Sunday, July 20, 2025
Sunday, July 20, 2025

ಸಂಚಾರದಲ್ಲಿ ಸರಿಗಮ....

ಗೀತಯಾತ್ರೆ ಎಂಬುದು ಹೊಸ ಪರಿಕಲ್ಪನೆಯೇನಲ್ಲ. ಪ್ರವಾಸಿಗನು ತನ್ನ ಯಾತ್ರೆಯನ್ನು ನೋಡುವ ದೃಷ್ಟಿ ಬೇರೆ. ಆದರೆ ಒಬ್ಬ ಗಾಯಕ ಅಥವಾ ಸಂಗೀತ ರಸಜ್ಞ ತನ್ನ ಇಡೀ ಯಾತ್ರೆಯನ್ನು ಗೀತಯಾತ್ರೆಯಾಗಿಸಿಕೊಳ್ಳುತ್ತಾನೆ. ಅವನು ಕಾಣುವ ಪ್ರತಿ ಜಾಗದಲ್ಲೂ ಅವನಿಗೆ ಸಪ್ತ ಸ್ವರಗಳು ಕೇಳಿಸುತ್ತವೆ. ದನಿ ಬಿಚ್ಚಿ ಹಾಡುತ್ತಾನೆ. ನಾದ-ನಿನಾದದಿಂದ ಪುಳಕಿತನಾಗುತ್ತಾನೆ.

  • ತೇಜಸ್ ಎಚ್ ಬಾಡಾಲ

ಪ್ರವಾಸಕ್ಕೂ ಸಂಗೀತಕ್ಕೂ ಅವಿನಾಭಾವ ಸಂಬಂಧ. ಪ್ರವಾಸವು ಯಾತ್ರೆಯಾಗುವುದರಲ್ಲಿ ಸಂಗೀತದ ಪಾತ್ರವೇ ದೊಡ್ಡದು. ಚರೈವೇತಿ ಚರೈವೇತಿ ಎಂದು ಕಾರು ಬಸ್ಸು ಇತ್ಯಾದಿಗಳಲ್ಲಿ ಎಲ್ಲೆಲ್ಲೂ ಸುತ್ತೋಣವೆಂದು ಹೋಗುವ ನಾವುಗಳು ಪ್ರಯಾಣ ನೀರಸವಾಗುತ್ತಿದೆಯೆಂದು ಅನಿಸಿದಾಗಲೆಲ್ಲಾ ಹಾಡುಗಳನ್ನೇ ಹಾಡೋದು! ಅಂತ್ಯಾಕ್ಷರಿಯನ್ನೇ ಆಡೋದು!

ಯಾವುದೇ ತೀರ್ಥಕ್ಷೇತ್ರಕ್ಕೆ ನಡೆದು ತೆರಳುವ ಭಕ್ತಾದಿಗಳಲ್ಲಿ ಶಕ್ತಿಯನ್ನು ತುಂಬುವುದೇ ಮೀಟಲ್ಪಡುತ್ತಿರುವ ತಂತಿಯ ನಾದ. ವೇಗವನ್ನು ಕೊಡುವುದೇ ತಾಳವಾದ್ಯದ ಲಯ. ಅಗೋ ಬಂದೇಬಿಟ್ಟಿತು ಸ್ಥಳ, ಆ ದೇವನು ನನ್ನನ್ನು ನೋಡಲಿ ಎಂಬ ಹಂಬಲವನ್ನು ಕೊಡುವುದೇ ಆ ಕೀರ್ತನೆಯ ಸಾಹಿತ್ಯ. ವಾಗ್ಗೇಯಕಾರನು ಅದರಲ್ಲಿ ನಿಕ್ಷೇಪ ಮಾಡಿರುವ ಭಾವ!

