ಪ್ರವಾಸಿಗನ ಬಳಿ ಟ್ರಾವೆಲ್ ಇನ್ಶೂರೆನ್ಸ್ ಇಲ್ಲ ಅಂದರೆ ಹೇಗೆ?
ನಿಮ್ಮ ರೆಗ್ಯುಲರ್ ಇನ್ಶೂರೆನ್ಸ್ ಭಾರತದಲ್ಲಿ ನಿಮ್ಮ ವೈದ್ಯಕೀಯ ಖರ್ಚು ವೆಚ್ಚ ಭರಿಸುತ್ತವೆ. ಆದರೆ ಅಂಥ ಇನ್ಶೂರೆನ್ಸ್ ಬೇರೆ ದೇಶದಲ್ಲಿ ನಡೆಯಬೇಕಲ್ಲ! ಈ ಥರದ ಪರಿಸ್ಥಿತಿಯಲ್ಲಿ ನಿಮ್ಮ ಸಹಾಯಕ್ಕೆ ಬರೋದು ಟ್ರಾವೆಲ್ ಇನ್ಸೂರೆನ್ಸ್. ಇದು ನಿಮ್ಮ ಹಲವಾರು ರಿಸ್ಕ್ ಗಳನ್ನು ನಷ್ಟಗಳನ್ನು ತಪ್ಪಿಸಿ ನಿಮ್ಮ ಹಣ ಉಳಿಸೋ ಕೆಲಸವನ್ನು ಮಾಡುತ್ತದೆ.
ವಿದೇಶ ಪಯಣ ಅಂದರೆ ಯಾರಿಗೆ ಬೇಡ ಹೇಳಿ? ಓಕೆ. ನಿಮಗೆ ವಿದೇಶಕ್ಕೆ ಹೋಗುವ ಐಡಿಯಾ ಇದೆಯಾ? ಥಯ್ಲೆಂಡ್ ನ ಬೀಚ್ ಮುಂದೆ ಕುಳಿತುಕೊಳ್ಳುವ ಆಸೆ ಇದೆಯಾ? ಅಥವಾ ಯುರೋಪಿನ ದಾರಿಗಳಲ್ಲಿ ಎಲ್ಲವನ್ನೂ ಮರೆತು ನಡೆದಾಡುವ ಆಸೆ ಇದೆಯಾ? ಮೊರೊಕ್ಕೊದಲ್ಲಿನ ಮಾರ್ಕೆಟ್‌ಗಳಲ್ಲಿ ಓಡಾಡೋ ಕನಸಿದೆಯಾ? ಎಲ್ಲರಿಗೂ ಪ್ರವಾಸ ಅಂದರೆ ಖುಷಿ, ಪ್ರತಿದಿನ 10 ಗಂಟೆಗೆ ಏಳೋರು, ಟ್ರಿಪ್‌ನ ದಿನ ಬೆಳಿಗ್ಗೆ 4 ಗಂಟೆಗೆ ಎದ್ದು ಬ್ಯಾಗ್ ಮುಂದೆ ಕೂತಿರುತ್ತಾರೆ. ಆದರೆ, ಎಷ್ಟೋ ಸಲ ಅದೇ ಪ್ರಯಾಣ ನಮಗೆಲ್ಲ ತೊಂದರೆ ತಂದೊಡ್ಡೋದೂ ಇದೆ ಅಲ್ವಾ?
