Monday, November 23, 2026
Monday, November 23, 2026

ಹೊನ್ನಾವರದಲ್ಲಿ ಪ್ರವಾಸ ಸಾಹಿತ್ಯ ವಿಚಾರ ಸಂಕಿರಣ

ಪ್ರವಾಸವೆಂದರೆ ಹೊಸ ನಾಡುಗಳನ್ನು ನೋಡುವುದಷ್ಟೇ ಅಲ್ಲ, ಅಲ್ಲಿನ ಬದುಕು, ಸಂಸ್ಕೃತಿ ಮತ್ತು ನಮ್ಮದೇ ಸಮಾಜದ ವಾಸ್ತವಗಳನ್ನು ಅರಿಯುವ ಕಿಟಕಿಯೂ ಹೌದು. ಕನ್ನಡದ ವಿಶಿಷ್ಟ ಪ್ರವಾಸಸಾಹಿತಿ ಕೃಷ್ಣಾನಂದ ಕಾಮತರ ಬದುಕು ಮತ್ತು ಬರಹಗಳು ಇದಕ್ಕೆ ಸಾಕ್ಷಿ. ಅವರ ನೆನಪಿನಲ್ಲಿ ಹೊನ್ನಾವರದಲ್ಲಿ ನಡೆದ ವಿಚಾರ ಸಂಕಿರಣವು ಪ್ರವಾಸ ಸಾಹಿತ್ಯದ ಮಹತ್ವವನ್ನು ಮತ್ತೊಮ್ಮೆ ತೆರೆದಿಟ್ಟಿತು.

  • ಶ. ಹಾ.

ಕೃಷ್ಣಾನಂದ ಕಾಮತ್ ಅವರ ಬರವಣಿಗೆಗೂ, ಪ್ರವಾಸಾನುಭವಕ್ಕೂ ಆಪ್ತ ಎನಿಸುವ ನಂಟು ಇದೆ. ಅವರು ಬರೆದ ಪ್ರವಾಸ ಕಥನಗಳಲ್ಲಿ ಹೆಚ್ಚು ಪ್ರಸಿದ್ಧವಾದುದು ‘ನಾನೂ ಅಮೆರಿಕೆಗೆ ಹೋಗಿದ್ದೆ’ ಮತ್ತು ‘ನಾ ರಾಜಸ್ಥಾನದಲ್ಲಿ’. 1960ರ ದಶಕದಲ್ಲಿ ಅಮೆರಿಕದಲ್ಲಿ ಅವರು ಕೀಟಗಳ ಕುರಿತು ಉನ್ನತ ಅಧ್ಯಯನಕ್ಕೆ ಹೋಗಿ, ಅಲ್ಲೇ ಪಿಎಚ್‌ಡಿ ಪದವಿಯನ್ನೂ ಪಡೆದರು. ಆಗಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಒಂದು ಕೂಗು ಅಥವಾ ಸಕಾರಣ ಕಳವಳವಿತ್ತು. ಅದೇನೆಂದರೆ, ಅಮೆರಿಕಕ್ಕೆ ಉನ್ನತ ಅಧ್ಯಯನಕ್ಕೆ ಹೋದವರು, ಅಲ್ಲೇ ವೃತ್ತಿ ಹಿಡಿದು, ಅಲ್ಲೇ ಖಾಯಂ ಆಗಿ ನೆಲೆಸುತ್ತಾರೆ ಮತ್ತು ಅದರಿಂದಾಗಿ ನಮ್ಮ ದೇಶದ ಪ್ರತಿಭೆಯು ದೇಶದಿಂದ ಹೊರಕ್ಕೆ ಹರಿಯುತ್ತದೆ ಮತ್ತು ಇದರಿಂದಾಗಿ ದೇಶಕ್ಕೆ ನಷ್ಟ ಎಂದು. ಅಂದರೆ, ಅಮೆರಿಕ ಮೊದಲಾದ ದೇಶಗಳಿಗೆ ಉನ್ನತ ಅಧ್ಯಯನಕ್ಕೆ ಹೋದವರು, ಅಧ್ಯಯನ ಮುಗಿದ ನಂತರ, ಭಾರತಕ್ಕೆ ಬಂದು ಇಲ್ಲೇ ಕೆಲಸ ಮಾಡಲಿ, ಇದರಿಂದ, ನಮ್ಮ ದೇಶ ಅಭಿವೃದ್ಧಿ ಪಥವನ್ನು ತುಳಿಯಲು ಸಹಾಯ ಮಾಡುತ್ತದೆ ಎಂಬ ಆಶಯ ಅದು. ಇದನ್ನು ಸರಕಾರವು ಸಹ ಸೂಚಿಸುತ್ತಿತ್ತು ಮತ್ತು ಈ ರೀತಿ ಉನ್ನತ ಅಧ್ಯಯನ ಮುಗಿಸಿ ವಾಪಸು ಬಂದವರಿಗೆ, ನಾನಾ ರೀತಿಯ ಪ್ರೋತ್ಸಾಹ ನೀಡಲು ಮತ್ತು ಉತ್ತಮ ಉದ್ಯೋಗ ದೊರಕಿಸಿಕೊಡಲು ತಾನು ಸಹಾಯ ಮಾಡುತ್ತೇನೆ ಎಂದು ಸರಕಾರದ ಪ್ರಕಟಣೆಗಳು ಹೇಳುತ್ತಿದ್ದವು. ಅಮೆರಿಕದಲ್ಲಿ ಉನ್ನತ ಅಧ್ಯಯನ ಮುಗಿಸಿದ ಕೃಷ್ಣಾನಂದ ಕಾಮತರು, ಇದೇ ಉದ್ದೇಶದಿಂದ ಮತ್ತು ನಮ್ಮ ದೇಶದಲ್ಲೇ ವೃತ್ತಿ ಮಾಡಲು ವಾಪಸು ಬಂದರು. ಅವರು ಅಮೆರಿಕದಲ್ಲಿ ಇದ್ದ ಅವಧಿಯ ಅನುಭವಗಳನ್ನು ʼನಾನೂ ಅಮೆರಿಕೆಗೆ ಹೋಗಿದ್ದೆʼ ಎಂಬ ಪುಸ್ತಕದಲ್ಲಿ ವಿವರವಾಗಿ ಬರೆದಿದ್ದಾರೆ. ಅದರಲ್ಲಿ ಹಾಸ್ಯ ಮಿಶ್ರಿತ ಶೈಲಿ ಕಾಣಬಹುದು. ಅಮೆರಿಕದ ಕೆಲವು ಕುಟುಂಬಗಳ ಜತೆ ವಾಸವಿದ್ದ ಅನುಭವವೂ ಅಲ್ಲಿದೆ, ಅದೊಂದು ಉತ್ತಮ ಪ್ರವಾಸ ಕಥನ.

