Monday, November 23, 2026
Monday, November 23, 2026

ಕೆಲಸವೇ ನನಗೆ ಪ್ರವಾಸ: ಶ್ರೀರಾಮ್‌

'ಪ್ರೇಮದ ಊರಲಿ' ಚಿತ್ರದ ಅದ್ಭುತ ಯಶಸ್ಸಿನ ಮೂಲಕ ಕನ್ನಡಿಗರ ಮನೆಮಾತಾಗಿರುವ ಯುವ ನಟ ಶ್ರೀರಾಮ್, ಸದ್ಯ ಸ್ಯಾಂಡಲ್ ವುಡ್ ನ ಭರವಸೆಯ ತಾರೆಯಾಗಿ ಹೊರಹೊಮ್ಮಿದ್ದಾರೆ. ಇತ್ತೀಚೆಗೆ 'ಪ್ರವಾಸಿ ಪ್ರಪಂಚ'ದ ಜತೆಗೆ ಮಾತನಾಡಿದ ಅವರು ತಮ್ಮ ಸಿನಿಮಾದ ಯಶಸ್ಸು ಹಾಗೂ ಭವಿಷ್ಯದ ಯೋಜನೆಗಳ ಜತೆಗೆ ಪ್ರವಾಸವನ್ನು ತಾವು ನೋಡುವ ವಿಭಿನ್ನ ದೃಷ್ಟಿಕೋನ, ತಮ್ಮ ಮೆಚ್ಚಿನ ತಾಣಗಳು, ಮತ್ತು ಪ್ರವಾಸದ ಆಹಾರ ಪದ್ಧತಿಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

'ಪ್ರೇಮದ ಊರಲಿ' ಚಿತ್ರದ ಯಶಸ್ಸನ್ನು ನೀವು ಹೇಗೆ ಸ್ವೀಕರಿಸುತ್ತಿದ್ದೀರಿ?

- ನಾನು, ನಮ್ಮ ನಿರ್ದೇಶಕ ಮನೋಜ್ ಹಾಗೂ ನಿರ್ಮಾಪಕರು ಸೇರಿ ಹಿಟ್ ಮತ್ತು ಬ್ಲಾಕ್‌ಬಸ್ಟರ್ ನಡುವಿನ ವ್ಯತ್ಯಾಸವನ್ನು ಅರಿತು ಕೆಲಸ ಮಾಡಿದ್ದೆವು. ಬಿಡುಗಡೆಯಾದ ಬಳಿಕ ಈ ಚಿತ್ರವು 'ಮುಂಗಾರು ಮಳೆ', 'ರಂಗಿತರಂಗ' ಅಥವಾ ತೆಲುಗಿನ 'ಬಾಹುಬಲಿ'ಯಂತೆ ಒಂದು 'ಸೂಪರ್ ಹಿಟ್' ಆಗಿ ಹೊರಹೊಮ್ಮಿತು. ಶನಿವಾರದಿಂದಲೇ ಚಿತ್ರಕ್ಕೆ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ಬರಲಾರಂಭಿಸಿತು. ಅಂದು ರಾತ್ರಿ ನಾನು ಕನಸಿನ ಲೋಕದಲ್ಲಿದ್ದೆ, ನನಗೆ ನಿದ್ದೆಯೇ ಬರಲಿಲ್ಲ. ನಾನು ಇನ್ಸ್ಟಾಗ್ರಾಮ್‌ನಲ್ಲಿ ಹಾಕಿದ್ದ ವಿಡಿಯೋವೊಂದು 7-8 ಮಿಲಿಯನ್ ವೀಕ್ಷಣೆ ಪಡೆದುಕೊಂಡಿತು. ಪ್ರೇಕ್ಷಕರು ನನ್ನನ್ನು 'ಸಂತು' ಎಂದೇ ಗುರುತಿಸುತ್ತಿದ್ದು, ರೈತರ ಮಕ್ಕಳು ಹಾಗೂ ಆಟೋ ಚಾಲಕರಿಂದ ಸಿಗುತ್ತಿರುವ ಪ್ರೀತಿ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ.

ಇದನ್ನೂ ಓದಿ: ಕಾವ್ಯಾ ಗೌಡ ಸಂದರ್ಶನ

ಚಿತ್ರರಂಗದ ಗಣ್ಯರಿಂದ, ವಿಶೇಷವಾಗಿ ಯಶ್ ಮತ್ತು ಶಿವಣ್ಣ ಅವರಿಂದ ಸಿಕ್ಕ ಪ್ರತಿಕ್ರಿಯೆ ಹೇಗಿತ್ತು?