ಉದಾಹರಣೆಗೆ ಫ್ಲೈಟ್‌ನಿಂದ ಹಿಡಿದು ರೂಮ್‌ನವರೆಗೆ ಎಲ್ಲವನ್ನೂ ಬುಕ್ ಮಾಡಿರುತ್ತೀರಿ. ಎಲ್ಲವೂ ಸರಿಯಾಗೇ ಇರುತ್ತೆ. ಆದರೆ ಟ್ರಿಪ್‌ಗೆ ಹೋಗುವುದಕ್ಕೆ ಕೆಲದಿನಗಳು ಇರುವ ಸಮಯದಲ್ಲೇ ಮನೆಯಲ್ಲಿ ಯಾರಿಗೊ ಹುಷಾರು ತಪ್ಪಿ ಅಥವಾ ನಿಮಗೆ ಏನೋ ಆಗಿ ಟ್ರಿಪ್ ಕ್ಯಾನ್ಸಲ್ ಆಗಿಬಿಡುತ್ತೆ. ಹೀಗಾದಾಗ ಆಗುವ ನಷ್ಟ ಎಷ್ಟು ಎನ್ನುವುದು ನಿಮ್ಮನ್ನು ಬಿಟ್ಟರೆ ಬೇರೆ ಯಾರಿಗೂ ಅಂದಾಜಿರುವುದಿಲ್ಲ. ಇನ್ನೂ ಕೆಲವೊಮ್ಮೆ ತಡವಾದ ಫ್ಲೈಟ್ ಅಥವಾ ಬ್ಯಾಗ್ ಕಳೆದುಕೊಂಡು ಎಷ್ಟೊಂದೆಲ್ಲ ಪರಿಪಾಟಲು ಅನುಭವಿಸಿ, ನಿಮ್ಮ ಕನಸಿನ ಟ್ರಿಪ್, ನಿಮಗೆ ದುಃಸ್ವಪ್ನವೂ ಆಗಬಹುದು. ಈ ಎಲ್ಲ ಸಂದರ್ಭಗಳಲ್ಲಿ ನಿಮ್ಮ ಹತ್ತಿರ ಒಂದು ಟ್ರಾವೆಲ್ ಇನ್ಶೂರೆನ್ಸ್ ಇದ್ದರೆ, ನಿಮ್ಮ ಕೈ ಬಿಟ್ಟು ಹೋಗುವ ಲಕ್ಷಾಂತರ ರುಪಾಯಿಗಳನ್ನು ಉಳಿಸಿಕೊಳ್ಳಬಹುದು.
ಟ್ರಿಪ್ ಕ್ಯಾನ್ಸಲ್ ಮಾಡುವುದರಿಂದ ಸುರಕ್ಷೆ
ಯಾವಾಗ ಎಲ್ಲಿ ಏನಾಗುತ್ತೆ ಅನ್ನುವುದು uncertainity. ಹೇಳೋಕೆ ಸಾಧ್ಯವಿಲ್ಲ. ಕೆಲಸದ ಒತ್ತಡವೋ, ಮನೆಯಲ್ಲಿ ಏನೋ ತೊಂದರೆಯೋ, ಮತ್ತೇನೋ ಸಮಸ್ಯೆಯೋ ಆಗಿ ಯಾವುದೋ ಕಾರಣದಿಂದ ಟ್ರಿಪ್‌ಗೆ ಹೋಗಲು ಆಗಲೇ ಇಲ್ಲ ಅಂದುಕೊಳ್ಳಿ. ಇಂಥ ಸಮಯದಲ್ಲಿ ನಿಮ್ಮ ಹಣ ರೀಫಂಡ್ ಆಗೋದೇ ಇಲ್ಲ. ಒಮ್ಮೆಲೇ ಲಕ್ಷಾಂತರ ರುಪಾಯಿ ನಷ್ಟ.. ಅದರಲ್ಲಿ ಎಷ್ಟು ತಿಂಗಳಿನಿಂದ ಟ್ರಿಪ್‌ಗೆ ಅಂತಾನೇ ಉಳಿಸಿಟ್ಟಿದ್ದ ಹಣವಿತ್ತೋ? ಎಷ್ಟು ಕ್ರೆಡಿಟ್ ಕಾರ್ಡ್‌ನಲ್ಲಿ ಇಎಮ್‌ಐ ಇತ್ತೋ? ಏನು ಮಾಡಲು ಸಾಧ್ಯ? ಏನೂ ಸಾಧ್ಯವಿಲ್ಲ. ನಷ್ಟ ಅನುಭವಿಸಲೇಬೇಕು.