ಇದನ್ನೂ ಓದಿ: ಹೊನ್ನಾವರ ಪ್ರವಾಸ

ನಮ್ಮ ದೇಶಕ್ಕೆ ವಾಪಸಾದ ನಂತರ, ಕೃಷ್ಣಾನಂದ ಕಾಮತರು, ಕೇಂದ್ರ ಸರಕಾರದ ಪ್ರಕಟಣೆಯಂತೆ ಇಲ್ಲೇ ಕೆಲಸ ಹುಡುಕಲು ಆರಂಭಿಸಿದರು. ಆದರೆ, 1960 ಮತ್ತು 1970ರ ದಶಕದಲ್ಲಿ ಇವರಿಗೆ ಉತ್ತಮ ವೃತ್ತಿ ದೊರಕಲೇ ಇಲ್ಲ. ಅಂದರೆ, ಇವರ ಉನ್ನತ ಅಧ್ಯಯನಕ್ಕೆ ಸಮ ಎನಿಸುವ ಕೆಲಸ ಹುಡುಕಲು ಇವರಿಂದ ಸಾಧ್ಯವಾಗಲೇ ಇಲ್ಲ ಮತ್ತು ಸರಕಾರವೂ ಒದಗಿಸಿಕೊಡಲಿಲ್ಲ. ವಿವಿಧ ಕಡೆ ಅರ್ಜಿ ಹಾಕಿದಾಗ, ರಾಜಸ್ಥಾನದ ಜೋಬನೇರ್ ಎಂಬಲ್ಲಿನ ವಿಶ್ವವಿದ್ಯಾಲಯವೊಂದರಲ್ಲಿ ಕೆಲಸ ದೊರಕುತ್ತದೆ, ಅದೂ ಖಾಯಂ ಅಲ್ಲ. ನಂತರ ಅವರು ಬಂಗಾಳ ಮೊದಲಾದ ಕಡೆ ಹೋಗಬೇಕಾಯಿತು, ಕೊನೆಗೂ ಅವರಿಗೆ ಸರಕಾರದ ಇಲಾಖೆ ಅಥವಾ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಹುದ್ದೆ ದೊರಕಲೇ ಇಲ್ಲ. ರಾಜಸ್ಥಾನದಲ್ಲಿ ವೃತ್ತಿ ನಿರ್ವಹಿಸುವಾಗ ಕಂಡ ಅನುಭವಗಳನ್ನು ಹಾಸ್ಯ ಮಿಶ್ರಿತ ಶೈಲಿಯಲ್ಲಿ, ಕೆಲವೊಮ್ಮೆ ಗಂಭೀರವಾಗಿ, ಬೇಸರದಿಂದಲೂ ಅವರು ವಿವರವಾಗಿ ಬರೆದಿದ್ದು, ಅದು ಪುಸ್ತಕ ರೂಪದಲ್ಲಿ ಪ್ರಕಟಗೊಂಡಿದೆ. ಅದೇ ʼನಾ ರಾಜಸ್ಥಾನದಲ್ಲಿʼ ಎಂಬ ಪ್ರವಾಸ ಕಥನ. ಅದನ್ನೋದುವುದೇ ಒಂದು ವಿಶೇಷ ಅನುಭವ. ಆ ವಿಶ್ವವಿದ್ಯಾಲಯದಲ್ಲಿ ಇವರು ಅನುಭವಿಸಿದ ಏಕಾಂಗಿತನ, ಖಾಯಂ ಹುದ್ದೆ ಹುಡುಕಲು, ಪಡೆಯಲು ನಡೆಸಿದ ವಿಫಲ ಸಾಹಸ ಎಲ್ಲವೂ ವರ್ಣಿತವಾಗಿದೆ. ಜತೆಗೆ, ರಾಜಸ್ಥಾನದ ಜನಜೀವನ, ಸಂಸ್ಕೃತಿಯನ್ನು ಅವರು ಅನನ್ಯ ದೃಷ್ಟಿಕೋನದಲ್ಲಿ ಬರೆದಿದ್ದಾರೆ. ಕನ್ನಡದ ಅತ್ಯತ್ತಮ ಪ್ರವಾಸಕಥನಗಳ ಪಟ್ಟಿ ಮಾಡಿದರೆ, ʼನಾ ರಾಜಸ್ಥಾನದಲ್ಲಿʼ ಇದ್ದೇ ಇರುತ್ತದೆ. ನಂತರ ಅವರು ಬಸ್ತಾರ ಪ್ರವಾಸ, ವಂಗ ದರ್ಶನ ಮೊದಲಾದ ಪ್ರವಾಸಕಥನಗಳನ್ನು ಬರೆದು, ಪ್ರಕಟಿಸಿದ್ದಾರೆ.

Untitled Design - 2026-11-23T124951.925

ʼನಾ ರಾಜಸ್ಥಾನದಲ್ಲಿʼ ಪುಸ್ತಕದಲ್ಲಿ ಒಂದು ಪುಟ್ಟ ವಿದ್ಯಮಾನದ ಹಾಸ್ಯಮಿಶ್ರಿತ ವಿವರಗಳಿವೆ. ಜೋಬನೇರ್‌ನಲ್ಲಿ ಕೃಷ್ಣಾನಂದ ಕಾಮತರು, ಕುಟುಂಬ ಸಮೇತ ನೆಲೆಸುತ್ತಾರೆ. ಅವರ ಪತ್ನಿ ಜ್ಯೋತ್ಸಾ ಕಾಮತ್ ಅವರು ಅಲ್ಲೇ ಮಗನಿಗೆ ಜನ್ಮ ನೀಡುತ್ತಾರೆ. ತಮ್ಮ ಕುಟುಂಬದ ಸಂಪ್ರದಾಯದಂತೆ, ಪ್ರತಿ ದಿನ ಸಾಕಷ್ಟು ನೀರು ಬಳಸಿ ಮಗುವಿಗೆ ಸ್ನಾನ ಮಾಡಿಸುತ್ತಾರೆ. ಆದರೆ, ಮರುಭೂಮಿಯ ಅಂಚಿನಲ್ಲಿದ್ದ ಜೋಬನೇರ್‌ನಲ್ಲಿ ಸದಾ ನೀರಿಗೆ ಕೊರತೆ. ಇವರ ಸ್ನಾನಗೃಹದಿಂದ ಹರಿದು ಬರುತ್ತಿದ್ದ ನೀರಿನ ಪ್ರಮಾಣವನ್ನು ಕಂಡು, ಆ ಊರಿನವರು ಅಚ್ಚರಿಪಟ್ಟುಕೊಳ್ಳುತ್ತಿದ್ದರಂತೆ! ಆ ದೂರದ ಊರಿನಲ್ಲಿ ಜನಿಸಿದ ಅವರ ಮಗನೇ, ವಿಕಾಸ ಕಾಮತ್. ಅವರು, ಉನ್ನತ ಅಧ್ಯಯನ ನಡೆಸಿ, ಉದ್ಯೋಗ ನಿಮಿತ್ತ ಅಮೆರಿಕಕ್ಕೆ ಹೋಗಿ, ಅಲ್ಲೇ ನೆಲೆಸಿದ್ದಾರೆ. ಅವರು ಸಹ ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.