tiruvayyur

ಹೀಗಿರುವಾಗ ಕರ್ಣಾಟಕ ಸಂಗೀತದ ಹೃದ್ಭಾಗ ಎನಿಸುವಂಥ ತಮಿಳುನಾಡಿನ ತಿರುವಯ್ಯಾರಿಗೆ ನಾವು ಪ್ರವಾಸ ಕೈಗೊಂಡಾಗ ಅದೆಷ್ಟು ಸರಾಗವಾಗಿರಬೇಡ? ಈ ಗೀತಯಾತ್ರೆಗೆ ಹೊರಟಿದ್ದದ್ದು ನಮ್ಮ ಸಂಗೀತ ಗುರುಕುಲ, ನಮ್ಮ ಗುರುಗಳೊಂದಿಗೆ. ರಸ್ತೆಯಲ್ಲಿ ಬರುವ ರಿಫ್ಲೆಕ್ಟರ್‌ಗಳ ಮೇಲೆ ನಮ್ಮ ಕಾರಿನ ಚಕ್ರ ಹಾಯ್ದಾಗ ಅದು ಹಾಕುವ ತಾಳಕ್ಕೂ, ಅರೆತೆರೆದಿರುವ ಕಿಟಕಿಯಲ್ಲಿ ಹೊಕ್ಕುವ ಸುಂಯ್ ಎಂಬ ಗಾಳಿಯ ರಾಗಕ್ಕೂ, ಗುರುಗಳ ಅನುಭವಗಳ ಶ್ರುತಿಗೂ! ಆಹಾ! ಪ್ರವಾಸವೇ ರಸದೌತಣ. ಸತ್ಯಮಂಗಲದಲ್ಲಿ ಕಂಡುಬಂದ ಜಿಂಕೆಗಳನ್ನು ನೋಡಿದೊಡನೆಯೇ ರಾಮಾಯಣವೇ ನೆನಪಾಗಿ, ಅವರ ರಚನೆಗಳಲ್ಲಿನ ಸ್ವಾರಸ್ಯವನ್ನೇ ಸವಿದು ಸವಿದು ತಂಜಾವೂರು ಸೇರಿದೆವು. ತಂಜಾವೂರಿಗೇನು ಸ್ವಾಮಿ! ಎಲ್ಲಾ ರೀತಿಗಳಲ್ಲೂ ಉತ್ಕೃಷ್ಟತೆಯನ್ನು ಕಂಡಿದ್ದ ಊರದು. ಅಲ್ಲಿನ ಪೆರಿಯ ಕೋವಿಲ್ ಅಥವಾ ಬೃಹದೀಶ್ವರನ ದೇವಳವನ್ನು ನೋಡಿ ಮೂಕವಿಸ್ಮಿತರಾಗಿ ನಂತರ ಪ್ರವಾಸದ ಮುಖ್ಯಘಟ್ಟಕ್ಕೆ ತೆರಳಿದ್ದು.

ತಂಜಾವೂರಿನ ಮೂಲಕ ಕಾವೇರಿಯು ಐದು ಉಪನದಿಗಳಾಗಿ ಹರಿದು ಬಂದು ಸುತ್ತುವರೆದಿರುವ ಒಂದು ಪುಟ್ಟ ಹಳ್ಳಿ- ತಿರುವಯ್ಯಾರು. ಇಲ್ಲಿನ ಸಂಗಮಗಳು ವೈಶಿಷ್ಟ್ಯ ಗಮನಿಸಿ. ನಿಜಾಮರ ಆಳ್ವಿಕೆಯ ಕಾಲದಲ್ಲಿ ತಮಿಳುನಾಡಿನಲ್ಲಿ ತೆಲುಗು ಬ್ರಾಹ್ಮಣ ಕುಟುಂಬವೊಂದರಲ್ಲಿ ಜನಿಸಿ ಕರ್ಣಾಟಕ ಸಂಗೀತಗ್ರಂಥದಲ್ಲಿ ಸುವರ್ಣ ಪುಟವಾದವರು ನಮ್ಮ ತ್ಯಾಗರಾಜರು! ಇನ್ನೊಂದು ವಿಶೇಷವೆಂದರೆ ಈಗಿರುವ ತ್ಯಾಗರಾಜ ಸಮಾಧಿ ಸ್ಥಳವನ್ನು ಕಟ್ಟಿಸಿ ಪ್ರತಿವರ್ಷ ಆರಾಧನೆ ಮಹೋತ್ಸವಗಳು ಜರುಗುವಂತೆ ವ್ಯವಸ್ಥೆ ಮಾಡಿದ್ದು ಬೆಂಗಳೂರು ನಾಗರತ್ನಮ್ಮನವರು!