ಇಂಥ ಸಮಯದಲ್ಲಿ ಯಾವುದಾದರೂ ಒಂದು ಟ್ರಾವೆಲ್ ಇನ್ಶೂರೆನ್ಸ್ ಇದ್ದಿದ್ದರೆ, ಎಲ್ಲ ನಷ್ಟವೂ ಅದರಿಂದಲೇ ಭರಿಸಬಹುದಿತ್ತು.

ವಿದೇಶದಲ್ಲಿನ ವೈದ್ಯಕೀಯ ತುರ್ತು ಪರಿಸ್ಥಿತಿ
ಮನುಷ್ಯನಿಗೆ ಆರಾಮ ತಪ್ಪುವುದು ಕಾಮನ್. ಅದರೆ ಅದು ವಿದೇಶದಲ್ಲಾದರೆ? ಎಲ್ಲೆಡೆಯೂ ಮನೆ ಪಕ್ಕದ ಡಾಕ್ಟರ್ ಹೇಗೆ 100 -150 ರುಪಾಯಿಯಲ್ಲಿ ನಮ್ಮನ್ನು ಹುಷಾರು ಮಾಡುತ್ತರೋ ಹಾಗೆ ಇರಬೇಕಲ್ವಾ? ನೀವು ಏನಾದರೂ ಅಮೆರಿಕದಲ್ಲೋ ಅಥವಾ ಸ್ವಿಟ್ಜರ್ಲೆಂಡ್‌ನಲ್ಲೋ ಇದ್ದರೆ, ನಿಮ್ಮ ವೈದ್ಯಕೀಯ ಖರ್ಚು ಎಷ್ಟು ದುಬಾರಿ ಆಗಬಹುದು ಎಂದು ಊಹಿಸೋದೂ ಅಸಾಧ್ಯ.
ನಿಮ್ಮ ರೆಗ್ಯುಲರ್ ಇನ್ಶೂರೆನ್ಸ್ ಭಾರತದಲ್ಲಿ ನಿಮ್ಮ ವೈದ್ಯಕೀಯ ಖರ್ಚು ವೆಚ್ಚ ಭರಿಸುತ್ತವೆ. ಆದರೆ ಅಂಥ ಇನ್ಶೂರೆನ್ಸ್ ಬೇರೆ ದೇಶದಲ್ಲಿ ನಡೆಯಬೇಕಲ್ಲ! ಈ ಥರದ ಪರಿಸ್ಥಿತಿಯಲ್ಲಿ ನಿಮ್ಮ ಸಹಾಯಕ್ಕೆ ಬರೋದು ಟ್ರಾವೆಲ್ ಇನ್ಸೂರೆನ್ಸ್. ಇದು ನಿಮ್ಮ ಹಲವಾರು ರಿಸ್ಕ್ ಗಳನ್ನು ನಷ್ಟಗಳನ್ನು ತಪ್ಪಿಸಿ ನಿಮ್ಮ ಹಣ ಉಳಿಸೋ ಕೆಲಸವನ್ನು ಮಾಡುತ್ತದೆ.
ಬ್ಯಾಗ್ ಕಳೆದರೆ!