ಕೃಷ್ಣಾನಂದ ಕಾಮತರ ಸ್ವಂತ ಊರು ಹೊನ್ನಾವರ. ಆದ್ದರಿಂದಲೇ ಇರಬೇಕು, ʼಪ್ರವಾಸ ಸಾಹಿತ್ಯ ಪರಂಪರೆ ಮತ್ತು ಕೃಷ್ಣಾನಂದ ಕಾಮತ್ʼ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಬೇಕೆಂದು ಸಂಘಟಕರು ಯೋಚಿಸಿದಾಗ, ಎಲ್ಲಿ ನಡೆಸುವುದು ಎಂಬ ಪ್ರಶ್ನೆ ಎದುರಾದಾಗ, ಹೊಳೆದ ಉತ್ತರವೇ ʼಹೊನ್ನಾವರʼ. ವೈವಿಧ್ಯಮಯ ಪ್ರವಾಸ ಕಥನಗಳನ್ನು ರಚಿಸಿದ ಕೃಷ್ಣಾನಂದ ಕಾಮತರ ಊರಾದ ಹೊನ್ನಾವರವು, ಉತ್ತರ ಕನ್ನಡದ ಕಡಲಿನಂಚಿನಲ್ಲೇ ಇದ್ದು, ಅದೊಂದು ಉತ್ತಮ ಪ್ರವಾಸಿ ತಾಣವೂ ಹೌದು. ಆದ್ದರಿಂದ, ಹೊನ್ನಾವರದಲ್ಲಿ ಇಂಥದೊಂದು ವಿಚಾರ ಸಂಕಿರಣವು, ಅಕ್ಟೋಬರ್ 8 ಮತ್ತು 9ರಂದು ನಡೆದದ್ದು ಅರ್ಥ ಪೂರ್ಣ.

ಹೊನ್ನಾವರದ ಎಸ್‌ಡಿಎಂ ಪದವಿ ಕಾಲೇಜು, ಕನ್ನಡ ವಿಭಾಗ, ಕೃಷ್ಣಾನಂದ ಕಾಮತ್ ಪ್ರತಿಷ್ಠಾನ, ಅಭಿನವ ಪ್ರಕಾಶನ ಬೆಂಗಳೂರು ಮತ್ತು ವಿ.ಸೀ. ಸಂಪದ ಬೆಂಗಳೂರು ಇವರ ಸಹಯೋಗದಲ್ಲಿ ನಡೆದ ಈ ವಿಚಾರ ಸಂಕಿರಣವನ್ನು ಉದ್ಘಾಟಿಸಿದವರು ಸಾಹಿತಿ ಡಾ. ರಹಮತ್ ತರೀಕೆರೆ. ಉದ್ಘಾಟನೆಯ ದಿನವೇ, ಶಶಿಧರ ಹಾಲಾಡಿಯವರ ಹೊಸ ಪ್ರವಾಸ ಕಥನ ʼಕಯಹುಗ ನಯಾಗರʼವು ಲೋಕಾರ್ಪಣೆಗೊಂಡಿತು. ಬೆಂಗಳೂರಿನ ಅಭಿನವ ಪ್ರಕಟಿಸಿರುವ ಈ ಪ್ರವಾಸ ಕಥನದಲ್ಲಿ ಶಶಿಧರ ಹಾಲಾಡಿಯವರು, ತಮ್ಮ ಅಮೆರಿಕ ಪ್ರವಾಸಾನುಭವವನ್ನು ಬರೆದಿದ್ದಾರೆ.