- ರಾಕಿಂಗ್ ಸ್ಟಾರ್ ಯಶ್ ಅವರು ನನ್ನನ್ನು ಭೇಟಿಯಾಗಿ, ಈ ಯಶಸ್ಸನ್ನು ಅತ್ಯಂತ ಜವಾಬ್ದಾರಿಯಿಂದ ನಿಭಾಯಿಸುವಂತೆ ಕಿವಿಮಾತು ಹೇಳಿದರು. ಹಾಗೆಯೇ ಶಿವರಾಜ್‌ಕುಮಾರ್ ಅವರು ಪುನೀತ್ ರಾಜ್‌ಕುಮಾರ್ ಅವರ ಪುಣ್ಯಭೂಮಿಯ ಬಳಿ ಹಾಗೂ ಶೆರಟನ್ ಹೊಟೇಲ್‌ನಲ್ಲಿ ನನ್ನನ್ನು ಭೇಟಿಯಾದಾಗ, ಪ್ರೀತಿಯಿಂದ ಗುರುತಿಸಿ ಶುಭಹಾರೈಸಿದರು. ದೇವಸ್ಥಾನಗಳಿಗೆ ಹೋದಾಗ ವಯಸ್ಸಾದ ತಾಯಂದಿರು ಬಂದು ಆಶೀರ್ವಾದ ಮಾಡುತ್ತಿದ್ದಾರೆ. ನಾನು ಈಗ ಸ್ಟಾರ್‌ಡಮ್‌ಗಿಂತ ಹೆಚ್ಚಾಗಿ ಈ ಜವಾಬ್ದಾರಿಯನ್ನು ಎಂಜಾಯ್ ಮಾಡುತ್ತಿದ್ದೇನೆ.

ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ಪ್ರೇಕ್ಷಕರ ನಿರೀಕ್ಷೆಗಳೇನು?

-ಸದ್ಯ ನನ್ನ 'ಪೀಕಾಬೂ' ಚಿತ್ರದ ಶೂಟಿಂಗ್ ಶೇಕಡಾ 90ರಷ್ಟು ಪೂರ್ಣಗೊಂಡಿದೆ. ತೆಲುಗು ರಾಜ್ಯಗಳಾದ ಹೈದರಾಬಾದ್, ವಿಜಯವಾಡ ಮತ್ತು ಗುಂಟೂರಿನ ಜನರೂ ಕೂಡ ನನ್ನ ಮುಂದಿನ ಚಿತ್ರಕ್ಕಾಗಿ ಬಹಳ ನಿರೀಕ್ಷೆಯಿಂದ ಕಾಯುತ್ತಿದ್ದಾರೆ.

Untitled Design - 2026-11-23T124151.068

ನಿಮ್ಮ ಪ್ರಕಾರ 'ಪ್ರವಾಸ' ಅಂದರೆ ಏನು?

- ನಾನು ಮೂಲತಃ ಕೆಲಸದಲ್ಲಿಯೇ ಹೆಚ್ಚು ಮಗ್ನನಾಗುವ ವ್ಯಕ್ತಿ. ನನ್ನ ಸ್ನೇಹಿತರು ಮತ್ತು ಕಸಿನ್ಸ್ ಅಮೆರಿಕ, ದುಬೈ, ಕೆನಡಾ, ಆಸ್ಟ್ರೇಲಿಯಾದಂಥ ದೇಶಗಳಿಗೆ ಪ್ರವಾಸ ಯೋಜಿಸುತ್ತಿದ್ದರೂ, ನಾನು ನನ್ನ ಕೆಲಸದ ನಿಮಿತ್ತವೇ ಪ್ರವಾಸ ಮಾಡಲು ಹೆಚ್ಚು ಇಷ್ಟಪಡುತ್ತೇನೆ. ಆದಾಗ್ಯೂ, ಪ್ರವಾಸವು ನಮ್ಮ ಯೋಚನಾ ಲಹರಿಯನ್ನು ವಿಸ್ತರಿಸುತ್ತದೆ ಹಾಗೂ ಹೊಸ ದೃಷ್ಟಿಕೋನವನ್ನು ನೀಡುವ ಮೂಲಕ ವಿಭಿನ್ನ ಸನ್ನಿವೇಶಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ.

ಪ್ರವಾಸದ ವೇಳೆ ನಿಮಗೆ ಅತ್ಯಂತ ನೆಮ್ಮದಿ ನೀಡುವ ತಾಣಗಳು ಯಾವುವು?

- ನನಗೆ ಪರ್ವತ ಪ್ರದೇಶಗಳಿಗಿಂತ ಹೆಚ್ಚಾಗಿ ಕಡಲತೀರಗಳು ಬಹಳ ಇಷ್ಟ. ಬೀಚ್‌ಗಳು ನನಗೆ ಧ್ಯಾನದ ಕೇಂದ್ರಗಳಿದ್ದಂತೆ. ಕಡಲತೀರದ ವಾತಾವರಣ ನನ್ನ ಮನಸ್ಸಿಗೆ ಶಾಂತಿ ನೀಡುತ್ತದೆ ಮತ್ತು ಭವಿಷ್ಯದ ಬಗ್ಗೆ ಸ್ಪಷ್ಟತೆಯನ್ನು ಒದಗಿಸುತ್ತದೆ.

ಶೂಟಿಂಗ್ ಅಥವಾ ಪ್ರವಾಸದ ವೇಳೆ ನಿಮ್ಮ ನೆನಪಿನಲ್ಲಿ ಅಚ್ಚಳಿಯದೆ ಉಳಿದಿರುವ ಸ್ಥಳ ಯಾವುದು?

-'ಪ್ರೇಮದ ಊರಲಿ' ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಮುಂಜಾನೆ 3:30ಕ್ಕೆ ಜೋಳದ ಬೆಳೆಯ ನಡುವೆ ಚಿತ್ರೀಕರಣ ಮಾಡಿದ್ದೆವು. ಆ ಮುಂಜಾನೆಯ ಹೊಂಬಣ್ಣದ ಬೆಳಕು (Golden light) ಆ ಸ್ಥಳವನ್ನು ಒಂದು ವಿದೇಶಿ ತಾಣದಂತೆ ಕಂಗೊಳಿಸುವಂತೆ ಮಾಡಿತ್ತು; ಅದು ನನಗೆ ಅತ್ಯಂತ ಸುಂದರವಾದ ನೆನಪು. ಅದರ ಜತೆಗೆ, ಸೀಗೆಗುಡ್ಡದ ಮಹದೇಶ್ವರ ದೇವಾಲಯ ಕೂಡ ಇಷ್ಟ. ಅದು ಈಗ ಪ್ರವಾಸಿ ತಾಣದಂತೆ ಆಗಿದೆ. ಹಾಗೆಯೇ ಸಿಗಂದೂರು ದೇವಸ್ಥಾನಗಳಿಗೆ ಭೇಟಿ ನೀಡಿದ್ದು ಕೂಡ ನನ್ನ ನೆಚ್ಚಿನ ಪ್ರವಾಸದ ನೆನಪುಗಳಾಗಿವೆ.

ನಿಮ್ಮ 'ಬಕೆಟ್ ಲಿಸ್ಟ್'ನಲ್ಲಿರುವ ಕನಸಿನ ಪ್ರವಾಸದ ತಾಣ ಯಾವುದು?

- ಯುರೋಪ್‌ನ 'ಎಡಿನ್‌ಬರ್ಗ್' (Edinburgh) ನನ್ನ ಬಕೆಟ್ ಲಿಸ್ಟ್‌ನಲ್ಲಿದೆ. ಅಲ್ಲಿನ ಹಳೆಯ ಮತ್ತು ಆಧುನಿಕ ಸಂಸ್ಕೃತಿಯ ಸಮ್ಮಿಶ್ರಣ ಹಾಗೂ ಅಲ್ಲಿನ ಸೇತುವೆಯನ್ನು ನೋಡುವುದು ನನ್ನ ಬಹುದೊಡ್ಡ ಕನಸು. ಆದರೆ, ಅಲ್ಲಿಗೆ ಹೋಗುವ ಮುನ್ನ ವೃತ್ತಿಜೀವನದಲ್ಲಿ ದೊಡ್ಡ ಹೆಸರು ಮಾಡಬೇಕು, ಆಗ ನಾನು ಅಲ್ಲಿಗೆ ಹೋದಾಗ ನನ್ನ ಸಮಯಕ್ಕೆ ಗೌರವ ಸಿಗುತ್ತದೆ ಎಂಬುದು ನನ್ನ ಆಲೋಚನೆ.

Untitled Design - 2026-11-23T124529.488

ನೀವು ಏಕಾಂಗಿ ಪ್ರವಾಸ ಇಷ್ಟಪಡುತ್ತೀರೋ ಅಥವಾ ಗುಂಪಿನಲ್ಲಿ ಹೋಗಲು ಬಯಸುತ್ತೀರೋ?