ಬಸ್ ನಲ್ಲಿ ಅಥವಾ ಟ್ರೇನ್‌ನಲ್ಲಿ ಹೋಗಬೇಕಾದರೆ, ನಿಮ್ಮ ಬ್ಯಾಗ್‌ಗಳನ್ನು ನಿಮ್ಮ ಹತ್ತಿರವೇ ಇಟ್ಟುಕೊಂಡಿತ್ತೀರಿ. ಮಾರ್ಗ ಮಧ್ಯದಲ್ಲಿ ನಿದ್ದೆ ಏನಾದರೂ ಬಂದರೆ, ಎದ್ದು ನಮ್ಮ ಬ್ಯಾಗ್‌ಗಳ ಸಂಖ್ಯೆ ಸರಿಯಾಗಿರುವುದನ್ನು ಖಾತ್ರಿ ಪಡಿಸಿಕೊಳ್ಳುತ್ತೀರಿ. ಕೆಲವೊಂದಿಷ್ಟು ಜನರಂತೂ ಬ್ಯಾಗ್ ಮೇಲೆ ಇಟ್ಟಿದ್ದ ಕಣ್ಣುಗಳನ್ನು ಆಕಡೆ ಈ ಕಡೆ ಹೊರಳಿಸುವುದಿಲ್ಲ. ಆದರೆ ವಿಮಾನದಲ್ಲಿ ಹೊರಟಾಗ ನಿಮ್ಮ ಎಲ್ಲ ಬ್ಯಾಗ್‌ಗಳು ನಿಮ್ಮ ಕೈಯಲ್ಲಿ ಇರುವುದಿಲ್ಲ. ಒಂದು ಚಿಕ್ಕ ಬ್ಯಾಗ್ ಬಿಟ್ಟರೆ ನಿಮ್ಮಕೈಯಲ್ಲಿ ಏನೂ ಇಟ್ಟುಕೊಳ್ಳೋದಕ್ಕೆ ಅವಕಾಶ ಇರುವುದಿಲ್ಲ. ನಿಮ್ಮ ಬ್ಯಾಗ್‌ಗಳು ನಿಮಗೆ ಗೊತ್ತಿರದೆ ನಿಮ್ಮನ್ನು ಹಿಂಬಾಲಿಸುತ್ತಿರುತ್ತದೆ. ಆದರೆ ನಸೀಬ್ ಕೆಟ್ಟಾಗ ನಿಮ್ಮ ಬ್ಯಾಗ್ ನಿಮ್ಮ ಕೈ ಸೇರುವುದೇ ಇಲ್ಲ.
ನೀವೇನೇ ಮಾಡಿದರೂ, ಯಾವ ಅಧಿಕಾರಿಗಳ ಜತೆಗೆ ಮಾತನಾಡಿದರೂ ನಿಮಗೆ ನಿಮ್ಮ ಬ್ಯಾಗ್ ಸಿಗುವುದೇ ಇಲ್ಲ. ಅಂಥ ಸಮಯದಲ್ಲಿ ತಲೆಮೇಲೆ ಕೈ ಹೊತ್ತುಕೊಂಡು ಕೂತ್ಕೊಬೇಡಿ. ನಿಮ್ಮ ಹತ್ತಿರ ಒಳ್ಳೆಯ ಟ್ರಾವೆಲ್ ಇನ್ಶೂರೆನ್ಸ್ ಇದ್ದರೆ, ನಿಮ್ಮ ಬ್ಯಾಗ್ ಬರುವವರೆಗೆ ಅಲ್ಲಿನ ನಿಮ್ಮ ಎಲ್ಲ ಖರ್ಚುಗಳಿಗೆ ಸ್ವಲ್ಪ ಹಣವನ್ನು ಇನ್ಶೂರೆನ್ಸ್ ಕಂಪನಿಯವರೇ ಪೂರೈಸುತ್ತಾರೆ.
ತಡವಾದ ಫ್ಲೈಟ್
ನಾವು ಟ್ರಿಪ್‌ಗೆ ಹೋಗಲು ಸಿದ್ಧರಾಗಿರುತ್ತೇವೆ. ಆದರೆ ಯಾವುದೋ ತಾಂತ್ರಿಕ ವಿಚಾರಕ್ಕೋ, ಹವಾಮಾನಕ್ಕೋ, ಯಾವುದೋ ದೇಶದಲ್ಲಿ ಯುದ್ಧ ನಡೆದ ಕಾರಣಕ್ಕೋ ವಿಮಾನ ಡಿಲೇ ಆಗುತ್ತದೆ. ಆಗ ನೀವು ಗಂಟೆಗಟ್ಟಲೆ ಏರ್ ಪೋರ್ಟ್‌ನಲ್ಲಿ ಕಾಯುತ್ತಾ ಕೂರಬೇಕು. ಆಗ ಅಲ್ಲಿನ ಊಟ, ಉಳಿಯುವುದಕ್ಕೆ ಹಣ, ಹೀಗೆ ಕೆಲವು ಸೆಲೆಕ್ಟೆಡ್ ಖರ್ಚುಗಳನ್ನೂ ನಿಮ್ಮ ಒಂದು ಟ್ರಾವೆಲ್ ಇನ್ಶೂರೆನ್ಸ್ ಭರಿಸುತ್ತದೆ. ಚಿಂತೆ ಬಿಡಿ!