tiruvayyur new

ನನಗೋ, ‘ತ್ಯಾಗರಾಜರ ಊರು; ಎಲ್ಲಿ ನೋಡಿದರೂ ರಾಮನಾಮ ಇರುತ್ತದೋ ಏನೋ, ಅಲ್ಲಿ ಎಲ್ಲರೂ ಸಂಗೀತ ವಿದ್ವಾಂಸರಾಗಿರುತ್ತಾರೋ ಏನೋ!’ ಎಂಬ ಭಾವ. ಆದರೆ ಆ ಹಳ್ಳಿಯಲ್ಲಿ ಒಂದೆರಡುಮೂರು ಬೀದಿಗಳನ್ನು ಬಿಟ್ಟರೆ ಇನ್ನೆಲ್ಲೂ ಸಂಗೀತದ ಛಾಯೆ ಕಾಣದು. ಆ ಬೀದಿಗಳಲ್ಲೋ ಚತುಶ್ಚಕ್ರ ವಾಹನ ಹೋಗುವುದೇ ಕಷ್ಟಸಾಧ್ಯ. ಪ್ರತೀ ತ್ಯಾಗರಾಜರ ಆರಾಧನೆಯ ದಿವಸದಂದು ವಿಶ್ವದ ಎಲ್ಲಾ ಪ್ರಸಿದ್ಧ ಸಂಗೀತ ವಿದ್ವಾಂಸರೂ ಇಲ್ಲಿಯೇ ಇರುತ್ತಾರೆ; ಅದರಿಂದ ಈ ಊರು ಬಹುಶಃ ವರ್ಷವಿಡೀ ಕಂಗೊಳಿಸುತ್ತದೆ. ಈ ಊರು ವಿಶ್ವಕ್ಕೆ ಕೊಟ್ಟ ತ್ಯಾಗರಾಜರಿಂದ ಸಂಗೀತ ವಿದ್ವಾಂಸರು ಜನ್ಮವೆಲ್ಲಾ ಕಂಗೊಳಿಸುತ್ತಾರೆ! ಈ ಊರಿಗೆ ಹೋಗಲಿಚ್ಛಿಸುವವರು ತಂಜಾವೂರಿನಲ್ಲೇ ವಸತಿಗೆ ಏರ್ಪಾಡುಗಳನ್ನು ಮಾಡಿಕೊಂಡರೆ ಒಳಿತು. ತಿರುವಯ್ಯಾರಿಗೇನಿದ್ದರೂ ಅಲ್ಲಿಂದ ಬಂದು, ದಿನವೆಲ್ಲಾ ಹಾಡಿಕೊಂಡು ಆ ಪುಣ್ಯಾತ್ಮನ ಸಾನ್ನಿಧ್ಯದಲ್ಲಿ ಸಾಫಲ್ಯ ಪಡೆದು ಹೋಗಬೇಕಷ್ಟೆ. ಮನಕ್ಕೆ ಸಂಗೀತದ ರಸದೌತಣವೇನೋ ಆಗುತ್ತದೆ. ಆತ್ಮಕ್ಕೆ ಭಕ್ತಿ, ಹೊಟ್ಟೆಗೆ ಆಹಾರ ಬೇಕೆಂದರೆ- ಒಂದೋ ನಿಮಗೆ ಗೊತ್ತಿರುವ ಕುಟುಂಬ ಯಾವುದಾದರೂ ಇರಬೇಕು ಹಾಗೂ ಅವರಿಗೆ ಅತಿಥಿ ಸತ್ಕಾರ ಮಾಡುವ ಸದ್ಬುದ್ಧಿ ಇರಬೇಕು (ಆ ಊರಿನಲ್ಲಂತೂ ಅಂಥ ಕುಟುಂಬಗಳಿಗೆ ಕೊರೆತೆ ಇಲ್ಲ) ಇಲ್ಲವೇ ಅಲ್ಲೇ ಇರುವ ನಾಲ್ಕೈದು ಸಸ್ಯಾಹಾರಿ ಹೋಟೆಲುಗಳಲ್ಲಿ ನಿರ್ಭೀತಿಯಿಂದ ತಿನ್ನಬೇಕು.