-ನಾನು ಏಕಾಂಗಿಯಾಗಿ ಪ್ರವಾಸ ಮಾಡಲು ಖಂಡಿತಾ ಇಷ್ಟಪಡುವುದಿಲ್ಲ. ಒಂಟಿಯಾಗಿ ಹೋದರೆ ನನಗೆ ಅಲ್ಲಿ ಬಹಳ ಬೇಸರವಾಗುತ್ತದೆ. ಪ್ರವಾಸದ ವೇಳೆ ಯಾವುದಾದರೂ ವಿಷಯದ ಬಗ್ಗೆ ಚರ್ಚಿಸಲು ಅಥವಾ ಮಾತನಾಡಲು ಜೊತೆಯಲ್ಲಿ ಯಾರಾದರೂ ಇರಬೇಕು. ಹೀಗಾಗಿ ಸ್ನೇಹಿತರು ಹಾಗೂ ಸಂಬಂಧಿಕರೊಟ್ಟಿಗೆ ಹೋಗಿ ಡ್ಯಾನ್ಸ್ ಮಾಡುತ್ತಾ ಎಂಜಾಯ್ ಮಾಡುವುದೇ ನನಗೆ ಹೆಚ್ಚು ಇಷ್ಟ.

ನಿಮ್ಮ ಪ್ರವಾಸಗಳು ಪೂರ್ವನಿಯೋಜಿತವಾಗಿರುತ್ತವೆಯೋ ಅಥವಾ ದಿಢೀರ್ ಆಗಿರುತ್ತವೆಯೋ?

-ನನಗೆ ಅನ್‌ಪ್ಲ್ಯಾನ್ಡ್ ಪ್ರವಾಸಗಳೇ ಹೆಚ್ಚು ರೋಚಕ ಎನಿಸುತ್ತವೆ. ಉದಾಹರಣೆಗೆ, 'ದಿಲ್ ಚಾಹ್ತಾ ಹೈ' ಚಿತ್ರದ ಶೈಲಿಯಲ್ಲಿ ದಿಢೀರನೇ ಗೋವಾಕ್ಕೆ ಹೊರಡುವುದು, ಕಾರಿನಲ್ಲೇ ಮಲಗಿಕೊಂಡು ಬೆಳಗ್ಗೆ ಎಚ್ಚರವಾದಾಗ ಬೀಚ್‌ ಬಳಿ ಇರುವುದು, ಇಂಥ ಸಾಹಸಮಯ ಪ್ರವಾಸಗಳು ನನಗೆ ಬಹಳ ಖುಷಿ ಕೊಡುತ್ತವೆ.

ಪ್ರವಾಸದ ಸಂದರ್ಭದಲ್ಲಿ ನಿಮ್ಮ ಆಹಾರ ಪದ್ಧತಿ ಹೇಗಿರುತ್ತದೆ?

- ನನ್ನ ದೈನಂದಿನ ಆಹಾರ ಪದ್ಧತಿ ಚಿಕನ್, ಓಟ್ಸ್ ಎಂದು ಬಹಳ ಬೇಸರದಾಯಕವಾಗಿರುತ್ತದೆ. ಆದರೆ ಪ್ರವಾಸಕ್ಕೆ ಹೋದಾಗ ನಾನು ಡಯಟ್ ಬಗ್ಗೆ ಕಟ್ಟುನಿಟ್ಟಾಗಿರುವುದಿಲ್ಲ. ಆಯಾ ಸ್ಥಳದ ಸಾಂಪ್ರದಾಯಿಕ ಮತ್ತು ಸ್ಥಳೀಯ ಆಹಾರವನ್ನು ಸವಿಯಲು ನಾನು ಆದ್ಯತೆ ನೀಡುತ್ತೇನೆ. ಮಂಗಳೂರಿಗೆ ಹೋದರೆ ಮೀನು, ಉತ್ತರ ಕರ್ನಾಟಕಕ್ಕೆ ಹೋದರೆ ಜೋಳದ ರೊಟ್ಟಿ ತಿನ್ನುತ್ತೇನೆ. ಹೈದರಾಬಾದ್‌ನಲ್ಲಿ ಬಿರಿಯಾನಿ ಮತ್ತು ಮಂಡಿ ಪಲಾವ್ ಸವಿದಿದ್ದೇನೆ. ನಟ ಶಾರುಖ್ ಖಾನ್ ಅವರಂತೆ, ಪ್ರವಾಸದ ವೇಳೆ ಬ್ರೊಕೊಲಿಯಂಥ ಡಯಟ್ ಆಹಾರಗಳನ್ನು ನಾನು ಸಂಪೂರ್ಣವಾಗಿ ದೂರವಿಡುತ್ತೇನೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

Read Previous

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್

Read Next

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್