ಪಾಸ್ ಪೋರ್ಟ್ ಕಳೆದುಕೊಂಡ್ರೆ?
ಟ್ರಿಪ್ ಹೊರಟಾಗ ಮಾರ್ಗದಲ್ಲೆಲ್ಲೋ ನಿಮ್ಮ ಪಾಸ್ ಪೋರ್ಟ್ ಎಲ್ಲೋ ಕಳೆದು ಹೋದರೆ? ನೀವು ಕೇವಲ ಎಂಬೆಸಿಗಳ ಜತೆ ಮಾತನಾಡೋದಷ್ಟೇ ಅಲ್ಲ. ಹಲವಾರು ತಲೆನೋವುಗಳನ್ನೆಲ್ಲ ಹೊರಬೇಕು. ಅಂಥ ಸಮಯದಲ್ಲೂ ಟ್ರಾವೆಲ್ ಇನ್ಶೂರೆನ್ಸ್ ನಿಮಗೆ ಹೊಸ ಪಾಸ್ ಪೋರ್ಟ್ ಸಿಗುವವರೆಗೂ ನಿಮ್ಮ ಜತೆಯಲ್ಲಿರುತ್ತದೆ.
ಬೇರೇನೋ ಅವಘಡವಾದಾಗ!
ಕೆಲವೊಮ್ಮೆ ಆಕ್ಸಿಡೆಂಟ್‌ಗಳು ಆಗುತ್ತವೆ. ಇನ್ನೂ ಕೆಲವೊಮ್ಮೆ ಎಲ್ಲೋ ಹೋದಾಗ ಏನೋ ನೋಡುತ್ತಿರುವಾಗ ಗೊತ್ತಿಲ್ಲದೇ, ಏನನ್ನೋ ನಾವು ಮುಟ್ಟುತ್ತೇವೆ. ಅದು ಬಿದ್ದು ಒಡೆದು ಹೋಗುತ್ತದೆ. ಆಗ ನಮ್ಮ ಮೇಲೆ ದಂಡ ಬೀಳುತ್ತದೆ. ಆಗ ಏನು ಮಾಡುತ್ತೀರಿ? ಸಣ್ಣ ಮೊತ್ತದ ದಂಡ ಆದರೆ ನಡೆಯುತ್ತದೆ ಬಿಡಿ. ಆದರೆ ಅದು ದೊಡ್ಡ ಮೊತ್ತದ ಹಣವಾದರೆ ಏನು ಮಾಡುತ್ತೀರಿ? ಅಂಥ ಸಮಯದಲ್ಲಿ ನಿಮ್ಮ ಹತ್ತಿರ ಟ್ರಾವೆಲ್ ಇನ್ಶೂರೆನ್ಸ್ ಇದ್ದರೆ, ಯಾವುದೇ ಯೋಚನೆ ಇಲ್ಲದೆ ಆರಾಮವಾಗಿ ಇರಬಹುದು. ಏಕೆಂದರೆ ಇದೂ ಟ್ರಾವೆಲ್ ಇನ್ಶೂರೆನ್ಸ್‌ನ ಅಡಿಯಲ್ಲಿ ಬರುತ್ತದೆ.

ವಿಮಾನ ಹೈಜಾಕ್ ಆದರೆ?