ತಮ್ಮ ತಂದೆಯ ಹೆಸರಿನಲ್ಲಿ ನಡೆದ ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಲು, ದೂರದ ಅಮೆರಿಕದಿಂದ ಅವರ ಮಗ ವಿಕಾಸ ಕಾಮತ್ ಅವರು ಬಂದದ್ದು ಮತ್ತು ಸೊಗಸಾದ ಉಪನ್ಯಾಸ ನೀಡಿದ್ದು ಎಲ್ಲರ ಗಮನ ಸೆಳೆಯಿತು. ವಿಕಾಸ ಕಾಮತರ ಮಾತುಗಳಲ್ಲಿ ಅನಾವರಣಗೊಂಡ ಕೃಷ್ಣಾನಂದ ಕಾಮತರ ವ್ಯಕ್ತಿತ್ವ, ಹಲವು ಒಳನೋಟಗಳನ್ನು ಕಟ್ಟಿಕೊಟ್ಟಿತು. ಕೃಷ್ಣಾನಂದ ಕಾಮತರಿಗೆ ಪ್ರೊಫೆಸರ್ ಗಿರಿಗೆ ಸಮನಾದ ಉದ್ಯೋಗ ನಮ್ಮ ದೇಶದಲ್ಲಿ ದೊರಕದೇ ಇದ್ದುದರಿಂದ, ಕನ್ನಡ ಸಾಹಿತ್ಯಕ್ಕೆ ಪರೋಕ್ಷವಾಗಿ ಒಳ್ಳೆಯದಾಯಿತು ಮತ್ತು ಆದ್ದರಿಂದಲೇ ಅವರು ವಿಭಿನ್ನ ಶೈಲಿಯ ಪ್ರವಾಸ ಕಥನಗಳನ್ನು ಮತ್ತು ಇತರ ಗ್ರಂಥಗಳನ್ನು ಬರೆಯಲು ಸಾಧ್ಯವಾಯಿತು ಎಂದು ಮಗ ವಿಕಾಸ ಕಾಮತರು ತಮ್ಮ ಮಾತುಗಳಲ್ಲಿ ಹೇಳಿದ್ದು ಗಮನಾರ್ಹ.

ಹೊನ್ನಾವರದಲ್ಲಿ ನಡೆದ ಎರಡು ದಿನಗಳ ಈ ಪ್ರವಾಸ ಸಾಹಿತ್ಯ ವಿಚಾರ ಸಂಕಿರಣದಲ್ಲಿ, ವೆಂಕಟಗಿರಿ ದಳವಾಯಿ, ಎಂ. ಜಿ.‌ ಹೆಗಡೆ ಕುಮಟಾ, ಬಿ. ಕೆ. ಸುಮತಿ, ಶಶಿಧರ ಹಾಲಾಡಿ, ನಾಗರಾಜ ಹೆಗಡೆ ಅಪಗಾಲ, ಶಿವಾನಂದ ಕಳವೆ, ದೇವೇಂದ್ರ ಬೆಳೆಯೂರು, ಕೃಷ್ಣಮೂರ್ತಿ ಹೆಬ್ಬಾರ, ದತ್ತಾತ್ರೇಯ ಗಾಂವ್ಕರ್ ಮತ್ತು ಇತರ ಸಂಪನ್ಮೂಲ ವ್ಯಕ್ತಿಗಳು ತಮ್ಮ ಪ್ರಬಂಧಗಳನ್ನು ಮಂಡಿಸಿದರು. ಇದೇ ಸಂದರ್ಭದಲ್ಲಿ ಪತ್ರಕರ್ತ ಜಿ. ಯು. ಭಟ್ ಅವರಿಗೆ ವಿ. ಸೀ. ಮಾಧ್ಯಮ ಪ್ರಶಸ್ತಿ, ಪಂ. ಪರಮೇಶ್ವರ ಹೆಗಡೆಯವರಿಗೆ ವಿಸೀ ಕಲಾಗೌರವ ಪ್ರಶಸ್ತಿ ಮತ್ತು ನ. ರವಿಕುಮಾರ್‌ ಅವರಿಗೆ ವಿಸೀ ಪುಸ್ತಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಪಂ. ಪರಮೇಶ್ವರ ಹೆಗಡೆಯವರ ಸಂಗೀತ ಕಚೇರಿಯೂ ಸಹ ಈ ʼಪ್ರವಾಸ ಕಥನ ವಿಚಾರ ಸಂಕಿರಣʼಕ್ಕೆ ಕಳೆಕೊಟ್ಟಿತು. ವಿಚಾರ ಸಂಕಿರಣದಲ್ಲಿ ಭಾಗಿಯಾದವರಿಗೆ, ಸ್ಥಳೀಯ ವಿಶೇಷ ತಿನಿಸುಗಳಾದ ಗೆಣಸೆಲೆ, ತಂಬುಳಿ ಮೊದಲಾದವುಗಳನ್ನು ಉಣಬಡಿಸಿ, ನಿಜವಾದ ಪ್ರವಾಸಾನುಭವವನ್ನೂ ಒದಗಿಸಿಕೊಟ್ಟದ್ದು ವಿಶೇಷ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!