂದಿಯ ಬೆನ್ನನ್ನೇ ಕೇದಾರನಾಥೇಶ್ವರದ ಲಿಂಗು ಎಂದು ಪೂಜಿಸಲಾಗುತ್ತದೆ. ಆ ಕೇದಾರನಾಥೇಶ್ವರ ದ್ವಿತೀಯ ಮಂಟಪದ ಗರ್ಭಗುಡಿಯಲ್ಲಿ ಪ್ರತಿಷ್ಠೆಗೊಂಡಿದ್ದಾನೆ.
ಇಲ್ಲೊಂದು ವಿಶೇಷ ಪದ್ಧತಿಯನ್ನು ನಾನು ಕಂಡೆ. ಸಾಮಾನ್ಯವಾಗಿ ದಕ್ಷಿಣ ಭಾರತದಲ್ಲಿ ನಾವು ಯಾವುದೇ ದೇವರ ವಿಗ್ರಹಗಳನ್ನಾಗಲಿ ಅಥವ ಲಿಂಗವನ್ನಾಗಲಿ ಹಸ್ತದಿಂದ ಸ್ಪರ್ಶಿಸುವುದಿಲ್ಲ. ಅದರೆ ಅಲ್ಲಿ ದೇವರಿಗೆ ನಮಸ್ಕರಿಸಿ ಹೊರಬರುತ್ತಿದ್ದಾಗ ಪುರೋಹಿತರು ನನ್ನನ್ನು ಕೈ ಹಿಡಿದು ನಿಲ್ಲಿಸಿದರು. ಕೇದಾರನಾಥ ಲಿಂಗದ ಮೇಲೆ ನೀರು ಮತ್ತು ಹಾಲನ್ನು ಸುರಿದು, ಲಿಂಗವನ್ನು ಕೈಯಿಂದ ಉಜ್ಜಬೇಕೆಂದು ಹೇಳಿದರು. ನನ್ನ ಆಶ್ಚರ್ಯಚಕಿತ ಮುಖವನ್ನು ನೋಡಿ ಪುರೋಹಿತರು, ಹಾಗೆ ಅಭಿಷೇಕ ಮಾಡಿ ಉಜ್ಜುವುದರಿಂದ ನಮ್ಮ ಹಸ್ತದಲ್ಲಿನ ರೇಖೆಗಳು ಬದಲಾಗುತ್ತದೆಂದೂ, ಅದೃಷ್ಟದ ಮಾರ್ಗ ತೆರೆಯುತ್ತದೆಂದೂ ಹೇಳಿದರು. ನಾನು ಅವರು ಹೇಳಿದಂತೆ ಅಭಿಷೇಕ ಮಾಡಿ ಹೊರ ಬಂದೆ.

ಇನ್ನೊಂದು ಕುತೂಹಲದ ವಿಷಯ ಕೇದಾರನಾಥದಲ್ಲಿ ನೋಡಿದೆ. ದೇವಸ್ಥಾನದ ಹಿಂದೆ ಒಂದು ದೊಡ್ಡ ಬಂಡೆ ಇದೆ. ಇಪ್ಪತ್ತು ಅಡಿ ಅಗಲ ಹಾಗೂ ಹನ್ನೆರಡು ಅಡಿ ಎತ್ತರ. ಆ ಬಂಡೆಯನ್ನು ’ಭೀಮಶಿಲಾ’ ಎಂದು ಕರೆಯುತ್ತಾರೆ. ಆ ಭೀಮಶಿಲಾ ಬಂಡೆ ಅಲ್ಲಿಗೆ ಬಂದು ನಿಂತುಕೊಂಡುದ್ದರ ಹಿಂದೆ ಒಂದು ವಾಸ್ತವ ಘಟನೆ ಇದೆ. ಹನ್ನೆರಡು ವರ್ಷಗಳ ಹಿಂದೆ ಅಂದರೆ 2013 ರ ಜೂನ್ ತಿಂಗಳ 16ನೇ ತಾರೀಕು ಒಂದು ದುರ್ದಿನ! ಏಕೆಂದರೆ ಅಂದು ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ಮೇಘ ಸ್ಫೋಟವಾಗಿ (cloud buster) ಧಾರಾಕಾರ ಮಳೆ ಸುರಿಯಿತು. ಈ ಮಳೆಯ ರಭಸಕ್ಕೆ ದೊಡ್ಡ ಪ್ರವಾಹವೇ ಉಂಟಾಯಿತು. ಹಿಮಾಲಯ ಪರ್ವತಗಳಿಂದ ಕಲ್ಲು ಬಂಡೆಗಳು ಉರುಳುರುಳಿ ಬಂದವು. ಹಾಗೆ ಉರುಳಿ ಬಂದ ಬಂಡೆಯೊಂದು ದೇವಸ್ಥಾನದ ಹಿಂಬದಿಗೆ ಬಂದು ನಿಂತುಕೊಂಡಿತು. ಅದಾದ ನಂತರ ನಡೆದದ್ದು ಒಂದು ದೊಡ್ಡ ಪವಾಡ! ಕಲ್ಲು ಬಂಡೆಗಳ ಹೊಡೆತಕ್ಕೆ ಭಯಂಕರ ಪ್ರವಾಹಕ್ಕೆ ಸಿಲುಕಿ ಊರಿಗೆ ಊರೇ ನಾಶವಾಯುತು. ಅಂಗಡಿ ಮುಂಗಟ್ಟುಗಳು, ಮನೆ-ಮಠಗಳು ಕೊಚ್ಚಿಕೊಂಡು ಹೋದವು. ಊಹಾತೀತವಾದಷ್ಟು ಪ್ರಾಣಹಾನಿಯೂ ಆಯಿತು. ಆದರೆ ಭೀಮಶಿಲಾ ಅಡ್ಡ ನಿಂತುದರಿಂದ ದೇವಸ್ಥಾನಕ್ಕೆ ಯಾವ ಹಾನಿಯೂ ಆಗಲಿಲ್ಲ. ಈಗಲೂ ಆ ಭೀಮಶಿಲಾ ಹಾಗೆಯೇ ನಿಂತಿದೆ. ಕೇದಾರನಾಥನ ದರ್ಶನ ಪೂಜೋಪಚಾರಗಳ ನಂತರ ಭಕ್ತರು ಈ ಭೀಮಶಿಲಾವನ್ನು ನೋಡಿ, ಸ್ಪರ್ಷಿಸಿ ಪೂಜೆ ಸಲ್ಲಿಸುತ್ತಾರೆ.
ಒಂದೇ ಭಾರತ! ಒಂದೇ ದೇವರು! — ಆದರೆ ನಂಬಿಕೆಗಳು ಮತ್ತು ಆಚರಣೆಗಳು ಎಷ್ಟು ವಿಭಿನ್ನ! ಎಷ್ಟು ಸುಂದರ!! ಎಷ್ಟು ಅರ್ಥಪೂರ್ಣ!!! ಇನ್ನುಳಿದ ಜ್ಯೋತಿರ್ಲಿಂಗಗಳನ್ನು ಮುಂದಿನ ಸಂಚಿಕೆಗಳಲ್ಲಿ ನೋಡೋಣ !!