ಈಗಿನ ಕಾಲದಲ್ಲಿ ವಿಮಾನ ಹೈಜಾಕ್ ಮಾಡುವುದು ಅಷ್ಟೊಂದು ಸುಲಭವಲ್ಲ. ಆದರೆ, ಆರಾಮವಾಗಿ ಹಾಡು ಕೇಳುತ್ತಾ ಕಣ್ಣುಮುಚ್ಚಿರುತ್ತೀರಿ, ವಿಮಾನ ಗಾಳಿಯಲ್ಲಿ ಇರುತ್ತದೆ. ಆದರೆ ಒಮ್ಮೆಲೇ ಯಾರೋ ಇಬ್ಬರು ಮೂವರು ಇದ್ದು ನಿಂತು, ʼಹ್ಯಾಂಡ್ಸ್ ಅಪ್, ಈಗ ನಾವು ವಿಮಾನವನ್ನು ಹೈಜಾಕ್ ಮಾಡುತ್ತಿದ್ದೇವೆ, ಯಾರು ಸದ್ದು ಮಾಡಂಗಿಲ್ಲ’ ಎಂದರೆ? ಬಸ್ ಅಥವಾ ಟ್ರೇನ್‌ನಲ್ಲಿ ಇದ್ದರೆ, ಅದು ನಿಧಾನವಾಗಿ ಹೊರಟಾಗ ಕಿಟಕಿಯಿಂದ ಜಿಗಿದು ಪ್ರಾಣ ಉಳಿಸಿಕೊಳ್ಳಬಹುದು. ಅಥವಾ ಎಲ್ಲಾದರೂ ಪೊಲೀಸ್ ಕಂಡರೆ ನಮ್ಮದೇ ಫೋನ್‌ನಿಂದ ಪೊಲೀಸ್‌ಗೆ ಹೇಗಾದರೂ ತಿಳಿಸಬಹುದು. ಆದರೆ, ವಿಮಾನದಲ್ಲಿ ಏನು ಮಾಡುತ್ತೀರಿ? ಪ್ರಾಣ ಹೋಗೋ ಪ್ರಸಂಗ ಬಂದರೆ ಮುಂದಿನ ಮಾತೇ ಇಲ್ಲ ಬಿಡಿ. ಆದರೆ ಅದೃಷ್ಟವಶಾತ್ ನೀವು ಬಚಾವಾಗಿ ಬಂದಿರಿ ಅಂದುಕೊಳ್ಳೋಣ.ಆ ಸಮಯದಲ್ಲಿ ನಿಮ್ಮ ಆರೋಗ್ಯ ಮನಸ್ಥಿತಿ ಎಲ್ಲವೂ ಕೆಡಬಹುದು. ಇಂಥ ಸಂದರ್ಭದಲ್ಲೂ ನಿಮ್ಮ ಟ್ರಾವೆಲ್ ಇನ್ಸೂರೆನ್ಸ್ ಕೆಲವು ದಿನಗಳವರೆಗೆ, ನೀವು ಪೂರ್ತಿ ಗುಣಮುಖರಾಗುವವರೆಗೆ ನಿಮ್ಮ ಸಹಾಯಕ್ಕೆ ಬರುತ್ತದೆ.