ತ್ಯಾಗರಾಜರ ಸಮಾಧಿ ಸ್ಥಳವಿರುವುದು ಕಾವೇರಿಯ ತಟದಲ್ಲೇ. ನಾವು ಹೋದ ಕಾಲ ಬೇಸಗೆ. ವಾತಾವರಣದಲ್ಲಿ ಕಾವು ಏರಿ ಪಾಪ ನದಿಯು ಬತ್ತಿ ಹೋಗಿತ್ತು. ಯಾವ ಮಟ್ಟಕ್ಕೆ ಎಂದರೆ ಹೋಮ ಹವನಾದಿಗಳಿಗೆ ಶ್ರೇಷ್ಠವಾದಂ ನದಿಯ ಮರಳನ್ನು ಅದರ ಗರ್ಭದಿಂದಲೇ ತರುವಷ್ಟು!

ಆ ಪ್ರಾಂಗಣದಲ್ಲಿ ನಡೆದಾಡುವುದೇ ಒಂದು ಸೌಖ್ಯದನುಭವ. ಮರಳಿನಲ್ಲಿ ಸರಕ್ಕನೇ ಮುಳುಗಿಬಿಡುವ ಕಾಲುಗಳನ್ನು ಲೆಕ್ಕಿಸದೆ ದೃಷ್ಟಿಯೆಲ್ಲವೂ ಆ ತ್ಯಾಗರಾಜರ ಸನ್ನಿಧಿಯ ಮೇಲೇ ಇರುತ್ತದೆ. ಆ ವಿಶಾಲ ದೇವಾಲಯದೊಳಗಡೆ ಮೂರು ಹಂತಗಳು. ಹೊರಗೆ ಒಂದು ದೊಡ್ಡ ಅಂಗಳ. ಅಲ್ಲಿ ತ್ಯಾಗರಾಜರ ಅದ್ಭುತ ರಚನೆಗಳನ್ನೆಲ್ಲ ಗೋಡೆಯ ಮೇಲೆ ಕೆತ್ತಿಸಿದ್ದಾರೆ. ಇನ್ನೂ ಮುಂದೆ ಹೋದರೆ ಅಲ್ಲಿ ತ್ಯಾಗರಾಜರ ಶಿಷ್ಯರ ಸಮಾಧಿಗಳು, ಅವರು ಪೂಜಿಸುತ್ತಿದ್ದ ಪರಿವಾರಸಮೇತ ಶ್ರೀರಾಮನ ದಿವ್ಯ ಮೂರ್ತಿ. ಅದರೊಳಗೆ ತ್ಯಾಗರಾಜರ ಸಮಾಧಿ ಸ್ಥಳ. ನಾವುಗಳು ಅವರ ಶಿಷ್ಯರ ಸಮಾಧಿಗಳಿದ್ದ ಸ್ಥಳದಲ್ಲಿ ಕುಳಿತು ಸಂಗೀತಧ್ಯಾನದಲ್ಲಿ ತೊಡಗಿದೆವು. ಓರ್ವ ಪತ್ರಕರ್ತನಿಗೆ ಪ್ರಧಾನಿಯೊಂದಿಗೆ ವಿದೇಶಕ್ಕೆ ಹೋಗುವುದು ಯಾವ ರೀತಿಯ ಅವಕಾಶವೋ, ಸಂಗೀತಗಾರನಿಗೆ ತ್ಯಾಗರಾಜರ ಆ ಪುಣ್ಯಸ್ಥಳದಲ್ಲಿ ಕುಳಿತು ಹಾಡುವುದು ಅಂಥದ್ದೇ ಅವಕಾಶ.

ಒಟ್ಟಿನಲ್ಲಿ ಈ ಗೀತಯಾತ್ರೆಯನ್ನು ನಾವು ಸಂಗೀತತ್ರಿಮೂರ್ತಿಗಳಲ್ಲಿ ಪ್ರಮುಖರಾದ ಶ್ರೀ ತ್ಯಾಗರಾಜರ ಆಲಯದಲ್ಲಿ ಕುಳಿತು ಹಾಡಿ ಉದ್ಘಾಟಿಸಿದ್ದು ಅನನ್ಯ ಅನುಭವ.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Previous

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

ವಿಹಂಗಮ ಸಂಗಮ

Read Next

ವಿಹಂಗಮ ಸಂಗಮ