ಟ್ರಾವೆಲ್ ಇನ್ಶೂರೆನ್ಸ್ ಗೆ ಬೇರೆ ಇನ್ಶೂರೆನ್ಸ್ ಥರ ಪ್ರತಿ ತಿಂಗಳು ಕೆಲವು ಸಾವಿರ ರುಪಾಯಿಗಳ ಪ್ರೀಮಿಯಂ ಕಟ್ಟಬೇಕು ಅಂತ ಏನೂ ಇಲ್ಲ. ಅಥವಾ ಟ್ರಾವೆಲ್ ಇನ್ಶೂರೆನ್ಸ್ ಲಕ್ಷಗಳವರೆಗೂ ಇರುತ್ತೆ ಅಂದರೆ ಹಾಗೇನಿಲ್ಲ. ನಾವು ಎಲ್ಲಿಗಾದರೂ ಹೋಗಬೇಕಾದರೆ, ಬಸ್ ಬುಕ್ ಮಾಡಿದರೆ 20 ಅಥವಾ 30 ರುಪಾಯಿ ಕೊಟ್ಟು ಟ್ರಾವೆಲ್ ಇನ್ಸೂರೆನ್ಸ್ ಅನ್ನು ನಮಗೆ ಗೊತ್ತಿಲ್ಲದೆ ಪಡೆದಿರುತ್ತೇವೆ. ಇದೂ ಹಾಗೆಯೇ. ಲಕ್ಷಾಂತರ ರುಪಾಯಿಗಳನ್ನು ವೆಚ್ಚ ಮಾಡಿ ಟ್ರಿಪ್‌ಗೆ ಹೊರಟಾಗ, ಒಂದು ಸಾವಿರದಿಂದ ಎರಡು ಸಾವಿರ ಜಾಸ್ತಿ ಅಂದರೆ ಮೂರು ಸಾವಿರ ರುಪಾಯಿಯ ಇನ್ಶೂರೆನ್ಸ್ ದೊಡ್ಡದಲ್ಲ ಅಲ್ವಾ?
ಹಾಗೆ ಎಲ್ಲವೂ ಇನ್ಶೂರೆನ್ಸ್ ಕವರ್ ಮಾಡುತ್ತದೆ ಎಂದು ಏನೇನೋ ನೀವೇ ತೊಂದರೆಗಳನ್ನು ಮೈಮೇಲೆ ಹಾಕಿಕೊಳ್ಳಬೇಡಿ.
ಇದು ಗೊತ್ತಿರಲಿ
- ನೀವು ಹೊರಟಿರುವ ಟ್ರಿಪ್‌ನ ಅವಧಿಯ ಆಧಾರದ ಮೇಲೆ ಇನ್ಶೂರೆನ್ಸ್ ಪಡೆಯಿರಿ
- ನಿಮ್ಮ ಗಮ್ಯ ಸ್ಥಳದಲ್ಲಿ ಬರುವ ಖರ್ಚಿನ ಬಗ್ಗೆಯೂ ಗೊತ್ತಿರಲಿ. ಏಕೆಂದರೆ ಕೆಲವೊಂದಿಷ್ಟು ದೇಶಗಳಲ್ಲಿ ವೈದ್ಯಕೀಯ ಖರ್ಚುಗಳು ಜಾಸ್ತಿ.
- ನೀವು ಏನಾದರೂ ಅಡ್ವೆಂಚರ್‌ಗಳನ್ನು ಮಾಡುವುದಿದ್ದರೆ, ನಿಮ್ಮ ಇನ್ಶೂರೆನ್ಸ್ ಅದನ್ನು ಒಳಗೊಂಡಿದೆಯೇ ಎಂಬುದು ಗೊತ್ತಿರಲಿ
- ಕೆಲವು ಒಳ್ಳೆಯ ಟ್ರಾವೆಲ್ ಇನ್ಶೂರೆನ್ಸ್ ಹೋಲಿಸಿ ನೋಡಿ.
- ಇನ್ಶೂರೆನ್ಸ್ ನಲ್ಲಿ ಏನೇನು ಕವರ್ ಅಗಿದೆಯೋ ನೋಡಿಕೊಳ್ಳಿ
- ಹಾಗೆ ಇನ್ಶೂರೆನ್ಸ್ ಕಂಪನಿ ಅವರ ಎಮರ್ಜೆನ್ಸಿ ಕಾಂಟ್ಯಾಕ್ಟ್ ಅಥವಾ ಏಜೆಂಟ್‌ಗಳ ನಂಬರ್ ಇರಲಿ
- ಇನ್ಶೂರೆನ್ಸ್ ಕ್ಲೈಮ್ ಮಾಡುವ ಸಂದರ್ಭದಲ್ಲಿ ಎಲ್ಲ ಅಗತ್ಯ ದಾಖಲಾತಿಗಳು ಇರಲೇಬೇಕು.